Kiran Upadhyay Column: ಕದನ ಇಲ್ಲದೇ ಕದನವಿರಾಮ ಹೇಗೆ ?
ಇಂದು ಜನರ ಮನಃಸ್ಥಿತಿ ಹೇಗಾಗಿದೆಯೆಂದರೆ, ಯಾವುದೇ ಘಟನೆ ನಡೆದರೂ, ಕ್ಷಣಾರ್ಧದಲ್ಲಿ ಪ್ರತ್ಯುತ್ತರ ನೀಡಬೇಕು ಎಂಬಂತಾಗಿದೆ. ಉತ್ತರಿಸಲು ವಿಳಂಬವಾದರೆ ಸೋತಂತೆ ಎಂಬ ವಾತಾವರಣ ನಿರ್ಮಾಣ ವಾಗುತ್ತಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಹಮಾಸ್ ಉಗ್ರರು ಇಸ್ರೇಲ್ ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಹತ್ಯೆಗೈದಿದ್ದು ಎಲ್ಲರಿಗೂ ನೆನಪಿರಬಹುದು.


ವಿದೇಶವಾಸಿ
dhyapaa@gmail.com
‘ಆಪರೇಷನ್ ಸಿಂದೂರ!’ ಪಹಲ್ಗಾಮ್ ನರಹಂತಕರ ದಾಳಿಯಲ್ಲಿ ಇಪ್ಪತ್ತಾರು ಅಮಾಯಕರು ಬಲಿಯಾದ ದುಃಖದಾಯಕ ವಿಷಯವನ್ನು ಕೇಳಿದಂದಿನಿಂದ ಪ್ರತಿಯೊಬ್ಬ ಭಾರತೀಯನ ಮನದಲ್ಲೂ ಇದಕ್ಕೆ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂಬ ಬಯಕೆ ಇತ್ತು. ಮೊದಲ ರಾಜತಾಂತ್ರಿಕ ನಿಲುವುಗಳಾದ ನೀರು, ಆಹಾರ, ರಫ್ತು-ಆಮದು ನಿಲ್ಲಿಸಿದ್ದು, ಎಲ್ಲವೂ ಸಣ್ಣ ಸಮಾಧಾನವನ್ನು ನೀಡಿದ್ದವೇ ವಿನಾ ತೃಪ್ತಿ ನೀಡಿರಲಿಲ್ಲ. ಯಾವಾಗ ಆಪರೇಷನ್ ಸಿಂದೂರ ಹೆಸರಿನಲ್ಲಿ ಉಗ್ರರ ಒಂಬತ್ತು ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿತು ಎಂಬ ಸುದ್ದಿ ಬಂತು ನೋಡಿ... ಆಗ ಸಮಾಧಾನದ ನಿಟ್ಟುಸಿರುಬಿಟ್ಟರು. ಆದರೆ ಇದನ್ನು ಇಷ್ಟಕ್ಕೇ ನಿಲ್ಲಿಸಬಾರದು ಎಂಬ ಬಯಕೆಯೂ ಬಹುತೇಕರಲ್ಲಿ ಇತ್ತು. ಅದಕ್ಕೆ ಈ ಬಾರಿ ವಿಪಕ್ಷಗಳೂ ಸಹಮತ ಸೂಚಿಸಿದ್ದವು.
ಇಂದು ಜನರ ಮನಃಸ್ಥಿತಿ ಹೇಗಾಗಿದೆಯೆಂದರೆ, ಯಾವುದೇ ಘಟನೆ ನಡೆದರೂ, ಕ್ಷಣಾರ್ಧದಲ್ಲಿ ಪ್ರತ್ಯುತ್ತರ ನೀಡಬೇಕು ಎಂಬಂತಾಗಿದೆ. ಉತ್ತರಿಸಲು ವಿಳಂಬವಾದರೆ ಸೋತಂತೆ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಹಮಾಸ್ ಉಗ್ರರು ಇಸ್ರೇಲ್ ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಹತ್ಯೆಗೈದಿದ್ದು ಎಲ್ಲರಿಗೂ ನೆನಪಿರಬಹುದು.
