ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Jagadeesh Mane Column: ರೂಪಾಯಿ ಚೇತರಿಕೆ ಭಾರತದ ಆರ್ಥಿಕತೆಯ ಹೊಸ ಭರವಸೆ !

ಮೂರು-ನಾಲ್ಕು ತಿಂಗಳ ಹಿಂದೆ ಒಂದು ಡಾಲರ್ ಮೌಲ್ಯ 97 ರೂಪಾಯಿಯ ಸಮೀಪ ತಲುಪಿತ್ತು. ಇದನ್ನು ಕಂಡ ಅನೇಕರು ಸದ್ಯದ ಡಾಲರ್ ನೂರು ರೂಪಾಯಿಯ ಗಡಿ ದಾಟಲಿದೆ ಎಂದು ವಿಶ್ಲೇಷಿಸಿ ದ್ದರು. ಆದರೆ, ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮಗಳನ್ನು ಕೈಗೊಂಡಿತು.

ರೂಪಾಯಿ ಚೇತರಿಕೆ ಭಾರತದ ಆರ್ಥಿಕತೆಯ ಹೊಸ ಭರವಸೆ !

-

Profile
Ashok Nayak Nov 28, 2026 8:37 AM

ದೇಶ ಕೋಶ

ಡಾ.ಜಗದೀಶ ಮಾನೆ

ಕಳೆದ ಒಂದು ವರ್ಷದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಆದಂತಹ ಏರಿಳಿತಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಡಾಲರ್ ಎದುರು ರೂಪಾಯಿ ಕುಸಿದಾಗ ದೇಶದ ಆರ್ಥಿಕತೆಯೇ ಕುಸಿಯಲಿದೆ ಎಂಬಂತೆ ಕೆಲ ಆರ್ಥಿಕ ತಜ್ಞರು ಹಾಗೂ ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞರು ಭವಿಷ್ಯದ ಭಯಾನಕ ಚಿತ್ರಣಗಳನ್ನು ಬಿಡಿಸಿದ್ದರು.

ರೂಪಾಯಿಯ ಪ್ರತಿಯೊಂದು ಕುಸಿತವನ್ನೂ ಆರ್ಥಿಕ ದುರಂತದ ಮುನ್ಸೂಚನೆಯಂತೆ ಬಿಂಬಿಸಿ, ಆತಂಕದ ಗಂಟೆ ಬಾರಿಸಿದ್ದರು. ಕಳೆದ ಅಕ್ಟೋಬರ್ ಆರಂಭದಲ್ಲಿ ರೂಪಾಯಿ 96.88ರ ಮಟ್ಟಕ್ಕೆ ತಲುಪಿದಾಗ, ಇನ್ನು ನೂರು ರೂಪಾಯಿಯ ಗಡಿ ದೂರವಿಲ್ಲ ಎಂಬ ಭವಿಷ್ಯವಾಣಿಯ ಮಾತುಗಳು ಹರಿದಾಡಿದ್ದವು. ಆದರೆ ಈಗ ಅದೇ ರೂಪಾಯಿ ಚೇತರಿಕೆಯ ಹಾದಿ ಹಿಡಿದಾಗ ಮಾತ್ರ ವಿಶ್ಲೇಷಣೆಯ ಆ ಧ್ವನಿಗಳು ಏಕೆ ಮೌನವಾಗುತ್ತಿವೆ? ಆರ್ಥಿಕ ವಿಶ್ಲೇಷಣೆ ಎಂದರೆ ಕೇವಲ ಕುಸಿತಕ್ಕೆ ಕಣ್ಣೀರು ಸುರಿಸುವು ದಷ್ಟೇ ಅಲ್ಲ, ಚೇತರಿಕೆಯನ್ನೂ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇರಬೇಕು.

ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳಿಗೆ ಡಾಲರ್ ಅನ್ನು ಪ್ರಮುಖವಾಗಿ ಬಳಸುತ್ತಿವೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಯಾವುದೇ ರಾಷ್ಟ್ರದ ಕರೆನ್ಸಿಯ ಮೌಲ್ಯವನ್ನು ಡಾಲರ್ ಎದುರು ಅಳೆಯುವುದು ಸಾಮಾನ್ಯ. ಕಳೆದ ಎರಡು ವರ್ಷಗಳಿಂದ ಡಾಲರ್ ಎದುರು ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಲೇ ಬಂದಿತ್ತು.

