ಶಶಾಂಕಣ
ನಮ್ಮ ರಾಜ್ಯದಲ್ಲಿ ಮದಗದ ಕೆರೆ ಹೆಸರಿನಿಂದ ಪ್ರಸಿದ್ಧವಾದ ಎರಡು ದೊಡ್ಡ ಕೆರೆಗಳಿವೆ. ಒಂದು ಶಿವಮೊಗ್ಗ ಜಿಲ್ಲೆಯ ಮಾಸೂರು ಸನಿಹದ ಮದಗದ ಕೆರೆ. ಇನ್ನೊಂದು, ಅದರಷ್ಟು ಪ್ರಸಿದ್ಧವಲ್ಲದ, ಕಡೂರು ಸನಿಹದ ಮದಗದ ಕೆರೆ. ಜತೆಗೆ, ‘ಮಾಯದಂಥ ಮಳೆ ಬಂತಣ್ಣ’ ಜನಪದ ಗೀತೆಯು ಕ್ಯಾಸೆಟ್ ಮೂಲಕ ಹಳ್ಳಿ ಹಳ್ಳಿಗಳನ್ನು ತಲುಪಿದ ಕಾಲದಲ್ಲಿ, ಈ ಎರಡನೆಯ ಮದಗದ ಕೆರೆ ಹೆಚ್ಚು ಪರಿಚಿತವಾಗಿರಲಿಲ್ಲ.
ಇತ್ತೀಚೆಗೆ ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಬಳಿ ಚಿರತೆಯೊಂದು ರಸ್ತೆಯಲ್ಲಿ ಸಾಗುತ್ತಿದ್ದವರ ಮೇಲೆ ಎರಗಿ, ಪರಚಿ ಗಾಯ ಮಾಡಿದ ಸುದ್ದಿ ಪ್ರಸಾರವಾಯಿತು. ಅಪ್ಪಟ ಬಯಲುಸೀಮೆ ಎನಿಸಿರುವ ಕಡೂರಿನಲ್ಲಿ ಸಾಕಷ್ಟು ಚಿರತೆಗಳಿವೆ. ವಿಶೇಷವೆಂದರೆ, ಅಲ್ಲಿನ ಎಮ್ಮೆದೊಡ್ಡಿಯ ಸುತ್ತಮುತ್ತ ಸಾಕಷ್ಟು ಕಾಡು ಸಹ ಇದೆ! ಅಂಥ ಕಾಡನ್ನು ಕೆಲವು ವರ್ಷಗಳ ಹಿಂದೆ ಕಂಡಾಗ ನನಗಾದ ಅಚ್ಚರಿ ಅಷ್ಟಿಷ್ಟಲ್ಲ. ಆ ಕಾಡಿನ ನಡುವೆ ಸಾಗಿಹೋಗಿದ್ದ ದಾರಿಯಲ್ಲಿ ನಾವಿಬ್ಬರು ಸೈಕಲ್ ತುಳಿಯುತ್ತಾ, ಮದಗದ ಕೆರೆ ನೋಡಲು ಹೋಗಿದ್ದ ನೆನಪು ಇಂದಿಗೂ ಹಸಿರಾಗಿದೆ.
ಮದಗದ ಕೆರೆ ಎಂದರೆ, ಯುವಜನರ, ಅದರಲ್ಲೂ ಜನಪದ ಗೀತೆಯನ್ನು ಇಷ್ಟಪಡುವವರ ಮನವನ್ನೇ ಗೆದ್ದ ಕಾಲ ಒಂದಿತ್ತು. ಅದು ಕ್ಯಾಸೆಟ್ ಯುಗ. ಕೆ.ಎಸ್.ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ ಕ್ಯಾಸೆಟ್ ನಾಡಿನೆಲ್ಲೆಡೆ ಜನಪ್ರಿಯವಾಗಿತ್ತು. ಅದರಲ್ಲಿನ ‘ಜೋಗದ ಸಿರಿ ಬೆಳಕಿನಲ್ಲಿ..’ ಹಾಡಂತೂ ಯುವಜನತೆಗೆ ಬಹಳ ಇಷ್ಟವಾಗಿತ್ತು. 1982-83ರ ಸಮಯ. ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಹಾಡಿ, ಕ್ಯಾಸೆಟ್ ಮಾಡಿ, ಹಳ್ಳಿಹಳ್ಳಿಗೂ ತಲುಪಿಸುವಲ್ಲಿ ಕ್ಯಾಸೆಟ್ ಕಂಪನಿಗಳ ಶ್ರಮ ಸಾಕಷ್ಟಿತ್ತು. ಆ ಮೂಲಕ, ಜನಸಾಮಾನ್ಯರು ಹಿಂದೆಂದೂ ಕೇಳಿರದ ಹಲವು ಭಾವಗೀತೆಗಳು ಹಳ್ಳಿಹಳ್ಳಿಗಳನ್ನೂ ಮುಟ್ಟಿದವು- ಸುಗಮ ಸಂಗೀತದ ಕ್ಯಾಸೆಟ್ ಆಂದೋಲನ ಇಲ್ಲದೇ ಇದ್ದಿದ್ದರೆ, ಬೇಂದ್ರೆಯವರ ‘ನಾಕು ತಂತಿ’ ಸಂಕಲನದ ಹಾಡುಗಳು ಜನಸಾಮಾನ್ಯರನ್ನು, ಹಳ್ಳಿಯ ಯುವ ಜನರನ್ನು ಮುಟ್ಟಲು ಸಾಧ್ಯವೇ ಇರಲಿಲ್ಲ.
