ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಹಳ್ಳಿಯಲ್ಲಿ ಪ್ರಕಟಗೊಂಡ ನೂರಾರು ಕನ್ಡಡ ಪುಸ್ತಕ !

‘ಪುಸ್ತಕ ಮನೆ’ ಪ್ರಕಟಿಸಿರುವ ಈ ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಇನ್ನೊಂದು ವಿಶೇಷವೆಂದರೆ, ಚಂದದ ಮುದ್ರಣ, ಅಂದದ ಮುಖಪುಟ, ಬಳಸಿದ ಕಾಗದದ ಆಯ್ಕೆಯಲ್ಲಿ ಪ್ರಯೋಗಶೀಲತೆ- ಒಟ್ಟಿನಲ್ಲಿ ಸದಭಿರುಚಿಯ ಉತ್ತಮ ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವುದು ಪುಸ್ತಕ ಮನೆಯ ವೈಶಿಷ್ಟ್ಯ ಮತ್ತು ಸಾಧನೆ

ಶಶಾಂಕಣ

ನಿಮಗೆಲ್ಲಾ ಗೊತ್ತಿರುವಂತೆ, ಕರಾವಳಿ ಪ್ರದೇಶದಲ್ಲಿರುವ ಕಾರ್ಕಳ ಪೇಟೆಯು, ತಾಲೂಕು ಕೇಂದ್ರ ವಾದರೂ, ಸುತ್ತಲೂ ಮರಗಿಡಗಳ ದಟ್ಟಣೆ ಹೊಂದಿರುವ, ಹಸಿರು ತುಂಬಿರುವ ಪುಟ್ಟ ಕೇಂದ್ರ; ಪಶ್ಚಿಮ ಘಟ್ಟಗಳಿಗೆ, ಅಲ್ಲಿನ ದಟ್ಟ ಅರಣ್ಯಕ್ಕೆ ಸಾಕಷ್ಟು ಹತ್ತಿರವೇ ಇರುವ ಈ ಪುಟ್ಟ ಪಟ್ಟಣದ ಸುತ್ತಲೂ ಕಾಡು ಆವರಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಹಸಿರು ಕಾನನದ ನಡುವೆ ಇರುವ ಕಾರ್ಕಳದ ಬಸ್ ನಿಲ್ದಾಣದಿಂದ ನಾಲ್ಕೈದು ಕಿ.ಮೀ. ಸಾಗಿದರೆ, ಇನ್ನೇನು ಸಹ್ಯಾದ್ರಿಯ ದಟ್ಟ ಅರಣ್ಯಪ್ರದೇಶವನ್ನೇ ತಲುಪಿದೆವು ಎನ್ನುವಷ್ಟರಲ್ಲಿ, ಬಲಭಾಗದಲ್ಲೊಂದು ಚಂದದ ಕಟ್ಟಡ ಕಾಣಿಸುತ್ತದೆ.

ಇದೇ ಕಟ್ಟಡದಲ್ಲಿರುವುದು ‘ಪುಸ್ತಕ ಮನೆ’ಯ ಮೂಲಸ್ಥಾನ. 2024ರಿಂದ ಇದುವರೆಗೆ ಸುಮಾರು 125 ಸದಭಿರುಚಿಯ ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವ ‘ಪುಸ್ತಕ ಮನೆ’ಯು, ಹಸಿರು ತುಂಬಿದ ಕಾಡಿನ ನಡುವೆ ಅರಳಿದ ಒಂದು ‘ಅಕ್ಷರ ಮಂಟಪ’!

