ಪ್ರಕಾಶಪಥ
ಪ್ರಕಾಶ ಶೇಷರಾಘವಾಚಾರ್
ಸಂವಿಧಾನದ 19ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿದೆ. ಆತ, ತನ್ನ ವಿಚಾರವನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ. ಅದರ ಜತೆಯೇ ಈ ಸ್ವಾತಂತ್ರಕ್ಕೆ ಗಡಿಯನ್ನು ವಿಧಿಸಿ ಅದರ ದುರುಪಯೋಗವಾಗದ ಹಾಗೆ ಎಚ್ಚರವನ್ನೂ ವಹಿಸಿದೆ.
ಸಂವಿಧಾನದ ೧೯ನೇ ವಿಧಿಗೆ ಸಂಚಕಾರ ಬಂದಿದ್ದು ೧೯೭೫ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದಾಗ. ೧೯ ತಿಂಗಳು ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳ ಲಾಗಿತ್ತು. 1977ರ ಚುನಾವಣೆಯನ್ನು ಕಾಂಗ್ರೆಸ್ ಸೋತ ತರುವಾಯ ೧೯ನೇ ವಿಧಿಯನ್ನು ಮರು ಸ್ಥಾಪಿಸಲಾಯಿತು. ತುರ್ತುಪರಿಸ್ಥಿತಿಯಿಂದ ಪಾಠ ಕಲಿತಿದ್ದ ಕಾಂಗ್ರೆಸ್ ಮತ್ತೆ ಅದೇ ಸರ್ವಾಧಿಕಾರಿ ಧೋರಣೆಯನ್ನು ತೋರುವುದಿಲ್ಲ ಎಂಬ ನಂಬಿಕೆಯಿತ್ತು. ಆದರೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದ ನಡವಳಿಕೆಯು ಈ ನಂಬಿಕೆಯನ್ನು ಹುಸಿ ಮಾಡಿದೆ.
ಐವತ್ತು ವರ್ಷ ಕಳೆದರೂ ತುರ್ತು ಪರಿಸ್ಥಿತಿಯ ಮನಸ್ಥಿತಿಯು ಇವರ ಆಡಳಿತ ಶೈಲಿಯಲ್ಲಿ ಇಂದಿಗೂ ದಟ್ಟವಾಗಿ ಕಾಣುತ್ತಿದೆ. ‘ನಗರದ ಮೂಲಸೌಕರ್ಯ ಕುಸಿದಿದೆ, ಉದ್ಯಮಗಳು ರಾಜ್ಯವನ್ನು ತೊರೆಯುವಂತಾಗಿದೆ’ ಎಂದು ಯಾರಾದರೂ ಸತ್ಯ ನುಡಿದರೆ ಅವರ ಮೇಲೆ ನಿರಂತರ ವಾಗ್ದಾಳಿ ಮಾಡುವುದು ಮತ್ತು ‘ಹೋಗುವವರು ಹೋಗಲಿ’ ಎಂಬ ಅಸಡ್ಡೆಯ ಪ್ರತಿಕ್ರಿಯೆ ನೀಡುವುದು ಕಾಣಬರುತ್ತಿದೆ.
ರಸ್ತೆಯೆ ಹೊಂಡದಿಂದ ತುಂಬಿದೆ ಎಂದು ದೂರಿದರೆ ‘ಪ್ರಧಾನ ಮಂತ್ರಿ ನಿವಾಸದ ರಸ್ತೆಯ ಹಳ್ಳ ಇದೆ’ ಎಂದು ವಿತಂಡವಾದ ಮಾಡುತ್ತಾರೆ. ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಅವರು, ನಗರದ ರಸ್ತೆಗಳ ದುರವಸ್ಥೆ ಮತ್ತು ಬೀದಿ ಬೀದಿಯಲ್ಲಿ ಬಿದ್ದಿರುವ ಕಸದ ಬಗ್ಗೆ ಪ್ರಶ್ನಿಸಿದರೆ ಸಂಪುಟದ ಸದಸ್ಯರೆ ಆಕೆಯ ಮೇಲೆ ಮುಗಿಬೀಳುತ್ತಾರೆ.
