Dr Devi Prasad Shetty Column: ಆರ್ಥಿಕ ಉತ್ಪಾದನೆಯನ್ನು ಹೆಚ್ಚಿಸುವ ಆರೋಗ್ಯ ಯೋಜನೆಗಳು
ಆರೋಗ್ಯವನ್ನು ಕೇವಲ ಒಂದು ವೆಚ್ಚವೆಂದು ಪರಿಗಣಿಸದೆ, ಅದೊಂದು ಹೂಡಿಕೆ ಎಂದು ಭಾವಿಸುವ ಮೂಲಕ, ಆರೋಗ್ಯ ಕ್ಷೇತ್ರದಲ್ಲಿನ ಉತ್ತಮ ಆಡಳಿತವು ಒಂದು ಸುಸ್ಥಿರ ಆರ್ಥಿಕ ನೀತಿಯೂ ಹೌದು ಎಂಬುದನ್ನು ಈ ಉಪಕ್ರಮಗಳು ಸಾಬೀತುಪಡಿಸಿವೆ. ಇವು ರೋಗದ ಹೊರೆ ಯನ್ನು ಕಡಿಮೆ ಮಾಡು ತ್ತವೆ, ಕುಟುಂಬಗಳ ಉಳಿತಾಯವನ್ನು ರಕ್ಷಿಸುತ್ತವೆ ಮತ್ತು ಸುಸ್ಥಿರ ಬೆಳವಣಿಗೆಯ ನಿಜವಾದ ಚಾಲಕಶಕ್ತಿ ಯಾದ ಮಾನವ ಬಂಡವಾಳಕ್ಕೆ ಶಕ್ತಿ ನೀಡುತ್ತವೆ.

-

ಆರೋಗ್ಯ ಭಾಗ್ಯ
ಡಾ.ದೇವಿ ಪ್ರಸಾದ ಶೆಟ್ಟಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಆರೋಗ್ಯ ನೀತಿಯು, ಕೇವಲ ಕಲ್ಯಾಣ ಎಂಬ ಸಂಕುಚಿತ ದೃಷ್ಟಿಕೋನವನ್ನು ಮೀರಿ ಬಹಳಷ್ಟು ಮುಂದುವರಿದಿದೆ. ಇದು 2047ರ ವೇಳೆಗೆ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಕಾರ್ಯತಂತ್ರದ ಕೇಂದ್ರಭಾಗದಲ್ಲಿ ನಿಂತಿದೆ.
ಆರೋಗ್ಯವನ್ನು ಕೇವಲ ಒಂದು ವೆಚ್ಚವೆಂದು ಪರಿಗಣಿಸದೆ, ಅದೊಂದು ಹೂಡಿಕೆ ಎಂದು ಭಾವಿಸುವ ಮೂಲಕ, ಆರೋಗ್ಯ ಕ್ಷೇತ್ರದಲ್ಲಿನ ಉತ್ತಮ ಆಡಳಿತವು ಒಂದು ಸುಸ್ಥಿರ ಆರ್ಥಿಕ ನೀತಿಯೂ ಹೌದು ಎಂಬುದನ್ನು ಈ ಉಪಕ್ರಮಗಳು ಸಾಬೀತುಪಡಿಸಿವೆ. ಇವು ರೋಗದ ಹೊರೆ ಯನ್ನು ಕಡಿಮೆ ಮಾಡುತ್ತವೆ, ಕುಟುಂಬಗಳ ಉಳಿತಾಯವನ್ನು ರಕ್ಷಿಸುತ್ತವೆ ಮತ್ತು ಸುಸ್ಥಿರ ಬೆಳವಣಿಗೆಯ ನಿಜವಾದ ಚಾಲಕಶಕ್ತಿಯಾದ ಮಾನವ ಬಂಡವಾಳಕ್ಕೆ ಶಕ್ತಿ ನೀಡುತ್ತವೆ.
