ನಾಶದ ನೋಟ
ಡಾ.ನಾಗರಾಜ ಶೆಣೈ
ಅದು 90ರ ದಶಕದ ಕಾಲ. ನಾನು ಕಲಿಸುತ್ತಿದ್ದ ಆ ಎಂಜಿನಿಯರಿಂಗ್ ಕಾಲೇಜಿನಲ್ಲಿ ದೇಶದ ಎಲ್ಲ ಮೂಲೆ ಗಳಿಂದ ಬಂದ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳ ವರ್ತನೆ ಮತ್ತು ಹವ್ಯಾಸಗಳ ಬಗ್ಗೆ, ಚಟಗಳ ಬಗ್ಗೆ ನಾವು ತೀವ್ರ ನಿಗಾವಹಿಸುತ್ತಿದ್ದೆವು. ಅಂಥ ಸಮಯದಲ್ಲಿ ನಮಗೊಂದು ಆಘಾತಕಾರಿ ಮಾಹಿತಿ ಬಂದಿತ್ತು. ನಮ್ಮ ಒಬ್ಬ ವಿದ್ಯಾರ್ಥಿ ಡ್ರಗ್ಸ್ʼನ ಚಟಕ್ಕೆ ದಾಸ ನಾಗಿದ್ದ. ಆ ಸಮಯದಲ್ಲಿ ಇದೊಂದು ಅಪರೂಪದಲ್ಲಿ ‘ಅಪರೂಪದ’ ಸಂಗತಿಯಾಗಿತ್ತು.
ಏಕೆಂದರೆ ಆಗ ತೀರಾ ಕೆಲವು ವಿದ್ಯಾರ್ಥಿಗಳು, ಬೀಡಿ ಸಿಗರೇಟುಗಳನ್ನು, ಅದೂ ಸಹ ಕದ್ದು ಮುಚ್ಚಿ ಸೇದಿಕೊಂಡು ಕಾಲೇಜಿಗೆ ಬರುತ್ತಿದ್ದರು. ಆದರೂ ಶಿಕ್ಷಕರೊಂದಿಗೆ ಮಾತನಾಡುವಾಗ ಅದರ ವಾಸನೆ ಬಂದರೆ ಅವರಿಗೆ ಹಿಗ್ಗಾಮುಗ್ಗಾ ಬೈದು ಛೀಮಾರಿ ಹಾಕುತ್ತಿದ್ದೆವು.
ಹೀಗಾಗಿ ಅವರೂ ಜಾಣತನ ತೋರಿ, ನಮ್ಮೊಂದಿಗೆ ಮಾತಾಡಲು ಬರುವಾಗ, ಘಾಟು ವಾಸನೆಯ ಪಾನ್ ಮಸಾಲಗಳನ್ನು ಬಾಯಲ್ಲಿ ಹಾಕಿಕೊಂಡು ಬರುತ್ತಿದ್ದರು. ಇಂಥ ಸಮಯದಲ್ಲಿ ವಿದ್ಯಾರ್ಥಿ ಯೊಬ್ಬ ಏಕಾಏಕಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾನೆಂದರೆ ನಮಗೆ ನಿಜಕ್ಕೂ ಆತಂಕವಾಗಿತ್ತು.
ವಿದ್ಯಾರ್ಥಿಯನ್ನು ಕರೆದು ವಿಚಾರಿಸಿದರೆ ಆತ ಸುಮ್ಮನೆ ತಲೆ ತಗ್ಗಿಸಿ ನಿಂತನೇ ವಿನಃ ಅವನಿಂದ ಏನೂ ಮಾಹಿತಿ ಸಿಗಲಿಲ್ಲ. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ಮುಂದಿನ ಕ್ರಮಕ್ಕೆ ಮುಂದಾಗಲು ಅವನ ತಂದೆಯನ್ನು ಟೆಲಿಗ್ರಾಂ ಮೆಸೇಜ್ ಮೂಲಕ ಕರೆಸಿ ಮಾಹಿತಿ ನೀಡುವ ಮತ್ತು ವಿಚಾರಿಸುವ ನಿರ್ಧಾರ ಮಾಡಲಾಯಿತು.
ನಮ್ಮೆಲ್ಲರ ಉದ್ದೇಶ ಇಂಥದೊಂದು ಪ್ರಕರಣ ಇನ್ನೆಂದೂ ಕಾಲೇಜಿನಲ್ಲಿ ಮರುಕಳಿಸದಂತೆ ನೋಡಿ ಕೊಳ್ಳುವುದಾಗಿತ್ತು. ಅದರಂತೆ ಕಲ್ಕತ್ತಾದಿಂದ ಅವನ ತಂದೆ ಇಲ್ಲಿ ಬಂದು ನಮ್ಮನ್ನು ಭೇಟಿ ಯಾದರು. ಪಶ್ಚಿಮ ಬಂಗಾಳದಲ್ಲಿ ಅವರೊಬ್ಬ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದರು. ಅವರಿಂದ ಅವರ ಮಗನ ಬಗ್ಗೆ ಅನೇಕ ಮಾಹಿತಿಗಳನ್ನು ವಿಚಾರಿಸಿ ತಿಳಿದುಕೊಂಡೆವು. ಆದರೂ ಆತನು ಚಟಕ್ಕೆ ಅಂಟಿಕೊಂಡಿದುದರ ನಿಖರವಾದ ಕಾರಣವು ತಿಳಿಯಲಿಲ್ಲ.
