Vinayaka M Bhat Column: ಪದಾರ್ಥ ಚಿಂತನೆ ಎನ್ನುವುದೂ ಒಂದು ಬಗೆಯ ಗೀಳೇ!
ಷಡ್ಯಂತ್ರ ಎನ್ನುವ ಪದ ನಮ್ಮ ನಿತ್ಯಜೀವನದಲ್ಲಿ ಬಹಳ ಬಳಕೆಯಲ್ಲಿರುವ ಪದವಾಗಿದೆ. ರಾಜಕಾರಣಿ ಗಳಂತೂ ಈ ಪದವನ್ನು ತಾವು ಹಗರಣಗಳಲ್ಲಿ ಸಿಲುಕಿಕೊಂಡಾಗಲೆಲ್ಲ ತಪ್ಪದೇ ಬಳಸುತ್ತಾರೆ| ಈ ಷಡ್ಯಂತ್ರ ಎನ್ನುವ ಪದವನ್ನು ವಿವರಿಸಬಹುದೇ ಎಂದು ವಿಶ್ವವಾಣಿಯ ಓದುಗರೂ ಹಾಗೂ ವಿಶ್ವೇಶ್ವರ ಭಟ್ಟರ ಅಭಿಮಾನಿಗಳಬ್ಬರೂ ಆದ ಬೆಂಗಳೂರಿನ ನೀಲಕಂಠಪ್ಪ ನವರು ಕೇಳಿದ್ದರು. ಆ ಕುರಿತ ಸಣ್ಣ ಪ್ರಯತ್ನದ ಫಲವೇ ಈ ಲೇಖನ.
-
ವಿದ್ಯಮಾನ
ನನ್ನ ಕಳೆದ ವಾರದ ‘ದಂಡಂ ದಶಗುಣಂ ಎಂದರೆ ದಂಡನೆಯ ದಶವಿಧವೇ’ ಲೇಖನಕ್ಕೆ ಬಹಳ ಪ್ರತಿಕ್ರಿಯೆಗಳು ಬಂದವು. ದಂಡಂ ದಶಗುಣಂ ಎನ್ನುವುದಕ್ಕೆ ನಮಗೆ ಬೇರೆಯದೇ ಅರ್ಥಕಲ್ಪನೆ ಯಿತ್ತು, ಮೂಲ ಅರ್ಥವನ್ನು ಓದಿ ಅಚ್ಚರಿಯಾಯಿತು ಎನ್ನುವುದು ಬಹಳ ಜನರ ಅನಿಸಿಕೆ ಯಾಗಿತ್ತು. ಓದುಗ ಮಿತ್ರ ನಾಗರಾಜು ದೇವಯ್ಯನವರು ದಂಡದ ದಶಗುಣಲ್ಲದೇ, ಕ್ಷಮಾ, ಮಾರ್ದವ, ವಿನಯ, ಆರ್ಜವ, ಶೌಚ, ಸತ್ಯ, ಸಂಯಮ, ಇಂದ್ರಿಯ ನಿಗ್ರಹ, ತಪ, ದಾನ ಹಾಗೂ ಬ್ರಹ್ಮಚರ್ಯಗಳೆಂಬ ಹತ್ತು ಗುಣಗಳನ್ನು ವಿವರಿಸಿ ವಿಸ್ತಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದಂಡದ ಬಗ್ಗೆ ವಿಸ್ತಾರವಾಗಿ ಹೇಳಿದ ಹಾಗೆ ನೀವು ಗಂಡನ ಬಗ್ಗೆಯೂ ಹೇಳಬಹುದೇ ಎಂದು ಇನ್ನೊಬ್ಬ ಓದುಗರು ಕೇಳಿದ್ದರು. ದಂಡದ ಬಗ್ಗೆ ಇಷ್ಟೆ ಹೇಳಬಹುದು ಅಂತಾದರೆ ಗಂಡನ ಬಗ್ಗೆಯೂ ಬೇಕಾದಷ್ಟು ಹೇಳ ಹೇಳಬಹುದಲ್ಲವೇ ಎನ್ನುವುದು ಅವರ ಆಶಯ. ಗಂಡನ ಬಗ್ಗೆ ಹೆಚ್ಚು ಹೇಳುವುದೇನಿದೆ? ಸುಮ್ಮನೆ ದಂಡ ಅಂತ ಹೆಂಡತಿಯರು ಹೇಳಬಹುದು. ಆದರೆ ಗಂಡ ಎನ್ನುವ ಕನ್ನಡ ಪದವೂ ಅರ್ಥವಿಸ್ತಾರವನ್ನು ನೋಡುವಾಗ ಬಹಳ ವಿಚಿತ್ರವಾದದ್ದೇ ಆಗಿದೆ. ಗಂಡಭೇರುಂಡ, ಗಂಡಾಗುಂಡಿ, ಗಂಡಾಂತರ, ಮೂರುಲೋಕದ ಗಂಡ, ಗಂಡರ ಗಂಡ, ಗಂಡಸ್ಥಳ, ಗಂಡಾಭರಣ, ಗಂಡಾಬಂಧನ ಇತ್ಯಾದಿ ಶಬ್ದಗಳಲ್ಲಿ ಗಂಡನ ಪರಿಭಾಷೆ ನಾವು ತಿಳಿದುಕೊಂಡಿದ್ದ ಕ್ಕಿಂತ ಬಹಳ ಭಿನ್ನವಾಗಿ ಪ್ರಯೋಗವಾಗುತ್ತವೆ.