ಮೂರು-ನಾಲ್ಕು ತಿಂಗಳ ಹಿಂದೆ ಒಂದು ಡಾಲರ್ ಮೌಲ್ಯ 97 ರೂಪಾಯಿಯ ಸಮೀಪ ತಲುಪಿತ್ತು. ಇದನ್ನು ಕಂಡ ಅನೇಕರು ಸದ್ಯದ ಡಾಲರ್ ನೂರು ರೂಪಾಯಿಯ ಗಡಿ ದಾಟಲಿದೆ ಎಂದು ವಿಶ್ಲೇಷಿಸಿದ್ದರು. ಆದರೆ, ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮಗಳನ್ನು ಕೈಗೊಂಡಿತು. ಡಾಲರ್ ಅಗತ್ಯವಿರುವ ಕಂಪನಿಗಳಿಗೆ ಅದನ್ನು ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ರೂಪಿಸಲಾಯಿತು. ವಿಶೇಷವಾಗಿ ತೈಲ ಮಾರಾಟ ಕಂಪನಿಗಳಿಗೆ ಡಾಲರ್ ಖರೀದಿಸಲು ರಿಸರ್ವ್ ಬ್ಯಾಂಕ್ ವಿಭಿನ್ನ ವ್ಯವಸ್ಥೆಯನ್ನು ಜಾರಿಗೆ ತಂದಿತು.

ಇದನ್ನೂ ಓದಿ: Dr Jagadeesh Maane Column: ವಿಭಜನೆಯ ಬೆಂಕಿಯಲ್ಲಿ ಹುಟ್ಟಿತು ಬಲಿಷ್ಠ ಭಾರತದ ಕನಸು !

ಇದರಿಂದ ಮಾರುಕಟ್ಟೆಯಲ್ಲಿ ಡಾಲರ್ ಖರೀದಿಗಾಗಿ ಉಂಟಾಗುತ್ತಿದ್ದ ಸ್ಪರ್ಧೆ ಮತ್ತು ಬೇಡಿಕೆಯ ಒತ್ತಡ ಕಡಿಮೆಯಾಗಲು ನೆರವಾಯಿತು. ಇನ್ನು ಕೃತಕವಾಗಿ ರೂಪಾಯಿಯ ಮೌಲ್ಯವನ್ನು ಏರಿಳಿತಗೊಳಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಎರಡು ಮಿಲಿಯ ಡಾಲರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಬ್ಯಾಂಕುಗಳು ಶೇ.20ರಷ್ಟು ಮೊತ್ತವನ್ನು ಮೀಸಲಿಡಬೇಕು ಎಂದು ರಿಸರ್ವ್ ಬ್ಯಾಂಕ್ ಸೂಚಿಸಿತ್ತು. ಇದರಿಂದ ಅನಗತ್ಯವಾಗಿ ಡಾಲರ್ ಸಂಗ್ರಹಿಸಿ, ಅದರ ಮೂಲಕ ಲಾಭ ಗಳಿಸುವ ಪ್ರವೃತ್ತಿಗೆ ಸ್ವಲ್ಪ ಮಟ್ಟಿನ ಕಡಿವಾಣ ಬಿದ್ದಿದೆ. ಈ ಕ್ರಮಗಳ ಪರಿಣಾಮವಾಗಿ ರೂಪಾಯಿಯ ಮೌಲ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ.

ಅ.30ರಂದು ಒಂದು ಡಾಲರ್ ಮೌಲ್ಯ 94.90 ರೂಪಾಯಿಗಳಷ್ಟಿದ್ದರೆ, ಇದೀಗ ಅದು 93.30 ರೂಪಾಯಿಗಳಿಗೆ ಇಳಿದಿದೆ. ಕಳೆದ 18 ದಿನಗಳಲ್ಲಿ ಡಾಲರ್ ಎದುರು ರೂಪಾಯಿ ಸುಮಾರು 1.60 ರೂಪಾಯಿಯಷ್ಟು ಬಲಗೊಂಡಿದೆ. ಒಟ್ಟಾರೆ ಕಳೆದ ಮೂರು ತಿಂಗಳಲ್ಲಿ ಸುಮಾರು 3.70 ರೂಪಾಯಿಗಳಷ್ಟು ಚೇತರಿಕೆ ಕಂಡಿದೆ.