ಇದನ್ನೂ ಓದಿ: Dr Nagaraj Shenoy Column: ಈ ಎಐ ರಾಕ್ಷಸ ನಮ್ಮ ಉದ್ಯೋಗ ತಿಂದು ಹಾಕ್ತಾನಾ ?
ಆಗಲೇ ನಾನವರಿಗೆ ಒಂದು ಪ್ರಶ್ನೆ ಕೇಳಿದೆ, ನಿಮ್ಮ ಮಗನಿಗೆ ಪ್ರತಿ ತಿಂಗಳು ಖರ್ಚಿಗೆ ಅಂತ ಎಷ್ಟು ಹಣ ಕಳುಹಿಸಿ ಕೊಡುತ್ತೀರಿ? ಆಗೆಲ್ಲ ಇಂಟರ್‌ನೆಟ್ ಬ್ಯಾಂಕಿಂಗ್‌ಗಳು ಇರಲಿಲ್ಲ, ಮೊಬೈಲ್ ಫೋನು ಸಹ ಬಂದಿರಲಿಲ್ಲ. ಅವರು ಹೇಳಿದರು. ಪ್ರತಿ ತಿಂಗಳು ಅಂತೇನೂ ನಾನು ಕಳಿಸುವುದಿಲ್ಲ. ನನ್ನ ವ್ಯವಹಾರಕ್ಕಾಗಿ ಸದಾ ಓಡಾಡುತ್ತಿರುತ್ತೇನೆ.
ಅವನಿಗೆ ಹಣ ಬೇಕಾದಾಗ ನನ್ನನ್ನು ಸಂಪರ್ಕಿಸುವುದು ಕಷ್ಟ. ಹೀಗಾಗಿ ಒಂದೇ ಸಲ ನಾನು ಹಣವನ್ನು ಅವನ ಅಕೌಂಟಿಗೆ ಜಮಾ ಮಾಡಿರುತ್ತೇನೆ. ಅದು ಖಾಲಿಯಾಗತೊಡಗಿದಾಗ ಅವನು ನನಗೆ ಕಾಗದ ಬರೆದು ತಿಳಿಸಿದರೆ ಮತ್ತೆ ಡಿಡಿ ಕಳಿಸಿ ಕೊಡುತ್ತೇನೆ. ಸರಿ, ಹಾಗಾದರೆ ಕಳೆದ ಸಲ ಎಷ್ಟು ಹಣ ಕಳಿಸಿದ್ದೀರಿ? ಸಾಬ, ದೋ ಲಾಖ್ ರುಪಿಯಾ (2 ಲಕ್ಷ ರೂಪಾಯಿ) ನಾವೆಲ್ಲ ಅಕ್ಷರಶಃ ಬೆಚ್ಚಿ ಬಿದ್ದೆವು.
ನಮ್ಮಲ್ಲಿ ಆಗ ಯಾವ ಪ್ರೊಫೆಸರ್ ಸಂಬಳವೂ 10000 ರೂಪಾಯಿ ಮೀರಿರಲಿಲ್ಲ. ಅಂದರೆ ನಮಗೆಲ್ಲ, ಹೆಂಡತಿ ಮಕ್ಕಳ ಸಹಿತದ ಕುಟುಂಬ ಸಾಕಲು ಬೇಕಾಗುವ ಹಣದ 20 ಪಟ್ಟು ಹಣ ವಿದ್ಯಾರ್ಥಿಯೊಬ್ಬನ ಖಾತೆಯಲ್ಲಿ ಬಂದು ಕೂತಿತ್ತು. ಅದರ ಅರ್ಥ, ಅವನ ಅಗತ್ಯದ ಅದೆಷ್ಟೋ ಪಾಲು ಹೆಚ್ಚಿನ ಹಣ, ಅವನ ಯಾವುದೇ ಶ್ರಮವೂ ಇಲ್ಲದೆ, ಅಷ್ಟು ಹಣವಿತ್ತು. ಹಾಗಿದ್ದ ಮೇಲೆ ಅದು ಡ್ರಗ್ಸ್ ನಂತಹ ವ್ಯಸನಗಳಿಗಲ್ಲದೆ ಇನ್ಯಾವುದಕ್ಕೆ ಖರ್ಚಾದೀತು? ಈ ಘಟನೆ ನನಗೆ ವಾಸ್ತವದ ಪರಿಚಯ ಮಾಡಿಸಿತು.