ವಿಷಯಾಂತರ ಎನ್ನುವ ಪದ ಬಳಕೆಯಾದಂತೆ ಗಂಡಾಂತರ ಎಂದು ಬಳಸುವ ಹಾಗಿಲ್ಲ, ವಿಷಯಾಂತರವೆಂದರೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹಾರುವುದಾಗಿದೆ. ಅದರೆ ಗಂಡಾಂತರವೆಂದರೆ ಗಂಡನನ್ನು ಬದಲಿಸುವುದು ಎನ್ನುವ ಅರ್ಥವಾಗುವುದಿಲ್ಲ. ಗಂಡಾಂತರ ವೆಂದರೆ ಕನ್ನಡದಲ್ಲಿ ಒಂದು ಅಪಾಯದಿಂದ ಪಾರಾದೆವು ಎನ್ನುವಾಗ ಇನ್ನೊಂದು ಅಪಾಯ ಎದುರಾಯಿತು ಎನ್ನುವ ಬೇರೆಯದೇ ಅರ್ಥವಿದೆ. ಗಂಡಾ ಎನ್ನುವ ಶಬ್ಧಕ್ಕೆ ಕಟ್ಟು ಅಥವಾ ಗಂಟು ಎನ್ನುವ ಅರ್ಥವೂ ಇದೆ. ಸಂಗೀತ ಕ್ಷೇತ್ರದಲ್ಲಿ ಗುರು ಶಿಷ್ಯನನ್ನು ಅಧಿಕೃತವಾಗಿ ಸ್ವೀಕಾರ ಮಾಡುವಾಗ ಕೈಗೆ ದಾರ ಕಟ್ಟಿ ಗಂಟು ಹಾಕುವ ಗಂಡಾಬಂಧದ ಪದ್ಧತಿಯಿದೆಯಲ್ಲ.
ಇದನ್ನೂ ಓದಿ:Vinayaka M Bhat Column: ದಂಡಂ ದಶಗುಣಂ ಅಂದರೆ ದಂಡನೆಯ ದಶವಿಧವೇ ?
ಷಡ್ಯಂತ್ರ ಎನ್ನುವ ಪದ ನಮ್ಮ ನಿತ್ಯಜೀವನದಲ್ಲಿ ಬಹಳ ಬಳಕೆಯಲ್ಲಿರುವ ಪದವಾಗಿದೆ. ರಾಜಕಾರಣಿಗಳಂತೂ ಈ ಪದವನ್ನು ತಾವು ಹಗರಣಗಳಲ್ಲಿ ಸಿಲುಕಿಕೊಂಡಾಗಲೆಲ್ಲ ತಪ್ಪದೇ ಬಳಸುತ್ತಾರೆ| ಈ ಷಡ್ಯಂತ್ರ ಎನ್ನುವ ಪದವನ್ನು ವಿವರಿಸಬಹುದೇ ಎಂದು ವಿಶ್ವವಾಣಿಯ ಓದುಗರೂ ಹಾಗೂ ವಿಶ್ವೇಶ್ವರ ಭಟ್ಟರ ಅಭಿಮಾನಿಗಳಬ್ಬರೂ ಆದ ಬೆಂಗಳೂರಿನ ನೀಲಕಂಠಪ್ಪ ನವರು ಕೇಳಿದ್ದರು. ಆ ಕುರಿತ ಸಣ್ಣ ಪ್ರಯತ್ನದ ಫಲವೇ ಈ ಲೇಖನ.
ಈ ಪ್ರಕರಣ ರಾಜಕೀಯ ಷಡ್ಯಂತ್ರದ ಭಾಗ, ಷಡ್ಯಂತ್ರ ಮಾಡಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸ ಲಾಗಿದೆ, ಮುಂತಾಗಿ ಜನ ಮಾತನಾಡುವುದನ್ನು ನಾವೂ ನಿತ್ಯ ಕೇಳುತ್ತೇವೆ. ಷಡ್ಯಂತ್ರ ಎಂಬ ಸಂಸ್ಕೃತ ಪದ, ಕನ್ನಡವೂ ಸೇರಿ ಅನೇಕ ಭಾರತೀಯ ಭಾಷೆಯಲ್ಲಿ ಆಗಾಗ ಬಳಸುವ ಪದವಾಗಿದೆ.
