Keshava Prasad B Column: ಇರಾನ್ ಯುದ್ಧದ ಪರಿಣಾಮಗಳನ್ನು ಭಾರತ ಹೇಗೆ ಎದುರಿಸುತ್ತಿದೆ ?
2026ರ ಫೆಬ್ರವರಿ 28ಕ್ಕೆ ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ಸೇನಾಪಡೆ ಯುದ್ಧ ಆರಂಭಿಸಿ ಒಂದು ತಿಂಗಳೇ ಆಯಿತು. ಈಗಲೂ ಸಮರ ಅಂತ್ಯವಾಗಿಲ್ಲ. ಇದರ ಪರಿಣಾಮವಾಗಿ ಈ ಸಂಘರ್ಷದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಎಲ್ಲ ದೇಶಗಳ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರಿದೆ.
-
ಮನಿ ಮೈಂಡೆಡ್
ಅಮೆರಿಕದಲ್ಲಿ ಪೆಟ್ರೋಲ್ ಅನ್ನು ‘ಗ್ಯಾಸೊಲಿನ್’ ಎಂದು ಕರೆಯುತ್ತಾರೆ. ಆದ್ದರಿಂದ ನಮ್ಮಲ್ಲಿ ಅನೇಕ ಮಂದಿಗೆ ಅಮೆರಿಕದಲ್ಲಿ ಗ್ಯಾಸೋಲಿನ್ ದರ ಏರಿದೆಯಂತೆ ಎಂದರೆ ಏನೆಂದು ಅರ್ಥವಾಗಲಿಕ್ಕಿಲ್ಲ. ನಾಲ್ಕು ವರ್ಷಗಳ ಬಳಿಕ ಟ್ರಂಪ್ ಆಳ್ವಿಕೆಯಲ್ಲಿ ಅಮೆರಿಕ ದಲ್ಲೂ ಪೆಟ್ರೋಲ್ ದರದಲ್ಲಿ 4 ಡಾಲರ್ ಏರಿಕೆಯಾಗಿದೆ.
ಡೀಸೆಲ್ ದರವೂ ಅಲ್ಲಿ 1.70 ಡಾಲರ್ ಹೆಚ್ಚಳವಾಗಿದೆ ಎಂದು ಬಿಬಿಸಿ ವರದಿ ತಿಳಿಸಿದೆ. ಜಗತ್ತಿನಲ್ಲೇ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಅಮೆರಿಕದಲ್ಲಿಯೇ 2022ರ ಬಳಿಕ ಮೊದಲ ಬಾರಿಗೆ ಈಗ ದರ ಏರಿಕೆಯಾಗಿದೆ!
2026ರ ಫೆಬ್ರವರಿ 28ಕ್ಕೆ ಇರಾನ್ ವಿರುದ್ಧ ಅಮೆರಿಕ- ಇಸ್ರೇಲ್ ಸೇನಾಪಡೆ ಯುದ್ಧ ಆರಂಭಿಸಿ ಒಂದು ತಿಂಗಳೇ ಆಯಿತು. ಈಗಲೂ ಸಮರ ಅಂತ್ಯವಾಗಿಲ್ಲ. ಇದರ ಪರಿಣಾಮ ವಾಗಿ ಈ ಸಂಘರ್ಷದಲ್ಲಿ ನೇರವಾಗಿ ಭಾಗವಹಿಸದಿದ್ದರೂ, ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಎಲ್ಲ ದೇಶಗಳ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರಿದೆ.
ಭಾರತವಂತೂ ಮೂರನೇ ಅತಿ ದೊಡ್ಡ ತೈಲ ಆಮದು ರಾಷ್ಟ್ರ ಅಷ್ಟೊಂದು ಅವಲಂಬನೆ ಇದೆ. ಗಮನಿಸಿ, ಜಗತ್ತಿನ ಕನಿಷ್ಠ 85 ದೇಶಗಳು ಈ ವರ್ಷ ಫೆಬ್ರವರಿ ಯಿಂದೀಚೆಗೆ ಪೆಟ್ರೋಲ್-ಡೀಸೆಲ್ ದರ ಏರಿಸಿವೆ. ಅಮೆರಿಕ-ಯುರೋಪ್, ವಿಯೆಟ್ನಾಂ, ನೈಜೀರಿಯಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಇವುಗಳಲ್ಲಿ ಸೇರಿವೆ.