ಇತ್ತೀಚೆಗೆ ‘The Federation of Indian Chambers of Commerce and Industry' (FICCI)) ಕಾರ್ಯಕ್ರಮದಲ್ಲಿ ಖ್ಯಾತ ಆರ್ಥಿಕ ತಜ್ಞ ನಾಗೇಶ್ವರನ್ ಮಾತನಾಡುತ್ತಾ, ಆರು ತಿಂಗಳ ಹಿಂದೆ ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಇದೀಗ ಭಾರತ ಉತ್ತಮ ಆರ್ಥಿಕ ಸ್ಥಿತಿಯತ್ತ ಸಾಗುತ್ತಿದೆ ಎಂದು ಹೇಳಿ, ಅದಕ್ಕೆ ಪೂರಕವಾದ ಹಲವು ಕಾರಣಗಳನ್ನು ಮುಂದಿಟ್ಟರು. 2026-27ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ, ಅಂದರೆ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ ಭಾರತದ ಒಟ್ಟು ರಫ್ತು ಸುಮಾರು 568 ಬಿಲಿಯನ್ ಡಾಲರ್ ಗಳಷ್ಟಾಗಿದೆ.

72 ಒಕ

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.16.7ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಕೇವಲ ಅಕ್ಟೋಬರ್ ತಿಂಗಳೊಂದರ ಸರಕುಗಳ ರಫ್ತು ಶೇ.45ರಷ್ಟು ಏರಿಕೆಯಾಗಿ 49.47 ಬಿಲಿಯ ಡಾಲರ್ ತಲುಪಿದ್ದು, ಹೊಸ ದಾಖಲೆಯನ್ನು ನಿರ್ಮಿಸಿದೆ. ಇದೇ ವೇಗದಲ್ಲಿ ರಫ್ತು ಪ್ರಮಾಣ ಮುಂದುವರಿದರೆ, 2027ರ ಮಾರ್ಚ್ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ರಫ್ತಿನ ಗುರಿಯನ್ನು ತಲುಪುವ ಸಾಧ್ಯತೆಯಿದೆ.

ಇಲ್ಲಿ ಒಂದು ಟ್ರಿಲಿಯನ್ ಡಾಲರ್ ಎನ್ನುವುದು ಸರಕು ಮತ್ತು ಸೇವೆಗಳೆರಡನ್ನೂ ಸೇರಿಸಿದ ಒಟ್ಟು ರಫ್ತಿನ ಗುರಿ. ಭಾರತ ತನ್ನ ಅಗತ್ಯಕ್ಕೆ ತಕ್ಕಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇತ್ತೀಚೆಗೆ ಇರಾನ್-ಅಮೆರಿಕ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ವಿಪರೀತ ಏರಿಕೆಯಾಗಿತ್ತು. ಆದರೆ, ಇದೀಗ ಅಲ್ಲಿಯೂ ಪರಿಸ್ಥಿತಿ ಸಾಕಷ್ಟು ಸುಧಾರಿಸುತ್ತಿದೆ.

ಇರಾನ್‌ನಿಂದ ತೈಲ ಪೂರೈಕೆ ಇಲ್ಲದಿದ್ದರೂ ರಷ್ಯಾದ ತೈಲವನ್ನು ಖರೀದಿಸಲು ಇದ್ದ ನಿರ್ಬಂಧ ಗಳನ್ನು ಅಮೆರಿಕ ಸಡಿಲಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುವ ಸಾಧ್ಯತೆ ಕಡಿಮೆಯಾಗಬಹುದು. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ೮೦ ಡಾಲರ್‌ಗಿಂತಲೂ ಕಡಿಮೆಯಾದರೆ, ತೈಲ ಆಮದಿಗಾಗಿ ಭಾರತ ಖರ್ಚು ಮಾಡುವ ಡಾಲರ್ ಪ್ರಮಾಣವೂ ಕಡಿಮೆಯಾಗುತ್ತದೆ. ಇದರಿಂದ ಸಹಜವಾಗಿ ಹಣದುಬ್ಬರದ ಒತ್ತಡ ತಗ್ಗಬಹುದು. ಈ ಬೆಳವಣಿಗೆ ಭಾರತದ ಆರ್ಥಿಕತೆಗೆ ಹಲವು ರೀತಿಯಲ್ಲಿ ಲಾಭದಾಯಕ ವಾಗಲಿದೆ.