ಸಾಮಾನ್ಯವಾಗಿ ಇದನ್ನು ಇಂಗ್ಲಿಷ್‌ನಲ್ಲಿ Conspiracy ಅಥವಾ Plot ಎಂದು ಕರೆಯಲಾಗುತ್ತದೆ. ಇದರ ಸರಳ ಅರ್ಥ ಸಂಚು, ಕುತಂತ್ರ, ಪಿತೂರಿ ಅಥವಾ ಒಳಸಂಚು ಎಂದಾಗುತ್ತದೆ. ಯಾರೋ ಒಬ್ಬರಿಗೆ ಅಥವಾ ಒಂದು ವ್ಯವಸ್ಥೆಗೆ ಹಾನಿ ಮಾಡಲು, ರಹಸ್ಯವಾಗಿ ರೂಪಿಸುವ ದುಷ್ಟ ಯೋಜನೆ ಯನ್ನು ಷಡ್ಯಂತ್ರ ಎನ್ನಲಾಗುತ್ತದೆ. ಷಡ್ಯಂತ್ರ ಪದದ ಮೂಲ, ಅದರ ಆರು ಆಯಾಮಗಳು ಹಾಗೂ ಪುರಾಣೇತಿಹಾಸದಲ್ಲಿ ಮತ್ತು ಇಂದಿನ ಆಧುನಿಕ ಸಮಾಜದಲ್ಲಿ ಅದು ಹೇಗೆ ಬಳಕೆಯಲ್ಲಿದೆ ಎಂಬುದನ್ನು ಸ್ವಲ್ಪ ವಿವರವಾಗಿ ನೋಡೋಣ.
ಪದದ ವ್ಯುತ್ಪತ್ತಿ ಮತ್ತು ಹಿನ್ನೆಲೆ (Etymology): ಈ ಪದ ‘ಷಡ್’ ಮತ್ತು ‘ಯಂತ್ರ’ ಎಂಬ ಎರಡು ಪದಗಳ ಸಂಯೋಜನೆಯಿಂದ ರೂಪುಗೊಂಡಿದ್ದು ಷಡ್ (ಷಣ) ಎಂದರೆ ಆರು, ಯಂತ್ರವೆಂದರೆ ವಿಧಾನ, ಉಪಕರಣ ಅಥವಾ ಯೋಜನೆಯಾಗಿದೆ. ಆದ್ದರಿಂದ, ಇದರ ಅರ್ಥ ಆರು ಮುಖಗಳನ್ನು ಅಥವಾ ಆಯಾಮಗಳನ್ನು ಹೊಂದಿರುವ ರಹಸ್ಯ ಯೋಜನೆ ಅಂತಾಗುತ್ತದೆ. ಪ್ರಾಚೀನ ಭಾರತೀಯ ಯುದ್ಧನೀತಿ ಯಲ್ಲಿ ಅನೇಕ ವ್ಯೂಹಗಳ ಉಲ್ಲೇಖವಿರುವಂತೆ, ರಾಜನೀತಿ, ಅರ್ಥಶಾಸ್ತ್ರ ಮತ್ತು ಯುದ್ಧತಂತ್ರಗಳಲ್ಲಿ ವೈರಿಯನ್ನು ಸದ್ದಿಲ್ಲದೆ ಸೋಲಿಸಲು ಅಥವಾ ನಿಯಂತ್ರಿಸಲು ಈ ‘ಷಡ್-ಯಂತ್ರ’ ಅಥವಾ ಆರು ವಿಧದ ರಾಜತಾಂತ್ರಿಕ ತಂತ್ರಗಳನ್ನು ಬಳಸಲಾಗುತ್ತಿತ್ತು.