ಪ್ರತ್ಯುತ್ತರವಾಗಿ ಇಸ್ರೇಲ್ ಗಾಜಾದಲ್ಲಿರುವ ಉಗ್ರರ ಮೇಲೆ ದಾಳಿ ಮಾಡಲು ಸುಮಾರು ಮೂರು ವಾರ ತೆಗೆದುಕೊಂಡಿತ್ತು. ಎರಡು ದಶಕದ ಹಿಂದೆ ಅಮೆರಿಕದ ಟ್ವಿನ್ ಟವರ್ ಮೇಲೆ ಅಲ್ ಖೈದಾ ದಾಳಿ ನಡೆಸಿದಾಗಲೂ ಅಷ್ಟೇ, ಸೇಡು ತೀರಿಸಿಕೊಳ್ಳಲು ಅಮೆರಿಕ ಸುಮಾರು ನಾಲ್ಕು ವಾರದ ಸಮಯ ತೆಗೆದುಕೊಂಡಿತ್ತು.
ಅಮೆರಿಕ, ಇಸ್ರೇಲ್‌ನಂಥ ದೇಶಗಳೇ ಯುದ್ಧ ಸಾರಲು ಸಮಯ ತೆಗೆದುಕೊಳ್ಳುವಾಗ, ಭಾರತ ಎರಡು ವಾರ ವಿಳಂಬಿಸಿದ್ದರಲ್ಲಿ ತಪ್ಪೇನೂ ಇಲ್ಲ. ಅಸಲಿಗೆ ಯಾವ ದೇಶವೂ ಯುದ್ಧ ಮಾಡಲೆಂದು ಕಾಯುತ್ತ ಕುಳಿತಿರುವುದಿಲ್ಲ. ಯಾರಾದರೂ ನಮ್ಮ ಮೇಲೆ ದಾಳಿ ಮಾಡಲಿ, ನಮ್ಮವರನ್ನು ಕೊಲ್ಲಲಿ, ನಮ್ಮನ್ನು ಪ್ರಚೋದಿಸಲಿ ಎಂದು ಎದುರುನೋಡುತ್ತಿರುವುದಿಲ್ಲ. ಹಾಗೇನಾದರೂ ಆದರೆ, ಕೆಲವೇ ಗಂಟೆಯ ಒಳಗೆ ನಾವು ಯುದ್ಧ ಸಾರಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ತೀರ್ಮಾನಿಸಿ ಕುಳಿತಿರುವುದಿಲ್ಲ.
ಇದನ್ನೂ ಓದಿ: Kiran Upadhyay Column: ಹಾಂಗ್ ಕಾಂಗ್ ನಲ್ಲಿ ಹರಿಶ್ಚಂದ್ರ...!
ಹಿಂದಲ್ಲ, ಇಂದಲ್ಲ, ಮುಂದಿನ ಇಪ್ಪತ್ತೈದು ವರ್ಷವಾದರೂ ಅಷ್ಟೇ, ಅಮೆರಿಕ, ರಷ್ಯಾ, ಉತ್ತರ ಕೊರಿಯಾ, ಚೀನಾ ಯಾವ ದೇಶವೇ ಆದರೂ, ಎಷ್ಟೇ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದರೂ, ಯಾವ ಪ್ರಮಾಣದ ಸೇನೆ ಹೊಂದಿದ್ದರೂ ಅಷ್ಟೇ. ಅಷ್ಟಕ್ಕೂ ದೇಶ ಮುಂದಾಗುತ್ತಿರುವುದು ಯುದ್ಧಕ್ಕೆ ವಿನಾ ಊಟಕ್ಕಲ್ಲವಲ್ಲ.
