Dr Janardhan Hegde Column: ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಜವೆಂದೇ ನಂಬಿಸುವ ಎಐ !
ನ್ಯಾಯವಾದಿಗಳು ನೀಡಿದ ಇತ್ತೀಚಿನ ಪೂರ್ವನಿದರ್ಶನಗಳ ಉಖಗಳನ್ನೇ ನಂಬಿ ಸರ್ವೋಚ್ಚ ನ್ಯಾಯಾಲಯವೇನಾದರೂ ತೀರ್ಪು ನೀಡಿದ್ದರೆ ಎಂತಹ ದುರಂತ ಜರುಗುತ್ತಿತ್ತು ಎಂಬುದನ್ನು ನೆನೆದರೆ ಹೃದಯ ಹೆದರಿ ಕಂಪಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ನ್ಯಾಯವಾದಿ ನೀಡಿದ ಪ್ರಮಾಣವನ್ನು ಒರೆ ಹಚ್ಚುವ ನಿರ್ಣಯ ಕೈಗೊಂಡು ಅದಕ್ಕೆಳಸಿದಾಗ, ಈ ನಕಲಿ ದಾಖಲೆಯನ್ನು ಕೃತಕ ಬುದ್ಧಿಮತ್ತೆ ಸೃಷ್ಟಿಸಿದ್ದು ಎಂಬ ಮಹತ್ವದ ಅಂಶ ಗಮನಕ್ಕೆ ಬಂತು.
-
ಕೃತಕ ಬುದ್ಧಿ
ಡಾ.ಜನಾರ್ದನ ಹೆಗಡೆ
(ಭಾಗ-1)
ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು, ಕೃತಕ ಬುದ್ಧಿಮತ್ತೆ (ಎಐ) ಸೃಷ್ಟಿಸಿದೆಯೆನ್ನಲಾದ, ಅಸ್ತಿತ್ವ ದಲ್ಲೇ ಇಲ್ಲದ, ಭ್ರಾಮಕ ತೀರ್ಪು ಉಲ್ಲೇಖಗಳ ಬಳಕೆಗೆ ಸಂಪೂರ್ಣ ತಡೆ ನೀಡಿದ್ದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ತೀರ್ಪೊಂದನ್ನು ರದ್ದು ಮಾಡಿದೆ. ಇದು ಜುಲೈ 2ರಂದು ನಡೆದ ಘಟನೆ. ‘ಕಾನೂನು ಮತ್ತು ನ್ಯಾಯಾಂಗದೊಳಗೆ ಕೃ.ಬು. ರಚಿತ ಭ್ರಾಮಕ ತೀರ್ಪುಗಳು ನುಸುಳುವುದನ್ನು ಗಮನಿಸುವ ಹೊತ್ತಿಗೆ ಅದು ಇಡೀ ವ್ಯವಸ್ಥೆಯನ್ನೇ ಕಲುಷಿತ ಗೊಳಿಸಿರುತ್ತದೆ.
