ವಿದ್ಯಮಾನ
ಕರ್ನಾಟಕದಲ್ಲಿ ಪಾದಚಾರಿ ರಸ್ತೆಗಳನ್ನು ನಿರ್ಭಿಡೆಯಿಂದ ತೆರವುಗೊಳಿಸುತ್ತಾ ಸುಪ್ರೀಮ್ ಕೋರ್ಟಿನ ಆದೇಶವನ್ನು ಕರ್ನಾಟಕ ಸರಕಾರ ಅಕ್ಷರಶಃ ಪಾಲಿಸುತ್ತಿದೆ, ಬಹುರಾಜ್ಯಗಳಲ್ಲಿ ಹರಡಿದೆ ಎನ್ನಲಾಗುವ ನಕಲಿ ಔಷಧಿ ತಯಾರಕರ ಬೆನ್ನು ಬಿದ್ದಿದೆ, ಪಂಚತಾರಾ ಹೋಟೆಲ್‌ಗಳನ್ನೂ ಬಿಡದೇ ಛಾನ್ ಬೀನ್ ಮಾಡಲಾಗುತ್ತಿದೆ, ಆಹಾರ ಸುರಕ್ಷತೆಯ ಬಗ್ಗೆ ಹೊಸ ಆರೋಗ್ಯ ಸಚಿವರು ಇನ್ನಿಲ್ಲದ ಆಸ್ಥೆ ವಹಿಸುತ್ತಿರುವಂತೆ ಕಾಣುತ್ತಿದೆ.
ನಮ್ಮ ಗೃಹಸಚಿವರಂತೂ ಲಕ್ಷಾಂತರ ಅನಧಿಕೃತ ವಲಸೆಗಾರರಲ್ಲಿ ನೂರಾರು ಜನರನ್ನು ಈಗಾಗಲೇ ಗುರುತಿಸಿದ್ದಾರೆ. ಮಳೆಗಾಲ ಇರುವುದರಿಂದ ಬೆಂಗಳೂರಿನ ರಾಜಾಕಾಲುವೆಯ ತೆರವಿಗೆ ಸರಕಾರೀ ಜೆಸಿಬಿಗಳು ತಯಾರಾಗಿ ನಿಂತಿವೆ, ಮಾದಕವಸ್ತು ಮುಕ್ತ ಭಾರತದ ಕನಸು ಕಾಣುತ್ತಿರುವ ಪ್ರಧಾನಮಂತ್ರಿಗಳಿಗೆ ರಾಜ್ಯ ಸರಕಾರ ಉತ್ತಮ ರೀತಿಯಿಂದ ಸ್ಪಂದಿಸುತ್ತಿದೆ.
ಒಟ್ಟಿಗೆ ಇಷ್ಟೆಲ್ಲಾ ಕೆಲಸಗಳು ಪ್ರಾರಂಭವಾಗಲು ಕಾರಣ ಏನಾದರೂ ಬೇಕಲ್ಲ. ಅದಲ್ಲದಿದ್ದರೆ ನಿನ್ನೆಯವರೆಗೆ ಇಲ್ಲದ್ದು ಇಂದಿನಿಂದ ಏಕೆ? ಸಿದ್ದರಾಮಯ್ಯನವರು ಏನು ಬೇಡಾ ಎಂದಿದ್ದರಾ ಅಥವಾ ಅಧಿಕಾರಿಗಳು ಶಿವಕುಮಾರ್ ಅವರ ಒತ್ತಾಯಕ್ಕೆ ಮಾಡುತ್ತಿದ್ದಾರಾ? ಎನ್ನುವ ಪ್ರಶ್ನೆ ಏಳುವುದು ಸ್ವಾಭಾವಿಕವಾಗಿದೆ.