ಭಾರತ ಮೇ ಏಳನೆಯ ತಾರೀಖಿನಂದು ರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಲ್ಲಿರುವ ಉಗ್ರರ ತಾಣದ ಮೇಲೆ ಡ್ರೋನ್ ದಾಳಿ ನಡೆಸಿತು. ಅಲ್ಲಿಂದ ನಾಲ್ಕು ದಿನಗಳವರೆಗೆ ನಿಯಂತ್ರಣ ರೇಖೆಯಲ್ಲಿ ಬಳಿ ಕ್ಷಿಪಣಿ ದಾಳಿ, ಡ್ರೋನ್ ಆಕ್ರಮಣ ನಿರಂತರವಾಗಿ ನಡೆಯುತ್ತಿತ್ತು. ಫಿರಂಗಿ ಸದ್ದು ಕೇಳುತ್ತಿತ್ತು. ಎರಡೂ ದೇಶಗಳು ನಿಯಂತ್ರಣ ರೇಖೆಯನ್ನು ದಾಟಿ ಶತ್ರು ದೇಶದ ಒಳಗೆ ಬರಲು ಪ್ರಯತ್ನಿಸಿದವು. ಬಹುತೇಕ ದಾಳಿಗಳು ವಿಫಲವಾದವು.
ಕೆಲವು ವರದಿಯ ಪ್ರಕಾರ, ಪಾಕಿಸ್ತಾನದಲ್ಲಿರುವ ಕೆಲವು ಡ್ರೋನ್, ಕ್ಷಿಪಣಿ ಉಡಾವಣೆ ಮತ್ತು ವಾಯುಪಡೆಯ ವಿಮಾನ ನಿಲ್ದಾಣದ ಮೇಲೆ ಭಾರತ ಮಾಡಿದ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ತಕ್ಕಮಟ್ಟಿಗೆ ಹಾನಿಯೂ ಆಯಿತು. ಭಾರತ ಸರಕಾರ ’ಇನ್ನು ಮುಂದೆ ನಡೆಯುವ ಯಾವುದೇ ರೀತಿಯ ಉಗ್ರ ದಾಳಿಯನ್ನು ಯುದ್ಧ ಎಂದು ಪರಿಗಣಿಸಲಾಗುವುದು’ ಎಂಬ ಹೇಳಿಕೆಯನ್ನೂ ನೀಡಿತು.
ಎರಡೂ ಕಡೆಯ ಕಾರ್ಯಾಚರಣೆಗಳು ಹೆಚ್ಚುತ್ತವೆ ಎಂಬ ನಿರೀಕ್ಷೆಯಲ್ಲಿರುವಾಗ, ಇದ್ದಕ್ಕಿದ್ದಂತೆ ಮೊನ್ನೆ ಹತ್ತನೇ ತಾರೀಕಿನ ಸಾಯಂಕಾಲ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, “ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವಿರಾಮವನ್ನು ಘೋಷಿಸಲಾಗಿದೆ, ವಾಯು, ಭೂಮಿ ಮತ್ತು ಜಲ, ಎಲ್ಲ ರೀತಿಯ ಮಿಲಿಟರಿ ಕಾರ್ಯಾಚರಣೆಗಳನ್ನೂ ನಿಲ್ಲಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ, ಹನ್ನೆರಡನೇ ತಾರೀಖಿನ ಸಾಯಂಕಾಲ ಎರಡೂ ದೇಶಗಳ ನಡುವೆ ಮಾತು ಕತೆ ನಡೆಯಲಿದೆ" ಎಂದು ಹೇಳಿಕೆ ನೀಡಿದ್ದು ಭಾರತೀಯರನ್ನು ಅಚ್ಚರಿಯ ಕೂಪಕ್ಕೆ ತಳ್ಳಿತ್ತು.
ಅವರ ಹಾವ-ಭಾವ ನೋಡಿದರೆ, ಈ ವಿಷಯದಲ್ಲಿ ಅವರಿಗೂ ಸಮಾಧಾನವಿದ್ದಂತೆ ಕಾಣಲಿಲ್ಲ. ಇನ್ನು ಸಾಮಾನ್ಯ ಜನರಿಗಂತೂ ಈ ವಿಷಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡಿದ ಟ್ವೀಟ್ ಕೂಡ ಕಾರಣವಾಗಿತ್ತು. ನಮ್ಮ ದೇಶದ ಕೈ ಮೇಲಾಗು ತ್ತಿರುವಾಗ ಟ್ರಂಪ್ ಈ ರೀತಿಯ ಟ್ವೀಟ್ ಮಾಡಲು ಕಾರಣವೇನು? ಅಷ್ಟಕ್ಕೂ ಭಾರತದ ವಿಷಯ ದಲ್ಲಿ ಟ್ರಂಪ್ ಯಾಕೆ ಮೂಗು ತೂರಿಸಬೇಕು? ಒಂದು ವೇಳೆ ಟಂಪ್ ಹೇಳಿದರೂ ನಮ್ಮವರು ಯಾಕೆ ಆತನ ಮಾತು ಕೇಳಬೇಕು? ಇತ್ಯಾದಿ ಚರ್ಚೆಗಳಾಗತೊಡಗಿದವು.
