Dr Nagaraj Shenoy Column: ಈ ಎಐ ರಾಕ್ಷಸ ನಮ್ಮ ಉದ್ಯೋಗ ತಿಂದು ಹಾಕ್ತಾನಾ ?
ಮೊಟ್ಟಮೊದಲ ಬಾರಿಗೆ ಸ್ಟೀಮ್ ಎಂಜಿನ್‌ನ ಆವಿಷ್ಕಾರವಾದಾಗ ಅದನ್ನು ದೊಡ್ಡ ಹಡಗುಗಳಲ್ಲಿ ಅಳವಡಿಸಲಾಯಿತು. ಅದಕ್ಕೂ ಮುಂಚೆ ಪ್ರತಿಯೊಂದು ಹಡಗಿನಲ್ಲೂ ಅದರ ನೆಲಮಹಡಿಯಲ್ಲಿ, ಹುಟ್ಟುಹಾಕುವ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು; ಅವರೆಲ್ಲ ಗುಲಾಮರಾಗಿರು ತ್ತಿದ್ದರು, ಆ ಮಾತು ಬೇರೆ. ಆದರೆ ಈ ಬೆಳವಣಿಗೆಯಿಂದಾಗಿ, ಹೀಗೆ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು.
-
ತಲ್ಲಣ
ಡಾ.ನಾಗರಾಜ ಶೆಣೈ
ಪ್ರತಿಯೊಂದು ಹೊಸ ತಂತ್ರಜ್ಞಾನವೂ, ಹೊಸ ಅನುಕೂಲವೂ ಜನರಲ್ಲಿ ‘ಹೊಸ ಅಸಹನೆ’ಯನ್ನು ಹುಟ್ಟು ಹಾಕುತ್ತದೆ ಮತ್ತು ಈ ಅಸಹನೆಯೇ ಯುವಜನರು ಊಹಿಸಿರ ದಂಥ ಹೊಸ ಉದ್ಯಮ ಗಳನ್ನು ಸೃಷ್ಟಿಸುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕ್ ಇಟ್, ಓಲಾ, ಊಬರ್, ಕಾಲ್ ಸೆಂಟರ್‌ಗಳು ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ.
ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭದ (Alumni Meet) ನಂತರ ಅಲ್ಲಿ ಅನೌಪಚಾರಿಕ ಚರ್ಚೆ ನಡೆಯುತ್ತಿತ್ತು. ಸದ್ಯ ಉದ್ಯೋಗದಲ್ಲಿರುವ ಒಂದಿಷ್ಟು ಮಂದಿ ಹಳೆಯ ವಿದ್ಯಾರ್ಥಿಗಳು ನನ್ನ ಹತ್ತಿರ ಬಂದಿದ್ದರು. ಅವರೊಂದಿಗೆ ಕೆಲ ಮಂದಿ ಹಾಲಿ ವಿದ್ಯಾರ್ಥಿಗಳೂ ಇದ್ದರು. ಅವರ ಮುಖದಲ್ಲಿ ಆತಂಕ ಎದ್ದು ಕಾಣ್ತಾ ಇತ್ತು. ಅದು ಸಹಜವೂ ಆಗಿತ್ತು.
ಏಕೆಂದರೆ, ಈಗ ದಿನಕ್ಕೊಂದು ಬಗೆಯಲ್ಲಿ ಸುದ್ದಿ ಮಾಡ್ತಾ ಇರೋ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಎಐ) ಎಂಬ ರಾಕ್ಷಸನ ಕುರಿತಾಗಿ ಅವರಲ್ಲಿ ಒಂದಿಷ್ಟು ಪ್ರಶ್ನೆಗಳು ಭುಗಿಲೆದ್ದಿದ್ದವು. “ಸರ್, ಈ ಆರ್ಟಿ ಫಿಶಿಯಲ್ ಇಂಟೆಲಿಜೆನ್ಸ್ ನಮ್ಮ ಉದ್ಯೋಗವನ್ನು ತಿಂದುಹಾಕುತ್ತಾ?" ಅನ್ನೋದು ಅವರ ಅತಿ ದೊಡ್ಡ ಪ್ರಶ್ನೆಯಾಗಿತ್ತು.