ಇದನ್ನೂ ಓದಿ: Shashidhara Halady Column: ಕಾಡಿನಿಂದ ಹರಿದು ಬರುವ ನೀರು ಬಲುರುಚಿ !
ಕ್ಯಾಸೆಟ್ ಯುಗದಲ್ಲಿ ನಮ್ಮ ರಾಜ್ಯದ ಹಲವು ಕವಿಗಳ ಗೀತೆಗಳು, ಆಕರ್ಷಕವಾಗಿ ರಾಗ ಸಂಯೋಜನೆಗೊಂಡು, ಕ್ಯಾಸೆಟ್ ಮೂಲಕ ನಾಡಿನ ಮೂಲೆ ಮೂಲೆಯನ್ನು ತಲುಪಿದ್ದು, ಸುಗಮ ಸಂಗೀತ ಕ್ಷೇತ್ರದಲ್ಲಾದ ಒಂದು ಕ್ರಾಂತಿ. ಅಂಥ ಕ್ಯಾಸೆಟ್‌ಗಳ ನಡುವೆ, ಬಿ.ಕೆ. ಸುಮಿತ್ರ ಮತ್ತು ಇತರ ಕಲಾವಿದರು ಹಾಡಿದ್ದ ‘ಮಾಯದಂಥ ಮಳೆ ಬಂತಣ್ಣ, ಮದಗದ ಕೆರೆಗೆ’ ಹಾಡು ಗಮನ ಸೆಳೆದಿತ್ತು. ಆ ಸ್ವರ ಸಂಯೋಜನೆ, ರಾಗ ಮಾಧುರ್ಯ ಎಲ್ಲವೂ ಮನಸ್ಸಿಗೆ ಆಪ್ಯಾಯಮಾನವಾಗಿತ್ತು, ಹಾಡನ್ನು ಕೇಳಿದವರು ಮತ್ತೊಮ್ಮೆ ಗುನುಗುವಂತಿತ್ತು.
‘ಬಲ್ಲಾಳ ರಾಯನು ಮದಗದ ಕೆರೆಯನ್ನು ತೋಡಿಸುವ ಕಥೆ’ಯು ಆ ಹಾಡಿನಲ್ಲಿದೆ. ‘ಏರಿ ಮ್ಯಾಗಳ ಬಲ್ಲಾಳರಾಯ, ಕೆರೆಯ ಒಳಗಡೆ ಬೆಸ್ತರ ಹುಡುಗ..’ ಹೀಗೆ ಸಾಗುತ್ತದೆ ಆ ಹಾಡು. ನಮ್ಮ ರಾಜ್ಯದಲ್ಲಿ ಮದಗದ ಕೆರೆ ಹೆಸರಿನಿಂದ ಪ್ರಸಿದ್ಧವಾದ ಎರಡು ದೊಡ್ಡ ಕೆರೆಗಳಿವೆ. ಒಂದು ಶಿವಮೊಗ್ಗ ಜಿಲ್ಲೆಯ ಮಾಸೂರು ಸನಿಹದ ಮದಗದ ಕೆರೆ. ಇನ್ನೊಂದು, ಅದರಷ್ಟು ಪ್ರಸಿದ್ಧವಲ್ಲದ, ಕಡೂರು ಸನಿಹದ ಮದಗದ ಕೆರೆ. ಜತೆಗೆ, ‘ಮಾಯದಂಥ ಮಳೆ ಬಂತಣ್ಣ’ ಜನಪದ ಗೀತೆಯು ಕ್ಯಾಸೆಟ್ ಮೂಲಕ ಹಳ್ಳಿ ಹಳ್ಳಿಗಳನ್ನು ತಲುಪಿದ ಕಾಲದಲ್ಲಿ, ಈ ಎರಡನೆಯ ಮದಗದ ಕೆರೆ ಹೆಚ್ಚು ಪರಿಚಿತವಾಗಿರಲಿಲ್ಲ.