ಇವರು ಇದುವರೆಗೆ ಪ್ರಕಟಿಸಿರುವ 125 ಪುಸ್ತಕಗಳ ಪೈಕಿ ಸುಮಾರು 25 ಕೃತಿಗಳು, ಕಾದಂಬರಿ ಮತ್ತು ಸಣ್ಣಕಥಾ ಸಂಕಲನಗಳ ಪ್ರಕಾರಕ್ಕೆ ಸೇರಿದವು; ಉಳಿದಂತೆ ವಿಮರ್ಶೆ, ಸೂರ್ತಿ ತುಂಬುವ ಬರಹಗಳ ಸಂಕಲನ, ಕವನ ಸಂಕಲನಗಳು, ಪರಿಸರ ಪ್ರೀತಿಯ ಪುಸ್ತಕಗಳು, ಮಕ್ಕಳ ಕಥೆಗಳು ಸೇರಿವೆ. ಕನ್ನಡದ ಕೆಲವು ಉತ್ತಮ ಪುಸ್ತಕಗಳು ಮರುಮುದ್ರಣಕ್ಕಾಗಿ ಕಾಯುತ್ತಿದ್ದರೆ, ಅಂತಹ ಕೃತಿಗಳನ್ನು ಸಹ ಆಯ್ಕೆ ಮಾಡಿ, ಇವರು ಪ್ರಕಟಿಸಿದ್ದಾರೆ ಮತ್ತು ಆಸಕ್ತ ಓದುಗರಿಗೆ ಲಭ್ಯವಾಗುವಂತೆ ಮಾಡಿದ್ದಾರೆ.

‘ಪುಸ್ತಕ ಮನೆ’ ಪ್ರಕಟಿಸಿರುವ ಈ ನೂರಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಇನ್ನೊಂದು ವಿಶೇಷವೆಂದರೆ, ಚಂದದ ಮುದ್ರಣ, ಅಂದದ ಮುಖಪುಟ, ಬಳಸಿದ ಕಾಗದದ ಆಯ್ಕೆಯಲ್ಲಿ ಪ್ರಯೋಗಶೀಲತೆ- ಒಟ್ಟಿನಲ್ಲಿ ಸದಭಿರುಚಿಯ ಉತ್ತಮ ಕನ್ನಡ ಪುಸ್ತಕಗಳನ್ನು ಪ್ರಕಟಿಸಿರುವುದು ಪುಸ್ತಕ ಮನೆಯ ವೈಶಿಷ್ಟ್ಯ ಮತ್ತು ಸಾಧನೆ. ಸಾಧನೆ ಏಕೆಂದರೆ, ಪುಟ್ಟ ಪಟ್ಟಣದಲ್ಲಿದ್ದುಕೊಂಡು ಇಂತಹ ಸಾರಸ್ವತ ಸಾಹಸವನ್ನು ಮಾಡುವುದಕ್ಕೆ ಧೈರ್ಯ ಬೇಕು, ಆಸಕ್ತಿ ಬೇಕು, ಜನರಿಗೆ ಪುಸ್ತಕಗಳನ್ನು ತಲುಪಿಸಲು ಕಷ್ಟವನ್ನೂ ಪಡಬೇಕು!

ಇದನ್ನೂ ಓದಿ: Shashidhara Halady Column: ಕಾರಂತರ ಸುಳಿಯಲ್ಲಿ ಕನ್ನಡದ ಮಕ್ಕಳು !

ಜತೆಯಲ್ಲೇ, ‘ಪುಸ್ತಕ ಮನೆ’ಯು, ಪ್ರತಿವರ್ಷ, ‘ಪುಸ್ತಕ ಧಾರಾ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿ, ತಾನು ಪ್ರಕಟಿಸಿದ ಪುಸ್ತಕಗಳನ್ನು ಲೋಕಾರ್ಪಣೆ ಮಾಡುತ್ತದೆ ಮತ್ತು ಆಯಾ ಲೇಖಕರನ್ನು ಸನ್ಮಾನಿಸುತ್ತದೆ! ಅದೇ ಸಂದರ್ಭದಲ್ಲಿ, ಕನ್ನಡ ಪುಸ್ತಕವೊಂದಕ್ಕೆ (ಹಿಂದಿನ ವರ್ಷ ಪ್ರಕಟಗೊಂಡ ಕನ್ನಡ ಪುಸ್ತಕವಾಗಿರಬೇಕು) ‘ಪುಸ್ತಕ ಮನೆ ಪ್ರಶಸ್ತಿ’ಯನ್ನು ಸಹ ನೀಡುತ್ತದೆ, ಆ ಮೂಲಕ, ನಾಡಿನ ಬೇರೆ ಬೇರೆ ಪ್ರಕಾಶನಗಳು ಹೊರತಂದು ಉತ್ತಮ ಕೃತಿಯೊಂದನ್ನು ಪ್ರೋತ್ಸಾಹಿಸಿ, ಇನ್ನಷ್ಟು ಉತ್ತಮ ಪುಸ್ತಕಗಳು ಹೊರಬರಲು ಪ್ರೇರಣೆಯನ್ನೂ ನೀಡುತ್ತದೆ. ಈ ಪ್ರಕಾಶನ ಸಂಸ್ಥೆಯು ಪೂರ್ತಿ ಹೆಸರನ್ನು ಸಹ ಹೇಳಲೇಬೇಕು: ‘ಪುಸ್ತಕ ಮನೆ’ ಎಂಬುದು ಹೃಸ್ವ ಹೆಸರು; ‘ಕ್ರಿಯೆಟಿವ್ ಪುಸ್ತಕ ಮನೆ’ ಇದು ಪೂರ್ತಿ ಹೆಸರು. ಈ ಹೆಸರಿಗೊಂದು ಕುತೂಹಲಕಾರಿ ಹಿನ್ನೆಲೆಯೂ ಇದೆ.

