Shashidhara Halady Column: ಕಾರಂತರ ಸುಳಿಯಲ್ಲಿ ಕನ್ನಡದ ಮಕ್ಕಳು !
ಕಾದಂಬರಿ ಕ್ಷೇತ್ರದಲ್ಲಿ ಅವರ ಕೊಡುಗೆ 45 ಮಹತ್ವದ ಕಾದಂಬರಿಗಳು; ಇದಲ್ಲದೇ ಕನ್ನಡದಲ್ಲಿ ಅವರ ಮೂಲಕ ಸುಮಾರು 400 ಪುಸ್ತಕಗಳು ಹೊರಬಂದಿವೆ; ಇವುಗಳಲ್ಲಿ ಮಕ್ಕಳಿಗಾಗಿ ಬಾಲ ಪ್ರಪಂಚ ಎಂಬ ವಿಶ್ವಕೋಶ, ಇತರ ವಿಶ್ವಕೋಶಗಳು, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಂಥ ಗಳು, ಯಕ್ಷಗಾನಕ್ಕೆ ಸಂಬಂಧಿ ಸಿದ ಪುಸ್ತಕಗಳು, ಮಕ್ಕಳ ಪಠ್ಯಗಳು, ಶಬ್ದಕೋಶ ಮತ್ತು 200ಕ್ಕೂ ಅಧಿಕ ಮಕ್ಕಳಿಗಾಗಿ ಪುಸ್ತಕಗಳು (ಅನುವಾದವೂ ಒಳಗೊಂಡಂತೆ) ಸೇರಿವೆ.
-
ಶಶಾಂಕಣ
ಇತ್ತೀಚೆಗೆ ಲೋಕಾರ್ಪಣೆಗೊಂಡ ‘ಕಾರಂತರ ಸುಳಿಯಲ್ಲಿ’ ಗ್ರಂಥವನ್ನೋದಿದ ನಂತರ, ಹಲವು ದಿನಗಳ ಕಾಲ, ಅದೇ ಓದಿನ ಗುಂಗಿನಲ್ಲಿದ್ದೆ; ಆ ಪುಸ್ತಕದಲ್ಲಿ ಶಿವರಾಮ ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ, ಮಾಲವಿಕಾ ಕಪೂರ್ ಮತ್ತು ಕ್ಷಮಾರಾವ್ ಅವರು, ತಮ್ಮ ತಂದೆಯನ್ನು ನೆನಪಿಸಿಕೊಂಡ ಆಪ್ತ ಶೈಲಿಯು, ಮನಸ್ಸಿನಲ್ಲಿ ಸುತ್ತುತ್ತಲೇ ಇತ್ತು.
‘ಗ್ರೋಯಿಂಗ್ ಅಪ್ ಕಾರಂತ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಮೊದಲು ಪ್ರಕಟಗೊಂಡು, ಜನಮೆಚ್ಚುಗೆ ಗಳಿಸಿದ ಈ ಪುಸ್ತಕ ವನ್ನು ಕನ್ನಡಕ್ಕೆ ಅನುವಾದಿಸಿದವರು, ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ ಅವರು. ಶಿವರಾಮ ಕಾರಂತರ ಮೂವರೂ ಮಕ್ಕಳು ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಬರೆದ ಹಲವು ಅಧ್ಯಾಯಗಳಲ್ಲಿ, ಕಾರಂತರ ಬದುಕು ಮತ್ತು ಅದನ್ನು ಅವರ ಮಕ್ಕಳು ಗ್ರಹಿಸಿದ ರೀತಿಯು ಈ ಪುಸ್ತಕದ ಹೂರಣ.
ಕುತೂಹಲದಿಂದ, ಸರಾಗವಾಗಿ ಓದಿಸಿಕೊಂಡು ಹೋಗುವ ‘ಕಾರಂತರ ಸುಳಿಯಲ್ಲಿ’ ಪುಸ್ತಕವು, ತಂದೆ-ಮಕ್ಕಳ ಆಪ್ತ ಅನುಬಂಧವನ್ನು ತೆರೆದಿಡುವುದರ ಜತೆಯಲ್ಲೇ, ಕನ್ನಡ ಸಾರಸ್ವತ ಲೋಕದ ಪರಿಚಯ ವನ್ನು ವಿಶಿಷ್ಟವಾಗಿ ಮಾಡಿಕೊಡುತ್ತದೆ. ಈ ಪುಸ್ತಕದಲ್ಲಿ ಓದುಗರಿಗೆ ದಕ್ಕುವ ಕೆಲವು ಮಾಹಿತಿಗಳಂತೂ, ಅನನ್ಯ, ಅಪೂರ್ವ ಮತ್ತು ಮಹತ್ವದ್ದು. ಶಿವರಾಮ ಕಾರಂತರು ಅಪ್ರತಿಮ ಸಾಹಸಿಗರು.
