ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಎಚ್-1ಬಿ ದುಬಾರಿ, ಟ್ರಂಪ್‌ ತಂದಿಟ್ಟ ಹೊಸ ಉ(ವೀ)ಸಾಬರಿ !

ಪ್ರತಿವರ್ಷ ಅಮೆರಿಕ ಕೊಡ ಮಾಡುವ ಒಟ್ಟು ಎಚ್-1ಬಿ ವೀಸಾಗಳಲ್ಲಿ ಶೇ.70ಕ್ಕೂ ಹೆಚ್ಚಿನ ಪಾಲನ್ನು ಭಾರತೀಯರೇ ಪಡೆದುಕೊಳ್ಳುತ್ತಿದ್ದರು. ಉಳಿದಿದ್ದರಲ್ಲಿ ಗಣನೀಯ ಪಾಲು ಚೀನಾ ದೇಶದ್ದು ಮತ್ತು ಚಿಲ್ಲರೆ ಪ್ರತಿಶತ ಉಳಿದ ದೇಶಗಳದ್ದು ಆಗಿರುತ್ತಿತ್ತು. 1990ರಲ್ಲಿ ಈ ವ್ಯವಸ್ಥೆಯನ್ನು ಅಮೆರಿಕ ಜಾರಿಗೆ ತಂದಿತ್ತು.

ಎಚ್-1ಬಿ ದುಬಾರಿ, ಟ್ರಂಪ್‌ ತಂದಿಟ್ಟ ಹೊಸ ಉ(ವೀ)ಸಾಬರಿ !

-

Ashok Nayak Ashok Nayak Sep 27, 2025 7:22 AM

ಟ್ರಂಪಾಯಣ

ರವೀ ಸಜಂಗದ್ದೆ

ಟ್ರಂಪ್ ಹೊರಡಿಸಿದ ಹೊಸ ಆದೇಶ ತಲ್ಲಣವನ್ನೇ ಸೃಷ್ಟಿಸಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತ ಕಂಪನಿಗಳು ನೆಮ್ಮದಿಯನ್ನು ಕಳೆದುಕೊಂಡಿವೆ. ಅಮೆರಿಕಕ್ಕೆ ತೆರಳಿದವರು ಅಲ್ಲಿಗೆ ಹೋದ ಕೂಡಲೇ ಕಾರು ಖರೀದಿಸಿದರೆ, 2-3 ವರ್ಷಗಳಲ್ಲಿ ಬಹುತೇಕರು ಸಾಲ ಮಾಡಿ ಮನೆ ಯನ್ನೂ ಖರೀದಿಸಿರುತ್ತಾರೆ. ಈಗ ಅಲ್ಲಿಂದ ವಾಪಸಾಗುವಾಗ ಕಾರು-ಮನೆ ಎರಡನ್ನೂ ಮಾರಬೇಕು. ಅಂದಾಜು 5 ಲಕ್ಷ ಮನೆ ಮತ್ತು ಕಾರುಗಳು ಮುಂದಿನ ದಿನಗಳಲ್ಲಿ ಮಾರಾಟಕ್ಕೆ ಬಂದಾಗ, ಬೆಲೆ ಕುಸಿಯುವ ಆತಂಕವಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ! ಈ ಮನುಷ್ಯ ತಮ್ಮ ಎರಡನೆ ಅವಧಿಯ ಅಧ್ಯಕ್ಷಗಿರಿಯಲ್ಲಿ ಹೆಚ್ಚು ಕಡಿಮೆ ಪ್ರತಿದಿನವೂ ಸುದ್ದಿಯಲ್ಲಿರಲು ಪ್ರಯತ್ನಿಸಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ‘ಅಮೆರಿಕವನ್ನು ಮತ್ತೊಮ್ಮೆ ಉತ್ತುಂಗಕ್ಕೆ ಏರಿಸುತ್ತೇನೆ’ ಎಂದು ಹೇಳುತ್ತಾ, ‘ಅಮೆರಿಕ ಫಸ್ಟ್’ ಕಾರ್ಯನೀತಿಯ ಒಂದು ಭಾಗವಾಗಿ ಹಲವಾರು ಮಹತ್ವದ, ಒಂದಷ್ಟು ವಿವಾದಾತ್ಮಕವಾದ ಮತ್ತು ಅಮೆರಿಕ ಸೇರಿದಂತೆ ಎಲ್ಲ ದೇಶಗಳಿಗೂ ಕಿರಿಕಿರಿ ಉಂಟು ಮಾಡುವಂಥ ಆದೇಶ/ಸುತ್ತೋಲೆಗಳನ್ನು ಟ್ರಂಪ್ ಸರಕಾರ ನಿರಂತರವಾಗಿ ನೀಡುತ್ತಿದೆ.

