ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಓದಿ ತಿಳಿದುಕೊಂಡವನಿಗೆ ಮೂರ್ಖತ್ವವಿಲ್ಲ

ಹಿರಿಯರು ಹೀಗೆನ್ನುತ್ತಾರೆ: “ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಂ, ಮೌನಿನಃ ಕಲಹೋ ನಾಸ್ತಿ ನಭಯಂ ಚಾಸ್ತಿ ಜಾಗ್ರತಃ"- ಅಂದರೆ, ಓದಿ ತಿಳಿದುಕೊಂಡವರಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಮೌನವಾಗಿರುವವನಿಗೆ ಜಗಳವಿಲ್ಲ, ಎಚ್ಚರ ವಹಿಸಿದವನಿಗೆ ಭಯವಿಲ್ಲ" ಎಂದರ್ಥ

ಒಂದೊಳ್ಳೆ ಮಾತು

rgururaj628@gmail.com

ಆ ಊರಿನಲ್ಲೊಬ್ಬ ಬುದ್ಧಿವಂತ ಬಡ ಪಂಡಿತನಿದ್ದ. ಆತ ತನ್ನ ಮನೆಯ ಮುಂದಿನ ಒಂದು ಕಪ್ಪು ಹಲಗೆಯ ಮೇಲೆ ‘ಇಲ್ಲಿ ಬುದ್ಧಿಯನ್ನು ಮಾರಲಾಗುವುದು’ ಎಂದು ಬರೆದು ಹಾಕಿದ್ದ. ಇದನ್ನು ಕಂಡು ಅನೇಕರು ಅವನನ್ನು ಅಪಹಾಸ್ಯ ಮಾಡಿದರು. ಆದರೂ ಆತ ತನ್ನ ನಿಲುವನ್ನು ಬದಲಿಸ ಲಿಲ್ಲ.

ಒಮ್ಮೆ ಪಟ್ಟಣದ ರಾಜಬೀದಿಯಲ್ಲಿ, ಶೆಟ್ಟಿಯ ಮಗ ಹಾಗೇ ನಡೆದುಕೊಂಡು ಬರುತ್ತಿದ್ದ. ಅದೇ ಸಮಯದಲ್ಲಿ ಪಟ್ಟಣದ ರಾಜನ ಎರಡನೇ ರಾಣಿಯು ತನ್ನ ದಾಸಿಯೊಡನೆ, ಆಭರಣಗಳ ದೊಡ್ಡ ಮಳಿಗೆಯೊಂದರಲ್ಲಿ ಬೆಲೆಬಾಳುವ ಕಂಠೀಹಾರವನ್ನು ಖರೀದಿಸುತ್ತಿದ್ದಳು. ಅದನ್ನು ಶೆಟ್ಟಿಯ ಮಗ ನೋಡಿದ. ಕಾಕತಾಳೀಯವೆಂಬಂತೆ ದಾಸಿಯೂ ಅವನನ್ನು ನೋಡಿದಳು.

ಕಕ್ಕಾಬಿಕ್ಕಿಯಾದ ಶೆಟ್ಟಿಯ ಮಗನು ಹೆದರಿಕೆಯಿಂದ ಅಲ್ಲಿಂದ ಹೊರಟು ಬಿಟ್ಟ. ಕಿರಿರಾಣಿಯು ಅರಮನೆಗೆ ಬಂದವಳೇ ಕಂಠೀಹಾರವನ್ನು ರಾಜನಿಗೆ ತೋರಿಸಿದಳು. ರಾಜನು ಕಿರಿರಾಣಿಯ ಆಯ್ಕೆ ಯನ್ನು ಮೆಚ್ಚಿ ಹೊಗಳಿ ಆ ಕಂಠೀಹಾರವನ್ನು ಅವಳಿಗೆ ತೊಡಿಸಿದನು. ಇದನ್ನು ಹಿರಿಯ ರಾಣಿಯ ದಾಸಿ ನೋಡಿಬಿಟ್ಟಳು.

