ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: ಸದನ ನಡೆಯದಿದ್ದರೆ ವಿರೋಧ ಪಕ್ಷಗಳಿಗೇ ನಷ್ಟ

ಸದನವು ಆರೋಗ್ಯಕರ ಚರ್ಚೆಗೆ, ಜನಹಿತ ಕಾರ್ಯಕ್ಕೆ ವೇದಿಕೆಯಾಗಬೇಕೇ ವಿನಾ, ಗದ್ದಲ-ಗಲಾಟೆ ಗಲ್ಲ. ಜನಪ್ರತಿನಿಧಿಗಳು ತಮ್ಮನ್ನು ಚುನಾಯಿಸಿದ ಮತದಾರರಿಗೆ, ಸಂಸತ್‌ನಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳು ಹಾಗೂ ಗಮನ ಸೆಳೆದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಆದರೆ ಕಲಾಪವೇ ನಡೆಯದಿದ್ದರೆ ಮತದಾರರಿಗೆ ಇವರು ಏನು ಉತ್ತರವನ್ನು ನೀಡಿಯಾರು? ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸದನ ನಡೆಯದಿದ್ದರೆ ವಿರೋಧ ಪಕ್ಷಗಳಿಗೇ ನಷ್ಟ

-

Ashok Nayak Ashok Nayak Sep 1, 2025 11:28 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಸಂಸತ್‌ನ ಈ ಬಾರಿಯ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಗದ್ದಲದ ಕಾರಣ ಕಲಾಪ ವನ್ನು ನಡೆಸಲು ಅಡ್ಡಿಯಾಗಿ, ಆಡಳಿತ ಪಕ್ಷವು ಲೋಕಸಭೆಯಲ್ಲಿ 12 ಮತ್ತು ರಾಜ್ಯಸಭೆಯಲ್ಲಿ 15 ವಿಧೇಯಕಗಳಿಗೆ ಚರ್ಚೆಯಿಲ್ಲದೆ ಅಂಗೀಕಾರವನ್ನು ಪಡೆದುಕೊಂಡಿತು. ಇಷ್ಟಕ್ಕೂ ಸದನ ನಡೆಯಲು ಅಡ್ಡವಾದ ಅಂಥ ಗಂಭೀರ ವಿಷಯವಾದರೂ ಏನು? ಬಿಹಾರದಲ್ಲಿ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯು (ಎಸ್‌ಐಆರ್) ವಿರೋಧ ಪಕ್ಷಗಳ, ಅದರಲ್ಲಿಯೂ ತೃಣಮೂಲ ಕಾಂಗ್ರೆಸ್‌ನ ನಿದ್ರೆಗೆಡಿಸಿಬಿಟ್ಟಿದೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂಬುದು ಇವರ ಹಠವಾಗಿತ್ತು. ಆದರೆ ಆಡಳಿತ ಪಕ್ಷವು, ‘ನಿಯಮಾವಳಿಗಳ ಪ್ರಕಾರ ಚುನಾವಣಾ ಆಯೋಗದ ಕ್ರಮವನ್ನು ಸದನದಲ್ಲಿ ಚರ್ಚಿಸಲು ಸಾಧ್ಯವಿಲ್ಲ; ಕಾರಣ ಉತ್ತರ ನೀಡಬೇಕಾದವರು ಚುನಾವಣಾ ಆಯೋಗದವರು. ಅವರ ಪರವಾಗಿ ಸರಕಾರ ಉತ್ತರ ಕೊಡಲು ಸಾಧ್ಯವಿಲ್ಲ’ ಎಂದು ವಾದಿಸಿತು.

1988ರಲ್ಲಿ, ಅಂದಿನ ಲೋಕಸಭಾಧ್ಯಕ್ಷ ಬಲರಾಮ್ ಜಾಖಡ್ ಅವರು, ‘ಚುನಾವಣಾ ಆಯೋಗವು ಸದನದ ವ್ಯಾಪ್ತಿಗೆ ಬರುವುದಿಲ್ಲ’ ಎಂದು ತೀರ್ಪು ನೀಡಿದ್ದರು. ಅದನ್ನು ಉಲ್ಲೇಖಿಸಿ ಉಭಯ ಸದನದ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನಿರಾಕರಿಸಿದರು. ಆಗ ಶುರುವಾಯ್ತು ನೋಡಿ ಇವರಿಬ್ಬರ ನಡುವಿನ ಹಗ್ಗಜಗ್ಗಾಟ.