ಈ ಕದನ ವಿರಾಮದ ಹಿಂದಿರುವ ಸತ್ಯಾಸತ್ಯತೆ ಮಾತ್ರ ಯಾರಿಗೂ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಊಹಿಸತೊಡಗಿದರು, ತಮ್ಮ ಇಷ್ಟದಂತೆ ಮಾತನಾಡಲು ಶುರುಹ ಚ್ಚಿಕೊಂಡರು. ಆದರೆ ಪಾಕಿಸ್ತಾನ ಸುಮ್ಮನೆ ಕುಳಿತುಕೊಳ್ಳುವ ದೇಶ ಅಲ್ಲ. ಕೆಲವೇ ಗಂಟೆಗಳ ಒಳಗೆಕದನವಿರಾಮದ ಉಲ್ಲಂಘನೆಯನ್ನೂ ಮಾಡಿ, ಜನರ ಬಾಯಿಗೆ ಇನ್ನಷ್ಟು ಮಾತಿನ ಆಹಾರ ಒದಗಿಸಿತು.
ಮೂರು ಗಂಟೆ ಮೊದಲಷ್ಟೇ ಕದನ ವಿರಾಮದ ವಿಷಯ ತಿಳಿಸಿದ್ದ ಮಿಸ್ರಿ, “ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ, ಭಾರತ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ" ಎಂದರು. ಆ ಮೂರು-ನಾಲ್ಕು ಗಂಟೆಗಳ ಕಾಲ ಭಾರತ ಪಾಕಿಸ್ತಾನದ ನಡುವೆ ಕಾರ್ಯಾಚರಣೆ ನಡೆಯು ತ್ತಿದೆಯೋ, ಹಾಸ್ಯ ಕಾರ್ಯಕ್ರಮ ನಡೆಯುತ್ತಿದೆಯೋ ಯಾರಿಗೂ ಅರ್ಥವಾಗಲಿಲ್ಲ.
ಎಲ್ಲರಿಗೂ ಕಾಡುತ್ತಿದ್ದ ಪ್ರಶ್ನೆ ಒಂದೇ, ಭಾರತ ಕದನವಿರಾಮಕ್ಕೆ ಏಕೆ ಒಪ್ಪಿಕೊಂಡಿತು? ಈ ಕುರಿತು ಸಾಕಷ್ಟು ಅನುಮಾನ, ವಾದ, ತರ್ಕ ಕೇಳಿ ಬರುತ್ತಿವೆ. ನನಗೆ ವಾಸ್ತವಕ್ಕೆ ಹತ್ತಿರವಾಗಿ ಕಂಡದ್ದು, ಕನ್ನಡದ ಕವಿಯೂ ವಿದ್ವಾಂಸರೂ ಆಗಿದ್ದ ಪಂಜೆ ಮಂಗೇಶರಾಯರ ಮರಿಮೊಮ್ಮಗ ಶಿವ್ ಆರೂರ್ ಮಾಡಿರುವ ವರದಿ. ಚಿಕ್ಕದಾಗಿ ಹೇಳುವುದಾದರೆ, ಯುದ್ಧದ ಅತಿರೇಕದ, ಹೇಸಿಗೆಯ, ಗಲೀಜು, ಸುಳ್ಳು ಸುದ್ದಿಗಳ ನಡುವೆ ನಿಖರ ಸುದ್ದಿ ನೀಡುತ್ತಿರುವ ಕೆಲವೇ ಪತ್ರಕರ್ತರಲ್ಲಿ ಶಿವ್ ಆರೂರ್ ಒಬ್ಬರು.