2020ರಲ್ಲಿ ಕಾರ್ಕಳದ ಹೊರವಲಯದಲ್ಲಿ ‘ಕ್ರಿಯೆಟಿವ್ ಪಿ.ಯು ಕಾಲೇಜು’ ಆರಂಭಗೊಂಡಿತು. ಅಶ್ವತ್ಥ್ ಎಸ್.ಎಲ್ ಅವರ ನೇತೃತ್ವದಲ್ಲಿ ಏಳು ಮಂದಿ ಉತ್ಸಾಹಿಗಳು ಆರಂಭಿಸಿದ ಈ ಪಿ.ಯು ಕಾಲೇಜು, ಇಂದು ಉತ್ತಮ ಫಲಿತಾಂಶ ನೀಡುವಲ್ಲಿ ಹೆಸರು ಮಾಡಿದೆ. ಇತರ ಪಠ್ಯಕ್ರಮದ ಜತೆಯಲ್ಲೇ, ವಿಜ್ಞಾನ ವಿಷಯ ಗಳಲ್ಲೂ ಇಲ್ಲಿ ತರಗತಿಗಳು ನಡೆಯುತ್ತಿದ್ದು, ಪಿಯು ನಂತರದ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ತಾಂತ್ರಿಕ, ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ವಿಶೇಷ ತರಬೇತಿಯನ್ನೂ ಇಲ್ಲಿ ನೀಡಲಾಗುತ್ತದೆ ಮತ್ತು ದೂರದ ಊರುಗಳಿಂದ ಬಂದಿರುವ ನೂರಾರು ವಿದ್ಯಾರ್ಥಿಗಳು ಸಹ ಇಲ್ಲಿ ಅಧ್ಯಯನ ನಿರತರಾಗಿದ್ದಾರೆ.

ಆದರೆ ಕ್ರಿಯೆಟಿವ್ ಪಿಯು ಕಾಲೇಜು, ಅಂಕಗಳಿಕೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ‍್ಯಾಂಕ್ ಗಳಿಕೆಗೆ ಸೀಮಿತವಾಗದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಯನ್ನು ಬೆಳೆಸುವ ಕೆಲಸಕ್ಕೆ ಕೈ ಹಾಕಿದೆ. ಇದಕ್ಕಾಗಿ ಹುಟ್ಟಿದ್ದೇ, ‘ಕ್ರಿಯೆಟಿವ್ ಪುಸ್ತಕ ಮನೆ’.

ಇದೊಂದು ಅಪೂರ್ವ ಕೆಲಸ, ಸಾಹಸ; ಕರ್ನಾಟಕದ ಬೇರಾವ ವಿದ್ಯಾಸಂಸ್ಥೆಯೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ, ತನ್ನ ವಿದ್ಯಾರ್ಥಿಗಳಿಗೆ ಸಾಹಿತ್ಯದ ವಾತಾವರಣವನ್ನು ಕಲ್ಪಿಸಿದ ಉದಾಹರಣೆ ನೆನಪಾಗುತ್ತಿಲ್ಲ. ಕಾಲೇಜಿನ ಸ್ಥಾಪಕ ಸದಸ್ಯರಾದ ಅಶ್ವತ್ಥ ಎಸ್.ಎಲ್ ಅವರ ಸಾಹಿತ್ಯಾಭಿರುಚಿ ಮತ್ತು ಜನರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಆಸಕ್ತಿಯೇ ಇದಕ್ಕೆ ಮುಖ್ಯ ಕಾರಣ. ಕ್ರಿಯೆಟಿವ್ ಪಿಯು ಕಾಲೇಜು, ತನ್ನದೇ ಒಂದು ಭಾಗವಾಗಿ, ‘ಪುಸ್ತಕ ಮನೆ’ಯನ್ನು ಆಂಭಿಸಿದೆ, ಈಗಾಗಲೇ 125 ಕನ್ನಡ ಪುಸ್ತಕಗಳನ್ನೂ ಪ್ರಕಟಿಸಿದೆ.

