ಚುಚ್ಚುಮದ್ದು
ಡಾ.ದಯಾನಂದ ಲಿಂಗೇಗೌಡ
ಒಂದೆರಡು ದಶಕಗಳ ಹಿಂದೆ ವಿಮಾ ಕಂಪನಿಗಳ ಮಾತು ಹೆಚ್ಚು ನಡೆಯುತ್ತಿರಲಿಲ್ಲ, ಆಸ್ಪತ್ರೆಯವರ ಮಾತು ನಡೆಯುತ್ತಿತ್ತು. ಆದರೆ ಈಗ ವಿಮಾ ಕಂಪನಿಯವರು ದೊಡ್ಡದಾಗಿ ಬೆಳೆದಿದ್ದಾರೆ. ಇಂದು ಆಸ್ಪತ್ರೆಗೆ ಬರುವ ಬಹಳಷ್ಟು ಜನರ ಕೈಲಿ ವಿಮಾ ಪಾಲಿಸಿಯಿರುತ್ತದೆ. ಆದ್ದರಿಂದ ವಿಮಾ ಕಂಪನಿಯವರು ಆಸ್ಪತ್ರೆಯವರನ್ನು ನಿರ್ದೇಶನ ಮಾಡುವಷ್ಟು ಶಕ್ತಿಯುತರಾಗಿದ್ದಾರೆ. ವಿಮಾ ಕಂಪನಿಯವರನ್ನು ಧಿಕ್ಕರಿಸಿದರೆ, ಆಸ್ಪತ್ರೆಯವರು ತಮ್ಮಲ್ಲಿಗೆ ಬರುವ ರೋಗಿಗಳ ಸಂಖ್ಯೆಗೆ ಸಂಚಕಾರವನ್ನು ತಂದುಕೊಳ್ಳಬೇಕಾಗುತ್ತದೆ!
ಸಾಲವನು ಕೊಂಬಾಗ ಹಾಲೋಗರವ ಉಂಡಂತೆ, ಸಾಲಿಗನು ಬಂದು ಸೆಳೆವಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂಬ ಸರ್ವಜ್ಞ ಕವಿಯ ವಚನವನ್ನು ನೀವು ಕೇಳಿರಬಹುದು. ಆರೋಗ್ಯ ವಿಮಾ ಪಾಲಿಸಿ ನೀಡುವವರ ಮತ್ತು ರೋಗಿಗಳ ಸಂಬಂಧಗಳು ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಆರೋಗ್ಯ ವಿಮಾ ಪಾಲಿಸಿಗೆ ಹಣವನ್ನು ಕಟ್ಟಿಸಿಕೊಳ್ಳುವಾಗ ‘ನಾಜೂಕಯ್ಯ’ನಂತೆ ಹಲ್ಲು ಕಿಸಿಯುವ ವಿಮಾ ಕಂಪನಿಗಳ ಸಿಬ್ಬಂದಿ, ಅದೇ ‘ಕ್ಲೇಮ್’ ಇತ್ಯರ್ಥದ ಸಂದರ್ಭ ಬಂದಾಗ ‘ಕೋಡಂಗಿ’ ಆಟವನ್ನು ಶುರುವಿಟ್ಟುಕೊಳ್ಳುತ್ತಾರೆ.
ಏಪ್ರಿಲ್ ತಿಂಗಳಲ್ಲಿ ಕಟ್ಟುವ ಕಂತಿಗೆ ಡಿಸೆಂಬರ್ ತಿಂಗಳಿಂದಲೇ ಫೋನ್ ಮಾಡಿ ಜ್ಞಾಪಿಸುವ ಈ ಕಂಪನಿಗಳು, ಕ್ಲೇಮ್ ಇತ್ಯರ್ಥದ ವಿಷಯ ಬಂದಾಗ ಇದೇ ಆತುರವನ್ನು ತೋರುವುದಿಲ್ಲ. ಆರೋಗ್ಯ ವಿಮಾ ಪಾಲಿಸಿ ಕೊಡುವ ಕಂಪನಿಗಳ ಮತ್ತು ಆಸ್ಪತ್ರೆಗಳ ಕಾರ್ಯಾಚರಣೆಗಳು ಪರಸ್ಪರ ವೈರುಧ್ಯದಿಂದ ಕೂಡಿವೆ.
ಇಂಥ ವಿಮಾ ಕಂಪನಿಗಳು ತಮಗೆಷ್ಟು ಬೇಕೋ ಅಷ್ಟು ಕ್ಲೇಮ್‌ಗಳನ್ನು ತಿರಸ್ಕರಿಸಬೇಕು ಮತ್ತು ಕೊಟ್ಟ ಕ್ಲೇಮ್‌ಗೂ ಆದಷ್ಟು ಹಣವನ್ನು ಕೊಡಬೇಕು; ಹಾಗೆ ಮಾಡಿದಾಗ ಮಾತ್ರವೇ ಅವಕ್ಕೆ ಲಾಭ ವಾಗುತ್ತದೆ. ಆಸ್ಪತ್ರೆಗಳು ಕೂಡ ಹೆಚ್ಚೆಚ್ಚು ಆಪರೇಷನ್‌ಗಳನ್ನು ಮಾಡಬೇಕು ಹಾಗೂ ಹೆಚ್ಚೆಚ್ಚು ಶುಲ್ಕ ವಿಧಿಸಬೇಕು; ಆಗ ಮಾತ್ರವೇ ಅವಕ್ಕೆ ಲಾಭವಾಗುತ್ತದೆ. ಹೀಗೆ ಈ ಎರಡು ವ್ಯವಸ್ಥೆಗಳ ಕಾರ್ಯವೈಖರಿ ಒಂದಕ್ಕೊಂದು ತದ್ವಿರುದ್ಧವಾಗಿರುವುದರಿಂದ, ಇವೆರಡರ ನಡುವೆ ಸದಾ ಒಂದು ರೀತಿಯ ತಿಕ್ಕಾಟ ಇದ್ದೇ ಇರುತ್ತದೆ.