ಇಷ್ಟು ದಿನ ಜಾಗತಿಕ ಹೂಡಿಕೆಗಳು ಕೃತಕ ಬುದ್ಧಿಮತ್ತೆ ಎಐ ಕ್ಷೇತ್ರದತ್ತ ಹೆಚ್ಚಿನ ಆಕರ್ಷಣೆಯನ್ನು ಹೊಂದಿದ್ದವು. ಆದರೆ, ಇದೀಗ ಎಐ ಕ್ಷೇತ್ರದ ಹೂಡಿಕೆಗಳಲ್ಲಿನ ನಿರೀಕ್ಷೆಗಳು ಮತ್ತು ವಾಸ್ತವದ ನಡುವಿನ ಅಂತರದ ಕುರಿತು ಪ್ರಶ್ನೆಗಳು ಎದ್ದಿವೆ. ಎಐ ಕಂಪನಿಗಳು ಹೂಡಿಕೆದಾರರು ನಿರೀಕ್ಷಿಸಿ ದಷ್ಟು ದೊಡ್ಡ ಪ್ರಮಾಣದ ಲಾಭವನ್ನು ತಕ್ಷಣವೇ ನೀಡುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಹೊಸ ಕ್ಷೇತ್ರಗಳತ್ತ ಗಮನ ಹರಿಸುತ್ತಿದ್ದಾರೆ. ಈ ಬೆಳವಣಿಗೆ ಭಾರತಕ್ಕೆ ಬರುವ ಬಂಡವಾಳ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂಬ ನಿರೀಕ್ಷೆಯಿದೆ.

ಹೀಗಾಗಿ 2027-28ರ ಹಣಕಾಸು ವರ್ಷ ಭಾರತದ ಪಾಲಿಗೆ ಉತ್ತಮ ಅವಕಾಶಗಳನ್ನು ಒದಗಿಸ ಬಹುದು. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಭಾರತಕ್ಕೆ ಬರುವ ಡಾಲರ್ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತ ಖರ್ಚು ಮಾಡುವ ಡಾಲರ್ ಪ್ರಮಾಣ ಕಡಿಮೆಯಾಗಬಹುದು. ಇದರಿಂದ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆ ತಗ್ಗಿ, ರೂಪಾಯಿಯ ಮೌಲ್ಯ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ರೂಪಾಯಿಯ ಶಕ್ತಿಯನ್ನು ಹೆಚ್ಚಿಸಿಕೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ಗಟ್ಟಿಯಾಗಿ ನಿಲ್ಲುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿಯಾಗಬಹುದು.

ಅಂತಾರಾಷ್ಟ್ರೀಯ ಕರೆನ್ಸಿಗಳ ಎದುರು ನಮ್ಮ ರೂಪಾಯಿಯ ಮೌಲ್ಯ ಹೆಚ್ಚಾಗಬೇಕೇ ಅಥವಾ ಕಡಿಮೆಯಾಗಬೇಕೇ ಎಂಬುದನ್ನು ನಿರ್ಧರಿಸುವುದು ನಾವು ಜಾಗತಿಕ ಮಟ್ಟದಲ್ಲಿ ನಡೆಸುವ ವ್ಯಾಪಾರ ವಹಿವಾಟುಗಳ ಸ್ವರೂಪವನ್ನು ಅವಲಂಬಿಸಿರುತ್ತದೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತೇವೆಯೇ ಅಥವಾ ರಫ್ತು ಮಾಡುತ್ತೇವೆಯೇ ಎಂಬುದರ ಮೇಲೆ ರೂಪಾಯಿಯ ಮೌಲ್ಯದ ಏರಿಳಿತಗಳು ಹಲವು ರೀತಿಯಲ್ಲಿ ಪರಿಣಾಮ ಬೀರುತ್ತವೆ.