71 ಒಕ

ಪುಸ್ತಕ ಮನೆಯ ಪ್ರಕಟಣೆಗಳನ್ನು ಕೈಗೆತ್ತಿಕೊಂಡರೆ, ಆರಂಭದಲ್ಲೇ ಕಾಣಿಸುವ ಪ್ರಕಾಶಕರ ಮಾತಿನಲ್ಲಿ, ಅಶ್ವತ್ಥ್ ಎಸ್.ಎಲ್. ಬರೆದಿರುವ ಸಾಲುಗಳು ಮನ ತಟ್ಟುತ್ತವೆ: ‘... ಪುಸ್ತಕಗಳ ಸಿಗುವಿಕೆ ಯನ್ನು ಕೇವಲ ಮಹಾನಗರಗಳಿಗೆ ಸೀಮಿತವಾಗಿಸದೆ, ಪ್ರತೀ ತಾಲ್ಲೂಕಿನಲ್ಲೂ, ಚಿಕ್ಕ ಚಿಕ್ಕ ನಗರಗಳಲ್ಲೂ ಹಾಗೂ ಪ್ರತೀ ಊರುಗಳ್ಲೂ ಪುಸ್ತಕಗಳು ಸಿಗುವಂತಾಗಬೇಕೆಂಬ ಹೆಬ್ಬಯಕೆ ಯೊಂದಿಗೆ, ಕ್ರಿಯೆಟಿವ್ ಪುಸ್ತಕ ಮನೆ ಕಾರ್ಯೋನ್ಮುಖವಾಗಿದೆ. ಊರೂರಿಗೆ ಪುಸ್ತಕ ತಲುಪಿಸುವ, ಹಳ್ಳಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಾಹಿತ್ಯ ಪುಸ್ತಕ ಹಂಚುವ ಕೆಲಸಗಳು ಸಾಗುತ್ತಲಿದೆ.

ಹಲವಾರು ಯುವ ಬರಹಗಾರರಿಗೆ ಒಳ್ಳೆಯ ವೇದಿಕೆಯನ್ನು ಒದಗಿಸುವ ಜೊತೆಗೆ, ಖ್ಯಾತ ಬರಹಗಾರರ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ಪ್ರಕಟಿಸುವ ಮೂಲಕ ಅಕ್ಷರ ಅಭಿಮಾನಿ ಗಳಿಗೆ ಜ್ಞಾನದ ಹೂರಣ ನೀಡಬೇಕೆನ್ನುವ ಕಲ್ಪನೆಯೊಂದಿಗೆ ವಿಧವಿಧವಾದ ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ.’ ವಿದ್ಯಾರ್ಥಿಗಳು ಅಂಕ ಗಳಿಕೆಯ ಜತೆಯಲ್ಲೇ, ಸಾಹಿತ್ಯ ಮತ್ತು ಸಂಸ್ಕೃತಿ ಯಲ್ಲೂ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂಬುದು ಇವರ ಅಭಿಲಾಷೆ.

