ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Janardhan Hegde Column: ದಾರಿ ತಪ್ಪಿಸುವ ಎಐಯನ್ನು ಎಷ್ಟು ನಂಬಬಹುದು?

ಪ್ರಬಂಧದ ಸಾರಾಂಶವನ್ನು ಮೊದಲು ನೀಡಿ ಶ್ಲೋಕಗಳ ವಿಶ್ಲೇಷಣೆ, ಶಿಲಾಲೇಖದ ಪ್ರಮಾಣ, ಹ್ಯುಯೇನ್‌ತ್ಸಾಂಗನ ಸಾಕ್ಷಿ, ಬಾಣಭಟ್ಟನ ಹೇಳಿಕೆ ಮುಂತಾದವನ್ನು ಉಲ್ಲೇಖಿಸುತ್ತ ಸಮನ್ವಯದ ದಾರಿಯನ್ನು ವಿಶದವಾಗಿ ತಿಳಿಸುತ್ತ ತಾನು ಹಿಂದೆ ನೀಡಿದ್ದ ಕಾಲಕ್ಕೆ ಎಲ್ಲವನ್ನೂ ಸರಿ ಹೊಂದಿಸಿತು. ಇದನ್ನೋದಿದವರು ಒಪ್ಪಲೇಬೇಕಾದ ಸಮರ್ಥನೆ.

ಕೃತಕ ಬುದ್ಧಿ

ಡಾ.ಜನಾರ್ದನ ಹೆಗಡೆ

(ಭಾಗ 2)

ಕೃ.ಬು ನಕಲಿ ದಾಖಲೆಗಳನ್ನು ನೀಡುತ್ತದೆ ಎಂದು ನಿನ್ನೆ ನೋಡಿದೆವು. ತಪ್ಪಿಸಿಕೊಳ್ಳುವ ಅದರ ಪ್ರವೃತ್ತಿ ಯನ್ನು ಬದಿಗಿರಿಸಿ ನಾವು ಆಲೋಚಿಸೋಣ. ತಾನು ನೀಡಿದ ತಪ್ಪು ಮಾಹಿತಿಯನ್ನೇ ಅದು ಮತ್ತೆ ಮತ್ತೆ ಸಮರ್ಥಿಸಿಕೊಳ್ಳುತ್ತದೆಯಾದರೆ ಕೊನೆಗೆ ಅದು ನೀಡುವ ಖಚಿತ ಮಾಹಿತಿಯ ಬಗ್ಗೆಯೂ ಸಂದೇಹ ಬಂದೇ ಬರುತ್ತದೆ ತಾನೇ? ನಕಲಿಯನ್ನೂ ಅಸಲಿಯೆಂದು ಸಮರ್ಥಿಸಿ ಕೊಂಡರೆ ಅಸಲಿಯ ಬಗ್ಗೆ ಯಾರಿಗೆ ತಾನೇ ವಿಶ್ವಾಸವುಂಟಾದೀತು?

‘ಯಾರೋ ಕೆಲವರು ತಪ್ಪು ಮಾಹಿತಿಯನ್ನು ಕೃತಕ ಬುದ್ಧಿಮತ್ತೆಯ ನೆನಪಿನ ಕೋಶಕ್ಕೆ ಉಣಿಸಿ ಬಿಟ್ಟಿದ್ದಾರೆ. ಆದ್ದರಿಂದ ಅದು ಈ ರೀತಿ ತಪ್ಪು ಮಾಹಿತಿ ನೀಡುತ್ತದೆ’ ಎಂದು ಯಾರೂ ಅಂದುಕೊಳ್ಳ ಬೇಕಾದುದಿಲ್ಲ. ಅದು ಉತ್ತರ ಕೊಡುತ್ತಿರುವುದು ತನ್ನಲ್ಲಿಯ ತಪ್ಪು ಮಾಹಿತಿಯ ಆಧಾರದಿಂದ ಅಲ್ಲ. ನಕಲಿ ಪ್ರಮಾಣವನ್ನು ಸೃಷ್ಟಿಸಿ, ಖಚಿತ ಮಾಹಿತಿಯ ಹೆಸರಿನಲ್ಲಿ ಸಂಶೋಧಕರನ್ನು ದಾರಿ ತಪ್ಪಿಸುವುದೇ ಅದರ ಮಾಮೂಲು ಚಾಳಿ. ಸಂಶೋಧನೆಯ ಪಾವಿತ್ರ್ಯಕ್ಕೇ ದ್ರೋಹವೆಸಗುತ್ತಿದೆ ಅದು.