ಎಲ್ಲ ದುಶ್ಚಟಗಳ ಮೂಲ ಮಕ್ಕಳಿಗೆ ನಾವು ಪ್ರಶ್ನಿಸದೆ, ಲೆಕ್ಕ ಕೇಳದೆ, ಅನಿಯಂತ್ರಿತವಾಗಿ ನೀಡುವ ಹಣದಲ್ಲಿದೆ. ಹಣವೇ ಎಲ್ಲ ದುರಭ್ಯಾಸಗಳತ್ತ ಮಕ್ಕಳನ್ನು ಸೆಳೆಯುತ್ತದೆ. ಹೀಗಾಗಿ ತಂದೆ ತಾಯಿ ಯಂದಿರು ಅನುಸರಿಸಬೇಕಾದ ಮೊಟ್ಟ ಮೊದಲ ನಿಯಮವೆಂದರೆ ಮಕ್ಕಳಿಗೆ ನೀಡುವ ಹಣದ ಮೇಲಿನ ಸಂಪೂರ್ಣ ನಿಯಂತ್ರಣ. ಮೇಲಿನ ಘಟನೆ ಆಗಿನ ಸ್ಥಿತಿಯಾದರೆ ಈಗಲೂ ಪರಿಸ್ಥಿತಿ ತೀರಾ ಭಿನ್ನವಾಗಿಯೇನಿಲ್ಲ. ಈಗ ಬಯಸಿದಾಗ ಕ್ಷಣಾರ್ಧದಲ್ಲಿ ಮಕ್ಕಳಿಗೆ ಹಣ ಕಳಿಸುವ ವ್ಯವಸ್ಥೆ ಇರುವಾಗಲೂ ಸಹ, ಅನೇಕ ತಂದೆ ತಾಯಂದಿರು ಅಗತ್ಯಕ್ಕಿಂತ ಬಹಳ ಹೆಚ್ಚು ಹಣವನ್ನು ಮಕ್ಕಳ ಅಕೌಂಟುಗಳಲ್ಲಿ ತುಂಬಿರುತ್ತಾರೆ.
ತಾವು ಓದುವಾಗ ದುಡ್ಡಿಲ್ಲದೆ ಪಟ್ಟ ಸಂಕಟಗಳನ್ನು ನೆನೆಸಿಕೊಂಡು, ತಮ್ಮ ಮಕ್ಕಳಿಗೆ ಆ ಕಷ್ಟಗಳು ಇರಬಾರದೆಂದೋ, ನಾವು ಇಷ್ಟೆಲ್ಲ ಹಣ ಸಂಪಾದನೆ ಮಾಡುತ್ತಿರುವುದು ಇನ್ಯಾರಿಗೆಂದೋ, ಮಕ್ಕಳೊಂದಿಗೆ ಸಮಯ ಕಳೆಯಲಾಗದ ಅಸಹಾಯಕತೆಯ ಅಪರಾಧಿಭಾವದಿಂದ ಹೊರ ಬರಲೋ, ಮಕ್ಕಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವಾಗಿಯೋ, ಅವರ ಜೇಬು ಗಳನ್ನು ಅಗತ್ಯಕ್ಕಿಂತ ಹೆಚ್ಚು ಹಣದಿಂದ ತುಂಬಿರುತ್ತಾರೆ.
ಇಂಥ ಮಕ್ಕಳನ್ನು ನೋಡಿದ ಅವರ ಕೆಲವು ಮಧ್ಯಮ ವರ್ಗದ ಅಥವಾ ಕೆಳ ವರ್ಗದ ಸಹಪಾಠಿ ಗಳು ಸಹ ತಮ್ಮ ಮನೆಗಳಲ್ಲಿ ಪುಸ್ತಕಗಳಿಗೆ, ಉಪಕರಣಗಳಿಗೆ, ಲ್ಯಾಬ್‌ಗಳಿಗೆ, ಪ್ರಾಜೆಕ್ಟ್ʼಗಳಿಗೆ, ಸ್ಪೆಷಲ್ ಕೋರ್ಸುಗಳಿಗೆ, ಅಂತೆಲ್ಲ ದೊಡ್ಡದೊಂದು ಪಟ್ಟಿ ಕೊಟ್ಟು ತಮ್ಮ ಮನೆಗಳಿಂದ ದುಡ್ಡು ತೆಗೆದು ಕೊಳ್ಳುತ್ತಾರೆ.
ಎಲ್ಲ ತಂದೆ ತಾಯಿಯಂದಿರು ಒಂದು ಮಾತನ್ನು ನೆನಪಿಡಬೇಕು ಕಡಿಮೆ ಹಣ ಯಾರನ್ನೂ ಕೆಡಿಸಿಲ್ಲ; ಆದರೆ ಅತಿಯಾದ ಹಣ ಬಹಳಷ್ಟು ವಿದ್ಯಾರ್ಥಿಗಳನ್ನು ಹಾಳು ಮಾಡಿದೆ. ಈ ಸಂದರ್ಭ ದಲ್ಲಿ ಒಂದು ವಿಶೇಷ ಘಟನೆ ನೆನಪಿಗೆ ಬರುತ್ತದೆ. ಜೆನಿ- ಕೇಪ್ರಿಯಾಟಿ ಎಂಬಾಕೆ ಟೆನ್ನಿಸ್ ಆಟದಲ್ಲಿ ಒಮ್ಮೆ ಅಮೆರಿಕದ ಭವಿಷ್ಯದ ಭರವಸೆ ಎಂದು ಶ್ಲಾಘಿಸಲ್ಪಟ್ಟವಳು.