ಕಾಲಕ್ರಮೇಣ, ಈ ಪದವು ನಕಾರಾತ್ಮಕ ಅರ್ಥವನ್ನು ಪಡೆದುಕೊಂಡು, ಒಬ್ಬರನ್ನು ಸಿಲುಕಿಸಲು ಹೆಣೆಯುವ ಕುತಂತ್ರ ಎಂಬ ಅರ್ಥದಲ್ಲಿ ಹೆಚ್ಚು ಬಳಕೆಗೆ ಬಂತು ಅಂತ ಕಾಣುತ್ತದೆ. ಒಂದು ಪರಿಪೂರ್ಣ ಷಡ್ಯಂತ್ರವು ಆರು ವ್ಯವಸ್ಥಿತ ತಂತ್ರಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ:
ಛಲ (ಮೋಸ / ವಂಚನೆ-Deception): ಛಲ ಎನ್ನುವ ಶಬ್ದಕ್ಕೆ ಕಪಟ ಎನ್ನುವ ಅರ್ಥವೂ ಇದೆ. ಇದು ಮೊದಲ ಹಂತ. ಇಲ್ಲಿ ಸತ್ಯವನ್ನು ಮರೆಮಾಚಿ, ಸುಳ್ಳನ್ನೇ ನಿಜವೆಂಬಂತೆ ಬಿಂಬಿಸಲಾಗುತ್ತದೆ. ಬಲಿಪಶು ವಿಗೆ ತನಗೆ ತೊಂದರೆಯಾಗುತ್ತಿದೆ ಎಂಬ ಸಣ್ಣ ಸುಳಿವೂ ಸಿಗದಂತೆ ರಹಸ್ಯ ಕಾಪಾಡ ಲಾಗುತ್ತದೆ.
ಛದ್ಮ (ರಹಸ್ಯ ಕಾರ್ಯಾಚರಣೆ- Covertness): ಸಂಚುಗಾರರು ತಮ್ಮ ನೈಜ ಮುಖವನ್ನು ಮರೆಮಾಚಿ, ಹಿತೈಷಿಗಳಂತೆ ಮುಖವಾಡ ಧರಿಸಿ ನಟಿಸುತ್ತಾರೆ. ಶತ್ರುವಿನ ಕೋಟೆಯೊಳಗೆ ಗೂಢ ಚಾರರನ್ನು ಬಿಡುವುದು ಅಥವಾ ಆಪ್ತರ ಸೋಗಿನಲ್ಲಿ ಮಾಹಿತಿ ಕದಿಯುವುದು ಈ ಹಂತದಲ್ಲಿ ನಡೆಯುತ್ತದೆ.
ಭೇದ (ಒಡಕು ಮೂಡಿಸುವುದು- Division): ಎದುರಾಳಿಯ ಶಕ್ತಿ ಅವರ ಒಗ್ಗಟ್ಟಿನಲ್ಲಿರುತ್ತದೆ. ಆದ್ದರಿಂದ, ಅವರಲ್ಲಿ ತಪ್ಪು ತಿಳುವಳಿಕೆಯನ್ನು ಉಂಟುಮಾಡಿ, ಪರಸ್ಪರ ಜಗಳವಾಡುವಂತೆ ಮಾಡುವುದು. Divide and Ruleಅಂತೇವ ಹಾಗೆ.
ಭ್ರಮ (ಗೊಂದಲ ಸೃಷ್ಟಿ - Misdirection): ಬಲಿಪಶುವು ಸರಿಯಾದ ನಿರ್ಧಾರ ತೆಗೆದುಕೊಳ್ಳದಂತೆ ಅವರ ಮನಸ್ಸಿನಲ್ಲಿ ಗೊಂದಲ, ಭಯ ಅಥವಾ ಅತಿಯಾದ ಆತ್ಮವಿಶ್ವಾಸವನ್ನು ತುಂಬುವುದು. ಇದರಿಂದ ಅವರು ತಾವಾಗಿಯೇ ತಪ್ಪು ಹೆಜ್ಜೆ ಇಡುವಂತೆ ಪ್ರೇರೇಪಿಸುವುದಾಗಿದೆ.
ಪ್ರಮಾದ Exploiting Weakness): ಎದುರಾಳಿಯು ಭಾವನಾತ್ಮಕವಾಗಿ ಕುಗ್ಗಿದಾಗ, ಕೋಪ ಗೊಂಡಾಗ ಅಥವಾ ಅಹಂಕಾರದ ಭ್ರಮೆಯಲ್ಲಿದ್ದಾಗ ಆ ಕ್ಷಣಕ್ಕಾಗಿ ಕಾಯುವುದು. ಎದುರಾಳಿ ತನ್ನಿಂದ ತಾನೆ ಪ್ರಮಾದ ವೆಸಗುವಂತೆ ಮಾಡುವುದು ಹಾಗೂ ಆ ಕ್ಷಣವನ್ನೇ ತಮಗೆ ಅನುಕೂಲ ವಾಗಿ ಬಳಸಿಕೊಳ್ಳುವುದು.
ಘಾತ (ಅಂತಿಮ ದಾಳಿ- The Final Strike): ಎಲ್ಲಾ ಐದು ಹಂತಗಳು ಯಶಸ್ವಿಯಾದ ನಂತರ, ಎದುರಾಳಿ ಯು ಸಂಪೂರ್ಣವಾಗಿ ಒಂಟಿಯಾಗಿದ್ದಾಗ ಮತ್ತು ಅಸಹಾಯಕನಾಗಿದ್ದಾಗ ನೀಡುವ ಅಂತಿಮ, ಮಾರಕ ವಾದ ಏಟು. ಈ ಮೇಲಿನ ಆರು ಅಂಗಗಳಿಗಿಂತ ಸ್ವಲ್ಪ ಭಿನ್ನವಾಗಿ, ಭಾರತೀಯ ತಂತ್ರಸಾಹಿತ್ಯಗಳಲ್ಲಿ ಜಾರಣ, ಮಾರಣ, ಮೋಹನ, ಸ್ಥಂಬನ, ಉಚ್ಛಾಟನ ಹಾಗೂ ವಿಧ್ವಂಸನವೆಂಬ ಆರು ತಂತ್ರಗಳನ್ನೂ ಹೇಳಲಾಗಿದೆ.
ಭಾರತೀಯ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳಲ್ಲಿ ಷಡ್ಯಂತ್ರದ ಅತ್ಯುತ್ತಮ ಉದಾಹರಣೆಗಳನ್ನು ಕಾಣಬಹುದು. ಮಹಾಭಾರತದ ಶಕುನಿಯನ್ನು ಭಾರತೀಯ ಇತಿಹಾಸದ ಷಡ್ಯಂತ್ರದ ಪಿತಾಮಹ ಎಂದರೆ ತಪ್ಪಾಗಲಿಕ್ಕಿಲ್ಲ. ಅಂತಹಾ ತಂತ್ರಗಾರನಾಗಿದ್ದವ ಆತ. ಕೌರವರನ್ನು ಮುಂದಿಟ್ಟುಕೊಂಡು ಪಾಂಡವರನ್ನು ವಿನಾಶದತ್ತ ತಳ್ಳಲು ಆತ ಹೆಣೆದ ಸರಣಿ ಸಂಚುಗಳು ನೂರಾರು. ಲಾಕ್ಷಾಗೃಹದಲ್ಲಿ (ಅರಗಿನ ಅರಮನೆ) ಪಾಂಡವರನ್ನು ಜೀವಂತವಾಗಿ ಸುಡಲು ಯತ್ನಿಸಿದ್ದು, ಮಾಯಾ ದ್ಯೂತದಲ್ಲಿ (ಪಗಡೆ ಆಟ) ಧರ್ಮರಾಯನನ್ನು ಸೋಲಿಸಿ ದ್ರೌಪದಿಯ ವಸಾಪಹರಣಕ್ಕೆ ಕಾರಣವಾಗಿದ್ದು, ಮತ್ತು ಮಹಾಭಾರತ ಯುದ್ಧದಲ್ಲಿ ಅಭಿಮನ್ಯು ವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಂದಿದ್ದು ಇವೆಲ್ಲವೂ ಆತನ ವ್ಯವಸ್ಥಿತ ಷಡ್ಯಂತ್ರದ ರೂಪ ಗಳಾಗಿವೆ.
ಇನ್ನು, ರಾಮಾಯಣದ ಮಂಥರೆಯದ್ದು ಷಡ್ಯಂತ್ರಕ್ಕೆ ಉದಾಹರಣೆಯಾಗಿ ಬಳಸಬಹುದಾದ ಇನ್ನೊಂದು ಹೆಸರು. ರಾಣಿಯ ದಾಸಿಯಾಗಿದ್ದ ಮಂಥರೆ, ಕೈಕೇಯಿಯ ಮನಸ್ಸನ್ನು ಕಲುಷಿತ ಗೊಳಿಸುತ್ತಾಳೆ. ಶ್ರೀರಾಮ ನ ಪಟ್ಟಾಭಿಷೇಕವನ್ನು ತಡೆಯಲು ಕೈಕೇಯಿಯ ಮಮಕಾರ ಮತ್ತು ಅಸೂಯೆಯನ್ನು ಬಳಸಿಕೊಂಡು, ದಶರಥ ಮಹಾರಾಜನಿಂದ ರಾಮನಿಗೆ 14 ವರ್ಷಗಳ ವನವಾಸ ವಿಧಿಸುವಂತೆ ಮಾಡುವ ಷಡ್ಯಂತ್ರ ರಚಿಸಿರುವುದು ನಮಗೆಲ್ಲ ತಿಳಿದೇ ಇದೆ. ಇಂದಿನ ಕಾಲದಲ್ಲಿ ರಾಜರ ಆಡಳಿತದ ಬದಲಿಗೆ ಪ್ರಜಾರಾಜ್ಯವಿದ್ದರೂ, ಷಡ್ಯಂತ್ರದ ಸ್ವರೂಪ ಮಾತ್ರ ಬದಲಾಗದೆಯೇ ಹಾಗೆಯೇ ಉಳಿದಿದೆ.
ರಾಜಕೀಯ ಷಡ್ಯಂತ್ರ (Political Conspiracy): ರಾಜಕೀಯದಲ್ಲಿ ಅಧಿಕಾರವನ್ನು ಹಿಡಿಯಲು ಅಥವಾ ಎದುರಾಳಿ ನಾಯಕರನ್ನು ಕೆಳಗಿಳಿಸಲು ನಿರಂತರವಾಗಿ ಒಳಸಂಚುಗಳು ನಡೆಯುತ್ತಿರು ತ್ತವೆ. ಸುಳ್ಳು ಆರೋಪಗಳನ್ನು ಹೊರಿಸುವುದು, ಪಕ್ಷಾಂತರ ಮಾಡಿಸುವುದು, ಆಡಳಿತಾರೂಢ ಸರಕಾರವನ್ನು ಬೀಳಿಸಲು ರಹಸ್ಯವಾಗಿ ಶಾಸಕರನ್ನು ಒಟ್ಟುಗೂಡಿಸುವುದು (Resort Politics) ಇವೆಲ್ಲ ಆಧುನಿಕ ರಾಜಕೀಯ ಷಡ್ಯಂತ್ರಕ್ಕೆ ಉದಾಹರಣೆಗಳಾಗಿವೆ.
ಕಾರ್ಪೊರೇಟ್ ಒಳಸಂಚುಗಳು: ಉದ್ಯಮ ರಂಗದಲ್ಲಿ ಒಂದು ಕಂಪನಿಯು ತನ್ನ ಪ್ರತಿಸ್ಪರ್ಧಿ ಕಂಪನಿ ಯನ್ನು ಮಾರುಕಟ್ಟೆಯಿಂದ ಹೊರಹಾಕಲು ಹೂಡುವ ತಂತ್ರಗಳು ಇದರಲ್ಲಿ ಬರುತ್ತವೆ. ಡೇಟಾ ಕಳ್ಳತನ, ಪ್ರತಿಸ್ಪರ್ಧಿ ಕಂಪನಿಯ ಆಂತರಿಕ ರಹಸ್ಯಗಳನ್ನು ಕದಿಯುವುದು, ಅಥವಾ ಮಾರುಕಟ್ಟೆಯಲ್ಲಿ ಅವರ ಷೇರುಗಳ ಮೌಲ್ಯ ಕುಸಿಯುವಂತೆ ಸುಳ್ಳು ವದಂತಿಗಳನ್ನು ಹಬ್ಬಿಸು ವುದು ಮುಂತಾದವುಗಳನ್ನು ಕಾರ್ಪೊರೇಟ್ ಒಳಸಂಚು ಎಂದು ಗುರುತಿಸಬಹುದಾಗಿದೆ.
ಸಾಮಾಜಿಕ ಮತ್ತು ಕೌಟುಂಬಿಕ: ಸಂಚು ಷಡ್ಯಂತ್ರ ಎನ್ನುವುದು ಇಂದು ಸಾಮಾನ್ಯ ಕುಟುಂಬ ಗಳಲ್ಲಿ ಮತ್ತು ಕಚೇರಿಗಳಲ್ಲಿಯೂ ಕಂಡುಬರುತ್ತದೆ. ಒಬ್ಬ ವ್ಯಕ್ತಿಯ ಬೆಳವಣಿಗೆಯನ್ನು ಸಹಿಸದ ಸಹೋದ್ಯೋಗಿ ಗಳು ಅವರ ತೇಜೋವಧೆ ಮಾಡಲು ಹಿರಿಯ ಅಧಿಕಾರಿಗಳ ಕಿವಿ ಚುಚ್ಚುವುದು, ಕುಟುಂಬದ ಆಸ್ತಿಗಾಗಿ ಒಡಹುಟ್ಟಿದವರ ನಡುವೆಯೇ ಗೋಡೆ ಎತ್ತುವಂತೆ ಮಾಡುವುದು ಎಲ್ಲವೂ ಈ ಷಡ್ಯಂತ್ರದ ವ್ಯಾಪ್ತಿಗೆ ಬರುತ್ತವೆ.
ಮೇಲಿನ ವಿವರಣೆಗಳನ್ನೆಲ್ಲ ನೋಡುವಾಗ, ಯಾವುದೇ ಒಂದು ಘಟನೆಯನ್ನು ನಾವು ಷಡ್ಯಂತ್ರ ಎಂದು ಕರೆಯಬೇಕಾದರೆ ಅಲ್ಲಿ ಮೂರು ಪ್ರಮುಖ ಲಕ್ಷಣಗಳಿರಬೇಕಾಗುತ್ತದೆ ಎನ್ನುವುದು ತಿಳಿದುಬರುತ್ತದೆ. ಮೊದಲನೆಯದಾಗಿ ಗೌಪ್ಯತೆ (Secrecy). ಯೋಜನೆ ರೂಪಿಸುವವರು ಮತ್ತು ಭಾಗಿಯಾಗುವವರು ಹೊರತು ಪಡಿಸಿ ಯಾರಿಗೂ ಸುಳಿವು ಸಿಗದಂತೆ ನೋಡಿಕೊಳ್ಳುವುದು, ಎರಡನೆಯದಾಗಿ ದುರುದ್ದೇಶ (Malicious Intent). ಇದರ ಉದ್ದೇಶ ಸದಾ ನಕಾರಾತ್ಮಕವಾಗಿರುತ್ತದೆ. ಷಡ್ಯಂತ್ರದಲ್ಲಿ ಕೇವಲ ಹಾನಿ, ನಷ್ಟ ಅಥವಾ ವಿನಾಶದ ಗುರಿ ಇರುತ್ತದೆ. ಮೂರನೆಯದಾಗಿ ಪಿತೂರಿ (Collusion).
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಷಡ್ಯಂತ್ರಕ್ಕೆ ಕಾನೂನಾತ್ಮಕ ವ್ಯಾಖ್ಯಾನವಿದೆ. ಕಾನೂನಿನ ಪ್ರಕಾರ, ಯಾವಾಗ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದು ಕಾನೂನುಬಾಹಿರ ಕೃತ್ಯವನ್ನು ಮಾಡಲು ಅಥವಾ ಕೃತ್ಯವನ್ನು ಕಾನೂನುಬಾಹಿರ ಮಾರ್ಗಗಳ ಮೂಲಕ ಮಾಡಲು ಒಪ್ಪಂದ ಮಾಡಿ ಕೊಳ್ಳುತ್ತಾರೋ, ಅದನ್ನು ಅಪರಾಧಿಕ ಸಂಚು (Criminal Conspiracy) ಎನ್ನಲಾ ಗುತ್ತದೆ. ಕೇವಲ ಅಪರಾಧ ಮಾಡುವುದು ಮಾತ್ರವಲ್ಲ, ಅದನ್ನು ಮಾಡಲು ರಹಸ್ಯವಾಗಿ ಯೋಜನೆ ರೂಪಿಸುವುದು ಕೂಡ ಕಾನೂನಿನ ಪ್ರಕಾರ ಅಷ್ಟೇ ದೊಡ್ಡ ಅಪರಾಧವಾಗಿದೆ.
ಷಡ್ಯಂತ್ರ ಎಂಬುದು ಮನುಷ್ಯನ ಅಸೂಯೆ, ಸ್ವಾರ್ಥ, ಲೋಭ ಮತ್ತು ಅಧಿಕಾರದ ಹಪಾಹಪಿ ಯಿಂದ ಹುಟ್ಟುವ ಒಂದು ದುಷ್ಟ ತಂತ್ರವಾಗಿದೆ. ಮಹಾಭಾರತ ನಮಗೆ ಕಲಿಸುವ ಪಾಠವೇನೆಂದರೆ ಷಡ್ಯಂತ್ರ ವನ್ನು ರೂಪಿಸಿದ ಶಕುನಿ ಮತ್ತು ಕೌರವರು ತಾತ್ಕಾಲಿಕವಾಗಿ ಗೆದ್ದಂತೆ ಕಂಡರೂ, ಅಂತಿಮವಾಗಿ ಧರ್ಮ ಮತ್ತು ಸತ್ಯದ ಮುಂದೆ ಅವರು ಸರ್ವನಾಶವಾದರು, ಅಂದರೆ ನಿಜವಾದ ಶೌರ್ಯ ಸತ್ಯದ ಮುಂದೆ ಷಡ್ಯಂತ್ರಗಳು ಅಲ್ಪಾಯುಷಿಯಾಗುತ್ತವೆ ಎನ್ನುವುದೇ ಇದರ ನೀತಿ ಯಾಗುತ್ತದೆ ಎಂಬಲ್ಲಿಗೆ ಷಡ್ಯಂತ್ರದ ವ್ಯಾಖ್ಯಾನವನ್ನು ನಿಲ್ಲಿಸೋಣ.