ರಾಜ್ಯದ ದೃಷ್ಟಿಯಿಂದ ಇವೆಲ್ಲ ಒಳ್ಳೆಯ ಬೆಳವಣಿಗೆಯಂತೂ ಹೌದು. ಇದು ನಿರಂತರವಾಗಿ ಮುಂದುವರಿಯಬೇಕು ಹಾಗೂ ಒಂದು ತಾರ್ಕಿಕವಾದ ಅಂತ್ಯವನ್ನು ಕಾಣಬೇಕಷ್ಟೇ. ಅದಲ್ಲದಿದ್ದರೆ ಕರ್ನಾಟಕ ಪೋಲೀಸರಿಗೆ ಮೈಸೂರಿನಲ್ಲಿ ಸಿಂಥೆಟಿಕ್ ಮಾದಕವಸ್ತುಗಳು ತಯಾರಾಗುತ್ತವೆ ಎಂದು ಮುಂಬೈ ಪೋಲೀಸರು ಹೇಳಬೇಕಾಗಿತ್ತು, ಭಯೋತ್ಪಾದಕ ಸಂಘಟನೆಗಳು ನಿಮ್ಮಲ್ಲಿ ಗೂಡು ಕಟ್ಟುತ್ತಿವೆ ಎಂದು ಎನ್‌ಐಎ ತಿಳಿಸಿದರೆ ಮಾತ್ರ ಗೊತ್ತಾಗುತ್ತಿತ್ತು, ಹೀಗಿರುವಾಗ ನಮ್ಮ ಸರಕಾರಕ್ಕೆ ಏನಾಗಿದೆ ಎಂದು ಅಚ್ಚರಿಯೇನೋ ಆಯಿತು, ಏನೋ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಮಾಡಲಿ ಬಿಡಿ ಅಂದುಕೊಂಡೆ. ಆದರೆ ಕರ್ನಾಟಕ ಸರಕಾರದ ಈ ಎಲ್ಲ ಉಪಕ್ರಮಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಹುಡುಕುತ್ತಾ ಹೋಗುವಾಗ ಅದು ನಮ್ಮನ್ನು ಮತ್ತೆ ಮುಂಬೈಗೆ ಕರೆದೊಯ್ಯುತ್ತೆ.
ಇದನ್ನೂ ಓದಿ: Vinayaka M Bhat Column: ಪದಾರ್ಥ ಚಿಂತನೆ ಎನ್ನುವುದೂ ಒಂದು ಬಗೆಯ ಗೀಳೇ!
ಈ ಒಬ್ಬ ತುಕಾರಾಮನಿಂದಾಗಿ ದೇಶವೇ ಎಚ್ಚೆತ್ತುಕೊಂಡಂತೆ ಕರ್ನಾಟಕ ಸರಕಾರವೂ ಎಚ್ಚೆತ್ತು ಕೊಂಡ ಹಾಗೆ ಕಾಣುತ್ತಿದೆ. ಮಹಾರಾಷ್ಟ್ರದಾದ್ಯಂತ, ಅಷ್ಟೇ ಏಕೆ ದೇಶಾದ್ಯಂತ ಸುದ್ದಿಯಲ್ಲಿರವ ಐಎಎಸ್ ಅಧಿಕಾರಿ ಶ್ರೀ ತುಕರಾಮ್ ಮುಂಡೆಯವರು ತಮ್ಮ ಕಾರ್ಯವೈಖರಿಯ ಮೂಲಕ ಕೇವಲ ಮಹಾರಾಷ್ಟ್ರವೊಂದರ ಅಲ್ಲದೇ ದೇಶಾದ್ಯಂತ ಸಂಚಲನ ಮೂಡಿಸಿ ಅನ್ಯ ರಾಜ್ಯಗಳ ಅಧಿಕಾರಿ ಗಳಿಗೂ ಬಿಸಿ ಮುಟ್ಟಿಸಿದ್ದಾರೆ.
ಮಹಾರಾಷ್ಟ್ರದಲ್ಲಂತೂ ಅವರು ಇಂದು ದೊಡ್ಡ ಹೀರೋ ಆಗಿ ಮೆರೆಯುತ್ತಿದ್ದಾರೆ. ಆಗಸ್ಟ್ 9, 2026ರಂದು ಪುಣೆಯಲ್ಲಿ ನಡೆದ ಅನ್‌ಸ್ಟಾಪೇಬಲ್ ತುಕಾರಾಮ್ ಎಂಬ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಐಎಎಸ್ ಅಧಿಕಾರಿ ತುಕಾರಾಮ್ ಮುಂಡೆಯವರಿಗೆ ಸಾರ್ವಜನಿಕರು ನೀಡಿದ ಭವ್ಯ ಗೌರವವನ್ನು ನೋಡುವಾಗ, ಅವರ ಜನಪ್ರಿಯತೆ ಯಾವ ಮಟ್ಟ ದಲ್ಲಿದೆ ಎನ್ನುವುದು ನಮ್ಮ ಅರಿವಿಗೆ ಬರುತ್ತೆ.