ಮಹಾನ್ ಟೆನ್ನಿಸ್ ಆಟಗಾರ್ತಿ ಮಾರ್ಟಿನಾ ನವ್ರಾಟಿಲೋವಗೆ ಸಂದರ್ಶನ ಒಂದರಲ್ಲಿ ನಿಮ್ಮ ದೃಷ್ಟಿಯಲ್ಲಿ ಮುಂದಿನ ಮಾರ್ಟಿನಾ ನವ್ರಾಟಿಲೋವ ಯಾರು ಎಂಬ ಪ್ರಶ್ನೆಗೆ ಆಕೆ ನೀಡಿದ ಉತ್ತರ ಜೆನಿಫರ್ ಕೇಪ್ರಿಯಾಟಿ. 14ನೇ ವಯಸ್ಸಿಗೆ ವೃತ್ತಿಪರ ಆಟಗಾರ್ತಿಯಾದ ಆಕೆ ಮುಂದೆ ಎಳೆಯ ವಯಸ್ಸಿನ ಅನೇಕ ದಿಗ್ಗಜರನ್ನು ಸೋಲಿಸಿ, ಟೂರ್ನಮೆಂಟ್ʼಗಳನ್ನು ಗೆದ್ದು ಮಿಲಿಯನ್ ಗಟ್ಟಲೆ ಹಣ ಸಂಪಾದಿಸಿದಳು. ನಂತರ ಅಚಾನಕ್ಕಾಗಿ ಆಕೆ ಒಂದೊಂದೇ ಪೊಲೀಸ್ ಪ್ರಕರಣಗಳಲ್ಲಿ ದಾಖಲಾದಳು. ತಪ್ಪು ದಾರಿಯ ಸ್ನೇಹಿತರ ಜತೆಗೂಡಿ ಆಕೆ ಡ್ರಗ್ಸ್ ಚಟಕ್ಕೆ ಬಲಿಯಾದಳು. ಅಂಗಡಿ ಗಳ ಕಳ್ಳತನದಂತಹ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದಳು. ಕಡೆಯಲ್ಲಿ ಪೊಲೀಸರಿಂದ ಬಂಧನಕ್ಕೂ ಒಳಗಾದಳು.
ಆಗ ಟೆನಿಸ್‌ನ ಮತ್ತೊಬ್ಬ ಮಹಾನ್ ತಾರೆ ಜಾನ್ ಮೆಕೆನ್ರೋ ಈಕೆಯನ್ನು ಉಲ್ಲೇಖಿಸಿ ಹೇಳಿದ್ದರು, ವೃತ್ತಿಪರ ಟೆನಿಸ್ ಪ್ರವೇಶಕ್ಕೆ ಕನಿಷ್ಠ ವಯಸ್ಸು ನಿಗದಿಪಡಿಸಬೇಕು. ತೀರಾ ಚಿಕ್ಕವರಿಗೆ ಇಲ್ಲಿ ಪ್ರವೇಶ ವಿರಬಾರದು. ಆದರೆ, ಸ್ವತಃ ಜಾನ್ ಮೆಕೆನ್ರೋ ತಮ್ಮ ಮುಂಗೋಪಿ ಮತ್ತು ಜಗಳಗಂಟ ವ್ಯಕ್ತಿತ್ವ ದಿಂದಾಗಿ ಬ್ಯಾಡ್ ಬಾಯ ಎಂಬ ಕುಖ್ಯಾತಿಯನ್ನು ಪಡೆದಿದ್ದರು. ಹೀಗಾಗಿ ಅವರ ಮಾತನ್ನು ಯಾರು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ, ಅವರು ತಮ್ಮ ಮಾತಿಗೆ ಕೊಟ್ಟ ವಿವರಣೆ ಗಮನಾರ್ಹ ವಾಗಿತ್ತು. ಹೊರಗೆ ಒಂದು ನೂರು ಡಾಲರುಗಳಿಸುವುದು ಎಷ್ಟು ಕಷ್ಟ ಎಂಬುದರ ಪರಿವೆಯೇ ಇಲ್ಲದವರ ಕೈಗೆ ಮಿಲಿಯನ್‌ಗಟ್ಟಲೆ ಡಾಲರ್ ಬಂದರೆ ಇನ್ನೇನಾಗುತ್ತದೆ? ಇದನ್ನು ನಮ್ಮ ತಂದೆ ತಾಯಿಯರು ಗಮನಿಸಬೇಕು.
ಮೇಲಿನ ಉದಾಹರಣೆ, ಸ್ವಂತ ಪರಿಶ್ರಮದ ಹಣದ ಕುರಿತಾದದ್ದು. ಆದರೆ ಮಕ್ಕಳಿಗೆ ನೀವು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ವರ್ಷಗಟ್ಟಲೆಯ ನಿಮ್ಮ ಕಠಿಣ ಪರಿಶ್ರಮದ ಹಣವನ್ನು ಹಾಗೆ ಎತ್ತಿಕೊಡುತ್ತೀರಿ. ಆದರೆ ಅವರಿಗೆ ಆ ಹಣದ ಬೆಲೆಯ ಪರಿವೆಯೇ ಇರುವುದಿಲ್ಲ. ಚಿಕ್ಕವರಿದ್ದಾಗ ಐಸ್ ಕ್ರೀಮ್ ಚಾಕಲೇಟ್‌ಗಳನ್ನು ಖರೀದಿಸಿದಷ್ಟೇ ಸಹಜವಾಗಿ ಅವರು ಡ್ರಗ್ಸ್ ನಂತಹ ದುಶ್ಚಟಗಳನ್ನು ಖರೀದಿಸುತ್ತಾರೆ.