ಈ ಪ್ರಶ್ನೆಗೆ ಒಂದು ವಾಕ್ಯದಲ್ಲಿ ಉತ್ತರ ಹೇಳುವುದು ಸಾಧ್ಯವಿರಲಿಲ್ಲ, ಏಕೆಂದರೆ ಇದು ಇಂದು-ನಿನ್ನೆಯ ಪ್ರಶ್ನೆಯಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯ ಪ್ರತಿ ಮೈಲಿಗಲ್ಲು, ಕೆಲ ವರ್ಗದವರಿಗೆ ಲಾಭವನ್ನೂ, ಇನ್ನೂ ಕೆಲವರಿಗೆ ನಷ್ಟವನ್ನೂ ತನ್ನೊಂದಿಗೆ ಹೊತ್ತು ತರುತ್ತಲೇ ಇದೆ.
ಮೊಟ್ಟಮೊದಲ ಬಾರಿಗೆ ಸ್ಟೀಮ್ ಎಂಜಿನ್‌ನ ಆವಿಷ್ಕಾರವಾದಾಗ ಅದನ್ನು ದೊಡ್ಡ ಹಡಗುಗಳಲ್ಲಿ ಅಳವಡಿಸಲಾಯಿತು. ಅದಕ್ಕೂ ಮುಂಚೆ ಪ್ರತಿಯೊಂದು ಹಡಗಿನಲ್ಲೂ ಅದರ ನೆಲಮಹಡಿಯಲ್ಲಿ, ಹುಟ್ಟುಹಾಕುವ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು; ಅವರೆಲ್ಲ ಗುಲಾಮ ರಾಗಿರುತ್ತಿದ್ದರು, ಆ ಮಾತು ಬೇರೆ. ಆದರೆ ಈ ಬೆಳವಣಿಗೆಯಿಂದಾಗಿ, ಹೀಗೆ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು.
ಇದನ್ನೂ ಓದಿ: Dr Nagaraj Shenoy Column: ಆಸ್ಪತ್ರೆಗಳಿಗೂ ಲಗ್ಗೆ ಹಾಕಿದ ಎಂಬಿಎಗಳು
ಆದರೆ ಪ್ರತಿಯಾಗಿ, ಬದಲಾದ ಸ್ಟೀಮ್ ಎಂಜಿನ್‌ನ ತಂತ್ರಜ್ಞಾನ ಕ್ಷೇತ್ರದಲ್ಲಿ- ಅಂದರೆ ತಯಾರಿಕೆ ಯಿಂದ ಹಿಡಿದು ಅಂತಿಮವಾಗಿ ಚಲಾಯಿಸುವ ತನಕ- ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಹೊಸ ಉದ್ಯೋಗಗಳನ್ನು ಕಂಡುಕೊಂಡರು.
ಆಧುನಿಕ ಯುಗದಲ್ಲಿ, ಇದೇ ತರಹದ ಬೆಳವಣಿಗೆಯಲ್ಲಿ ಸಿಎನ್‌ಸಿ ಮಷಿನ್‌ಗಳು ಬಂದಾಗ, ಲೇಥ್ ಆಪರೇಟರ್‌ಗಳು ಕೆಲಸವನ್ನು ಕಳೆದುಕೊಂಡರು. ಆಟೋಕ್ಯಾಡ್‌ನಂಥ ಸಾಫ್ಟ್ʼವೇರ್‌ಗಳು ಬಂದಾಗ ‘ಡ್ರಾಫ್ಟ್ʼಮನ್’ಗಳು ನಿರುದ್ಯೋಗಿಗಳಾದರು.
‘ಫ್ಯಾಕ್ಸ್’ ಪ್ರಿಂಟಿಂಗ್ ಬಂದಾಗ ಅನೇಕ ವರ್ಣಚಿತ್ರ ಕಲಾವಿದರು ಅತಂತ್ರರಾದರು. ಹಾಗಂತ ಈ ಜಗತ್ತು ನಿರುದ್ಯೋಗಿಗಳಿಂದ ತುಂಬಿಹೋಯ್ತೇ ಅಂದರೆ ಹಾಗೇನಿಲ್ಲ; ಅದೇ ಉದ್ದೇಶಪೂರ್ತಿಗೆ ಬೇರೊಂದು ತಂತ್ರಜ್ಞಾನದ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾದವು.