ಇದು ಆಹಾರ ಸುರಕ್ಷತೆ (FDA) ಮತ್ತು ಆಡಳಿತಾತ್ಮಕ ಸುಧಾರಣೆಗಳಲ್ಲಿನ ಅವರ ಕಠಿಣಕ್ರಮಗಳಿಗೆ ಸಿಕ್ಕ ಅಭೂತಪೂರ್ವ ಜನಮನ್ನಣೆ ಅಂತ ಹೇಳಬಹುದಾಗಿದೆ. 21 ವರ್ಷಗಳ ಸೇವೆಯಲ್ಲಿ ಭ್ರಷ್ಟಾ ಚಾರದ ವಿರುದ್ಧ ಹೋರಾಡಿ, ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಕಲಬೆರಕೆ ಜಾಡಿನ ವಿರುದ್ಧದ ಅವರ ಕಾರ್ಯವೈಖರಿಯೇ ಈ ಮಟ್ಟದ ಜನಪ್ರಿಯತೆಗೆ ಕಾರಣವಾಗಿದೆ. ಮಹಾರಾಷ್ಟ್ರ ರಾಜ್ಯಾದ್ಯಂತ ಆಹಾರ ಕಲಬೆರಕೆ ಮತ್ತು ನೈರ್ಮಲ್ಯ ಉಲ್ಲಂಘನೆಗಳ ವಿರುದ್ಧ ಇವರು ನಡೆಸಿದ ತೀವ್ರ ಕಾರ್ಯಾಚರಣೆಗಳನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಕೇವಲ 12 ವಾರಗಳಲ್ಲಿ ಇವರ ನೇತೃತ್ವದ ತಂಡವು 1100ಕ್ಕೂ ಹೆಚ್ಚು ಪ್ರತಿಷ್ಠಿತ ವ್ಯಾಪಾರ ಮಳಿಗೆ ಗಳ ಮೇಲೆ ದಾಳಿ ನಡೆಸಿ, 50 ಕೋಟಿಗೂ ಹೆಚ್ಚು ಮೌಲ್ಯದ ಕಲಬೆರಕೆ ವಸ್ತುಗಳನ್ನು ವಶಪಡಿಸಿ ಕೊಂಡಿದೆ ಮತ್ತು ಸುಮಾರು 100 ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಿದೆ. ಬಳಕೆದಾರರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದಾಗಿದ್ದ ಲಕ್ಷಾಂತರ ಲೀಟರ್ ಕಲುಷಿತ ಹಾಲು ಮತ್ತು ನಕಲಿ ಪನ್ನೀರನ್ನು ಚರಂಡಿಗೆ ಸುರಿಸಿದ್ದಾರೆ. ತಮ್ಮ 21 ವರ್ಷಗಳ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ರಾಜಿ ಮಾಡಿಕೊಳ್ಳದ ನಿಲುವನ್ನು ಹೊಂದಿರುವ ಮುಂಡೆ, ರಾಜಕೀಯ ವಲಯದಲ್ಲಿ ತೀವ್ರ ಪ್ರತಿರೋಧ ಎದುರಿಸಿ 25 ಬಾರಿ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ವರ್ಗಾಯಿಸಲ್ಪಟ್ಟಿದ್ದಾರೆ.
2005ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ತುಕಾರಾಮ್ ಮುಂಡೆ, ಇಂದು ಮಹಾರಾಷ್ಟ್ರದ ಅಧಿಕಾರಶಾಹಿಯ ನಿಜವಾದ ಸಿಂಗಮ ಎಂದೇ ಜನಪ್ರಿಯರಾಗಿದ್ದಾರೆ. ಅವರ ಸಾಧನೆಯನ್ನು ನೋಡುವುದಾದರೆ, 2014ರಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯವನ್ನು ಬರಮುಕ್ತ ಹಾಗೂ ಜಲಸಮೃದ್ಧಗೊಳಿಸುವ ಉದ್ದೇಶ ದಿಂದ ಜಾರಿಗೆ ತಂದ ಅತ್ಯಂತ ಮಹತ್ವಾಕಾಂಕ್ಷೆಯ ಜಲ ಸಂರಕ್ಷಣಾ ಯೋಜನೆಯಾದ ‘ಜಲಯುಕ್ತ ಶಿವಾರ್’ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಮೂಲಕ ಮುಂಡೆಯವರು ನೂರಾರು ಹಳ್ಳಿಗಳನ್ನು ಟ್ಯಾಂಕರ್ ಮುಕ್ತಗೊಳಿಸಿದ್ದರು.