ಡ್ರಗ್ಸ್ʼನ ಚಟ ನಮ್ಮ ವಿದ್ಯಾರ್ಥಿಗಳ ಹಣ, ಸಮಯ, ಶೈಕ್ಷಣಿಕ ಜೀವನವಷ್ಟೇ ಅಲ್ಲ, ಅವರ ದೈಹಿಕ ಆರೋಗ್ಯ, ಮಾನಸಿಕ ಸ್ಥಿತಿ ಎಲ್ಲವನ್ನು ಇನ್ನಿಲ್ಲದಷ್ಟು ಹಾಳುಮಾಡುತ್ತದೆ. ಅಷ್ಟೇ ಅಲ್ಲ, ಅವರ ಪ್ರತಿಷ್ಠೆ, ಭವಿಷ್ಯ ಮತ್ತು ಒಟ್ಟಾರೆ ಜೀವನಕ್ಕೆ ಅತ್ಯಂತ ಮಾರಕ. ಕೆಲವೊಂದು ಪ್ರಕರಣಗಳಲ್ಲಂತೂ ಇದು ಆತ್ಮಹತ್ಯೆಗಿಂತಲೂ ಭಯಾನಕ!
ಆತ್ಮಹತ್ಯೆ ಒಂದೇ ಸಲಕ್ಕೆ ಕೊಂದು ಹಾಕಿದರೆ ಈ ಅಭ್ಯಾಸ ವ್ಯಕ್ತಿಯನ್ನು ಇಂಚಿಂಚಾಗಿ ಸಾಯಿಸುತ್ತ ಹೋಗುತ್ತದೆ. ಹೀಗಾಗಿ, ಒಂದು ಕ್ಷಣದ ಆನಂದಕ್ಕಾಗಿ, ಕುತೂಹಲಕ್ಕಾಗಿ, ಯಾರೂ ನಿಮ್ಮ ಜೀವನ ವನ್ನು ಈ ಅಭ್ಯಾಸಕ್ಕೆ ಬಲಿಗೊಡಬೇಡಿ. ಹಿಂದೊಮ್ಮೆ ಅತ್ಯಂತ ಅಪರೂಪವಾಗಿದ್ದ, ಕೇವಲ ‘ಪ್ರತಿಷ್ಠಿತ’ ಕಾಲೇಜುಗಳಿಗೆ ಮಾತ್ರ ಮೀಸಲಾಗಿದ್ದ ಡ್ರಗ್ಸ್‌ನ ಈ ಪಿಡುಗು ಈಗ ಎಲ್ಲ ಸಾಮಾನ್ಯ ವಿದ್ಯಾಸಂಸ್ಥೆಗಳಿಗೂ ಕಾಲಿಟ್ಟಿದೆ. ಚಟಗಳಲ್ಲಿ ಅತ್ಯಂತ ಘಾತಕವಾಗಿರುವ ಈ ಡ್ರಗ್ಸ್ʼನ ಅಭ್ಯಾಸ ವ್ಯಕ್ತಿಯನ್ನು ಒಂದು ಜೀವಂತ ಶವವನ್ನಾಗಿ ಮಾರ್ಪಡಿಸಬಲ್ಲದು! ಈ ಚಟದ ಸುಳಿಯೊಳಗೆ ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿಯನ್ನು ಅವರ ಪರಿಚಯದವರ ಮೂಲಕ ಮೋಜಿಗಾಗಿ ಮತ್ತು ಮೊದಮೊದಲು ಉಚಿತವಾಗಿ ಎಳೆದು ತರಲಾಗುತ್ತದೆ.
ವಿದ್ಯಾರ್ಥಿಗಳೂ ಸಹ, ಆರಂಭದಲ್ಲಿ ಇದರೊಳಗಡೆ ಕುತೂಹಲಕ್ಕಾಗಿ ಅಥವಾ ಸ್ನೇಹಿತರ ಬಲವಂತ ಕ್ಕಾಗಿ ಪ್ರವೇಶಿಸುತ್ತಾರೆ. ಆದರೆ, ತದನಂತರ ಅದರೊಳಗಡೆಯಿಂದ ಹೊರಬರುವ ದಾರಿ ಕಾಣದೆ ಅಲ್ಲಿಯೇ ಬಂಧಿಯಾಗುತ್ತಾರೆ. ಡ್ರಗ್ಸ್ʼನಂತಹ ದುಶ್ಚಟ ತಡೆಯಲು ಉಪಾಯವೇನು? ಅದು ತುಂಬ ಸರಳ. ಪೋಷಕರು ಅಗತ್ಯ ಮೀರಿ ಯಾವುದೇ ಹಣವನ್ನು ಮಕ್ಕಳಿಗೆ ಕೊಡಬೇಡಿ. ಇದನ್ನು ಮಕ್ಕಳೆಡೆಗೆ ಅಪನಂಬಿಕೆಯಂತೆಯೋ, ಅವಮಾನದಂತೆಯೋ ಯೋಚಿಸಲು ಹೋಗಲೇಬೇಡಿ. ಅಂತಹ ಯೋಚನೆ ನಿಮ್ಮ ತಲೆಯಲ್ಲಿ ಸಣ್ಣಗೆ ಸುಳಿದರೂ ಸಾಕು, ಅದು ನಿಮ್ಮ ಮುಖಭಾವದಲ್ಲಿ, ನಿಮ್ಮ ಮಾತಿನಲ್ಲಿ, ವ್ಯಕ್ತವಾಗುತ್ತದೆ.