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸೇವೆ ಮತ್ತು ಸರಕುಗಳಿಗೆ ‘ಸುಂಕ-ದುಬಾರಿ ಸುಂಕ-ದಂಡ ರೂಪದ ಸುಂಕ’ ಮುಂತಾದ ಹೆಸರಿನಲ್ಲಿ ಹೆಚ್ಚು ಹಣ ವಸೂಲಿ ಮಾಡುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಇದರಿಂದಾಗಿ ನಮ್ಮ ರಫ್ತು ಉದ್ಯಮಕ್ಕೆ ಒಂದಷ್ಟು ಹೊಡೆತ ಬಿದ್ದಿದೆ.

ಅಮೆರಿಕಕ್ಕೆ ರಫ್ತಾಗುವ ಒಟ್ಟು ಸರಕುಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಇವೆಲ್ಲದರ ನಡುವೆ, ಇದೇ ಸೆಪ್ಟೆಂಬರ್ 22ರಿಂದ ತೊಡಗಿ, ಎಚ್-1ಬಿ ವೀಸಾದಡಿಯಲ್ಲಿ ಅಮೆರಿಕಕ್ಕೆ ತೆರಳುವ ಭಾರತೀಯರು ತೆರಬೇಕಾಗುವ ವಾರ್ಷಿಕ ವೀಸಾ ಮೊತ್ತವನ್ನು ಸಿಕ್ಕಾಪಟ್ಟೆ ಏರಿಸಿ ಮತ್ತೊಂದು ಸುತ್ತಿನ ಆತಂಕವನ್ನು ಸೃಷ್ಟಿಸಿದ್ದಾರೆ.

ನೀವು ಈ ಬರಹವನ್ನು ಓದುವ ಹೊತ್ತಿಗೆ ಅದಾಗಲೇ ಕೆಲವರು ದುಬಾರಿ ಮೊತ್ತವನ್ನು ತೆತ್ತು ಎಚ್-1ಬಿ ವೀಸಾದ ಮೂಲಕ ಅಮೆರಿಕವನ್ನು ಪ್ರವೇಶಿಸಿದ್ದಿರಬಹುದು (ಅಥವಾ ಅಂಥ ಅನಿವಾರ್ಯತೆಯ ಬಲಿಪಶುಗಳಾಗಿದ್ದಿರಬಹುದು). ಅಲ್ಲಿಗೆ ಭಾರತದೊಂದಿಗಿನ ಅಮೆರಿಕದ ಜಿದ್ದಾಜಿದ್ದಿ ಮತ್ತೊಂದು ನಿರ್ಣಾಯಕ ಘಟ್ಟವನ್ನು ಪ್ರವೇಶಿಸಿದಂತಾಗಿದೆ.

ಇದನ್ನೂ ಓದಿ: Ravi Sajangadde Column: ಸರಳೀಕೃತ ತೆರಿಗೆ: ವಿಕಸಿತ ಭಾರತಕ್ಕೆ ದಿಟ್ಟಹೆಜ್ಜೆ !

ವರದಿಗಳ ಪ್ರಕಾರ, ಪ್ರತಿವರ್ಷ ಅಮೆರಿಕ ಕೊಡ ಮಾಡುವ ಒಟ್ಟು ಎಚ್-1ಬಿ ವೀಸಾಗಳಲ್ಲಿ ಶೇ.70ಕ್ಕೂ ಹೆಚ್ಚಿನ ಪಾಲನ್ನು ಭಾರತೀಯರೇ ಪಡೆದುಕೊಳ್ಳುತ್ತಿದ್ದರು. ಉಳಿದಿದ್ದರಲ್ಲಿ ಗಣನೀಯ ಪಾಲು ಚೀನಾ ದೇಶದ್ದು ಮತ್ತು ಚಿಲ್ಲರೆ ಪ್ರತಿಶತ ಉಳಿದ ದೇಶಗಳದ್ದು ಆಗಿರುತ್ತಿತ್ತು. 1990ರಲ್ಲಿ ಈ ವ್ಯವಸ್ಥೆಯನ್ನು ಅಮೆರಿಕ ಜಾರಿಗೆ ತಂದಿತ್ತು.