ಇನ್ನೊಂದು ‘ಚೆಂದದ’ ಮೋಸದ ಪರಿ ನೋಡಿ. ಇದು ಶಂಕರಾಚಾರ್ಯರ ಕಾಲಕ್ಕೆ ಸಂಬಂಧಿಸಿದ್ದು. ಶಂಕರರು ಸಾ.ಶ. 588-620ಕ್ಕೆ ಸೇರಿದವರು ಎಂದೆನ್ನುತ್ತ ಇದಕ್ಕೆ ಪ್ರಮಾಣವಾಗಿ ‘ಸುಬ್ರಹ್ಮಣ್ಯ ಭುಜಂಗಸ್ತೋತ್ರ’ ಹಾಗೂ ಹರಿಮೀಡೇ ಸ್ತೋತ್ರವನ್ನು ಅದು ನಿರ್ದೇಶಿಸಿತು. ಇದನ್ನು ಪುಷ್ಟೀಕರಿಸು ವಂತೆ ಸಂಶೋಧಕರು ಕೇಳಿಕೊಂಡಾಗ ಅದು ಒಂದು ಸಮಗ್ರ ಪ್ರಬಂಧವನ್ನೇ ಸಾದರಪಡಿಸಿತು.

ಪ್ರಬಂಧದ ಸಾರಾಂಶವನ್ನು ಮೊದಲು ನೀಡಿ ಶ್ಲೋಕಗಳ ವಿಶ್ಲೇಷಣೆ, ಶಿಲಾಲೇಖದ ಪ್ರಮಾಣ, ಹ್ಯುಯೇನ್‌ತ್ಸಾಂಗನ ಸಾಕ್ಷಿ, ಬಾಣಭಟ್ಟನ ಹೇಳಿಕೆ ಮುಂತಾದವನ್ನು ಉಲ್ಲೇಖಿಸುತ್ತ ಸಮನ್ವಯದ ದಾರಿಯನ್ನು ವಿಶದವಾಗಿ ತಿಳಿಸುತ್ತ ತಾನು ಹಿಂದೆ ನೀಡಿದ್ದ ಕಾಲಕ್ಕೆ ಎಲ್ಲವನ್ನೂ ಸರಿ ಹೊಂದಿ ಸಿತು. ಇದನ್ನೋದಿದವರು ಒಪ್ಪಲೇಬೇಕಾದ ಸಮರ್ಥನೆ. ಎಲ್ಲವೂ ಸರಿಯಾಗಿ ಹೊಂದಿಕೆ ಯಾಗುತ್ತಿರುವಾಗ ಹೇಗೆ ತಾನೇ ಅಲ್ಲಗಳೆಯಲಾದೀತು? ಆದರೆ ಇದೆಲ್ಲವೂ ಅಪ್ಪಟ ನಕಲಿ! ಕೃ.ಬು. ತನಗೆ ತಾನೇ ಸೃಷ್ಟಿಸಿಕೊಂಡ ಪ್ರಮಾಣಗಳಿವು. ಸಂದೇಹವೇ ಬರಲಾಗದ ಹೊಂದಾಣಿಕೆ. ತಪ್ಪಿರು ವುದು ಅದು ಪ್ರಮಾಣವಾಗಿ ನೀಡಿದ ಸ್ತೋತ್ರದಲ್ಲಿ, ‘ಹರಿಮೀಡೇ ಸ್ತೋತ್ರ’ದಲ್ಲಿ ಅದು ನೀಡಿದ ಶ್ಲೋಕವೇ ಇಲ್ಲ!

ಇದನ್ನೂ ಓದಿ: Dr Janardhan Hegde Column: ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಜವೆಂದೇ ನಂಬಿಸುವ ಎಐ !