ಇದರಿಂದಾಗಿ ಇವರಿಗೆ ‘ಮಹಾರಾಷ್ಟ್ರದ ವಾಟರ್ ಮ್ಯಾನ್’ ಎಂಬ ಹೆಸರು ಬಂದಿದೆ. ಈ ವೇಳೆ ಇವರು ಮರಳು ಮಾಫಿಯಾದ ಜೀವ ಬೆದರಿಕೆ ದಾಳಿಯಿಂದ ಪಾರಾಗಿದ್ದರು ಕೂಡಾ. ಅವರು ನವೀ ಮುಂಬೈ ಮುನ್ಸಿಪಲ್ ಕಮಿಷನರ್ ಆಗಿದ್ದಾಗ ತೆರಿಗೆ ವಂಚನೆ ತಡೆದು, ನೂರಾರು ಅನಧಿಕೃತ ಕಟ್ಟಡಗಳನ್ನು ಧ್ವಂಸಗೊಳಿಸಿದರು. ಇದರ ಪರಿಣಾಮವಾಗಿ ಸ್ಥಳೀಯ ರಾಜಕಾರಣಿಗಳು ಇವರ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ತಂದಿದ್ದರು.
ನಾಸಿಕ್ ಮುನ್ಸಿಪಲ್ ಕಮಿಷನರ್ ಆಗಿದ್ದಾಗ ಕಟ್ಟುನಿಟ್ಟಾದ ಹಣಕಾಸಿನ ಶಿಸ್ತು ತಂದು, ಸಾರ್ವಜನಿಕ ಹಣ ಪೋಲಾಗುವುದನ್ನು ತಡೆದರು. ಅವರ ಈ ಎಲ್ಲ ಅತ್ಯುತ್ತಮ ಆಡಳಿತ ಸೇವೆಗಾಗಿ ಮಹಾರಾಷ್ಟ್ರ ಸರ್ಕಾರ ದಿಂದ ಅತ್ಯುತ್ತಮ ಕಲೆಕ್ಟರ್ ಪ್ರಶಸ್ತಿ ಮತ್ತು ಸಮಾಜದ ತಳಮಟ್ಟದ ಜನರ ಪರವಾದ ಸೇವೆಗಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಅವರೇನೂ ಬೆಳ್ಳಿಯ ಚಮಸವನ್ನು(ಚಮಚ) ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ, ಮಹಾ ರಾಷ್ಟ್ರದ ಬರಪೀಡಿತ ಹಳ್ಳಿಯೊಂದರಲ್ಲಿ ನಮ್ಮ ನಿಮ್ಮಂತೆ ಬಡ ಕೃಷಿ ಕುಟುಂಬದಲ್ಲಿ ಜನಿಸಿದವರು. ತುಕಾರಾಮ್ ಅವರ ಬಾಲ್ಯ ಅತ್ಯಂತ ಕಷ್ಟದಾಯಕವಾಗಿತ್ತು. ಬೆಳಗಿನ ಜಾವ 2 ಗಂಟೆಗೆ ಎದ್ದು ಕೈಯಾರೆ ಬೆಳೆಗಳಿಗೆ ನೀರು ಹಾಯಿಸುತ್ತಿದ್ದ ಇವರು, 10ನೇ ತರಗತಿಯವರೆಗೂ ಪೋಷಕರೊಂದಿಗೆ ಎತ್ತಿನ ಗಾಡಿಯಲ್ಲಿ ತೆರಳಿ ವಾರದ ಸಂತೆಯಲ್ಲಿ ತರಕಾರಿ ಮಾರುತ್ತಿದ್ದರು.
ಒಂದು ಕಾಲದಲ್ಲಿ ತಾವು ಬೆಳೆದ ಈರುಳ್ಳಿಯನ್ನು ಕೆಜಿಗೆ ಕೇವಲ 5 ಪೈಸೆಗೆ ಮಾರಿದ ಕಹಿ ನೆನಪೂ ಇವರಿಗಿದೆ. ಇವರ ಅಣ್ಣ ಹಳ್ಳಿಯಿಂದ ಮೊದಲ ಪದವೀಧರ ಮತ್ತು ಸರ್ಕಾರಿ ಅಧಿಕಾರಿಯಾಗಿ ದ್ದನ್ನು ನೋಡಿ, ಇವರು ಉನ್ನತ ಶಿಕ್ಷಣಕ್ಕಾಗಿ ಔರಂಗಾಬಾದ್‌ಗೆ ತೆರಳಲು ಪ್ರೇರಣೆ ಪಡೆದರು.