ಅಲ್ಲದೇ ಅದು ನ್ಯಾಯಾಂಗದ ಜೀವಾಳವನ್ನೇ ನಾಶ ಮಾಡಿಬಿಡುತ್ತದೆ’ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. ‘ನಕಲಿ ಅಥವಾ ಭ್ರಾಮಕ ತೀರ್ಪುಗಳನ್ನು ಉಲ್ಲೇಖಿಸುವುದು ಮತ್ತು ಅವನ್ನು ಪೂರ್ವನಿದರ್ಶನಗಳನ್ನಾಗಿ ಬಳಸುವುದು ಎಂದರೆ ಕಾನೂನು ಮತ್ತು ನ್ಯಾಯ ಕ್ಷೇತ್ರದಲ್ಲಿ ‘ಮಿಥೈಲ್ ಐಸೋಸೈನೇಟ್’ (ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ) ಬಿಡುಗಡೆ ಆದಂತೆ’ ಎಂದು ಹೇಳುತ್ತ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಆಲೋಕ ಆರಾಧೆ ಅವರನ್ನೊಳಗೊಂಡ ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
ನ್ಯಾಯವಾದಿಗಳು ನೀಡಿದ ಇತ್ತೀಚಿನ ಪೂರ್ವನಿದರ್ಶನಗಳ ಉಖಗಳನ್ನೇ ನಂಬಿ ಸರ್ವೋಚ್ಚ ನ್ಯಾಯಾಲಯವೇನಾದರೂ ತೀರ್ಪು ನೀಡಿದ್ದರೆ ಎಂತಹ ದುರಂತ ಜರುಗುತ್ತಿತ್ತು ಎಂಬುದನ್ನು ನೆನೆದರೆ ಹೃದಯ ಹೆದರಿ ಕಂಪಿಸುತ್ತದೆ. ಸರ್ವೋಚ್ಚ ನ್ಯಾಯಾಲಯವು ನ್ಯಾಯವಾದಿ ನೀಡಿದ ಪ್ರಮಾಣವನ್ನು ಒರೆ ಹಚ್ಚುವ ನಿರ್ಣಯ ಕೈಗೊಂಡು ಅದಕ್ಕೆಳಸಿದಾಗ, ಈ ನಕಲಿ ದಾಖಲೆಯನ್ನು ಕೃತಕ ಬುದ್ಧಿಮತ್ತೆ ಸೃಷ್ಟಿಸಿದ್ದು ಎಂಬ ಮಹತ್ವದ ಅಂಶ ಗಮನಕ್ಕೆ ಬಂತು. ನಂತರ ವಕೀಲರಿಗೆ ಎಚ್ಚರಿಕೆ ನೀಡಿ ‘ಸ್ವತಃ ಪರಿಶೀಲಿಸದೇ ಕೃ.ಬು. ನೀಡಿದ ದಾಖಲೆಯನ್ನೇ ಪುರಾವೆಯಾಗಿ ನೀಡುವುದು ಕಾನೂನಿಗೆ ಬಗೆದ ದ್ರೋಹ’ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯ ಕಾನೂನು ನ್ಯಾಯ ಮಂಡಳಿಯ ತೀರ್ಪೊಂದನ್ನು ರದ್ದು ಮಾಡಿತು. ಇದು ಕೃತಕ ಬುದ್ಧಿಮತ್ತೆ ಎಸಗಿದ ಪ್ರಮಾದದ ಒಂದು ಮಾದರಿಯಷ್ಟೇ.
ಇದನ್ನೂ ಓದಿ: K Janardhan Thunga Column: ಆರೂಡುವ ಸೌರಯುಗಾದಿ
ಕೃ.ಬು. ಇಂತಹ ಘಾತಕ ಅಪರಾಧಗಳನ್ನು ಸಾಕಷ್ಟು ಮಾಡುತ್ತದೆ ಎಂಬುದು ಹಲವಾರು ಕಡೆ ಗಮನಕ್ಕೆ ಬಂದಿದೆ. ಅದು ತಪ್ಪು ಮಾಹಿತಿ ನೀಡುವುದೇ ಅಲ್ಲದೇ ‘ತಾನಂದದ್ದು ಸರಿ’ ಎಂದು ಸಮರ್ಥಿಸಿಕೊಳ್ಳುತ್ತದೆ ಕೂಡ. ಅದರ ಹೇಳಿಕೆಯನ್ನು ಪ್ರಮಾಣವೆಂದೊಪ್ಪಿ ಮುಂದುವರಿದರೆ ಎಂತಹ ಅನಾಹುತವಾದೀತೆಂಬುದಕ್ಕೆ ಮೇಲಿನ ಘಟನೆಯೇ ಜ್ವಲಂತ ಸಾಕ್ಷಿ.