ಇದನ್ನೂ ಓದಿ: Keshava Prasad B Column: ಇರಾನ್ ಯುದ್ಧದಿಂದ ಭಾರತಕ್ಕೆ ನಷ್ಟವೇ, ಲಾಭವೇ ?!
ವಿಯೆಟ್ನಾಂನಲ್ಲಿ ತೈಲ ದರ ಶಕಡ 50 ಹೆಚ್ಚಳವಾಗಿದೆ. ಕಾಂಬೋಡಿಯಾದಲ್ಲಿ ಶೇಕಡಾ 68, ಲಾವೋಸ್‌ನಲ್ಲಿ ಶೇಕಡಾ 33, ಸಿಂಗಾಪುರದಲ್ಲಿ ಶೇಕಡಾ 16.6 ಹೆಚ್ಚಳವಾಗಿದೆ. ಜರ್ಮನಿ ಯಲ್ಲಿ ಶೇಕಡಾ 17, ಬ್ರಿಟನ್ʼನಲ್ಲಿ ಶೇಕಡಾ 152 ಜಿಗಿದಿದೆ. ಟರ್ಕಿ, ಬ್ರೆಜಿಲ್, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ದರ ಏರಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಕಾರ ಜನ ಸಾಮಾನ್ಯರಿಗೆ ತೊಂದರೆ ಆಗಬಾರದು ಎಂದು ಪೆಟ್ರೋಲ್-ಡೀಸೆಲ್ ದರವನ್ನು ಏರಿಸಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧ 2-3 ವಾರಗಳಲ್ಲಿ ಅಂತ್ಯ ವಾಗಲಿದೆ ಎಂದು ಘೋಷಿಸಿದ್ದಾರೆ. ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳ ಉದ್ದೇಶ ಬಹುತೇಕ ಪೂರ್ಣವಾಗಿದೆ. ಮುಂದಿನ 2-3 ವಾರಗಳ ಕಾಲ ಇರಾನಿಗೆ ಬಲವಾದ ಹೊಡೆತ ನೀಡಲಿದ್ದೇವೆ. ಬಳಿಕ ಸಮರ ಸಮಾಪ್ತಿಯಾಗಲಿದೆ ಎಂದು ಹೇಳಿದ್ದಾರೆ.
ಇರಾನ್ ನಲ್ಲಿ ಆಡಳಿತವನ್ನು ಬದಲಾವಣೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಅದರ ಅಣ್ವಸ್ತ್ರ ಕಾರ್ಯಕ್ರಮಗಳನ್ನು ನಾಶಪಡಿಸುವುದು ಉದ್ದೇಶವಾಗಿತ್ತು. ಆದರೆ, ಇರಾನಿನ ಪ್ರಮುಖ ನಾಯಕರೆಲ್ಲ ಹತರಾಗಿರುವುದರಿಂದ ಆಡಳಿತದಲ್ಲಿ ಬದಲಾವಣೆ ತಾನಾಗಿಯೇ ಆಗಿದೆ. ಈಗಿನ ನಾಯಕರು ಹಳಬರಷ್ಟು ಕಟ್ಟರ್ ಮೂಲಭೂತವಾದಿಗಳು ಅಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಈ ಯುದ್ಧ ಮಾಡದಿರುತ್ತಿದ್ದರೆ ಇರಾನಿನ ಕ್ಷಿಪಣಿಗಳು ಶೀಘ್ರದಲ್ಲೇ ಅಮೆರಿಕಕ್ಕೆ ಅಪ್ಪಳಿಸು ತ್ತಿದ್ದವು. ಇರಾನ್ ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸಿತ್ತು ಎಂದು ಟ್ರಂಪ್ ಹೇಳಿದ್ದಾರೆ. ಈಗ ಇರಾನ್ ನ ನೌಕಾಪಡೆ, ವಾಯುಪಡೆ ನಿಷ್ಕ್ರಿಯವಾಗಿದೆ. ರೆವೆಲ್ಯೂಷನರಿ ಗಾರ್ಡ್ ವಿರುದ್ಧ ಹಿಂದೆಂದೂ ಕಂಡರಿಯದಷ್ಟು ಯುದ್ಧ ನಡೆದಿದೆ.