ಕಾದಂಬರಿ ಕ್ಷೇತ್ರದಲ್ಲಿ ಅವರ ಕೊಡುಗೆ 45 ಮಹತ್ವದ ಕಾದಂಬರಿಗಳು; ಇದಲ್ಲದೇ ಕನ್ನಡದಲ್ಲಿ ಅವರ ಮೂಲಕ ಸುಮಾರು 400 ಪುಸ್ತಕಗಳು ಹೊರಬಂದಿವೆ; ಇವುಗಳಲ್ಲಿ ಮಕ್ಕಳಿಗಾಗಿ ಬಾಲ ಪ್ರಪಂಚ ಎಂಬ ವಿಶ್ವಕೋಶ, ಇತರ ವಿಶ್ವಕೋಶಗಳು, ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಂಥ ಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳು, ಮಕ್ಕಳ ಪಠ್ಯಗಳು, ಶಬ್ದಕೋಶ ಮತ್ತು 200ಕ್ಕೂ ಅಧಿಕ ಮಕ್ಕಳಿಗಾಗಿ ಪುಸ್ತಕಗಳು (ಅನುವಾದವೂ ಒಳಗೊಂಡಂತೆ) ಸೇರಿವೆ.
ಇದನ್ನೂ ಓದಿ: Shashidhara Halady Column: ಮಳೆ ನೀರನ್ನೇ ಕುಡಿಯುತ್ತಿದ್ದ ಆ ದಿನಗಳು!
1902ರಲ್ಲಿ ಜನಿಸಿದ ಅವರು, 20ನೆಯ ಶತಮಾನದುದ್ದಕ್ಕೂ ನಮ್ಮ ನಾಡಿಗೆ ತಮ್ಮ ಕೊಡುಗೆಯನ್ನು ನೀಡುತ್ತಲೇ ಹೋದರು. ಅವರ ಕೊಡುಗೆ ಅದೆಷ್ಟು ಅಮೂಲ್ಯ ಮತ್ತು ಅಗಾಧ ಎಂದರೆ, ನಮ್ಮ ನಾಡು ಅವರ ಕೆಲವು ಕೊಡುಗೆಗಳ ಮಹತ್ವವನ್ನು ಇನ್ನೂ ಪೂರ್ತಿಯಾಗಿ ಗುರುತಿಸಿಲ್ಲವೆಂದೇ ನನ್ನ ಅಭಿಪ್ರಾಯ. ಜತೆಗೆ, ಸಾಹಿತ್ಯ, ಕಲೆ, ನೃತ್ಯ, ಯಕ್ಷಗಾನ, ಸಮಾಜ ಸೇವೆ, ಸ್ವಾತಂತ್ರ್ಯ ಹೋರಾಟ, ಖಾದಿ ಬಟ್ಟೆ ಮಾರಾಟ, ಮದ್ಯಪಾನ ವಿರೋಧಿ ಅಭಿಯಾನ, ವಾಸ್ತುಶಿಲ್ಪದಲ್ಲಿ ಸಂಶೋಧನೆ, ಮಕ್ಕಳಿಗೆ ‘ವಸತಿ ಶಾಲೆ’, ಮನೆಯಲ್ಲೇ ಶಾಲೆಯ ಪರಿಕಲ್ಪನೆ, ಮಕ್ಕಳ ಪಠ್ಯಪುಸ್ತಕ ಮೊದಲಾದ ಹಲವು ಕ್ಷೇತ್ರಗಳಲ್ಲಿ ಕಾರಂತರು ನೀಡಿದ ಕೊಡುಗೆಗಳ ಸಮಗ್ರ ಅಧ್ಯಯನ ಮತ್ತು ಅವು ನಮ್ಮ ನಾಡಿನ ಸಾಂಸ್ಕೃತಿಕ ಲೋಕದ ಮೇಲೆ ಬೀರಿದ ಪರಿಣಾಮಗಳನ್ನು ಸಮಗ್ರವಾಗಿ ಗುರುತಿಸಲು ಇಂದಿಗೂ ಅವಕಾಶವಿದೆ. (ಉದಾ : ಕಾರಂತರ ನಿರ್ದೇಶನದ ನಾಟಕಗಳು ಮತ್ತು ‘ಯಕ್ಷಗಾನ ಬ್ಯಾಲೆ’ಯು ಯಕ್ಷಗಾನದ ಮೇಲೆ ಮತ್ತು ನಮ್ಮ ರಾಜ್ಯದ ರಂಗಭೂಮಿಯ ಮೇಲೆ ಬೀರಿದ ಪ್ರಭಾವ!) ಶಿವರಾಮ ಕಾರಂತರು ತಮ್ಮ ಆತ್ಮಕಥೆಯಾದ ‘ಹುಚ್ಚುಮನಸ್ಸಿನ ಹತ್ತು ಮುಖಗಳು’ ಗ್ರಂಥದಲ್ಲಿ, ತಾವು ಕೈಗೊಂಡ ಹಲವು ಸಾಹಸಗಳನ್ನು