ಉದಾಹರಣೆಗೆ, ಒಂದು ಡಾಲರ್ ಮೌಲ್ಯ 97 ರೂಪಾಯಿ ಇದೆ ಎಂದುಕೊಳ್ಳೋಣ. ನಾವು ಅಮೆರಿಕ ಅಥವಾ ಬೇರೆ ದೇಶಗಳಿಗೆ ಒಂದು ಲಕ್ಷ ಡಾಲರ್ ಮೌಲ್ಯದ ಬಟ್ಟೆಗಳನ್ನು ರಫ್ತು ಮಾಡಿದರೆ, ಅಲ್ಲಿಂದ ಒಂದು ಲಕ್ಷ ಡಾಲರ್ ಹಣ ನಮಗೆ ದೊರೆಯುತ್ತದೆ. ಅದನ್ನು ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ 97 ಲಕ್ಷ ರೂಪಾಯಿ ಸಿಗುತ್ತದೆ. ಆದರೆ, ಒಂದು ಡಾಲರ್ ಮೌಲ್ಯ 93 ರೂಪಾಯಿಗೆ ಇಳಿದರೆ, ಅಂದರೆ ರೂಪಾಯಿಯ ಮೌಲ್ಯ ಬಲಗೊಂಡರೆ, ಅದೇ ಒಂದು ಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದಾಗ ನಮಗೆ 93 ಲಕ್ಷ ರೂಪಾಯಿ ಮಾತ್ರ ಸಿಗುತ್ತದೆ.

ನಮ್ಮ ಉತ್ಪಾದನಾ ವೆಚ್ಚವಾಗಲಿ, ಡಾಲರ್‌ನಲ್ಲಿ ನಿಗದಿಪಡಿಸಿದ ವಸ್ತುವಿನ ಮೌಲ್ಯವಾಗಲಿ ಬದಲಾಗುವುದಿಲ್ಲ. ಆದರೆ, ರೂಪಾಯಿಗೆ ಪರಿವರ್ತಿಸಿದಾಗ ನಮಗೆ ಸಿಗುವ ಹಣದ ಪ್ರಮಾಣ ಮಾತ್ರ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ರಫ್ತು ಉದ್ಯಮಗಳು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಹೀಗಾಗಿ ರೂಪಾಯಿಯ ಮೌಲ್ಯ ಡಾಲರ್ ಎದುರು ಹೆಚ್ಚಾದಾಗ ರಫ್ತು ಉದ್ಯಮಿ ಗಳಿಗೆ ಕೆಲವೊಮ್ಮೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು. ಈ ನಷ್ಟ ಕೇವಲ ಹಣದ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.

ರೂಪಾಯಿಯ ಮೌಲ್ಯ ಹೆಚ್ಚಾದಾಗ ನಮ್ಮ ದೇಶದಿಂದ ರ-ಗುವ ವಸ್ತುಗಳ ಬೆಲೆಯೂ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತದೆ. ಅಲ್ಲಿ ನಮ್ಮ ವಸ್ತುಗಳು ಬೇರೆ ದೇಶಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ನಾವು ಇಲ್ಲಿಂದ ಬಟ್ಟೆಗಳನ್ನು ರಫ್ತು ಮಾಡುತ್ತಿದ್ದೇವೆ ಎಂದುಕೊಳ್ಳಿ.

ರೂಪಾಯಿಯ ಮೌಲ್ಯ ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಉತ್ಪನ್ನಗಳ ಬೆಲೆ ವಿದೇಶಿ ಮಾರುಕಟ್ಟೆ ಯಲ್ಲಿ ಹೆಚ್ಚಾದರೆ, ಅದೇ ವಿಯೆಟ್ನಾಂ, ಬಾಂಗ್ಲಾದೇಶ ಅಥವಾ ಬೇರೆ ದೇಶಗಳ ಕರೆನ್ಸಿಯ ಮೌಲ್ಯ ಕಡಿಮೆಯಿರುವ ಸಂದರ್ಭದಲ್ಲಿ ಅಲ್ಲಿಂದ ಬರುವ ಉತ್ಪನ್ನಗಳು ಕಡಿಮೆ ಬೆಲೆಗೆ ದೊರೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ಸ್ಪರ್ಧಾತ್ಮಕತೆ ಕುಸಿಯುತ್ತದೆ. ಮಾರಾಟ ಕಡಿಮೆಯಾಗಿ, ರಫ್ತು ಉದ್ಯಮಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ.

ರೂಪಾಯಿಯ ಮೌಲ್ಯವು ಹೆಚ್ಚಾದಾಗ ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳು ವವರಿಗೆ ಲಾಭವಾಗುತ್ತದೆ. ಉದಾ, ರೂಪಾಯಿಯ ಮೌಲ್ಯ ಬಲಗೊಂಡರೆ ಕಚ್ಚಾ ತೈಲದ ಆಮದು ವೆಚ್ಚ ಕಡಿಮೆಯಾಗುತ್ತದೆ. ನಾವು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಅದರ ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳು ವಾಗಲೂ ವೆಚ್ಚ ಕಡಿಮೆಯಾಗುವ ಸಾಧ್ಯತೆಯಿದೆ.

