ಶಶಾಂಕಣ
ಕೀಟಗಳ ಲೋಕವನ್ನು ಗಮನಿಸುತ್ತಾ ಹೋದರೆ, ಒಂದು ಅದ್ಭುತ ಜಗತ್ತೇ ತೆರೆದುಕೊಳ್ಳು ತ್ತದೆ. ನಮ್ಮ ಜಗತ್ತಿನಲ್ಲಿ ಅದೆಷ್ಟೋ ಲಕ್ಷ ಪ್ರಭೇದದ ಕೀಟಗಳಿವೆಯಂತೆ! ಇಲ್ಲೊಂದು ವಿಶೇಷವಿದೆ : ಮನುಷ್ಯನ ವೈಜ್ಞಾನಿಕ ಅಧ್ಯಯನಕ್ಕೆ ಒಳಪಡದ ಇನ್ನೂ ಅದೆಷ್ಟೋ ಸಾವಿರ ಪ್ರಭೇದದ ಕೀಟಗಳಿವೆಯಂತೆ. ಅಂದರೆ, ಹೊಸ ಹೊಸ ಪ್ರಭೇದದ ಕೀಟಗಳು ಪ್ರತಿ ವರ್ಷ ಪತ್ತೆಯಾಗುತ್ತಲೇ ಇವೆ.
ಕೀಟಗಳಲ್ಲಿ ಕೆಲವು ಅಮಾಯಕ, ಕೆಲವು ನಿರುಪದ್ರವಿ; ಇನ್ನು ಕೆಲವು ತಮ್ಮ ರಕ್ಷಣಾ ಕೌಶಲಕ್ಕೆ ಹೆಸರುವಾಸಿ. ಅಂತಹ ಒಂದು ಅಪರೂಪದ ಆದರೆ ರಣಭಯಂಕತ ರಕ್ಷಣಾ ತಂತ್ರವನ್ನು ಹೊಂದಿರುವ ಕೀಟವೆಂದರೆ, ಹುಲಿಕಡ್ಜುಳ (ದೊಡ್ಡ ಗಾತ್ರದ ಕಣಜ, ಟೈಗರ್ ವ್ಯಾಸ್ಪ್).
ನಮ್ಮ ಹಳ್ಳಿಯಲ್ಲಿ ಇವುಗಳು ಬಹಳ ಇವೆ; ಬೆಂಗಳೂರಿನಂತಹ ಮಹಾ ನಗರದ ಸರಹದ್ದಿನಲ್ಲೂ ಕೆಲವು ದೊಡ್ಡ ಗಾತ್ರದ ಕಡ್ಜುಳಗಳಿವೆ; ಅವುಗಳ ಕಡಿತ ಎಂದರೆ ತುಸು ಅಪಾಯಕಾರಿ. ನಮ್ಮ ಹಳ್ಳಿಯಲ್ಲಿ ಹುಲಿಕಡ್ಜುಳ ಎಂದರೆ ಎಲ್ಲರಿಗೂ ಭಯ!
‘ಹ್ವಾಯ್ ಅಯ್ಯಾ, ನಿಮ್ಮ ಮನೆ ಎದುರಿಗೆ, ಅಡಕೆ ಮರದಲ್ಲಿ ಒಂದು ಗೂಡು ಬೆಳಿತಾ ಉಂಟು, ಕಂಡಿದ್ರ್ಯಾ?’ ಎಂದು ಹೊನ್ನಪ್ಪ ಕೇಳಿದಾಗ ಇಲ್ಲ ಎಂದು ತಲೆ ಆಡಿಸಿದೆ. ‘ನೀವು ಮರದ ಹತ್ತಿರ ಹೋಗಿ ಜೋರಾಗಿ ಕೈ ಎತ್ತಿದ್ರೆ ನೀಕತ್, ಅದು ಹುಲಿ ಕಡ್ಜುಳನ ಗೂಡು ಕಾಣಿ. ಈಗ ತೆಂಗಿನ ಕಾಯಿ ಅಷ್ಟು ದೊಡ್ಡದಾಗಿತ್, ಇದನ್ನ ಹೀಂಗೇ ಬಿಟ್ರೆ ಇನ್ನು ಒಂದು ತಿಂಗಳಲ್ಲಿ ಅಕ್ಕಿ ಮುಡಿಯಷ್ಟು ದೊಡ್ಡ ಆತ್. ಹುಲಿ ಕಡ್ಜುಳ ಕಚ್ಚಿದರೆ ಭಾರೀ ಡೇಂಜರ್ ಮಾರಾಯ್ರೆ. ಕೂಡ್ಲೆ ತೆಗ್ಸುದ್ ಒಳ್ಳೆದ್’ ಎಂದ ಹೊನ್ನಪ್ಪ.