ಇವೆಲ್ಲವೂ ಈ ಮುಂಚೆ ಅಸ್ತಿತ್ವದಲ್ಲಿಯೇ ಇಲ್ಲದ ಉದ್ಯೋಗಗಳಾಗಿದ್ದವು. ಒಂದು ಪರಿಚಿತ ಉದಾ ಹರಣೆ ನೀಡುವುದಾದರೆ, ಬ್ಯಾಂಕುಗಳು ತಮ್ಮೆಲ್ಲಾ ವ್ಯವಹಾರಗಳನ್ನು ಗಣಕೀಕೃತಗೊಳಿಸಿದಾಗ, ದೇಶಾದ್ಯಂತದ ಬ್ಯಾಂಕ್ ಮತ್ತು ವಿಮಾ ಕ್ಷೇತ್ರದ ಉದ್ಯೋಗಿಗಳ ಟ್ರೇಡ್ ಯೂನಿಯನ್‌ಗಳು ಈ ನಡೆಯನ್ನು ವಿರೋಧಿಸಿ ನಾಲ್ಕೈದು ಬಾರಿ ದೇಶವ್ಯಾಪಿ ಮುಷ್ಕರ ನಡೆಸಿದವು.
ಬ್ಯಾಂಕುಗಳ ಈ ನಡೆಯಿಂದಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎಂಬುದು ಅವುಗಳ ವಾದವಾಗಿತ್ತು. ಆದರೆ ಸರಕಾರ ಇದಕ್ಕೆಲ್ಲ ಬಗ್ಗದೆ ಮುಂದುವರಿದು, ಬ್ಯಾಂಕ್‌ನ ಕಾರ್ಯ ಚಟುವಟಿಕೆಗಳನ್ನು ಹಂತಹಂತವಾಗಿ ಗಣಕೀಕೃತಗೊಳಿಸಿತು. ಈಗ ಹಿಂದಿರುಗಿ ನೋಡಿದಾಗ ಪರಿಣಾಮ ಏನಾಯ್ತು? ಅಂದಾಜಿಸಿದಂತೆ ಬ್ಯಾಂಕುಗಳಲ್ಲಿ ಉದ್ಯೋಗನಷ್ಟ ಸಂಭವಿಸಿತೇ? ಈ ಪ್ರಶ್ನೆಗೆ ‘ಹೌದು’ ಎಂಬುದು ಪ್ರಾಮಾಣಿಕ ಉತ್ತರವಾಗುತ್ತದೆ.
ಮುಂಚೆಯೆಲ್ಲಾ ಬ್ಯಾಂಕಿನ ಒಂದು ಅತಿಚಿಕ್ಕ ಶಾಖೆಯಲ್ಲೂ 15-20 ಮಂದಿ ಕೆಲಸ ಮಾಡುತ್ತಿದ್ದರು; ಆದರೆ ಈಗ ದೊಡ್ಡ ಶಾಖೆಗಳಲ್ಲೂ ಅಷ್ಟು ಸಿಬ್ಬಂದಿ ಇರುವುದಿಲ್ಲ. ಆದರೆ, ಅದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಮಗೆ ತಲುಪಿಸುವಂಥ ತಂತ್ರಜ್ಞಾನದ ಕ್ಷೇತ್ರದಲ್ಲಿ ಅದಕ್ಕೆ 10 ಪಟ್ಟು ಉದ್ಯೋಗ ಗಳು ಸೃಷ್ಟಿಯಾದವು.
ಉದ್ಯೋಗದ ಮಾತಿರಲಿ, ಸಮಾಜದ ಮೇಲೆ ಇದರ ಒಟ್ಟು ಪರಿಣಾಮ ಏನಾಯ್ತು? ಬೆರಳ ತುದಿ ಯಲ್ಲಿ ನಮಗೆಲ್ಲ ನಮ್ಮ ಬ್ಯಾಂಕ್ ಖಾತೆಗಳ ಮಾಹಿತಿ ಸಿಗಲಿಕ್ಕೆ ಆರಂಭವಾಯಿತು. ಬೇಕೆನಿಸಿದಾಗ ದಿನಸಿ ಅಂಗಡಿಗೆ ಹೋಗಿ ಸಾಮಾನು ತರುವಂತೆ, ನಗದು ಹಣವನ್ನು ತರಲು ಎಟಿಎಂಗಳು ಬಂದವು. ಮನೆಯಲ್ಲಿಯೇ ಕೂತು, ಸಮಯದ ಮಿತಿಯಿಲ್ಲದೆ ನಮ್ಮ ಬಹುತೇಕ ಬ್ಯಾಂಕ್ ವ್ಯವಹಾರಗಳನ್ನು ನಾವೇ ಮಾಡಿಕೊಳ್ಳುವಂತಾಯಿತು.