‘ನೀ ಕೊಡೆ, ನಾ ಬಿಡೆ’ ಎಂಬಂತೆ ಇಬ್ಬರೂ ತಮ್ಮ ತಮ್ಮ ನಿಲುವಿನಿಂದ ಅಲ್ಲಾಡಲಿಲ್ಲ. ಜುಲೈ 21ರಿಂದ ಆಗಸ್ಟ್ 21ರವರೆಗೆ ಉಭಯ ಸದನಗಳ ಕಲಾಪಗಳು ನಡೆದವು; ಲೋಕಸಭೆಯ ಶೇ.29 ಮತ್ತು ರಾಜ್ಯಸಭೆಯ ಶೇ.34ರಷ್ಟು ಸಮಯದವರೆಗೆ ಮಾತ್ರ ಕಲಾಪ ನಡೆಯಿತು. ಮೀಸಲಿದ್ದ 120 ಗಂಟೆಯ ಅವಽಯಲ್ಲಿ ಕೇವಲ 37 ಗಂಟೆಗಳಷ್ಟೇ ಸದನಗಳು ಕಾರ್ಯನಿರ್ವಹಿಸಿದ್ದು. ಸದನವನ್ನು ನಡೆಸಲು ಸರಕಾರವು ಒಂದು ನಿಮಿಷಕ್ಕೆ 2.5 ಲಕ್ಷ ರುಪಾಯಿಗಳನ್ನು ವೆಚ್ಚ ಮಾಡುತ್ತದೆ; ಆದರೆ ಸರಿಯಾಗಿ ಕಲಾಪವೇ ನಡೆಯದ ಕಾರಣ ಜನರ ಈ ತೆರಿಗೆ ಹಣವು ನೀರಿನಲ್ಲಿ ಹೋಮಮಾಡಿ‌ ದಂತಾಯಿತು.

ಇದನ್ನೂ ಓದಿ:Prakash Shesharaghavachar Column: ಈ ಹನ್ನೊಂದು ವರ್ಷದಲ್ಲಿ ನೀವು ಸಾಧಿಸಿದ್ದೇನು ಸ್ವಾಮೀ ?

ಇದು ವಿಷಾದದ ಸಂಗತಿ. ಅಧಿವೇಶನದಲ್ಲಿ ಸದಸ್ಯರು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ರಾಜ್ಯಕ್ಕೆ ಮತ್ತು ತಮ್ಮ ಮತಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆಯುತ್ತಾರೆ. ಚರ್ಚೆಯ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇದು ಉತ್ತಮ ಅವಕಾಶವೂ ಹೌದು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು; ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಗೆ ತಡೆ ನೀಡಲು ನ್ಯಾಯಾಲಯ ನಿರಾ ಕರಿಸಿತು. ತಮ್ಮ ಅರ್ಜಿಗೆ ನ್ಯಾಯಾಲಯದಲ್ಲಿ ಮಾನ್ಯತೆ ದೊರೆಯದಾದಾಗ ವಿರೋಧ ಪಕ್ಷಗಳು ಹಠವನ್ನು ತೊರೆದು ಕಲಾಪದಲ್ಲಿ ಭಾಗವಹಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಸದನದಲ್ಲಿ ಚರ್ಚೆಗಾಗಿ ವಿಪಕ್ಷಗಳು ಹಠಕ್ಕೆ ಬಿದ್ದಿದ್ದು ನೋಡಿದರೆ, ಸದನವು ನಡೆಯಲು ಅವಕಾಶ ನೀಡಬಾರದು ಎಂಬ ತೀರ್ಮಾನಕ್ಕೆ ಅವು ಬಂದಿದ್ದವು ಎನಿಸುತ್ತದೆ.

2009ರ, ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ, ಒಂದಲ್ಲಾ ಒಂದು ಹಗರಣಗಳು ಬಯಲಾಗುತ್ತ ಸದನದಲ್ಲಿ ಕಲಾಪ ನಡೆಯುವುದೇ ದುಸ್ತರವಾಗಿತ್ತು. ಆ ಸಂದರ್ಭದಲ್ಲಿ ಅರುಣ್ ಜೇಟ್ಲಿಯವರು, ‘ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ವಿರೋಧ ಪಕ್ಷಗಳ ಹಕ್ಕು’ ಎಂದು ಹೇಳಿಕೆ ನೀಡಿದ್ದರು. ಆದರೆ ಕಾಂಗ್ರೆಸ್ಸಿಗರು ತಾವು ಕಲಾಪಕ್ಕೆ ಅಡ್ಡಿ ಮಾಡಿದಾಗಲೆಲ್ಲಾ, ಆ ಹೇಳಿಕೆಯನ್ನು ನೆನಪಿಸಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಅವರ ನಿಲುವು ಹೇಗೆ ಸಮರ್ಥನೀಯ ವಾಗಿರಲಿಲ್ಲವೋ ಹಾಗೆಯೇ ಈಗಿನ ಬೆಳವಣಿಗೆಯೂ ಸಮರ್ಥನೀಯವಲ್ಲ.