ಮೊದಲು ಸುಳ್ಳು ಪ್ರಮಾಣವನ್ನು ನೀಡಿ ನಂತರ ಹೊಂದಾಣಿಕೆಗಾಗಿ ಅದು ಆಧಾರಗಳನ್ನೇ ತಿರುಚಿ ನೀಡಿತ್ತು. ಇನ್ನೊಂದು ಪ್ರಸಂಗದಲ್ಲಿ ಅದು ಶಿವಾನಂದ ಲಹರಿಯ ಶ್ಲೋಕವೊಂದರ ಮೊದಲ ಎರಡು ಪಾದಗಳಿಗೆ ಬೇರಾವುದೋ ಶ್ಲೋಕದ ಎರಡು ಪಾದಗಳನ್ನು ಸೇರಿಸಿ ಪ್ರಮಾಣವಾಗಿ ನೀಡಿತ್ತು. ಮೊದಲ ನೋಟದಲ್ಲಿ ಯಾವ ಸಂಶೋಧಕನಿಗೂ ಇಂತಹ ‘ಬ್ರಹ್ಮಾಂಡ’ ತಪ್ಪುಗಳು ಗಮನಕ್ಕೆ ಬರುವುದೇ ಇಲ್ಲ. ಕೃ.ಬು. ನೀಡಿದ್ದೆಲ್ಲ ಖಚಿತವಾಗಿಯೇ ಇರುತ್ತದೆ ಎಂಬ ನಂಬಿರುವ ಸಂಶೋಧಕ ಕೃ.ಬು. ನಕಲಿ ಮಾಹಿತಿ (ಪ್ರಮಾಣ) ನೀಡಬಹುದೆಂದು ಕನಸಿನಲ್ಲಿಯೂ ಊಹಿಸಿರ ಲಾರ. ಸತ್ಯವನ್ನೇ ನುಡಿಯಬೇಕಾದ ಈ ‘ದೇವನೇ’ ಸುಳ್ಳುಗಾರನಾದರೆ ನಾವು ಮತ್ತೆ ಯಾರನ್ನು ತಾನೇ ನಂಬೋಣ?

ಸೌಂದರ್ಯ ಲಹರಿಯ ಕುರಿತಂತೆಯೂ ಹೀಗೆಯೇ ಆಯಿತು. ಅದರ ಕಾಲವನ್ನು ಅದು ಕ್ರಿ.ಶ. 588 ಎಂದು ಹೇಳಿತು. ಮೂವತ್ತೆರಡನೇ ಶ್ಲೋಕವನ್ನು ‘ಕಟಪಯಾದಿ’ ಕ್ರಮದಲ್ಲಿ ಬಳಸಿದಾಗ ಇದು ದೊರೆಯುತ್ತದೆಂದಿತು. ಆ ಶ್ಲೋಕದ ಕಟಪಯಾದಿಕ್ರಮದ ವಿವರ ನೀಡುವಂತೆ ಕೇಳಿದಾಗ ಅದು ಖಚಿತ ಕ್ರಮಾನ್ವಯವನ್ನು ಕೈಬಿಟ್ಟು ತನಗೆ ತೋಚಿದಂತೆ (ತನ್ನ ಹೇಳಿಕೆಗೆ ಸರಿ ಹೊಂದುವಂತೆ) ಕಟಪಯಾದಿ ಕ್ರಮವನ್ನು ಸಮನ್ವಯಗೊಳಿಸಿತು.