ಇದನ್ನೂ ಓದಿ: Prakash Shesharaghavachar Column: ಖರ್ಗೆಯವರೇ, ಸಂವಿಧಾನರಹಿತ ಕ್ರಮ ಸಾಧ್ಯವಿಲ್ಲ
ಪರಿಸ್ಥಿತಿ ಹೇಗಿದೆಯೆಂದರೆ, ಸರಕಾರದ ವೈಫಲ್ಯವನ್ನು ರಾಜಕೀಯ ಪಕ್ಷಗಳೂ ಪ್ರಸ್ತಾಪಿಸುವ ಹಾಗಿಲ್ಲದ ಮತ್ತು ತೊಂದರೆಗೆ ಸಿಲುಕಿರುವ ಕೈಗಾರಿಕೋದ್ಯಮಿಗಳು ಧ್ವನಿ ತೆಗೆಯುವ ಹಾಗಿಲ್ಲದ ಗಂಭೀರ ಪರಿಸ್ಥಿತಿಯು ನಿರ್ಮಾಣವಾಗಿದೆ. ಕಾಂಗ್ರೆಸ್ ಆಡಳಿತದ ಎರಡೂವರೆ ವರ್ಷದಲ್ಲಿ ಬೆಲೆಯೇರಿಕೆಯ ಭಾರವನ್ನು ಸರಕಾರ ಹೊರಿಸಿದೆ ಎಂದು ಆರೋಪಿಸಿ ಬಿಜೆಪಿಯು ಬೆಲೆಯೇರಿಸಿ ರುವ ಪದಾರ್ಥಗಳ ಪಟ್ಟಿ ಸಮೇತ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೆ ಅದರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ.
ಪ್ರತಿಪಕ್ಷವಾಗಿ ಸರಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದರೆ ಅಸಹನೆ ಏಕೆ? ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಹೊಸ ಪರಿಪಾಠವನ್ನು ಆರಂಭಿಸಿದ್ದಾರೆ.
ಸರಕಾರಕ್ಕೆ ಇರಿಸುಮುರಿಸು ಆಗುವ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದು ಕೊಳ್ಳುವ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಯತ್ನಾಳ್, ಸಿ.ಟಿ. ರವಿ ಮುಂತಾದವರ ಮೇಲೆ ಪದೇ ಪದೆ ಮೊಕದ್ದಮೆ ದಾಖಲು ಮಾಡಿ ಕಿರುಕುಳ ಕೊಡುವ ಪ್ರಯತ್ನ ನಡೆಯುತ್ತಲೇ ಇದೆ. ಈ ಪ್ರಕರಣಗಳಿಗೆ ಯಾವುದೇ ಆಧಾರವಿಲ್ಲ, ಕೇವಲ ರಾಜಕೀಯ ದುರುದ್ದೇಶದಿಂದ ದಾಖಲಿಸಿರುವುದು ಎಂದು ಅಭಿಪ್ರಾಯಪಟ್ಟು ಉಚ್ಚ ನ್ಯಾಯಾಲಯವು ವಜಾ ಮಾಡಿರುವ ಪ್ರಕರಣಗಳ ಲೆಕ್ಕ ಸಿಕ್ಕದಷ್ಟಾಗಿದೆ.
ರಾಜ್ಯ ಸರಕಾರದ ಜಾತಿಗಣತಿಯಲ್ಲಿ ಭಾಗವಹಿಸುವುದು ಅಥವಾ ನಿರಾಕರಿಸುವುದು ಐಚ್ಛಿಕ ಎಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ ಮತ್ತು ಗಣತಿಯ ವೇಳೆ ಸಂಗ್ರಹಿಸುವ ಮಾಹಿತಿ ಗೌಪ್ಯ ವಾಗಿರಬೇಕು, ಸೋರಿಕೆಗೆ ಆಸ್ಪದವಿರಬಾರದು ಎಂದು ಸೂಚಿಸಿದೆ. ಬೆಂಗಳೂರಿನಲ್ಲಿಯೇ ಸಾವಿರಾರು ಕುಟುಂಬಗಳು ಇಂದು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಯೂ ಪ್ರಕಟವಾಗಿದೆ.