ಇವೆಲ್ಲದರ ಒಟ್ಟು ಪರಿಣಾಮವೆಂದರೆ, ಜನಜೀವನ ಇನ್ನಷ್ಟು ಸುಗಮವಾಯಿತು, ಸಮಯದ ಬಹುದೊಡ್ಡ ಉಳಿತಾಯವಾಯಿತು, ಜನರ ದಕ್ಷತೆ (efficiency) ಮತ್ತು ಉತ್ಪಾದಕತೆ (productivity ) ಅನೇಕ ಪಟ್ಟು ಜಾಸ್ತಿಯಾದವು. ಪರಿಣಾಮವಾಗಿ ಜನರ ತಲಾದಾಯ ಹೆಚ್ಚಾಗಿ, ದೇಶದ ಒಟ್ಟು ಉತ್ಪನ್ನ ವರ್ಧಿಸಿ ದೇಶವು ಸಮೃದ್ಧವಾಯಿತು. ಈ ಉದಾಹರಣೆಗಳ ಒಟ್ಟು ನೀತಿಯೆಂದರೆ, ಯಾವ ತಂತ್ರಜ್ಞಾನದ ಬೆಳವಣಿಗೆ/ಅಭಿವೃದ್ಧಿಯೂ ಜನರ ಅಗತ್ಯವನ್ನು ಇಲ್ಲವಾಗಿಸುವುದಿಲ್ಲ; ಆದರೆ ಆ ಅಗತ್ಯಗಳನ್ನು ಇನ್ನೆಲ್ಲೋ ಸೃಷ್ಟಿಸುತ್ತದೆ. ಅದು ಬೇರೆ ಜ್ಞಾನ/ಕೌಶಲವನ್ನು ಯುವಜನರಿಂದ ಅಪೇಕ್ಷಿಸುತ್ತದೆ.
ಅವರು ಅದನ್ನು ಕಲಿಯಲು, ಗಳಿಸಿಕೊಳ್ಳಲು ತಯಾರಿರಬೇಕು ಅಷ್ಟೇ. ಸದ್ಯದ ‘ಎಐ’ ತಂತ್ರ ಜ್ಞಾನವೂ ಇದೇ ರೀತಿಯದ್ದು. ನೀವು ಕಲಿಯುತ್ತಿರುವ ಅಥವಾ ಕಲಿತಿರುವ ಕ್ಷೇತ್ರದಲ್ಲಿ ‘ಎಐ’ ಪ್ರವೇಶಿಸಿದೆ ಎಂದರೆ ನೀವು ಮಾಡಬೇಕಾದ್ದು ಆತಂಕಪಡುವುದಲ್ಲ, ಬದಲಿಗೆ ಆ ಹೊಸ ತಂತ್ರಜ್ಞಾನದ ರೀತಿ-ನೀತಿಗಳನ್ನು ಕಲಿಯುವುದು ಮತ್ತು ಅದರಲ್ಲಿ ಪ್ರಾವೀಣ್ಯವನ್ನು ದಕ್ಕಿಸಿ ಕೊಳ್ಳುವುದು ಅಥವಾ ಅದಕ್ಕೆ ಸಮಾನಾಂತರವಾಗಿ ಹುಟ್ಟಿಕೊಂಡು ಬೇರೊಂದು ಕ್ಷೇತ್ರದಲ್ಲಿ ನಿಮ್ಮ ಅಭಿರುಚಿ, ಸಾಮರ್ಥ್ಯಕ್ಕೆ ಅನುಗುಣವಾಗಿ ನೆಲೆ ಕಂಡುಕೊಳ್ಳುವುದು.