ಇದನ್ನೂ ಓದಿ: Shashidhara Halady Column: ಮರಗಳೇ ಎನ್ನ ಮಕ್ಕಳು !
ಹುಲಿ ಕಡ್ಜುಳ ಸುಮಾರು ಒಂದು ಇಂಚು ಉದ್ದದ ಕೀಟ. ಮಾಮೂಲಿ ಕಡ್ಜುಳಕ್ಕಿಂತ ಇದು ಬೇರೆ ಎಂದು ಗುರುತಿಸಲು ‘ಹುಲಿ ಕಡ್ಜುಳ’ ಎಂದು ಹೆಸರಿಟ್ಟಿದ್ದರು ನಮ್ಮ ಹಳ್ಳಿಯ ಜನರು. ಇದಕ್ಕಿಂತ ತುಸು ಚಿಕ್ಕದಾದ, ಎಲೆ ಕಡ್ಜುಳ ಎಂಬ ಹಸಿರು ಬಣ್ಣದ ಇನ್ನೊಂದು ಕೀಟವೂ ಇದೆ. ಹುಲಿ ಕಡ್ಜುಳದ ಮೈಮೇಲೆ ಹಳದಿ ಬಣ್ಣದ ಪಟ್ಟಿ ಇರುವುದರಿಂದ, ಹುಲಿಯ ಮೈ ವಿನ್ಯಾಸವನ್ನು ಹೋಲುತ್ತದೆ!
ಇದನ್ನೇ ಹೋಲುವ ಕುಂಬಾರ ಹುಳ ಎಂಬ, ಸಾಕಷ್ಟು ನಿರುಪದ್ರವಿ ಕೀಟವೂ ನಮ್ಮ ಮನೆ ಸುತ್ತ ಮುತ್ತ ಹಾರಾಡುತ್ತಿರುತ್ತದೆ. ಮನೆಯೊಳಗೆ, ಜಂತಿ ತೊಲೆಗಳಿಗೆ ಅಂಟಿಸಿದಂತೆ, ಮಣ್ಣಿನಿಂದ ಗೂಡು ಕಟ್ಟಿ ಮರಿ ಮಾಡುವ ಕುಂಬಾರ ಹುಳ, ಒಮ್ಮೊಮ್ಮೆ ಕಚ್ಚುವುದೂ ಉಂಟು.
ನಾನು ಅದರಿಂದ ಕಚ್ಚಿಸಿಕೊಂಡು, ಉರಿ ಮತ್ತು ತಾಪವನ್ನು ಅನುಭವಿಸಿದ್ದೆ. ಕುಂಬಾರ ಹುಳಕ್ಕಿಂತ ದೊಡ್ಡ ಗಾತ್ರದ ಹುಲಿ ಕಡ್ಜುಳನ ಕಡಿತ ಸಾಕಷ್ಟು ಅಪಾಯಕಾರಿ ಎಂದು ಕೇಳಿ ಗೊತ್ತಿತ್ತು. ‘ಮನೆ ಎದುರೇ ಅಡಿಕೆ ಮರನಾಗೆ ಗೂಡು ಕಟ್ಟಿತ್ ಮಾರಾಯ್ರೆ. ಅಡಕೆ ಹೆಡೆ ಬಿದ್ರೆ, ಮಂಗ ಬಂದು ಏನಾದ್ರೂ ಕೀಟಲೆ ಮಾಡಿದರೆ, ಆ ಗೂಡಲ್ಲಿ ಇಪ್ಪೊ ಎಲ್ಲಾ ಹುಲಿ ಕಡ್ಜುಳಗಳು ಒಟ್ಟಿಗೇ ಬಂದು ಯಾರಿಗಾದರೂ ಕಚ್ಚುವ ಅಪಾಯ ಉಂಟು ಮಾರಾಯ್ರೆ. ಅವು ಕಚ್ಚಿದ್ರೆ, ಗೊತ್ತಿತಲೆ.. ಜಾಸ್ತಿ ಹುಳ ಕಚ್ಚಿದರೆ ವಿಷ ಏರಿ, ಜೀವಕ್ಕೇ ಅಪಾಯ’ ಎಂದು ಹೊನ್ನಪ್ಪ ಎಚ್ಚರಿಸಿ, ಕಡ್ಜುಳನ ಗೂಡನ್ನು ಬೇಗನೆ ತೆಗೆಸುವಂತೆ ಸಲಹೆ ನೀಡಿದ. ಅವನ ಮನೆಯೂ ನಮ್ಮ ಮನೆಯ ಹತ್ತಿರದಲ್ಲೇ ಇದ್ದುದರಿಂದ, ಆ ಹುಳಗಳು ಅಕಸ್ಮಾತ್ ಗುಂಪಾಗಿ ಬಂದು ಕಚ್ಚಿದರೆ ಎಂಬ ದಿಗಿಲು ಅವನಿಗೆ.