ತಡೆಗಟ್ಟುವ ಆಡಳಿತದ ಮೂಲಗಳು: ಪ್ರಧಾನಮಂತ್ರಿ ಮೋದಿಯವರಿಗೆ ಆರೋಗ್ಯ ವಲಯದ ಬಗೆಗಿನ ಆಸಕ್ತಿಯು, ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೇ ಇದೆ. ಆಗ ಅವರು ಸಕಾಲಿಕ ವೈದ್ಯಕೀಯ ನೆರವು ಮತ್ತು ಸುಲಭ ವಾಗಿ ಲಭ್ಯವಾಗುವ ಸೇವೆಗಳಿಗೆ ಒತ್ತು ನೀಡಿದರು. ‘108’ ತುರ್ತು ಆಂಬ್ಯುಲೆ ಸೇವೆಯು ಗ್ರಾಮೀಣ ಮತ್ತು ನಗರ ಸಮುದಾಯಗಳಿಗೆ ತ್ವರಿತ ವೈದ್ಯಕೀಯ ನೆರವನ್ನು ತಲುಪಿಸಿ, ಮರಣ ಪ್ರಮಾಣವನ್ನು ಮತ್ತು ಅನಾರೋಗ್ಯದಿಂದಾಗುವ ಗೈರುಹಾಜರಿಯನ್ನು ಕಡಿಮೆ ಮಾಡಿತು.
ಅದೇ ಸಮಯದಲ್ಲಿ, ಬುಡಕಟ್ಟು ಮತ್ತು ಗ್ರಾಮೀಣ ಮಕ್ಕಳಿಗಾಗಿ ಜಾರಿಗೆ ತಂದ ‘ಪೋಷಣ್’ ( POSHAN) ಪೌಷ್ಟಿಕಾಂಶ ಕಾರ್ಯಕ್ರಮಗಳು, ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನಿವಾರಿಸಿ, ಉತ್ತಮ ಕಲಿಕಾ ಫಲಿತಾಂಶಗಳಿಗೆ ಅಡಿಪಾಯ ಹಾಕಿದವು. ಈ ಆರಂಭಿಕ ಪ್ರಯೋಗಗಳು ಮುಂದೆ ರಾಷ್ಟ್ರೀಯ ಸುಧಾರಣೆಗಳಿಗೆ ರೂಪು ನೀಡಿದ ಒಂದು ಪ್ರಮುಖ ತತ್ವವನ್ನು ಬಹಿರಂಗಪಡಿಸಿದವು: ಅದೆಂದರೆ, ರೋಗ ಬರುವುದಕ್ಕೂ ಮುನ್ನ ಅದನ್ನು ತಡೆಗಟ್ಟಲು ಮಾಡುವ ಹೂಡಿಕೆಯು, ದೇಶದ ಉತ್ಪಾದಕತೆ ಮತ್ತು ಸಮೃದ್ಧಿಯಲ್ಲಿ ನಿಜವಾದ ಲಾಭಾಂಶವನ್ನು ನೀಡುತ್ತದೆ.
ಇದನ್ನೂ ಓದಿ: Health Tips: ಆಹಾರಕ್ಕೂ ಅಂಟಿವೆಯಲ್ಲ ಮಿಥ್ಯೆಗಳು!
ರಾಷ್ಟ್ರಮಟ್ಟದಲ್ಲಿ ಯೋಜನೆಗಳ ವಿಸ್ತರಣೆ: ರಾಷ್ಟ್ರೀಯ ನಾಯಕತ್ವವನ್ನು ವಹಿಸಿಕೊಂಡ ನಂತರ ಮೋದಿಯವರು ತಮ್ಮ ಈ ಹಿಂದಿನ ಯಶಸ್ವಿ ಅನುಭವಗಳ ಆಧಾರದ ಮೇಲೆ ರಾಷ್ಟ್ರ ವ್ಯಾಪಿಯಾಗಿ ಬಹು ದೊಡ್ಡ ಯೋಜನೆಗಳನ್ನು ಜಾರಿಗೆ ತಂದರು. 2018ರಲ್ಲಿ ಪ್ರಾರಂಭವಾದ ‘ಆಯುಷ್ಮಾನ್ ಭಾರತ್’ ಯೋಜನೆಯು, ಆರ್ಥಿಕವಾಗಿ ದುರ್ಬಲರಾಗಿರುವ 55 ಕೋಟಿಗೂ ಹೆಚ್ಚು ನಾಗರಿಕರನ್ನು ಒಳಗೊಂಡು, ವಿಶ್ವದ ಅತಿದೊಡ್ಡ ಸಾರ್ವಜನಿಕ-ಬೆಂಬಲಿತ ಆರೋಗ್ಯ ವಿಮಾ ಯೋಜನೆಯಾಗಿ ಹೊರಹೊಮ್ಮಿದೆ.