ಇನ್ಫೋಸಿಸ್ ಕಂಪನಿಯ ಸ್ಥಾಪಕ ನಾರಾಯಣ ಮೂರ್ತಿಯವರು ಮತ್ತು ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಯವರು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿ ತತ್ಸಂಬಂಧದ ಪ್ರಮಾಣಪತ್ರವನ್ನು ನೀಡಿzರೆ. ಸಂವಿಧಾನ ರಕ್ಷಕರು ತಾವೇ ಎಂದು ಪದೇ ಪದೆ ಬೊಂಬಡಾ ಹೊಡೆಯುವ ಕಾಂಗ್ರೆಸ್ ಸರಕಾರವು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ನಾರಾಯಣ ಮೂರ್ತಿಯವರು ನೀಡಿದ್ದ ಪ್ರಮಾಣ ಪತ್ರವನ್ನು ಸೋರಿಕೆ ಮಾಡಿದೆ, ಅವರ ವಿರುದ್ಧ ಹೀನಾ ಮಾನವಾಗಿ ಟೀಕಿಸಲು ಸ್ವತಃ ಮುಖ್ಯಮಂತ್ರಿಗಳೇ ಫೀಲ್ಡಿಗಿಳಿದಿದ್ದಾರೆ.
ಜೀವಮಾನದಲ್ಲಿ ಚುನಾವಣೆಯನ್ನೇ ಗೆಲ್ಲದೆ ದೆಹಲಿಯ ವಶೀಲಿಬಾಜಿಯ ತಮ್ಮ ರಾಜಕೀಯ ಜೀವನವನ್ನು ಸವೆಸುತ್ತಿರುವ ಬಿ.ಕೆ.ಹರಿಪ್ರಸಾದ್ ರವರ ಪ್ರಕಾರ ನಾರಾಯಣಮೂರ್ತಿ ದಂಪತಿಗಳು ಸಮೀಕ್ಷೆಯಲ್ಲಿ ಭಾಗವಹಿಸದಿರುವುದರಿಂದ ಅವರು ದೇಶದ್ರೋಹಿಗಳಂತೆ. ವ್ಹಾ! ಎಂಥ ಕಲ್ಮಶ ತುಂಬಿರುವ ಮನದಾಳದ ಮಾತು. ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ ಎಂದಿರುವ ನ್ಯಾಯಾಲಯಕ್ಕೂ ತಮ್ಮ ಕೀಳುಮಟ್ಟದ ಮಾತು ಅನ್ವಯವಾಗುತ್ತದೆ ಎಂಬುದನ್ನು ಇವರು ಮರೆತಿದ್ದಾರೆ.
ಈ ನಾಡಿಗೆ ‘ಐಟಿ ಕ್ರಾಂತಿ’ ತಂದ ಹಿರಿಯರು, ಲಕ್ಷಾಂತರ ಜನರಿಗೆ ಉದ್ಯೋಗದಾತರು ಮತ್ತು ಸರಕಾರಕ್ಕೆ ಸಾವಿರಾರು ಕೋಟಿ ತೆರಿಗೆ ಪಾವತಿಸುತ್ತಿರುವ ಸಂಸ್ಥೆಯ ಸಂಸ್ಥಾಪಕನಿಗೆ ಬಳಸುವ ಭಾಷೆಯ ಪರಿ- ‘ಅವರೇನು ಬೃಹಸ್ಪತಿಗಳಾ?’, ‘ಅವರು ದೇಶದ್ರೋಹಿಗಳು’ ಎಂಬಿತ್ಯಾದಿ. ಈ ವರ್ತನೆಯು ಆಡಳಿತ ಪಕ್ಷ ತೋರ್ಪಡಿಸುತ್ತಿರುವ ಠೇಂಕಾರದ ಪರಮಾವಧಿ. ಅವರ ವ್ಯಕ್ತಿತ್ವದ ಘನತೆಗೆ ಕುಂದು ತರುವ ಮಾತುಗಳನ್ನು ಕಾಂಗ್ರೆಸ್ ಬೆಂಬಲಿಗರು ಆಡುತ್ತಿರುವುದು ದುರುದ್ದೇಶ ಪೂರಿತ, ಪ್ರಾಯೋಜಿತ ಪ್ರಚಾರವಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಯ ಮಾಹಿತಿಗಳ ಗೌಪ್ಯತೆ ಕಾಪಾಡಬೇಕಿತ್ತು; ಆದರೆ ಜಾತೀಯ ದ್ವೇಷ ಸಾಧನೆಗಾಗಿ ನಾರಾಯಣ ಮೂರ್ತಿಯವರ ಮಾಹಿತಿಯನ್ನು ಸೋರಿಕೆ ಮಾಡಿ ನ್ಯಾಯಾಂಗ ನಿಂದನೆಗೂ ಹಿಂಜರಿಯದಯಷ್ಟು ಧಾರ್ಷ್ಟ್ಯ ತೋರಿದ್ದಾರೆ.