ವಿವರವಾಗಿ ಬರೆದಿದ್ದಾರೆ; ಕೆಲವರಿಗೆ ಚಿತ್ರವಿಚಿತ್ರ ಎಂದೂ ಅನಿಸಬಹುದಾದ ಆ ಸಾಹಸಗಳನ್ನು ವಿವರಿಸುವಾಗ ಕಾರಂತರು, ಅವೆಲ್ಲಾ ‘ಹುಚ್ಚು ಮನಸ್ಸಿನ ’ ಸಾಹಸಗಳೆಂದು ಕರೆದು, ತಮ್ಮನ್ನು ತಾವೇ ಹಾಸ್ಯಕ್ಕೆ ಒಳಪಡಿಸಿಕೊಂಡಿದ್ದರು; ಆದರೆ, ಅವು ಕೇವಲ ‘ಹುಚ್ಚು ಸಾಹಸಗಳು’ ಆಗಿರಲಿಲ್ಲ, ಬದಲಿಗೆ ಸಾಹಿತ್ಯ-ಸಂಸ್ಕೃತಿ-ಕಲೆಗೆ ಅವರು ನೀಡಿದ ಅನನ್ಯ ಮತ್ತು ವಿನೂತನ ಕೊಡುಗೆಗಳಾಗಿದ್ದವು; ಅದನ್ನು ಗುರುತಿಸಿಯೇ, ಅವರ ಆ ಆತ್ಮಕಥೆಯನ್ನು ‘ಸ್ವಸ್ಥ ಮನಸ್ಸಿನ ಸಾವಿರ ಮುಖಗಳು’ ಎಂದೂ ಕರೆಯಬಹುದು ಎಂದು ವಿಮರ್ಶಕರೊಬ್ಬರು ಹೇಳಿದ್ದುಂಟು. ಇನ್ನೂ ವಿಶೇಷವೆಂದರೆ, ಶಿವರಾಮ ಕಾರಂತರು ಹಲವು ಆತ್ಮಕಥೆಗಳನ್ನು ಬರೆದಿದ್ದಾರೆ!
ಅಷ್ಟು ಸರಕು ಅವರ ಬದುಕಿನ ಸಾಹಸಗಳಲ್ಲಿತ್ತು! ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ (ಸಪ್ನ ಬುಕ್ ಹೌಸ್, ಬೆಂಗಳೂರು) ಪುಸ್ತಕವನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಿಸುವುದರ ಜತೆಯಲ್ಲೇ, ‘ಸ್ಮೃತಿಪಟಲ ದಿಂದ’ ಸರಣಿಯ ಮೂರು ಸಂಪುಟಗಳನ್ನು ಹೊರತಂದು, ಇನ್ನಷ್ಟು ಅಮೂಲ್ಯ ನೆನಪುಗಳನ್ನು ದಾಖಲಿಸಿದ್ದಾರೆ.
20ನೆಯ ಶತಮಾನದುದ್ದಕ್ಕೂ ಕಾರಂತರು ಚಟುವಟಿಕೆಯಿಂದಿ ದ್ದರು- ಅದೇ ಸಮಯದಲ್ಲಿ, ಅವರ ಮಕ್ಕಳ ಗ್ರಹಿಕೆಯಲ್ಲಿ ಅವರು ಹೇಗಿದ್ದರು ಎಂದು ಕಟ್ಟಿಕೊಡುವ ‘ಕಾರಂತರ ಸುಳಿಯಲ್ಲಿ’ ಗ್ರಂಥವು, ಕಾರಂತರ ಆತ್ಮಕಥೆಗಳೊಂದಿಗೆ ಪೂರಕ ಓದಾಗಿಯೂ ರೂಪುಗೊಂಡಿದೆ ಎನ್ನಬಹುದು.
ಕಾರಂತರು ಕೈಗೊಡ ಅಪರೂಪದ ಸಾಹಸ ಮತ್ತು ಪ್ರಯೋಗಗಳಲ್ಲಿ ‘ಮನೆ ಸ್ಕೂಲು’ ಸಹ ಒಂದು. ಇತರ ಲೇಖಕರು, ಚಿಂತಕರು ಈ ಕುರಿತು ಬರೆದಿದ್ದಾರೆ; ಕಾರಂತರು ಸ್ವತಃ ಪ್ರಯೋಗ ಮಾಡಿದ್ದಾರೆ! ಮಕ್ಕಳು ಆರಂಭಿಕ ಹಂತದಲ್ಲಿ, ಶಾಲೆಗೆ ಹೋಗದೇ ಮನೆಯಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡುವುದನ್ನು ಅವರು ಪ್ರಾಯೋಗಿಕವಾಗಿ ನಡೆಸಿದ್ದರು.