ಹಗಲು ಹೊತ್ತಿನಲ್ಲಿ ಆ ಗೂಡು ತೆಗೆಯುವುದು ಕಷ್ಟ, ಅವು ಎಲ್ಲಾ ಒಟ್ಟಿಗೇ ಹೊರಗೆ ಬಂದು ಕಚ್ಚುತ್ತವೆ. ಹತ್ತಿರ ಇದ್ದ ಎಲ್ಲರಿಗೂ ಅಪಾಯ. ಕತ್ತಲಾದ ಮೇಲೆ, ಚಿಮಿಣಿ ಎಣ್ಣೆ ಹಾಕಿ, ಹೊಗೆ ಬರಿಸಿ, ಬೆಂಕಿ ಹಾಕಿ ಅವುಗಳನ್ನು ಓಡಿಸಬೇಕು ಎಂದ. ಇಷ್ಟು ಹೇಳಿದ ನಂತರ, ಅದೇನೆಂದು ನೋಡಬೇಕಾಯಿತು; ನಮ್ಮ ಮನೆ ಅಂಗಳದಿಂದ ಸುಮಾರು ೩೦ ಅಡಿ ದೂರದಲ್ಲಿದ್ದ ಅಡಿಕೆ ಮರದ ಮೇಲೆ ಬೆಳೆದಿದ್ದ ಕಾಳುಮೆಣಸಿನ ಬಳ್ಳಿಯನ್ನು ಆಧರಿಸಿ ಆ ಹುಳಗಳು ಗೂಡು ಕಟ್ಟಿದ್ದವು.
ನಾಲ್ಕಾರು ಹುಲಿ ಕಡ್ಜುಳಗಳು ಸುತ್ತಮುತ್ತ ಹಾರಾಡುತ್ತಾ, ಗೂಡಿನೊಳಗೆ ಹೋಗಿ ಬಂದು ಮಾಡುತ್ತಿದ್ದವು. ತೆಂಗಿನ ಕಾಯಿಯಷ್ಟು ದೊಡ್ಡದಾದ ಬೂದು ಬಣ್ಣದ ಆ ಗೂಡು ಸುಮಾರು ಹತ್ತು ಅಡಿ ಎತ್ತರದಲ್ಲಿತ್ತು. ಹಾಗೇ ಬಿಟ್ಟರೆ, ಅದನ್ನು ಅವುಗಳು ವಿಸ್ತರಿಸುತ್ತಾ ಹೋಗಿ, ಸಣ್ಣ ಮೂಟೆಯಷ್ಟು ಗಾತ್ರಕ್ಕೆ ಬೆಳೆಸಬಲ್ಲವು!
ನಮ್ಮ ಮನೆ ಕೆಲಸಕ್ಕೆ ಮಾಡುತ್ತಿದ್ದ ಚಿನ್ನಪ್ಪ ಎಂಬುವವನಿಗೆ ಇದನ್ನೆಲ್ಲಾ ವಿವರಿಸಿದೆ. ‘ನಮ್ಮ ಇಕಾಲಜಿಯ, ಪರಿಸರದ ಭಾಗ ಎನಿಸುವ ಆ ಕೀಟಗಳು, ಅವುಗಳ ಗೂಡು ಇವೆಲ್ಲಕ್ಕೂ ತನ್ನದೇ ಆದ ಸ್ಥಾನವಿದೆ; ಇದನ್ನು ಬೆಂಕಿ ಹಾಕಿ ಸುಡಲು ಮನಸ್ಸು ಒಪ್ಪುತ್ತಿಲ್ಲ, ಆದರೆ ಆ ಗೂಡಿಗೆ ಬೆಂಕಿ ಹಾಕಿ ಸುಡಬೇಕು ಅಂತ ಹೊನ್ನಪ್ಪ ಹೇಳಿದ್ದಾನೆ.