2014ರಲ್ಲಿ ಕಾಂತರಾಜ್ ನೇತೃತ್ವದ ಆಯೋಗವು 192 ಕೋಟಿ ರುಪಾಯಿ ವೆಚ್ಚ ಮಾಡಿ ಕೈಗೊಂಡಿದ್ದ ಜಾತಿ ಸಮೀಕ್ಷೆಯು ಕಸದ ಡಬ್ಬ ಸೇರಿತು. ಈಗ 420 ಕೋಟಿ ರು. ವೆಚ್ಚದಲ್ಲಿ ಮತ್ತೊಂದು ಜಾತಿ ಮತ್ತು ಆರ್ಥಿಕ ಸಮೀಕ್ಷೆಯನ್ನು ಕೈಗೊಂಡಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ತೇಜಸ್ವಿ ಸೂರ್ಯ ವಿರುದ್ಧ ಅಪಪ್ರಚಾರ ನಡೆಯುತ್ತದೆ.
ರಾಹುಲ್ ಗಾಂಧಿ, ಹತಾಶೆಯ ಪರಾಕಾಷ್ಠೆಯನ್ನು ತಲುಪಿರುವ ಒಬ್ಬ ರಾಜಕಾರಣಿ. ಆರೆಸ್ಸೆಸ್ ಅನ್ನು ದೂಷಿಸದೆ ಅವರ ಭಾಷಣ ಅಪೂರ್ಣ. ಅವರ ಆಣತಿಯೊ ಅಥವಾ ಪ್ರಿಯಾಂಕ್ ಖರ್ಗೆ ಯವರು ತಮ್ಮ ತಂದೆಯವರ ದೆಹಲಿ ಪ್ರಭಾವವನ್ನು ದುರುಪಯೋಗ ಪಡಿಸಿಕೊಂಡು ಮಾಡು ತ್ತಿರುವ ಅಧಿಕಪ್ರಸಂಗವೊ, ಒಟ್ಟಿನಲ್ಲಿ ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್ ಬಹುದೊಡ್ಡ ಸದ್ದು ಮಾಡುತ್ತಿದೆ.
ಮುಖ್ಯಮಂತ್ರಿಗಳು ಕೂಡ ಸಂಘವನ್ನು ಗುರಾಣಿಯಾಗಿ ಬಳಸಿಕೊಂಡು ತಮ್ಮ ಆಡಳಿತದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಶತಮಾನೋತ್ಸವ ಆಚರಿಸುತ್ತಿರುವ ಆರೆಸ್ಸೆಸ್ ಸಂಘಟನೆಯ ವಿರುದ್ಧ ಸಂವಿಧಾನ ವಿರೋಧಿ ಕ್ರಮಗಳನ್ನು ಕೈಗೊಳ್ಳು ತ್ತಿದ್ದಾರೆ.