ಸನಿಹದ ಕಡೂರಿನಲ್ಲಿ ಗೆಳೆಯ ಸತ್ಯನಾರಾಯಣ ಅರಸರು ಇದ್ದರು. ಒಂದು ಶನಿವಾರ, ಹೀಗೇ ಮಾತನಾಡುತ್ತಾ, ಮರುದಿನ ಮದಗದ ಕೆರೆ ನೋಡಲು ಹೋಗೋಣ ಎಂದು ನಿರ್ಧರಿಸಿದೆವು. 1980ರ ದಶಕ, ಮೋಟಾರ್ ಸೈಕಲ್, ಸ್ಕೂಟರ್‌ಗಳು ಇಂದಿನಷ್ಟು ಜನಪ್ರಿಯವಾಗಿರಲಿಲ್ಲ. ಬಾಡಿಗೆ ಸೈಕಲ್ ಮೇಲೆ ಹೋಗುವುದು ಎಂದಾಯಿತು. ಆ ದಿನಗಳಲ್ಲಿ ಕಡೂರಿನಿಂದ ಮದಗದ ಕೆರೆಗೆ ಉತ್ತಮ ರಸ್ತೆ ಇರಲಿಲ್ಲ.
ಅದು ಅಪ್ಪಟ ಗ್ರಾಮೀಣ ಪ್ರದೇಶ. ಜಲ್ಲಿಕಲ್ಲು ಹಾಕಿ ಸಪಾಟು ಮಾಡಿದ ರಸ್ತೆ. 15 ಕಿ.ಮೀ. ದೂರದ ಮದಗದ ಕೆರೆಗೆ ಹೋಗಲು, ಎಮ್ಮೆದೊಡ್ಡಿ ಮೂಲಕ ಸಾಗಬೇಕು ಎಂದು ಯಾರೋ ಹೇಳಿದರು. ಸರಿ ಎಂದು ಸೈಕಲ್ ತುಳಿಯತೊಡಗಿದೆವು. ಅಲ್ಲಿಗೆ ಆಗ ಇದ್ದದ್ದು ಒಂದು ಕಚ್ಚಾರಸ್ತೆ. ಈಗ ನೆನಪಿಸಿ ಕೊಂಡರೆ ಅಚ್ಚರಿ ಎನಿಸುತ್ತೆ, ಕಲ್ಲು ತುಂಬಿದ ಆ ರಸ್ತೆಯಲ್ಲಿ 15 ಕಿ.ಮೀ. ಸೈಕಲ್ ತುಳಿದಿದ್ದಾರೂ ಹೇಗೆ ಎಂಬ ಅಚ್ಚರಿಯಾಗುತ್ತದೆ.
ಸುಡುವ ಬಿಸಿಲು, ಅಂಕುಡೊಂಕಿನ ದಾರಿ. ನಮ್ಮ ಸೈಕಲ್ ಪಂಕ್ಚರ್ ಆಯಿತು! ಪಂಕ್ಚರ್ ಅಂಗಡಿ ಯು ಆ ಕುಗ್ರಾಮದಲ್ಲಿ ಎಲ್ಲಿದೆ? ಯಾರನ್ನೋ ಕೇಳಿಕೊಂಡು, ಒಂದೆರಡು ಕಿ.ಮೀ. ಅತ್ತಿತ್ತ ಸೈಕಲ್ ಅನ್ನು ತಳ್ಳಿಕೊಂಡು ಹೋಗಿ, ಒಂದು ಸಣ್ಣ ಗುಡಿಸಲಿನಂಥ ಮನೆ ತಲುಪಿದೆವು. ಅದೇ ಆ ಹಳ್ಳಿಗೆ ಪಂಕ್ಚರ್ ಅಂಗಡಿ! ಅಲ್ಲಿ ಸೈಕಲ್ ಟಯರಿಗೆ ಪಂಕ್ಚರ್ ಹಾಕಿಸಿ, ಅಂತೂ ಮದಗದ ಕೆರೆ ತಲುಪಿದೆವು.