ಬೆಂಕಿ ಹಾಕಿ ಓಡಿಸುವುದು ಸರಿ ಅಲ್ಲ ಅನಿಸುತ್ತೆ, ಬೇರೆ ಯಾವುದಾದರೂ ರೀತಿಯಲ್ಲಿ ಆ ಕಡ್ಜುಳಗಳನ್ನು ಓಡಿಸುವುದಕ್ಕೆ ಆಗುತ್ತಾ ನೋಡು’ ಎಂದು ಚಿನ್ನಪ್ಪನಿಗೆ ನನ್ನ ಮನದಿಂಗಿತವನ್ನು ವಿವರಿಸಿದೆ. ‘ನಿಮಗೆ ಜೀವದ ಮೇಲೆ ಆಸೆ ಇದ್ದರೆ, ಆ ಗೂಡನ್ನು ಬೇಗ ತೆಗೆಸುವುದು ಒಳ್ಳೆಯದು’ ಎಂದ ಅವನು, ಒಂದೇ ಏಟಿಗೆ! ‘ಹುಲಿ ಕಡ್ಜುಳ ಕಚ್ಚಿದರೆ ಜೀವಕ್ಕೆ ಅಪಾಯ. ಒಂದೋ, ಎರಡೋ ಕಚ್ಚಿದರೆ ಮುಖ ದಪ್ಪ ಆತ್.
ಹತ್ತೋ ಇಪ್ಪತ್ತೋ ಕಚ್ಚಿದರೆ ಜೀವ ಹೋದ ಹಾಂಗೇ. ಬಾಳಾ ಕಷ್ಟ’ ಎಂದು ಎಚ್ಚರಿಸಿದ. ಸಣ್ಣ ಪೇಟೆಯ ನಡುವಿದ್ದ ನಮ್ಮ ಮನೆಯ ಎದುರಿನ ಮೆಣಸಿನ ಬಳ್ಳಿಯನ್ನು ಅದೇಕೆ ಗೂಡು ಕಟ್ಟಲು ಆಯ್ಕೆ ಮಾಡಿಕೊಂಡವು ಎಂಬ ಕುತೂಹಲ ನನಗೆ.
‘ಹುಲಿಕಡ್ಜುಳಗಳು ಹಾಡಿ ಹಕ್ಕಲಿನಲ್ಲಿ ತೋಟದಲ್ಲಿ ಗೂಡು ಕಟ್ಟುತೊ. ನಿಮ್ಮ ಜಾಗ ಹಿಂದೆ ಹಕ್ಲ್ ಆಗಿತ್ತು ಅಲ್ದಾ. ಅದಕ್ಕೆ ಅವು ಗೂಡು ಕಟ್ಟಿದ್ವೋ ಏನೋ. ಆದರೆ, ಅವು ಕಚ್ಚಿದರೆ ಮಾತ್ರ ಭಾರೀ ಕಷ್ಟ. ನಿಮಗೆ ರಾಜಪ್ಪನ ಕತೆ ಗೊತ್ತಿತಲ್ದಾ?’ ಎಂದ. ಆ ವಿಚಾರ ನನಗೆ ಕೇಳಿ ಗೊತ್ತಿತ್ತು. ಚಿನ್ನಪ್ಪ ತನ್ನ ಸಹಪಾಠಿಯು, ಹುಲಿಕಡ್ಜುಳಗಳಿಂದ ಕಚ್ಚಿಸಿ ಕೊಂಡದ್ದನ್ನು ವಿವರವಾಗಿ ಹೇಳಿದ.
‘ನಾನು ಆಗ ಎರಡನೆ ಕ್ಲಾಸಿನಲ್ಲಿದ್ದೆ ಮಾರಾಯ್ರೆ. ಗೋರಾಜಿ ಶಾಲೆಯಿಂದ ನಾವಿಬ್ರೂ ಮನೆಗೆ ಒಟ್ಟಿಗೇ ಬತ್ತೊದ್ದೊ. ಹಾಡಿ ಹಕ್ಲು ದಾರಿ. ನಮ್ಮ ಜೊತೆ ಒಂದನೇ ಕ್ಲಾಸಿನ ರಾಜಪ್ಪನೂ ಇದ್ದ. ದಾರಿ ಮಧ್ಯೆ, ಅದೆಂತಕೋ ಏನೊ, ಕಡ್ಜುಳಗಳ ಹಿಂಡು ನಮ್ಮನ್ನು ಕಚ್ಚುಕೆ ಶುರು ಮಾಡಿದೊ. ಎಂತ ಮಾಡುದಂತ ಗೊತ್ತಾಯ್ಲಿಲ್ಲೆ. ನಾವೆಲ್ಲಾ ಕೂಗಿಕೊಂಡು ಮನೆಗೆ ಓಡಿ ಬಂದೆವು.