ಭಾರಿ ವೈದ್ಯಕೀಯ ವೆಚ್ಚಗಳ ಹೊರೆಯಿಂದ ಕುಟುಂಬಗಳನ್ನು ರಕ್ಷಿಸುವ ಮೂಲಕ, ಲಕ್ಷಾಂತರ ಜನರು ಅನಾರೋಗ್ಯದ ನಂತರ ಮತ್ತೆ ಬಡತನಕ್ಕೆ ಜಾರದಂತೆ ಇದು ತಡೆದಿದೆ. ಈ ಯೋಜನೆಯು ರೋಗಿಗಳನ್ನು ನೋಂದಾಯಿತ ಆಸ್ಪತ್ರೆಗಳತ್ತ ಕಳುಹಿಸುವುದಲ್ಲದೆ, ದ್ವಿತೀಯ ಮತ್ತು ತೃತೀಯ ಹಂತದ ಆರೈಕೆಯಲ್ಲಿ ಗುಣಮಟ್ಟವನ್ನು ಸುಧಾರಿಸಲು ಪ್ರೋತ್ಸಾಹಿಸುತ್ತದೆ ಮತ್ತು ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತದೆ.
2018ರಲ್ಲಿಯೇ ಉದ್ಘಾಟನೆಗೊಂಡ ‘ಪೋಷಣ್ ಅಭಿಯಾನ’ವು ಗರ್ಭಿಣಿಯರು, ಬಾಣಂತಿಯರು ಮತ್ತು ಚಿಕ್ಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸಲು ಶ್ರಮಿಸುತ್ತಿದೆ. ಪೂರಕ ಪೌಷ್ಟಿಕಾಂಶ, ಮಕ್ಕಳ ಬೆಳವಣಿಗೆಯ ಮೇಲೆ ನಿಗಾ ಮತ್ತು ನಡವಳಿಕೆ ಬದಲಾವಣೆಯ ಅಭಿಯಾನಗಳು ಒಟ್ಟಾಗಿ ಸೇರಿ, ಆರೋಗ್ಯವಂತ ತಾಯಂದಿರು ಮತ್ತು ಸದೃಢ ಮಕ್ಕಳನ್ನು ರೂಪಿಸಲು ನೆರವಾಗುತ್ತವೆ.
ಬಾಲ್ಯದಲ್ಲಿ ಸಿಗುವ ಉತ್ತಮ ಪೋಷಣೆಯು ನೇರವಾಗಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ಭವಿಷ್ಯ ದ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ದಶಕಗಳ ಕಾಲದ ಹೆಚ್ಚಿನ ಉತ್ಪಾದ ಕತೆಯ ಮೂಲಕ ಅಳೆಯಬಹುದಾದ ಹೂಡಿಕೆಯ ಮೇಲಿನ ಪ್ರತಿಫಲವಾಗಿದೆ.
‘ಜನೌಷಧಿ ಕೇಂದ್ರ’ಗಳ ಮೂಲಕ ಔಷಧಗಳ ಬೆಲೆಯನ್ನು ಕೈಗೆಟಕುವಂತೆ ಮಾಡುವಲ್ಲಿ ದೊಡ್ಡ ಪ್ರೋತ್ಸಾಹ ದೊರೆತಿದೆ. 16900ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಗುಣಮಟ್ಟದ ಜೆನರಿಕ್ ಔಷಧಿ ಗಳನ್ನು ಭಾರಿ ರಿಯಾಯಿತಿ ದರದಲ್ಲಿ ಪೂರೈಸುತ್ತಿರುವುದರಿಂದ, ದುಬಾರಿ ಬ್ರ್ಯಾಂಡೆಡ್ ಔಷಧಿಗಳ ಮೇಲೆ ಖರ್ಚು ಮಾಡುತ್ತಿದ್ದ ಹಣವನ್ನು ಕುಟುಂಬಗಳು ಈಗ ಆಹಾರ, ಶಿಕ್ಷಣ ಅಥವಾ ಸಣ್ಣ ವ್ಯಾಪಾರದ ಹೂಡಿಕೆಯತ್ತ ತಿರುಗಿಸಲು ಸಾಧ್ಯವಾಗಿದೆ.