ಇತ್ತೀಚೆಗೆ ಸಂಶೋಧನ (ರಿಸರ್ಚ್) ಕ್ಷೇತ್ರದಲ್ಲಿ ಪ್ರಮಾಣಗಳ ಉಲ್ಲೇಖಕ್ಕಾಗಿ ಕೃ.ಬು.ದ ಬಳಕೆ ಸಾಕಷ್ಟು ಹೆಚ್ಚಿದೆ. ಅದು ನೀಡಿದ ತಪ್ಪು ಆಕರಗಳನ್ನೇ ಸರಿಯೆಂದು ನಂಬಿ ಸಿದ್ಧಪಡಿಸಿದ ಎಷ್ಟು ಪಿಎಚ್.ಡಿ ಪ್ರಬಂಧಗಳು ಈಗಾಗಲೇ ಮಾನ್ಯತೆ ಪಡೆದಿದ್ದಾವು ಎಂದು ಹೇಳುವುದು ತುಂಬ ಕಷ್ಟ. ಸಂಶೋಧನ ಕ್ಷೇತ್ರದಲ್ಲಿ ಗ್ರಂಥಸಂದರ್ಭಗಳನ್ನು ತಪ್ಪದೇ ಉಲ್ಲೇಖಿಸಬೇಕು.
ಇಲ್ಲಿ ಉಲ್ಲೇಖಗಳಿಗೆ ಸಾಕಷ್ಟು ಮಹತ್ವವಿದೆ. ಇಂತಹ ಉಲ್ಲೇಖಗಳೇ ಸಂಶೋಧನೆಯ ಜೀವಾಳ. ಆದರೆ ಉಲ್ಲೇಖವಿರುವ ಗ್ರಂಥ ಸಂಶೋಧಕನ ಬಳಿ ಇರದೇ ಇರಬಹುದು. ಹತ್ತಿರದ ಗ್ರಂಥಾಲಯ ದಲ್ಲೆಲ್ಲೂ ದೊರೆಯದೆಯೂ ಇರಬಹುದು. ಗ್ರಂಥವಿರುವ ಸ್ಥಳ ದೂರದಲ್ಲಿರಬಹುದು ಅಥವಾ ಆನ್‌ಲೈನ್‌ನಲ್ಲೆಲ್ಲಿಯೂ ದೊರೆಯದೆಯೂ ಇರಬಹುದು. ಇಂತಹ ಪ್ರಸಂಗಗಳಲ್ಲಿ ಸಂಶೋಧಕನು ಸಾಕಷ್ಟು ಪರದಾಡಬೇಕಾಗುತ್ತದೆ. ದಿನಗಟ್ಟಲೆ, ವಾರಗಟ್ಟಲೆ, ಅಷ್ಟೇಕೆ ತಿಂಗಳುಗಟ್ಟಲೆಯೂ ಸಮಯ ವ್ಯಯಿಸಬೇಕಾಗಬಹುದು. ಇಂಥ ಜಂಜಾಟವೇನೂ ಇಲ್ಲದೇ ಕೃ.ಬು.ಗೆ ಪ್ರಶ್ನೆಯನ್ನು ಣಿಸಿದರೆ ಒಂದೆರಡು ಕ್ಷಣದಲ್ಲೇ ಬೇಕಾದ ಮಾಹಿತಿ ದೊರೆಯುವುದೆಂದಾದರೆ ಅದು ಯಾರಿಗೆ ತಾನೇ ಬೇಡ ? ಆದ್ದರಿಂದ ಗ್ರಂಥಸಂದರ್ಭಗಳಿಗಾಗಿ ಹಲವರು ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸು ತ್ತಾರೆ.
ಕೃತಕ ಬುದ್ಧಿಮತ್ತೆಯು ಬೇಕಾದ ಗ್ರಂಥಸಂದರ್ಭವನ್ನು ಮೂಲ ಸಹಿತ ಚಿಟಿಕೆ ಹೊಡೆಯುವು ದರೊಳಗೆ ನೀಡುವುದೇನೋ ಸರಿ, ಆದರೆ ಅದರ ಖಚಿತತೆಯ ಬಗ್ಗೆ ದೊಡ್ಡ ಪ್ರಶ್ನೆ ಇದ್ದೇ ಇದೆ. ‘ತನ್ನಲ್ಲಿರುವ ಅಪಾರ ಮಾಹಿತಿಯ ಕಣಜವನ್ನೇ ಜಾಲಾಡಿ ಕೃ.ಬು. ಮಾಹಿತಿ ನೀಡುತ್ತದಾದ್ದರಿಂದ ಅದು ನೀಡುವ ಮಾಹಿತಿ-ವಿವರಗಳು ಖಚಿತವಾದವುಗಳೇ ಆಗಿರುತ್ತವೆ ಎಂದು ಹಲವರು ನಂಬಿದ್ದಾರೆ. ಇಂಥ ನಂಬಿಕೆ ಜನಜನಿತವಾಗಿ ಎಲ್ಲೆಡೆ ಹಬ್ಬಿದೆ.