ಆ ನಿಟ್ಟಿನಲ್ಲಿ, ಪುಸ್ತಕ ಮನೆಯು ಹೊಸ ಹೊಸ ಅಭಿಯಾನಗಳನ್ನು ಸಾಹಸಗಳನ್ನು ಕೈಗೊಂಡಿರು ವುದು ವಿಶೇಷ. ಹೆಸರಾಂತ ಲೇಖಕರ ಪುಸ್ತಕಗಳನ್ನು ಮತ್ತು ಜತೆಯಲ್ಲೇ ಹೊಸ ಬರಹಗಾರರ ಪುಸ್ತಕಗಳನ್ನು ಮುದ್ರಿಸುವುದು, ಪ್ರಕಟಿಸುವುದು ನಿಜಕ್ಕೂ ಉದಾತ್ತ ಕೆಲಸ. ಇವುಗಳನ್ನು ಜನರಿಗೆ, ವಿದ್ಯಾರ್ಥಿಗಳಿಗೆ, ಆಸಕ್ತ ಓದುಗರಿಗೆ ತಲುಪಿಸುವ ಬಗೆ ಹೇಗೆ? ಇದಕ್ಕೆಂದೇ ಈ ಸಂಸ್ಥೆಯು ಹಲವು ವಿನೂತನ ದಾರಿಗಳನ್ನು ಹುಡುಕಿಕೊಂಡಿದೆ. ಕ್ರಿಯೆಟಿವ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ ೨,೦೦೦ ದಾಟಿದೆ; ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಕೇಕ್ ಕತ್ತರಿಸುವುದಿಲ್ಲ, ಐಸ್‌ಕ್ರೀಂ ತರಿಸುವುದಿಲ್ಲ; ಬದಲಿಗೆ, ಅದೇ ಮೊತ್ತದಲ್ಲಿ ಪುಸ್ತಕಗಳನ್ನು ಖರೀದಿಸುತ್ತಾರೆ! ಮತ್ತು ಆ ಪುಸ್ತಕಗಳನ್ನು, ತಾವು ಓದಿದ ಶಾಲೆಗಳಿಗೆ ಕೊಡುಗೆಯಾಗಿ ನೀಡುತ್ತಾರೆ!

ಕ್ರಿಯೆಟಿವ್ ಪಿಯು ಕಾಲೇಜು ಉತ್ತಮ ಫಲಿತಾಂಶ ನೀಡುತ್ತಾ ಬಂದಿರುವುದರಿಂದ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದ ನೂರಾರು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ; ಅವರ ಜನ್ಮದಿನದ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಆಚರಿಸುವ ವಿನೂತನ ರೀತಿಯ ಜನ್ಮದಿನಾಚರಣೆಯ ಫಲವಾಗಿ, ಅವರ ಜನ್ಮಸ್ಥಳಕ್ಕೆ ‘ಪುಸ್ತಕ ಮನೆ’ ಪ್ರಕಟಿಸಿರುವ ಒಂದೆರಡಾದರೂ ಪುಸ್ತಕಗಳು ಪಯಣ ಮಾಡುತ್ತವೆ!

ಜತೆಯಲ್ಲೇ, ಎಲ್ಲಾ ವಿದ್ಯಾರ್ಥಿಗಳೂ, ಬೇರೆ ಬೇರೆ ಸಂದರ್ಭಗಳಲ್ಲಿ ಒಂದೆರಡು ಪುಸ್ತಕಗಳನ್ನು ಖರೀದಿಸುವುದು ಮಾಮೂಲು ಎನಿಸಿದೆ. ಆ ಮೂಲಕ, ಕನ್ನಡ ಪುಸ್ತಕಗಳು ನಾಡಿನಾದ್ಯಂತ ಪಸರಿಸುವಂತೆ ಮಾಡುತ್ತಿದೆ, ಪುಸ್ತಕ ಮನೆ. ಹಳ್ಳಿ ಹಳ್ಳಿಗಳಿಗೆ ಪುಸ್ತಕಗಳನ್ನು ತಲುಪಿಸಲು ಇವರು ಆರಂಭಿಸಿರುವ ಇನ್ನೊಂದು ಸಂವಹನ ಮಾಧ್ಯಮವೆಂದರೆ, ‘ಪುಸ್ತಕ ರಥ!’ ಅಂದರೆ, ವಾಹನ ವೊಂದರಲ್ಲಿ ಪುಸ್ತಕಗಳನ್ನು ತುಂಬಿ, ಊರೂರಿನ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವುದು.