ಯಾವ ಕಾರಣಕ್ಕೂ ಅದು ಅಣ್ವಸ್ತ್ರಗಳನ್ನು ಹೊಂದಬಾರದು. ಅದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ. ಇದೆಲ್ಲ ಸರಿ, ಆದರೆ ಯುದ್ಧದ ಪರಿಣಾಮಗಳು ಇದೀಗ ಇಡೀ ಜಗತ್ತನ್ನೇ ಕಾಡುತ್ತಿದೆ. ಸ್ಟಾಕ್ ಮಾರ್ಕೆಟ್‌ನಿಂದ ಆಟೊ ರಿಕ್ಷಾ ಗ್ಯಾಸ್ ತನಕ ಅಲ್ಲೋಲ ಕಲ್ಲೋಲವಾಗಿದೆ.
ರಾಜರಾಜೇಶ್ವರಿ ನಗರದ ಮೆಟ್ರೊ ರೈಲ್ವೆ ಸ್ಟೇಶನ್‌ನಲ್ಲಿ ಯುದ್ಧಕ್ಕೂ ಮುನ್ನ ಏನಿಲ್ಲ ದಿದ್ದರೂ 30-40 ಆಟೋ ರಿಕ್ಷಾಗಳು ಸಾಲಾಗಿ ಸಿಗುತ್ತಿದ್ದವು. ಈಗ ಆಟೋ ಸ್ಟ್ಯಾಂಡ್ ನಲ್ಲಿ ಬೆರಳೆಣಿಕೆಯ ಆಟೋಗಳು ಮಾತ್ರ ಇವೆ. ಕೇಳಿದ್ರೆ ಮೂರು ದಿನಗಳಿಂದ ಗ್ಯಾಸ್ ಸಿಗುತ್ತಿಲ್ಲ ಎನ್ನುತ್ತಾರೆ. ಇದೊಂದು ಪುಟ್ಟ ಉದಾಹರಣೆ ಮಾತ್ರ. ಯುದ್ಧ ಇನ್ನೂ ನಾಲ್ಕು ವಾರ ನಡೆದರೆ ಪರಿಸ್ಥಿತಿ ಏನಾಗಬಹುದಪ್ಪಾ ಎಂಬ ಚಿಂತೆಯ ಗೆರೆಗಳು ಈಗ ಎಲ್ಲರ ಮುಖ ದಲ್ಲೂ ಮೂಡಿದೆ.
ಟ್ರಾವೆಲ್ಸ್ ಮಾಲೀಕರು ಕಾರುಗಳು ಧೂಳು ತಿನ್ನುತ್ತಿವೆ ಎನ್ನುತ್ತಿದ್ದಾರೆ. ಹೋಟೆಲ್, ದರ್ಶಿನಿ ಮಾಲೀಕರು ಸೌದೆ ಒಲೆಯನ್ನು ಬಳಸಲು ಕಲಿಯುತ್ತಿದ್ದಾರೆ. ಹೊಸ ಸೌದೆ ಒಲೆಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಎಲೆಕ್ಟ್ರಿಕ್ ಕಾರುಗಳ ಮಾರಾಟ ದಿನೇದಿನೇ ಹೆಚ್ಚುತ್ತಿದೆ. ಸೂಕ್ಷ್ಮ ವಾಗಿ ನೋಡಿದ್ರೆ, ಭಾರತೀಯರು ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಪರ್ಯಾಯ ಯಾವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಲು ಶುರು ಮಾಡಿದ್ದಾರೆ.
ಸೌದೆ ಒಲೆಯಿಂದ ಹಿಡಿದು, ಗೋಬರ್ ಗ್ಯಾಸ್, ಸೋಲಾರ್, ಇಂಡಕ್ಷನ್ ಸ್ಟೌವ್, ಎಲೆಕ್ಟ್ರಿಕ್ ಕಾರು ಹೀಗೆ ಪಟ್ಟಿ ಮುಂದುವರಿದಿದೆ. ಈಗಿನ ಸನ್ನಿವೇಶದಲ್ಲಿ ತಾತ್ಕಾಲಿಕ ಪರಿಹಾರ ಮತ್ತು ಶಾಶ್ವತ ಪರಿಹಾರ ಎರಡೂ ಅಗತ್ಯ. ಅದೇ ರೀತಿ ಇಂಧನ ಬಿಕ್ಕಟ್ಟಿನ ಬಗ್ಗೆ ಜನರ ಮಟ್ಟದಲ್ಲಿ ಜಾಗೃತಿಯ ಜತೆಗೆ ಸರಕಾರದ ಮಟ್ಟದಲ್ಲಿ ಕಾರ್ಯತಂತ್ರಗಳು ನಡೆಯಬೇಕಾಗಿದೆ.
ಭಾರತವು ತಾತ್ಕಾಲಿಕ ಪರಿಹಾರವಾಗಿ ರಷ್ಯಾ ಸೇರಿದಂತೆ 40 ಮೂಲಗಳಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ. ಕೊಲ್ಲಿ ರಾಷ್ಟ್ಟ್ರಗಳ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುತ್ತಿದೆ. 2026ರ ಮಾರ್ಚ್‌ನಲ್ಲಿ ರಷ್ಯಾದಿಂದ ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗಿದೆ.
ರಷ್ಯಾದಿಂದ ದಿನಕ್ಕೆ 15 ಲಕ್ಷ ಬ್ಯಾರೆಲ್‌ಗೂ ಹೆಚ್ಚು ಕಚ್ಚಾ ತೈಲವನ್ನು ತರಿಸಿಕೊಳ್ಳಲಾಗಿದೆ. ಇರಾಕ್, ಸೌದಿ ಅರೇಬಿಯಾ, ಯುಎಇಯಿಂದ ಮಾರ್ಚ್‌ನಲ್ಲಿ ತೈಲ ಆಮದು 17 ಪಸೆಂಟ್ ತನಕ ಇಳಿಕೆಯಾಗಿದೆ. ಆದರೆ ಅಮೆರಿಕದಿಂದ 67 ಪಸೆಂಟ್ ಮತ್ತು ನೈಜೀರಿಯಾದಿಂದ 180 ಪರ್ಸೆಂಟ್ ಹೆಚ್ಚಳವಾಗಿದೆ.
ಗಲ್ಫ್ʼನಿಂದ ತರಬಾರದು ಎಂದಲ್ಲ, ಈಗ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಮೂಲಕ ಪೂರೈಕೆ ಕುಸಿದಿದೆ. ಯಾವಾಗ ಸರಿ ಹೋಗಲಿದೆ ಎಂಬುದೂ ಅನಿಶ್ಚಿಯವಾಗಿದೆ. ಮೂರ್ನಾಲ್ಕು ವಾರಗಳಲ್ಲಿ ಸಮರ ಅಂತ್ಯವಾದರೂ, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಮತ್ತಷ್ಟು ಕಾಲಾವಕಾಶ ಬೇಕಾದೀತು. ಅಲ್ಲಿಯವರೆಗೆ ವ್ಯವಸ್ಥೆ ಏನು? ಹೀಗಾಗಿ ಕೊಲ್ಲಿಯೇ ತರ ರಾಷ್ಟ್ರಗಳಿಂದ ಆಮದು ಹೆಚ್ಚಳವಾಗಿದೆ.
ಸ್ವಾರಸ್ಯವೇನೆಂದರೆ ಏಳು ವರ್ಷಗಳ ಬಳಿಕ ಭಾರತವು ಇರಾನ್ʼನಿಂದ ಕಚ್ಚಾ ತೈಲ ಹೊತ್ತ ಟ್ಯಾಂಕರ್ ಅನ್ನು ತರಿಸಿಕೊಳ್ಳುತ್ತಿದೆ. ಅಮೆರಿಕದ ನಿಬಂಧದ ಪರಿಣಾಮ 2019ರ ಮೇ ನಂತರ ಇರಾನ್ ತೈಲ ಆಮದು ಬಂದ್ ಆಗಿತ್ತು. ಸುಮಾರು 6 ಲಕ್ಷ ಬ್ಯಾರಲ್ ಆಯಿಲ್ ಗುಜರಾತಿಗೆ ಬರುತ್ತಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ಹೊರತಾಗಿಯೂ ಭಾರತವು ಪೆಟ್ರೋಲ್-ಡೀಸೆಲ್ ದರಗಳನ್ನು ಸ್ಥಿರವಾಗಿಟ್ಟಿದೆ. ಇದರ ಹಿಂದೆ ಸರಕಾರದ ನೀತಿಗಳು ಬೆಂಬಲವೂ ಇದೆ. ಕೇಂದ್ರ ಸರಕಾರವು ಸಾರ್ವಜನಿಕ ತೈಲ ಕಂಪನಿಗಳಿಗೆ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರ್‌ಗೆ 10 ರುಪಾಯಿ ಕಡಿತಗೊಳಿಸಿದೆ. ಈ ಕಂಪನಿಗಳಿಗೆ (ಒಎಂಸಿ) ಭಾರಿ ಆಮದು ವೆಚ್ಚದ ಪರಿಣಾಮವಾಗಿ ದಿನಕ್ಕೆ 2400 ಕೋಟಿ ರುಪಾಯಿ ನಷ್ಟವಾಗುತ್ತಿದೆ. ಆದರೆ ಇದರ ಹೊರೆ ಯನ್ನು ಗ್ರಾಹಕರಿಗೆ ವರ್ಗಾಯಿಸಲು ಸರಕಾರ ಆಸ್ಪದ ನೀಡಿಲ್ಲ. ಭಾರತದ ಬಳಿ ಎರಡು ತಿಂಗಳಿನ ಖರ್ಚಿಗೆ ಸಾಕಾಗುವಷ್ಟು ಕಚ್ಚಾ ತೈಲ ದಾಸ್ತಾನು ಇದೆ.
ರಸಗೊಬ್ಬರ ಉತ್ಪಾದನೆಗೆ 70 ಪಸೆಂಟ್ ಅನಿಲ ಪೂರೈಸಲು ಸರಕಾರ ಆದ್ಯತೆ ನೀಡಿದೆ. ನಿಜ, ಜಪಾನ್ ಬಳಿ 254 ದಿನಗಳ ಖರ್ಚಿಗೆ ಆಗುವಷ್ಟು ತೈಲ ದಾಸ್ತಾನು ಇದೆ. ಚೀನಾದ ಹತ್ತಿರ 3-4 ತಿಂಗಳಾಗುವಷ್ಟು ಇದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಜಪಾನ್ ಸಣ್ಣ ದೇಶ. ಅದರ ಜನಸಂಖ್ಯೆ ಕಡಿಮೆ. ಅದನ್ನು ಭಾರತದ ಜತೆಗೆ ತುಲನೆ ಮಾಡಲಾಗದು. ಚೀನಾದ ಬಳಿಯೂ ಭಾರತಕ್ಕಿಂತ ಒಂದೆರಡು ತಿಂಗಳು ಹೆಚ್ಚು ಮಿಗುವಷ್ಟು ದಾಸ್ತಾನಿದೆ.
ವಿಶಾಖಪಟ್ಟಣಂ, ಮಂಗಳೂರು, ಪಾದೂರಿನಲ್ಲಿರುವ ತೈಲ ಸಂಗ್ರಹಣಾಗಾರಗಳು 2015 ರಿಂದೀಚೆಗೆ ಪೂರ್ಣಗೊಂಡಿವೆ. ಒಂದು ವೇಳೆ ಇವುಗಳೂ ರೆಡಿಯಾಗದಿರುತ್ತಿದ್ದರೆ ಈಗ ಪರಿಸ್ಥಿತಿ ಚಿಂತಾಜನಕವಾಗಿರುತ್ತಿತ್ತು.
