ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagawath Column: ಮತದಾರರ ಹೃದಯ ಗೆದ್ದರೆ ವೋಟ್‌ ಚೋರಿಯ ಅಗತ್ಯವೇಕೆ ?

1989ರ ತಿದ್ದುಪಡಿ ಕಾಯಿದೆಯನ್ವಯ ಆಯೋಗವು ತ್ರಿಸದಸ್ಯ ಆಯೋಗವಾಗಿ ಕಾರ್ಯನಿರ್ವಹಿಸುತ್ತಿದೆ. ಆರು ಉಪ-ಆಯುಕ್ತರಲ್ಲದೆ 550ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿವರ್ಗ ಇರುವ ಕೇಂದ್ರ ಸಚಿವಾಲಯ ಮತ್ತು ಎಲ್ಲಾ ರಾಜ್ಯ, ಜಿಲ್ಲಾ ಮಟ್ಟ, ಕ್ಷೇತ್ರ ಮಟ್ಟಗಳಲ್ಲಿ ಇರುವ ವಿವಿಧ ಅಧಿಕಾರಿಗಳನ್ನೊಳಗೊಂಡ ಬೃಹತ್ ಚುನಾವಣಾ ವ್ಯವಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗವತ್

ದೇಶಾದ್ಯಂತ ನಡೆಯುತ್ತಿರುವ ಎಸ್.ಐ.ಆರ್. ಪ್ರಕ್ರಿಯೆಯ ಮೂಲಕ ಭಾರತದ ಮುಖ್ಯ ಚುನಾವಣಾ ಆಯುಕ್ತರು ಎನ್.ಡಿ.ಎ. ಒಕ್ಕೂಟದ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ವಿರೋಧ ಪಕ್ಷಗಳು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ. ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ ಮಾನ್ಯ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಿಂದನಾಪೂರ್ವಕ ಘೋಷಣೆ ಗಳನ್ನು ಕೂಗಿ ಅವರ ಮತ್ತು ಪ್ರಧಾನ ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಲಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದರ ಆಧಾರದಲ್ಲಿ ಚುನಾವಣಾ ಆಯೋಗದ ಇತರ ಇಬ್ಬರು ಆಯುಕ್ತರ ಅಧಿಕಾರಗಳನ್ನು ಹತ್ತಿಕ್ಕಲಾಗುತ್ತಿದೆ ಮತ್ತು ಅನೇಕ ವಿಷಯಗಳ ಕುರಿತು ಅವರನ್ನು ಕತ್ತಲಿನಲ್ಲಿಡಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಭಾರತದ ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ.

1989ರ ತಿದ್ದುಪಡಿ ಕಾಯಿದೆಯನ್ವಯ ಆಯೋಗವು ತ್ರಿಸದಸ್ಯ ಆಯೋಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರು ಉಪ-ಆಯುಕ್ತರಲ್ಲದೆ 550ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿವರ್ಗ ಇರುವ ಕೇಂದ್ರ ಸಚಿವಾಲಯ ಮತ್ತು ಎಲ್ಲಾ ರಾಜ್ಯ, ಜಿಲ್ಲಾ ಮಟ್ಟ, ಕ್ಷೇತ್ರ ಮಟ್ಟಗಳಲ್ಲಿ ಇರುವ ವಿವಿಧ ಅಧಿಕಾರಿಗಳನ್ನೊಳಗೊಂಡ ಬೃಹತ್ ಚುನಾವಣಾ ವ್ಯವಸ್ಥೆ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: Thimmanna Bhagwath Column: ಎಳವೆಯಲ್ಲೇ ಕಮರುವ ಮೊಗ್ಗುಗಳು: ಮೂವರಲ್ಲಿ ಮೂರ್ಖರ್ಯಾರು ?