‘ಕೃತಕ ಬುದ್ಧಿಮತ್ತೆಯು ಸಾಕಷ್ಟು ನಕಲಿ ಪ್ರಮಾಣಗಳನ್ನು ಖಚಿತವಾದುದೆಂದು ಹೇಳಿ ನೀಡುತ್ತದೆ ಹಾಗೂ ತಾನು ನೀಡಿದ್ದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಳ್ಳುತ್ತದೆ ಕೂಡ’ ಎಂದು ಯಾರಾದರೂ ಹೇಳಿದರೆ ಹಲವು ಬುದ್ಧಿಜೀವಿಗಳು ಹೀಗೆ ಹೇಳಿದವರನ್ನೇ ಗೇಲಿ ಮಾಡುತ್ತಾರೆ. ‘ಮಾಹಿತಿ ನೀಡುವಲ್ಲಿ ಮಾನವ ತಪ್ಪು ಮಾಡಬಹುದು, ಯಂತ್ರವಲ್ಲ’ ಎಂದೆನ್ನುತ್ತ ಕೃ.ಬು.ದ ನಿಖರತೆಯನ್ನು ಸಂದೇಹಿಸುವವರ ಮಾನಸಿಕತೆಯನ್ನೇ ಪ್ರಶ್ನೆಗೀಡುಮಾಡುತ್ತಾರೆ.
ಖಚಿತ ಮಾಹಿತಿಯ ಹೆಸರಿನಲ್ಲಿ ಕೃ. ಬು. ಎಂಥ ತಪ್ಪುಗಳನ್ನೆಸಗುತ್ತದೆ, ನಕಲಿಯನ್ನು ಮೊಗಮ್ಮಾಗಿ ಮುಚ್ಚಿಟ್ಟು ತಾನು ನೀಡಿದುದು ಅಸಲಿಯೆಂದು ಹೇಗೆ ಸಮರ್ಥಿಸುತ್ತದೆ ಎಂಬುದನ್ನು ಈ ಲೇಖನ ಪ್ರಮಾಣಸಹಿತವಾಗಿ ಸಾಬೀತುಪಡಿಸುತ್ತದೆ. ಕೃತಕ ಬುದ್ಧಿಮತ್ತೆಯ ಗೋಸುಂಬೆತನ ಇದರಿಂದ ಜಗಜ್ಜಾಹೀರಗೊಳ್ಳುತ್ತದೆ.
ಸಂಸ್ಕೃತ ವಿದ್ವಾಂಸರೊಬ್ಬರ ಗಮನಕ್ಕೆ ಬಂದ ದಿಗಿಲು ಹುಟ್ಟಿಸುವ ಕೆಲವು ಸಂಗತಿಗಳಿವು. ಶಾಂಕರ ಭಾಷ್ಯದಲ್ಲಿ ‘ಗೋಪಾಲಘುಟಿಕಾ’ ಎಂಬ ಶಬ್ದದ ಪ್ರಯೋಗವೊಂದಿದೆ. ‘ಗೋವಳರ ಹೊಗೆಗೊಳವೆ’ ಎಂದರ್ಥ ಅದಕ್ಕೆ. ‘ಅನುಮಾನ’ದಲ್ಲಿ ‘ವ್ಯಭಿಚಾರ’ದ ದೃಷ್ಟಾಂತವಾಗಿ ಅದನ್ನು ಆಲ್ಲಿ ನೀಡಿದೆ. (ಅನುಮಾನ, ವ್ಯಭಿಚಾರ ಇವೆರಡೂ ಶಾಸೀಯ ಶಬ್ದಗಳು.