ಪುತ್ತೂರಿನಲ್ಲಿದ್ದ ‘ಬಾಲವನ’ವು ಅವರ ಮನೆಯೂ ಹೌದು, ಅವರ ಮಕ್ಕಳಿಗೆ, ಇತರ ಮಕ್ಕಳಿಗೆ ‘ಶಾಲೆ’ಯೂ ಹೌದು. ಸುಮಾರು 10-11ನೆಯ ವಯಸ್ಸಿನ ತನಕ, ಕಾರಂತರ ಮಕ್ಕಳು, ಪ್ರತಿದಿನ ಬೆಳಗ್ಗೆ ಬೇಗನೇ ಶಾಲೆಗೆ ಹೋಗುತ್ತಿರಲಿಲ್ಲ, ಬದಲಿಗೆ ಮನೆಯ ಸುತ್ತಮುತ್ತಲೂ ಅಡ್ಡಾಡಿಕೊಂಡು, ಬದುಕಿನ ಪಾಠಗಳನ್ನು ಕಲಿಯುತ್ತಿದ್ದರು! ಗಣಿತ ಮೊದಲಾದ ಪಾಠಗಳನ್ನು ಅವರ ತಾಯಿ ಲೀಲಾ ಕಾರಂತರು ಹೇಳಿಕೊಡುತ್ತಿದ್ದರು, ಜತೆಗೆ, ಗಿರಿಜಾ ಟೀಚರ್ ಮೊದಲಾದ ಅಧ್ಯಾಪಕರು ಬಾಲವನಕ್ಕೆ ಬಂದು ಪಾಠ ಮಾಡುತ್ತಿದ್ದರು.
‘ಬಾಲವನ’ ಸುತ್ತಲೂ ಸಣ್ಣ ಕುರುಚಲು ಕಾಡು ಮತ್ತು ತುಸು ದೂರದಲ್ಲಿ ದಟ್ಟ ಕಾಡು ಇತ್ತು; ಅಲ್ಲೆಲ್ಲಾ ನಾನಾ ರೀತಿಯ ಕೀಟಗಳು, ಚಿಟ್ಟೆ ಪತಂಗಗಳು, ಪಕ್ಷಿ ಪ್ರಾಣಿಗಳು ಓಡಾಡುತ್ತಿದ್ದವು; ನೀರಿನ ತೊರೆಗಳಿದ್ದವು; ಅವುಗಳ ಜತೆ ಓಡಾಡುತ್ತಾ ಅವರ ಮಕ್ಕಳು ಕಾಲ ಕಳೆಯುತ್ತಿದ್ದರು, ಪರಿಸರವನ್ನು ಗಮನಿಸುತ್ತಿದ್ದರು. ಈ ಕುರಿತು ‘ಕಾರಂತರ ಸುಳಿಯಲ್ಲಿ’ ಪುಸ್ತಕದಲ್ಲಿ, ಮಗಳು ಕ್ಷಮಾ ರಾವ್ ಒಂದು ಕಡೆ ಹೀಗೆ ಬರೆದಿದ್ದಾರೆ : “ಪ್ರಕೃತಿಯೇ ಮಗುವಿಗೆ ಅತ್ಯುತ್ತಮ ಶಾಲೆ ಎಂಬ ತಾತನ (ಅಂದರೆ, ಶಿವರಾಮ ಕಾರಂತರ) ಸಿದ್ಧಾಂತ, ನಮ್ಮ ವಿಷಯದಲ್ಲಿ ನಿಜವಾಗಿಯೂ ಕೆಲಸ ಮಾಡಿದೆ.
ನಮಗೆ ಚಿಕ್ಕಂದಿನಲ್ಲಿ ಹೆಚ್ಚಿನ ವಿಷಯಗಳನ್ನು ಯಾರೂ ಉದ್ದೇಶಪೂರ್ವಕವಾಗಿ ಕಲಿಸಲಿಲ್ಲ. ಹತ್ತು- ಹನ್ನೊಂದು ವರ್ಷದ ವರೆಗೆ ನಾವ್ಯಾರೂ ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಸಂಜೆಯ ವೇಳೆ ಮನೆಯಲ್ಲೇ ಗಣಿತ ಮತ್ತು ಕನ್ನಡದ ಪಾಠ ನಡೆಯುತ್ತಿತ್ತು. ಶಾಲೆಗೆ ಹೋಗುವವರೆಗೆ ನಾವು ಕಲಿತದ್ದು ಅವೆರಡೇ ವಿಷಯಗಳನ್ನು. ಇನ್ನುಳಿದ ಸಮಯ ಇಡೀ ದಿನ ಅತ್ತಿತ್ತ ಅಡ್ಡಾಡಿಕೊಂಡು, ಆಟವಾಡಿಕೊಂಡು ಕಾಲ ಕಳೆಯುತ್ತಿದ್ದೆವು" (ಪುಟ 23.2 : ಕಾರಂತರ ಸುಳಿಯಲ್ಲಿ ಗ್ರಂಥದಲ್ಲಿ). ಬಾಲವನದ ಪರಿಸರ ಅದೆಷ್ಟು ನೈಸರ್ಗಿಕವಾಗಿತ್ತು ಎಂದರೆ, 1920-30ರ ದಶಕದಲ್ಲಿ, ಆ ಮನೆಯ ಬಳಿಗೆ ಚಿರತೆಗಳು ಬರುವುದು ಸಾಮಾನ್ಯ ಎನಿಸಿತ್ತು!