ಆ ದಾರಿಯಲ್ಲಿ ಸಿಗುವ ಎಮ್ಮೆದೊಡ್ಡಿಯ ಸುತ್ತಲೂ ಇರುವ ಕಾಡನ್ನು ಕಂಡು ಅಚ್ಚರಿಯಾಯ್ತು. ಕಡೂರು-ಬೀರೂರು ಪ್ರದೇಶ ಅಪ್ಪಟ ಬಯಲುನಾಡು. ಅಲ್ಲಿಂದ ಸುಮಾರು 10 ಕಿ.ಮೀ. ದೂರದ ಎಮ್ಮೆದೊಡ್ಡಿಯಲ್ಲಿ ಅಷ್ಟೊಂದು ಸಮೃದ್ಧ ಕಾಡನ್ನು ಕಂಡು ನಿಜಕ್ಕೂ ವಿಸ್ಮಯ. ಇದು ಎಲೆ ಉದುರುವ ಕಾಡು. ಜೀವ ವೈವಿಧ್ಯವನ್ನು ಮಡಿಲಲ್ಲಿ ತುಂಬಿಕೊಂಡಿರುವ ಹಸಿರಿನ ಸಿರಿ! ಬಯಲು ಸೀಮೆಯ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸೂಕ್ತ ಎನಿಸುವ ಕಾಡು ಅದು.
ಆ ಕಾಡಿನ ನಡುವೆ ಸಾಗಿದ ದಾರಿಯಲ್ಲಿ ಸಂಚರಿಸಿ, ನಾವು ಮದಗದ ಕೆರೆ ತಲುಪಿದಾಗ, ಅಲ್ಯಾರೂ ಇರಲಿಲ್ಲ, ನಾವಿಬ್ಬರೇ! ಅದೆಲ್ಲಿಂದಲೋ ಬಂದ ಒಂದು ನಾಯಿ ಅಲ್ಲಿ ನಮ್ಮ ಬಳಿ ಸುಳಿದಾಡ ತೊಡಗಿತು! ಅದು ನಮ್ಮನ್ನು ಕಂಡು ತಿಂಡಿಯಾಸೆಗೆ ಬಂದಿತ್ತೋ ಏನೋ! ಆ ನಿರ್ಜನ ಪ್ರದೇಶದಲ್ಲಿ ಕಂಡ ನಾಯಿಯೂ ಅಚ್ಚರಿ ತಂದಿತು.
ಮದಗದ ಕೆರೆ ಏರಿ, ಉದ್ದವಾಗಿ ನೇರವಾಗಿತ್ತು. ಸುತ್ತಮುತ್ತಲೂ ಸಾಕಷ್ಟು ಮರಗಳಿದ್ದವು. ಆ ಏರಿಯ ಮೇಲೆ ಬೃಹದಾಕಾರದ ಕೆಲವು ಮರಗಳು, ಅದರಾಚೆ ವಿಶಾಲ ಜಲರಾಶಿ. ಮದಗದ ಕೆರೆಯ ನೀರನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಕಾರಣ, ಆ ಕೆರೆಯ ಹಿನ್ನೀರಿನಿಂದಾಚೆ ಬಾಬಾ ಬುಡನ್‌ಗಿರಿ ಮತ್ತು ಕೆಮ್ಮಣ್ಣುಗುಂಡಿಯ ಪರ್ವತ ಶ್ರೇಣಿ ಹರಡಿದೆ.
ದೂರದಲ್ಲಿರುವ ಆ ಸುಂದರ ಪರ್ವತ ಶ್ರೇಣಿಯ ಪ್ರತಿಬಿಂಬವು ಮದಗದ ಕೆರೆಯಲ್ಲಿ ಕಾಣಿಸುತ್ತದೆ! ಆ ಕೆರೆಯ ಏರಿಯ ಮೇಲೆ ಕುಳಿತು, ತಂದಿದ್ದ ಬುತ್ತಿಯನ್ನು ತಿಂದು ನಾಯಿಗೂ ತಿಂಡಿ ಹಾಕಿ, ಪುನಃ 15 ಕಿ.ಮೀ. ಸೈಕಲ್ ತುಳಿದು ಕಡೂರಿಗೆ ವಾಪಸಾಗುವಾಗ ಸಂಜೆಯಾಗಿತ್ತು!