ವರ್ಷಕ್ಕೊಮ್ಮೆ ವರ್ಗಾವಣೆಯಾಗುವ ಕಾರಣ ಇವರ ಕುಟುಂಬ ಮತ್ತು ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದ್ದರೂ, ಸ್ವಚ್ಛ ಮತ್ತು ಪ್ರಾಮಾಣಿಕ ಸಾರ್ವಜನಿಕ ಸೇವೆಗೆ ವೈಯಕ್ತಿಕ ಏರುಪೇರು ಗಳು ಅನಿವಾರ್ಯ ಎಂಬ ತತ್ವಕ್ಕೆ ಮುಂಡೆ ಬದ್ಧರಾಗಿದ್ದಾರೆ ಅಂತನಿಸುತ್ತದೆ. ತುಕರಾಮ್ ಅವರು ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಬಾಡಿಗೆ ಜಾಹೀರಾತು (Surrogate Advertising) ನೀಡಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಮುಲಾಜಿಲ್ಲದೇ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಥರದ ಜಾಹಿರಾತುಗಳನ್ನು ನಾವೂ ನೋಡು ತ್ತೇವೆ. ಮದ್ಯ ತಯಾರಿಸುವ ಅನೇಕ ಕಂಪನಿಗಳು ಕೋಟ್ಯಂತರ ರೂಪಾಯಿ ವ್ಯಯ ಮಾಡಿ ಅದೇ ಹೆಸರಿನ ನೀರಿನ ಬಾಟಲಿಯನ್ನು ಪ್ರಚಾರ ಮಾಡುತ್ತವೆ, ತಂಬಾಕು ಕಂಪನಿ ಗಳು ಏಲಕ್ಕಿ ಲವಂಗದ ಜಾಹೀರಾತು ಮಾಡುತ್ತವೆ, ಇವುಗಳನ್ನು ಸರೋಗೇಟೆಡ್ ಜಾಹೀರಾತು ಎನ್ನುತ್ತಾರೆ.
ಸ್ಟಾರ್ ನಟರು ಭಾಗವಹಿಸಿರುವ ವಿಮಲ್ ಇಲೈಚಿ ಜಾಹೀರಾತುಗಳು ಕೂಡಾ ಇದೇ ಮಾದರಿಯವು, ‘ಬಾಯಲ್ಲಿ ಹೇಳಿ ಕೇಸರಿ’ ಎನ್ನುವ ಜಾಹಿರಾತು ವಾಸ್ತವವಾಗಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪರೋಕ್ಷವಾಗಿ ಉತ್ತೇಜಿಸುತ್ತಿರುವುದನ್ನು FDA ಗಂಭೀರವಾಗಿ ಪರಿಗಣಿಸಿದೆ.
ಕಮಿಷನರ್ ತುಕರಾಮ್ ಮುಂಡೆ ಅವರು ಈ ಬಗ್ಗೆ ಸ್ಪಷ್ಟನೆ ನೀಡುತ್ತಾ, ತಾವು ಯಾವುದೇ ನಿರ್ದಿಷ್ಟ ನಟರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಸಮಾಜದಲ್ಲಿ ದೊಡ್ಡ ಪ್ರಭಾವ ಹೊಂದಿರುವ ಇಂತಹ ಪ್ರಸಿದ್ಧ ವ್ಯಕ್ತಿಗಳು ಜಾಹೀರಾತುಗಳಲ್ಲಿ ನಟಿಸುವಾಗ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಮತ್ತು ಕಾನೂನು ಚೌಕಟ್ಟನ್ನು ಗೌರವಿಸಬೇಕು ಎಂಬುದು ಅವರ ಕಠಿಣ ನಿಲುವಾಗಿದೆ.