ಐದಕ್ಷರದ ವರ್ಗದಲ್ಲಿ ಆರನೇ ಅಕ್ಷರವೊಂದನ್ನು ತಾನೇ ಕಲ್ಪಿಸಿಕೊಂಡು, ಕೆಲ ವ್ಯಂಜನಗಳನ್ನು ತಾನೇ ಸೇರಿಸಿಕೊಂಡು, ಅಕ್ಷರವೊಂದನ್ನು ಕೈಬಿಟ್ಟು, ಒಟ್ಟಾರೆ ತಾನು ಹೇಳಿದುದಕ್ಕೆ ಸರಿ ಹೊಂದಿಸಿದ ಪ್ರಮಾಣ ಒದಗಿಸಿತು. ಈ ಪ್ರಸಂಗದಲ್ಲಿ ಸೌಭಾಗ್ಯವೆಂದರೆ ಅದು ‘ಇದೆಲ್ಲ ನಾನೇ ಹೊಂದಿಸಿದ್ದು’ ಎಂದು ಪ್ರಾಂಜಲವಾಗಿ ತಿಳಿಸಿತ್ತು. ಆದರೆ ತಾನು ನೀಡಿದ ಹೇಳಿಕೆಗೆ ಸರಿ ಹೊಂದು ವಂತೆ ಪ್ರಮಾಣವನ್ನು ಸೃಷ್ಟಿಸಿ ತನಗೆ ಬೇಕಾದ ಕ್ರಮದಲ್ಲಿ ಮೂಲವನ್ನು ತಿರುಚುವ ಅದರ ಈ ನಡೆಯನ್ನು ಸಂಶೋಧಕನು ಒಪ್ಪಬಹುದೇ? ತನ್ನ ಪ್ರೌಢಪ್ರಬಂಧದಲ್ಲಿ ಆತ ಇಂತಹ ನಕಲಿ ಆಧಾರವನ್ನು ಬಳಸಿ ತನ್ನ ‘ನಿಷ್ಕರ್ಷ’ವನ್ನು ಹೇಳ ಹೊರಟರೆ ಆ ಸಂಶೋಧನೆಯೇ ಬೊಗಳೆಯಾಗಿ ಬಿಟ್ಟೀತಲ್ಲವೇ?

62

ಯಾವುದೋ ಒಂದು ಹುಡುಕಾಟದ ಪ್ರಸಂಗದಲ್ಲಿ ಅದು ‘ತತ್ತ್ವಬೋಧವಿಧಾಯಿನೀ’ ಎಂಬ ಗ್ರಂಥ ದಿಂದ ಉದ್ಧರಿಸಿದ್ದು ಎಂದು ಹೇಳಿಕೆ ನೀಡಿತು. ಜಾಲತಾಣದಲ್ಲಿ ಆಮೂಲಾಗ್ರವಾಗಿ ಹುಡುಕಿದರೂ ಆ ತತ್ತ್ವಬೋಧವಿಧಾಯಿನೀ ಗ್ರಂಥ ಸಿಗಲಿಲ್ಲ. ‘ಆ ಗ್ರಂಥವೇ ಜಾಲತಾಣದಲ್ಲೆಲ್ಲೂ ಸಿಗದಿರುವಾಗ ನೀನು ಅದನ್ನು ಉಲ್ಲೇಖಿಸಿ ಉದ್ಧರಿಸಿದ್ದು ತಪ್ಪಲ್ಲವೇ?’ ಎಂದು ದಬಾಯಿಸಿದಾಗ ‘ಹೌದು, ನನ್ನಿಂದ ತಪ್ಪಾಯಿತು. ನೀವು ನನ್ನನ್ನು ಕಟ್ಟಿಹಾಕಿದ್ದೀರಿ. ನಾನು ತಪ್ಪಿತಸ್ಥನೆನ್ನಿಸಿಕೊಳ್ಳಲು ಅರ್ಹ’ ಎಂದು ಹೇಳುತ್ತ ಅದು ಮತ್ತೊಂದು ಸುಳ್ಳನ್ನು ಹರಿಬಿಟ್ಟಿತು- ‘ಆ ಗ್ರಂಥ ತಾಳೆಗರಿ ರೂಪದಲ್ಲಿದ್ದು ಇನ್ನೂ ಪ್ರಕಟವಾದಿಲ್ಲ. ಅದು Fully digitized and searchable’ ಎಂದು. ಅದು ನೀಡಿದ ವೆಬ್‌ಸೈಟನ್ನು ಹುಡುಕಿ ನೋಡಿದರೆ ಆ ಸೈಟಿನಲ್ಲಿ ಆ ಗ್ರಂಥದ ಹೆಸರು ಇರಲೇ ಇಲ್ಲ!