ಆಯಾ ರಾಜ್ಯ ಸರಕಾರಗಳ ಅಧೀನ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೇ ಎಸ್ .ಐ.ಆರ್., ಚುನಾವಣಾ ಕಾರ್ಯ ಮುಂತಾದ ತಳಮಟ್ಟದ ಎಲ್ಲಾ ಕಾರ್ಯಗಳಿಗೆ ಬಳಸಲಾಗುತ್ತದೆ. ಚುನಾವಣಾ ಆಯೋಗದ ವ್ಯಾಪ್ತಿಯಲ್ಲಿ ಬರುವ ನಿರ್ಣಯಗಳನ್ನು ಮೂವರು ಆಯುಕ್ತರ ಸಭೆಯಲ್ಲಿ ಸರ್ವಾನುಮತ ಅಥವಾ ಬಹುಮತದ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಹಾಗೆ ಠರಾವಿನ ಮೂಲಕ ಕೈಗೊಳ್ಳದ ಹೊರತು ಆಯೋಗದ ತೀರ್ಮಾನಗಳಿಗೆ ಸಿಂಧುತ್ವ ಇಲ್ಲವೆಂಬುದನ್ನು ಗಮನಿಸಬೇಕು.

ಮೂವರೂ ಆಯುಕ್ತರಿಗೆ ಕಾನೂನಿನನ್ವಯ ಸಮಾನ ಅಧಿಕಾರವಿದ್ದು ಆಯೋಗದ ಸಭೆಗಳಲ್ಲಿ ಯಾವುದೇ ವಿಷಯವನ್ನು ಚರ್ಚಿಸುವ, ಬದಲಾಯಿಸುವ ಸ್ವಾತಂತ್ರ್ಯ ಅವರಿಗೆ ಇರುತ್ತದೆ. ಅದನ್ನು ಅವರು ಬಳಸುತ್ತಿಲ್ಲ ಎನ್ನಲು ಸಕಾರಣಗಳಿಲ್ಲ. ಆಡಳಿತಾತ್ಮಕ ಸಮಸ್ಯೆಗಳನ್ನು ಸರಿಪಡಿಸುವ ಕುರಿತಾಗಿಯೇ ಪತ್ರವ್ಯವಹಾರಗಳು ನಡೆದಿವೆ ಮತ್ತು ಇದು ಆಯೋಗದಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿರುವದನ್ನು ಖಚಿತಪಡಿಸುತ್ತದೆ ಎಂದು ಹೇಳಲಾಗಿದೆ.

96 ಕೋಟಿಗೂ ಅಧಿಕ ಮತದಾರರಿರುವ ಭಾರತದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆಯು ಒಂದು ಸಂಕೀರ್ಣ ಹಾಗೂ ಬೃಹತ್ ಪ್ರಕ್ರಿಯೆಯಾಗಿದೆ. ಎಸ್.ಐ.ಆರ್. ಸರಕಾರದ ನಿರ್ಣಯವಾಗಿದ್ದು ಆಯೋಗ ಅದನ್ನು ಕಾನೂನಾತ್ಮಕವಾಗಿ ಕೈಗೊಳ್ಳುತ್ತಿದೆ. ಚುನಾವಣೆಯ ಪ್ರಕ್ರಿಯೆ ಸರಿಯಾಗಿ ನಡೆಯಲು ದೋಷರಹಿತ ಮತದಾರರ ಯಾದಿ ಅಗತ್ಯವಾಗಿದ್ದು ಆ ಕಾರಣಕ್ಕೆ ಎಸ್.ಐ.ಆರ್. ಪ್ರಕ್ರಿಯೆ ಕಾನೂನುಬದ್ಧವೆಂದು ಸುಪ್ರೀಂ ಕೋರ್ಟ್ ಕೂಡಾ ಹೇಳಿದೆ.