ಹೀಗೆ ಎಚ್-1ಬಿ ವೀಸಾ ಗಿಟ್ಟಿಸಿಕೊಂಡು ಅಮೆರಿಕಕ್ಕೆ ಹೋದವರಲ್ಲಿ ಹೆಚ್ಚಿನವರು ಅಲ್ಲೇ ಇದ್ದು ಬದುಕು ಕಟ್ಟಿಕೊಳ್ಳಲು ಯೋಜಿಸುತ್ತಾರೆ. ಅಂದರೆ, ಅಮೆರಿಕದ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿಕೊಂಡು ಅಲ್ಲೇ ವಾಸಿಸುವುದು. ವರ್ಷಗಳು ಉರುಳಿದಂತೆ ಅಮೆರಿಕವಾಸ ಹಿತವಾಗಿ, ಅಲ್ಲೇ ದೀರ್ಘಕಾಲ ಇರಲು ನಿರ್ಧರಿಸಿ, ಪಡೆದುಕೊಂಡಿರುವ ಎಚ್-1ಬಿ ವೀಸಾದಡಿ ನೆಲೆಸಿ, ಕೆಲ ವರ್ಷ ಗಳಲ್ಲಿ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಾರೆ. ಅದು ಸಿಕ್ಕಿದರೆ ಅಲ್ಲಿನ ಪೌರತ್ವ ಸಿಕ್ಕಿದಂತೆ. ಹುಟ್ಟಿದ/ಹುಟ್ಟುವ ಮಕ್ಕಳಿಗೆ ಹೇಗೂ ಸಲೀಸಾಗಿ ಅಲ್ಲಿನ ಪೌರತ್ವ ದೊರೆಯುತ್ತದೆ. ಅಲ್ಲಿಗೆ ಎರಡರಿಂದ ಮೂರು ತಲೆಮಾರುಗಳ ಬದುಕು-ಭವಿಷ್ಯ ಅಮೆರಿಕದಲ್ಲಿ!

‘ಅಮೆರಿಕ ಫಸ್ಟ್’ ಕಾರ್ಯನೀತಿಯ ಭಾಗವಾಗಿ, ಅಮೆರಿಕದಲ್ಲಿ ಅಮೆರಿಕನ್ನರಿಗೇ ಹೆಚ್ಚಿನ ಉದ್ಯೋ ಗಾವಕಾಶವನ್ನು ನೀಡಲೆಂದು ಮತ್ತು ತನ್ನಲ್ಲಿ ಠಿಕಾಣಿ ಹೂಡಿರುವ ವಿದೇಶಿಯರನ್ನು ಹೊರಗಟ್ಟಿ ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಅಮೆರಿಕವು ಎಚ್-1ಬಿ ವೀಸಾದ ಶುಲ್ಕ ವನ್ನು ಹೆಚ್ಚಿಸಿ, ಅಮೆರಿಕಕ್ಕೆ ತೆರಳಲು ಬಯಸುವ ಭಾರತೀಯರಿಗೆ ಮರ್ಮಾಘಾತ ಉಂಟು ಮಾಡಿದೆ.