ಆದರೆ ಇವರಿಬ್ಬರ ಇಕ್ಕಳದಲ್ಲಿ ನರಳುವವನು ರೋಗಿ. ಒಂದೆರಡು ದಶಕಗಳ ಹಿಂದೆ ವಿಮಾ ಕಂಪನಿಗಳು ದೊಡ್ಡದಾಗಿರಲಿಲ್ಲ, ಆಸ್ಪತ್ರೆಗೆ ಬರುವ ಬಹಳಷ್ಟು ಜನರಿಗೆ ವಿಮೆ ಇರುತ್ತಿರಲಿಲ್ಲ. ಆಗ ವಿಮಾ ಕಂಪನಿಗಳ ಮಾತು ಹೆಚ್ಚು ನಡೆಯುತ್ತಿರಲಿಲ್ಲ, ಅದು ಆಸ್ಪತ್ರೆಯವರ ಮಾತು ನಡೆಯು ತ್ತಿದ್ದ ಕಾಲ.
ಇದನ್ನೂ ಓದಿ: Dr Dayanand Lingegowda Column: ಕನ್ನಡಿಗರು ವೃತ್ತಿಪರತೆಯನ್ನು ಬೆಳೆಸಿಕೊಳ್ಳಬೇಕಿದೆ...
ವಿಮೆ ಮಾಡಿಸುವವರು ಮತ್ತು ಅದನ್ನು ‘ಕ್ಲೇಮ್’ ಮಾಡುವವರು ಬಹಳ ಕಡಿಮೆ ಜನ ಇದ್ದರು. ಆ ಸಮಯದಲ್ಲಿ ವಿಮಾ ಕಂಪನಿಯವರು ಧಾರಾಳವಾಗಿ ನಡೆದುಕೊಳ್ಳುತ್ತಿದ್ದರು, ಬಂದ ಆಸ್ಪತ್ರೆಯ ಬಿಲ್ಲನ್ನು ಒಂದಷ್ಟು ಕಡಿಮೆ ಮಾಡಿಕೊಂಡು ಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ವಿಮಾ ಕಂಪನಿಯವರು ದೊಡ್ಡದಾಗಿ ಬೆಳೆದಿದ್ದಾರೆ.
ಇಂದು ಆಸ್ಪತ್ರೆಗೆ ಬರುವ ಬಹಳಷ್ಟು ಜನರ ಕೈಲಿ ವಿಮಾ ಪಾಲಿಸಿಯಿರುತ್ತದೆ. ಆದ್ದರಿಂದ ವಿಮಾ ಕಂಪನಿಯವರು ಆಸ್ಪತ್ರೆಯವರನ್ನು ನಿರ್ದೇಶನ ಮಾಡುವಷ್ಟು ಶಕ್ತಿಯುತರಾಗಿದ್ದಾರೆ. ವಿಮಾ ಕಂಪನಿಯವರನ್ನು ಧಿಕ್ಕರಿಸಿದರೆ, ಆಸ್ಪತ್ರೆಯವರು ತಮ್ಮಲ್ಲಿಗೆ ಬರುವ ರೋಗಿಗಳ ಸಂಖ್ಯೆಗೆ ಸಂಚಕಾರವನ್ನು ತಂದುಕೊಳ್ಳಬೇಕಾಗುತ್ತದೆ!
ಹಾಗಾಗಿ ಆಸ್ಪತ್ರೆಯವರು ವಿಮಾ ಕಂಪನಿಯವರನ್ನು ಧಿಕ್ಕರಿಸುವ ಪರಿಸ್ಥಿತಿಯಲ್ಲಿಲ್ಲ. ನಿಮಗೆ 10 ಲಕ್ಷ ರುಪಾಯಿಯ ಆರೋಗ್ಯ ವಿಮೆ ಇದೆ ಎಂದುಕೊಳ್ಳೋಣ. ಸಾಮಾನ್ಯವಾಗಿ ಜನರಿಗೆ, ‘10 ಲಕ್ಷದ ವಿಮೆಯಿದ್ದರೆ, ಅಷ್ಟು ಮೊತ್ತದವರೆಗೆ ಆಸ್ಪತ್ರೆಯಲ್ಲಿ ಯಾವುದೇ ಬಿಲ್ ಬರುವುದಿಲ್ಲ’ ಎಂಬ ಭಾವನೆ ಇರುತ್ತದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು!
ನಿಮಗೆ ಆಸ್ಪತ್ರೆಯಲ್ಲಿ 1 ಲಕ್ಷ ರುಪಾಯಿಯ ಬಿಲ್ ಬಂದರೂ, ವಿಮಾ ಕಂಪನಿಯವರು ಅದನ್ನು ಪೂರ್ಣ ಕೊಡುವುದಿಲ್ಲ. ಇದು ವಿಚಿತ್ರವಾದರೂ ಸತ್ಯ. ದೊಡ್ಡ ವಿಮಾ ಕಂಪನಿಯವರು ಪ್ರತಿ ಯೊಂದು ಆಸ್ಪತ್ರೆಯ ಜತೆ ಒಡಂಬಡಿಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಆಸ್ಪತ್ರೆ ಮತ್ತು ವಿಮಾ ಕಂಪನಿ ನಡುವಿನ ಚೌಕಾಸಿ ವ್ಯಾಪಾರ ಮುಗಿದ ನಂತರ, ‘ಯಾವ ಶಸ್ತ್ರಚಿಕಿತ್ಸೆಗೆ ಎಷ್ಟು ಹಣ?’ ಎಂಬುದು ನಿರ್ಧಾರವಾಗುತ್ತದೆ.