ಸದ್ಯ ಎನ್‌ಡಿಟಿವಿ ಸುದ್ದಿವಾಹಿನಿಗೆ ಕೆಲಸ ಮಾಡುತ್ತಿರುವ ಶಿವ್, ಉತ್ತಮ ಲೇಖಕರೂ ಹೌದು. ಎನ್‌ಡಿಟಿವಿ ವಾಹಿನಿಯೇ ತಪ್ಪು ಮಾಹಿತಿ ನೀಡುತ್ತಿದ್ದರೂ, ಸದ್ಯ ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿ ರುವ ಶಿವ್ ಸ್ವತಃ ದಾರಿ ತಪ್ಪಿದಂತೆಯೂ, ಇತರರ ದಾರಿ ತಪ್ಪಿಸುತ್ತಿರುವಂತೆಯೂ ಕಾಣಲಿಲ್ಲ.
ಇರಲಿ, ಆಗಿದ್ದೇನೆಂದರೆ, ಮೇ ಹತ್ತರಂದು ಬೆಳಗಿನ ಜಾವ ಭಾರತೀಯ ವಾಯುಪಡೆಯ ವಿಮಾನ ಗಳು ಪಾಕಿಸ್ತಾನ ವಾಯುಪಡೆಯ ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಬ್ರಹ್ಮೋಸ್ ಕ್ಷಿಪಣಿಗಳನ್ನು ಹಾರಿಸಿದವು. ಮೊದಲನೆಯ ಕ್ಷಿಪಣಿ ರಾವಲ್ಪಿಂಡಿ ಬಳಿಯ ಚಕ್ಲಾಲ, ಎರಡನೆಯ ಕ್ಷಿಪಣಿ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ತಮ್ಮ ಆರ್ಭಟವನ್ನು ಮೆರೆದಿದ್ದವು.
ಈ ಎರಡೂ ಸ್ಥಳಗಳು ಯಾಕೆ ಮಹತ್ವ ಪಡೆಯುತ್ತವೆ ಎಂದರೆ, ಪಾಕಿಸ್ತಾನ ಸೇನೆಯ ಅದರಲ್ಲೂ ಪ್ರಮುಖವಾಗಿ ವಾಯುಪಡೆಯ ಕಾರ್ಯತಂತ್ರಗಳು ಇಲ್ಲಿ ರೂಪುಗೊಳ್ಳುತ್ತವೆ. ಎರಡೂ ಪಾಕಿಸ್ತಾನದ ವಾಯುಪಡೆಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ತಾಣವಾ ಗಿದ್ದರಿಂದ ಇದು ಮಹತ್ವದ್ದಾಗಿದೆ.
ಅದರ ಬೆನ್ನ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗಗಳಾದ ಜೆಕೋಬಾಬಾದ್, ಬೊಲಾರಿ, ಸ್ಕರ್ದು ಮೊದಲಾದ ಜಾಗಗಳಲ್ಲಿಯೂ ಭಾರತ ಹಾನಿ ಉಂಟುಮಾಡಿದೆ. ಇದಾಗಿ ಸ್ವಲ್ಪ ಸಮಯದಲ್ಲಿಯೇ ಪಾಕಿಸ್ತಾನದ ರಕ್ಷಣಾ ಜಾಲಗಳಲ್ಲಿ ಹೈ ಅಲರ್ಟ್ ಸಂದೇಶಗಳು ಓಡಾಡಲು ಆರಂಭಿಸಿವೆ. ಮುಂದಿನ ಕಾರ್ಯಾಚರಣೆಯಲ್ಲಿ ಭಾರತವು ಪಾಕಿಸ್ತಾನದ ಪರಮಾಣು ನಿಯಂತ್ರ ಣದ ಮೂಲ ಸೌಕರ್ಯವನ್ನೇ ಗುರಿಯಾಗಿಸಬಹುದು, ಪಾಕಿಸ್ತಾನದ ಕಾರ್ಯತಂತ್ರದ ವಿಭಾಗಕ್ಕೆ ಸಂಬಂಧಿಸಿದ ಕಚೇರಿಯನ್ನೂ ನಾಶಪಡಿಸಬಹುದು ಎಂದು ಪಾಕ್ ಗುಪ್ತಚರ ಇಲಾಖೆ ತಿಳಿಸಿದೆ. ಈ ಹಂತದಲ್ಲಿ ಪಾಕಿಸ್ತಾನ ತುರ್ತು ಹಸ್ತಕ್ಷೇಪ ಮಾಡುವಂತೆ ಅಮೆರಿಕವನ್ನು ಕೇಳಿಕೊಂಡಿದೆ.
ಎರಡೂ ಕಡೆಯಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ನಿರೀಕ್ಷೆಯಲ್ಲಿದ್ದರೂ, ಉಭಯ ದೇಶಗಳೊಂದಿಗೆ ಸಂಪರ್ಕದಲ್ಲಿದ್ದರೂ ಅದುವರೆಗೂ ತಟಸ್ಥವಾಗಿದ್ದ ಅಮೆರಿಕ ಇದರ ಒಳಗೆ ಕಾಲಿಟ್ಟಿದೆ.
ಹಾಗೆ ಮಧ್ಯಸ್ಥಿಕೆ ವಹಿಸಲು ಬಂದ ಅಮೆರಿಕ ಕಡಿದು ಕೊಮಟೆ ಹಾಕಿದ್ದು ಏನೂ ಇಲ್ಲ. ಅಮೆರಿಕ ಮಾಡಿದ ಒಂದೇ ಕೆಲಸವೆಂದರೆ, ’ನಿಮ್ಮ ಅಹಂಕಾರ ಬಿಟ್ಟು, ಭಾರತಕ್ಕೆ ಕರೆ ಮಾಡಿ ಯುದ್ಧ ವಿರಾಮಕ್ಕೆ ಕೇಳಿಕೊಳ್ಳಿ’ ಎಂದು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಮ್ಒ) ಕಾಶಿಫ್ ಅಬ್ದುಗೆ ತಾಕೀತು ಮಾಡಿದ್ದು. ಅದಕ್ಕೆ ಮಣಿದ ಅಬ್ದು ಭಾರತದ ಡಿಜಿಎಮ್ಒ ರಾಜಿವ್ ಘೈ ಅವರಿಗೆ ಕರೆ ಮಾಡಿ ಕದನವಿರಾಮಕ್ಕೆ ಕೇಳಿಕೊಂಡಿದ್ದಾರೆ.
ಭಾರತ ತಾತ್ಕಾಲಿಕ ವಿರಾಮಕ್ಕೆ ಒಪ್ಪಿಕೊಂಡಿದೆ. ಅದನ್ನೇ ತಮ್ಮ ಸಾಧನೆ ಎಂಬಂತೆ ಟ್ರಂಪ್ ಟ್ವೀಟ್ ಮಾಡಿಕೊಂಡಿದ್ದಾರೆ. ಯುದ್ಧವಿರಾಮಕ್ಕೆ ಇದೇ ಕಾರಣ ಇರಬಹುದು, ಇಲ್ಲದೆಯೂ ಇರಬಹುದು. ಇದೇ ಕಾರಣವಾದರೂ ಒಂದಷ್ಟು ಪ್ರಶ್ನೆ ಸಹಜ. ಭಾರತವು ‘ಆಪರೇಷನ್ ಸಿಂದೂರ’ವನ್ನು ಕಾರ್ಯಾಚರಣೆ ಎಂದು ಕರೆದಿತ್ತೇ ವಿನಾ ಯುದ್ಧ ಎಂದು ಘೋಷಿಸಲಿಲ್ಲ.
ಭಾರತದಲ್ಲಿ ಸೇನಾ ಮುಖ್ಯಸ್ಥರಾಗಲಿ, ರಕ್ಷಣಾ ಮಂತ್ರಿಯಾಗಲಿ ಯುದ್ಧವನ್ನು ಘೋಷಿಸುವಂತಿಲ್ಲ. ಆ ಅಧಿಕಾರ ಮಾಧ್ಯಮದವರಿಗೂ ಇಲ್ಲ, ಪ್ರಧಾನಿಗೂ ಇಲ್ಲ. ಭಾರತದಲ್ಲಿ ಆ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ. ಅದೂ ಸಂಸತ್ತಿನ ಅಥವಾ ಮಂತ್ರಿಮಂಡಳದ ಒಪ್ಪಿಗೆಯ ಮೇರೆಗೇ ವಿನಾ, ಎಷ್ಟೇ ಪ್ರಭಾವಿ ನಾಯಕರು ಹೇಳಿದರೂ ಅದು ಅಧಿಕೃತವಲ್ಲ.
ಹಾಗಿರುವಾಗ ಇನ್ನೂ ಘೋಷಣೆಯೇ ಆಗದ ಕದನದ ವಿರಾಮ ಹೇಗೆ ಆಗಬೇಕು? ಮೊನ್ನೆ ನಡೆದದ್ದು ಮಿಲಿಟರಿ ಕಾರ್ಯಾಚರಣೆಯ ತಾತ್ಕಾಲಿಕ ಸ್ಥಗಿತವೇ ಶಿವಾಯ್ ಕದನವಿರಾಮವಲ್ಲ. ಆದರೂ ಹೆಸರಿಗೆ ‘ಕದನವಿರಾಮ’ ಅಂತಲೇ ಇಟ್ಟುಕೊಳ್ಳೋಣ. ಇನ್ನೊಂದು ಪ್ರಶ್ನೆ, ಪಾಕಿಸ್ತಾನ ವಿರಾಮ ಕೇಳಿದರೆ ಸದ್ಯ ಕೈ ಮೇಲಾಗಿರುವ ಭಾರತ ಏಕೆ ಒಪ್ಪಬೇಕು? ಈ ಪ್ರಶ್ನೆ ಎರಡೂ ಕಡೆ ಹರಿತವಾಗಿರುವ ಕತ್ತಿಯಂತೆ. ಇಂಥ ಪರಿಸ್ಥಿತಿಯಲ್ಲಿ ಹೇಗೆ ಉತ್ತರಿಸಿದರೂ ತಪ್ಪು ಹುಡುಕಬಹುದು.
ವಿರಾಮಕ್ಕೆ ಅವಕಾಶ ಕೊಟ್ಟರೆ, ನಿನ್ನೆಯಿಂದ ಬರುತ್ತಿರುವ ಟೀಕೆಗಳ ಮಹಾಪೂರಗಳೇ ಉದಾಹರಣೆ. ಪಾಕಿಸ್ತಾನವನ್ನು ನಂಬಬಾರದು, ಪಾಕಿಸ್ತಾನ ಗೋಸುಂಬೆ, ಎಪ್ಪತ್ತೊಂದರ ನಂತರ ಎರಡು ದೇಶಗಳ ನಡುವೆ ನಿರ್ಣಾಯಕ ಯುದ್ಧ ಆಗಿರಲಿಲ್ಲ, ಈಗ ಒದಗಿಬಂದ ಅವಕಾಶ ತಪ್ಪಿಸಿಕೊಂಡೆವು, ಅಮೆರಿಕಕ್ಕೆ ಮಣಿದೆವು, ಚೀನಾದ ಒತ್ತಡಕ್ಕೆ ಸಿಲುಕಿದೆವು, ನೂರಾರು ಕಾರಣ ಹೇಳಬಹುದು.
ಒಂದೊಮ್ಮೆ ವಿರಾಮಕ್ಕೆ ಅವಕಾಶ ಕೊಡದಿದ್ದರೆ ಏನಾಗುತ್ತಿತ್ತು? ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇದುವರೆಗೂ ’ಶಾಂತಿಪ್ರಿಯ ರಾಷ್ಟ್ರ’ ಎಂದು ಕರೆಸಿಕೊಳ್ಳುತ್ತಿದ್ದ ಭಾರತದ ಛವಿ ಕ್ಷೀಣಿಸುತ್ತಿತ್ತು. ನಮ್ಮ ದೇಶದ ಇರುವ ಅರೆಕಾಲಿಕ ಶಾಂತಿಪ್ರಿಯರೂ ಸೇರಿದಂತೆ, ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂಥ ಸಣ್ಣ ಸಣ್ಣ ರಾಷ್ಟ್ರಗಳೂ ’ಭಾರತ ಪಾಕಿಸ್ತಾನಕ್ಕೆ ಒಂದು ಅವಕಾಶವನ್ನು ಕೊಡಬೇಕಾಗಿತ್ತು’ ಎಂದು ಉಪದೇಶ ಮಾಡುತ್ತಿದ್ದವು.