ಹಿಂದಿನ ತಲೆಮಾರುಗಳಲ್ಲಿ ಡ್ರಗ್ಸ್ ಇಷ್ಟೊಂದು ವ್ಯಾಪಕವಾಗಿ ಇಲ್ಲದಿರುವುದಕ್ಕೆ ಕಾರಣ, ಆಗ ತಂದೆ ತಾಯಿಗಳು ಮಕ್ಕಳಿಗೆ ಅನಿರ್ಬಂಧಿತವಾಗಿ ಹಣ ನೀಡುತ್ತಿಲ್ಲದೆ ಇದ್ದುದು ಒಂದು ಕಾರಣವಾದರೆ, ಆಗಿನ ಶಿಕ್ಷಕ ಸಮುದಾಯ ತಪ್ಪು ದಾರಿ ತುಳಿದ ವಿದ್ಯಾರ್ಥಿಗಳಿಗೆ ನಿರ್ದಾಕ್ಷಿಣ್ಯವಾಗಿ ಕಠಿಣ ದಂಡ ಪ್ರಯೋಗ ಮಾಡುತ್ತಿದ್ದದ್ದು ಅದಕ್ಕಿಂತ ಪ್ರಮುಖ ಕಾರಣವಾಗಿತ್ತು.
ತಂದೆ ತಾಯಿಗಳಿಗಿಂತ ಹೆಚ್ಚಾಗಿದ್ದ ಶಿಕ್ಷಕರೆಡೆಗಿನ ಆ ಭಯ, ಕ್ಲಾಸಿನ ಒಳಗಷ್ಟೇ ಅಲ್ಲ, ಹೊರಗೂ ಕೂಡ, ವಿದ್ಯಾರ್ಥಿಗಳ ಸಮೂಹವನ್ನು ದಾರಿ ತಪ್ಪದಂತೆ ನೋಡಿಕೊಳ್ಳುತ್ತಿತ್ತು. ಆದರೆ, ಸದ್ಯದ ಕಾಲದಲ್ಲಿ, ಸರಿಯೋ-ತಪ್ಪೋ, ಶಿಕ್ಷಕರಿಂದ ಆ ಶಿಕ್ಷೆಯ ಅಧಿಕಾರವನ್ನೇ ನಾವು ಕಿತ್ತು ಹಾಕಿ, ಗುರು-ಶಿಷ್ಯರ ಸಂಬಂಧವನ್ನು ಪಾಠ ನಡೆಯುವ ಆ ಒಂದು ಗಂಟೆಯ ಮಟ್ಟಿಗೆ ಮಾತ್ರ ಸೀಮಿತಗೊಳಿಸಿ ಬಿಟ್ಟಿದ್ದೇವೆ.
ಇನ್ನು ಪೋಷಕರ ಪಾತ್ರದ ಬಗ್ಗೆ ನೋಡುವುದಾದರೆ, ಬಹುತೇಕ ಸಂದರ್ಭಗಳಲ್ಲಿ, ಮಕ್ಕಳಿಗೆ ಅತಿಯಾದ ಹಣ ನೀಡುವ ಸಿರಿವಂತ ತಂದೆ ತಾಯಂದಿರು, ಮಕ್ಕಳ ಚಟುವಟಿಕೆಗಳ ಕುರಿತಾದ ಚರ್ಚೆಯನ್ನು ಅವರೊಂದಿಗೆ ಮಾಡಲು ಸಮಯಾಭಾವದ ಸಮಸ್ಯೆಯಲ್ಲಿರುತ್ತಾರೆ. ಅಂಥ ಎಷ್ಟೋ ಜನ ತಂದೆ ತಾಯಂದಿರಿಗೆ ತಮ್ಮ ಮಕ್ಕಳು ಯಾವ ಕೋರ್ಸುಗಳಲ್ಲಿ, ತರಗತಿಗಳಲ್ಲಿ, ಅಷ್ಟೇ ಏಕೆ ಕೆಲವರಿಗೆ ಯಾವ ಕಾಲೇಜಿನಲ್ಲಿ ತಮ್ಮ ಮಕ್ಕಳು ಓದುತ್ತಿದ್ದಾರೆ ಎಂಬುದೂ ಗೊತ್ತಿರುವುದಿಲ್ಲ.
ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ತಮ್ಮ ಹತಾಶಭಾವದಿಂದ ಹೊರಬರಲು, ಏಕಾಂಗಿತನವ ನೀಗಿಸಲು, ಗೆಳೆಯರ ಶೋಧದಲ್ಲಿ, ಈ ತಪ್ಪುದಾರಿಯ ಜನರ ಜಾಲಕ್ಕೆ ಬೀಳುತ್ತಾರೆ. ನೀವು ಮಾಡಬೇಕಾದುದೇನು? ಕನಿಷ್ಠ ವಾರದಲ್ಲಿ ಒಂದು ಸಲವಾದರೂ ಮಕ್ಕಳನ್ನು ಕೂರಿಸಿಕೊಂಡು ಅವರ ಶಾಲೆ ಕಾಲೇಜುಗಳ ಕುರಿತು ಚರ್ಚಿಸಿರಿ. ಚರ್ಚೆ ಎಂದರೆ ಅವರು ಗಳಿಸಿದ ಮಾರ್ಕುಗಳ ಕುರಿತಾಗಿಯೇ ಇರಬೇಕಂತೇನಿಲ್ಲ, ಅದು ಬಹು ಅಪರೂಪದ ಪ್ರಶ್ನೆ ಆಗಿರಲಿ. ಉಳಿದಂತೆ, ಯಾವ ಯಾವ ಟೀಚರು ಯಾವ್ಯಾವ ವಿಷಯ ತೆಗೆದುಕೊಳ್ಳುತ್ತಾರೆ? ಯಾರು ಎಲ್ಲಕ್ಕಿಂತ ಚೆನ್ನಾಗಿ ಕಲಿಸುತ್ತಾರೆ? ಯಾರು ಕಲಿಸಿದ್ದು ನಿನಗೆ ಅರ್ಥವಾಗುತ್ತಿಲ್ಲ? ಯಾವ ವಿಷಯ ನಿನಗೆ ತುಂಬಾ ಇಷ್ಟ? ಯಾರು ನಿಮ್ಮ ಕ್ಲಾಸಿನಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ? ಯಾರು ಅತಿ ಹೆಚ್ಚು ತುಂಟತನ ಮಾಡುತ್ತಾರೆ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ನಿಮ್ಮ ಮಕ್ಕಳೊಂದಿಗೆ ನೀವು ಗಂಟೆಗಟ್ಟಲೆ ಮಾತನಾಡಬಹುದು.
ಈ ಮಾತುಕತೆಗಳಲ್ಲಿಯೇ ನೀವು ಅವರಿಂದ ಅವರ ಅತ್ಯಂತ ಆಪ್ತ ಮಿತ್ರಬಳಗದ ಬಗ್ಗೆ, ಅವರ ಹವ್ಯಾಸಗಳ ಬಗ್ಗೆ, ತಿಳಿದುಕೊಳ್ಳಬಹುದು. ಇವೆಲ್ಲವುಗಳ ಮೂಲಕ ನೀವು ಬೆಳೆಸಿಕೊಳ್ಳುವ ಆಪ್ತತೆ, ಅವರನ್ನು ಕದ್ದು ಮುಚ್ಚಿ ಬೆಳೆಸಿಕೊಳ್ಳುವ ದುಶ್ಚಟಗಳಿಂದ ದೂರವಿರಿಸುತ್ತದೆ. ವಾರಕೊಮ್ಮೆಯೂ ನಿಮ್ಮ ಮಕ್ಕಳಿಗಾಗಿ ಸಮಯ ಕೊಡಲಾರದಷ್ಟು ಬ್ಯುಸಿಯಾಗಬೇಡಿ. ನಿಮ್ಮ ನಿತ್ಯಕಾರ್ಯಗಳು, ಉದ್ಯೋಗಗಳ ಹೊರತಾದ ಇಂಥ ಮಾತುಕತೆ ನಿಮಗೂ ಒಂದು ನೆಮ್ಮದಿ ನೀಡುತ್ತದೆ. ಪ್ರಯತ್ನಿಸಿ!