ಹೀಗೆ ಡಾಲರ್ ನೀಡಿ ವಿದೇಶಗಳಿಂದ ಖರೀದಿಸುವ ವಸ್ತುಗಳ ಬೆಲೆ ರೂಪಾಯಿಯ ಮೌಲ್ಯ ಹೆಚ್ಚಾದಾಗ ಸಹಜವಾಗಿ ಕಡಿಮೆಯಾಗುತ್ತದೆ. ಆಮದು ವೆಚ್ಚ ಇಳಿಕೆಯಾದರೆ ಹಣದುಬ್ಬರ ಕಡಿಮೆಯಾಗಲು ಸಹಾಯವಾಗುತ್ತದೆ. ಹೀಗಾದಾಗ ಸಹಜವಾಗಿ ಶ್ರೀಸಾಮಾನ್ಯನ ಜೀವನದ ವೆಚ್ಚ ಕಡಿಮೆ ಆಗುತ್ತದೆ. ವಿದೇಶಿ ಪ್ರವಾಸ ಮತ್ತು ವಿದೇಶಗಳಲ್ಲಿ ಶಿಕ್ಷಣ ಪಡೆಯುವವರ ವೆಚ್ಚ ಕಡಿಮೆ ಯಾಗುತ್ತದೆ ಮತ್ತು ಡಾಲರ್‌ನಲ್ಲಿ ಶುಲ್ಕ ಪಾವತಿಸುವ ವಿದ್ಯಾರ್ಥಿಗಳಿಗೆ ಇದು ನಿರಾಳತೆಯನ್ನು ನೀಡುತ್ತದೆ. ದೇಶಕ್ಕೂ ವಿದೇಶಿ ಸಾಲವನ್ನು ತೀರಿಸುವುದು ಕೂಡ ಬಹಳ ಸುಲಭವಾಗುತ್ತದೆ. ಹಾಗೆಯೇ ಡಾಲರ್‌ನಲ್ಲಿ ಸಾಲ ಪಡೆದ ಕಂಪನಿಗಳ ಸಾಲದ ಹೊರೆ ಕಡಿಮೆಯಾಗುವ ಸಾಧ್ಯತೆ ಯಿದೆ.

ಇವೆಲ್ಲವೂ ಆರ್ಥಿಕತೆಗೆ ಅನುಕೂಲಕರ ಪರಿಣಾಮಗಳನ್ನೇ ಉಂಟುಮಾಡುತ್ತವೆ. ಆದರೆ, ಈ ಬೆಳವಣಿಗೆ ಯಲ್ಲಿಯೂ ಕೆಲವು ಅಪಾಯಗಳು ಅಡಗಿವೆ. ವಿದೇಶದಿಂದ ಬರುವ ವಸ್ತುಗಳ ಬೆಲೆ ನಮ್ಮ ದೇಶದಲ್ಲಿ ಕಡಿಮೆಯಾಯಿತು ಎಂದುಕೊಳ್ಳಿ. ಆಗ ನಾವು ನಮ್ಮ ದೇಶದ ವಸ್ತುಗಳನ್ನೇ ಖರೀದಿಸುತ್ತೇವೆಯೇ? ಅಥವಾ ಕಡಿಮೆ ಬೆಲೆಗೆ ದೊರೆಯುವ ವಿದೇಶಿ ವಸ್ತುಗಳತ್ತ ಆಕರ್ಷಿತರಾಗು ತ್ತೇವೆಯೇ? ಚಿನ್ನ ಮತ್ತು ಪೆಟ್ರೋಲ್‌ಗಳಂತಹ ಕೆಲವು ವಸ್ತುಗಳನ್ನು ಹೊರತುಪಡಿಸಿದರೂ, ಇನ್ನೂ ಹಲವು ಉತ್ಪನ್ನಗಳ ಬೆಲೆ ನಮ್ಮ ದೇಶದ ವಸ್ತುಗಳಿಗೆ ಹೋಲಿಸಿದರೆ ವಿದೇಶಿ ವಸ್ತುಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಆಗ ಗ್ರಾಹಕರು ಸಹಜವಾಗಿ ವಿದೇಶಿ ವಸ್ತುಗಳ ಖರೀದಿಗಾಗಿಯೇ ಹೆಚ್ಚಿನ ಒಲವು ತೋರುತ್ತಾರೆ.