ಮಲೆನಾಡಿನ ಮಡಿಲಲ್ಲಿರುವ ಈ ಮದಗದ ಕೆರೆ ಎಂದರೆ, ಅದೇಕೋ ಗೊತ್ತಿಲ್ಲ, ನನಗೆ ಬಹಳ ಆಪ್ತ. ಆ ಕೆರೆಯ ಸನಿಹಕ್ಕೆ ಹೋಗಿ, ಅದರ ನೀರಿನಲ್ಲಿ ಕಾಲಾಡಿಸಲು ಮತ್ತೊಂದು ಅವಕಾಶ ಇನ್ನೂ ಸಿಕ್ಕಿಲ್ಲ! ಆದರೂ, ಆ ಕೆರೆಯ ಪೂರ್ತಿ ನೋಟವನ್ನು, ಬೇರೆ ಸಂದರ್ಭಗಳಲ್ಲಿ ಎರಡು ಬಾರಿ ನೋಡುವ ಅವಕಾಶ ಸಿಕ್ಕಿತ್ತು. ಒಂದು ರೀತಿಯಲ್ಲಿ ಹೇಳುವುದಾದರೆ, ಅವೆರಡೂ ನೋಟಗಳು ಇಂದಿನ ಡ್ರೋಣ್ ವ್ಯೂ ಇದ್ದಂತೆ, ಅಂದರೆ ಬಹು ಎತ್ತರದಿಂದ ಕಂಡ ಕೆರೆಯ ದೃಶ್ಯ!
೧. ಇದೇ ರೀತಿ, ಹಿಂದೊಮ್ಮೆ ನಾನು ಮತ್ತು ಗೆಳೆಯ ಸತ್ಯನಾರಾಯಣ ಅರಸ್, ಬಾಬಾ ಬುಡನ್ಗಿರಿ ಯಿಂದ ಕೆಮ್ಮಣ್ಣುಗುಂಡಿಗೆ, ಪರ್ವತಗಳ ತುದಿಯಲ್ಲೇ ಚಾರಣ ಮಾಡಿದ್ದೆವು. ಮೈಸೂರು ಅರಸರ ಕಾಲದಲ್ಲಿ ನಿರ್ಮಿಸಿದ ಪಾವಟಿಗೆ ಕಲ್ಲು ಹಾಸಿದ ಒಂದು ಕುದುರೆ ದಾರಿ ಅಲ್ಲಿದೆ! ಬಾಬಾ ಬುಡನ್ ಗಿರಿ ಬೆಟ್ಟದ ತುದಿಯಲ್ಲಿರುವ ಗಾಳಿಕೆರೆಯ ಬಳಿಯೇ ಹಾದು, ಮುಂದೆ ಸಿಗುವ ಆ ದಾರಿ, ಪರ್ವತ ತುದಿಯಲ್ಲಿ ಶೋಲಾ ಕಾಡುಗಳ ಸೆರಗಿನಲ್ಲೇ ಸಾಗುತ್ತದೆ. ಆ ದಾರಿಯು ಬಹು ಎತ್ತರದಲ್ಲೇ ಸಾಗಿ, ಪರ್ವತ ಶ್ರೇಣಿಯ ಅತ್ಯಪೂರ್ವ ದರ್ಶನವನ್ನು ನೀಡುತ್ತದೆ.
ಶೋಲಾ ಕಾಡುಗಳ ಏರಿಳಿತದ ಅಂದವನ್ನು ನೋಡಲು, ಅವುಗಳ ನಡುವೆ ಹಸಿರು ಹಾಸಿದಂಥ ಬೆಟ್ಟದ ಇಳಿಜಾರನ್ನು ನೋಡಲು ಆ ದಾರಿಯಲ್ಲಿ ಸಾಗಬೇಕು! ಅದರಲ್ಲಿ ನಡೆಯುವಾಗ, ಕಣಿವೆಯ ತಳದಲ್ಲಿ, ಇದೇ ಮದಗದ ಕೆರೆ ಕಾಣಿಸುತ್ತದೆ. ಅಂದರೆ, ಎಮ್ಮೆದೊಡ್ಡಿಯ ಬಳಿ ಇರುವ ಮದಗದ ಕೆರೆ. ಆ ಎತ್ತರದಿಂದ ನೋಡುವಾಗ, ಆ ಕೆರೆಯ ಸ್ವರೂಪವು ಒಂದು ಸುಂದರ ನೀಲಿ ತಟ್ಟೆ!