ಇದನ್ನೂ ಓದಿ: Roopa Gururaj Column: ವಿಷ್ಣು ಸಹಸ್ರನಾಮದ ಮಹತ್ವ

ಇನ್ನು ಅವಳು ಸುಮ್ಮನಿರುವಳೇ? ಅದನ್ನು ಪಟ್ಟದ ರಾಣಿಗೆ ದೂರು ಹೇಳಿದಳು. ಆಕೆ ಕೋಪ ಗೊಂಡು ರಾಜನನ್ನು ಪ್ರಶ್ನಿಸತೊಡಗಿದಳು. ಈಗ ಕಿರಿರಾಣಿಯೇ ಅದನ್ನು ಕೊಂಡು ತಂದದ್ದು ಎನ್ನುವುದಕ್ಕೆ ಸಾಕ್ಷಿ ಬೇಕಿತ್ತು. ಆಗ ಕಿರಿಯ ರಾಣಿಯ ದಾಸಿಗೆ ಶೆಟ್ಟಿಯ ಮಗನ ನೆನಪಾಯಿತು. ಸರಿ, ರಾಜನ ಆಸ್ಥಾನದಿಂದ ಅವನಿಗೆ ಕರೆಹೋಯಿತು. ಶೆಟ್ಟಿಯ ಮಗನಿಗೆ ನಡುಕ ಪ್ರಾರಂಭವಾಯಿತು.

ಆಗ ಅವನಿಗೆ ಪಂಡಿತನ ಮನೆಯ ಮುಂದಿದ್ದ ಫಲಕ ನೆನಪಾಯಿತು. ಶೆಟ್ಟಿಯ ಮಾತನ್ನು ಸಮಾಧಾನವಾಗಿ ಕೇಳಿದ ಪಂಡಿತ, “ಇದಕ್ಕೆ ಮೂರು ರೀತಿಯ ಪರಿಹಾರಗಳಿವೆ. ‘ತತ್ ಕ್ಷಣದ ಪರಿಹಾರ’ಕ್ಕೆ 100 ವರಹ, ‘ತತ್ಕಾಲದ ಪರಿಹಾರ’ಕ್ಕೆ 500 ವರಹ, ‘ಶಾಶ್ವತ ಪರಿಹಾರ’ಕ್ಕೆ 1000 ವರಹ" ಎಂದನು.

ಬಹಳ ಯೋಚಿಸಿದ ಶೆಟ್ಟಿ, 100 ವರಹದ ‘ತತ್‌ಕ್ಷಣದ ಪರಿಹಾರ’ ಕೇಳಿದನು. ಪಂಡಿತನ ಸಲಹೆ ಯಂತೆ ಶೆಟ್ಟಿಯ ಮಗ ರಾಜಸಭೆಗೆ ಬಂದು, “ನಾನು ಏನೂ ನೋಡೇ ಇಲ್ಲ, ನನಗೆ ಏನೂ ಗೊತ್ತಿಲ್ಲ" ಎಂದನು. ವಿಚಾರಣೆ ಅಲ್ಲಿಗೆ ಮುಗಿಯಿತು. ನಂತರ ಶೆಟ್ಟಿಯ ಮಗನನ್ನು ಹುಡುಕಿಕೊಂಡು ಬಂದ ಕಿರಿರಾಣಿಯ ಪರಿಚಾರಿಕೆಯರು, “ನೀನು ವಿಚಾರಣೆಯ ಸಮಯದಲ್ಲಿ ಸುಳ್ಳು ಹೇಳಿದೆ, ನಿನ್ನನ್ನು ಬಲಿಹಾಕುತ್ತೇವೆ" ಎಂದರು.

ಇಬ್ಬರು ರಾಣಿಯರ ಜಟಾಪಟಿ, ಶೆಟ್ಟಿಗೆ ಅಡಕತ್ತರಿಯಲ್ಲಿ ಸಿಕ್ಕಂತಾಯಿತು. ಏನು ಕಾದಿದೆಯೋ? ಹೆಚ್ಚು ಸಮಯವೂ ಇಲ್ಲ. ಹೀಗಾಗಿ ಮತ್ತೆ ‘ಬುದ್ಧಿಯನ್ನು’ ಖರೀದಿಸಲು ಪಂಡಿತನಲ್ಲಿಗೆ ಬಂದನು. ಶೆಟ್ಟಿಯನ್ನು ಕಂಡೊಡನೆ ಪಂಡಿತನು, “ಶಾಶ್ವತ ಪರಿಹಾರವನ್ನೇ ತೆಗೆದುಕೊಂಡು ಹೋಗು, ಅರಮನೆಯವರ ಸಹವಾಸ ಕಷ್ಟ" ಎಂದನು.