62

ಈ ಬೃಹತ್ ಕಾರ್ಯವನ್ನು ಕೇಂದ್ರ ಆಯೋಗದ ಮೇಲ್ವಿಚಾರಣೆಯಲ್ಲಿ ಆಯಾ ರಾಜ್ಯ ಸರಕಾರಗಳ ನೌಕರರು, ಅಧಿಕಾರಿಗಳೇ ನಡೆಸುತ್ತಿದ್ದಾರೆ, ಅದನ್ನೇನೂ ರಹಸ್ಯವಾಗಿ ಮಾಡುತ್ತಿಲ್ಲ. ಪ್ರತೀ ಹಳ್ಳಿ, ವಾರ್ಡ್‌ಗಳಲ್ಲಿ ಎಲ್ಲರ ಮನೆಗಳಿಗೆ ಬಿ.ಎಲ್.ಓ.ರವರು ಭೇಟಿ ನೀಡಿ ಅಗತ್ಯ ವಿವರ ಪಡೆದು ಮತದಾರ ಯಾದಿಯನ್ನು ಸರಿಪಡಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ.

ಆಯೋಗದ Voters’ Service Portal, ECI Portal ಮುಂತಾದ ಪೋರ್ಟಲ್‌ಗಳ ಮೂಲಕ ಮತದಾರರೇ ತಮ್ಮ ವಿವರಗಳನ್ನು ಪೋರ್ಟಲ್‌ಗಳ ಮೂಲಕ ಅಪ್‌ಲೋಡ್ ಮಾಡುವ ವ್ಯವಸ್ಥೆಯಿದೆ. ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಫಾರ್ಮ್-6, ಅನಿವಾಸಿ ಭಾರತೀಯರಿಗೆ ಫಾರ್ಮ್ 6ಎ, ಹೆಸರು ರದ್ದು ಪಡಿಸಲು (ಮರಣದಂಥ ಸಂದರ್ಭದಲ್ಲಿ) ಫಾರ್ಮ್-7, ಯಾವುದೇ ತಿದ್ದುಪಡಿಗೆ ಫಾರ್ಮ್ 8, ಹೀಗೇ ಅನೇಕ ಫಾರ್ಮ್‌ʼಗಳು ವೋಟರ್ ಪೋರ್ಟಲ್‌ನಲ್ಲೇ ಲಭ್ಯವಿವೆ. ಇಡೀ ಕೇತ್ರದ ಯಾದಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ತಪ್ಪಾಗಿ ಯಾರದ್ದೇ ಹೆಸರು ರದ್ದಾದರೆ ಅಥವಾ ಸೇರಿಸಲು ತಿರಸ್ಕರಿಸಿದರೆ ಪೋರ್ಟಲ್‌ನಲ್ಲೇ ಅಪೀಲಿಗೆ ಅವಕಾಶವಿದೆ.

ಪೋರ್ಟಲ್‌ನಲ್ಲಿ ಲಭ್ಯವಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQ) ಅಡಿಯಲ್ಲಿ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಮತ್ತು ಆಕ್ಷೇಪಣೆಗಳಿಗೆ ಉತ್ತರವಿದೆ, ಅಲ್ಲದೆ ಸಂಬಂಧಿತ ಬಿ.ಎಲ್.ಒ.ಗಳಿಗೆ ಕರೆ ಮಾಡಲು ಕೂಡಾ ಅಲ್ಲೇ ಅವಕಾಶವಿದೆ. ಅಂತಿಮಗೊಳಿಸುವ ಮೊದಲು ಕರಡು ಮತದಾರ ಯಾದಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವದು.

ಇದೀಗ ಆಯೋಗ ನೀಡಿದ ಪ್ರಕಟಣೆಯ ಪ್ರಕಾರ, ಅದರ ಒಂದು ಪ್ರತಿಯನ್ನು ಎಲ್ಲಾ ನೋಂದಾ ಯಿತ ಪಕ್ಷಗಳಿಗೂ ನೀಡಲಾಗುತ್ತದೆ ಮತ್ತು ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗುತ್ತದೆ. ಕೋಟಿಗಟ್ಟಲೆ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ.