Ravi S  7

1700ರಿಂದ 4500 ಡಾಲರ್‌ತನಕ ಇದ್ದ ಎಚ್-1ಬಿ ವೀಸಾದ ವಾರ್ಷಿಕ ಶುಲ್ಕವು, ಸೆಪ್ಟೆಂಬರ್ 22ರಿಂದ ಬರೋಬ್ಬರಿ 1 ಲಕ್ಷ ಡಾಲರ್‌ಗೆ (ಅಂದರೆ ಸುಮಾರು 88 ಲಕ್ಷ ರುಪಾಯಿಗಳಿಗೆ) ಏರಿಕೆ ಯಾಗಿದೆ. ಹೊಸದಕ್ಕೆ ಮಾತ್ರವಲ್ಲದೆ ನವೀಕರಣಕ್ಕಾಗಿ ಬರುವ ವೀಸಾಗಳಿಗೂ ಇದು ಅನ್ವಯವಾಗ ಲಿದೆ. ಜತೆಗೆ ಎಚ್-1ಬಿ ವೀಸಾವನ್ನು ಪಡೆಯಬೇಕಾದರೆ 128 ಪ್ರಶ್ನೆಗಳ ಲಿಖಿತ ಪರೀಕ್ಷೆಯಲ್ಲಿ ಉತ್ತರ ಬರೆದು, 20 ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಿ, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರೆ ಮಾತ್ರವೇ ಪೌರತ್ವ ನೀಡುವ, ಈ ಹಿಂದೆ ಇದ್ದ ‘ಪ್ರವೇಶ ಪರೀಕ್ಷೆ’ ಮತ್ತೆ ಜಾರಿಯಾಗುವ ವಿವರಗಳೂ ಆದೇಶ ದಲ್ಲಿವೆ. ಅಲ್ಲಿಗೆ, ಅಮೆರಿಕಕ್ಕೆ ತೆರಳಲು ವಿದೇಶಿಯರಿಗೆ ಇದ್ದ ಅವಕಾಶಗಳ ಬಾಗಿಲನ್ನು ಅಲ್ಲಿನ ಸರಕಾರ ಮುಚ್ಚುತ್ತಿದೆ. ಭಾರತೀಯ ವಿದೇಶಾಂಗ ಸಚಿವಾಲಯವು ಈ ನಿರ್ಧಾರವನ್ನು ಖಂಡಿಸಿ ಕಳವಳವನ್ನು ವ್ಯಕ್ತಪಡಿಸಿದೆ.

2025ರಲ್ಲಿ ಅಮೆರಿಕವು 3,99,395ರಷ್ಟು ಎಚ್-1ಬಿ ವೀಸಾಗಳನ್ನು ನೀಡಿತ್ತು. ಈ ಪೈಕಿ 2,83,570 ವೀಸಾಗಳನ್ನು ಭಾರತೀಯರೇ ಪಡೆದುಕೊಂಡಿದ್ದರು- ಅಂದರೆ, ಶೇ.70ರ ಪ್ರಮಾಣಕ್ಕಿಂತ ಹೆಚ್ಚು! ಆದರೆ, ಟ್ರಂಪ್‌ರ ಈ ಹೊಸ ವೀಸಾ ನೀತಿಯು ಭಾರತದ ಮೇಲೆ ಎಂಥ ಬಲವಾದ ಪ್ರಹಾರ ಮಾಡಿದೆ ನೋಡಿ!

ಎಚ್-1ಬಿ ವೀಸಾದ ಮುಖಾಂತರ ಅಮೆರಿಕದಲ್ಲಿ 3 ವರ್ಷಗಳ ಕಾಲ ಉಳಿದುಕೊಂಡು ಕೆಲಸ ಮಾಡುವ ಅವಕಾಶವಿದೆ. ನಂತರ ಮುಂದಿನ ೩ ವರ್ಷಕ್ಕೆ ಮತ್ತೆ ಅದನ್ನು ವಿಸ್ತರಿಸಲು/ನವೀಕರಿ ಸಲು ಕೂಡ ಅವಕಾಶವಿದೆ. ಈಗ ಹೊಸನೀತಿಯ ಪ್ರಕಾರ, ಎಚ್-1ಬಿ ವೀಸಾಗೆ ವಾರ್ಷಿಕ 88 ಲಕ್ಷ ರುಪಾಯಿ ಶುಲ್ಕ ನಿಗದಿಯಾಗಿದೆ ಅಲ್ಲವೇ? ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 6 ಲಕ್ಷದಷ್ಟು ಭಾರತೀಯರು ಈ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿದ್ದಾರೆ.