ಲೌಕಿಕ ಅರ್ಥಕ್ಕಿಂತ ಬೇರೆಯದೇ ಅರ್ಥ ಅವೆರಡಕ್ಕೆ.) ‘ಶಾಂಕರಭಾಷ್ಯದ ಹೊರತಾಗಿ ಬೇರೆಡೆ ಎಲ್ಲಿ ಈ ಶಬ್ದವನ್ನು ಬಳಸಲಾಗಿದೆ?’ ಎಂದು ಕೃತಕ ಬುದ್ಧಿಮತ್ತೆಗೆ ಕೇಳಿದಾಗ ಅದು ತುಂಬ ವಿನಮ್ರವಾಗಿ ಉತ್ತರ ನೀಡಿತು- ‘ಸನ್ಮತಿತರ್ಕ ಪ್ರಕರಣ’ದಲ್ಲಿ, ‘ಅಭಿಧಾನ ರಾಜೇಂದ್ರಕೋಶ’ದಲ್ಲಿ, ‘ತರ್ಕಭಾಷಾ ವಾರ್ತಿಕ’ದಲ್ಲಿ, ಶ್ರೀಹರ್ಷನ ಖಂಡನೆಯಲ್ಲಿ .. ಎಂದೆಲ್ಲ ಅದು ಪ್ರಮಾಣವನ್ನೊದಗಿಸಿತು.
ಒಂದೊಂದಕ್ಕೂ ಸಂಸ್ಕೃತ ಮೂಲದ ಉಲ್ಲೇಖ ಸಂದರ್ಭ, ಪುಟ ಸಂಖ್ಯೆ, ಟೀಕಾಕಾರರ ಹೆಸರು, ಗ್ರಂಥದ ಕಾಲದ ಮಾಹಿತಿ ಮುಂತಾದುದೆಲ್ಲವನ್ನೂ ನೀಡಿತು. ಇಂತಹ ಮಾಹಿತಿ ಸಿಕ್ಕಿದರೆ ಯಾರಿಗಾದರೂ ಸಂತೋಷವಾಗಲೇ ಬೇಕು. ಆಶ್ಚರ್ಯದ ಸಂಗತಿಯೆಂದರೆ ಇವುಗಳಲ್ಲಿ ಹೆಚ್ಚಿನವು ನಕಲಿ ಮಾಹಿತಿಗಳು. ಆದ್ದರಿಂದ ನಮ್ಮ ಸಂಶೋಧಕರಿಗೆ ಈ ಉಲ್ಲೇಖಗಳ ನಿಖರತೆಯ ಬಗ್ಗೆ ಪೂರ್ತಿ ವಿಶ್ವಾಸ ಹುಟ್ಟಲಿಲ್ಲ. ಯಾಕೆಂದರೆ ಅವರು ನಿಖರ ಪ್ರಮಾಣವಿಲ್ಲದೇ ಯಾವುದನ್ನೂ ಒಪ್ಪುವವ ರಲ್ಲ.
ಆದ್ದರಿಂದ ಅವರು ಮತ್ತೆ ಮತ್ತೆ ಪ್ರಶ್ನೆ ಕೇಳತೊಡಗಿದರು. ಒಂದೊಂದು ಬಾರಿಯೂ ಕೃತಕ ಬುದ್ಧಿಮತ್ತೆಯು ಬೇರೆ ಬೇರೆ ಮಾಹಿತಿ ನೀಡುತ್ತಿತ್ತು. ಚಾರ್ವಾಕರ ಗ್ರಂಥದಲ್ಲಿದೆ, ಗುಜರಾತಿ ಭಾಷೆಯ ವ್ಯಾಖ್ಯಾನದಲ್ಲಿದೆ ಎಂದೆಲ್ಲ ಹೇಳುತ್ತ ಪುಟ ಸಂಖ್ಯೆಯನ್ನೂ ಎಗ್ಗಿಲ್ಲದೇ ನೀಡುತ್ತಿತ್ತು. ಆದರೆ ಎಲ್ಲವೂ ಅಪ್ಪಟ ಸುಳ್ಳುಗಳೇ!