ಪುಸ್ತಕ ಮನೆಯ ಫಲಕವನ್ನು ಹೊತ್ತ, ಆಕರ್ಷಕ ಭಿತ್ತಿಫಲಕಗಳನ್ನು ಹೊಂದಿರುವ ಒಂದು ವ್ಯಾನ್, ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಕೈಗೊಂಡಿದೆ. ಕರಾವಳಿ ಜಿಲ್ಲೆಯಲ್ಲಿ ನಡೆಯುವ ಯಕ್ಷಗಾನ, ಸಾಹಿತ್ಯ ಸಮ್ಮೇಳನ, ಜಾತ್ರೆ ಮೊದಲಾದ ಸಂದರ್ಭಗಳಲ್ಲಿ ಭಾಗವನಿಸುವ ಈ ವ್ಯಾನ್, ಆಕರ್ಷಕ ವಿನ್ಯಾಸವನ್ನೂ ಹೊಂದಿದೆ. ಅದರ ಹಿಂಭಾಗದ ವಿನ್ಯಾಸವು ಹೇಗಿದೆಯೆಂದರೆ, ಅದನ್ನು ಬಿಚ್ಚಿದಾಗ, ಪುಸ್ತಕ ಪ್ರಕದರ್ಶನದ ಕಪಾಟುಗಳು, ಹೊರಗೆ ತೆರೆದುಕೊಳ್ಳುತ್ತವೆ.

ಸಮಾರಂಭ ನಡೆಯುವ ದಾರಿಯಲ್ಲಿ ನಿಂತುಕೊಳ್ಳುವ ಈ ವ್ಯಾನ್, ನೂರಾರು ಪುಸ್ತಕಗಳನ್ನು ಜನರಿಗೆ ಪರಿಚಯಿಸುತ್ತದೆ. ಪುಸ್ತಕ ಮನೆ ಪ್ರಕಟಿಸಿರುವ ಪುಸ್ತಕಗಳ ಜತೆಯಲ್ಲೇ, ನಮ್ಮ ನಾಡಿನ ಇತರ ಪ್ರಕಾಶನಗಳ ಪುಸ್ತಕಗಳನ್ನು ಸಹ ಈ ಪುಸ್ತಕರಥವು ಪ್ರದರ್ಶಿಸುವುದು ಮತ್ತು ಮಾರಾಟಕ್ಕೆ ಒದಗಿಸಿರುವುದು ವಿಶೇಷ. ಇಂತಹ ಪುಸ್ತಕ ರಥಗಳ ಪರಿಕಲ್ಪನೆಯು ತೀರ ಹೊಸದೇನಲ್ಲ, ಈ ಹಿಂದೆಯೂ ನಮ್ಮ ರಾಜ್ಯದಲ್ಲಿ ಅಲ್ಲಲ್ಲಿ ಸಾಕಾರಗೊಂಡಿದೆ; ಆದರೆ, ಪುಸ್ತಕ ಮನೆಯ ಈ ಪುಸ್ತಕ ರಥವು, ಬಿರುಸಾಗಿ ಪುಸ್ತಕ ಮಾರಾಟಕ್ಕೆ ತೊಡಗಿಕೊಂಡಿರುವುದು ವಿಶೇಷ.

ಇತ್ತೀಚೆಗೆ ವೀರಲೋಕ ಸಂಸ್ಥೆಯು ದೂರದ ಬೀದರ್ ನಲ್ಲಿ ಪುಸ್ತಕ ಸಂತೆ ನಡೆಸಿದಾಗ, ಕಾರ್ಕಳ ದಿಂದ ಸಾಗಿದ ಪುಸ್ತಕ ಮನೆಯ ಈ ಸಂಚಾರಿ ಮಳಿಗೆಯು ಅಲ್ಲಿ ನೂರಾರು ಪುಸ್ತಕಗಳನ್ನು ಪ್ರದರ್ಶಿಸಿತ್ತು. ಬೆಂಗಳೂರು, ತುಮಕೂರು ಮೊದಲಾದ ನಗರಗಳಲ್ಲಿ ನಡೆದ ಪುಸ್ತಕೋತ್ಸವ ಗಳಲ್ಲೂ, ಹಳ್ಳಿಯೂರಿನಿಂದ ಬಂದ ಈ ವ್ಯಾನು, ತನ್ನ ಇರವನ್ನು ಸಾರಿತ್ತು, ಜನರ ಗಮನವನ್ನೂ ಸೆಳೆದಿತ್ತು. ಈ ವ್ಯಾನ್ ಮೂಲಕ, ತನ್ನ ಪ್ರಕಟಣೆಗಳ ಜತೆ ಇತರ ಪುಸ್ತಕಗಳನ್ನು ಸಹ ಜನರಿಗೆ ತಲುಪಿಸುತ್ತಿರುವುದು ‘ಪುಸ್ತಕ ಮನೆ’ಯ ವಿಶೇಷ.