5 ಲಕ್ಷ ಜನರು 2023ರಲ್ಲಿ ಅಮೆರಿಕ ತಂದ ನವೀನ ವೀಸಾ ವ್ಯವಸ್ತೆ/ವೀಸಾ ವಿಸ್ತರಣೆ ಯೋಜನೆಯಡಿ ಅಲ್ಲಿ ವಾಸವಿದ್ದಾರೆ. ಹೊಸ ಆದೇಶಾನುಸಾರ ಮುಂದಿನ ವರ್ಷದಿಂದ ಈ ವೀಸಾ ನವೀಕರಣ ಕಷ್ಟಸಾಧ್ಯ. ಏಕೆಂದರೆ, ಈ ವ್ಯವಸ್ಥೆಯಡಿಯಲ್ಲಿ ಅಮೆರಿಕದಲ್ಲಿರುವ ಭಾರತೀಯ ಟೆಕ್ಕಿಗಳ ವಾರ್ಷಿಕ ಸಂಬಳ 60000ದಿಂದ 1 ಲಕ್ಷ ಡಾಲರ್. ಒಂದು ಲಕ್ಷ ಡಾಲರ್‌ನಷ್ಟು ವಾರ್ಷಿಕ ಸಂಬಳ ಕೊಡುವ ಯಾವುದೇ ಸಂಸ್ಥೆಯು ಅಷ್ಟೇ ಮೊತ್ತವನ್ನು ತನ್ನ ಉದ್ಯೋಗಿಯ ಎಚ್-1ಬಿ ವೀಸಾದ ನವೀಕರಣಕ್ಕೆ ವ್ಯಯಿಸುವ ಸಾಧ್ಯತೆ ತೀರಾ ಕ್ಷೀಣ.

ಹಾಗಾಗಿ ಸದ್ಯ ಎಚ್-1ಬಿ ವೀಸಾದಡಿ ಅಮೆರಿಕದಲ್ಲಿರುವ ಬಹುತೇಕರ ಭವಿಷ್ಯ ಡೋಲಾಯ ಮಾನವಾಗಿದೆ. ಈ ಶುಲ್ಕ ಹೆಚ್ಚಳವು ಅಮೆರಿಕದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಐಟಿ ಮತ್ತು ಅದರ ಸೇವಾದಾತ ಕಂಪನಿಗಳಿಗೆ ಬಲವಾದ ಪೆಟ್ಟು ನೀಡಿರುವುದು ಈ ಹೊಸ ವೀಸಾ ನೀತಿಯ ಮತ್ತೊಂದು ನಕಾರಾತ್ಮಕ ಪರಿಣಾಮ!

ಮೆಟಾ, ಮೈಕ್ರೋಸಾಫ್ಟ್, ಇನೋಸಿಸ್, ಗೂಗಲ್, ಟಿಸಿಎಸ್, ಕಾಗ್ನಿಜೆಂಟ್ ಮುಂತಾದ ಸಂಸ್ಥೆಗಳು ಎಚ್-1ಬಿ ವೀಸಾದಡಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ತಮ್ಮ ಉದ್ಯೋಗಿಗಳಿಗೆ, ಒಂದು ವೇಳೆ ಭಾರತದಲ್ಲಿ ಅಥವಾ ಇತರ ದೇಶಗಳಲ್ಲಿ ಪ್ರವಾಸದಲ್ಲಿದ್ದರೆ, ಅಂಥವರು ಕ್ಷಿಪ್ರವಾಗಿ ಅಮೆರಿಕ ತಲುಪುವಂತೆ ಆದೇಶ ನೀಡಿದ್ದುಂಟು.

ಯಾಕೆಂದರೆ, ಅಂಥವರು ಸೆಪ್ಟೆಂಬರ್ 22ರ ಬಳಿಕ ಅಮೆರಿಕ ಪ್ರವೇಶಿಸಲು 88 ಲಕ್ಷ ರುಪಾಯಿ ಹಣವನ್ನು ವ್ಯಯಿಸಬೇಕಾಗುತ್ತಲ್ಲ ಎಂಬುದು ಈ ಸಂಸ್ಥೆಗಳ ಆತಂಕವಾಗಿತ್ತು. ಅಮೆರಿಕದಲ್ಲಿರುವ ಉದ್ಯೋಗಿಗಳು ಕನಿಷ್ಠ ಒಂದು ತಿಂಗಳ ಕಾಲ ಅಮೆರಿಕವನ್ನು ತೊರೆಯದಂತೆಯೂ ಈ ಸಂಸ್ಥೆಗಳು ವಿನಂತಿಸಿವೆ. ‌

‘ನಿಮ್ಮ ಭವಿಷ್ಯದ ಒಳಿತಿಗಾಗಿ ಈ ಆದೇಶಗಳನ್ನು ಪಾಲಿಸಿ’ ಎಂದು ಅವು ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ತಾಕೀತು ಮಾಡಿವೆ. ಹೀಗಾಗಿ ದಸರಾ/ದೀಪಾವಳಿಗೆ ತಾಯ್ನಾಡಿಗೆ ಬರಲು ಯೋಜಿಸಿದ್ದ ಎಲ್ಲರಿಗೂ ಈ ಪರಿಸ್ಥಿತಿ ಆತಂಕ ತಂದಿದೆ. ಬಹುತೇಕರು ತಮ್ಮ ಭಾರತ ಪ್ರವಾಸವನ್ನು ರದ್ದು ಮಾಡಿದ್ದಾರೆ, ಇಲ್ಲವೇ ಮುಂದೂಡಿದ್ದಾರೆ.