‘ಸ್ವಚ್ಛ ಭಾರತ ಅಭಿಯಾನ’ವನ್ನು ಕೇವಲ ನೈರ್ಮಲ್ಯ ಕಾರ್ಯಕ್ರಮವೆಂದು ಬಿಂಬಿಸಲಾಗು ತ್ತಿದ್ದರೂ, ಅದು ಅಷ್ಟೇ ಮಹತ್ವದ ಸಾರ್ವಜನಿಕ ಆರೋಗ್ಯ ಕ್ರಾಂತಿಯೂ ಹೌದು. ಹಳ್ಳಿ ಮತ್ತು ಪಟ್ಟಣಗಳಲ್ಲಿ ನಿರ್ಮಿಸಲಾದ ಕೋಟ್ಯಂತರ ಶೌಚಾಲಯಗಳು ಬಯಲು ಶೌಚವನ್ನು ಗಣನೀಯ ವಾಗಿ ಕಡಿಮೆ ಮಾಡಿವೆ.
ಇದರಿಂದಾಗಿ, ನೀರಿನಿಂದ ಹರಡುವ ರೋಗಗಳು ಕಡಿಮೆಯಾಗಿ, ಪ್ರತಿ ವರ್ಷ ಅಂದಾಜು 60000-70000 ಶಿಶುಗಳ ಪ್ರಾಣ ಉಳಿಯುತ್ತಿದೆ. ‘ಬೇಟಿ ಬಚಾವೋ ಬೇಟಿ ಪಢಾವೋ’ನಂಥ ಮಹಿಳಾ ಕೇಂದ್ರಿತ ಉಪಕ್ರಮಗಳು ಲಿಂಗ ಅನುಪಾತವನ್ನು ಸುಧಾರಿಸಿ ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸಿವೆ. ಅದೇ ರೀತಿ, ಡಿಜಿಟಲ್ ಆರೋಗ್ಯ ಉಪಕರಣಗಳು ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಮಂದಿರಗಳು ಅತಿ ಚಿಕ್ಕ ಸಮುದಾಯಗಳಿಗೂ ಆರೋಗ್ಯ ತಪಾಸಣೆ, ಟೆಲಿಕನ್ಸಲ್ಟೇಷನ್ ಮತ್ತು ಇಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳನ್ನು ತಲುಪಿಸುತ್ತಿವೆ.
ಒಟ್ಟಾಗಿ, ಈ ಎಲ್ಲಾ ಕ್ರಮಗಳು ನಾಗರಿಕರು ಆರೋಗ್ಯವಾಗಿರುವ, ಕುಟುಂಬಗಳು ಆರ್ಥಿಕವಾಗಿ ಸ್ವತಂತ್ರವಾಗಿರುವ ಮತ್ತು ಕಾರ್ಮಿಕ ಶಕ್ತಿ ಹೆಚ್ಚು ವಿಶ್ವಾಸಾರ್ಹ ಹಾಗೂ ನುರಿತವಾಗಿರುವ ವಾತಾ ವರಣವನ್ನು ಸೃಷ್ಟಿಸುತ್ತಿವೆ.