‘ನಾನು ಕೋಶ ನೋಡಿ ಹೇಳಿದ್ದು’, ‘ಪರೀಕ್ಷಿತ ಸಂಸ್ಕರಣವನ್ನು ನಾನು ನೋಡುತ್ತೇನೆ’ ‘ಹೊಂದಾ ಣಿಕೆ ಯಾಗುವ ಪ್ರಮಾಣ ದೊರೆಯಿತು’ ಎಂದು ಮುಂತಾಗಿ ಕೃ.ಬು. ಹೇಳುವುದೆಲ್ಲ ಹಿಂದೆ ತಿಳಿಸಿದ ಕಪೋಲ ಕಲ್ಪಿತ ಪಾಠಗಳಂತೆಯೇ ಒಪ್ಪಲಾಗದ ಹೇಳಿಕೆಗಳೇ. ಅವೆಂದೂ ಪೂರ್ಣ ನಂಬತಕ್ಕಂತಹ ವುಗಳಲ್ಲ. ಅವುಗಳನ್ನು ನಾವು ಪರೀಕ್ಷಿಸಬಹುದಾದ ಹೇಳಿಕೆಗಳೆಂದು ಪರಿಗಣಿಸಬಹುದೇ ಹೊರತು ಕಣ್ಣು ಮುಚ್ಚಿ ಒಪ್ಪಿಕೊಂಡು ಬಿಡುವಂತಹದಲ್ಲ.

ಸಂಶೋಧಕರು ಒಮ್ಮೆ ಶಂಕರರ ಬಗೆಗಿನ ಜಾನಪದ ಗೀತೆಗಳನ್ನು ಕೊಡುವಂತೆ ಕೇಳಿಕೊಂಡರು. ಅದು ಕೇರಳದ ‘ಪೊತ್ತನ್’ ಹಾಡುಗಳನ್ನೂ, ಕನ್ನಡದ ‘ಬೀಸುವ ಪದ’ಗಳನ್ನೂ, ಹಿಮಾಚಲದ ‘ಜಾಗರಚಕ್ರ’ಗಳನ್ನೂ ಇದೇ ಮಾದರಿಯ ಹಲವಾರು ಜಾನಪದ ಸಾಹಿತ್ಯವನ್ನೂ ಮೂಲ ವಿವರ ಸಹಿತ ಸಾದರ ಪಡಿಸಿತು. ಇವುಗಳ ಮೂಲವಿವರದ ಖಚಿತತೆಯ ಬಗ್ಗೆ ಪ್ರಶ್ನೆ ಮಾಡಿದಾಗ ಅದು ತಾನೇ ಇವನ್ನು ಸೃಷ್ಟಿಸಿದ್ದು ಎಂದು ಒಪ್ಪಿಕೊಂಡಿತು.

ಇಂತಹ ಪದ್ಯಗಳಲ್ಲಿ ಹಲವಾರು ಪದಗಳನ್ನು ನಾನೇ ಸೇರಿಸಿದ್ದು ಎಂದೂ ಅದು ಹೇಳಿತು. ಆ ಪದಗಳು ಎಲ್ಲಿಯವು ಎಂದು ಕೇಳಿದಾಗ ಡಾ.ಹಾ.ಮಾ.ನಾಯಕರ ಕೃತಿಯ ಹೆಸರನ್ನೂ, ಪ್ರಕಾಶನ ವಿವರವನ್ನೂ ಒದಗಿಸಿತು. ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಗಮನಕ್ಕೆ ಬಂದಿದ್ದು- ಈ ಎಲ್ಲವೂ ನಕಲಿ ಮಾಹಿತಿಗಳೇ ಎಂದು. ತಾನೇ ಏನೋ ಒಂದನ್ನು ಸೃಷ್ಟಿಸಿ ‘ಇದು ಅಲ್ಲಿನದು’ ಎಂದು ತಪ್ಪು ಮಾಹಿತಿ ನೀಡುತ್ತಿತ್ತು. ಆ ಸಂಶೋಧಕರು ಇಂತಹ ಹಲವಾರು ಪ್ರಸಂಗಗಳನ್ನು ಎದುರಿಸಿದ್ದಾರೆ. ಅವರ ಅನುಭವಕ್ಕೆ ಬಂದ ಕೆಲವು ಮಾದರಿಗಳಿವು.