ಅದರಾಚೆ, ಸಖರಾಯಪಟ್ಟಣದ ಬಳಿಯಿರುವ ಅಯ್ಯನಕೆರೆಯೂ ಅಲ್ಲಿಂದ ಚಂದವಾಗಿ ಕಾಣಿಸುತ್ತದೆ. ಆ ಬೆಟ್ಟದ ತುದಿಯಿಂದ, ಎರಡು ಸರೋವರಗಳನ್ನು ನೋಡುವ ಅವಕಾಶ.
೨. ಮದಗದ ಕೆರೆಯನ್ನು ಇನ್ನೊಮ್ಮೆ ನಾನು ಕಂಡ ಘಟನೆ ಬಹು ಸ್ವಾರಸ್ಯಪೂರ್ಣವಾಗಿದೆ. ಸಖರಾಯಪಟ್ಟಣದ ಬಳಿಯಿರುವ ಅಯ್ಯನಕೆರೆಗೆ ತಾಗಿಕೊಂಡು ಶಕುನಗಿರಿ ಎಂಬ ಬೆಟ್ಟವಿದೆ. ಆ ಬೆಟ್ಟದ ಚೂಪಾದ ಶಿಖರದ ಪ್ರತಿಬಿಂಬವು ಅಯ್ಯನಕೆರೆಯಲ್ಲಿ ಮೂಡಿದಾಗ ಕಾಣುವ ದೃಶ್ಯ ಅದ್ಭುತ. ಒಂದು ದಿನ ನಾವು ನಾಲ್ಕು ಮಂದಿ ಅಯ್ಯನಕೆರೆಯ ಏರಿಯ ಮೇಲೆ ನಡೆದು, ಅದರಾಚೆ ಸಿಗುವ ಕಾಲ್ದಾರಿ ಹಿಡಿದು, ಶಕುನಗಿರಿಗೆ ಚಾರಣ ಮಾಡಿದ್ದೆವು.
ಮೊದಲಿಗೆ ಶಿಲೆಯಿಂದ ಕಟ್ಟಿಸಿದ್ದ ಮೆಟ್ಟಿಲುಗಳು, ಅವು ತುಸು ಜರಿದುಹೋಗಿವೆ. ಮೇಲೇರಿ ದಂತೆಲ್ಲಾ ಶುದ್ಧ ಕಾಡುದಾರಿ. ಶಿಖರದ ಬಳಿ ದಟ್ಟವಾದ ಕಾಡು. ಆ ಗಿಡ ಮರಗಳ ನಡುವೆ, ಮುಳ್ಳು ಕಂಟಿಗಳ ನಡುವೆ ಒಂದು ಪಾಳುಬಿದ್ದ ಗುಡಿ ಇದೆ! ಆ ಕಾಡಿನ ನಡುವೆ ಅದ್ಯಾವ ಪುಣ್ಯಾತ್ಮ ದೇಗುಲವನ್ನು ಕಟ್ಟಿದ್ದನೋ!
ಹಿಂದೆ ಅಲ್ಲಿಗೆ ಸಾಕಷ್ಟು ಜನರು ಬರುತ್ತಿದ್ದರು ಎಂಬುದಕ್ಕೆ ಕುರುಹುಗಳಿದ್ದವು. ಸಖರಾಯಪಟ್ಟಣ ವನ್ನಾಳಿದ ಪಾಳೇಗಾರರು ಆ ಬೆಟ್ಟದ ತುದಿಯಲ್ಲಿ ದೇಗುಲ ಕಟ್ಟಿ, ತುದಿಯ ತನಕ ಮೆಟ್ಟಿಲುಗಳನ್ನು ಮಾಡಿಸಿರಬೇಕು. ವಿಸ್ಮಯದ ವಿಚಾರವೆಂದರೆ, ಮುಕುಂದೂರು ಸ್ವಾಮಿಗಳು, ತಮ್ಮ ಹರೆಯದಲ್ಲಿ, ಕಾಲಿಗೆ ಏಟಾದಾಗ, ಶಕುನಗಿರಿಯ ತುದಿಯ ದೇಗುಲದಲ್ಲಿ ಏಕಾಂಗಿಯಾಗಿದ್ದುಕೊಂಡು, ಕಾಲು ನೋವನ್ನು ವಾಸಿ ಮಾಡಿಕೊಂಡರು ಎಂದು ‘ಏಗ್ದಾದೆಲ್ಲಾ ಐತೆ’ (ಲೇ: ಬೆಳಗೆರೆ ಕೃಷ್ಣ ಶಾಸ್ತ್ರೀ) ಪುಸ್ತಕದಲ್ಲಿದೆ!