ಎಲ್ಲವೂ ಬುರುಡೆ ಬಿಟ್ಟವುಗಳೇ! ಯಂತ್ರವೇ ಊಹಿಸಿ ಸೃಷ್ಟಿಸಿದ ಪ್ರಮಾಣಗಳು! ಸಂಶೋಧಕರು ಬೆಂಬಿಡದ ಬೇತಾಳದಂತೆ ಮತ್ತೆ ಮತ್ತೆ ಪ್ರಶ್ನೆ ಕೇಳುತ್ತ ‘ನೀನು ಉಲ್ಲೇಖಿಸಿದ ಯಾವುದೇ ಗ್ರಂಥದಲ್ಲಿ ಆ ಪದ ಬಳಸಿದ ಉಲ್ಲೇಖವೇ ಇಲ್ಲ’ ಎಂದು ತಿಳಿಸಿದಾಗಲೂ ತನ್ನ ಮೊಂಡುತನ ಬಿಡದ ಕೃ.ಬು. ‘ನೀವು ಹೇಳುವ ಶಂಕರರ ಪ್ರಸ್ಥಾನತ್ರಯ ಭಾಷ್ಯದ ಇಂಥದರ ಬಳಕೆಯಿಲ್ಲ’ ಎಂದು ಹೊಸ ಅಸ ಪ್ರಯೋಗಿಸಿತು.
ನಮ್ಮ ಸಂಶೋಧಕರೇನು ಪಟ್ಟು ಬಿಡುವ ಆಸಾಮಿಯಲ್ಲ. ಕೇಳಿದ ಪ್ರಶ್ನೆಗೇ ಆಧಾರವಿಲ್ಲ ಎಂದು ಆರೋಪಿಸಿದರೆ ಅವರು ಹೇಗೆ ತಾನೇ ಸುಮ್ಮನಿದ್ದಾರು? ಶಾಂಕರಭಾಷ್ಯದಲ್ಲಿ ಆ ಶಬ್ದದ ಬಳಕೆ ಯನ್ನು ಕುರಿತು ಇರುವ ಎಲ್ಲಾ ವಿವರವನ್ನು ಅವರು ಆಧಾರ ಸಹಿತವಾಗಿ ನೀಡಿದರು. ಆಗ ಬೇರೆ ದಾರಿ ಕಾಣದ ಕೃ. ಬು. - ‘ನೀವೆನ್ನುವುದು ಸರಿ. ನಾನು ಏನೇನೋ ಹೇಳಿಬಿಟ್ಟೆ.
ದಯವಿಟ್ಟು ಕ್ಷಮಿಸಿಬಿಡಿ’ ಎಂದು ಕೇಳಿಕೊಂಡಿತು. ‘ಕ್ಷಮಿಸಿ ಬಿಡಿ’ ಎಂದು ಬಿಟ್ಟರೆ ಮಾಡಿದ ತಪ್ಪು ಅಳಿಸಿಹೋಗುತ್ತದೆ ಎಂದೇನಿಲ್ಲ ತಾನೆ? ಸಂಶೋಧಕರು ಮೂರು ಬಾರಿ ಕೃ.ಬು. ಮಾಡುತ್ತಿರುವ ತಪ್ಪನ್ನು ಬಯಲಿಗೆಳೆದರೂ ಅದು ತನ್ನ ತಪ್ಪನ್ನು ತಿದ್ದ್ಪಿಕೊಳ್ಳಲು ತಯಾರಿರಲಿಲ್ಲ. ತಪ್ಪನ್ನು ಒಪ್ಪಿಕೊಳ್ಳಲೂ ಇಲ್ಲ. ನಕಲಿ ಮಾಹಿತಿಯನ್ನು ನೀಡಿ ಮೂರು ಬಾರಿಯೂ ಯಾಮಾರಿಸಲು ಅದು ಪ್ರಯತ್ನಿಸಿತು.