ಯುದ್ಧದ ಸಂದರ್ಭ ಹಲವು ತಂತ್ರಗಾರಿಕೆಯನ್ನು ಮಾಡಬೇಕಾಗುತ್ತದೆ. ಹಾರ್ಮುಜ್ ಜಲಸಂಧಿಯ ಬದಲಿಗೆ ರೆಡ್ ಸೀ ಮೂಲಕ ತರಿಸಿಕೊಳ್ಳಬಹುದು. ರಷ್ಯಾ, ಅಮೆರಿಕದಿಂದ ಮತ್ತಷ್ಟು ತೈಲ ಆಮದು ಮಾಡಿಕೊಳ್ಳಬಹುದು. ಇವೆಲ್ಲವೂ ತಾತ್ಕಾಲಿಕ ಉಪಕ್ರಮಗಳು. ಇವುಗಳ ಜತೆಗೆ ಬೃಹತ್ ತೈಲಸಂಗ್ರಹಗಾರಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಗೋಬರ್ ಗ್ಯಾಸ್, ಸೋಲಾರ್ ಬಳಕೆಗೆ ನೆರವನ್ನು ಹೆಚ್ಚಿಸಬೇಕು. ಭಾರತವು ಇತರ ಹಲವಾರು ಆರ್ಥಿಕತೆ ಗಳಿಗಿಂತಲೂ ಹೆಚ್ಚು ಚೆನ್ನಾಗಿ ಇರಾನ್ ಯುದ್ಧದ ಪರಿಣಾಮಗಳನ್ನು ನಿರ್ವಹಿಸುತ್ತಿದೆ ಎಂದು ಬಹುರಾಷ್ಟ್ರೀಯ ಸ್ಟ್ಯಾಂಡರ್ಡ್ ಆಂಡ್ ಚಾರ್ಟರ್ಡ್ ಬ್ಯಾಂಕ್‌ನ ಭಾರತೀಯ ವಿಭಾಗದ ಸಿಇಒ ಆಗಿರುವ ಪಿಡಿ ಸಿಂಗ್ ವಿಶ್ವಾಸದಿಂದ ಹೇಳುತ್ತಾರೆ.
ಒಂದು ಸಲ ಯುದ್ಧ ಮುಗಿದು ಜಾಗತಿಕ ಆರ್ಥಿಕತೆ ಚೇತರಿಸುತ್ತಿದ್ದಂತೆ ಭಾರತ ಚಾಲಕ ಶಕ್ತಿಯಾಗಲಿದೆ ಎನ್ನುತ್ತಾರೆ ಸಿಂಗ್. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸಾಧ್ಯತೆಗಳ ಬಗ್ಗೆ ರಿಟೇಲ್ ಹೂಡಿಕೆದಾರರಿಗೆ ಅಪಾರ ವಿಶ್ವಾಸ ಇದೆ ಎಂಬುದಕ್ಕೆ ಷೇರು ಮಾರುಕಟ್ಟೆಯ ಅಂಕಿ ಅಂಶಗಳೇ ನಿದರ್ಶನ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2025-26ರಲ್ಲಿ 1.6 ಲಕ್ಷ ಕೋಟಿ ರುಪಾಯಿಗಳನ್ನು ಹಿಂತೆಗೆದುಕೊಂಡಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 8.5 ಲಕ್ಷ ಕೋಟಿ ರುಪಾಯಿ ಗಳ ಹೂಡಿಕೆ ಮಾಡಿದ್ದಾರೆ.ಭಾರತವು ತನ್ನ ವಿದೇಶಾಂಗ ನೀತಿಗಳಲ್ಲಿ ಸ್ವತಂತ್ರ ನಿರ್ಧಾರ ಗಳನ್ನು ಕೈಗೊಳ್ಳುವ ಸಾಮರ್ಥ್ಯ ಗಳಿಸಿದೆ. ಇದು ಸಕಾರಾತ್ಮಕ ಪ್ರಭಾವ ಬೀರಿದೆ. ಯಾವುದೇ ಸೂಪರ್ ಪವರ್ ಅಥವಾ ಒಕ್ಕೂಟಗಳಿಗೆ ಭಾರತ ಸೇರಿಲ್ಲ. ತನ್ನ ಹಿತಕ್ಕೆ ಬೇಕಾಗುವ ನಿರ್ಣಯಗಳನ್ನು ದೇಶ ಕೈಗೊಂಡಿದೆ. ಹಾಗಂತ ತನಗೂ ಲೋಕದ ವಿದ್ಯಮಾನಗಳಿಗೂ ಸಂಬಂಧವೇ ಇಲ್ಲ ಎಂಬಂತೆ ದೂರ ಸರಿದೂ ನಿಂತಿಲ್ಲ.