ಇದು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಭಿನ್ನವಾಗಿರಬಹುದು. ಯಾವುದಾದರೂ ಶಸ್ತ್ರ ಚಿಕಿತ್ಸೆಯ ಸಂಬಂಧ ನಿಮಗೆ 1 ಲಕ್ಷ ರುಪಾಯಿ ಬಿಲ್ ಆಯಿತು ಅಂದುಕೊಳ್ಳೋಣ. ವಿಮಾ ಕಂಪನಿ ಯವರು ಆ ಆಸ್ಪತ್ರೆಯಲ್ಲಿ ಸದರಿ ಶಸ್ತ್ರಚಿಕಿತ್ಸೆಗೆ 75000 ರುಪಾಯಿ ನಿಗದಿಮಾಡಿದ್ದರೆ, ನಿಮಗೆ ಒಂದು ಕೋಟಿ ರುಪಾಯಿ ವಿಮೆ ಇದ್ದರೂ ಸಿಗುವುದು 75000 ರುಪಾಯಿ ಅಷ್ಟೇ.
ಮಿಕ್ಕ ಹಣವನ್ನು ನೀವೇ ಕೊಡಬೇಕು. ಅನಿರೀಕ್ಷಿತ ಕಾಂಪ್ಲಿಕೇಷನ್ ಆದರೆ ಹೆಚ್ಚುವರಿ ವಿಮಾ ಹಣ ಸಿಗುವುದಿಲ್ಲ. ಬಹುತೇಕ ಆಸ್ಪತ್ರೆಗಳು ಸರಕಾರಿ ಪ್ರಾಯೋಜಿತ ಸ್ಕೀಮ್‌ಗಳನ್ನು ಒಪ್ಪದಿರುವುದಕ್ಕೆ ಇದೇ ಕಾರಣ. ಸರಕಾರಿ ಸ್ಕೀಮ್‌ನಲ್ಲಿ ನೋಡುವುದಕ್ಕೆ ದೊಡ್ಡ ಮೊತ್ತದ ಹಣ ಇರುತ್ತದೆ. ಆದರೆ ಪ್ರತಿ ಶಸ್ತ್ರಚಿಕಿತ್ಸೆಗೂ ಅವರು ನಿಗದಿಮಾಡುವ ಹಣ ಎಷ್ಟು ಕಡಿಮೆಯೆಂದರೆ, ಆ ದರದಲ್ಲಿ ಚಿಕಿತ್ಸೆ ಮಾಡಿದರೆ ಲಾಭ ಇರಲಿ, ನಷ್ಟವೇ ಜಾಸ್ತಿ. ಆದ್ದರಿಂದ, ಬಹುತೇಕ ಖಾಸಗಿ ಆಸ್ಪತ್ರೆಗಳು ಯಾವುದೇ ಸರಕಾರಿ ಸ್ಕೀಮ್ ಗಳನ್ನು ತೆಗೆದುಕೊಳ್ಳುವುದಿಲ್ಲ; ತೆಗೆದುಕೊಂಡರೆ ಅವಕ್ಕೆ ನಷ್ಟ ಮಾತ್ರವೇ ಅಲ್ಲ, ಬರಬೇಕಿರುವ ಹಣ ಪಡೆಯಲೂ ಲಂಚವನ್ನು ಕೊಡಬೇಕು.
ನಷ್ಟದ ಬೆಲೆಗೆ ಚಿಕಿತ್ಸೆ ಕೊಟ್ಟು, ಬರಬೇಕಿರುವ ಹಣಕ್ಕೂ ಭಿಕ್ಷೆ ಬೇಡುವುದು ಬೇಡವೇ ಬೇಡ ಎಂಬುದು ಬಹುತೇಕ ಖಾಸಗಿ ಆಸ್ಪತ್ರೆಗಳ ನಿಲುವು. ವಿಮಾ ಕಂಪನಿಯವರು ಮೊದಲಿಗೆ ನಿಮ್ಮ ಕ್ಲೇಮ್ ಅನ್ನು ನಿರಾಕರಿಸಲು ಕಾರಣ ಹುಡುಕುತ್ತಾರೆ. ನೀವು ವಿಮೆ ಮಾಡಿಸುವಾಗ ಯಾವುದಾ ದರೂ ಅಘೋಷಿತ ಕಾಯಿಲೆಗಳಿದ್ದರೆ (ಉದಾಹರಣೆಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ), ಅವನ್ನು ನೀವು ಘೋಷಣೆ ಮಾಡಿಲ್ಲ ಎಂಬ ಕಾರಣವನ್ನು ಮುಂದು ಮಾಡಿ ವಿಮೆಯ ಹಣವನ್ನು ಕೊಡಲು ನಿರಾಕರಿಸಬಹುದು.
ಇಲ್ಲವೇ, ನಿಮಗೆ ಬಂದಿರುವ ಕಾಯಿಲೆಗೂ, ಯಾವುದಾದರೂ ಚಟಕ್ಕೂ ಸಂಬಂಧವಿದೆಯೇ? ಎಂದು ಹುಡುಕುವ ಪ್ರಯತ್ನವು ನಡೆಯುತ್ತದೆ. ಉದಾಹರಣೆಗೆ, ಕ್ಯಾನ್ಸರ್ ಇರುವ ರೋಗಿಗೆ ಸಿಗರೇಟು ಸೇದುವ ಚಟವಿದ್ದರೆ, ಹಣವನ್ನು ಕೊಡಲು ನಿರಾಕರಿಸಬಹುದು. ಅವರಿಗೆ ಅಂಥ ಯಾವುದಾದರೂ ಅವಕಾಶ ಸಿಗದಿದ್ದರೆ, ಮುಂದಿನ ಹಂತಕ್ಕೆ ಹಲವಾರು ದಾಖಲೆಗಳಿಗಾಗಿ ಬೇಡಿಕೆ ಇಡುತ್ತಾರೆ.