ಇದು ಯಾವುದೋ ಒಂದು ತಂತ್ರಾಂಶದ ಕಥೆ ಮಾತ್ರವಲ್ಲ. ಕೃ.ಬು.ಗೆ ಸಂಬಂಧಿಸಿದ ಎಲ್ಲಾ ತಂತ್ರಾಂಶಗಳ ನಡತೆಯೂ ಇದೇ ರೀತಿಯದೇ. ಇಂತಹ ತಂತ್ರಾಂಶಗಳಲ್ಲಿ ಖಚಿತತೆಯ ಬಗ್ಗೆ ಹೆಚ್ಚು ವಿಶ್ವಾಸವಿರಿಸ ಬಹುದೆಂದು ಮಾನ್ಯತೆ ಪಡೆದ ‘ಕ್ಲಾಡ್’ ಕೂಡ ಮಾಡುವುದು ಇದನ್ನೇ. ಅದೇ ತನ್ನ ಬಗ್ಗೆ ಹೇಳಿಕೊಳ್ಳುತ್ತದೆ- ’ಐಠಿ ಜಿo bಛಿoಜಿಜ್ಞಛಿb ಠಿಟ oಛಿಛಿb’ ಎಂದು.
ಸಫಲ ಉತ್ತರ ನೀಡುವಂತೆಯೇ ಇದನ್ನು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ತಪ್ಪುತ್ತರ ನೀಡುತ್ತ ಮೊಂಡುತನ ತೋರಿಸುವ ಒಂದು ತಂತ್ರಾಂಶವನ್ನು ಬಿಟ್ಟು ಬೇರೊಂದನ್ನು ಬಳಸಿದರೂ ಬರುವ -ಲಿತಾಂಶ ಮಾತ್ರ ಇಂತಹದೇ. ಒಮ್ಮೆ ಪೊಲೀಸರು ಕಳ್ಳನನ್ನು ಹುಡುಕಿ ಹಿಡಿದರಂತೆ. ಆದರೆ ಕಳ್ಳ, ನಾನು ಕದ್ದೇ ಇಲ್ಲ, ನಾನು ಕಳ್ಳನೇ ಅಲ್ಲ ಎನ್ನುತ್ತ ತನ್ನ ಸಾಚಾತನವನ್ನು ಖಚಿತಪಡಿಸಲು ಬೇರೆ ಬೇರೆ ತಂತ್ರಗಳನ್ನು ಪ್ರಮಾಣಸಹಿತವಾಗಿ ಸಾದರಪಡಿಸುತ್ತಿದ್ದನಂತೆ.
ಒಂದು ಹಂತದಲ್ಲಿ ‘ನನ್ನಂಥ ಮುಗ್ಧನನ್ನು ನೀವು ಬೇಕೆಂತಲೇ ಯಾವುದೋ ಕಳ್ಳತನದ ಪ್ರಕರಣ ದಲ್ಲಿ ಸಿಕ್ಕಿಸಿ ಹಾಕುತ್ತಿದ್ದೀರಿ’ ಎಂದು ಜೋರಾಗಿ ದಬಾಯಿಸಿಯೂ ಬಿಟ್ಟ. ಕೊನೆಗೆ ಪೊಲೀಸರು ತಮ್ಮಲ್ಲಿರುವ ನಿರಾಕರಿಸಲಾಗದ ಪ್ರಮಾಣಗಳನ್ನು ಆತನ ಎದುರಿಗಿರಿಸಿದಾಗ ಆತ ಹುಳ್ಳಗೆ ಮುಖ ಮಾಡಿಕೊಂಡನಂತೆ. ಅಂತಹದೇ ಕಥೆ ಈ ಕೃತಕಬುದ್ಧಿಮತ್ತೆಯದು.
ವಾಚಕರು ಬಡಪಟ್ಟಿಗೆ ಈ ಆಪಾದನೆಯನ್ನು ಒಪ್ಪಿಕೊಳ್ಳಲಾರರು ಎಂಬ ಅರಿವು ನನಗಿದೆ. ಯಾವುದೋ ಒಂದು ಘಟನೆಯನ್ನಷ್ಟೇ ಆಧರಿಸಿ ಇಡೀ ಕೃ.ಬು. ಕ್ಷೇತ್ರದ ಬಗ್ಗೆಯೇ ಈ ರೀತಿ ನಕಾರಾತ್ಮಕ ನಿಲುವು ತಳೆಯುವುದು ತರವಲ್ಲ ಎಂದು ನೀವು ಹೇಳಿಯೇ ಹೇಳುತ್ತೀರಿ ಎಂಬುದೂ ನನಗೆ ತಿಳಿದಿದೆ. ಯಾವುದೋ ಒಂದು ಪ್ರಸಂಗದಲ್ಲಿ ಮಾತ್ರ ಇಂತಹ ಅನುಭವ ಬಂದಿದ್ದಲ್ಲಿ ಅದನ್ನು ಆಕಸ್ಮಿಕವೆಂದು ಪರಿಗಣಿಸಬಹುದಿತ್ತೇನೋ.