‘ಕನ್ನಡದಲ್ಲಿ ಗಂಭೀರ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ, ರೀಲ್ಸ್ ಮೊದಲಾದ ಇತರ ಮಾಧ್ಯಮ ಗಳ ಭರಾಟೆಯಿಂದಾಗಿ, ಪುಸ್ತಕ ಖರೀದಿಸಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂಬ ಅಭಿಪ್ರಾಯ, ಗೊಣಗು ಸಾರ್ವತ್ರಿಕವಾಗುತ್ತಿರುವ ಈ ಸನ್ನಿವೇಶದಲ್ಲಿ, ರಾಜಧಾನಿಯಿಂದ ಬಹುದೂರದಲ್ಲಿರುವ, ಗ್ರಾಮೀಣ ವಾತಾವರಣವೇ ಪ್ರಧಾನವಾಗಿರುವ ಕಾರ್ಕಳದಲ್ಲಿ, ಪುಸ್ತಕ ಮನೆಯು ತನ್ನ ಸಾಹಸವನ್ನು ಮುಂದುವರಿಸಿರುವುದು, ಹೊಸ ಹೊಸ ಕನ್ನಡ ಪುಸ್ತಕಗಳನ್ನು ಹೊರತರುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

ತನ್ನ ಈ ಸಾಹಸದ ಮೂಲಕ, ಕನ್ನಡ ಓದುಗರ ಸಂಖ್ಯೆ ಇನ್ನೂ ಸಾಕಷ್ಟಿದೆ ಎಂದು ಋಜುವಾತು ಗೊಳಿಸಿದೆ. ನಗರಗಳಲ್ಲಿ ನಡೆಯುತ್ತಿರುವ ಪುಸ್ತಕ ಪ್ರಕಟಣೆಗಳ ರೀತಿಯಲ್ಲೇ, ಗ್ರಾಮೀಣ ಪ್ರದೇಶದಿಂದಲೂ ಕನ್ನಡ ಪುಸ್ತಕಗಳನ್ನು ಪ್ರಕಾಶಿಸಬಹುದು ಎಂದು ಪುಸ್ತಕ ಮನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಇಪ್ಪತ್ತನೆಯ ಶತಮಾನದಲ್ಲಿ, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂತಹದ್ದೇ ಗಂಭೀರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದುದು ಇಲ್ಲಿ ನೆನಪಾಗುತ್ತದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಹೆಗ್ಗೋಡು ಅಂತಹ ಒಂದು ಗ್ರಾಮೀಣ ಕೇಂದ್ರ; ಕಾಡುಪ್ರದೇಶದ ನಡುವೆ ಇದ್ದ ಹೆಗ್ಗೋಡಿನಲ್ಲಿ ಪುಸ್ತಕ ಪ್ರಕಾಶನದ ಜತೆಯಲ್ಲೇ, ನಾಟಕ ಮತ್ತು ರಂಗಭೂಮಿ ಚಟುವಟಿಕೆಗಳು ನಡೆಯುತ್ತಿದ್ದವು, ಈಗಲೂ ಮುಂದುವರಿದಿದೆ. ಮೂಡುಬಿದಿರೆ ಸಮೀಪದ ಕಾಂತಾವರ ಎಂಬ ಹಳ್ಳಿಯು ಅಂತಹದ್ದೇ ಇನ್ನೊಂದು ತಾಣ. ಅಲ್ಲಿನ ಕನ್ನಡ ಸಂಘವು ಹಲವು ಪುಸ್ತಕಗಳನ್ನು ಹೊರತಂದಿದೆ, ಕಲಾಚಟುವಟಿಕೆಗಳನ್ನು ನಡೆಸುತ್ತಿದೆ, ಪ್ರತಿವರ್ಷ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ; ಅದೂ ಸಹ ಕಾಡಿನ ನಡುವೆ ಇರುವ ಒಂದು ಹಳ್ಳಿ; ಐವತ್ತು ವರ್ಷಗಳ ಹಿಂದೆಯೇ ಅಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆ ಗಳು ಆರಂಭಗೊಂಡಿದ್ದು, ಇಂದಿಗೂ ಮುಂದುವರಿದಿವೆ.