ಮುಂದೇನಾಗಬಹುದು?: ಟ್ರಂಪ್ ಹೊರಡಿಸಿದ ಈ ಹೊಸ ಆದೇಶ ತಲ್ಲಣವನ್ನೇ ಸೃಷ್ಟಿಸಿದೆ. ಉದ್ಯೋಗಿಗಳು ಮತ್ತು ಉದ್ಯೋಗದಾತ ಕಂಪನಿಗಳು ನಿದ್ರೆ-ನೆಮ್ಮದಿಯನ್ನು ಕಳೆದುಕೊಂಡಿವೆ. ಅಮೆರಿಕಕ್ಕೆ ತೆರಳಿದವರು ಅಲ್ಲಿಗೆ ಹೋದ ಕೂಡಲೇ ಕಾರು ಖರೀದಿಸಿದರೆ, 2-3 ವರ್ಷಗಳಲ್ಲಿ ಬಹುತೇಕರು ಸಾಲ ಮಾಡಿ ಮನೆಯನ್ನೂ ಖರೀದಿಸಿರುತ್ತಾರೆ. ಈಗ ಅಲ್ಲಿಂದ ವಾಪಸಾಗುವ ಸಂದರ್ಭದಲ್ಲಿ ಕಾರು-ಮನೆ ಎರಡನ್ನೂ ಮಾರಬೇಕು.

ಅಂದಾಜು 5 ಲಕ್ಷ ಮನೆ ಮತ್ತು ಕಾರುಗಳು ಮುಂದಿನ ದಿನಗಳಲ್ಲಿ ಮಾರಾಟಕ್ಕೆ ಬಂದಾಗ, ಖಂಡಿತ ವಾಗಿಯೂ ಬೆಲೆ ಕುಸಿಯುವ ಆತಂಕವಿದೆ. ಅಂದರೆ ಇಂಥವರಿಗೆ ತಮ್ಮ ಮನೆ-ಕಾರನ್ನು ನಷ್ಟದಲ್ಲಿ ಮಾರಿ ಅಮೆರಿಕದಿಂದ ಭಾರತಕ್ಕೆ ವಾಪಸಾಗಬೇಕಾದ ಅನಿವಾರ್ಯತೆ! ಹಲವು ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು, ಬಂಧು-ಮಿತ್ರರು, ಸಂಬಂಧ, ಹಬ್ಬ-ಹರಿದಿನಗಳನ್ನು ತ್ಯಾಗ ಮಾಡಿ ಅಮೆರಿಕಕ್ಕೆ ತೆರಳಿದ ಬಹುತೇಕರು, ಕೊನೆಗೆ ಏನನ್ನೂ ಸಂಪಾದಿಸದೆ, ಸಾಧಿಸಲಾಗದೆ, ಭಾರವಾದ ಹೃದಯದಿಂದ ಭಾರತಕ್ಕೆ ಬರಿಗೈಯಲ್ಲಿ ವಾಪಸಾಗಬೇಕಾದಂಥ ನೋವಿನ ಪರಿಸ್ಥಿತಿ ಯನ್ನು ಟ್ರಂಪ್ ಸೃಷ್ಟಿಸಿದ್ದಾರೆ.