ತಡೆಗಟ್ಟುವಿಕೆಯ ಅರ್ಥಶಾಸ್ತ್ರ: ಯುನಿಸೆಫ್ ನ (UNICEF) ಅಂದಾಜಿನ ಪ್ರಕಾರ, ಸ್ವಚ್ಛ ಭಾರತ ಆಂದೋಲನದಿಂದಾಗಿ ಪ್ರತಿಯೊಂದು ಗ್ರಾಮೀಣ ಕುಟುಂಬವು ವಾರ್ಷಿಕವಾಗಿ ಸುಮಾರು 50000 ರು. ಹಣವನ್ನು ಉಳಿತಾಯ ಮಾಡುತ್ತಿದೆ. ಈ ಸುಧಾರಣೆಗಳ ಹಿಂದಿನ ಆರ್ಥಿಕ ತರ್ಕವು ಬಹಳ ಗಮನಾರ್ಹವಾಗಿದೆ. ಭಾರತವು ಐತಿಹಾಸಿಕವಾಗಿ, ಆರೋಗ್ಯಕ್ಕಾಗಿ ಜನರು ತಮ್ಮ ಕೈಯಿಂದಲೇ ಮಾಡುವ ಅಧಿಕ ವೆಚ್ಚದ ( out-of-pocket expenditure ) ಸಮಸ್ಯೆಯಿಂದ ಬಳಲುತ್ತಿತ್ತು. 2013-14ರಲ್ಲಿ, ಒಟ್ಟು ಆರೋಗ್ಯ ವೆಚ್ಚದಲ್ಲಿ ಇದರ ಪಾಲು ಶೇ.64ರಷ್ಟಿತ್ತು.
2021-22ರ ಹೊತ್ತಿಗೆ, ಈ ಪ್ರಮಾಣವು ಶೇ.39ಕ್ಕೆ ಇಳಿದಿದೆ. ಈ ಮಹತ್ವದ ಬದಲಾವಣೆಗೆ ಮುಖ್ಯವಾಗಿ ವಿಸ್ತೃತ ವಿಮಾ ಸೌಲಭ್ಯ, ರಿಯಾಯಿತಿ ದರದ ಔಷಧಿಗಳು ಮತ್ತು ನೈರ್ಮಲ್ಯ ಸುಧಾರಣೆಗಳೇ ಕಾರಣವೆಂದು ಹೇಳಲಾಗಿದೆ. ಅನಾರೋಗ್ಯಕ್ಕಾಗಿ ವ್ಯಯಿಸುವ ವೈಯಕ್ತಿಕ ಖರ್ಚು ಕಡಿಮೆ ಯಾದಂತೆ, ಅದು ಕುಟುಂಬಗಳ ಬಳಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ, ಉಳಿತಾಯವನ್ನು ವೃದ್ಧಿಸುತ್ತದೆ ಮತ್ತು ಔಪಚಾರಿಕ ಹಣಕಾಸು ವ್ಯವಸ್ಥೆಯಲ್ಲಿ ಅವರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ.
ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯಗಳು ಮತ್ತು ತಾಯಿ- ಮಗುವಿನ ಪೋಷಣೆಯಂಥ ಪೂರ್ವಭಾವಿ ಕ್ರಮಗಳು ಅರ್ಥಶಾಸ್ತ್ರಜ್ಞರು ಬಾಹ್ಯ ಪರಿಣಾಮಗಳು ಎಂದು ಕರೆಯುವ ಪ್ರಯೋಜನ ಗಳನ್ನು ನೀಡುತ್ತವೆ. ಈ ಪ್ರಯೋಜನಗಳು ನೇರ ಫಲಾನುಭವಿಗಳನ್ನು ಮೀರಿ ವಿಸ್ತರಿಸುತ್ತವೆ.
ರೋಗಿಗಳ ಸಂಖ್ಯೆ ಕಡಿಮೆಯಾದಾಗ ಕಾರ್ಖಾನೆಗಳು, ಕೃಷಿ ಕ್ಷೇತ್ರಗಳು ಮತ್ತು ಕಚೇರಿಗಳಲ್ಲಿ ಕೆಲಸಕ್ಕೆ ಗೈರು ಹಾಜರಾಗುವುದು ಕಡಿಮೆಯಾಗುತ್ತದೆ. ದೈಹಿಕ ಬೆಳವಣಿಗೆಯ ಕೊರತೆಯಿಂದ ಪಾರಾದ ಮಕ್ಕಳು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಹೆಚ್ಚು ಆದಾಯ ಗಳಿಸುವ ವಯಸ್ಕ ರಾಗುತ್ತಾರೆ. ನಗರ ಪ್ರದೇಶಗಳಲ್ಲಿನ ಉದ್ಯೋಗದಾತರಿಗೂ ಇದು ಲಾಭದಾಯಕ, ಏಕೆಂದರೆ ಆರೋಗ್ಯವಂತ ವಲಸೆ ಕಾರ್ಮಿಕರು ಸಿಬ್ಬಂದಿ ವರ್ಗಾವಣೆಯನ್ನು ಕಡಿಮೆ ಮಾಡುತ್ತಾರೆ ಮತ್ತು ತರಬೇತಿ ವೆಚ್ಚಗಳನ್ನು ತಗ್ಗಿಸುತ್ತಾರೆ.