ಹೀಗಾಗಿ ನಮ್ಮ ಮಾರುಕಟ್ಟೆಯಲ್ಲಿ ವಿದೇಶಿ ವಸ್ತುಗಳು ಕಡಿಮೆ ಬೆಲೆಗೆ ದೊರೆತು ಅವುಗಳ ಮಾರಾಟ ಹೆಚ್ಚಾದರೆ, ಸ್ವದೇಶಿ ಉತ್ಪನ್ನಗಳ ಮಾರಾಟ ಸಹಜವಾಗಿ ಕುಸಿಯುತ್ತದೆ. ಇದರಿಂದ ನಮ್ಮ ಕಾರ್ಖಾನೆಗಳು ನಷ್ಟಕ್ಕೆ ಒಳಗಾಗುತ್ತವೆ. ನಮ್ಮ ಉದ್ಯೋಗಾವಕಾಶಗಳು ಕಡಿಮೆಯಾಗಿ ಜನರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿಯು ಎದುರಾಗಬಹುದು. ಹೀಗೆ ಸ್ವದೇಶಿ ಉತ್ಪನ್ನಗಳ ಖರೀದಿ ಮತ್ತು ಉತ್ಪಾದನೆ ಕುಸಿದರೆ, ಅದು ‘ಮೇಕ್ ಇನ್ ಇಂಡಿಯಾ’ದ ಆಶಯಕ್ಕೂ ದೊಡ್ಡ ಹೊಡೆತ ಕೊಡುತ್ತದೆ.

ಇನ್ನು ವಿದೇಶಗಳಲ್ಲಿ ಕೆಲಸ ಮಾಡಿ ಭಾರತಕ್ಕೆ ಹಣ ಕಳುಹಿಸುವವರೂ ಕೂಡಾ ಸಾಕಷ್ಟು ಸಂಖ್ಯೆ ಯ ಜನರಿದ್ದಾರೆ. ಅವರು ವಿದೇಶದಿಂದ ಕಳುಹಿಸುವ ಹಣದ ರೂಪಾಯಿ ಮೌಲ್ಯ ಕಡಿಮೆಯಾಗು ತ್ತದೆ. ಅದರಿಂದ ಇಲ್ಲಿರುವ ಅವರ ಕುಟುಂಬಗಳ ಆರ್ಥಿಕ ಪರಿಸ್ಥಿತಿಯ ಮೇಲೂ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಹಾಗೆಯೇ ನಮ್ಮ ಐಟಿ ಕಂಪನಿಗಳು ವಿದೇಶಗಳಿಂದ ಗಳಿಸುವ ಆದಾಯ ಬಹುತೇಕ ಡಾಲರ್‌ಗಳಲ್ಲಿ ಬರುತ್ತದೆ. ಆದರೆ, ಇಲ್ಲಿನ ಉದ್ಯೋಗಿಗಳ ಸಂಬಳ, ಕಚೇರಿ ವೆಚ್ಚ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ರೂಪಾಯಿಗಳಲ್ಲಿಯೇ ಪಾವತಿಸುತ್ತವೆ.

ವಿದೇಶಗಳಿಂದ ಡಾಲರ್‌ನಲ್ಲಿ ಆದಾಯ ಗಳಿಸಿ, ದೇಶದಲ್ಲಿ ರೂಪಾಯಿಗಳಲ್ಲಿ ವೆಚ್ಚ ಮಾಡುವು ದರಿಂದ ರೂಪಾಯಿಯ ಮೌಲ್ಯ ಡಾಲರ್ ಎದುರು ಕುಸಿದಾಗ ಅವರಿಗೆ ಹೆಚ್ಚಿನ ಲಾಭವಾಗುತ್ತದೆ. ಆದರೆ, ರೂಪಾಯಿಯ ಮೌಲ್ಯ ಬಲಗೊಂಡರೆ ಐಟಿ ಕಂಪನಿಗಳ ಆದಾಯ ಕಡಿಮೆಯಾಗುತ್ತದೆ. ಇದು ಬೆಂಗಳೂರಿನ ಐಟಿ ಉದ್ಯಮ ಸೇರಿದಂತೆ ದೇಶದ ತಂತ್ರಜ್ಞಾನ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.