ಅಷ್ಟಕ್ಕೂ ಪಾಕಿಸ್ತಾನ ತಾನಾಗಿಯೇ ಬಂದು ಕೇಳದಿದ್ದರೆ ಭಾರತ ಒಪ್ಪುತ್ತಲೂ ಇರಲಿಲ್ಲ. ಏಕೆಂದರೆ ಈ ಮೊದಲೂ ಘರ್ಷಣೆ ಹೆಚ್ಚದಂತೆ ನೋಡಿಕೊಳ್ಳಿ ಎಂದು ಇದೇ ಟ್ರಂಪ್ ಹೇಳಿದ್ದರು. ಕಾರ್ಯಾ ಚರಣೆ ಆರಂಭವಾದ ನಂತರ ಸೌದಿ ಅರೇಬಿಯಾದ ಉಪರಕ್ಷಣಾ ಸಚಿವರು ಭಾರತ-ಪಾಕಿಸ್ತಾನ ಎರಡೂ ದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳಿ ಎಂದಿದ್ದರು.
ಕೆಲವು ಸಂದರ್ಭದಲ್ಲಿ ಮಧ್ಯಸ್ಥಿಕೆಗೆ ಬಂದವರನ್ನು ಕಡೆಗಣಿಸಬಹುದು, ಯಾರೊಂದಿಗೆ ಪೈಪೋ ಟಿಗೆ ಇಳಿದಿದ್ದೇ ವೆಯೋ ಅವರೇ ಸ್ವತಃ ಕೇಳಿಕೊಂಡಾಗ ತಿರಸ್ಕರಿಸುವುದು ಒಳ್ಳೆಯದಲ್ಲ. ಯುದ್ಧ ದಿಂದ ಸಿಗುವಂಥದ್ದು ಯುದ್ಧವಿಲ್ಲದೇ ಸಿಕ್ಕರೆ ಯಾಕಾಗಬಾರದು? ಹಾನಿಯ ನಂತರವೂ ದಕ್ಕದೇ ಇರುವುದು ಹಾನಿಯಾಗದೇ ದಕ್ಕಿದರೆ ಯಾರಿಗೆ ಬೇಡ? ಅಷ್ಟಕ್ಕೂ ದುರ್ಬಲರ ಕಡೆಯಿಂದಲೇ ವಿರಾಮದ ಉಲ್ಲಂಘನೆಯಾದರೆ ಸಬಲರಿಗೆ ಯಾವ ಹಾನಿಯೂ ಇಲ್ಲವಲ್ಲ? ಯಾರು ಏನೇ ಹೇಳಿದರೂ, ಒಂದಂತೂ ಸತ್ಯ- ಇಂದಿನ ದಿನದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ, ಆಂತರಿಕವಾಗಿ ಛಿದ್ರ ಛಿದ್ರವಾಗಿರುವ ಪಾಕಿಸ್ತಾನಕ್ಕಿಂತ ಭಾರತ ಎಲ್ಲ ರೀತಿಯಿಂದಲೂ ಸಶಕ್ತವಾಗಿದೆ. ಭಾರತಕ್ಕೆ ಇರುವ ಕೊರತೆಯೆಂದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನಿಕರ ಮಾತ್ರ. ಉಳಿದಂತೆ ಪಾಕಿಸ್ತಾನಕ್ಕೆ ಹೋಲಿಸಿದರೆ ಯಾವ ಕೊರತೆಯೂ ಇಲ್ಲ.
ಇನ್ನು ಇದನ್ನು ಕದನವೆನ್ನಿ, ಕಾರ್ಯಾಚರಣೆಯೆನ್ನಿ, ಒಂದು ನಿರ್ಣಯವಂತೂ ಆಗಬೇಕು. ಎರಡೂ ದೇಶಗಳು ‘ನಾವೇ ಗೆದ್ದೆವು’ ಎಂದು ಮುಂದಿನ ಎರಡು ದಶಕ ಹೇಳಿಕೊಂಡು ಓಡಾಡು ವಂತಾಗಬಾರದು. ಕಾದು ನೋಡೋಣ!