ರಾಜಪ್ಪ ಮಾತ್ರ ಜಾರಿ ಬಿದ್ನಾ ಕಾಣತ್, ಹುಲಿ ಕಡ್ಜುಳಗಳು ಅವನಿಗೆ ಸಮಾ ಕಚ್ಚಿದೊ’ ಚಿನ್ನಪ್ಪ ಮುಖ ಸಪ್ಪಗೆ ಮಾಡಿದ. ‘ಆಮೇಲೆ ಎಂತ ಆಯ್‌ತ್, ಡಾಕ್ಟರ ಹತ್ತಿರ ಹೋದಿರಾ, ಅವನಿಗೆ ತುಂಬಾ ನೋವಾಯ್ತಾ?’ ‘ಬರೇ ನೋವಾ? ಮುಖ, ಮೈ ಎಲ್ಲಾ ಇಷ್ಟು ದಪ್ಪ ಆಯ್ತು. ಕೂಡಲೆ ಅವನನ್ನು ಆಚಾರ್ ಡಾಕ್ಟರ ಹತ್ತಿರ ಕರ್ಕೊಂಡು ಹೋದರು. ಡ್ರಿಪ್ ಹಾಕಿದರು. ಆದರೆ ರಾಜಪ್ಪ ಉಳಿಯಲಿಲ್ಲ’ ಎಂದ ಚಿನ್ನಪ್ಪ, ಮ್ಲಾನವದನದಿಂದ.
‘ಹುಲಿ ಕಡ್ಜುಳ ಕಚ್ಚಿದರೆ ನಿಜಕ್ಕೂ ಅಪಾಯಕಾರಿನಾ?’ ನನ್ನ ಪರಿಚಿತ ವೈದ್ಯರಿಗೆ ಫೋನ್ ಮಾಡಿ ಕೇಳಿದೆ. ಈ ರೀತಿಯ ಕೀಟಗಳು (ಹಾರ್ನೆಟ್ ಅಥವಾ ವ್ಯಾಸ್‌ಪ್) ಕಚ್ಚಿದರೆ, ಕೆಲವ ರಿಗೆ ವಿಪರೀತ ಅಲರ್ಜಿ ಆಗಬಹುದು; ಹತ್ತಾರು ಕೀಟಗಳು ಕಚ್ಚಿದರೆ ಜೀವಕ್ಕೆ ಅಪಾಯ ವಾಗುವ ಸಾಧ್ಯತೆ ಇದೆ.
ಮಂಡಲದ ಹಾವಿನಲ್ಲಿರುವಂತಹ ವಿಷವನ್ನು ಹೋಲುವ ವಿಷವು ಈ ಕೀಟಗಳಲ್ಲಿದೆ. ಜೇನುಹುಳಗಳಿಗಿಂತ ಎರಡರಷ್ಟು ಅಪಾಯಕಾರಿ’ ಎಂದರು. ಅವು ಕಚ್ಚಿದಾಗ, ಅವುಗಳ ಮೂತಿ ತುದಿಯಲ್ಲಿರುವ ಕೊಂಡಿಯು ಮನುಷ್ಯರ ಚರ್ಮದಲ್ಲೇ ಉಳಿದು, ಅದರಿಂದಲೂ ಅಲರ್ಜಿ, ನೋವು, ಊತ ಉಂಟಾಗುತ್ತದೆ ಎಂದರು.