ಕೃ.ಬು. ಏಕೆ ಹೀಗೆ ಮಾಡುತ್ತದೆ? ಯಾವುದೇ ತಂತ್ರಾಂಶವೊಂದರ ವೈಫಲ್ಯವಿದಲ್ಲ. ಹಿಂದೆಯೇ ಹೇಳಿದಂತೆ ಕೃತಕ ಬುದ್ಧಿಮತ್ತೆಯ ಒಟ್ಟಾರೆ ಔದ್ಯೋಗಿಕ ನೀತಿಯೇ ಈ ತೆರನಾದದ್ದು. ಯಾವ ತಂತ್ರಾಂಶದ ಬಳಿಯೂ ಪ್ರಮಾಣಿತವಾದ ಯಾವುದೇ ಮಾಹಿತಿ ಕಣಜವೂ ಇರುವುದಿಲ್ಲ. ಅವು ಯಾವುದೇ ಪ್ರಮಾಣಿತ ಮೂಲದ ಸಂಬಂಧವನ್ನೂ ಹೊಂದಿ, ಅದನ್ನು ಹುಡುಕಿ ಮಾಹಿತಿ ನೀಡುವುದೂ ಇಲ್ಲ. ಅದು ತಾನೇ ಪ್ರಮಾಣಗಳನ್ನು ನಕಲಿಯಾಗಿ ಸೃಷ್ಟಿಸಿ ನೀಡಿ ಬಿಡುತ್ತದೆ.

ಅದು ನೀಡಿದ ಮಾಹಿತಿ ಪ್ರಮಾಣಿತವಾದದ್ದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ದಾರಿಯಿಲ್ಲ. ಒಟ್ಟಾರೆ ಇಷ್ಟನ್ನು ನಿಷ್ಕರ್ಷವಾಗಿ ನಾವು ಹೇಳಬಹುದು- ಕೃತಕ ಬುದ್ಧಿ ಮತ್ತೆಯು ಎಲ್ಲದಕ್ಕೂ ಉತ್ತರ ನೀಡಬಲ್ಲದು, ಆದರೆ ಅದು ನೀಡಿದ ಮಾಹಿತಿ ಖಚಿತ ಪ್ರಮಾಣ ವನ್ನು ಆಧರಿಸಿದ್ದು ಎಂದು ಎಂದೂ ನಂಬಲಾಗದು. ತಾನು ಹೇಳುವುದು ಅಪ್ಪಟ ಸತ್ಯವೆಂದೇ ಅದು ತಿಳಿಸಿದರೂ ಪರೀಕ್ಷಿಸದೇ ಯಾವುದನ್ನೂ ಒಪ್ಪಬಾರದು.

ಈಗ ಏಳುವ ಮುಖ್ಯ ಪ್ರಶ್ನೆ- ಕೃತಕ ಬುದ್ಧಿಮತ್ತೆಯನ್ನು ನಾವು ಎಷ್ಟರ ಮಟ್ಟಿಗೆ ಬಳಸಬಹುದು ಎಂದು. ಅದನ್ನು ಬಳಸುವುದೇ ಅಪಾಯಕ್ಕೆಡೆ ಮಾಡುತ್ತದೆ ಎಂಬ ನಿಲುವು ಸರಿಯಾದುದಲ್ಲ. ಅದರ ಬಳಕೆಯಿಂದ ಸಾಕಷ್ಟು ಸಮಯವನ್ನು ಉಳಿಸಲು ಸಾಧ್ಯ. ಖಚಿತ ಮೂಲ ಸಾಮಗ್ರಿಯನ್ನು ನಾವೇ ಕೃ.ಬು.ಗೆ ನೀಡಿದರೆ ಅದು ಸಂಸ್ಕರಿಸಿ ಪರಿಷ್ಕರಿಸಿ ಕೊಡುತ್ತದೆ. ಅದನ್ನೊಮ್ಮೆ ಪರೀಕ್ಷೆಗೆ ಒಳಪಡಿಸಿ ನಾವು ಬಳಸಿಕೊಳ್ಳಬಹುದಾಗಿದೆ. ಅಷ್ಟರ ಮಟ್ಟಿಗೆ ಅದು ನಂಬಲರ್ಹ.