ಅವರು ಹೇಳುತ್ತಿರುವುದು ನಿಜ ಕೂಡಾ, ಅವರು ಅಂಬಾನಿ, ಬಿರ್ಲಾಗಳ ಸಂಸ್ಥೆಯನ್ನು ಬಿಡಲಿಲ್ಲ, ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಬಿಡಲಿಲ್ಲ ಹಾಗೂ ದೊಡ್ಡ ದೊಡ್ಡ ಔಷಧ ಬ್ರ್ಯಾಂಡ್ ಗಳನ್ನೂ ಬಿಡಲಿಲ್ಲ, ರಾಜಕಾರಣಿಗಳ ಮುಲಾಜಿಗೆ ಬೀಳಲಿಲ್ಲ. ಜನಹಿತವನ್ನು ದೃಷ್ಟಿಯಲ್ಲಿಟ್ಟು ಕೊಂಡು, ಜನರಿಗೆ ಶುದ್ಧ, ಕಲಬೆರಕೆರಹಿತ ಮತ್ತು ಸುರಕ್ಷಿತ ಆಹಾರ ಹಾಗೂ ಔಷಧವನ್ನು ಒದಗಿಸುವ ಉದ್ದೇಶಕ್ಕೆ ಪ್ರತಿಬದ್ಧ ರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ನಿರ್ಭೀತಿ ಯಿಂದ ಸತ್ಯವನ್ನು ಬಟಾಬಯಲು ಮಾಡುತ್ತಿzರೆ. ಅವರೇ ಹೇಳುವಂತೆ, ಈ ಕುರಿತು ಭಾರತದಲ್ಲಿ ಉಳಿದ ದೇಶಗಳಿಗೆ ಹೋಲಿಸಿದಾಗ ಕಾನೂನಿನ ಬಲ ಸಾಕಷ್ಟಿದೆ ಆದರೆ ನಾವು ವಿಫಲವಾಗುತ್ತಿರು ವುದು ಅದರ ಅನುಷ್ಠಾನದಲ್ಲಿ ಎನ್ನುತ್ತಾರೆ ಮುಂಡೆ.
ಮುಂಡೆಯವರ ಕಾರ್ಯ ಶ್ಲಾಘನೀಯವೇ, ಅದರಲ್ಲಿ ಎರಡು ಮಾತಿಲ್ಲ, ಅವರನ್ನು ಹೊಗಳಿ ಅಥವಾ ಹೊಗಳದಿರಿ, ಅವರಿರುವುದೇ ಹೀಗೆ. ನಾವು ಹೊಗಳಿ ಸನ್ಮಾನ ಮಾಡುತ್ತೇವೆ ಎನ್ನುವ ಕಾರಣಕ್ಕೆ ಅವರು ಈ ಕೆಲಸಗಳನ್ನು ಮಾಡುತ್ತಿಲ್ಲ. ತನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ ಎನ್ನುವ ಭಾವದಿಂದ ಮಾತ್ರ ಕೆಲಸ ಮಾಡುತ್ತಿದ್ದಾರೆ.
ಮುಂಡೆಯಂಥವರ ಕಾರ್ಯವೈಖರಿಯನ್ನು ನೋಡುವಾಗ ನಮ್ಮ ಮನಸ್ಸಿಗೆ ಬರುವ ಪ್ರಶ್ನೆ, ಒಬ್ಬ ತುಕಾರಾಮ ಇಷ್ಟೆಲ್ಲ ಮಾಡುವುದು ಸಾಧ್ಯ ಅಂತಾದರೆ, ಭಾರತೀಯ ಆಡಳಿತ ಸೇವೆಯ ಎಲ್ಲ ಅಧಿಕಾರಿಗಳು ಇವರಂತೆ ಕಾರ್ಯನಿರ್ವಹಿಸಿದರೆ ಎಷ್ಟೆ ಸಾಧಿಸಬಹುದು ಎನ್ನುವುದಾಗಿದೆ. ಈ ತುಕರಾಮ್ ಮುಂಡೆ ಬರುವ ಮೊದಲು ಆ ಹುದ್ದೆಯಲ್ಲಿ ಮತ್ತೊಬ್ಬರಾರೋ ಇದ್ದಿರಬೇಕಲ್ಲ, ಆತ ಏನು ಮಾಡುತ್ತಿದ್ದ? ಆತನಿಗೆ ಈ ಅಕ್ರಮಗಳು ಕಾಣಿಸಲೇ ಇಲ್ವಾ? ಅಥವಾ ಮುಂಡೆಯವರಿಗೇ ನಾದರೂ ಇದ್ದಕ್ಕಿದ್ದ ಹಾಗೆ ವಿಶೇಷ ಅಧಿಕಾರ ಪ್ರಾಪ್ತವಾಯಿತಾ? ಅಥವಾ ಈ ಅಕ್ರಮಗಳೆಲ್ಲ ಮುಂಡೆಯವರು ಬಂದ ಮೇಲೆ ಆಗಿದ್ದೆ ಎನ್ನುವ ಪ್ರಶ್ನೆ ಏಳುವುದು ಸ್ವಾಭಾವಿಕ ತಾನೆ? ಒಂದೋ ಹಿಂದೆ ಇದ್ದ ಅಧಿಕಾರಿ ನಿಷ್ಕ್ರಿಯನಾಗಿ ನಿದ್ದೆ ಮಾಡುತ್ತಾ ಕಾಲ ಕಳೆದಿರಬೇಕು ಅಥವಾ ವ್ಯವಸ್ಥೆಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜನಹಿತ ವನ್ನು ಬಲಿಕೊಟ್ಟಿರಬೇಕು, ಇವೆರಡೇ ಸಾಧ್ಯತೆ ಗಳಿರಲು ಸಾಧ್ಯ ತಾನೆ? ಈ ಎರಡೂ ಕಾರಣಗಳು ಒಪ್ಪಿಕೊಳ್ಳುವಂಥದ್ದಲ್ಲ ಬಿಡಿ!