ಬೃಹತ್ ಕಾರ್ಯದ ಕಾರಣಕ್ಕೋ, ಸಾಫ್ಟ್‌ʼವೇರ್‌ನ ದೋಷದಿಂದಲೋ ಅಥವಾ ಉದ್ದೇಶ ಪೂರ್ವಕ ವಾಗಿಯೇ ತಪ್ಪು ಮಾಡಲಾಗುತ್ತಿದೆ ಎಂದೇ ಭಾವಿಸೋಣ. ಅದನ್ನು ಸರಿಯಾಗಿ ಮಾಡಬೇಕಾದ್ದು ಆಯೋಗದ ಪ್ರಾಥಮಿಕ ಕರ್ತವ್ಯ ಎಂಬುದರಲ್ಲೂ ಎರಡು ಮಾತಿಲ್ಲ. ಆದರೆ ಆರೋಪ ಮಾಡುತ್ತಿರುವ ವಿರೋಧ ಪಕ್ಷಗಳ ಕಾರ್ಯಕರ್ತರು ಪ್ರತೀ ಕ್ಷೇತ್ರದಲ್ಲೂ ಇದ್ದಾರೆ. ಅವರು ಎಲ್ಲಾ ಮತದಾರರನ್ನೂ ಸಂಪರ್ಕಿಸಿ ಅವರಿಗೆ ಬಿ.ಎಲ್.ಒ.ಗಳನ್ನು ಭೇಟಿ ಮಾಡಿಸಿ ಅವರ ಹೆಸರು ಸೇರ್ಪಡೆ ಗೊಳ್ಳುವದನ್ನು ಖಚಿತಪಡಿಸಿಕೊಳ್ಳಬಹುದಲ್ಲವೇ? ಆಥವಾ ತಪ್ಪಾಗಿ ರದ್ದುಪಡಿಸಲ್ಪಟ್ಟ ಅಥವಾ ಸೇರಿಸದ ಮತದಾರರ ಹೆಸರಿನ ಲಿಸ್ಟ್ ತಯಾರಿಸಿ ಆಯಾ ಬಿ.ಎಲ್.ಒ.ಗಳಿಗೆ ಅಥವಾ ಎಸ್.ಡಿ.ಎಮ್. ಮುಂತಾದ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿ ಆ ಎಲ್ಲ ತಪ್ಪುಗಳನ್ನು ಸರಿಪಡಿಸಲು ಹೇಳಬಹುದಲ್ಲವೇ? ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಕಾರ್ಯಕ್ಕೆ ಯಾವ ಜನಪ್ರತಿನಿಧಿಗಳು ಅಥವಾ ರಾಜಕಾರಣಿಗಳು ಕೈಜೋಡಿಸಿದ್ದಾರೆ? ಕೇವಲ ಆರೋಪ, ಪ್ರತಿಭಟನೆ ಗಳಲ್ಲಿ ಕಾಲ ಕಳೆಯುವ ಬದಲು ಹಗಲು-ರಾತ್ರಿ ಶ್ರಮಿಸುತ್ತಿರುವ ಚುನಾವಣಾ ಅಧಿಕಾರಿಗಳ ಜತೆ ಕೈಜೋಡಿಸಿದರೆ ಎಲ್ಲಾ ಅರ್ಹ ಮತದಾರರನ್ನು ಯಾದಿಯಲ್ಲಿ ಸೇರಿಸಬಹುದಲ್ಲವೇ? ಪಕ್ಷಗಳ ಕಾರ್ಯಕರ್ತರೇ ಪೋರ್ಟಲ್ ಬಳಸಿ ಹೆಸರನ್ನು ಸೇರಿಸಲು ಅವಕಾಶವಿದೆ.

ಆಗಲೂ ಸರಿಯಾಗದಿದ್ದರೆ ಮೇಲ್ಮನವಿ ಸಲ್ಲಿಸಬಹುದು ಅಥವಾ ಹೋರಾಟಮಾಡಬಹುದಲ್ಲವೆ? ಮೃತರಾದ ಮತದಾರರನ್ನು ಯಾದಿಯಿಂದ ಡಿಲೀಟ್ ಮಾಡಿದರೆ ಮತಕಳ್ಳತನಕ್ಕೆ ತಡೆ ಬೀಳುತ್ತದೆ ಹೊರತು ಸಹಾಯವಾಗುವುದಿಲ್ಲ.