ಅಭಿಪ್ರಾಯಭೇದ ಅಥವಾ ವಿಚಾರಭೇದವು ಪ್ರಜಾಪ್ರಭುತ್ವ ರಾಷ್ಟ್ರದ ವೈಶಿಷ್ಟ್ಯ. ವಿಚಾರಭೇದವು ಸೇಡಿಗೆ ದಾರಿಯಾದರೆ ಸರ್ವಾಧಿಕಾರಿ ಆಡಳಿತದ ಕುರುಹು ಆಗುತ್ತದೆ. 2013ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಘಟನೆಯೊಂದು ರಾಜ್ಯಾದ್ಯಂತ ಕಂಡ ಕಂಡ ಜಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾರಣ ಅದಕ್ಕೆ ಕಡಿವಾಣ ಹಾಕಲು ಇಲಾಖಾ ಸ್ತರದಲ್ಲಿ ಸುತ್ತೋಲೆ ಹೊರಡಿಸಿ, ಹೋರಾಟ ನಡೆಸುವ ಮುನ್ನ ಅನುಮತಿ ಪಡೆಯುವ ಆದೇಶ ಮಾಡಲಾಗಿತ್ತು.
ಹನ್ನೆರಡು ವರ್ಷದ ತರುವಾಯ ಅದನ್ನು ಆಧಾರ ಮಾಡಿಕೊಂಡು ಸಂಘದ ಚಟುವಟಿಕೆಯ ಮೇಲೆ ನಿರ್ಬಂಧ ಹೇರಿದ್ದಾರೆ. 2013ರಿಂದ 2020ರ ತನಕ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇವರ ಕಾರ್ಯಸೂಚಿಯಲ್ಲಿ ಆರೆಸ್ಸೆಸ್ ದಮನನೀತಿ ಇರಲಿಲ್ಲ.
‘ಆರೆಸ್ಸೆಸ್ ಸಂವಿಧಾನ ವಿರೋಧಿ’ ಎಂದು ಕಾಂಗ್ರೆಸ್ ಘೋಷಿಸಿ ಬಿಟ್ಟಿದೆ. ಸ್ವಾತಂತ್ರ್ಯ ಬಂದ ದಿನದಿಂದಲೂ ಈ ನೆಲದ ಕಾನೂನನ್ನು ಗೌರವಿಸಿ ತನ್ನ ಚಟುವಟಿಕೆಯನ್ನು ನಡೆಸುತ್ತಿರುವ ಈ ಸಂಘಟನೆ ಇವರ ದೃಷ್ಟಿಯಲ್ಲಿ ಸಂವಿಧಾನ ವಿರೋಧಿಯಂತೆ. ಇವರ ಪ್ರಕಾರ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯಕ್ಕಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಸಂಘಟನೆಯ ವಿರುದ್ಧ ಸುಳ್ಳು ಮಾಹಿತಿ ಹರಡಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವುದು ಸಂವಿಧಾನ ರಕ್ಷಣೆಯ ಕಾಯಕ ಎಂಬ ಭ್ರಮೆಗೊಳಗಾಗಿzರೆ ಇವರೆಲ್ಲಾ. ‘ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟಾ’ ಎಂಬಂತೆ, ನೆಲದ ಕಾನೂನನ್ನು ಗೌರವಿಸುತ್ತಿರುವವರ ಮೇಲೆ ತಮ್ಮ ಅಧಿಕಾರ ಬಲವನ್ನು ಹರಿಯ ಬಿಟ್ಟು ಕಾಂಗ್ರೆಸ್ ನಾಯಕರು ತಮ್ಮ ದ್ವೇಷಪೂರಿತ ಕಾರ್ಯಸೂಚಿಯನ್ನು ಸಮರ್ಥಿಸಿಕೊಳ್ಳಲು ಸಂವಿಧಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಸಂಘದ ಪಥ ಸಂಚಲನದಲ್ಲಿ ಭಾಗವಹಿಸಿದರು ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯ ಪಿಡಿಒ ಅವರನ್ನು ಕಾನೂನು ಬಾಹಿರವಾಗಿ ಅಮಾನತು ಮಾಡಿzರೆ. ಸಂಘದ ಚಟುವಟಿಕೆಯಲ್ಲಿ ಭಾಗಿಯಾಗುವುದರಲ್ಲಿ ತಪ್ಪಿಲ್ಲ ಎಂದು ದೇಶದ ಹನ್ನೆರಡು ನ್ಯಾಯಾಲಯಗಳು ತೀರ್ಪು ನೀಡಿದ್ದರೂ, ಢೋಂಗಿ ಸಂವಿಧಾನ ರಕ್ಷಕರು ‘ಸಂವಿಧಾನ ವಿರೋಧಿ’ ಕ್ರಮವನ್ನು ಕೈಗೊಂಡು ‘ಮೊಹೊಬ್ಬತ್ ಕಾ ದುಖಾನ್’ ಬಂದ್ ಮಾಡಿ, ‘ನಫ್ರತ್ ಕಾ ದುಖಾನ್’ಗೆ ಚಾಲನೆ ನೀಡಿದ್ದಾರೆ.