ಆ ಪಾಳುಗುಡಿಯನ್ನು ದಾಟಿ, ಇನ್ನೂ ಸ್ವಲ್ಪ ಮುಂದೆ ಹೋದೆವು. ಸುತ್ತಲೂ ದೊಡ್ಡ ದೊಡ್ಡ ಮರಗಳಿದ್ದುದರಿಂದ, ಆ ಎತ್ತರದಿಂದ ಸುಂದರ ಭೂದೃಶ್ಯ ಸರಿಯಾಗಿ ಕಾಣಿಸುತ್ತಿರಲಿಲ್ಲ. ಈ ನಡುವೆ ಒಮ್ಮೆಗೇ, ಮರಗಳ ದಟ್ಟಣೆ ತುಸು ಕಡಿಮೆಯಾಯಿತು. ಆ ಮರಗಳ ಸಂದಿಯಲ್ಲಿ, ದೂರದ ಉತ್ತರ ದಿಕ್ಕಿನಲ್ಲಿ, ಬೆಟ್ಟಗಳ ಸಾಲು ಕಾಣಿಸಿತು. ಆ ಬೆಟ್ಟಗಳ ತಳದಲ್ಲಿ, ಬಹುಸುಂದರವಾದ ನೀಲಿಯ ನೀರಿನ ರಾಶಿಯೇ ಕಾಣಿಸಿತು!
ಇದಾವ ಕೆರೆ? ಇಷ್ಟೊಂದು ಚಂದವಿದೆ, ಈ ಎತ್ತರದಿಂದ ಕಾಣಿಸುತ್ತಿದೆ ಎಂದು ನಾವೇ ಮಾತನಾಡಿ ಕೊಂಡೆವು. ಥಟ್ಟೆಂದು ನನಗೆ ಹೊಳೆಯಿತು: ಅದು ಮದಗದ ಕೆರೆ! ಕೆಲವು ಸಮಯದ ಹಿಂದೆ ಅಲ್ಲಿಗೆ ಸೈಕಲ್ ಹೊಡೆದದ್ದರಿಂದ, ಗುರುತಿಸಲು ನನ್ನಿಂದ ಸಾಧ್ಯವಾಯಿತು.
ಕಡೂರು ಸನಿಹವಿರುವ ಮದಗದ ಕೆರೆಯು ಇಂದಿಗೂ ಒಂದು ಚಂದದ ತಾಣ. ಪ್ರವಾಸಿ ಭೂಪಟ ದಲ್ಲಿ ಪ್ರಮುಖ ಸ್ಥಾನವನ್ನು ಇನ್ನೂ ಪಡೆದುಕೊಂಡಿಲ್ಲವಾದ್ದರಿಂದ, ಅಲ್ಲಿನ್ನೂ ಸ್ನಿಗ್ಧ ಸೌಂದರ್ಯ ವಿದೆ. ಆ ಕೆರೆಯ ನೀರಿನಲ್ಲಿ, ಬಾಬಾಬುಡನ್‌ಗಿರಿ ಪರ್ವತ ಶ್ರೇಣಿಯ ಪ್ರತಿಬಿಂಬವೂ ಕಾಣಿಸುತ್ತದೆ. ಶುದ್ಧ ನೀರಿನಲ್ಲಿ ಕಾಣಿಸುವ ಆ ಪರ್ವತ ಶ್ರೇಣಿಯ ಪ್ರತಿಬಿಂಬವನ್ನು ನೋಡುವ ನೆಪ ಮಾಡಿಕೊಂಡಾದರೂ, ಒಮ್ಮೆ ಮದಗದ ಕೆರೆಯನ್ನು ಸಂದರ್ಶಿಸುವ ಆಸೆ ಮೂಡುತ್ತಿದೆ.