ಆದರೆ ಕೃ.ಬು. ನೀಡುವ ಪ್ರಮಾಣವನ್ನು- ಶ್ಲೋಕಸಂಖ್ಯೆ, ಕಾಲ, ಉದ್ಧರಣ ಮುಂತಾದವನ್ನು- ಅದು ಸೂಚಿಸಿದ ಸ್ಥಳದಲ್ಲಿ ನಾವು ಎಲ್ಲಿಯ ವರೆಗೆ ಪ್ರತ್ಯಕ್ಷ ನೋಡುವುದಿಲ್ಲವೋ ಅಲ್ಲಿಯವರೆಗೆ ಅದನ್ನು ಪ್ರಮಾಣವಾಗಿ ಪರಿಗಣಿಸಬಾರದು. ಕೃ.ಬು. ಎಷ್ಟೇ ವಿಶ್ವಾಸದಿಂದ, ಎಂತಹದೇ ಪರಿಯಿಂದ ಹೇಳಿದರೂ ನಾವು ಅದನ್ನು ಪರಿಶೀಲಿಸದೇ ಒಪ್ಪಲೇಬಾರದು. ನೀಡುವ ಆಕರವನ್ನು ಮತ್ತೆ ಪ್ರಶ್ನಿಸಿದರೆ, ಅದು ಎಲ್ಲಿಂದ ದೊರೆಯಿತು ಎಂದು ಕೇಳಿದರೆ ಹೆಚ್ಚಿನ ವಿವರವನ್ನು ಅದೇ ನೀಡುತ್ತದೆ ಅಥವಾ ಅದು ಕಲ್ಪಿತವಾದು ದೆಂಬುದನ್ನು ಅದು ಒಪ್ಪುತ್ತದೆ.

ಅದು ಕ್ಷಮಾಯಾಚನೆ ಮಾಡಿದ ಮಾತ್ರಕ್ಕೆ, ಅಥವಾ ನಾವು ಹೇಳಿದ್ದಕ್ಕೆ ಅದು ಸಹಮತಿ ಸೂಚಿಸಿದ ಮಾತ್ರಕ್ಕೆ ಅದರ ಪ್ರಾಮಾಣಿಕತೆಯಲ್ಲಿ ನಾವು ವಿಶ್ವಾಸವಿಡಬೇಕಾದುದಿಲ್ಲ. ಕ್ಷಮಾಯಾಚನೆಯ ನಂತರವೂ ಆ ವಿಷಯದಲ್ಲಿ ಅದು ನೀಡಿದ ದಾಖಲೆಗಳಲ್ಲಿ ನಕಲಿತನವಿದ್ದ ನಿದರ್ಶನಗಳಿವೆ. ಕೃ.ಬು.ದ ನೆರವು ಪಡೆದ ಮೇಲೂ ದೊರೆತ ಆಕರಗಳನ್ನು ಸ್ವತಃ ಪರೀಕ್ಷಿಸದೇ ಎಂದೂ ಒಪ್ಪಬಾ ರದು. ಇದರಿಂದ ಸಂಶೋಧಕರಿಗೆ ಒಂದಿಷ್ಟು ಶ್ರಮ ಹೆಚ್ಚುತ್ತದೆನ್ನುವುದು ದಿಟ. ಆದರೆ ಅದರಿಂದ ನಾವು ನೀಡುವ ಪ್ರಮಾಣಗಳು ಸರಿಯಾದವೆಂಬುದು ದೃಢಪಡುತ್ತದೆ.