ಅತ್ಯಂತ ಕಠಿಣ ಪರೀಕ್ಷಾ ವ್ಯವಸ್ಥೆಯನ್ನು ವಿವಿಧ ಹಂತಗಳಲ್ಲಿ ಪಾಸು ಮಾಡಿಕೊಂಡು, ಈ ಜನ ಭಾರತೀಯ ಆಡಳಿತ ಸೇವೆಗೆ ಸೇರುತ್ತಾರೆ. ಲಕ್ಷಾಂತರ ಜನ ಪರೀಕ್ಷಾರ್ಥಿಗಳಲ್ಲಿ ಕೆಲವೇ ಕೆಲವರು ಆಯ್ಕೆಯಾಗುತ್ತಾರೆ. ಅಂದರೆ, ಅತ್ಯಂತ ದಕ್ಷ ಹಾಗೂ ಅರ್ಹ ವ್ಯಕ್ತಿಗಳು ಮಾತ್ರ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಬರುತ್ತಾರೆ ಎಂದ ಹಾಗಾಯಿತು. ಆದರೆ ಅವರಲ್ಲಿ ತುಕರಾಮ್ ಮುಂಡೆ ಯಂಥವರು, ಟಿ.ಎನ್.ಶೇಷನ್ ತರದವರು ಎಲ್ಲೋ ಐವತ್ತು ಅರವತ್ತು ವರ್ಷಗಳಿಗೊಮ್ಮೆ ಒಬ್ಬರೋ ಇಬ್ಬರೋ ಮಾತ್ರ ಹೊರಹೊಮ್ಮುವುದು ಏಕೆ? ಉಳಿದ ಐಎಎಸ್ ಅಧಿಕಾರಿಗಳ ದಕ್ಷತೆ, ಪ್ರೌಢಿಮೆ, ಅರ್ಹತೆ ಇವುಗಳೆ ಹುದ್ದೆ ಸಿಕ್ಕ ಮೇಲೆ ಎಲ್ಲಿ ಮಾಯವಾಗಿ ಬಿಡುತ್ತವೆ ಎನ್ನುವುದು ಮಾತ್ರ ನಮಗೆ ತಿಳಿಯುತ್ತಿಲ್ಲ.
ಜಿಲ್ಲಾಧಿಕಾರಿಗಳನ್ನೂ ನಾವು ನೋಡುತ್ತೇವಲ್ಲ, ಕೆಲವು ಕಡೆ ಜಿಲ್ಲಾಧಿಕಾರಿಗಳು ಇದ್ದಾರಾ? ಅವರ ಹೆಸರೇನೂ ಎನ್ನುವುದೂ ಜನರಿಗೆ ತಿಳಿಯುವುದಿಲ್ಲ. ಇನ್ನು ಕೆಲವರು ಬೇಡದೇ ಇರುವ ವಿಷಯ ಗಳಿಗೆ ಸುದ್ದಿಯಲ್ಲಿರುತ್ತಾರೆ. ಮಾಡಬೇಕಾದ ಕೆಲಸವನ್ನು ಮಾತ್ರ ಮಾಡುವುದಿಲ್ಲ, ಅವರಿಗಿರುವ ಅಧಿಕಾರವನ್ನು ಸದ್ಬಳಕೆ ಮಾಡುವುದಿಲ್ಲ. ಜಿಲ್ಲೆಯ ಮಂತ್ರಿಗಳ ಅಥವಾ ಜನಪ್ರತಿನಿಧಿಗಳ ಮರ್ಜಿಯಲ್ಲಿ ಕೆಲಸ ಮಾಡುವಂತೆ ಕಂಡುಬರುತ್ತಾರೆ. ಅದಲ್ಲದಿದ್ದರೆ, ತುಕರಾಮ್ ಅವರಿಗಿದ್ದ ಅಧಿಕಾರದ ವ್ಯಾಪ್ತಿಯೇ ಅವರ ಹಿಂದೆ ಇರುವ ಅಧಿಕಾರಿಗೂ ಇತ್ತು, ಕಾನೂನಿನ ಬೆಂಬಲವಿತ್ತು. ತುಕರಾಮ್ ಏನು ಬರುವಾಗ ಹೊಸತಾಗಿ ಒಂದಿಷ್ಟು ಹೆಚ್ಚಿನ ಅಧಿಕಾರದ ಮೂಟೆಯನ್ನು ಹೊತ್ತು ತಂದಿರಲಿಲ್ಲವಲ್ಲ!