ಭವಿಷ್ಯದ ಉದ್ಯಮಗಳು ಮತ್ತು ಉದ್ಯೋಗಗಳು ನೀವಿಂದು ಊಹಿಸಲಾಗದ ರೂಪಗಳಲ್ಲಿ, ಕ್ಷೇತ್ರ ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲ ದಿನಗಳ ಹಿಂದೆ ನಾನೊಂದು ಎಟಿಎಂಗೆ ಹೋಗಿದ್ದಾಗ, ಅಲ್ಲೊಬ್ಬ ಅದರ ಮಷಿನ್‌ನ ಕಿಂಡಿಯಲ್ಲಿ ಕಾರ್ಡ್ ಅನ್ನು ತೂರಿಸಿ, ದುಡ್ಡಿನ ಮೊತ್ತವನ್ನು ನಮೂದಿಸಿ, ಗುಂಡಿ ಒತ್ತಿದ ನಂತರ ಒಂದು ನಿಮಿಷವಾದರೂ ಹಣ ಬಾರದಿದ್ದಾಗ ತಾಳ್ಮೆ ಕಳೆದುಕೊಂಡು ಆ ಮಷಿನ್‌ಗೆ ಗುದ್ದಲು ಶುರುಮಾಡಿದ.
ನನಗೆ ಆಗ ನೆನಪಾಗಿದ್ದೇನೆಂದರೆ- ‘ಈ ಕಂಪ್ಯೂಟರೈಸೇಷನ್, ಎಟಿಎಂ ತಂತ್ರಜ್ಞಾನವೆಲ್ಲ ಬರುವು ದಕ್ಕೂ ಮುಂಚೆ ನಾವು ಬ್ಯಾಂಕಿಗೆ ಹೋಗಿ, ಚೆಕ್ ಬರೆದು, ಟೋಕನ್ ಸಿಕ್ಕ ನಂತರ ಹಣ ಪಡೆಯ ಲಿಕ್ಕೆ ಸಾಕಷ್ಟು ಸಮಯದವರೆಗೆ ತಾಳ್ಮೆಯಿಂದ ಕಾಯುತ್ತಾ ಇದ್ದೆವು. ಆದರೆ ಹೊಸ ತಂತ್ರಜ್ಞಾನ ವನ್ನು ಆವಾಹಿಸಿಕೊಂಡು, ಅದಕ್ಕೆ ಸಂಪೂರ್ಣ ಒಗ್ಗಿಹೋದ ಜನಾಂಗಕ್ಕೆ ಈಗ ಒಂದು ನಿಮಿಷವೂ ಅಸಹನೀಯ.
ಇಲ್ಲಿ ಇವರಿಗೆ ಕೆಲವೇ ಸೆಕೆಂಡುಗಳಲ್ಲಿ ಕೆಲಸ ಆಗಿ ಬಿಡಬೇಕು’. ನೆನಪಿಟ್ಟುಕೊಳ್ಳಿ, ಪ್ರತಿಯೊಂದು ಹೊಸ ತಂತ್ರಜ್ಞಾನವೂ, ಹೊಸ ಅನುಕೂಲವೂ ಜನರಲ್ಲಿ ‘ಹೊಸ ಅಸಹನೆ’ಯನ್ನು ಹುಟ್ಟು ಹಾಕುತ್ತದೆ ಮತ್ತು ಈ ಅಸಹನೆಯೇ ನೀವು ಊಹಿಸಿರದಂಥ ಹೊಸ ಉದ್ಯಮಗಳನ್ನು ಸೃಷ್ಟಿಸುತ್ತದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕ್ ಇಟ್, ಓಲಾ, ಊಬರ್, ಕಾಲ್ ಸೆಂಟರ್ ಗಳು ಇವೆಲ್ಲಾ ಕೆಲವು ಉದಾಹರಣೆಗಳಷ್ಟೇ.