‘ನಾವು ಸಂವಿಧಾನ ರಕ್ಷಕರು, ನಮ್ಮ ನಂಬಿಕೆ ಸಂವಿಧಾನದ ಮೇಲೆ’ ಎಂದು ಬೊಬ್ಬೆ ಹೊಡೆಯುವ ಪಕ್ಷದ ನಾಯಕರು, ತಮಗೆ ಒಗ್ಗದ ಸಿದ್ಧಾಂತವನ್ನು ವೈಚಾರಿಕವಾಗಿ ಎದುರಿಸುವ ಸಾಮರ್ಥ್ಯವಿಲ್ಲದೆ ಜನಪರ ಆಡಳಿತ ನೀಡಲು ರಾಜ್ಯದ ಜನತೆಯು ಕೊಟ್ಟಿರುವ ಅಧಿಕಾರವನ್ನು, ಸಜ್ಜನ ಶಕ್ತಿಯ ದಮನಕ್ಕೆ ದುರ್ಬಳಕೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಅಣಕವಾಗಿದೆ ಮತ್ತು ‘ನಮ್ಮ ಸರ್ವಾಧಿಕಾರಿ ಮನೋಭಾವ ಬದಲಾಗುವ ಲಕ್ಷಣವೇ ಇಲ್ಲ’ ಎಂದು ಸ್ವತಃ ಅವರೇ ಜನತೆಗೆ ಕೂಗಿ ಕೂಗಿ ಸಾರುತ್ತಿದ್ದಾರೆ.
ರಾಜ್ಯ ಸರಕಾರಗಳು ಇಂಥ ಅತಿರೇಕದ ನಿರ್ಣಯವನ್ನು ಕೈಗೊಳ್ಳುವ ಮುನ್ನ ಸ್ವಲ್ಪ ಆಲೋಚಿಸ ಬೇಕಿತ್ತು; ಕೇವಲ ಯಾವುದೋ ಒಂದು ವರ್ಗವನ್ನು ಓಲೈಸುವ ಸಲುವಾಗಿ ಇಂಥ ನಿರ್ಣಯವನ್ನು ತೆಗೆದುಕೊಳ್ಳಬಾರದಾಗಿತ್ತು. ಸರಕಾರ ಬದಲಾದಾಗ ತಮ್ಮ ನಿರ್ಣಯವು ರದ್ದಾಗುವುದು ನಿಶ್ಚಿತ ಎಂದಾದರೆ ಅಂಥ ವಿವಾದಾತ್ಮಕ ಕ್ರಮವನ್ನು ಕೈಗೊಳ್ಳದಿರುವುದು ಜಾಣ ಆಡಳಿತಗಾರರ ಲಕ್ಷಣ.
ಸದ್ಯ ಸರಕಾರದ ಅವಧಿಯು ಮೂವತ್ತು ತಿಂಗಳು ಮಾತ್ರ ಎಂಬುದು ವಾಸ್ತವ. ಜವಾಬ್ದಾರಿಯುತ ಸರಕಾರವು ದೂರದೃಷ್ಟಿಯಿಂದ ಕರ್ತವ್ಯ ನಿರ್ವಹಿಸಬೇಕು. ಏಕೆಂದರೆ, ಕೈಗೊಳ್ಳುವ ಆತುರದ ನಿರ್ಧಾರಗಳು ತಿರುಗುಬಾಣವಾದಾಗ ಸಮಯ ಕಳೆದು ಹೋಗಿರುತ್ತದೆ.
(ಲೇಖಕರು ಬಿಜೆಪಿಯ ವಕ್ತಾರರು)