1930ರ ದಶಕದಲ್ಲಿ ಪುತ್ತೂರು ಸನಿಹದ ‘ಬಾಲವನ’ದಲ್ಲಿ ಶಿವರಾಮ ಕಾರಂತರು ಇಂತಹ ಪ್ರಯೋಗ ಮತ್ತು ಸಾಹಸವನ್ನು ಆರಂಭಿಸಿದ್ದರು; ಪುಸ್ತಕ ಪ್ರಕಾಶನ, ನಾಟಕಗಳ ಪ್ರದರ್ಶನ, ಮಕ್ಕಳ ಅಸಾಂಪ್ರದಾಯಿಕ ಶಿಕ್ಷಣ ಮೊದಲಾದ ಉತ್ತಮ ಕೆಲಸಗಳು ಅಲ್ಲಿ ನಡೆಯುತ್ತಿದ್ದವು; ಆದರೆ, ಬೇರೆ ಬೇರೆ ಕಾರಣಗಳಿಂದಾಗಿ, ಈಗ ಅದು ನಿಂತುಹೋಗಿದೆ. ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೆಳಗೆರೆ ಕೃಷ್ಣಶಾಸಿಗಳು ಪುಸ್ತಕ ಪ್ರಕಟಣೆಯೂ ಸೇರಿದಂತೆ, ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗ ಳನ್ನುನಡೆಸುತ್ತಿದ್ದರು.

ಇವು ತಕ್ಷಣ ನೆನಪಾದ, ಸಾಹಿತ್ಯಕ ಚಟುವಟಿಕೆ ನಡೆಸುತ್ತಿರುವ ಗ್ರಾಮೀಣ ಕೇಂದ್ರಗಳು. ಇನ್ನೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಸಣ್ಣ ಮಟ್ಟ ದಲ್ಲಾದರೂ ಇಂದಿಗೂ ನಡೆಯುತ್ತಿವೆ. ಇಲ್ಲಿ ಗ್ರಾಮೀಣ ಕೇಂದ್ರಗಳು ಎಂದು ಒತ್ತಿ ಹೇಳುತ್ತಿರುವುದೇಕೆಂದರೆ, ಬೆಂಗಳೂರು, ಮೈಸೂರು ಮತ್ತು ಧಾರವಾಡದಂತಹ ದೊಡ್ಡ ನಗರಗಳಲ್ಲಿ ಕಲೆ ಮತ್ತು ಸಾಹಿತ್ಯಕ ಚಟುವಟಿಕೆಗಳು ನಡೆಯುವಾಗ, ಆ ನಗರಗಳಲ್ಲಿರುವ ಮೂಲಭೂತ ಸೌಕರ್ಯಗಳು, ಅಽಕ ಸಂಖ್ಯೆಯ ಶಿಕ್ಷಿತರು, ಸನಿಹದಲ್ಲೇ ಇರುವ ವಿಶ್ವವಿದ್ಯಾಲಯ ಮತ್ತು ಇತರ ಸಾರಸ್ವತ ಸಂಪನ್ಮೂಲಗಳು ನೆರವಿಗೆ ಬರುತ್ತವೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಆಸಕ್ತರನ್ನು ಕಲೆಹಾಕಿ, ಇತರ ಆಸಕ್ತರನ್ನು ದೂರದ ಊರುಗಳಿಂದ ಆಕರ್ಷಿತರನ್ನಾಗಿಸುವುದು ಬಹು ದೊಡ್ಡ ಸವಾಲು, ಸಾಹಸ. ಅಂತಹ ಸವಾಲನ್ನು ಮೀರಿ ನಿಂತ ಹಲವು ಕೇಂದ್ರಗಳ ಸಾಲಿಗೆ ಹೊಸ ಸೇರ್ಪಡೆ ಎಂದರೆ, ಕಾರ್ಕಳ ಪಟ್ಟಣದ ಹೊರವಲಯದಲ್ಲಿರುವ ‘ಕ್ರಿಯೆಟಿವ್ ಪುಸ್ತಕ ಮನೆ’ ಎಂದೇ ನನ್ನ ಗ್ರಹಿಕೆ.

ಶಶಿಧರ ಹಾಲಾಡಿ

View all posts by this author