ಇವು ಹಿಂದೆಂದೂ ಅಸ್ತಿತ್ವದಲ್ಲಿಲ್ಲದ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಮಾಡುತ್ತವೆ. ಹೀಗಾಗಿ ಯಾರೂ ಎಂದೂ ಆತಂಕ ಪಡುವ ಅಗತ್ಯವಿಲ್ಲ. ಇದನ್ನೇ ಅಂದು ನನ್ನ ವಿದ್ಯಾರ್ಥಿಗಳಿಗೆ ಹೇಳಿ ವಿರಮಿಸಿದೆ. “ಹಾಗಾದರೆ, ನಾವೀಗ ಮಾಡಬೇಕಾದುದೇನು?" ಎಂಬ ಪ್ರಶ್ನೆ ತೂರಿ ಬಂತು. ಅದಕ್ಕೆ ನಾನು ಹೇಳಿದ್ದು ಹೀಗೆ: “ನೀವೆಲ್ಲಾ ಮಾಡಬೇಕಾದದ್ದು ಮತ್ತು ಮಾಡುತ್ತಲೇ ಇರಬೇಕಾ ದದ್ದು ಎರಡು ಕೆಲಸಗಳನ್ನು.
ಮೊದಲನೆಯದಾಗಿ, ಹೊರಜಗತ್ತಿನ ಬದಲಾವಣೆಯತ್ತ ತೀವ್ರ ಗಮನವಿಡಿ ಮತ್ತು ಅದನ್ನು ವಿಶ್ಲೇಷಣೆಗೆ ಒಳಪಡಿಸಿ. ನೀವು ತಂತ್ರಜ್ಞಾನದಲ್ಲಿಯ ಬೆಳವಣಿಗೆಗಳ ಕುರಿತಾಗಿ ಮಾಹಿತಿವಂತ ರಾಗಲು, ಹೊಸ ಉದ್ಯಮಗಳ ಮತ್ತು ಉದ್ಯೋಗ ಕ್ಷೇತ್ರಗಳ ಕುರಿತಾಗಿ ಅನ್ವೇಷಿಸಲು ಅಥವಾ ನೀವೇ ಒಂದು ಹೊಸ ಉದ್ಯಮವನ್ನು ಆರಂಭಿಸಲು ಇದು ನಿಮಗೆ ಸಹಾಯಮಾಡುತ್ತದೆ.
ಎರಡನೆಯದಾಗಿ, ನಿರಂತರ ಕಲಿಕೆಗೆ (Life Long Learning) ನಿಮ್ಮ ಮನಸ್ಸನ್ನು ಅಣಿಗೊಳಿಸಿಕೊಳ್ಳಿ. ಹಿಂದಿನ ಕಾಲದಂತೆ, ಕಾಲೇಜಿನಿಂದ ಕಾಲನ್ನು ಹೊರಗಿಟ್ಟ ನಂತರ ಎಲ್ಲ ತೆರನಾದ ಅಧ್ಯಯನಕ್ಕೆ/ಕಲಿಕೆಗೆ ತಿಲಾಂಜಲಿ ನೀಡುವ ಹಾಗೂ ‘ಇನ್ನೇನಿದ್ದರೂ ಬರೀ ಅನುಭವದ ಕಲಿಕೆ ಮಾತ್ರ’ ಎನ್ನುವ ಮನೋಭಾವದಿಂದ ಹೊರಬನ್ನಿ.
ನಿಮ್ಮ ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ಉದಯಿಸುತ್ತಿರುವ ಹೊಸ ಜ್ಞಾನಶಾಖೆಗಳನ್ನು ವಿದ್ಯಾರ್ಥಿಯ ಮನೋಭಾವದಿಂದಲೇ ಅಧ್ಯಯನ ಮಾಡಿ. ಹೀಗಾದಾಗ, ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಯಾವುದೇ ಬದಲಾವಣೆಗೆ ಒಡ್ಡಿಕೊಂಡು/ಒಗ್ಗಿಕೊಂಡು, ನಿಮ್ಮ ಮುಂದಿನ ದಾರಿಯನ್ನು ನೀವೇ ಕಂಡುಕೊಳ್ಳುವಿರಿ". ನನ್ನ ಮಾತಿಗೆ ಸಹಮತ ಎಂಬಂತೆ ಅವರೆಲ್ಲರೂ ತಲೆಯಾಡಿಸಿದರು...
(ಲೇಖಕರು ಶಿಕ್ಷಣತಜ್ಞರು ಹಾಗೂ ಚಿಂತಕರು)