ಹಾಗಾಗಿ ಕೇವಲ ಕಲಬೆರಕೆ ಮಾಡಿದವರ ಮೇಲಷ್ಟೇ ಅಲ್ಲ, ನನ್ನನ್ನು ಕೇಳಿದರೆ, ಅಧಿಕಾರ ಲೋಪದ ಆಧಾರದ ಮೇಲೆ ಈ ಹಿಂದೆ ಮುಂಡೆಯವರ ಜಾಗದಲ್ಲಿ ಕೆಲಸ ನಿರ್ವಹಿಸಿದ್ದದ ಅಧಿಕಾರಿಗಳ ಮೇಲೂ ಮೊಕದ್ದಮೆ ಹೂಡಿ ಶಿಕ್ಷಿಸಬೇಕು. ಕಾರಣ, ಕಾನೂನಿನ ಅನುಷ್ಠಾನದಲ್ಲಿ ಅವರು ಏನು ಮಾಡಬೇಕಾ ಗಿತ್ತೋ ಅವುಗಳನ್ನು ಮಾಡದೇ ಸಾರ್ವಜನಿಕರ ಆರೋಗ್ಯದ ಜೊತೆಗೆ ಚಟವಾಡುತ್ತಿದ್ದರು. ಹಾಗಾದಾಗ ಮಾತ್ರ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ನೋಡಲು ಸಾಧ್ಯ ವಾಗುತ್ತದೆ. ತುಕರಾಮ್ ವರ್ಗವಾಗಿ ಇನ್ನೊಂದು ಹುದ್ದೆಗೆ ಹೋಗುತ್ತಾರೆ, ನಂತರ ಮತ್ತೆ ವ್ಯವಸ್ಥೆ ಮೊದಲೆಲ್ಲಿಯಿತ್ತೋ ಅಲ್ಲಿಗೇ ಬಂದು ನಿಲ್ಲಬಾರದು ಎನ್ನುವ ಕಾಳಜಿ ನನ್ನದು.
ಜನರ ಆರೋಗ್ಯದ ವಿಚಾರ ಬಂದಾಗ, ಕಾನೂನು ಸುವ್ಯವಸ್ಥೆಯ ವಿಚಾರ ಬಂದಾಗ ಚುನಾಯಿತ ಸರಕಾರಗಳು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಇಂಥಾ ವಿಚಾರಗಳು ತುಕಾರಾಮರಂಥ ಒಬ್ಬ ಅಧಿಕಾರಿಯ ಮೇಲೆ ನಿರ್ಭರವಾಗಬಾರದು. ಕಾನೂನಿನನ್ವಯ ವ್ಯವಸ್ಥೆಯನ್ನು ಶುದ್ಧೀಕರಿಸು ವುದಕ್ಕೆ ನೂರಾರು ಜನರ ಅವಶ್ಯಕತೆ ಇರುವುದಿಲ್ಲ, ಟಿ.ಎನ್.ಶೇಷನ್ ಅಂಥವರು ಒಬ್ಬಿಬ್ಬರಿದ್ದರೂ ಸಾಕಾಗುತ್ತದೆ ಎಂದು ಅವರ ಬಗ್ಗೆ ಹಿಂದೆ ಬರೆದಿದ್ದೆ. ಈಗ ತುಕರಾಮ್ ಮುಂಡೆಯೆನ್ನುವ ನಿರ್ಭೀತ ಅಧಿಕಾರಿಯ ಉಪಕ್ರಮಗಳನ್ನು ನೋಡುವಾಗ ಅದು ಮತ್ತೊಮ್ಮೆ ಸಾಬೀತಾದಂತಾಯಿತು. ಇಂಥವರ ಸಂತತಿ ಸಾವಿರವಾಗಲಿ ಎಂದು ಆಶಿಸೋಣ.