ಆ ಊರಿಗೆ ವಿದ್ಯುತ್ ಸಂಪರ್ಕ ಬರುವ ಮೊದಲೇ, ಬಾಲವನಕ್ಕೆ ಜನರೇಟರ್ ಇರಿಸಿ, ಬೆಳಕನ್ನು ನೀಡಿದ್ದರು ಕಾರಂತರು! ಆ ಜನರೇಟರ್ ಸದ್ದಿಗೆ ಬೆದರಿ ಚಿರತಗಳು ಮನೆಯಿಂದ ದೂರ ಹೋಗು ತ್ತಿದ್ದವಂತೆ. ಇಂತಹ ಪರಿಸರದಲ್ಲಿ ಬೆಳೆದ ಕಾರಂತರ ಮಕ್ಕಳು, ಸಹಜವಾಗಿ ಪರಿಸರದ ಕುರಿತು ಅಪಾರ ಕಾಳಜಿಯನ್ನಿಟ್ಟುಕೊಂಡೇ ಬೆಳೆದಿದ್ದಾರೆ. ಅದಕ್ಕೆ ಪುರಾವೆ ಎಂಬಂತೆ, ಅವರ ಮಗ ಉಲ್ಲಾಸ ಕಾರಂತರು, ಮುಂದೆ ವನ್ಯಜೀವಿ ತಜ್ಞರಾದರು, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದರು, ನಮ್ಮ ರಾಜ್ಯದ ಹುಲಿಗಳ ಸಂರಕ್ಷಣೆಯ ಕುರಿತು ಗಮನಾರ್ಹ ಕೊಡುಗೆ ನೀಡಿದ್ದಾರೆ. ಬಾಲವನವು ಎಲ್ಲಾ ಮಕ್ಕಳಿಗೂ ಮುಕ್ತವಾಗಿತ್ತು; ಅಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬರುತ್ತಿದ್ದ ಮಕ್ಕಳಿಗೆ, ಉಚಿತ ಊಟವನ್ನು ಸಹ ನೀಡಲಾಗುತ್ತಿತ್ತು!
20ನೆಯ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿರುವ ಶಿವರಾಮ ಕಾರಂತರು ಕೈಗೊಂಡ ಸಾಹಸಗಳ ಕುರಿತು ‘ಕಾರಂತರ ಸುಳಿಯಲ್ಲಿ’ ಪುಸ್ತಕದಲ್ಲಿ ಸೂಚ್ಯವಾಗಿ ಹಲವು ಕಡೆ ವಿವರಗಳಿವೆ. ಶಿವರಾಮ ಕಾರಂತರಿಗೆ, ನಿಯಮಿತ ವರಮಾನ ನೀಡುವ ಸರಕಾರಿ ಉದ್ಯೋಗವಿರಲಿಲ್ಲ. (ಹೋಲಿಕೆಗೆ ನೋಡುವು ದಾದರೆ, ಅವರ ಸಮಕಾಲೀನ ಸಾಹಿತಿಗಳಾದ, ನಮ್ಮ ರಾಜ್ಯದ ಇತರ ಜ್ಞಾನಪೀಠ ಸಾಹಿತಿಗಳಾದ ಕುವೆಂಪು, ಮಾಸ್ತಿ, ವಿಕೃ ಗೋಕಾಕ ಮೊದಲಾದವರು ಸರಕಾರದ ಉನ್ನತ ಹುದ್ದೆಗಳಲ್ಲಿದ್ದರು.) ನಿಯಮಿತ ಆದಾಯವಿಲ್ಲದ ಕಾರಂತರು, ಮದುವೆಯಾದ ಹೊಸತರಲ್ಲಿ (ಲೀಲಾ ಕಾರಂತರೊಂದಿಗೆ ವಿವಾಹ : 6.5.1936) ಆರ್ಥಿಕ ಸಂಕಷ್ಟದಲ್ಲಿದ್ದ ವಿವರವೂ ಈ ಪುಸ್ತಕದಲ್ಲಿದೆ. (ಪುಟ 67). ಲೀಲಾ ಕಾರಂತರು, ವಿದ್ಯಾಭ್ಯಾಸ ಮುಗಿಸಿ, ‘ಬಾಲವನ’ದಲ್ಲಿದ್ದ ಮನೆಗೆ ಕಾಲಿಟ್ಟಾಗ, ಅಲ್ಲಿ ಅದಾಗಲೇ ಮಕ್ಕಳಿದ್ದರು.
ಅವರೆಲ್ಲರೂ, ಬಾಲವನದಲ್ಲಿ ಕಾರಂತರು ನಡೆಸುತ್ತಿದ್ದ ವಸತಿ ‘ಶಾಲೆ’ಯ ಮಕ್ಕಳು. “ಕಾರಂತರು ಅಲ್ಲಿ ಬಡಮಕ್ಕಳಿಗೆ ವಸತಿ ಶಾಲೆ ನಡೆಸುತ್ತಿದ್ದರು. ಬಾಲವನವನ್ನು ನೋಡಿಕೊಳ್ಳುವುದು ಹಾಗೂ ಮಕ್ಕಳ ಜವಾಬ್ದಾರಿ ಸಂಪೂರ್ಣ ನನ್ನ ಹೆಗಲ ಮೇಲೆ ಬಿತ್ತು. (ನನ್ನ ಎಂದರೆ ಇಲ್ಲಿ ನವವಧು ಲೀಲಾ ಕಾರಂತರು). ಹೀಗಾಗಿ ನನಗೆ ಮಕ್ಕಳಾಗುವುದಕ್ಕಿಂತಲೂ ಮೊದಲೇ ತಾಯ್ತನವನ್ನು ಅನುಭವಿಸಿದ್ದೆ. ಕಾರಂತರು ಆ ಸಮಯದಲ್ಲಿ ಮಕ್ಕಳ ವಿಶ್ವಕೋಶ ‘ಬಾಲ ಪ್ರಪಂಚ’ ಸಿದ್ಧಪಡಿಸುತ್ತಿದ್ದರು. ಅದರ ಮುದ್ರಣ ಹಾಗೂ ಇನ್ನಿತರ ಕೆಲಸಗಳಿಗಾಗಿ ಪದೇ ಪದೆ ಮಂಗಳೂರಿಗೆ ಹೋಗುತ್ತಿದ್ದರು . . ." (ಪುಟ 68) ಇಲ್ಲಿ ಗಮನಕ್ಕೆ ಬರುವ ವಿಷಯವೆಂದರೆ, ನಿಶ್ಚಿತ ಆದಾಯವಿಲ್ಲದೇ ಇದ್ದಾಗಲೂ ಕಾರಂತರು, ಬಡಮಕ್ಕಳಿಗಾಗಿ ವಸತಿ ಶಾಲೆ ನಡೆಸುತ್ತಿದ್ದರು ಮತ್ತು ಕನ್ನಡದ ಮಕ್ಕಳಿಗಾಗಿ ‘ವಿಶ್ವಕೋಶ’ ವೊಂದನ್ನು ಸಿದ್ಧಪಡಿ ಸುತ್ತಿದ್ದರು!
ಇದು 1936ರಲ್ಲಿ ಎಂದು ಗಮನಿಸಿದಾಗ, ಅವರ ಸಾಹಸಗಳ ಮಹತ್ ಅರಿವಾದೀತು. ಆ ದಿನಗಳಲ್ಲಿ ಕನ್ನಡದಲ್ಲಿ (ಮೈಸೂರು ರಾಜ್ಯದಲ್ಲಿ ಸಹ) ಮಕ್ಕಳಿಗಾಗಿ ಕನ್ನಡದಲ್ಲಿ ಉತ್ತಮ ವಿಶ್ವಕೋಶ ಇರಲಿಲ್ಲ. ಮಕ್ಕಳ ಮೇಲಿನ ಅಪಾರ ಪ್ರೀತಿಯಿಂದ, ಕಾರಂತರು ಮಕ್ಕಳ ವಿಶ್ವಕೋಶವನ್ನು ಸಿದ್ಧಪಡಿ ಸುವ ಸಾಹಸಕ್ಕೆ ಕೈ ಹಾಕಿದ್ದರು. ಇದು ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳು ಮಾಡುವ ಕೆಲಸ! ಇದಕ್ಕಾಗಿ, ವಿದೇಶಗಳಲ್ಲಿ ಮುದ್ರಣ ಗೊಂಡಿದ್ದ ಹಲವು ಇಂಗ್ಲಿಷ್ ವಿಶ್ವಕೋಶಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿದ್ದರು.
ವಿದೇಶಗಳಿಂದ ಚಿತ್ರಗಳನ್ನು ತರಿಸಿದ್ದರು. ‘ಕಾರಂತರ ಸುಳಿಯಲ್ಲಿ’ ಪುಸ್ತಕದಲ್ಲಿ ಬೇರೊಂದು ಕಡೆ ಪ್ರಸ್ತಾಪಗೊಂಡಂತೆ, ಪುಸ್ತಕಗಳ ಮುದ್ರಣಕ್ಕಾಗಿ ಲಾರಿಯಲ್ಲಿ ಕಾಗದದ ಬಂಡಲ್‌ಗಳು ‘ಬಾಲವನ’ಕ್ಕೆ ಬಂದಿಳಿದಾಗ, ಅದನ್ನು ಕಂಡು ಮಡದಿಗೆ ಕಳವಳವಾಗುತ್ತಿತ್ತಂತೆ- ಈ ಕಾಗದಕ್ಕಾಗಿ ಕಾರಂತರು ಅದೆಷ್ಟು ಸಾಲ ಮಾಡಿರಬಹುದು, ಅದನ್ನು ತೀರಿಸುವುದು ಹೇಗೆ ಎಂದು!
ಬಾಲವನದ ಆವರಣದಲ್ಲೇ, ಕಾರಂತರು ತಮ್ಮ ಮಗನ ಹೆಸರಿನಲ್ಲಿ ಸ್ಥಾಪಿಸಿದ್ದ ಹರ್ಷ ಮುದ್ರಣಾಲ ಯವಿದ್ದು, ಅಲ್ಲಿ ಕಾರಂತರ ಹಲವು ಕಾದಂಬರಿ ಗಳೂ ಸೇರಿದಂತೆ ಅವರ ಪುಸ್ತಕಗಳು ಮುದ್ರಣ ಗೊಳ್ಳುತ್ತಿದ್ದವು. ಶಿವರಾಮ ಕಾರಂತರ ಸಾಹಿತ್ಯಕ ಕೊಡುಗೆ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು, ಜ್ಞಾನಪೀಠ ಪ್ರಶಸ್ತಿ ವಿಜೇತ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಮತ್ತು ಮರಳಿ ಮಣ್ಣಿಗೆ ಸೇರಿದಂತೆ ಅವರು ರಚಿಸಿದ ಒಟ್ಟು 45 ಕಾದಂಬರಿಗಳು.
ಇದಲ್ಲದೇ, 1930-40 ದಶಕದಲ್ಲಿ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಪಠ್ಯಪುಸ್ತಕಗಳನ್ನು ಸಹ ರಚಿಸಿದ್ದರು! ಅದಕ್ಕೆ ಒಂದು ಮುಖ್ಯ ಕಾರಣ, ಕನ್ನಡ ಮಾಧ್ಯಮದ ಮೇಲೆ ಅವರಿಗಿದ್ದ ಪ್ರೀತಿ; ಎರಡನೆಯ ಕಾರಣವೆಂದರೆ, ಆಗ ಕನ್ನಡದಲ್ಲಿ ಸೂಕ್ತ ಮತ್ತು ಉತ್ತಮವಾದ ಪಠ್ಯಪುಸ್ತಕಗಳು ಸುಲಭವಾಗಿ ಲಭ್ಯವಿರಲಿಲ್ಲ. ಇದರ ಜತೆ ಇನ್ನೂ ಒಂದು ಕಾರಣವಿದೆ. ಆಗ ಆರ್ಥಿಕ ಮುಗ್ಗಟ್ಟಿನಂತಹ ಸ್ಥಿತಿಯಲ್ಲಿದ್ದ ಕಾರಂತರು, ‘ಸಿರಿಗನ್ನಡ ಪುಸ್ತಕ ಮಾಲೆ’ ಹೆಸರಿನ, ತಾವೇ ರಚಿಸಿದ ಪಠ್ಯ ಪುಸ್ತಕಗಳನ್ನು ಮಾರಿ, ಅಷ್ಟಿಷ್ಟು ಆದಾಯ ಗಳಿಸುತ್ತಿದ್ದರು! ‘ಕಾರಂತರ ಸುಳಿಯಲ್ಲಿ’ ಪುಸ್ತಕವು ಕಾರಂತರ ರಾಜಕೀಯ ನಿಲುವು ಮತ್ತು ಚಟುವಟಿಕೆಗಳ ಕುರಿತು ಸಹ ಅಪರೂಪದ ಮಾಹಿತಿಯನ್ನು ಒಳಗೊಂಡಿದೆ.
1975ರಲ್ಲಿ ನಮ್ಮ ದೇಶದಲ್ಲಿ ಆಂತರಿಕ ತುರ್ತುಸ್ಥಿತಿ ಘೋಷಣೆಯಾಯಿತು; ಕರ್ನಾಟಕದ “... ಬಹುತೇಕ ಲೇಖಕರು ಬಾಯಿ ಮುಚ್ಚಿ ಕುಳಿತಾಗ, ತಾತ (ಶಿವರಾಮ ಕಾರಂತರು) ಬಹಿರಂಗವಾಗಿ ಪ್ರತಿಭಟನೆ ನಡೆಸಿದರು. ತುರ್ತುಸ್ಥಿತಿಯನ್ನು ವಿರೋಧಿಸಿ, 1968ರಲ್ಲಿ ತಮಗೆ ಬಂದಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ಮರಳಿಸಿದರು. ಜನರು ಕಷ್ಟಪಟ್ಟು ಗಳಿಸಿದ್ದ ಸ್ವಾತಂತ್ರ್ಯವನ್ನು ಸರಕಾರ ಕಿತ್ತುಕೊಳ್ಳುವುದನ್ನು ಒಬ್ಬ ಲೇಖಕನಾಗಿ ತನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ರಾಷ್ಟ್ರಾಧ್ಯಕ್ಷರಿಗೇ ಬರೆದು ಹೇಳಿದ್ದರು." (ಪುಟ 210). ತುರ್ತು ಪರಿಸ್ಥಿತಿ ಹಿಂದೆಗೆದುಕೊಂಡ ತಕ್ಷಣ, 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ, ಇಂದಿರಾ ಗಾಂಧಿ ಸ್ಪರ್ಧಿಸಿದಾಗ, ಅವರ ವಿರುದ್ಧ ಸ್ಪರ್ಧಿಸುವಂತೆ ಶಿವರಾಮ ಕಾರಂತರನ್ನು ಹಲವರು ಮನವಿ ಮಾಡಿದ್ದರು. ಆದರೆ, ಮಕ್ಕಳಿಗೆ ಮತ್ತು ಮಡದಿಗೆ ಕಾರಂತರು ಸ್ಪರ್ಧಿಸುವುದು ಇಷ್ಟವಿರ ಲಿಲ್ಲ; ಏಕೆಂದರೆ, ಕಾರಂತರಿಗೆ ಆಗ 76 ವರ್ಷ! ಕೊನೆಗೆ ವೀರೇಂದ್ರ ಪಾಟೀಲರು ಇಂದಿರಾ ಗಾಂಧಿಯವರ ವಿರುದ್ಧ ಸ್ಪರ್ಧಿಸಿದ್ದರಿಂದ, ಕಾರಂತರ ಮೇಲಿನ ಒತ್ತಡ ಕಡಿಮೆಯಾಯಿತು. (ಪುಟ 211). ಆದರೆ, ಹತ್ತು ವರ್ಷಗಳ ನಂತರ, ಪರಿಸರ ಹೋರಾಟದ ಭಾಗವಾಗಿ, ಉತ್ತರ ಕನ್ನಡದಲ್ಲಿ ಶಿವರಾಮ ಕಾರಂತರು, ಪಕ್ಷೇತರರಾಗಿ, ಆನೆ ಚಿನ್ಹೆಯನ್ನು ಪಡೆದು, ವಿಧಾನಸಭೆಗೆ ಸ್ಪರ್ಧಿಸಿದರು! ಅವರು ಆಗ ಪರಾಜಿತರಾದರೂ, ಸಾಕಷ್ಟು ಮತ ಗಳಿಸಿದ್ದನ್ನು ಕಾಣಬಹುದು.
‘ಕಾರಂತರ ಸುಳಿಯಲ್ಲಿ’ ಪುಸ್ತಕವನ್ನೋದಿದ ನಂತರ, ಇಂತಹವೇ ಹಲವು ವಿಚಾರಗಳು ನನ್ನ ತಲೆಯಲ್ಲಿ ಗುಂಯ್‌ಗುಟ್ಟುತ್ತಿದ್ದವು; ಮುಖ್ಯವಾಗಿ ಕನ್ನಡ ನಾಡಿನ ಮಕ್ಕಳ ಜ್ಞಾನಕೋಶವನ್ನು ವಿಸ್ತರಿಸುವ ಉದ್ದೇಶದಿಂದ, ಹಿರಿಯ ಸಾಹಿತಿಯಾದ ಕಾರಂತರು, 200ಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ರೂಪಿಸಿ, ಮಕ್ಕಳ ಮೇಲಿನ ಪ್ರೀತಿಯನ್ನು ತೋರಿದ ಪರಿ, ಅಪಾರ ಬೆರಗನ್ನು ಮೂಡಿಸಿತು. ಕಾರಂತರು ಸಾಹಿತ್ಯ ಮತ್ತು ಇತರ ಕಲಾ ಮಾಧ್ಯಮಗಳಲ್ಲಿ ನಡೆಸಿದ ಸಾಹಸಗಳ ಅಪರೂಪದ ವಿವರಗಳನ್ನೊಳಗೊಂಡ ‘ಕಾರಂತರ ಸುಳಿಯಲ್ಲಿ’ ಪುಸ್ತಕವು, ಪ್ರತಿಯೊಬ್ಬ ಕನ್ನಡಾಭಿಮಾನಿಯು ಒಮ್ಮೆಯಾದರೂ ಓದಬೇಕಾದ ಗ್ರಂಥವಾಗಿ ಹೊರಹೊಮ್ಮಿದೆ.