ಚಿನ್ನಪ್ಪನಿಗಂತೂ, ಆ ಗೂಡು ನಮ್ಮ ಮನೆಯ ಹತ್ತಿರ ಇದ್ದರೆ ಮನೆಗೆ ಬರುವ ಎಲ್ಲರಿಗೂ ಅಪಾಯ ಎಂಬ ಅತಿ ಕಾಳಜಿ. ಒಂದು ಸಂಜೆ, ಸೂರ್ಯಾಸ್ತದ ನಂತರ, ಆ ಗೂಡಿಗೆ ಬೆಂಕಿ ಹಚ್ಚಿ ತೆಗೆಯುತ್ತೇನೆ ಎಂದ. ಆದರೂ ನನ್ನ ಮನಸ್ಸಿಗೆ ಕಸಿವಿಸಿ. ‘ಇಕಾಲಜಿಯ ಸರಪಣಿ ಯಲ್ಲಿ ಹುಲಿ ಕಡ್ಜುಳವೂ ಸೇರಿದಂತೆ, ಎಲ್ಲಾ ಜೀವಿಗಳದ್ದೂ ಪ್ರಮುಖ ಪಾತ್ರ. ಪರಿಸರ ಪ್ರಪಂಚದ ಸಮತೋಲನದಲ್ಲಿ ನಾವು ಹಸ್ತಕ್ಷೇಪ ಎಷ್ಟು ಸರಿ?’ ಎಂಬ ಯೋಚನೆ.
ನಮ್ಮ ತಾಲೂಕಿನ ಹಲವು ಸಮಾನಾಸಕ್ತರ ಒಂದು ಫೇಸ್‌ಬುಕ್ ಗ್ರೂಪ್ ಇದೆ. ಅದರಲ್ಲಿ ನನ್ನ ಈ ತಳಮಳ ತೋಡಿಕೊಂಡೆ. ‘ಕೂಡಲೆ ತೆಗೆಸಿ, ಜಾಗ್ರತೆ ವಹಿಸಿ, ಹತ್ತಿರ ಹೋಗಬೇಡಿ, ಅವು ಕಚ್ಚಿದರೆ ಪಾರ್ಟಿ ಪಡ್ಚ, ರಿಸ್ಕ್ ಬೇಡ, ರಾತ್ರಿಯಾದ ನಂತರ ಅವನ್ನು ಓಡಿಸಿ. . . ಜೀವದ ಮೇಲೆ ಆಸೆ ಇದ್ದರೆ, ಅವುಗಳನ್ನು ಮನೆಯಿಂದ ದೂರ ಓಡಿಸಲೇ ಬೇಕು.’
ಈ ರೀತಿಯ ಹಲವು ಅಭಿಪ್ರಾಯಗಳು ತೇಲಿಬಂದವು. ಓರ್ವ ಹಿರಿಯರು ತಮ್ಮ ಅನುಭವ ವನ್ನು ವಿವರವಾಗಿ ಹಂಚಿಕೊಂಡಿದ್ದರು. ‘1928ರಲ್ಲಿ ನನಗೆ ೮೭ ಹುಲಿ ಕಡ್ಜುಳ ಕಚ್ಚಿದ್ದವು. ಅದೇ ಸಮಯದಲ್ಲಿ ಗೂಡಿಗೆ ಯಾರೊ ಕಲ್ಲು ಹೊಡೆದಿದ್ದರಂತೆ. ನನಗೆ ಗೊತ್ತಿಲ್ಲದೆ ಆ ದಾರಿಯಲ್ಲಿ ಬಂದೆ. ನನಗೆ ಒಂದೇ ಸಮನೆ ಕಚ್ಚಲು ಆರಂಭಿಸಿದವು. ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ.
ಮಳೆಗಾಲದ ಆರಂಭದ ದಿನಗಳು. ಹತ್ತಿರದಲ್ಲಿದ್ದ ಒಂದು ಗದ್ದೆಯಲ್ಲಿ ಹೂಟಿ ಮಾಡುತ್ತಿದ್ದ ಓರ್ವ ಪುಣ್ಯಾತ್ಮ ನನ್ನತ್ತ ಕಂಬಳಿ ಎಸೆದು, ಸ್ವಲ್ಪ ಬಚಾವು ಮಾಡಿದ. ನಾನು ಕಂಬಳಿ ಹೊದ್ದುಕೊಂಡು, ಅಲ್ಲೇ ಕುಳಿತೆ. ಮೊದಲಿಗೆ ೪ - ೫ ಹುಳ ಕಚ್ಚುವ ತನಕ, ದೇಹಕ್ಕೆ ಮೊಳೆ ಹೊಡೆದಂತಹ ನೋವು. ಆನಂತರ ಇಡೀ ದೇಹಕ್ಕೆ ಭಾರೀ ವಿದ್ಯುತ್ ಶಾಕ್ ಹೊಡೆದಂತಹ ಅನುಭವ.