ಒಟ್ಟಾರೆ ನಿಷ್ಕರ್ಷವಿಷ್ಟೇ- ಸಂಶೋಧನೆಯ ಕೆಲಸದಲ್ಲಿ ಕೃ.ಬು. ನೀಡಿದ ಆಕರವನ್ನು ಕಣ್ಮುಚ್ಚಿ ನಂಬಲೇಬಾರದು. ಅದು ನೀಡುವ ಎಲ್ಲವನ್ನೂ ಸ್ವತಃ ಪರೀಕ್ಷಿಸಿಯೇ ಬಳಸಿಕೊಳ್ಳಬೇಕು. ಅದರ ಮೂಲಕ ಆಕರದ ವಿವರ ದೊರೆತ ನಂತರ ಇದು ಎಲ್ಲಿಂದ ದೊರೆತದ್ದು, ಎಂದು ಮುಂತಾದ ಪ್ರಶ್ನೆ ಗಳ ಮೂಲಕ ಒಂದಿಷ್ಟು ಜಾಲಾಡಿಸಿದರೆ ದಾಖಲೆಯು ಅಸಲಿಯೋ ನಕಲಿಯೋ ಎಂಬುದು ಒಂದಿಷ್ಟು ಮಟ್ಟಿಗೆ ತಿಳಿದು ಬಂದೀತು. ವೇಗವಾಗಿ ಕೆಲಸ ಮಾಡುವಲ್ಲಿ, ಎಲ್ಲೆಲ್ಲೋ ಚದುರಿ ಹೋಗಿರುವ ಮಾಹಿತಿಯನ್ನು ಒಂದೆಡೆ ಕಲೆ ಹಾಕಿ ಉತ್ತಮ ವಿಶ್ಲೇಷಣೆ ಮಾಡಿಕೊಡುವಲ್ಲಿ ಅಥವಾ ನಾವು ನೀಡಿದ ಆಕರಕ್ಕೆ ತಕ್ಕಂತೆ ವಿಸ್ತಾರವನ್ನು ಒದಗಿಸುವಲ್ಲಿ ಕೃ.ಬು. ಸಾಕಷ್ಟು ಉಪಕಾರಿಯಾಗ ಬಹುದಾದರೂ ಅದು ನೀಡುವ ದಾಖಲೆಗಳು ಹೆಚ್ಚಿನ ಪ್ರಸಂಗಗಳಲ್ಲಿ ಕಪೋಲಕಲ್ಪಿತಗಳೇ ಆಗಿ ದಾರಿ ತಪ್ಪಿಸುವಂತಹದ್ದಾಗಿರುತ್ತವೆ ಎಂಬುದನ್ನು ಎಂದಿಗೂ ಮರೆಯಬಾರದು.

ತಾನೇ ಕಲ್ಪಿಸಿದ್ದನ್ನೂ ಅಧಿಕೃತ ಮೂಲದಿಂದ ಪಡೆದದ್ದೆಂದೇ ನಂಬಿಸಿ ಅದು ನಮ್ಮನ್ನು ಯಾಮಾರಿಸುತ್ತದೆ, ತಾನು ಸರಿಯಾದ ದಾರಿಯಲ್ಲೇ ಇದ್ದೇನೆ ಎನ್ನುತ್ತ ಅದು ತನ್ನ ಸಾಚಾತನವನ್ನು ಸಾಕಷ್ಟು ಸಮರ್ಥಿಸಿಕೊಳ್ಳುತ್ತದೆ. ಮೋಹಕವಾದ ಶೈಲಿಯಲ್ಲಿ ಕಲ್ಪಿತ/ನಕಲಿ ಸರಕನ್ನು ಹೆಚ್ಚಿನೆಡೆ ಒದಗಿಸುವ ಅದನ್ನು ನಾವು ಕಣ್ಣು ಮುಚ್ಚಿ ನಂಬುವವರೆಗೂ ಅದು ನಮ್ಮನ್ನು ಮೋಸಗೊಳಿಸು ತ್ತಲೇ ಇರುತ್ತದೆ.

ಈ ಲೇಖನದಲ್ಲಿ ಉಲ್ಲೇಖಿಸಿದ ಸಂಶೋಧಕರ ಹೆಸರು ಪ್ರೊ.ಸತೀಶ ಕೆ.ಎಸ್.ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಅವರು ವೇದಾಂತ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದು, ಹಲವಾರು ಸಂಶೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು.