Thimmanna Bhagwath Column: ಎಳವೆಯಲ್ಲೇ ಕಮರುವ ಮೊಗ್ಗುಗಳು: ಮೂವರಲ್ಲಿ ಮೂರ್ಖರ್ಯಾರು ?
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದಾರ್ಥಿಗಳು ಅನುಭವಿಸುವ ನಿರಂತರ ಒತ್ತಡ, ಪಾಲಕರು ಮಕ್ಕಳಿಂದ ಬಯಸುವ ಅತಿಯಾದ ಸಾಧನೆ ಹಾಗೂ ತಮ್ಮ ಸಂಸ್ಥೆಯ ಗುಣಮಟ್ಟ ಮತ್ತು ಪ್ರತಿಷ್ಠೆಯ ಕುರಿತು ಪ್ರೊಫೆಸರ್ ಗಳ ಅಹಂಭಾವ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಚಿತ್ರಿಸುವ ಈ ಚಲನ ಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಅಗತ್ಯವಾಗಿ ನೋಡಲೇ ಬೇಕು. ಈ ಚಿತ್ರದಲ್ಲಿ ತೋರಿಸಿದಂತೆ ಅನೇಕ ಪಾಲಕರು ತಮ್ಮ ಮಕ್ಕಳ ಆಸಕ್ತಿಯೇನು, ಅವರ ಕಲಿಕಾ ಸಾಮರ್ಥ್ಯವೇನು ಎಂಬ ಯಾವ ವಿಮರ್ಶೆಯನ್ನೂ ಮಾಡದೆ ಕೇವಲ ತಮ್ಮ ಪ್ರತಿಷ್ಟೆ ಹಾಗೂ ಇತರರ ಮಕ್ಕಳನ್ನು ಮೀರಿಸುವ ಸ್ಪರ್ಧೆಯೇ ಉದ್ದೇಶಕ್ಕಾಗಿ ಮಕ್ಕಳನ್ನು ಪಂದ್ಯದ ಕುದುರೆಯನ್ನಾಗಿಸಿ ಬಿಡುತ್ತಾರೆ.
-
ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಅಮೀರ್ ಖಾನರ ‘ತ್ರೀ ಈಡಿಯಟ್ಸ್’ ಚಿತ್ರವನ್ನು ಮತ್ತೊಮ್ಮೆ ನೋಡಬೇಕೆನಿಸಿತು. ಜಾಯ್ ಲೋಬೋ ಎಂಬ ವಿದ್ಯಾರ್ಥಿಗೆ ತನ್ನ ಪ್ರೊಜೆಕ್ಟ್ ಮುಗಿಸಲು ಕಾಲಾವಕಾಶ ನೀಡದೇ ಆತನ ತಂದೆಗೆ ಕರೆ ಮಾಡಿ ನಿಮ್ಮ ಮಗ ಬಿ.ಟೆಕ್ ಪದವಿ ಪಡೆಯುವದಿಲ್ಲ ಎಂದು ಹೇಳುವ ಪ್ರೊಫೆಸರ್ ವೀರೂ ಸಹಸ್ರಬುದ್ಧೆಯ ವರ್ತನೆ ಆತಂಕಕಾರಿಯೆನಿಸುತ್ತದೆ. ಪದವಿ ಪಡೆಯಲು ಸಾಧ್ಯವಾಗದೆ ತಂದೆಯ ಆಸೆಯನ್ನು ನೆರವೇರಿಸಲಾಗದ್ದಕ್ಕೆ ಜಾಯ್ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದಾರ್ಥಿಗಳು ಅನುಭವಿಸುವ ನಿರಂತರ ಒತ್ತಡ, ಪಾಲಕರು ಮಕ್ಕಳಿಂದ ಬಯಸುವ ಅತಿಯಾದ ಸಾಧನೆ ಹಾಗೂ ತಮ್ಮ ಸಂಸ್ಥೆಯ ಗುಣಮಟ್ಟ ಮತ್ತು ಪ್ರತಿಷ್ಠೆಯ ಕುರಿತು ಪ್ರೊಫೆಸರ್ ಗಳ ಅಹಂಭಾವ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಚಿತ್ರಿಸುವ ಈ ಚಲನಚಿತ್ರವನ್ನು ಇನ್ನೂ ನೋಡಿಲ್ಲವಾದರೆ ಅಗತ್ಯವಾಗಿ ನೋಡಲೇ ಬೇಕು. ಈ ಚಿತ್ರದಲ್ಲಿ ತೋರಿಸಿದಂತೆ ಅನೇಕ ಪಾಲಕರು ತಮ್ಮ ಮಕ್ಕಳ ಆಸಕ್ತಿಯೇನು, ಅವರ ಕಲಿಕಾ ಸಾಮರ್ಥ್ಯವೇನು ಎಂಬ ಯಾವ ವಿಮರ್ಶೆಯನ್ನೂ ಮಾಡದೆ ಕೇವಲ ತಮ್ಮ ಪ್ರತಿಷ್ಟೆ ಹಾಗೂ ಇತರರ ಮಕ್ಕಳನ್ನು ಮೀರಿಸುವ ಸ್ಪರ್ಧೆಯೇ ಉದ್ದೇಶಕ್ಕಾಗಿ ಮಕ್ಕಳನ್ನು ಪಂದ್ಯದ ಕುದುರೆಯನ್ನಾ ಗಿಸಿ ಬಿಡುತ್ತಾರೆ. ಈ ಜಂಜಾಟದಲ್ಲಿ ಬರೇ ಓದುವದು ಮತ್ತು ಪರೀಕ್ಷೆ ಬರೆದು ಅಂಕ ಪಡೆಯುವದೇ ಜೀವನ ಎಂಬ ಮನಸ್ಥಿತಿ ಮಕ್ಕಳದ್ದು. ಆಟ, ಮನರಂಜನೆ, ಸಾಮಾಜಿಕ ಜೀವನ ಎಲ್ಲವೂ ಶೂನ್ಯವಾಗಿ ಅವರು ನಗುವದನ್ನೇ ಮರೆಯುತ್ತಾರೆ.
ಕೆಲವು ಶಿಕ್ಷಕರಿಗೆ ವಿದ್ಯಾರ್ಥಿಗಳೆಂದರೆ ಕೇವಲ ಕಚ್ಚಾವಸ್ತುಗಳು. ತಮ್ಮ ಅಗಾಧ ಜ್ಞಾನವೆಂಬ ಯಂತ್ರದ ಮೂಲಕ ಮಾತ್ರ ಅವರೆಲ್ಲ ಉದ್ಧಾರವಾಗುತ್ತಾರೆ. ಇಲ್ಲವಾದರೆ ಅವರೆಲ್ಲ ಯೂಸ್‌ಲೆಸ್ ಎಂಬುದನ್ನು ಪ್ರಾಮಾಣಿಕವಾಗಿ ನಂಬುವ ಕೆಲವು ಪ್ರೊಫೆಸರ್'ಗಳು ವಿದ್ಯಾರ್ಥಿಗಳನ್ನು ಮಕ್ಕಳೆಂದು ಗ್ರಹಿಸದೇ ತಮ್ಮದೇ ಮಟ್ಟದಲ್ಲೇ ಪರಿಗಣಿಸುತ್ತಾರೆ ಅಥವಾ ಈ ಪ್ರಕ್ರಿಯೆಯಲ್ಲಿ ಕ್ರಮೇಣ ತಾವೇ ಮಕ್ಕಳ ಮಟ್ಟಕ್ಕೆ ಇಳಿದು ಬಿಡುತ್ತಾರೆ.
ಇದನ್ನೂ ಓದಿ: Thimmanna Bhagwath Column: ಬ್ರಿಕ್ಸ್-ದೇಶಗಳ ನಡುವಿನ ಗೋಡೆಗಳನ್ನು ಕೆಡವಬಹುದೇ ?
ಎಲ್ಲರ ಎದುರಿಗೆ ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಸಿ ಹೊಗಳುವದು ಅಥವಾ ನಿಂದಿಸುವದು, ಅಪಹಾಸ್ಯ ಮಾಡುವದು, ಪರೀಕ್ಷೆ, ಸ್ಪರ್ಧೆಗಳಲ್ಲಿ ತಾರತಮ್ಯ, ಉತ್ತಮ ಮಾರ್ಕ್ಸ್ ಪಡೆಯದಿದ್ದರೆ ಅಸಡ್ಡೆ, ಹೀಯಾಳಿಸುವದು ಇವೆಲ್ಲವನ್ನೂ ಮಾಡುವ ಶಿಕ್ಷಕರಿದ್ದಾರೆ.
ಹಾಸ್ಟೆಲ್‌ನ ಹೊಸ ವಾತಾವರಣ, ಆರೋಗ್ಯದ ಸಮಸ್ಯೆಗಳು ಮುಂತಾದ ಕಾರಣಗಳಿಗೆ ಸಹಜವಾಗಿ ಗೊಂದಲ ಅನುಭವಿಸುವ ಮಕ್ಕಳಿಗೆ ಸಹಿಸಲಸಾಧ್ಯವಾದ ಒತ್ತಡದ ಜೊತೆಗೆ ಇಂಥ ಅಪಸವ್ಯಗಳೂ ಜೊತೆಗೂಡಿದರೆ ಬದುಕೇ ಬೇಡವೆನಿಸುವದು ಸಹಜ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಬಿಟ್ಟು ಇತರ ಯಾವದೇ ವಿಷಯಗಳ ಕುರಿತು ಕಾಳಜಿ ವಹಿಸುವ ಅಧಿಕೃತ ವ್ಯವಸ್ಥೆ ಇರುವದಿಲ್ಲ.
ಮಾನಸಿಕ ಮತ್ತು ದೈಹಿಕ ಆರೋಗ್ಯ, ಒತ್ತಡ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಿ ಪರಿಹಾರ ನೀಡುವ ಹಿರಿತನದ ಮಾರ್ಗದರ್ಶನದ ಅತೀವ ಕೊರತೆಯನ್ನು ಹಾಸ್ಟೆಲ್ ಜೀವನದಲ್ಲಿ ಮಕ್ಕಳು ಅನುಭವಿಸುತ್ತಾರೆ. ವೈಫಲ್ಯಗಳನ್ನು ಸಹಜವಾಗಿ ಸ್ವೀಕರಿಸುವ ಮಾರ್ಗವೇ ತಿಳಿದಿರುವದಿಲ್ಲ. ತಮ್ಮ ಸಾಧನೆಗಳನ್ನು ಮಾತ್ರ ಕೇಳಲು ಪಾಲಕರು ಮತ್ತು ಸಮಾಜ ಉತ್ಸುಕವಾಗಿರುತ್ತದೆಯೇ ಹೊರತು ತಮ್ಮ ವೈಫಲ್ಯಗಳಿಗೆ ಅವರು ಸ್ಪಂದಿಸುವದಿಲ್ಲ ಎಂಬುದು ಮಕ್ಕಳ ಭಾವನೆಯಾಗಿರುತ್ತದೆ.
ಮನೆಯಲ್ಲೂ ಒಬ್ಬರೋ, ಇಬ್ಬರೋ ಮಕ್ಕಳು. ಹಾಸ್ಟೆಲ್‌ನಲ್ಲೂ ಒಬ್ಬರೇ ಇರುವ ರೂಂ. ಇದರಿಂದಾಗಿ ಭಾವನೆಗಳನ್ನು, ನೋವನ್ನು ಹಂಚಿಕೊಳ್ಳುವ, ಇತರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಅಥವಾ ಇತರರ ನಡವಳಿಕೆಯಿಂದ ಕಲಿಯುವ ಅವಕಾಶವನ್ನೇ ಕಳೆದುಕೊಳ್ಳು ತ್ತಾರೆ. ಐಐಟಿಯಂಥ ಶಿಕ್ಷಣ ಸಂಸ್ಥೆಯಲ್ಲೇ ಶಿಕ್ಷಣ ಪಡೆದು ಮಕ್ಕಳು ಕೋಟಿಗಟ್ಟಲೆ ಪ್ಯಾಕೇಜ್ ಪಡೆಯಬೇಕು ಎಂಬ ದುರಾಸೆ ಮಕ್ಕಳ ಮೇಲೆ ಎಂಥ ಒತ್ತಡವನ್ನುಂಟುಮಾಡುತ್ತದೆ ಎಂಬ ಅರಿವೇ ಪಾಲಕರಿಗೆ ಇರುವದಿಲ್ಲ. ಅದರಲ್ಲೂ ಕಾನೂನುಬದ್ಧವಾಗಿ ಸಡಿಲ ನೀತಿಯ ಆಧಾರದಲ್ಲಿ ಆಯ್ಕೆಯಾಗಿ ಬಂದ ಕೆಲವರಿಗೆ ಒಮ್ಮೆಲೇ ಎಲ್ಲರ ಜೊತೆ ಸಮಾನವಾಗಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾದಾಗ ತಾವು ನಿರೀಕ್ಷಿಸಿರದ ಆ ಒತ್ತಡ ಸಹಿಸಲಸಾಧ್ಯವಾಗಬಹುದು.
ತಮ್ಮ ಸಂಸ್ಥೆಯ ನಿಯಮ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಬಾಧ್ಯತೆ ಹೊಂದಿರುವ ಶಿಕ್ಷಕರು ಸಹಜವಾಗಿ ಎಲ್ಲರಿಂದಲೂ ಒಂದೇ ಮಟ್ಟದ ಪರಿಶ್ರಮ ಮತ್ತು ಸಾಧನೆಯನ್ನು ಬಯಸುತ್ತಾರೆ. ಅಲ್ಲಿನ ಶೈಕ್ಷಣಿಕ ಮೌಲ್ಯಮಾಪನ ಕೂಡಾ ಅದೇ ರೀತಿಯಿರುತ್ತದೆ. ಕಳೆದ ಐದು ವರ್ಷಗಳಲ್ಲಿ ಐಐಟಿಗಳಲ್ಲಿ ಓದುತ್ತಿದ್ದ 45 ವಿದ್ಯಾರ್ಥಿಗಳ ಆತ್ಮಹತ್ಯೆಯ ಅಂಕಿ ಆಂಶಗಳು ಸಮಸ್ಯೆಯ ತೀವ್ರತೆಯನ್ನು ವಿವರಿಸುತ್ತವೆ.
ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಐಐಟಿ- ಮುಂಬೈನ ವಿದ್ಯಾರ್ಥಿ, ಸಾಹಿಲ್ ವಾಕೋಡೆ ಅವರ ಆತ್ಮಹತ್ಯೆಯ ಕಥೆ ಕೂಡಾ ಇಂಥದ್ದೇ ಸಂಕೀರ್ಣ ವ್ಯವಸ್ಥೆಯ ನೇರ ಪರಿಣಾಮವೆನಿಸುತ್ತದೆ. ಐಐಟಿಯಂಥ ಸಂಸ್ಥೆ ನಿರೀಕ್ಷಿಸುವ ಮಟ್ಟವನ್ನು ತನ್ನಿಂದ ತಲುಪಲಾಗುವದಿಲ್ಲ ಎಂಬ ಸತ್ಯದ ಅರಿವಾದ ಅವರು, ಪಾಲಕರು ತನ್ನಿಂದ ನಿರೀಕ್ಷಿಸುವ ಸಾಧನೆಯನ್ನು ನಿಜವಾಗಿಸಲು ಪರೀಕ್ಷೆಯಲ್ಲಿ ಮೊಬೈಲ್ ಬಳಕೆಯಂಥ ದುಸ್ಸಾಹಸಕ್ಕೆ ಮುಂದಾಗಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾದ ಪರೀಕ್ಷಾ ಹಾಲ್‌ನ ಸಿಸಿಟಿವಿ ದಾಖಲೆಯಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗೆ ಕಳಂಕಿತನಾದದ್ದನ್ನು ತನ್ನ ಸಹಪಾಠಿಗಳು, ಪಾಲಕರು ಸೇರಿದಂತೆ ಸಮಾಜ ಮೆಚ್ಚುವದಿಲ್ಲ ಎಂಬುದು ಅವರಿಗೆ ಅರಿವಾಗಿದೆ. ಈ ಕಾರಣಗಳಿಗೇ ಅವರು ಅಂಥ ಅಂತಿಮ ನಿರ್ಧಾರಕ್ಕೆ ಬಂದು ಜೀವ ಕಳೆದುಕೊಂಡದ್ದಿರಬೇಕು. ಒಂದು ವೇಳೆ ಇದೇ ಸಿಸಿಟಿವಿ ದೃಶ್ಯಾವಳಿ ಪ್ರಸಾರವಾಗುವಾಗ ಅವರು ಬದುಕಿರುತ್ತಿದ್ದರೆ ಅವರ ಭಾವನೆಗಳು ಹೇಗಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ.
ಸೂರ್ಯನಾರಾಯಣ ದೂಲ್ಲಾ ಎಂಬ ಐಐಟಿ ಪ್ರೊಫೆಸರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಅದಕ್ಕಿಂತ ಮುಖ್ಯವಾಗಿ ಜಾತ್ಯಾಧಾರಿತ ತಾರತಮ್ಯಗಳ ದೂರನ್ನು ನೀಡಲಾಗಿದೆ. ಸದರಿ ವಿದ್ಯಾರ್ಥಿ ಮಾಡಿದ್ದರೆನ್ನಲಾದ ಪರೀಕ್ಷಾ ಅಕ್ರಮದ ಜೊತೆಗೆ ಪ್ರೊಫೆಸರ್ ವಿರುದ್ಧ ದಾಖಲಿಸಲಾದ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಪ್ರಕರಣ ಮತ್ತು ಆತ್ಮಹತ್ಯಾ ಪ್ರಚೋದನೆಗಳ ಕುರಿತಾದ ಎಫ್ಐಆರ್, ಈ ಎಲ್ಲವೂ ಮುಂಬೈ ಕ್ರೈಮ್ ಬ್ರಾಂಚ್ ಪೋಲೀಸರಿಂದ ತನಿಖೆಯಾಗುತ್ತಿದೆ.
ಪ್ರೊಫೆಸರ್ ಸೂರ್ಯನಾರಾಯಣ ಅವರನ್ನು ಅಮಾನತು ಗೊಳಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿರುವ ದೂರುದಾರರು ಹಾಗೆ ಮಾಡದಿದ್ದರೆ ಆಮರಣಾಂತ ಉಪವಾಸ ಕೈಗೊಳ್ಳುವದಾಗಿ ಹೇಳಿಕೆ ನೀಡಿದ್ದಾರೆ. ಹಲವು ರಾಜಕಾರಣಿಗಳು ರಂಗ ಪ್ರವೇಶ ಮಾಡಿದ್ದಾರೆ. ಸಿಜೆಪಿಯ ಅಭಿಜಿತ್ ದೀಪ್ಕೆ ಹೇಳಿಕೆ ನೀಡಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿದ್ದು ಕೇವಲ ತಪ್ಪೇ ಹೊರತು ಅದು ಪರೀಕ್ಷಾ ಅಕ್ರಮವಲ್ಲ.
ಈ ವಿಷಯವನ್ನು ತಪ್ಪಾಗಿ ನಿರ್ವಹಿಸಿದ ಪ್ರೊಫೆಸರ್ ಮತ್ತು ಐಐಟಿ ನಿರ್ದೇಶಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬೇಕು ಮತ್ತು ಮೃತ ವಿದಾರ್ಥಿಯ ಪಾಲಕರಿಗೆ 3 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಮುಂಬೈ ಯುವ ಕಾಂಗ್ರೆಸ್ ಘಟಕ ಪ್ರೊಫೆಸರ್ ಅವರ ರಾಜೀನಾಮೆಗೆ ಆಗ್ರಹಿಸಿದೆ. ತಮ್ಮ ಮಗನ ಘೋರ ಸಾವಿನ ವಾರ್ತೆಯಿಂದ ಕಂಗೆಟ್ಟ ಪಾಲಕರು ಆ ದುಃಖದಲ್ಲಿ ಉದ್ವೇಗದಿಂದ ಆಡುವ ಮಾತುಗಳು ಕ್ಷಮ್ಯವೆನಿಸಬಹುದು. ಮಗನನ್ನು ಕಳೆದುಕೊಂಡ ಅವರ ಮನಸ್ಥಿತಿಯೇ ಹಾಗಿರುತ್ತದೆ.
ಆದರೆ ಅವರ ಹಿತೈಷಿಗಳು, ಬೆಂಬಲಿಗರು ಮತ್ತು ಆ ಸಾವಿನಲ್ಲಿಯೂ ರಾಜಕಾರಣ ಮಾಡುವವರು ವಿವೇಚನೆಯಿಂದ ವರ್ತಿಸಬೇಕಾಗಿತ್ತು. ಪರೀಕ್ಷಾ ಅಕ್ರಮದ ಕಾರಣಕ್ಕೆ ಡಿಬಾರ್ ಮಾಡುವದು ಸಂಬಂಧ ಪಟ್ಟ ವಿದ್ಯಾರ್ಥಿಗೆ ನೀಡುವ ಶಿಕ್ಷೆ ಎನ್ನುವದಕ್ಕಿಂತ ಪರಿಶ್ರಮ ಪಟ್ಟು ಓದಿದವರ ಹಿತ ಕಾಯಲು ಕೂಡಾ ಅವಶ್ಯಕ. ನಕಲು ಮಾಡಿ ಉತ್ತರ ಬರೆದ ವಿದ್ಯಾರ್ಥಿಗೆ ಕಷ್ಟಪಟ್ಟು ಓದಿದವನಿ ಗಿಂತ ಹೆಚ್ಚಿನ ಅಂಕ ದೊರೆತರೆ ಪರಿಶ್ರಮ ಪಟ್ಟು ಓದುವದು ಅರ್ಥಹೀನ ಎಂಬ ತಪ್ಪು ಸಂದೇಶಕ್ಕೆ ಕಾರಣವಾಗುತ್ತದೆ.
ಆತ್ಮಹತ್ಯೆಗೆ ಪ್ರಚೋದನೆ: ಭಾರತೀಯ ನ್ಯಾಯ ಸಂಹಿತೆಯ 108 ಮತ್ತು 45ನೇ ಕಲಮುಗಳ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ ಒಂದು ಗಂಭೀರ ಅಪರಾಧ. ಯಾವದೇ ವ್ಯಕ್ತಿ ಆತ್ಮಹತ್ಯೆ ಕೈಕೊಂಡರೆ ಅಂತಹ ಆತ್ಮಹತ್ಯೆಯನ್ನು ಪ್ರಚೋದಿಸುವವನಿಗೆ 10 ವರ್ಷದ ವರೆಗಿನ ಸಾದಾ ಅಥವಾ ಕಠಿಣ ಜೈಲುಶಿಕ್ಷೆ ಮತ್ತು ದಂಡ ಇವೆರಡನ್ನೂ ವಿಧಿಸಬಹುದು.
ಆತ್ಮಹತ್ಯೆಯ ಪ್ರಚೋದನೆಯ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಅನೇಕ ಆದೇಶಗಳು ಸ್ಪಷ್ಟ ವಾಗಿವೆ. ಇತ್ತೀಚಿನ ಅರ್ನಬ್ ಗೋಸ್ವಾಮಿ ಮತ್ತು ಇತರರು ವರ್ಸಸ್ ಮಹಾರಾಷ್ಟ್ರ ಸರಕಾರ ಪ್ರಕರಣದಲ್ಲಿ ‘ಆತ್ಮಹತ್ಯೆಗೆ ಪ್ರಚೋದನೆಯ ಆರೋಪವನ್ನು ಪರಿಗಣಿಸುವಾಗ ಆರೋಪಿಯು ಆತ್ಮಹತ್ಯೆ ಕೈಗೊಂಡ ವ್ಯಕ್ತಿಗೆ ಅಂಥ ಕ್ರಿಯೆ ಕೈಗೊಳ್ಳಲು ಸಕ್ರಿಯವಾಗಿ ಪ್ರಚೋದಿಸಿರಬೇಕಾಗುತ್ತದೆ. ಮತ್ತು ಅಂಥ ಪ್ರಚೋದನೆ ಯ ಹಿಂದೆ ಆತ್ಮಹತ್ಯೆಗೆ ಆ ವ್ಯಕ್ತಿಯನ್ನು ದೂಡುವ ಮಾನಸಿಕ ಇಚ್ಛೆ ಇರಬೇಕಾಗುತ್ತದೆ. ಅಥವಾ ನಿರಂತರವಾಗಿ ಆತನಿಗೆ ನೀಡಲಾದ ಮಾನಸಿಕ ಹಿಂಸೆ ಆಥವಾ ದಬ್ಬಾಳಿಕೆ ಆತನಿಗೆ ಆತ್ಮಹತ್ಯೆಯ ವಿನಃ ಅನ್ಯಮಾರ್ಗವೇ ಇಲ್ಲದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರಬೇಕಾಗುತ್ತದೆ.’
‘ತಮ್ಮ ಕರ್ತವ್ಯ ನಿರ್ವಹಣೆ ಕುರಿತಾಗಿ ಕೈಗೊಳ್ಳಲಾಗುವ ಕ್ರಮಗಳನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗುವದಿಲ್ಲ’ (ಶೈಲಾ ಸಿಂಗ್ ವರ್ಸಸ್ ಛತ್ತೀಸಗಡ ಸರಕಾರ). ಸುಪ್ರೀಂ ಕೋರ್ಟಿನ ಈ ಆದೇಶಗಳ ಹಿನ್ನೆಲೆಯಲ್ಲಿ ಪರೀಕ್ಷಾ ಹಾಲ್‌ನಿಂದ ವಿದ್ಯಾರ್ಥಿಯನ್ನು ಹೊರಕ್ಕೆ ಕಳಿಸಿದ ಕೇವಲ ಒಂದು ಘಟನೆಯಿಂದ ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದರೆಂಬ ವಾದ ಸಮರ್ಥನೀಯ ವಲ್ಲ.
ಇನ್ನು ಜಾತ್ಯಾಧಾರಿತ ತಾರತಮ್ಯದ ಆರೋಪದ ಕುರಿತು ತನಿಖೆ ಮುಗಿಯದ ಹೊರತು ಏನನ್ನೂ ನಿರ್ಣಯಿಸುವದು ಸರಿಯಲ್ಲ. ಪರೀಕ್ಷಾ ಅಕ್ರಮದ ಘಟನೆಯ ಸಮಯದಲ್ಲಿ ಅಥವಾ ಅದರ ಮೊದಲು ದೂಲ್ಲಾ ಅವರು ಮಾಡಿದ್ದರೆನ್ನಲಾದ ಜಾತಿ ನಿಂದನೆಗೆ ಸೂಕ್ತ ಸಾಕ್ಷ್ಯಗಳು ಬೇಕಾಗುತ್ತದೆ. ಮುಖ್ಯ ಸಾಕ್ಷಿಯಾದ ಸಾಹಿಲ್ ಈಗ ಇಲ್ಲ. ಇತರ ವಿದಾರ್ಥಿಗಳ ಹೇಳಿಕೆ ಈ ಆರೋಪವನ್ನು ಪುಷ್ಟೀಕರಿಸುತ್ತಿಲ್ಲ.
ಪ್ರೊಫೆಸರ್ ದೂಲ್ಲಾ ಅವರನ್ನು ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ ಎಂಬ ವರದಿಗಳಿವೆ. ಒಂದು ವೇಳೆ ತನಿಖೆಯ ನಂತರ ಅಂಥ ಆರೋಪ ಸುಳ್ಳೆಂದು ಸಾಬೀತಾದರೆ ಒಬ್ಬ ಪ್ರತಿಭಾನ್ವಿತ ಪ್ರೊಫೆಸರ್‌ಗೆ ಅನಗತ್ಯ ಕಳಂಕ ಅಂಟಿಸಿ ಪ್ರತಿಭಟನೆ, ಅಪಪ್ರಚಾರ ಮತ್ತು ರಾಜಕೀಯ ಮಾಡಿದ್ದನ್ನು ಸರಿಪಡಿಸಲಾಗುವದಿಲ್ಲ.
ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಪರಿಣಾಮವಾಗಿ ಪೊಲೀಸ್ ತನಿಖೆ, ನ್ಯಾಯಾಲಯ ದ ವಿಚಾರಣೆಯಂಥ ಅನಗತ್ಯ ಕಿರುಕುಳ, ಮಾನಸಿಕ ಹಿಂಸೆಯ ಜೊತೆಗೆ ದೇಶಾದ್ಯಂತ ಮಾಧ್ಯಮ ಗಳಲ್ಲಿನ ಚರ್ಚೆ, ನಿಂದೆ, ಅಪಮಾನಗಳನ್ನು ಎದುರಿಸಬೇಕಾದ ಪರಿಸ್ಥಿತಿಗೆ ಮಿಥ್ಯಾರೋಪದ ಮೂಲಕ ಅವರನ್ನು ನೂಕಿದಂತಾಗುತ್ತದೆ.
ಇದು ದೇಶಾದ್ಯಂತ ಶಿಕ್ಷಕರು ಮತ್ತು ಇತರ ನೌಕರರು ತಮ್ಮ ಕರ್ತವ್ಯ ನಿರ್ವಹಿಸಲು ಹೆದರುವ ಸನ್ನಿವೇಶವನ್ನು ಸೃಷ್ಟಿ ಮಾಡಬಹುದು. ಜಾತ್ಯಾಧಾರಿತ ದೌರ್ಜನ್ಯ ಅಥವಾ ತಾರತಮ್ಯ ಖಂಡನೀಯ ಮತ್ತು ಅಂಥ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ಆಗಲೇ ಬೇಕು. ಆದರೆ ಈ ಕಾಯಿದೆಯ ದುರುಪಯೋಗದ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಸುಭಾಸ್ ಮಹಾಜನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿದ ಆದೇಶವನ್ನು ಮೋದಿ ಸರಕಾರ ತಿದ್ದುಪಡಿ ಕಾಯಿದೆಯ ಮೂಲಕ ನಿಷ್ಕ್ರಿಯಗೊಳಿಸಿತು. ಯುಜಿಸಿ ನಿಯಮಾವಳಿಗಳ ತಿದ್ದುಪಡಿ ಗಳು ಕೂಡಾ ತೀವ್ರ ವಿವಾದಕ್ಕೆ ಎಡೆಮಾಡಿವೆ. ಇದೀಗ ತೀವ್ರವಾಗುತ್ತಿರುವ ಮೀಸಲಾತಿ ವಿರೋಧಿ ಆಂದೋಲನ ವನ್ನು ಕೂಡಾ ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳಿವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಕೆಲ ವಿಡಿಯೋಗಳಲ್ಲಿ ಮೋದಿಯವರಿಗೆ ಒಬಿಸಿ ಮತ್ತು ಸಾಮಾನ್ಯವರ್ಗದ ಜನರ ಮತಗಳು ಬೇಡವೇ ಎಂದು ಕೇಳಲಾಗುತ್ತಿದೆ. ಪ್ರೊಫೆಸರ್ ಸೂರ್ಯನಾರಾಯಣ ಪ್ರಕರಣದಿಂದ ಬೇಸತ್ತ ಐಐಟಿ ಮುಂಬೈನ ನಿರ್ದೇಶಕರು ರಾಜೀನಾಮೆಗೆ ಮುಂದಾಗಿದ್ದರು ಎಂಬ ವರದಿಯಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರತಿಭಾ ಪಲಾಯನ ಇನ್ನಷ್ಟು ಹೆಚ್ಚಬಹುದು. ಇದನ್ನು ತಪ್ಪಿಸಲು ಸರಕಾರ, ನ್ಯಾಯವ್ಯವಸ್ಥೆ ಮತ್ತು ಸಮಾಜ ಈ ಮೂವರೂ ಕಾಳಜಿ ವಹಿಸಬೇಕು