ಅಮೆರಿಕದಲ್ಲಿರುವ ಕಂಪನಿಗಳು ತಮ್ಮ ದೈನಂದಿನ ವ್ಯವಹಾರವನ್ನು ನಿಭಾಯಿಸಲೂ ಹೆಣಗಾಡ ಬೇಕಾದ, ಭಾರತೀಯರು ಬಿಟ್ಟುಬರುವ ಆ ಸ್ಥಾನಗಳಿಗೆ ಅಷ್ಟೇನೂ ಪರಿಣತಿಯುಲ್ಲದ ಅಮೆರಿಕನ್ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ; ಇದರಿಂದಾಗಿ ಅವುಗಳ ವ್ಯವಹಾರ ಒಪ್ಪಂದ ಮತ್ತು ದೈನಂದಿನ ಸೇವಾ ಉತ್ಕೃಷ್ಟತೆಗೆ ಒಂದಷ್ಟು ಪೆಟ್ಟು ಬೀಳಲಿದೆ. ಅಮೆರಿಕದಲ್ಲಿ ಈ ಕಂಪನಿಗಳ ಸೇವೆ ಪಡೆಯುತ್ತಿರುವ ಎಲ್ಲ ಸಂಸ್ಥೆಗಳನ್ನು ಈ ನಕಾರಾತ್ಮಕ ಪರಿಣಾಮ ಬಾಧಿಸಲಿದೆ.

ಅಮೆರಿಕ ನಿಂತಿರುವುದು ಮತ್ತು ಅಲ್ಲಿನ ಜನರು ಅವಲಂಬಿಸಿ ಜೀವಿಸುತ್ತಿರುವುದು ಸಾಲದ ಮೇಲೆ; ಇಲ್ಲಿನ ಬಹುತೇಕರ, ಬಹುಪಾಲು ಆದಾಯವು ಸಾಲದ ಕಂತುಗಳನ್ನು ಕಟ್ಟಲು ವಿನಿಯೋಗ ವಾಗುತ್ತಿದೆ. ಆರ್ಥಿಕವಾಗಿ ಒಂದಷ್ಟು ಉತ್ತಮ ಸ್ಥಿತಿಯಲ್ಲಿದ್ದ ಇಂಥ ಎಚ್-1ಬಿ ವೀಸಾದ ಭಾರತೀಯರನ್ನೂ ಈಗ ಅಲ್ಲಿಂದ ಒಕ್ಕಲೆಬ್ಬಿಸಿದರೆ, ಅದರ ಬಿಸಿ ಅಮೆರಿಕಕ್ಕೆ ಖಂಡಿತ ತಟ್ಟಲಿದೆ.

ಇದರ ಋಣಾತ್ಮಕ ಆರ್ಥಿಕ ಪರಿಣಾಮವನ್ನು ಅಮೆರಿಕವೇ ಭರಿಸಬೇಕಿದೆ. ಸದ್ಯದ ಮಟ್ಟಿಗೆ ಬಹುತೇಕ ಕಂಪನಿಗಳು ತಂತಮ್ಮ ಉದ್ಯೋಗಿಗಳನ್ನು ಹಂತಹಂತವಾಗಿ, ಅವರ ಈಗಿನ ವೀಸಾ ಅವಧಿ ಮುಗಿದ ಕೂಡಲೇ ಭಾರತಕ್ಕೆ ವಾಪಸ್ ಕರೆಸಿಕೊಳ್ಳಬಹುದು ಅಥವಾ ವಾಪಸಾಗಲು ಸೂಚಿಸಬಹುದು.

ಇದರ ಜತೆಜತೆಗೆ ಹಂತಹಂತವಾಗಿ ಅಮೆರಿಕದ ಸಮಯ ವಲಯದ (time zone) ಆಸುಪಾಸಿ ನಲ್ಲಿರುವ ಕ್ಯೂಬಾ, ಮೆಕ್ಸಿಕೋ, ಕೋಸ್ಟರಿಕಾ, ಕೊಲಂಬಿಯಾ, ಕೆನಡಾ ಮುಂತಾದ ‘ಜೀವನ ನಿರ್ವಹಣಾ ವೆಚ್ಚ’ ಕಡಿಮೆ ಇರುವ ದೇಶಗಳಲ್ಲಿ ಅವು ತಮ್ಮ ಶಾಖೆಗಳನ್ನು ತೆರೆದು, ಅಲ್ಲಿಂದ ಉದ್ಯೋಗಿಗಳು ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಬಹುದು. ಟ್ರೆಂಡ್ ನೋಡಿಕೊಂಡು, ಪ್ರತಿಭಾವಂತ ಮಾನವ ಸಂಪನ್ಮೂಲವು ಭಾರತದಲ್ಲಿ ಹೇರಳವಾಗಿರುವ ಕಾರಣ, ಅಮೆರಿಕ ಮತ್ತು ಇತರ ದೇಶಗಳ ಕಂಪನಿಗಳು ತಮ್ಮ ಹೊಸ ‘ಜಾಗತಿಕ ಸಾಮರ್ಥ್ಯ ಕೇಂದ್ರ’ವನ್ನು (Global Capability Centre) ಭಾರತದಲ್ಲಿ ನಿರ್ಮಿಸಿ, ಹೆಚ್ಚಿನ ಪ್ರಾಜೆಕ್ಟ್‌ಗಳನ್ನು ಇಲ್ಲಿಂದಲೇ ನಿರ್ವಹಿಸುವ ಸಾಧ್ಯತೆ/ಅವಕಾಶವಿದೆ.