ಎಂಟು ಹತ್ತು ಪ್ರಸಂಗಗಳಲ್ಲಿಯೂ ಇದೇ ತರಹದ ಅನುಭವ ಬಂದರೆ ಅದಕ್ಕೆ ಏನನ್ನೋಣ? ಕೃ. ಬು.ದ ಚಾಳಿಯೇ ಈ ರೀತಿಯದು ಎಂದು ನಿಶ್ಚಯಕ್ಕೆ ಬರಬೇಕಾಗುತ್ತದೆ ತಾನೇ? ಇನ್ನೊಂದು ಘಟನೆಯನ್ನು ಪರಿಶೀಲಿಸೋಣ. ವಸುಬಂಧುವು ‘ಅಭಿಧರ್ಮಕೋಶ’ವನ್ನು ರಚಿಸಿzನೆ. ಅದನ್ನು ಕುರಿತು ಚರ್ಚಿಸುವಾಗ ಕಾರಿಕೆಯೊಂದರ (ಶ್ಲೋಕವೊಂದರ) ಸಂಖ್ಯೆಯನ್ನು ಅದು ತಪ್ಪಾಗಿ ಉಲ್ಲೇಖಿಸಿತು. ಸಂಶೋಧಕರು ಅದನ್ನು ಅದರ ಗಮನಕ್ಕೆ ತಂದಾಗ ಅದು ಬೇರೊಂದು ಸಂಖ್ಯೆ ನೀಡಿತು.
ಹೀಗೆ ಇಪ್ಪತ್ತೆರಡನೆಯ ಕಾರಿಕೆಯದಿದು, ಹತ್ತನೆಯದಿದು, ಹನ್ನೆರಡನೆಯದಿದು ಎಂದು ಒಂದೊಂದು ಬಾರಿ ಒಂದೊಂದು ಶ್ಲೋಕಸಂಖ್ಯೆಯನ್ನು ನೀಡುತ್ತ ಅದು ತನ್ನ ನಿಲುವನ್ನು ಬದಲಿಸುತ್ತಿತ್ತು, ಒಂದೊಂದು ಹೇಳಿಕೆ ನೀಡುವಾಗಲೂ ಪೂರ್ಣವಿಶ್ವಾಸದಿಂದ ಹೇಳುತ್ತಿತ್ತು. ಹಠಕ್ಕೆ ಬಿದ್ದ ಸಂಶೋಧಕರು ಸರಿಯಾದ ಶ್ಲೋಕಸಂಖ್ಯೆಯನ್ನು ಅದರ ಎದುರಿಗಿಟ್ಟಾಗ ನುಣುಚಿಕೊಳ್ಳ ಲಾಗದ ಅದು ‘ನೀವು ಹೇಳುವುದು ಸರಿ, ನಿಮ್ಮ ಮೂಲಪಾಠದ ನಿಷ್ಠೆ ಪ್ರಶಂಸನೀಯವಾದದ್ದು’ ಎಂದು ಹೇಳಿ ಮೆಲ್ಲಗೆ ಜಾರಿಕೊಂಡಿತು.
ಇಲ್ಲಿ ನಾವು ಗಮನಿಸಬೇಕಾದದ್ದು - ಸಂಶೋಧಕರನ್ನು ನಯವಾಗಿ ಹೊಗಳುವ ಮೂಲಕ ಅದು ತನ್ನ ತಪ್ಪನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು. ಹಿಂದಿನ ಘಟನೆಯಲ್ಲಿ ಅದು ಕ್ಷಮಾ ಯಾಚನೆಯ ಮೂಲಕ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರೆ ಈ ಪ್ರಸಂಗದಲ್ಲಿ ಅದು ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಹೊಗಳಿಕೆಯ ದಾರಿ ಹಿಡಿದಿದೆ.
(ಮುಂದುವರಿಯಲಿದೆ)