ಆಯುಷ್ಮಾನ್ ಭಾರತ್ ಯೋಜನೆಯ ವಿಮಾ ರಕ್ಷಣೆಯು, ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿನ (tier-2 and tier-3) ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡಿದೆ. ಹಿಂದೆ ರೋಗಿಗಳಲ್ಲಿ ಕೊಳ್ಳುವ ಶಕ್ತಿ ಇಲ್ಲದ ಕಾರಣಕ್ಕೆ ನಿರ್ಲಕ್ಷಿಸಲ್ಪಟ್ಟಿದ್ದ ಜಿಗಳಲ್ಲಿ, ಈಗ ಆಸ್ಪತ್ರೆಗಳು, ಪ್ರಯೋಗಾಲಯಗಳು ಮತ್ತು ಸ್ಟಾರ್ಟ್-ಅಪ್‌ಗಳು ಹೊಸ ವ್ಯವಹಾರ ಅವಕಾಶಗಳನ್ನು ಕಾಣುತ್ತಿವೆ. ಈ ರೀತಿಯಾಗಿ, ಸರಕಾರದ ಆರ್ಥಿಕ ಬೆಂಬಲವು ಆರೋಗ್ಯ ಕ್ಷೇತ್ರದ ಉದ್ಯಮಶೀಲತೆಯ ಹೊಸ ಅಲೆಗೆ ‘ಬೀಜ ಬಂಡವಾಳ’ವಾಗಿ ( seed capital) ಕಾರ್ಯ ನಿರ್ವಹಿಸು ತ್ತಿದೆ. ಇದು ಉದ್ಯೋಗಗಳನ್ನು ಸೃಷ್ಟಿಸುವುದರ ಜತೆಗೆ, ಆರೋಗ್ಯ ಸೇವೆಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ನೆರವಾಗುತ್ತಿದೆ.
ಹಿನ್ನುಡಿ: 2014ರಿಂದ ಭಾರತದ ಆರೋಗ್ಯ ವಲಯದಲ್ಲಿ ಆದ ಕ್ರಾಂತಿಕಾರಿ ಬದಲಾವಣೆಗಳು, ಸರಕಾರವು ಸಮಾನತೆ ಮತ್ತು ಆರ್ಥಿಕ ಚಲನಶೀಲತೆ ಎರಡನ್ನೂ ಸಾಧಿಸಲು ಸಾರ್ವಜನಿಕ ನೀತಿಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿವೆ.
ಆರೋಗ್ಯವನ್ನು ಕೇವಲ ದಾನದ ವಿಷಯವೆಂದು ಪರಿಗಣಿಸದೆ, ಉತ್ಪಾದಕತೆಯ ಮೂಲಾಧಾರ ವೆಂದು ಮರುವ್ಯಾಖ್ಯಾನಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಈ ವಲಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ಒಂದು ಕಾಲದಲ್ಲಿ ಅನಾರೋಗ್ಯ ಮತ್ತು ಸಾಲದ ಸುಳಿಗೆ ಸಿಲುಕಿದ್ದ ಕುಟುಂಬಗಳು ಇಂದು ಆದಾಯ ಉಳಿಸಿಕೊಳ್ಳುತ್ತಿವೆ, ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ ಮತ್ತು ಔಪಚಾರಿಕ ಮಾರುಕಟ್ಟೆಗಳಿಗೆ ಕೊಡುಗೆ ನೀಡುತ್ತಿವೆ. ವೈದ್ಯಕೀಯ ಸುರಕ್ಷತೆ ಕಲ್ಪನೆಗೂ ಮೀರಿದ್ದ ಹಳ್ಳಿಗಳಲ್ಲಿ, ಉದ್ಯಮಿಗಳು ಹೊಸ ಗ್ರಾಹಕರನ್ನು ಕಂಡುಕೊಳ್ಳುತ್ತಿದ್ದಾರೆ.
ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದಿಂದ ಬಲಗೊಂಡ ಲಕ್ಷಾಂತರ ಮಹಿಳೆಯರು ಉದ್ಯೋಗ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ, ವೈದ್ಯಕೀಯ ಶಿಕ್ಷಣವನ್ನು ಸುಧಾರಿಸುವುದು ಅತ್ಯಂತ ಕಠಿಣವಾದ ಸುಧಾರಣೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಮೋದಿಯವರ ಕಾರ್ಯವನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.
387 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲು ನಮಗೆ 60 ವರ್ಷಗಳಿಗೂ ಹೆಚ್ಚು ಕಾಲ ಬೇಕಾ ಗಿತ್ತು. ಆದರೆ ಕೇವಲ 10 ವರ್ಷಗಳಲ್ಲಿ, ಈ ಸಂಖ್ಯೆ 780ಕ್ಕೆ ಏರಿದೆ. ಇದೇ ರೀತಿ, 2014ರಲ್ಲಿ ವೈದ್ಯಕೀಯ ತಜ್ಞರಿಗೆ ತರಬೇತಿ ನೀಡಲು 28500 ಸ್ನಾತಕೋತ್ತರ ಸೀಟುಗಳಿದ್ದವು, ಆದರೆ ಇಂದು ಆ ಸಂಖ್ಯೆ 75,092 ಆಗಿದೆ.
ಭಾರತವು ಪ್ರತಿ ವರ್ಷ 118000ಕ್ಕೂ ಹೆಚ್ಚು ವೈದ್ಯರನ್ನು ಉತ್ಪಾದಿಸುತ್ತಿದ್ದು, ಇದು ವಿಶ್ವದ ಅತಿ ದೊಡ್ಡ ಸಂಖ್ಯೆಯಾಗಿದೆ. ಆರೋಗ್ಯ ಸೇವೆಗಳ ಮೂಲಾಧಾರವೇ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ. ಇಂದು ಭಾರತವು ತನ್ನ ನಾಗರಿಕರಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೂ ಆರೋಗ್ಯ ಸೇವೆಗಳನ್ನು ಒದಗಿಸಲು ಅತಿದೊಡ್ಡ ನುರಿತ ಕಾರ್ಯಪಡೆಯನ್ನು ಸಿದ್ಧಪಡಿಸುತ್ತಿದೆ.
ಭಾರತವು 2047ರ ಕಡೆಗೆ ಮುಂದುವರಿಯುತ್ತಿರುವಾಗ, ಈ ಸುಧಾರಣೆಗಳ ಲಾಭಾಂಶಗಳು ಹಲವು ಪಟ್ಟು ಹೆಚ್ಚಾಗಲಿವೆ. ಇದು ಹೆಚ್ಚಿನ ಜೀವಿತಾವಧಿ, ಹೆಚ್ಚುತ್ತಿರುವ ಆದಾಯ ಮತ್ತು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳುವ ಸಾಮರ್ಥ್ಯ ವುಳ್ಳ ಪ್ರಜೆಗಳ ರೂಪದಲ್ಲಿ ಪ್ರಕಟವಾಗಲಿದೆ.
ಸಮಗ್ರ ಮತ್ತು ಪೂರ್ವಭಾವಿ ಆರೋಗ್ಯ ರಕ್ಷಣೆಯು ಈಗ ಕೇವಲ ಒಂದು ಗೌಣ ವಿಷಯವಾಗಿ ಉಳಿದಿಲ್ಲ; ಇದು ರಾಷ್ಟ್ರೀಯ ಶಕ್ತಿಯ ಬೆನ್ನೆಲುಬು ಮತ್ತು ಆರ್ಥಿಕ ಪರಿವರ್ತನೆಗೆ ನಿರ್ಣಾಯಕ ಅಸವಾಗಿದೆ.
(ಲೇಖಕರು ನಾರಾಯಣ ಹೆಲ್ತ್ ಸಂಸ್ಥೆಯ ಸಂಸ್ಥಾಪಕರು
ಮತ್ತು ಹಿರಿಯ ಹೃದ್ರೋಗ ಶಸ್ತ್ರ ಚಿಕಿತ್ಸಕರು)