ಆಧುನಿಕ ಕಾಲದಲ್ಲಿ ನಮ್ಮ ಮಕ್ಕಳನ್ನು ಡ್ರU ಚಟದತ್ತ ಸೆಳೆಯುತ್ತಿರುವ ಅತಿ ದೊಡ್ಡ ಪ್ರಭಾವಿ ಗಳೆಂದರೆ ಪಾಪ್ ಗಾಯಕರು, ವಿಶೇಷವಾಗಿ ಕೆಲ ವಿದೇಶಿ ಇಂಗ್ಲೀಷ್ ಪಾಪ್ ಗಾಯಕರು. ತಮ್ಮೆಲ್ಲಾ ಗಾಯನದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಅವರು ತಮ್ಮ ಮೆಚ್ಚಿನ ಡ್ರಗ್ಸ್ʼನ್ನು ತಮ್ಮ ಅಭಿಮಾನಿಗಳಿಗೆ ವೈಭವದ, ಸುಖದ, ಸ್ವಾತಂತ್ರ್ಯದ, ಅತ್ಯುನ್ನತ ಸ್ಥಿತಿ ಎಂಬಂತೆ ಬಿಂಬಿಸುತ್ತಾರೆ. ಡ್ರಗ್ಸ್ ಗಳಿಗೆ ಅವರು ಅನೇಕ ಕೋಡ್ ವರ್ಡ್ʼಗಳನ್ನು (ಪಾಟ್, ಗ್ರಾಸ್ ಇತ್ಯಾದಿ) ಉಪಯೋಗಿಸುತ್ತಾರೆ. ಅವರ ಕೋಟ್ಯಂತರ ಅಭಿಮಾನಿಗಳು ಅಂಧರಾಗಿ ಅವರನ್ನು ಅನುಸರಿಸುತ್ತಾರೆ. ಯಾರು ಯಾವ ಗಾಯಕರ ಅಭಿಮಾನಿಯೋ ಅವರು ಆ ಡ್ರUನ ದಾಸರು. ನಮ್ಮ ಸಿನಿಮಾಗಳ ಹಾಡುಗಳಲ್ಲಿ ಒಂದು ಸಾಲು ಅಶ್ಲೀಲವೆನಿಸಿದರೆ ಅದರ ವಿರುದ್ಧ ಊರೆಲ್ಲಾ ಸೇರಿ ಗಲಾಟೆ ಮಾಡುವ, ಕೋರ್ಟು, ಕಚೇರಿ, ಸೆನ್ಸಾರ್ ಮಂಡಳಿ, ಮಹಿಳಾ ಆಯೋಗಗಳನ್ನೆಲ್ಲ ಸಂಪರ್ಕಿಸುವ ನಮ್ಮ ನಾಡಿನ ಗಣ್ಯರು ಮತ್ತು ಹೋರಾಟಗಾರರು, ಇಂಥ ಗಾಯಕರ, ಈ ಸಂಸ್ಕೃತಿಯ ವಿರುದ್ಧ ದನಿಯತ್ತದೆ ಇರುವುದು ನನಗೆ ಸೋಜಿಗವೆನಿಸುತ್ತದೆ.
ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳು ಯಾವುದೇ ಡ್ರಗ್ಸ್ ನ ಪ್ರಭಾವಕ್ಕೆ ಒಳಗಾಗದೆ ಇರಲು ನಾವು ಅವರ ಹವ್ಯಾಸಗಳತ್ತ ನೋಡುವುದು ಅತ್ಯವಶ್ಯಕ. ಇತ್ತೀಚೆಗೆ ಈ ಡ್ರಗ್ಸ್ ನ ರಾಕೆಟ್‌ಗಳು ದೇಶದ ಮೂಲೆ ಮೂಲೆಯಲ್ಲಿ ತಮ್ಮ ಕಬಂಧ ಬಾಹುಗಳನ್ನು ಚಾಚುತ್ತಿವೆ. ಈ ಕಾಲದ ಪೋಷಕರು ತಮ್ಮ ಮಕ್ಕಳಿಗೆ ನೀಡುತ್ತಿರುವ ಅತಿಯಾದ ಹಣ, ಅನಗತ್ಯ ಖಾಸಗಿತನ ಮತ್ತು ಅನಿಯಂತ್ರಿತ ಸ್ವಾತಂತ್ರ್ಯ ಈ ಪಿಡುಗಿಗೆ ವರದಾನವಾಗಿ ಪರಿಣಮಿಸಿದೆ. ಅನೇಕ ಸಲ ಡ್ರಗ್ಸ್ ನ ರಾಕೆಟ್‌ಗಳು ವಿದ್ಯಾರ್ಥಿಗಳ ಒಬ್ಬನನ್ನು ತಮ್ಮ ಪ್ರತಿನಿಧಿಯನ್ನಾಗಿ ನೇಮಿಸಿ ತಮ್ಮ ವ್ಯವಹಾರವನ್ನು ಆರಂಭಿಸುತ್ತಾರೆ.
ಕಾಲಕಾಲಕ್ಕೆ ಈ ಪಿಡುಗಿನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಮ್ಮೆ ವಿದ್ಯಾ ಸಂಸ್ಥೆಗಳಲ್ಲಿ ಆಯೋಜಿಸುವ ಕೆಲಸ ಆಗಬೇಕು. ಎಲ್ಲರೂ ಒಟ್ಟಾಗಿ ದನಿಯೆತ್ತಿ ಈ ಪಿಡುಗನ್ನು ನಮ್ಮ ವಿದ್ಯಾಸಂಸ್ಥೆಗಳ ಪರಿಸರದಿಂದ ಮೂಲೋಚ್ಛಾಟನೆ ಮಾಡುವ ಕಾರ್ಯ ನಡೆಯಬೇಕು. ಈ ಡ್ರಗ್ಸ್ ಎಂಬ ಪಿಡುಗಿನ ಜಾಲಗಳು ಈಗ ಅನಿಯಂತ್ರಿತವಾಗಿ, ವ್ಯಾಪಕವಾಗಿ, ಬೆಳೆದಿವೆ. ಅದನ್ನು ನಿಯಂತ್ರಿಸುವುದು ನಮ್ಮ ನಿಮ್ಮ ಕೈಗಳಲ್ಲಿಲ್ಲ. ನಾವು ಊರಿಗೆ ಬೇಲಿ ಹಾಕಲು ಅಸಮರ್ಥರು. ಆದರೆ, ನಮ್ಮ ನಮ್ಮ ಮನೆಗಳಿಗೆ ಬೇಲಿಯನ್ನು ಖಂಡಿತ ಹಾಕಬಹುದು!