ಹೀಗಾದಾಗ ಮುಂದಿನ ದಿನಗಳಲ್ಲಿ ದೊಡ್ಡ ಮೊತ್ತದ ಬಂಡವಾಳವು ನಮ್ಮ ದೇಶಕ್ಕೆ ಹರಿದು ಬರಲಿರುವುದು ನಿಶ್ಚಿತ. ಜಾಗತಿಕ ಒಕ್ಕೂಟ ವ್ಯವಸ್ಥೆಯನ್ನು ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯ ನೀತಿಯನ್ನು ಅನುಸರಿಸಿಕೊಂಡು ಹೋಗಬೇಕಾದುದು ಎಲ್ಲ ದೇಶಗಳ ಧರ್ಮ ಮತ್ತು ಸಾಮಾನ್ಯ ಕಾರ್ಯಸೂಚಿ ಆಗಿರಬೇಕು. ಅಮೆರಿಕ ಅಧ್ಯಕ್ಷರು ಈ ನಿಟ್ಟಿನಲ್ಲಿ ಸ್ವಲ್ಪ ಆತುರಕ್ಕೆ ಬಿದ್ದಂತೆ ವರ್ತಿಸಿ, ಸದ್ಯಕ್ಕೆ ಭಾರತದೆದುರು ಮೇಲುಗೈ ಸಾಧಿಸಿದಂತೆ ಭಾಸವಾಗುತ್ತಿದೆ.

ದುಬಾರಿ ಸುಂಕನೀತಿ, ವೀಸಾ ದರದ ‘ದುಬಾರೀಕರಣ’ ಮುಂತಾದ ನಿಲುವುಗಳು ಮುಂದಿನ ವರ್ಷ ಗಳಲ್ಲಿ ಅಮೆರಿಕಕ್ಕೆ ತಿರುಗುಬಾಣವಾಗಲಿವೆ. ಆದರೆ ಸದ್ಯಕ್ಕಂತೂ ಈ ನಿಲುವಿನಿಂದ ಭಾರತಕ್ಕೆ ಒಂದಷ್ಟು ಹೊಡೆತ ಬಿದ್ದಿರುವುದು ಸತ್ಯ.

ಸ್ವಾವಲಂಬಿ ಭಾರತವನ್ನು ಮತ್ತಷ್ಟು ಸ್ವಾವಲಂಬಿಯಾಗಿಸಲು ಇಂಥ ಸವಾಲುಗಳು ಮತ್ತು ನಿರ್ಣಯಗಳು ಸಹಕಾರಿಯಾಗಲಿ. ಅಮೆರಿಕ ಸೇರಿದಂತೆ ಇತರ ದೇಶಗಳ ಮೇಲಿನ ಅವಲಂಬನೆ ಎಲ್ಲ ಕ್ಷೇತ್ರಗಳಲ್ಲೂ ಕಡಿಮೆಯಾಗಿ, ಸದ್ಯದ ಸಂಕೀರ್ಣ ಸ್ಥಿತಿ ಅವಕಾಶವಾಗಿ ಮಾರ್ಪಟ್ಟು, ಭಾರತವು ‘ವಿಶ್ವಗುರು’ ಮತ್ತು ‘ವಿಶ್ವಬಂಧು’ವಾಗಿ ಎದ್ದು ನಿಲ್ಲಲಿ.

ಈಗಿನ ಸಣ್ಣ ಹಿಂಜರಿಕೆಯು ನಾಳೆಗಳ ದೊಡ್ಡ ಗೆಲುವಿಗೆ ಮುನ್ನುಡಿಯಾಗಲಿ. ಈ ಹೊಸ ವೀಸಾ ಉಸಾಬರಿಯೂ ಬೇಗ ವಾಸಿಯಾಗಲಿ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)