ಆದರೆ ಜುಗ್ಗ ಶೆಟ್ಟಿಯು ಸಾವಿರ ವರಹದ ಕುರಿತು ಯೋಚಿಸಿ, “ಬೇಡ, 500 ವರಹದ ‘ತತ್ಕಾಲದ ಪರಿಹಾರ’ ಕೊಟ್ಟರೆ ಸಾಕು" ಎಂದನು. ನಂತರ ರಾಜಸಭೆಗೆ ಬಂದು, “ನನ್ನ ಮಗನಿಗೆ ಬುದ್ಧಿ ಸರಿಯಿಲ್ಲ" ಎಂದನು. ನ್ಯಾಯಾಲಯವು ಪರಿಶೀಲಿಸಿ ಶೆಟ್ಟಿಯ ಮಗನನ್ನು ಖುಲಾಸೆಗೊಳಿಸಿತು. ಪಟ್ಟದ ರಾಣಿಯ ಪರಿಚಾರಿಕೆಯರು ಬಿಟ್ಟಾರೆಯೇ! “ನಮಗೆಲ್ಲಾ ಗೊತ್ತಿದೆ, ನಿನಗೆ ಕಾದಿದೆ ಗ್ರಹಚಾರ" ಎಂದರು.

ಪೂರ್ತಿ ಹೆದರಿದ ಶೆಟ್ಟಿ ಮತ್ತು ಅವನ ಮಗ ದಾರಿಯಿಲ್ಲದೆ ‘ಶಾಶ್ವತ ಪರಿಹಾರ’ ಪಡೆದರು. ಇಬ್ಬರೂ ರಾಜನ ಬಳಿಗೆ ನೇರವಾಗಿ ಬಂದು, “ಇದು ನಾವು ನಿಮಗೆ ಕೊಡುತ್ತಿರುವ ಕಾಣಿಗೆ" ಎಂದು ಹೇಳಿ, ಆಭರಣದ ಮಳಿಗೆಯಿಂದ ಕೊಂಡು ತಂದಿದ್ದ ಹೊಸ ‘ಕಂಠೀಹಾರ’ವನ್ನು ಉಡುಗೊರೆಯಾಗಿ ಕೊಟ್ಟರು. ರಾಜನಿಗೆ ದೊಡ್ಡ ತಲೆನೋವು ತಪ್ಪಿದಂತಾಯಿತು.

ಪಟ್ಟದ ರಾಣಿಯನ್ನು ರಾಜಸಭೆಗೆ ಕರೆಸಿ ಅದನ್ನು ಅವಳಿಗೆ ತೊಡಿಸಿ, ಅವಳ ಮೆಚ್ಚುಗೆ ಗಳಿಸಿದನು. ಶೆಟ್ಟಿಗೂ ಸಕಲ ಮರ್ಯಾದೆ ಮಾಡಿ ಕಳಿಸಿಕೊಟ್ಟನು. ಇಬ್ಬರೂ ಪಂಡಿತನಲ್ಲಿಗೆ ಹೋಗಿ ಮರ್ಯಾದೆ ಮಾಡಿ, “ನಿಮ್ಮ ಬುದ್ಧಿ ನಮಗೆ ನೆರವಾಯಿತು" ಎಂದರು.

ಅದಕ್ಕೆಂದೇ ಹಿರಿಯರು ಹೀಗೆನ್ನುತ್ತಾರೆ: “ಪಠತೋ ನಾಸ್ತಿ ಮೂರ್ಖತ್ವಂ, ಜಪತೋ ನಾಸ್ತಿ ಪಾತಕಂ, ಮೌನಿನಃ ಕಲಹೋ ನಾಸ್ತಿ ನಭಯಂ ಚಾಸ್ತಿ ಜಾಗ್ರತಃ"- ಅಂದರೆ, ಓದಿ ತಿಳಿದುಕೊಂಡವರಿಗೆ ಮೂರ್ಖತ್ವವಿಲ್ಲ, ಜಪ ಮಾಡುವವನಿಗೆ ಪಾಪವಿಲ್ಲ, ಮೌನವಾಗಿರುವವನಿಗೆ ಜಗಳವಿಲ್ಲ, ಎಚ್ಚರ ವಹಿಸಿದವನಿಗೆ ಭಯವಿಲ್ಲ" ಎಂದರ್ಥ.

ರೂಪಾ ಗುರುರಾಜ್

View all posts by this author