ಸದನವು ಆರೋಗ್ಯಕರ ಚರ್ಚೆಗೆ, ಜನಹಿತ ಕಾರ್ಯಕ್ಕೆ ವೇದಿಕೆಯಾಗಬೇಕೇ ವಿನಾ, ಗದ್ದಲ-ಗಲಾಟೆ ಗಲ್ಲ. ಜನಪ್ರತಿನಿಧಿಗಳು ತಮ್ಮನ್ನು ಚುನಾಯಿಸಿದ ಮತದಾರರಿಗೆ, ಸಂಸತ್‌ನಲ್ಲಿ ತಾವು ಪ್ರಸ್ತಾಪಿಸಿದ ವಿಷಯಗಳು ಹಾಗೂ ಗಮನ ಸೆಳೆದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಆದರೆ ಕಲಾಪವೇ ನಡೆಯದಿದ್ದರೆ ಮತದಾರರಿಗೆ ಇವರು ಏನು ಉತ್ತರವನ್ನು ನೀಡಿಯಾರು? ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ಸಂವಿಧಾನವನ್ನು ರಚಿಸಿದವರಿಗೆ, ಇಡೀ ಅಧಿವೇಶನವನ್ನೇ ಆಪೋಶನ ತೆಗೆದುಕೊಳ್ಳುವ ವಿಪಕ್ಷಗಳ ಇಂಥ ಮಾನಸಿಕತೆ ಮತ್ತು ‘ರಾಜಕೀಯ ಅಜೆಂಡಾ’ ಬಗ್ಗೆ ಊಹೆ ಇರಲಿಲ್ಲವೆನಿಸುತ್ತದೆ. ಇದ್ದಿದ್ದರೆ ಪ್ರಾಯಶಃ ಈ ಪ್ರವೃತ್ತಿಗೂ ಕಡಿವಾಣ ಹಾಕಬಲ್ಲ ಸೂಕ್ತ ನಿಯಮಾವಳಿಗಳನ್ನು ಅವರು ಸಂಸದೀಯ ವ್ಯವಸ್ಥೆಯಲ್ಲಿ ಅಳವಡಿಸಿರುತ್ತಿದ್ದರು.

ಅಮೆರಿಕ ಮೂಲದ ಹಿಂಡನ್‌ಬರ್ಗ್ ಸಂಶೋಧನಾ ಗುಂಪು 2023ರಲ್ಲಿ ಮೊದಲ ಬಾರಿಗೆ, ಸಂಸತ್ ಅಧಿವೇಶನಕ್ಕೂ ಮುನ್ನ, ‘ಅದಾನಿ ಸಮೂಹವು ಷೇರು ವ್ಯವಹಾರ ಮತ್ತು ಲೆಕ್ಕಪತ್ರದಲ್ಲಿ ವಂಚನೆ ಮಾಡಿದೆ’ ಎಂಬ ವರದಿಯನ್ನು ಬಿಡುಗಡೆ ಮಾಡಿತು. ತದನಂತರ, ಪ್ರತಿ ಸಂಸತ್ ಅಧಿವೇಶನಕ್ಕೂ ಮುನ್ನ ಇಂಥ ಏನಾದರೂ ಹೊಸ ವರದಿ ಬಿಡುಗಡೆ ಮಾಡುವುದು ಅದರ ಪರಿಪಾಠವಾಗಿತ್ತು. ಇದನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿಯವರು ಸದನದಲ್ಲಿ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಮಾಡುವುದು ಸಾಮಾನ್ಯವಾಗಿತ್ತು.

ಅಂತಿಮವಾಗಿ, ಸದರಿ ಹಿಂಡನ್ ಬರ್ಗ್ ಸಂಸ್ಥೆಯೇ ತನ್ನ ಬಾಗಿಲು ಹಾಕಿಕೊಂಡು ಹೊಯಿತು. ಆದರೆ, ಈ ಸಂಸ್ಥೆಯ ವರದಿಯನ್ನಾಧರಿಸಿ ಗದ್ದಲವಾಗಿದ್ದಕ್ಕೆ ವ್ಯರ್ಥವಾದ ಕಲಾಪದ ಸಮಯವು ಮರಳಿ ಬರುವುದೇ?! ರಫೆಲ್ ಯುದ್ಧವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಪೆಗಾಸಿಸ್ ಸ್ಪೈವೇರ್ ಕಂಪನಿಯು ವಿಪಕ್ಷ ನಾಯಕರ ಮೊಬೈಲ್ ಸಂವಹನಗಳ ಮೇಲೆ ಕಣ್ಗಾವಲು ನಡೆಸು ತ್ತಿದೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ಹಲವು ಬಾರಿ ಅಡ್ಡಿಪಡಿಸ ಲಾಯಿತು. ಈ ಆರೋಪಗಳಲ್ಲಿ ಯಾವುದೇ ತಥ್ಯವಿಲ್ಲವೆಂದು ಸರ್ವೋಚ್ಚ ನ್ಯಾಯಾ ಲಯವೇನೋ ತೀರ್ಪು ನೀಡಿತು. ಆದರೆ ಅಷ್ಟು ಹೊತ್ತಿಗಾಗಲೇ ಈ ವಿಚಾರವಾಗಿ ಹಲವಾರು ಗಂಟೆಗಳ ಕಲಾಪ ಆಹುತಿಯಾಗಿತ್ತು.

ಮತದಾರರ ಪಟ್ಟಿಯ ಪರಿಷ್ಕರಣೆಯ ವಿಷಯದಲ್ಲಿ ಅತಿ ಹೆಚ್ಚು ಆತಂಕದಲ್ಲಿ ಇರುವುದು ತೃಣಮೂಲ ಕಾಂಗ್ರೆಸ್. ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸೇರ್ಪಡೆ ಮಾಡಿರುವುದು ಗುಟ್ಟೇನಲ್ಲ. ಈಗ ಮತದಾರರ ಪಟ್ಟಿಯ ಪರಿಷ್ಕರಣೆಯ ವೇಳೆ ಸೂಕ್ತ ದಾಖಲೆ ಕೇಳಿದರೆ, ಲಕ್ಷಾಂತರ ಅಕ್ರಮ ಮತದಾರರು ಸಿಕ್ಕಿಬೀಳುವುದು ಖಾತ್ರಿ.

ಹೀಗಾಗಿ ತೃಣಮೂಲ ಕಾಂಗ್ರೆಸ್ಸಿಗರು ಸದರಿ ಪರಿಷ್ಕರಣೆಯನ್ನು ಅತ್ಯುಗ್ರವಾಗಿ ವಿರೋಧಿಸಿದರು. ಚುನಾವಣಾ ಆಯೋಗವು ಬಿಹಾರದ ಪರಿಷ್ಕೃತ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ ೧ ರೊಳಗೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡಿದ್ದರೂ, ‘ಮತಗಳ್ಳತನ ಆಗುತ್ತಿದೆ’ ಅಂತ ಇಂದು ಬೊಬ್ಬೆ ಹೊಡೆಯುತ್ತಿರುವವರು ಒಂದೇ ಒಂದು ಆಕ್ಷೇಪವನ್ನೂ ಸಲ್ಲಿಸಿಲ್ಲ.

ಇಂಥವರು ಸದನದ ಸಮಯವನ್ನು ಹಾಳುಮಾಡುವ ಬದಲು, ಮತದಾರರ ಪಟ್ಟಿಯ ದೋಷ ಗಳನ್ನು ಹೊರಗೆ ಎಳೆಯಬೇಕಿತ್ತಲ್ಲವೇ? ಅದನ್ನು ಸಾಕ್ಷಿ ಸಮೇತ ತೋರಿಸಿದ್ದಿದ್ದರೆ ಅವರ ಆರೋಪಕ್ಕೆ ಇನ್ನಷ್ಟು ಬಲ ಬರುತ್ತಿತ್ತು. ಆದರೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷದವರು ಆಕ್ಷೇಪ ವನ್ನೇ ಸಲ್ಲಿಸದೆ ಕೇವಲ ರಾಜಕೀಯಕ್ಕಾಗಿ ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. ಈ ವರ್ತನೆಯು ಬಿಜೆಪಿಯ ವಾದಕ್ಕೆ ಪುಷ್ಟಿ ನೀಡಿದೆ.

ಸಂಸತ್ತು ನಡೆಯದಿದ್ದರೆ ಆಡಳಿತ ಪಕ್ಷವು ಕಳೆದುಕೊಳ್ಳುವಂಥದ್ದು ಏನೂ ಇಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ ರಿಜಿಜು ಸ್ಪಷ್ಟವಾಗಿ ಹೇಳಿದ್ದಾರೆ. ಏಕೆಂದರೆ, ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸುವ ಗೋಜಿರುವುದಿಲ್ಲ, ಆಡಳಿತ ವ್ಯವಸ್ಥೆಯಲ್ಲಿನ ಲೋಪ/ನ್ಯೂನತೆ/ಕೊರತೆ ಹೊರಬರುತ್ತದೆ ಎಂಬ ಮುಜುಗರ ವಿರುವುದಿಲ್ಲ! ಸದನವೇ ನಡೆಯದಿದ್ದರೆ ಅಧಿಕಾರಿ ಶಾಹಿಗಳು ಒತ್ತಡದಿಂದ/ಮುಜುಗರದಿಂದ ಬಚಾವ್ ಆಗುತ್ತಾರೆ.

ಸರಕಾರಕ್ಕೂ ಯಾರಿಗೂ ಉತ್ತರಿಸುವ ತಾಪತ್ರಯವೇ ಇಲ್ಲದೆ, ‘ಮಲಗುವವನಿಗೆ ಹಾಸಿಗೆ ಹಾಸಿ ಕೊಟ್ಟಂತೆ’ ಆಗುತ್ತದೆ. ಹಿಂದೆಲ್ಲಾ ಸದನದಲ್ಲಿ ಗದ್ದಲವಾದರೆ ಕಲಾಪವನ್ನು ನಡೆಸದೆ ಮುಂದೂಡ ಲಾಗುತ್ತಿತ್ತು; ಆದರೆ ಈ ಗದ್ದಲದ ಹಿಂದೆ ಆಡಳಿತವನ್ನು ನಿಷ್ಕ್ರಿಯ ಮಾಡುವ ಹುನ್ನಾರವೇ ಹೆಚ್ಚಾದಾಗ ವರಸೆಯು ಬದಲಾಯಿತು. ಈಗ ಗದ್ದಲ-ಗಲಾಟೆಗಳ ನಡುವೆಯೇ ಪೂರ್ವನಿರ್ಧಾರಿತ ವಿಧೇಯಕಗಳಿಗೆ ಅಂಗೀಕಾರ ಪಡೆಯುವ ಪರಿಪಾಠ ಆರಂಭವಾಗಿದೆ.

ಅಂಥ ಕೆಲವು ಹೀಗಿವೆ ನೋಡಿ: ವಿಶೇಷವಾಗಿ, ಕ್ರೀಡಾ ಆಡಳಿತ ವಿಧೇಯಕ, 2025; ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ವಿಧೇಯಕ, 2025; ಆದಾಯ ತೆರಿಗೆ ವಿಧೇಯಕ, 2025; ತೆರಿಗೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025. ಈ ವಿಧೇಯಕಗಳು ಜನಜೀವನದಲ್ಲಿ ಅನೇಕ ಬದಲಾವಣೆಯನ್ನು ತರುವಷ್ಟರ ಮಟ್ಟಿಗಿನ ಮಹತ್ವ ಉಳ್ಳಂಥವು. ವಿಪಕ್ಷಗಳು ಈ ವಿಧೇಯಕಗಳ ಕುರಿತಾದ ಸದನದ ಚರ್ಚೆಯಲ್ಲಿ ಭಾಗವಹಿಸಿ, ಇವುಗಳ ತಪ್ಪು-ಒಪ್ಪುಗಳ ಬಗ್ಗೆ ಸರಕಾರದ ಗಮನ ಸೆಳೆಯಬೇಕಿತ್ತು.

ಆದರೆ, ಜನಪರ ಹಿತಕ್ಕಿಂತ ತಮ್ಮ ‘ರಾಜಕೀಯ ಅಜೆಂಡಾ’ ಮಾತ್ರವೇ ವಿಪಕ್ಷಗಳವರ ಆದ್ಯತೆಯ ವಿಷಯವಾದ ಕಾರಣ ಗದ್ದಲ-ಗಲಾಟೆಗೆ ಅವರು ಪ್ರಾಶಸ್ತ್ಯ ಕೊಟ್ಟರು. ಇವರು ಚರ್ಚೆಯಲ್ಲಿ ಭಾಗವಹಿಸದಿದ್ದುದಕ್ಕೆ ತಲೆಕೆಡಿಸಿಕೊಳ್ಳದ ಆಡಳಿತ ಪಕ್ಷವು ತಾನು ಮಂಡಿಸಿದ ವಿಧೇಯಕಗಳಿಗೆ ಅಂಗೀಕಾರವನ್ನು ಪಡೆದುಕೊಂಡಿತು. ಈ ಸದಸ್ಯರ ಹಠದಿಂದಾಗಿ ನಷ್ಟವಾಗಿದ್ದು ವಿಪಕ್ಷಗಳಿಗೇ ವಿನಾ ಆಡಳಿತ ಪಕ್ಷಕ್ಕಲ್ಲ. ಕೇವಲ ಒಂದೇ ಅಜೆಂಡಾಗೆ ಜೋತುಬಿದ್ದು ಸದನ ನಡೆಯದ ಹಾಗೆ ನೋಡಿಕೊಂಡಿದ್ದು ಅವರಿಗೇ ತಿರುಗುಬಾಣವಾಯಿತು.

ವಿಧೇಯಕಗಳನ್ನು ಅಂಗೀಕರಿಸಿಕೊಂಡ ಆಡಳಿತ ಪಕ್ಷವು ಇವರ ಮೊಂಡುತನದ ಲಾಭ ಪಡೆಯಿತು. ಬಿಹಾರದಲ್ಲಿ ‘ಮತಾಧಿಕಾರ ಯಾತ್ರೆ’ ಕೈಗೊಂಡಿರುವ ರಾಹುಲ್‌ರವರು ಸಭೆಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದಾರೆ; ಅವರು ಈ ನಿರ್ಣಯವನ್ನು ಮೊದಲೇ ಕೈಗೊಂಡು ಕಲಾಪದಲ್ಲಿ ಭಾಗವಹಿಸುವುದಕ್ಕೆ ತಮ್ಮ ಪಕ್ಷದ ಸದಸ್ಯರಿಗೆ ಅವಕಾಶ ಕೊಡಬಹುದಾಗಿತ್ತು.

ಸದನದಲ್ಲಿ ಕಲಾಪವು ಸುಗಮವಾಗಿ ನಡೆಯುವಂತಾಗುವಲ್ಲಿ ಮತ್ತು ಸಂಸದೀಯ ಸತ್ಸಂಪ್ರದಾಯ ಗಳನ್ನು ಕಾಯ್ದುಕೊಳ್ಳುವಲ್ಲಿ ಆಡಳಿತ ಪಕ್ಷಕ್ಕೆ ಇನ್ನೂ ಹೆಚ್ಚಿನ ಜವಾಬ್ದಾರಿಯಿದೆ. ಅದು ಸಂಧಾನ, ಮನವೊಲಿಕೆಯ ಮೂಲಕ ಅಥವಾ ಮಧ್ಯದ ಹಾದಿಯನ್ನು ಕಂಡುಕೊಂಡು ಕಲಾಪವು ನಡೆಯುವಂತೆ ನೋಡಿಕೊಳ್ಳಬೇಕಿದೆ.

ರಾಜಕೀಯವನ್ನು ಬೀದಿಯಲ್ಲಿ ಮಾಡಬೇಕು, ಚರ್ಚೆ ಮತ್ತು ಸಂವಾದವನ್ನು ಸದನದೊಳಗೆ ಮಾಡಬೇಕು; ಆದರೆ ದುರ್ದೈವವಶಾತ್, ಇತ್ತೀಚಿನ ದಿನಗಳಲ್ಲಿ ‘ಬೀದಿ ರಾಜಕೀಯ’ವು ಸದನವನ್ನು ಪ್ರವೇಶಿಸಿದೆ. ಅದು ಸದನದ ಪಾವಿತ್ರ್ಯವನ್ನು ಹಾಳುಗೆಡಹುತ್ತಿದೆ. ಇದರಿಂದಾಗಿ ಆರೋಗ್ಯಕರ ಚರ್ಚೆಗಳು ಮತ್ತು ಪರಸ್ಪರ ಸಂವಾದಗಳು ಮರೆಯಾಗುತ್ತಿವೆ.

(ಲೇಖಕರು ಬಿಜೆಪಿ ವಕ್ತಾರರು)