ವಿಮಾ ಕಂಪನಿಗಳಲ್ಲಿ ರೋಗಿಗಳ ದಾಖಲೆಗಳನ್ನು ಪರಿಶೀಲಿಸುವ ಎಲ್ಲರಿಗೂ ಪರಿಪೂರ್ಣ ವೈದ್ಯ ಕೀಯ ಜ್ಞಾನವಿರುತ್ತದೆ ಎಂದೇನಿಲ್ಲ; ಅವರು ಕೇಳುವ ಪ್ರಶ್ನೆಗಳಿಂದಲೇ ಇದನ್ನು ಕೆಲವೊಮ್ಮೆ ತಿಳಿದುಕೊಳ್ಳಬಹುದು. ಉದಾಹರಣೆಗೆ, ಕ್ಯಾನ್ಸರ್ ರೋಗಿಗಳಿಗೆ, ‘ಈ ಕ್ಯಾನ್ಸರ್ ಬರುವುದಕ್ಕೆ ಕಾರಣವೇನು?’ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಗೆ ಕೆಲವೊಮ್ಮೆ ಎಷ್ಟು ಕಿರಿಕಿರಿ ಉಂಟಾ ಗುತ್ತದೆಯೆಂದರೆ, ‘ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿದ್ದರೆ ನೊಬೆಲ್ ಪುರಸ್ಕಾರ ಸಿಗುತ್ತದೆ’ ಎಂದು ಉತ್ತರವನ್ನು ಬರೆದಿದ್ದೂ ಇದೆ. ಕೆಲವೊಮ್ಮೆ ‘ಬಯಾಪ್ಸಿ’ ರಿಪೋರ್ಟ್ ಇಲ್ಲ ಎಂದು ತಿರಸ್ಕರಿಸು ತ್ತಾರೆ. ಎಲ್ಲ ಸಂದರ್ಭಗಳಲ್ಲಿ ಬಯಾಪ್ಸಿ ರಿಪೋರ್ಟ್‌ನ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದೇ ದೊಡ್ಡ ತಲೆನೋವು.
ಕೆಲವೊಮ್ಮೆ ‘ದೊಡ್ಡ ಚಿಕಿತ್ಸೆಗೆ ಅಡ್ಮಿಶನ್ ಮಾಡುವ ಅವಶ್ಯಕತೆಯೇನಿತ್ತು?’ ಎಂದು ಪ್ರಶ್ನಿಸುತ್ತಾರೆ. ‘ಇಂಥ ಆಪರೇಷನ್ ಅನ್ನು ಹೊರರೋಗಿ ವಿಭಾಗದಲ್ಲಿ ಮಾಡುವ ಜ್ಞಾನ ನಮ್ಮಲ್ಲಿ ಇಲ್ಲ’ ಎಂದು ವ್ಯಂಗ್ಯವಾಗಿ ಉತ್ತರಿಸದಿದ್ದರೆ ಅವರ ಮೂರ್ಖತನ ಅವರಿಗೆ ಗೊತ್ತಾಗೋದೂ ಇಲ್ಲ!
ಒಮ್ಮೆ, ಆಪರೇಷನ್ ಮಾಡಿ ಒಂದು ಕಿಡ್ನಿಯನ್ನು ತೆಗೆದ ನಂತರ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ರಿಪೋರ್ಟ್‌ನಲ್ಲಿ ವೃಷಣದ ಚಿತ್ರ ಇರುವುದನ್ನು ನೋಡಿ, ‘ನೀವು ಆಪರೇಷನ್ ಮಾಡಿಸಿಯೇ ಇಲ್ಲ’ ಎಂದು ವಿಮೆಯನ್ನು ನಿರಾಕರಿಸಿದ್ದೂ ಇದೆ. ‘ಮೂತ್ರಪಿಂಡವು ಹಾಗೆಲ್ಲಾ ಕೆಳಗಡೆ ಜೋತಾಡುವು ದಿಲ್ಲ’ ಅಂತ ಅವರಿಗೆ ಅರ್ಥಮಾಡಿಸುವಷ್ಟರಲ್ಲಿ ಸಂಬಂಧಪಟ್ಟವರಿಗೆ ಸಾಕಾಗಿ ಹೋಗಿತ್ತು!
ವಿಮಾ ಕಂಪನಿಯವರು ಈ ರೀತಿ ಮಾಡೋದಕ್ಕೆ ಕಾರಣ ಹುಡುಕಿದರೆ, ಆಸ್ಪತ್ರೆಗಳಲ್ಲಿ ನಡೆದ ಹಗರಣದ ಉದಾಹರಣೆಯನ್ನು ಅವರು ಕೊಡುತ್ತಾರೆ- ಸಣ್ಣ ಪುಟ್ಟ ಆಸ್ಪತ್ರೆಗಳು ಅಥವಾ ರೋಗಿಯೇ, ಆಪರೇಷನ್ ಮಾಡಿಸದೆಯೇ ಕ್ಲೇಮ್ ಮಾಡಿರಬಹುದು; ಯಾವುದೋ ಶಸ್ತ್ರಚಿಕಿತ್ಸೆಗೆ ಯಾವುದೋ ಬಿಲ್ ಮಾಡಿರಬಹುದು; ಒಂದು ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಿ, ಎರಡೂ ಮೊಣಕಾಲುಗಳ ಚಿಕಿತ್ಸೆಯ ಬಿಲ್ ಕಳುಹಿಸಿರಬಹುದು; ಅನಗತ್ಯ ಚಿಕಿತ್ಸೆ ಮಾಡಿರಬಹುದು; ಕೆಲವೊಂದು ರೋಗಿಗಳು ತಮಗಿರುವ ಕಾಯಿಲೆಯನ್ನು ಮುಚ್ಚಿಟ್ಟು ವಿಮಾ ಪಾಲಿಸಿಯನ್ನು ಮಾಡಿಸಿರಬಹುದು- ವಿಮಾ ಕಂಪನಿಗಳು ಇಂಥ ಉದಾಹರಣೆಗಳನ್ನು ಇಟ್ಟುಕೊಂಡು, ಅದೇ ಸಂಶಯದ ದೃಷ್ಟಿಯಿಂದ ಎಲ್ಲಾ ವಿಮಾ ಕ್ಲೇಮ್ ಅರ್ಜಿಗಳನ್ನು ಪರಿಶೀಲಿಸುವುದರಿಂದಾಗಿ, ನಿಜಕ್ಕೂ ಕ್ಲೇಮ್ ಹಣದ ಅಗತ್ಯವಿರುವ ರೋಗಿಗಳು ಪಡಿಪಾಟಲು ಪಡಬೇಕಾಗುತ್ತದೆ.
ವಿಮಾ ಕಂಪನಿಯ ಅಂಗೀಕಾರ ಸಿಗುವವರೆಗೂ ರೋಗಿಯನ್ನು ಆಸ್ಪತ್ರೆಯಿಂದ ಕಳುಹಿಸು ವಂತಿರುವುದಿಲ್ಲ, ಅವರನ್ನು ಡಿಸ್‌ಚಾರ್ಜ್ ಮಾಡಿ 24 ತಾಸು ಕಳೆದರೂ ಆಸ್ಪತ್ರೆಯಲ್ಲಿ ಇಟ್ಟು ಕೊಳ್ಳಬೇಕಾಗುತ್ತದೆ. ಏಕೆಂದರೆ, ಒಂದೊಮ್ಮೆ ವಿಮಾ ಕಂಪನಿಯವರು ತಪಾಸಣೆಗೆ ಬಂದರೆ, ರೋಗಿಯು ಆಸ್ಪತ್ರೆಯಲ್ಲಿರುವುದನ್ನು ಅವರಿಗೆ ತೋರಿಸಬೇಕಾಗುತ್ತದೆ; ಇಲ್ಲವಾದಲ್ಲಿ, ‘ನೀವು ಆಪರೇಷನ್ ಮಾಡಿಯೇ ಇಲ್ಲ’ ಎಂದು ಅವರು ಹೇಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ಆರೋಗ್ಯ ವಿಮೆ ಇದ್ದವರ ಡಿಸ್ ಚಾರ್ಜ್ ತಡರಾತ್ರಿಯವರೆಗೂ ನಡೆಯುತ್ತಲೇ ಇರುತ್ತದೆ. ಏಕೆಂದರೆ, ವಿಮಾ ಕಂಪನಿ ಮತ್ತು ಆಸ್ಪತ್ರೆಯ ನಡುವಿನ ಪತ್ರ ವ್ಯವಹಾರ ಮುಗಿಯುವವರೆಗೂ ರೋಗಿಯು ಆಸ್ಪತ್ರೆ ಯಲ್ಲಿ ಕಾಯಲೇಬೇಕು.
ಇನ್ನು, ನಗದುರಹಿತ ವಿಮೆಯ ಸೌಲಭ್ಯವಿಲ್ಲದ ರೋಗಿಗಳ ಪಾಡನ್ನು ಕೇಳುವುದೇ ಬೇಡ. ನಗದು ರಹಿತ ವಿಮೆಯ ಅನುಕೂಲ ಇರುವ ಕಡೆ, ವಿಮಾ ಕಂಪನಿಯವರು ಕೇಳುವ ಪ್ರಶ್ನೆಗಳಿಗೆ ಪರಿಣತ ಸಿಬ್ಬಂದಿ ಹಾಗೂ ವೈದ್ಯರು ಉತ್ತರಿಸುತ್ತಾರೆ. ಆದರೆ, ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಮಯ ದಲ್ಲಿ ಸ್ವತಃ ಹಣ ಪಾವತಿಸಿ, ನಂತರ ವಿಮಾ ಹಣಕ್ಕೆ ಅರ್ಜಿ ಸಲ್ಲಿಸುವ ರೋಗಿಗಳಿಗೆ ವಿಮಾ ಕಂಪನಿಯವರು ಕೇಳುವ ನೂರಾರು ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಅವರ ಕಾಟ ಎಷ್ಟಿರುತ್ತದೆ ಎಂದರೆ, ‘ವಿಮಾ ಹಣ ಬೇಡವೇ ಬೇಡ’ ಎಂಬ ಹಂತಕ್ಕೆ ರೋಗಿಗಳು ತಲುಪಿರುತ್ತಾರೆ.
‘ಆರೋಗ್ಯ ವಿಮಾ ಪಾಲಿಸಿ ಇದ್ದರೆ, ಆಸ್ಪತ್ರೆಯವರು ಹೆಚ್ಚು ಬಿಲ್ ಮಾಡುತ್ತಾರೆ’ ಎಂಬ ಭಾವನೆ ಬಹಳಷ್ಟು ಜನರಿಗೆ ಇರಬಹುದು. ಈ ಮಾತು ಬಹುಶಃ ಒಂದು ದಶಕದ ಹಿಂದೆ ನಿಜವಿದ್ದಿದ್ದರೂ ಇರಬಹುದು; ಆಗ ವಿಮೆ ಇದ್ದವರಿಗೆ ಹೆಚ್ಚು ಬಿಲ್ ಮಾಡುವ ಒಂದು ಪರಿಪಾಠವಿತ್ತು. ಆಗ ಹೇಗಿದ್ದರೂ ರೋಗಿಯು ಬಿಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ; ಆದರೆ ಈಗ ವಿಮಾ ಕಂಪನಿಯವರು ಹೆಚ್ಚು ನಿಷ್ಠುರಿಗಳಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ವಿಮೆ ಇದ್ದ ರೋಗಿಗೆ ಕಡಿಮೆ ಬಿಲ್ ಆಗುತ್ತದೆ ಮತ್ತು ಶಸ್ತ್ರಚಿಕಿತ್ಸೆಗೆ ವಿಮೆ ಇಲ್ಲದ ರೋಗಿಗೆ ಹೆಚ್ಚು ಬಿಲ್ ಆಗುತ್ತದೆ. ಇದಕ್ಕೆ ಕಾರಣವಿದೆ. ವಿಮೆ ಇರುವ ರೋಗಿಗಳಿಗೆ, ಒಂದು ದರದ ಮಿತಿಯೊಳಗೆ ಚಿಕಿತ್ಸೆ ಮಾಡುವ ಒತ್ತಡವಿರುತ್ತದೆ. ಕೆಲವೊಮ್ಮೆ ಸಣ್ಣ ಪುಟ್ಟ ಆಸ್ಪತ್ರೆಗಳ ಬಳಿ ವಿಮಾ ಕಂಪನಿಯವರು ಅದೆಷ್ಟು ಚೌಕಾಸಿ ಮಾಡುತ್ತಾರೆಂದರೆ, ಆ ಬೆಲೆಯಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಅದು ಇರುತ್ತದೆ. ಈ ವೆಚ್ಚವನ್ನು ಸರಿದೂಗಿಸಲು ಆಸ್ಪತ್ರೆಯವರು ಕೆಲವೊಮ್ಮೆ ಕಡಿಮೆ ದರ್ಜೆಯ ತಂತ್ರಗಳಿಗೆ ಮೊರೆ ಹೋಗಬೇಕಾಗಿ ಬರುತ್ತದೆ.
ಉದಾಹರಣೆಗೆ, ರೊಬೋಟಿಕ್ ಶಸಚಿಕಿತ್ಸೆ ಮಾಡುವ ಬದಲು ಸಾಮಾನ್ಯ ಶಸ್ತ್ರಚಿಕಿತ್ಸೆ ಮಾಡು ವುದು, ಕಡಿಮೆ ದರದ ಸಲಕರಣೆಗಳ ಉಪಯೋಗ ಇತ್ಯಾದಿ. ಕೆಲವೊಮ್ಮೆ, ಸೀನಿಯರ್ ವೈದ್ಯರ ಬದಲು ಅನ್ಯವೈದ್ಯರಿಂದ ಚಿಕಿತ್ಸೆ ಮಾಡಿಸುವ ಮೂಲಕ ಅವರು ವೆಚ್ಚಗಳಿಗೆ ಕಡಿವಾಣ ಹಾಕಿಕೊಳ್ಳಬಹುದು.
ಆಸ್ಪತ್ರೆಯವರ ಪಾಲಿಗೆ, ಆರೋಗ್ಯ ವಿಮೆಯಿರುವ ರೋಗಿಗಳ ಚಿಕಿತ್ಸೆಯಲ್ಲಿ ‘ಕಾಗದದ ಕೆಲಸ’ ಜಾಸ್ತಿ ಮತ್ತು ಲಾಭಾಂಶ ಕಡಿಮೆ; ಆದರೆ, ವಿಮೆಯಿಲ್ಲದ ರೋಗಿಗಳ ವಿಷಯದಲ್ಲಿ ಕಾಗದದ ಕೆಲಸ ಕಡಿಮೆ ಮತ್ತು ಲಾಭಾಂಶ ಜಾಸ್ತಿ. ಕೆಲವು ವಿಮಾ ಕಂಪನಿಯವರು, ವಿಮಾ ಕ್ಲೇಮ್ ಸಂಬಂಧವಾಗಿ ಅಂಗೀಕರಿಸಿದ ಮೇಲೂ ಕೊಡುವ ಹಣಕ್ಕೆ ಕತ್ತರಿ ಹಾಕಲು ಯತ್ನಿಸುತ್ತಾರೆ, ಯಾವುದೇ ಉಪ ಭೋಗ್ಯ (ಕನ್ʼಸ್ಯೂಮಬಲ್) ವಸ್ತುಗಳ ಹಣವನ್ನು ಅವರು ಕೊಡುವುದಿಲ್ಲ.
ಉದಾಹರಣೆಗೆ, ಶಸ್ತ್ರಚಿಕಿತ್ಸೆಗೆ ಹಣ ಕೊಡುವ ಕಂಪನಿಗಳು, ಅದಕ್ಕೆ ಉಪಯೋಗಿಸಿದ ಗ್ಲೌಸ್‌ಗಳಿಗೆ ಹಣ ಕೊಡುವುದಿಲ್ಲ. ಗ್ಲೌಸ್ʼಗಳಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಮಾಡುವುದಾದರೂ ಹೇಗೆ? ಔಷಧಿಗೆ ಹಣ ಕೊಡುವ ಕಂಪನಿಗಳು, ಔಷಧಿಯನ್ನು ಕೊಡಲು ಬೇಕಾದ ನಳಿಕೆಗಳಿಗೆ ಹಣ ಕೊಡುವುದಿಲ್ಲ. ರೋಗಿಗೆ ಪೌಷ್ಟಿಕ ಆಹಾರದ ಅಗತ್ಯವಿದ್ದರೂ ಆ ಸಂಬಂಧವಾಗಿ ಹಣ ಕೊಡುವುದಿಲ್ಲ. ಇವೆಲ್ಲವೂ ವಿಚಿತ್ರ ಧೋರಣೆಗಳೇ, ಆದರೆ ಇಂಥವನ್ನು ಶ್ರೀಸಾಮಾನ್ಯರು ಪ್ರಶ್ನಿಸುವ ಪರಿಸ್ಥಿತಿಯಲ್ಲಿಲ್ಲ. ಕೆಲವೊಮ್ಮೆ, ‘ಇದು ಆಧುನಿಕ ಚಿಕಿತ್ಸೆ’ ಎಂಬ ನೆಪವೊಡ್ಡಿ ವಿಮಾ ಕ್ಲೇಮ್ ಅನ್ನು ನಿರಾಕರಿಸು ವುದೂ ಉಂಟು!
ಕ್ಲೇಮ್ ಅರ್ಜಿಗಳನ್ನು ತಿರಸ್ಕರಿಸಲೆಂದೇ ವಿಮಾ ಕಂಪನಿಗಳು ವಿಶೇಷ ಅಧಿಕಾರಿಗಳನ್ನು ಇಟ್ಟು ಕೊಂಡಿರುತ್ತವೆ; ವಿಮಾ ಹಣದ ನಿರಾಕರಣೆಗೆ ಏನಾದರೂ ಕಾರಣ ಹುಡುಕುವುದೇ ಇವರ ಕೆಲಸ! ಈ ಅಽಕಾರಿಗಳ ಭತ್ಯೆ, ಮುಂಬಡ್ತಿ ಇತ್ಯಾದಿಗಳು ನಿರ್ಧಾರವಾಗುವುದೇ ಅವರು ಎಷ್ಟು ಕ್ಲೇಮ್‌ಗಳನ್ನು ತಿರಸ್ಕರಿಸುತ್ತಾರೆ ಎಂಬುದರ ಮೇಲೆ!
ಒಂದು ಮಾತು ಹೇಳಲೇಬೇಕು- ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಮೈಯೆಲ್ಲಾ ಕಣ್ಣಾಗಿದ್ದರೂ ಸಾಲದು. ಐಎಎಸ್ ಪರೀಕ್ಷೆಗೆ ಓದುವ ಹಾಗೆ, ವಿಮಾ ಪಾಲಿಸಿಯ ವಿವರಗಳನ್ನು ಓದಿಕೊಂಡಿದ್ದರೂ, ಒಂದು ಬಾರಿ ಕ್ಲೇಮ್ ಆಗುವವರೆಗೂ ನಿಜಸ್ಥಿತಿ ತಿಳಿಯುವುದು ಕಷ್ಟ. ಯಾವ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಶಿಫಾರಸು ಮಾಡುವುದು ವೈದ್ಯರಾದ ನಮಗೂ ಕಷ್ಟ.
ಬಹುಶಃ, ಈಗಾಗಲೇ ಕ್ಲೇಮ್ ಮಾಡಿದ ಸುತ್ತಮುತ್ತಲಿನ ಜನರನ್ನು ಕೇಳಿ, ಅವರಿಗೆ ಕ್ಲೇಮ್ ಹಣವು ಎಷ್ಟು ಸರಾಗವಾಗಿ ದಕ್ಕಿತು ಎಂಬುದನ್ನು ತಿಳಿದುಕೊಳ್ಳುವುದರಿಂದ ಸ್ವಲ್ಪ ಸಹಾಯ ವಾಗಬಹುದು. ಇಂಥ ಸಮಸ್ಯೆಗಳನ್ನು ನೋಡಿದಾಗ, ನಾರಾಯಣ ಹೃದಯಾಲಯದಂಥ ಆಸ್ಪತ್ರೆಗಳು, ವಿಮೆಗಳನ್ನು ತಾವೇ ವಿತರಿಸುವುದನ್ನು ಪ್ರಾರಂಭ ಮಾಡಿದ್ದನ್ನು ನೋಡಿದಾಗ, ಇವರೇಕೆ ಇಂಥ ಸಾಹಸಕ್ಕೆ ಕೈಹಾಕಿದರು ಎಂಬುದು ಅರ್ಥವಾಗುತ್ತದೆ.
ಬಹುಶಃ, ಇಂಥ ವಿಮಾ ಕಂಪನಿಗಳ ಜತೆಗೆ ಹೊಡೆದಾಡುವ ಬದಲು, ತಾವೇ ಅಂಥದೊಂದು ಕಂಪನಿಯನ್ನು ಪ್ರಾರಂಭಿಸಿದರೆ ಒಳಿತು ಎಂಬ ಭಾವನೆ ಅವರಿಗೆ ಬಂದಿರಬೇಕು! ಏಕೆಂದರೆ, ವಿಮಾ ಪಾಲಿಸಿ ಕೊಡುವವರು ಮತ್ತು ಚಿಕಿತ್ಸೆ ನೀಡುವವರು ಒಬ್ಬರೇ ಆಗಿದ್ದರೆ ಹೆಚ್ಚಿನ ಕಿರಿಕಿರಿ ಇರುವುದಿಲ್ಲ; ಇದರಿಂದ ರೋಗಿಗಳಿಗೆ ಉಪಯೋಗ ಆಗಬಹುದು.
ಆದರೆ, ಇದರಲ್ಲಿನ ಒಂದು ಪುಟ್ಟ ನ್ಯೂನತೆ ಎಂದರೆ, ರೋಗಿಗಳು ಇವರ ಆಸ್ಪತ್ರೆಗೆ ಮಾತ್ರವೇ ಹೋಗಬೇಕಾಗುತ್ತದೆ. ಇಂಥ ಆಸ್ಪತ್ರೆಗಳ ಸುತ್ತಮುತ್ತ ಇರುವವರಿಗೆ ಈ ವ್ಯವಸ್ಥೆಯಿಂದ ಹೆಚ್ಚು ಪ್ರಯೋಜನವಿರುತ್ತದೆ, ದೂರವಿರುವವರಿಗೆ ಕೊಂಚ ಅನಾನುಕೂಲ ಆಗಬಹುದು. ಆರೋಗ್ಯ ವಿಮೆ ಬಿಟ್ಟು ಬೇರಾವುದಾದರೂ ಉಪಾಯವಿದೆಯೇ? ಎಂದು ಕೇಳಿದರೆ ಒಂದು ಉತ್ತರ ಕೊಡಬಹುದು.
ಅದೇನೆಂದರೆ, ಪ್ರತಿ ತಿಂಗಳೂ ವಿಮೆಗೆ ಕೊಡುವ ಹಣವನ್ನು, ಹಣದ ಸವಕಳಿ ಆಗದ ಮತ್ತು ದ್ರವ್ಯತೆ (ಲಿಕ್ವಿಡಿಟಿ) ಹೆಚ್ಚಿರುವ ಕಡೆ ಹೂಡಿಕೆ ಮಾಡುವುದು ಹಾಗೂ ಅದನ್ನು ಯಾವುದೇ ಸಂದರ್ಭದಲ್ಲಿ ಉಪಯೋಗಿಸದೆ ಇರುವುದು. ಹೀಗೆ ಮಾಡಿದಾಗ, ನಿಮಗೆ ಚಿಕಿತ್ಸೆಯ ಅಗತ್ಯವಿದ್ದಾಗ ಯಾರ ಮುಂದೆಯೂ ಕೈಚಾಚದೆ ಅದನ್ನು ನೆರವೇರಿಸಿಕೊಳ್ಳಬಹುದು; ಆದರೆ ಇಂಥ ಸಂದರ್ಭದಲ್ಲಿ ಆಸ್ಪತ್ರೆಯವರು, ವಿಮೆ ಇರುವ ರೋಗಿಗೆ ವಿಧಿಸುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಹುದು.
ಆದ್ದರಿಂದ, ಆಸ್ಪತ್ರೆಯ ಜತೆಗೆ ಹೆಚ್ಚು ಚೌಕಾಸಿ ಮಾಡಲು ಶಕ್ಯವಿರದ ಸಣ್ಣ ಕಂಪನಿಯ, ಸಾಧಾರಣ ಮೊತ್ತದ ವಿಮೆಯನ್ನು ಇಟ್ಟುಕೊಂಡು, ಜತೆಯಲ್ಲಿ ಆರೋಗ್ಯಕ್ಕೆಂದೇ ಮೀಸಲಿಟ್ಟ ಹಣದ ಹೂಡಿಕೆ ಮಾಡಿದರೆ, ಎರಡರ ಪ್ರಯೋಜನವನ್ನೂ ಪಡೆಯಬಹುದು. ವಿಮೆ ಇರುವು ದರಿಂದ ಕಡಿಮೆ ಬೆಲೆಗೆ ಚಿಕಿತ್ಸೆ ಮತ್ತು ವಿಮೆ ಸಿಕ್ಕದಿದ್ದರೆ ಸ್ವಂತ ಹಣದಿಂದ ಚಿಕಿತ್ಸೆ. ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವಾಗ ದೊಡ್ಡ ‘ತಾರೆ’ಯಂಥ ಕಂಪನಿಗಳನ್ನು ಆಯ್ಕೆ ಮಾಡದಿರುವುದು ಒಳ್ಳೆಯದು; ಏಕೆಂದರೆ, ಈ ಕಂಪನಿಗಳಿಂದ ಆಗುವ ಕ್ಲೇಮುಗಳ ನಿರಾಕರಣೆ ಗಳನ್ನು ನೋಡಿದರೆ, ವಿಮಾ ಪಾಲಿಸಿಯ ಹಣವನ್ನು ಅವರು ‘ದೇಣಿಗೆ’ ಎಂದು ಭಾವಿಸಿರುವಂತೆ ತೋರುತ್ತದೆ.
ಕೊನೆಯ ಮಾತು: ತಿರುಪತಿ ಹುಂಡಿಗೆ ಹಾಕಿದ ಹಣ ಮತ್ತು ಸ್ಮಶಾನ ಸೇರಿದ ಹೆಣ ಎರಡೂ ವಾಪಸ್ ಬರುವುದಿಲ್ಲ ಎಂಬ ಮಾತಿದೆ. ಸದ್ಯದ ಪರಿಸ್ಥಿತಿ ನೋಡಿದರೆ, ಕೆಲವೊಂದು ಕಂಪನಿಗಳ ವಿಮಾ ಪಾಲಿಸಿಗೆ ಕಟ್ಟಿದ ಹಣವೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಅತ್ಯವಶ್ಯಕ ಚಿಕಿತ್ಸೆಗಳಿಗೂ ವಿಮಾ ಕ್ಲೇಮ್‌ಗಳನ್ನು ಅವೈಜ್ಞಾನಿಕವಾಗಿ ತಿರಸ್ಕರಿಸುವ ಕಂಪನಿಗಳಿಗೆ ಸರಕಾರದಿಂದ ಕಠಿಣ ನಿರ್ದೇಶನ ಹೊಮ್ಮಬೇಕಿದೆ. ಹೀಗೆ ಕ್ಲೇಮುಗಳು ತಿರಸ್ಕೃತವಾದರೆ ಒಂಬುಡ್ಸ್‌ಮನ್ ವ್ಯವಸ್ಥೆಗೆ ದೂರು ಸಲ್ಲಿಸುವುದನ್ನು ಮರೆಯಬೇಡಿ.
(ಲೇಖಕರು ಇಂಟರ್ವೆನ್ಷನಲ್ ರೇಡಿಯೊಲೊಜಿಸ್ಟ್)