ಅನಧಿಕೃತ ವಲಸೆದಾರರನ್ನು ಗುರುತಿಸಿ ದೇಶದಿಂದ ಹೊರ ಹಾಕುವ ಪ್ರಕ್ರಿಯೆಯ ಜೊತೆಗೇ ಅವರ ಹೆಸರನ್ನು ಮತದಾರರ ಯಾದಿಯಿಂದ ತೆಗೆದು ಹಾಕಬೇಕಾಗಿದೆ, ಇಲ್ಲವಾದಲ್ಲಿ ಅದರ ಆಧಾರದಲ್ಲಿ ಅವರು ನಮ್ಮ ದೇಶದ ನಾಗರಿಕತ್ವವನ್ನು ಸ್ಥಾಪಿಸಿದರೆ ದೇಶದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಅವರನ್ನು ಪೋಷಿಸುವುದರ ಜೊತೆಗೇ ಅವರಿಂದ ಉಂಟಾಗುತ್ತಿರುವ ಭಯೋತ್ಪಾದನೆಯಂಥ ಕಾನೂನುಬಾಹಿರ ಚಟುವಟಿಕೆಗಳ ಸಮಸ್ಯೆ ಕೂಡಾ ಗಂಭೀರವಾದದ್ದು.

ಇನ್ನು ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ನೋಂದಾಯಿಸಲ್ಪಟ್ಟ ಮತದಾರರ ಹೆಸರನ್ನು ಯಾದಿಯಿಂದ ತೆಗೆದು ಹಾಕುವುದು ಕೂಡಾ ಮತಚೋರಿ ತಡೆಯಲು ಅತ್ಯಗತ್ಯ. ಈ ಕಾರಣಕ್ಕೆ ಎಸ್.ಐ.ಆರ್. ಪ್ರಕ್ರಿಯೆಯನ್ನೇ ದೂಷಿಸಲು ಯಾವುದೇ ತಾರ್ಕಿಕ ಸಮರ್ಥನೆ ಕಾಣುತ್ತಿಲ್ಲ. ಆದರೆ ಈ ಪ್ರಕ್ರ್ರಿಯೆಯು ಪೂರ್ತಿ ದೋಷಮುಕ್ತ ಎಂದಲ್ಲ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರ ಯಾದಿಯ ಪರಿಷ್ಕರಣೆ ನಡೆಯುವಾಗ ತಾಂತ್ರಿಕ ದೋಷಗಳು, ಸಾಫ್ಟ್‌ʼವೇರ್ ಸಮಸ್ಯೆಗಳು, ಅನೇಕ ಕಣ್ತಪ್ಪಿನ ದೋಷಗಳು ನಡೆಯುವುದು ಸಾಮಾನ್ಯ. ಲಕ್ಷಗಟ್ಟಲೆ ಜನರಿಗೆ ನೋಟೀಸ್ ನೀಡಲಾಗಿದೆ, ಗಣ್ಯವ್ಯಕ್ತಿಗಳಿಗೇ ನೋಟೀಸು ಹೋಗಿದೆ. ಸ್ವತಃ ಆಯುಕ್ತರಿಗೇ ನೋಟೀಸು ನೀಡಲಾಗಿದೆ ಎಂಬೆಲ್ಲ ಆರೋಪಗಳು ಗಂಭೀರವಾದರೂ ಅದರಲ್ಲಿ ದುರುದ್ದೇಶ ಗುರುತಿಸುವುದು ಸರಿಯಾಗಲಿಕ್ಕಿಲ್ಲ, ಯಾಕೆಂದರೆ ನೋಟೀಸು ನೀಡುವುದು ತಪ್ಪನ್ನು ಸರಿಪಡಿಸಲು ನೀಡಲಾಗುವ ಅವಕಾಶವಾಗಿರುತ್ತದೆ.

ನೋಟೀಸು ನೀಡದೇ ರಹಸ್ಯವಾಗಿ ತಪ್ಪು ಮಾಡಿದಾಗ ಮಾತ್ರ ಅದರಲ್ಲಿ ದುರುದ್ದೇಶವನ್ನು ಆರೋಪಿಸಬಹುದು. ಇವೆಲ್ಲವಕ್ಕೂ ಸರಿಪಡಿಸುವ ಅವಕಾಶ ಪೋರ್ಟಲ್‌ನಲ್ಲೇ ಇದೆ ಅಥವಾ ಬಿ.ಎಲ್.ಓ.ಗಳನ್ನು ಸಂಪರ್ಕಿಸಿದರೆ ಪರಿಹಾರ ಸಿಗುತ್ತದೆ. ಅಷ್ಟಾಗಿ ಅಂತರ್ಗತ ಅಪೀಲಿನ ಜತೆಗೆ ನ್ಯಾಯಾಲಯದ ಮಾರ್ಗವೂ ಮುಕ್ತವಾಗಿದೆ.

ಮತದಾರರನ್ನು ಸೇರಿಸಲು ಇರುವ ಅಧಿಕಾರ ಕೇವಲ ಕೇಂದ್ರ ಚುನಾವಣಾ ಆಯೋಗದಲ್ಲಿ ಕೇಂದ್ರೀಕೃತವಾಗಿದ್ದು ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಥವಾ ಎಸ್.ಡಿ.ಎಮ್.ಗಳಿಗೆ ಇದ್ದ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಪೋರ್ಟಲ್‌ನಲ್ಲಿ ಇರುವ ಆಯ್ಕೆಗಳನ್ನು ನೋಡಿದರೆ ಈ ಆರೋಪ ನಿಜವೆಂದೆನಿಸುವುದಿಲ್ಲ.

ಆದಾಗ್ಯೂ ಗೋವಾದಲ್ಲಿ 97 ಮತದಾರರ ವಿಷಯದಲ್ಲಾದ ಸಮಸ್ಯೆ ಸಾಫ್ಟ್‌ʼವೇರ್ ಸಮಸ್ಯೆ ಇರಬಹುದು ಹೊರತು ನೀತಿ ನಿರ್ಣಯ ಎಂದೆನಿಸುವದಿಲ್ಲ. ಬಿ.ಜೆ.ಪಿ.ಗೆ ಮತನೀಡದವರ ಹೆಸರನ್ನು ಮಾತ್ರ ಡಿಲೀಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಆಧಾರ ಸಿಗುತ್ತಿಲ್ಲ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಮತದಾರರು ಡಿಲೀಟ್ ಆದ ಕ್ಷೇತ್ರಗಳಲ್ಲಿ ಟಿ.ಎಂ.ಸಿ.ಯ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ ಅಥವಾ ಬಿಜೆ.ಪಿ. ಅಭ್ಯರ್ಥಿಗಳು ಜಯಗಳಿಸಿದ ಅಂತರ ಡಿಲೀಟ್ ಆದ ಮತಕ್ಕಿಂತ ಹೆಚ್ಚಿದೆ ಎಂದು ವಿಶ್ಲೇಷಿಸಲಾಗಿದೆ.

ಯಾದಿಯಿಂದ ಹೊರಗಿಡಲಾದ ವ್ಯಕ್ತಿಗಳ ಕುರಿತಾದ ಮೇಲ್ಮನವಿಗಳು ಮತ್ತು ಆನಂತರ ನ್ಯಾಯಾಂಗದ ಅಧಿಕಾರಿಗಳು ಸೇರಿಸಿದ್ದಾರೆನ್ನಲಾದ ವ್ಯಕ್ತಿಗಳ ಕುರಿತಾಗಿ ಸ್ವತಃ ಆಯೋಗವೇ ಮಾಡಿದೆಯನ್ನಲಾದ ಮೇಲ್ಮನವಿಗಳು ಇನ್ನೂ ನ್ಯಾಯಾಲಯದ ತೀರ್ಮಾನಕ್ಕೆ ಬಾಕಿಯಿವೆ. ತನ್ನ ಹೆಸರು ಸೇರ್ಪಡಿಸಲು ಅರ್ಜಿ ಸಲ್ಲಿಸಿದ ಬಾಂಗ್ಲಾದ ಪ್ರಜೆಗೆ ಭಾರತದ ನಾಗರಿಕತ್ವವನ್ನು ಸಾಬೀತು ಪಡಿಸಲು ನಿಮ್ಮ ಬಳಿ ಯಾವ ದಾಖಲೆಯಿದೆ ಎಂದು ಇತ್ತೀಚಿನ ಪ್ರಕರಣವೊಂದರಲ್ಲಿ ಕೊಲ್ಕತಾ ಹೈಕೋರ್ಟು ಖಾರವಾಗಿ ಪ್ರಶ್ನಿಸಿದೆ ಎಂದು ವರದಿಯಾಗಿದೆ.

ಫಾರ್ಮ್-6ರಲ್ಲಿ ಪಾಲಕರ ನಾಗರಿಕತ್ವದ ಕುರಿತಾದ ದಾಖಲೆ ಕೇಳಿರುವುದು ನಾಗರಿಕತ್ವದ ಕಾಯಿದೆಗೆ ಅನುಗುಣವಾಗಿಯೇ ಇದೆ. 2003ರ ಹೊಸ ನಾಗರಿಕತ್ವ ಕಾಯಿದೆಯ ಪ್ರಕಾರ, ವ್ಯಕ್ತಿಯೊಬ್ಬ 2003ರ ನಂತರ ಭಾರತದಲ್ಲಿ ಹುಟ್ಟಿದರೂ ಅವನ ಜನ್ಮ ದಿನಾಂಕದಂದು ಅವನ ತಾಯಿ, ತಂದೆಯರಿಬ್ಬರೂ ಭಾರತದ ನಾಗರಿಕರಲ್ಲದಿದ್ದರೆ ಅಥವಾ ತಾಯಿ ತಂದೆಯರಿಬ್ಬರ ಪೈಕಿ ಒಬ್ಬರು ಅಕ್ರಮ ವಲಸಿಗರಾಗಿದ್ದರೆ ಅವನಿಗೆ/ಅವಳಿಗೆ ಭಾರತದಲ್ಲಿ ಹುಟ್ಟಿದ ಕಾರಣಕ್ಕೆ ಭಾರತದ ನಾಗರಿಕತ್ವ ದೊರೆಯುವುದಿಲ್ಲ. (4ನೇ ಕಲಮು).

ಈ ಕಾರಣಕ್ಕೆ 2002ರ ಯಾದಿಯನ್ನು ಪರಿಗಣಿಸುವುದು ಮತ್ತು ಹೊಸದಾಗಿ ನೋಂದಣಿಯಾಗು ವವರಿಗೆ ಪಾಲಕರ ನಾಗರಿಕತ್ವದ ಷರತ್ತನ್ನು ಅನ್ವಯಿಸುವದು ಕಾನೂನು ಬದ್ಧವಾಗಿಯೇ ಇದೆ. ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಫಾರ್ಮ್-6ರಲ್ಲಿ ಪಾಲಕರ ಕುರಿತಾದ ಡಿಕ್ಲೇರೇಷನ್ ಅನ್ನು ಈಗ ತೆಗೆದುಹಾಕಲಾಗಿದೆ.

ಚುನಾವಣಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು ಆಯೋಗದ ವಿರುದ್ಧ ಮಾಡಲಾಗುವ ಆಕ್ಷೇಪಣೆಗಳಿಗೆ ಸೂಕ್ತ ಆಧಾರಗಳು ಬೇಕಾಗುತ್ತವೆ. ಅದಕ್ಕಾಗಿಯೇ ಆಕ್ಷೇಪಣೆ ಸಲ್ಲಿಸುವಾಗ ಅಫಿಡವಿಟ್ ಸಲ್ಲಿಸಬೇಕೆಂಬ ನಿಯಮವಿದೆ. ಅದನ್ನು ಮಾಡದಿದ್ದರೆ ಆಕ್ಷೇಪಣೆಗಳು ಸಿಂಧುವಲ್ಲ ಮತ್ತು ಅಂಥ ಆಕ್ಷೇಪಣೆಗಳಿಗೆ ಆಯೋಗ ಉತ್ತರಿಸಬೇಕಾಗಿಲ್ಲ. ಇನ್ನು ಆಯುಕ್ತರು ಆಳುವ ಪಕ್ಷದ ಕೈಗೊಂಬೆಯಾಗಿದ್ದಾರೆ ಎಂಬ ಆರೋಪ ಹೊಸದಲ್ಲ. ಈ ಹಿಂದೆ ಆಯುಕ್ತರಾಗಿದ್ದ ಕೆಲವರನ್ನು ರಾಜ್ಯಪಾಲರು, ರಾಜ್ಯಸಭಾ ಸದಸ್ಯರು, ಅಷ್ಟೇಕೆ, ಮಂತ್ರಿಯನ್ನೇ ಮಾಡಿದ ಉದಾಹರಣೆಗಳಿವೆ. ಆಕ್ಷೇಪ ಮಾಡುವವರು ಈ ಎಲ್ಲ ಸಂಗತಿಗಳಿಗೆ ಉತ್ತರ ನೀಡಬೇಕಾಗುತ್ತದೆ.

ಇಡೀ ವಿಶ್ವದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಒಂದು ಸವಾಲಿನ ಕಾರ್ಯ. ಅಂಥ ಕಾರ್ಯವನ್ನು ಸಮರ್ಥವಾಗಿ ಮಾಡು ತ್ತಿರುವ ಆಯೋಗದ ವಿರುದ್ಧ ಆಧಾರ ರಹಿತ ಆರೋಪಮಾಡಿದರೆ ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಜಗತ್ತು ಸಂಶಯ ಪಡುವಂತಾಗುತ್ತದೆ.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ವಿದೇಶಗಳಲ್ಲಿ ಹೇಳುವಾಗ ಅನೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆಯೆಂಬ ಅಂಶ ಯಾಕೆ ನೆನಪಾಗುವುದಿಲ್ಲ? ಹೀಗೆ ಹೇಳಿಯೇ ಅಲ್ಲವೇ ಬಾಂಗ್ಲಾ, ನೇಪಾಳಗಳಲ್ಲಿ ಸರಕಾರಗಳನ್ನು ಉರುಳಿಸಿದ್ದು? ಬ್ಯಾಕ್-ಟು-ಬೆಲೆಟ್ ಎನ್ನುವವರು, ಭಾರತದ ಇ.ವಿ.ಎಂ.ಗಳನ್ನು ಇತರ ದೇಶಗಳು ಅಳವಡಿಸಿಕೊಳ್ಳುತ್ತಿರುವ ಕುರಿತು ಹೆಮ್ಮೆ ಪಡಬೇಕು.

ಅಭ್ಯರ್ಥಿಗಳ ಕನಿಷ್ಟ ಶೈಕ್ಷಣಿಕ ಅರ್ಹತೆ, ಭ್ರಷ್ಟಾಚಾರ, ಅಪರಾಧ ಹಿನ್ನೆಲೆ ಮುಂತಾದ ವಿಷಯಗಳ ಕುರಿತು ಚಿಂತನೆ ನಡೆಸಿ ಚುನಾವಣಾ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಯ ಕುರಿತು ಹೋರಾಟ ಮಾಡಬೇಕಾಗಿದೆ. ಪ್ರತಿಭಟನೆ ನಡೆಸಲು ಆರ್ಥಿಕತೆ, ಷೇರು ಮಾರುಕಟ್ಟೆಯಲ್ಲಾದ ಅಲ್ಲೋಲ ಕಲ್ಲೋಲ, ರೂಪಾಯಿಯ ಬೆಲೆ ಕುಸಿತ, ಹಣದುಬ್ಬರದಂಥ ಅನೇಕ ಗಂಭೀರ ವಿಷಯಗಳಿವೆ. ಜನಹಿತದ ವಿಷಯಗಳ ಕುರಿತು ಹೋರಾಟ ಮಾಡಿದರೆ ಜನರ ಹೃದಯ ಕದಿಯಬಹುದು, ಅದೇ ನಿಜವಾದ ಮತಚೋರಿಯಲ್ಲವೇ ?