ಒಂದಿಲ್ಲೊಂದು ವಿಧದಲ್ಲಿ ವಿಶ್ವಸಮುದಾಯದ ಆಗುಹೋಗುಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲವಾಗಿದೆ. ನೆರೆಯ ಶ್ರೀಲಂಕಾ, ಬಾಂಗ್ಲದೇಶಕ್ಕೂ ತುರ್ತು ಸಂದರ್ಭದಲ್ಲಿ ತೈಲ ಕೊಟ್ಟು ಸಹಕರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಆದ್ಯತೆಯ ಮೇರೆಗೆ ಈಗ ದೇಶದಲ್ಲಿ ನಡೆಯುತ್ತಿರುವ ಎಲ್ಪಿಜಿ ವಿತರಣೆ. ಮನೆಮನೆಗಳಲ್ಲಿ ಅಡುಗೆ ಅನಿಲವನ್ನು ಅವಲಂಬಿಸ ಲಾಗುತ್ತಿದೆ.
ಇದಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಎಲ್ಲ ರಿಫೈನರಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಡೀಸೆಲ್ ಮತ್ತು ವೈಮಾನಿಕ ಇಂಧನ ಎಟಿಎಫ್ ರಫ್ತಿನ ಮೇಲೆ ರಫ್ತು ಸುಂಕ ವಿಧಿಸಲಾಗಿದೆ. ಹೀಗಾಗಿ ಅಡುಗೆ ಅನಿಲ ವಿತರಣೆ ಸ್ಥಿರವಾಗಿದೆ.
2025-26ರಲ್ಲಿ 2.29 ಲಕ್ಷ ಎಲೆಕ್ಟ್ರಾನಿಕ್ ವಾಹನಗಳು ಮಾರಾಟವಾಗಿದೆ. ಜನ ಪೆಟ್ರೋಲಿ ಯಂ ಇಂಧನಕ್ಕೆ ಪರ್ಯಾಯವಿದ್ದರೆ, ಅದು ಯುಕ್ತವಾಗಿದ್ದರೆ ಬೆಂಬಲಿಸುತ್ತಾರೆ. ಇರಾನ್ ಯುದ್ಧದ ಮೊದಲ ತಿಂಗಳಿನಲ್ಲಿಯೇ ವಿದ್ಯುತ್ ಚಾಲಿನ ಇಂಡಕ್ಷನ್ ಸ್ಟೌವ್ ಗಳಿಗೆ ಬೇಡಿಕೆ ಹೆಚ್ಚಿದೆ. ನವನವೀನ ಸೌದೆ ಒಲೆಗಳ ಮಾರಾಟದ ಭರಾಟೆ ಹೆಚ್ಚಿದೆ.
ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ ಕೂಡ 8 ಪಸೆಂಟ್ ವೃದ್ಧಿಸಿದೆ. 22.6 ಶತಕೋಟಿ ಯುಪಿಐ ವರ್ಗಾವಣೆಗಳು ನಡೆದಿವೆ. 23.5 ಪರ್ಸೆಂಟ್ ಹೆಚ್ಚಳವಾಗಿದೆ. ಇದೆಲ್ಲವೂ ಗಲ್ಫ್ ಬಿಕ್ಕಟ್ಟನ್ನು ಎದುರಿಸಬಲ್ಲ ಆಂತರಿಕ ಸಾಮರ್ಥ್ಯ ಭಾರತದ ಅರ್ಥವ್ಯವಸ್ಥೆಗೆ ಇದೆ ಎಂಬುದಕ್ಕೆ ತಾಜಾ ಸಾಕ್ಷಿಯಾಗಿದೆ.