ಹೀಗೆ ಪ್ರತಿ ಪದಕ್ಕೆ ಒಂದು ಚರಿತ್ರೆ ಇತಿಹಾಸವಿರುತ್ತೆ, ಪದಕ್ಕೆ ಅನೇಕ ಮುಖಗಳಿರುತ್ತವೆ. ಪದಪ್ರಪಂಚದ ಸ್ವಾರಸ್ಯವೇ ಹಾಗೆ. ಉದಾಹರಣೆಗೆ, ಪದಾರ್ಥವೆಂದರೆ ಒಂದು ಪದ ಮತ್ತು ಅದರ ಅರ್ಥವೆನ್ನುವುದು ಒಂದಾದರೆ, ವಸ್ತು ಹಾಗೂ ಸಾಮಗ್ರಿಯೆಂತಲೂ ಆಗುತ್ತದೆ. ಅಷ್ಟೇ ಅಲ್ಲದೇ, ನಮ್ಮ ಕಡೆ ಊಟದಲ್ಲಿ ಅನ್ನಕ್ಕೆ ಪೂರಕವಾಗಿ ಬಳಸುವ, ಸಾರು, ತಂಬುಳಿ, ಗೊಜ್ಜು ಮುಂತಾದವು ಗಳನ್ನು ಪದಾರ್ಥವೆಂದು ಕರೆಯುವ ರೂಢಿಯಿದೆ. ಇಂದು ಊಟಕ್ಕೆ ಏನು ಪದಾರ್ಥ ಮಾಡಿದ್ದೀಯಾ ಎಂದು ಕೇಳುತ್ತೇವೆ. ಒಳ್ಳೆಯ ಪದಾರ್ಥಗಳಿಂದಾಗಿ ಸಪ್ಪೆಯಾದ ಅನ್ನಕ್ಕೆ ಹೇಗೆ ರುಚಿಯೊದಗುವುದೋ, ಹಾಗೆ ಪದವು ಮೂಲ ಅರ್ಥದಲ್ಲಿ ಬಳಕೆಯಾದಾಗ ಭಾಷೆಯೂ ರುಚಿಯಾಗುತ್ತದೆ. ಪದಗಳೇ ಭಾಷೆಯ ಮೂಲ ಪರಮಾಣು ತಾನೆ?
ಈ ಪದಾರ್ಥ (ಪದ+ಅರ್ಥ) ಚಿಂತನೆಯೇ ಹಾಗೆ, ಬಹಳ ಆಸಕ್ತಿದಾಯಕ ಕಾಯಕವದು. ಅದೊಂಥ ರಾ ಹುಚ್ಚು. ನಮ್ಮ ಬಳಕೆಗೆ ಸಿಗುವ ಎಲ್ಲ ಪದಗಳಿಗೂ ಮೂಲ ಅರ್ಥವನ್ನು ಹುಡುಕುತ್ತಾ ಹೋಗೋಣ ವೆನಿಸುತ್ತದೆ, ಅದು ಮುಗಿಯುವ ಕಥೆಯೇ ಅಲ್ಲ. ವಿಷ್ಣು ಸಹಸ್ರನಾಮದ ಪದಗಳಿಗೆ ‘ನಿರಂತರ ಶತಾರ್ಥಕಂ’ ಎನ್ನುವ ಪ್ರಶಸ್ತಿಯಿದೆ.
ವಿಷ್ಣು ಸಹಸ್ರನಾಮದ ಒಂದೊಂದೂ ಪದಗಳು, ಒಂದು ಕಾಲಘಟ್ಟದಲ್ಲಲ್ಲ, ನಿರಂತರವಾಗಿ ನೂರು ಅರ್ಥಗಳನ್ನು ಸೂಸುತ್ತವೆಯಂತೆ. ಹಿಗೆ ಅನೇಕ ಕನ್ನಡದ ಪದಗಳಿಗೆ ಆಸಕ್ತಿದಾಯಕ ವಿವರಣೆಗಳ ಮೂಲಕ ವ್ಯುತ್ಪತ್ತಿ, ಮೂಲ ಅರ್ಥ ಒದಗಿಸಿದ್ದ ಪದಾರ್ಥ ಚಿಂತಾಮಣಿಯ ಪಿತಾಮಹ, ಪಾ.ವೆಂ ಆಚಾರ್ಯರು (ಲಾಂಗೂಲಾ ಚಾರ್ಯರು) ನಮ್ಮಂಥಾ ಪದಾರ್ಥದ ರಸಿಕರಿಗೆ ಇಂದಿಗೂ ಸ್ಮರಣೀಯರಾಗಿದ್ದಾರೆ. ನನ್ನ ಪದಾರ್ಥಾರ್ಥಿ ಓದುಗ ಮಿತ್ರರುಗಳು ಅವರ ‘ಪದಾರ್ಥ ಚಿಂತಾಮಣಿ’ಯನ್ನು ಆಶ್ರಯಿಸಬಹುದಾಗಿದೆ.