ನನಗೆ ವಾಂತಿ ಬೇಧಿ ಶುರು ಆಯಿತು. ಡಾಕ್ಟರು ಒಂದೊಂದೇ ಕೊಂಡಿಗಳನ್ನು ದೇಹದಿಂದ ಚಿಮ್ಮಟ ಹಾಕಿ ಕಿತ್ತು, ಒಟ್ಟು 87 ಕೊಂಡಿಗಳನ್ನು ತೆಗೆದರು. ಸಾವು ಬದುಕಿನ ನಡುವೆ ಹೋರಾಟ ಮಾಡಿ, ಗೆದ್ದು ಬಂದೆ’ ಎಂದು, ಹುಲಿ ಕಡ್ಜುಳದಿಂದ ಕಚ್ಚಿಸಿಕೊಂಡವರು ತಮ್ಮ ಅನುಭವವನ್ನು ತೋಡಿಕೊಂಡಿದ್ದರು.
ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಹೆಚ್ಚಿನವರು ಆ ಗೂಡನ್ನು ಕೂಡಲೆ ತೆಗೆಸುವುದು ಒಳ್ಳೆಯದು, ಇಲ್ಲವಾದರೆ ಜೀವಕ್ಕೆ ಅಪಾಯವಿದೆ ಎಂದೇ ಬರೆದಿದ್ದರು. ಈ ಕೀಟಗಳ ಕುರಿತು ಇಂಟರ್‌ನೆಟ್‌ನಲ್ಲಿ ಹುಡುಕಿದೆ. ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ ೩೦ ಮಂದಿ ಇವುಗಳ ಕಡಿತದಿಂತ ಸಾಯುತ್ತಾರಂತೆ! ಚೀನಾದಲ್ಲೂ ವಾರ್ಷಿಕ ಸರಾಸರಿ ೫೦ ಜನ ಇವು ಗಳಿಂದ ಸಾಯುತ್ತಾರೆ. ಒಂದು ಗೂಡಿನಲ್ಲಿ 500ಕ್ಕೂ ಹೆಚ್ಚಿನ ಕೀಟಗಳಿರುತ್ತವೆ.
ಅವುಗಳ ಗೂಡಿಗೆ ತೊಂದರೆಯಾದರೆ, ಸಿಕ್ಕ ಸಿಕ್ಕವರಿಗೆ ಕಚ್ಚುವುದು ಅವುಗಳ ಗುಣ. ಮನೆ ಎದುರಿನ ಅಡಿಕೆ ಮರದಲ್ಲಿ ಹಬ್ಬಿದ್ದ ಕಾಳುಮೆಣಸಿನ ಬಳ್ಳಿಗೆ ತಮ್ಮ ಗೂಡನ್ನು ಅಂಟಿಸಿದ್ದ ಆ ಹುಲಿಕಡ್ಜುಳಗಳ ಹಾರಾಟವನ್ನು ಗಮನಿಸತೊಡಗಿದೆ. ಮರದ ತೊಗಟೆಯನ್ನು, ತಮ್ಮ ಎಂಜಲಿನಿಂದ ಅಂಟಿಸುತ್ತಾ, ಗೂಡಿನ ಗಾತ್ರವನ್ನು ನಿಧಾನವಾಗಿ ವೃದ್ಧಿ ಮಾಡುವುದರಲ್ಲಿ ಮಗ್ನವಾಗಿದ್ದವು.
ಹತ್ತಿರ ನಿಂತು ನೋಡುವುದರಲ್ಲಿ ಯಾವ ಅಪಾಯವೂ ಇಲ್ಲ. ಅವಷ್ಟಕ್ಕೆ ಅವು ಹಾರಾಡಿ ಕೊಂಡು, ಸುತ್ತಲಿನ ಪರಿಸರದಲ್ಲಿ ಒಂದಾಗಿ, ತಮ್ಮ ಜೀವನಚಕ್ರವನ್ನು ಮುಂದುವರಿಸಿ ಕೊಂಡು ಬರುತ್ತಿರುವ ಪುಟಾಣಿ ಕೀಟಗಳು. ಅಕಸ್ಮಾತ್ ರೊಚ್ಚಿಗೆದ್ದು, ಹತ್ತಿರ ಸುಳಿದ ಮನುಷ್ಯ ಅಥವಾ ಪ್ರಾಣಿಗಳಿಗೆ ಕಚ್ಚಿದರೆ ಮಾತ್ರ ಅಪಾಯ ಸಂಭಾವ್ಯತೆ.
ಈ ಮಧ್ಯೆ ಚಿನ್ನಪ್ಪ ಫೋನ್ ಮಾಡಿದ್ದ. ನಾಲ್ಕಾರು ದಿನ ಅಕೇಶಿಯಾ ತೋಪು ಕಡಿಯುವ ಕೆಲಸಕ್ಕೆ ಹೋಗ್ತಿದೀನಿ, ಪುರಸೊತ್ತು ಮಾಡಿಕೊಂಡು, ಮನೆ ಹತ್ತಿರ ಬರ್ತೀನಿ, ಕತ್ತಲಾದ ಮೇಲೆಯೇ ಹುಲಿ ಕಡ್ಜುಳದ ಗೂಡು ತೆಗೆಯಲು ಸಾಧ್ಯ ಅಂದ.
ಪ್ರತಿ ದಿನ ಈ ರೀತಿ ಅಕೇಶಿಯಾ ಮರ ಕಡಿಯುವುದರಿಂದ ಅವನಿಗೆ ಒಳ್ಳೆಯ ಸಂಬಳ ದೊರಕುತ್ತಿತ್ತು; ಹಲವರು ಬೈಕ್ ಏರಿ, ಅಕೇಶಿಯಾ ತೋಪಿನ ಜಾಗಕ್ಕೆ ಹೋಗಿ, ಅದನ್ನು ಕಡಿಯುವುದನ್ನು ಉದ್ಯೋಗ ಮಾಡಿಕೊಂಡಿದ್ದರು. ಅಕೇಶಿಯಾ ಮರ ಕಡಿಯುವುದು ನಮ್ಮ ಕಡೆ ಕೆಲವು ಕೃಷಿಕರಿಗೆ, ಈಗ ಒಂದು ಪ್ರಮುಖ ಮೂಲವಾಗಿ ಬಿಟ್ಟಿದೆ.
ಒಂದೆರಡು ದಿನಗಳಲ್ಲಿ, ನಾನು ತುರ್ತಾಗಿ ಬೆಂಗಳೂರಿಗೆ ಹೊರಡಬೇಕಾಯ್ತು. ರಾತ್ರಿ ಬಸ್ ಏರಿ ಬೆಂಗಳೂರಿಗೆ ಬಂದೆ. ಅಗತ್ಯ ಕೆಲಸದಲ್ಲಿ ಮುಳುಗಿ ಹೋದೆ; ಹುಲಿ ಕಡ್ಜುಳಗಳ ಗೂಡಿನ ವಿಚಾರ ಮರೆತೇ ಹೋಗಿತ್ತು. ಒಂದು ಸಂಜೆ ಎಂಟು ಗಂಟೆಯ ಸಮಯ. ಮೊಬೈಲ್ ಗಂಟೆ ಬಾರಿಸಿತು.
ಚಿನ್ನಪ್ಪ ಫೋನ್ ಮಾಡಿದ್ದ. ‘ಹ್ವಾಯ್, ಅಯ್ಯ, ಇವತ್ ನಿಮ್ಮ ಮನೆ ಹತ್ರ ಬಂದಿದ್ದೆ. ಕತ್ತಲಾಗಿತ್ತು. ನೀವು ಇರಲಿಲ್ಲ. ನೀವು ಹೇಳಿದ್ರಲ್ಲ, ಆ ಕಡ್ಜುಳನ ಗೂಡಿನ ವಿಚಾರ. ಅರ್ಧ ಲೀಟರ್ ಡೀಸಲ್ ತಂದು, ಬಟ್ಟೆಯನ್ನು ಅದ್ದಿ, ಒಂದು ಕೋಲಿನ ತುದಿಗೆ ಆ ಬಟ್ಟೆ ಕಟ್ಟಿ, ಗೂಡಿಗೆ ಬೆಂಕಿ ತಾಗಿಸಿದೆ. ಬರ್ ಅಂತ ಉರಿದು ಹೋಯ್ತು. ಇನ್ ಅದರ ಹೆದರಿಕೆ ಇಲ್ಲ.’ ಏನೆಂದು ಉತ್ತರಿಸುವುದು ಎಂದು ತಕ್ಷಣ ಹೊಳೆಯದೇ, ಅವನ ಮಾತುಗಳನ್ನು ಪೂರ್ತಿ ಕೇಳಿಸಿಕೊಂಡು, ಫೋನ್ ಡಿಸ್‌ಕನೆಕ್ಟ್ ಮಾಡಿದೆ.