ಈಗಾಗಲೇ ಉದ್ಯೋಗ ಕಡಿತ ಮತ್ತು ಅನಿಶ್ಚಿತತೆಯಿಂದ ಆತಂಕದಲ್ಲಿರುವ ಐಟಿ ಉದ್ಯಮಕ್ಕೆ ರೂಪಾಯಿ ಯ ಮೌಲ್ಯ ಹೆಚ್ಚಳ ಸವಾಲಾಗಿ ಪರಿಣಮಿಸಬಹುದು. ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಮ್ಮ ಹಣವನ್ನು ರೂಪಾಯಿಗಳಲ್ಲಿಯೇ ಹೂಡಿಕೆ ಮಾಡಿರುತ್ತಾರೆ. ರೂಪಾಯಿಯ ಮೌಲ್ಯ ಸ್ಥಿರವಾಗಿದ್ದರೆ ಅಥವಾ ಬಲಗೊಂಡರೆ, ಅವರಿಗೆ ತಮ್ಮ ಹೂಡಿಕೆಯ ಮೇಲೆ ಲಾಭ ದೊರೆಯುವ ಸಾಧ್ಯತೆಯಿದೆ. ಹೀಗಾಗಿ ರೂಪಾಯಿ ಸ್ಥಿರವಾಗಿರುವವರೆಗೆ ವಿದೇಶಿ ಹೂಡಿಕೆ ಭಾರತದಲ್ಲಿಯೇ ಉಳಿಯಬಹುದು. ಆದರೆ, ಅಮೆರಿಕದ ಬ್ಯಾಂಕುಗಳು ಹೆಚ್ಚಿನ ಬಡ್ಡಿ ನೀಡುತ್ತವೆ ಎಂಬ ಕಾರಣಕ್ಕಾಗಿಯೋ, ಅಥವಾ ಬೇರೆ ದೇಶಗಳಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿಯೋ ಹೂಡಿಕೆದಾರರು ಏಕಾಏಕಿ ತಮ್ಮ ಹಣವನ್ನು ಹಿಂಪಡೆಯಲು ಮುಂದಾದರೆ, ಆಗ ರೂಪಾಯಿಯ ಮೌಲ್ಯ ಕುಸಿಯುವ ಸಾಧ್ಯತೆ ಇರುತ್ತದೆ.

ಇಂತಹ ಸಂದರ್ಭಗಳಲ್ಲಿ ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಒತ್ತಡ ಉಂಟಾಗುತ್ತದೆ. ಆರ್ಥಿಕ ತಜ್ಞ ನಾಗೇಶ್ವರನ್ ಅವರು ಹೇಳಿರುವಂತೆ, ರೂಪಾಯಿ ಅತಿವೇಗವಾಗಿ ಬಲಗೊಂಡರೆ, ಅದೇ ವೇಗದಲ್ಲಿ ಅದನ್ನು ಕುಸಿಯದಂತೆ ನೋಡಿಕೊಳ್ಳುವುದೂ ಮುಖ್ಯವಾಗುತ್ತದೆ. ಈ ಏರಿಳಿತಗಳನ್ನು ಸಮತೋಲನದಲ್ಲಿಡುವ ಜವಾಬ್ದಾರಿ ರಿಸರ್ವ್ ಬ್ಯಾಂಕಿನ ಮೇಲಿದೆ. ಇಂತಹ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಡಾಲರ್‌ಗಳನ್ನು ಖರೀದಿಸಿ ತನ್ನ ವಿದೇಶಿ ವಿನಿಮಯ ಮೀಸಲನ್ನು ಹೆಚ್ಚಿಸಿಕೊಳ್ಳಬಹುದು.

ಜತೆಗೆ, ರಫ್ತುದಾರರಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ. ದೇಶೀಯ ಉದ್ಯಮಗಳ ಉತ್ಪಾದಕತೆ ಮತ್ತು ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಿಸಬೇಕು. ಆಗ ಸ್ವದೇಶಿ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಸ್ಪರ್ಧಿಸುವ ಶಕ್ತಿ ಹೆಚ್ಚಾಗುತ್ತದೆ. ಇಂಧನ ವೆಚ್ಚ, ಇಂಧನ ಭದ್ರತೆ ಮತ್ತು ಇಂಧನ ಪರಿವರ್ತನೆ- ಈ ಮೂರನ್ನೂ ಸಮತೋಲನದಲ್ಲಿ ನಿಭಾಯಿಸು ವುದು ಭಾರತದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ.