ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Sadhanashree Column: ಮಿತಿ ಮೀರಿದರೆ ಉಪ್ಪು, ಬೇಗ ಆವರಿಸುವುದು ಮುಪ್ಪು

ಆಯುರ್ವೇದದ ದೃಷ್ಟಿಯಲ್ಲಿ ಆಹಾರವು ಕೇವಲ ಹಸಿವು ನಿವಾರಣೆಯ ಸಾಧನವಲ್ಲ; ಅದು ದೇಹ, ಇಂದ್ರಿಯಗಳು ಮತ್ತು ಮನಸ್ಸಿನ ಸಮತೋಲನವನ್ನು ಸಂರಕ್ಷಿಸುವ ಸೂಕ್ಷ್ಮ ಹಾಗೂ ಶಕ್ತಿಶಾಲಿ ಉಪಾಯವಾಗಿದೆ. ಈ ಕಾರಣದಿಂದಲೇ ಆಯುರ್ವೇದದಲ್ಲಿ ‘ಷಡ್ರಸ ಭೋಜನ’ ಎಂಬ ತತ್ತ್ವಕ್ಕೆ ವಿಶಿಷ್ಟ ಮಹತ್ವ ನೀಡಲಾಗಿದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಆಯುರ್ವೇದದ ದೃಷ್ಟಿಯಲ್ಲಿ ಆಹಾರವು ಕೇವಲ ಹಸಿವು ನಿವಾರಣೆಯ ಸಾಧನವಲ್ಲ; ಅದು ದೇಹ, ಇಂದ್ರಿಯಗಳು ಮತ್ತು ಮನಸ್ಸಿನ ಸಮತೋಲನವನ್ನು ಸಂರಕ್ಷಿಸುವ ಸೂಕ್ಷ್ಮ ಹಾಗೂ ಶಕ್ತಿಶಾಲಿ ಉಪಾಯವಾಗಿದೆ. ಈ ಕಾರಣದಿಂದಲೇ ಆಯುರ್ವೇದದಲ್ಲಿ ‘ಷಡ್ರಸ ಭೋಜನ’ ಎಂಬ ತತ್ತ್ವಕ್ಕೆ ವಿಶಿಷ್ಟ ಮಹತ್ವ ನೀಡಲಾಗಿದೆ.

ಮಧುರ (ಸಿಹಿ), ಅಮ್ಲ (ಹುಳಿ), ಲವಣ (ಉಪ್ಪು), ಕಟು (ಖಾರ), ತಿಕ್ತ (ಕಹಿ) ಮತ್ತು ಕಷಾಯ(ಒಗರು)- ಇವುಗಳು ಆಯುರ್ವೇದದಲ್ಲಿ ವಿವರಿಸಲ್ಪಟ್ಟ ಆರು ರಸಗಳು. ಈ ಎಲ್ಲಾ ರಸಗಳ ಸಮರ್ಪಕ ಸಂಯೋಜನೆಯಿರುವ ಆಹಾರವನ್ನೇ ಪೂರ್ಣ, ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದೆ. ಆಯುರ್ವೇದಾಚಾರ್ಯರು ‘ಏಕರಸ ಅಭ್ಯಾಸ’ವನ್ನು- ಅಂದರೆ ಒಂದೇ ರಸದ ಅಧಿಕ ಹಾಗೂ ನಿರಂತರ ಸೇವನೆಯನ್ನು ‘ದೌರ್ಬಲ್ಯಕರ’ವೆಂದು ಸ್ಪಷ್ಟವಾಗಿ ವರ್ಣಿಸಿದ್ದಾರೆ.

ಒಂದೇ ರಸದ ಪ್ರಾಬಲ್ಯವು ದೇಹಧಾತುಗಳ ಸಮರ್ಪಕ ಪೋಷಣೆಯನ್ನು ಅಡ್ಡಿಪಡಿಸಿ, ದೋಷ ವೈಷಮ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ಷಡ್ರಸೋಪೇತ ಭೋಜನ- ಆರು ರಸ ಗಳನ್ನೂ ಒಳಗೊಂಡ ಆಹಾರ ಪದ್ಧತಿಯನ್ನು ಶ್ರೇಷ್ಠವೆಂದು ಘೋಷಿಸಲಾಗಿದೆ.

ಷಡ್ರಸಗಳ ಪ್ರಮಾಣದಲ್ಲಿಯೂ ಆಯುರ್ವೇದವು ಸ್ಪಷ್ಟವಾದ ಕ್ರಮವನ್ನು ಸೂಚಿಸುತ್ತದೆ. ಭೋಜನದಲ್ಲಿ ಮಧುರ ರಸವು ಪ್ರಧಾನವಾಗಿರಬೇಕು; ನಂತರ ಅಮ್ಲ, ಲವಣ, ಕಟು, ತಿಕ್ತ ರಸಗಳು ಕ್ರಮೇಣ ಕಡಿಮೆಯಾಗಬೇಕು. ಕಷಾಯ ರಸವು ಆರನೇ ಸ್ಥಾನದಲ್ಲಿದ್ದು ಅಲ್ಪ ಪ್ರಮಾಣದ ಉಪಯುಕ್ತವೆಂದು ಹೇಳಲಾಗಿದೆ. ಆದ್ದರಿಂದ ಪ್ರತಿದಿನವೂ ಈ ರೀತಿ ನಮ್ಮ ಆಹಾರವನ್ನು ಸಂಯೋಜಿಸಿ, ಆರು ರಸಗಳನ್ನೂ ದೇಹಕ್ಕೆ ಲಭ್ಯವಾಗುವಂತೆ ಮಾಡುವ ಪ್ರಯತ್ನ ಅಗತ್ಯ.

ಏಕೆಂದರೆ ಪ್ರತಿಯೊಂದು ರಸವೂ ದೇಹದಲ್ಲಿ ತನ್ನದೇ ಆದ ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸು ತ್ತಿದ್ದು, ಅವುಗಳ ಸಮತೋಲನವೇ ನಿಜವಾದ ಆರೋಗ್ಯದ ಆಧಾರವಾಗಿದೆ. ಈ ತತ್ತ್ವವನ್ನು ನಾವು ಭಾರತೀಯ ಪಾಕಶಾಸ್ತ್ರ- ವಿಶೇಷವಾಗಿ ದಕ್ಷಿಣ ಭಾರತದ ಸಾಂಪ್ರದಾಯಿಕ ಪಾರಂಪರಿಕ ಅಡುಗೆ ಗಳಲ್ಲಿ ವಿಶಿಷ್ಟವಾಗಿ ಕಾಣಬಹುದು.

ಇದನ್ನೂ ಓದಿ: Dr Sadhanashree Column: ದಿನನಿತ್ಯದ ಬೇಳೆಗಳು: ಆಯುರ್ವೇದ ಹೇಳೋದೇನು ?

ಉದಾಹರಣೆಗೆ ನಮ್ಮೆಲ್ಲರ ಅಡುಗೆಮನೆಯಲ್ಲಿ ಪ್ರತಿದಿನವೂ ತಯಾರಾಗುವ ಪದಾರ್ಥ- ಹುಳಿ/ ಸಾಂಬಾರ್. ಸರಳವಾಗಿ ಕಾಣುವ ಈ ದಕ್ಷಿಣ ಭಾರತೀಯ ವ್ಯಂಜನವೇ ಆಯುರ್ವೇದದ ಷಡ್ರಸ ಭೋಜನದ ಉತ್ತಮ ಉದಾಹರಣೆ. ಸಾಂಬಾರಿನಲ್ಲಿ ಬಳಸುವ ಬೆಲ್ಲ, ಬೇಳೆ, ತುಪ್ಪ, ಈರುಳ್ಳಿ ಅಥವಾ ಕೆಲವು ತರಕಾರಿಗಳು ನೀಡುವ ಸಹಜ ಸಿಹಿತನದಿಂದ ಮಧುರ ರಸ ದೊರೆಯುತ್ತದೆ.

ಹುಣಸೆಹಣ್ಣು ಅಥವಾ ನೆಲ್ಲಿಕಾಯಿ ಸೇರಿಸುವುದರಿಂದ ಅಮ್ಲರಸ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಉಪ್ಪು ಸೇರಿಸುವ ಮೂಲಕ ಲವಣರಸ ಸಮರ್ಪಕವಾಗಿ ಪೂರೈಸಲ್ಪಡುತ್ತದೆ. ಇದಲ್ಲದೆ, ಮೆಣಸಿನ ಕಾಯಿ, ಮೆಣಸು, ಶುಂಠಿ ಮುಂತಾದ ಮಸಾಲೆಗಳು ಕಟುರಸವನ್ನು ಒದಗಿಸಿದರೆ. ಮೆಂತ್ಯೆಕಾಳು, ಕರಿಬೇವು ಹಾಗೂ ಕೆಲ ತರಕಾರಿಗಳಲ್ಲಿರುವ ಸಣ್ಣ ಕಹಿತನವು ತಿಕ್ತ ರಸವನ್ನು ಪ್ರತಿನಿಧಿಸುತ್ತದೆ.

ಅಂತಿಮವಾಗಿ, ತೊಗರಿಬೇಳೆ ಹಾಗೂ ಕೆಲವು ತರಕಾರಿಗಳಲ್ಲಿರುವ ಕಷಾಯರಸವು ಅಲ್ಪ ಪ್ರಮಾಣ ದಲ್ಲಿ ಸಾಂಬಾರಿನಲ್ಲಿ ಅಡಗಿಕೊಂಡಿರುತ್ತದೆ. ಈ ರೀತಿ, ಅರಿವಿಲ್ಲದೇ ತಯಾರಿಸುವ ಸಾಂಬಾರೇ ದೇಹಕ್ಕೆ ಅಗತ್ಯವಾದ ಎಲ್ಲಾ ಆರು ರಸಗಳನ್ನು ಸಮತೋಲನದಿಂದ ಒದಗಿಸುವ ಪರಿಪೂರ್ಣ ಆಹಾರವಾಗಿದ್ದು, ನಮ್ಮ ಪಾರಂಪರಿಕ ಅಡುಗೆ ಪದ್ಧತಿಗಳ ಹಿಂದೆ ಅಡಗಿರುವ ಆಳವಾದ ಆಯುರ್ವೇದ ಜ್ಞಾನವನ್ನು ನಮಗೆ ನೆನಪಿಸುತ್ತದೆ.

ನೆನಪಿರಲಿ ಈ ರೀತಿಯ ಷಡ್ರಸಗಳ ಸಂಯೋಜನೆಯು ಕೇವಲ ಬಾಯಿ ರುಚಿಗಲ್ಲ, ಬದಲಿಗೆ ಸ್ವಾಸ್ಥ್ಯ ಸಂರಕ್ಷಣೆಗೆ. ಸ್ನೇಹಿತರೆ, ಈ ಷಡ್ರಸಗಳನ್ನು ಭೋಜನದಲ್ಲಿ ಸೇರಿಸಬೇಕಾದ ಅಗತ್ಯದ ಹಿಂದಿನ ಕಾರಣವನ್ನೂ ಆಯುರ್ವೇದದಲ್ಲಿ ಅತ್ಯಂತ ಸೂಕ್ಷ್ಮವಾಗಿ ವಿವರಿಸಲಾಗಿದೆ. ಪ್ರತಿಯೊಂದು ರಸಕ್ಕೂ ದೇಹದ ಮೇಲೆ ನಿರ್ದಿಷ್ಟವಾದ ಕ್ರಿಯೆಯಿದ್ದು, ಅವು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ದೇಹದ ಆರೋಗ್ಯವನ್ನು ರಕ್ಷಿಸಿ, ಸಮತೋಲನವನ್ನು ಕಾಪಾಡುತ್ತವೆ.

salt

ಮಧುರ ರಸವು ಪೋಷಕ ಸ್ವಭಾವದ್ದಾಗಿದ್ದು, ದೇಹದ ಧಾತುಗಳನ್ನು ವೃದ್ಧಿಸಿ ಬಲವನ್ನು ನೀಡು ತ್ತದೆ. ಇದು ದೇಹದ ಸ್ಥೂಲತೆ ಹಾಗೂ ಸ್ಥೈರ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಧಾತುಗಳ ಪೋಷಣೆಯನ್ನು ಮಾಡುತ್ತದೆ.

ಅಮ್ಲರಸವು ಆಹಾರದ ಮೇಲೆ ಆಸಕ್ತಿಯನ್ನು ಹೆಚ್ಚಿಸಿ ಜಠರಾಗ್ನಿಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಪ್ರೇರೇಪಿಸಿ ಆಹಾರದ ಸಮರ್ಪಕ ಪಚನಕ್ಕೆ ಸಹಾಯಕವಾಗುತ್ತದೆ. ಲವಣ ರಸವು ಆಹಾರವನ್ನು ಮೃದುವಾಗಿಸಿ, ಅದರ ವಿಭಜನೆಯನ್ನು ಸುಲಭಗೊಳಿಸುವುದರ ಜತೆಗೆ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ.

ಕಟುರಸವು ಉತ್ತೇಜಕ ಸ್ವಭಾವzಗಿದ್ದು, ಜೀರ್ಣನಾಳದಲ್ಲಿ ವಿವಿಧ ಸ್ರಾವಗಳ ಸ್ರವಣೆಯನ್ನು ಹೆಚ್ಚಿಸುತ್ತದೆ. ಇದು ಅಗ್ನಿದೀಪನ ಮತ್ತು ಪಾಚನ ಗುಣಗಳನ್ನು ಹೊಂದಿದ್ದು, ಆಹಾರದ ಸರಿಯಾದ ಜೀರ್ಣಕ್ಕೆ ಸಹಾಯಕವಾಗಿದೆ. ತಿಕ್ತ ರಸವು ಜೀರ್ಣಕಾರಿಯಾಗಿದ್ದು, ತಂಪನ್ನೆರೆದು ಉಷ್ಣತೆಯನ್ನು ಶಮನ ಮಾಡುತ್ತದೆ. ಇದು ಇತರ ರಸಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ವೃದ್ಧಿಸಿ, ಸ್ರೋತಸ್ಸುಗಳನ್ನು ಶುದ್ಧಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಅಂತಿಮವಾಗಿ, ಕಷಾಯ ರಸವು ಸ್ತಂಭನ ಗುಣವನ್ನು ಹೊಂದಿದ್ದು, ಅತಿಯಾದ ಸ್ರಾವಗಳನ್ನು ನಿಯಂತ್ರಿಸುತ್ತದೆ. ಜೀರ್ಣನಾಳದಲ್ಲಿರುವ ಅತಿರೇಕದ ದ್ರವಾಂಶವನ್ನು ಶೋಷಿಸಿ, ನಾಳಗಳನ್ನು ಶುದ್ಧಗೊಳಿಸಿ ಸಮತೋಲನವನ್ನು ಕಾಪಾಡುವಲ್ಲಿ ಇದು ಸಹಾಯಕ. ಈ ರೀತಿಯಾಗಿ ಪ್ರತಿಯೊಂದು ರಸವೂ ತನ್ನದೇ ಆದ ವಿಶಿಷ್ಟ ಕಾರ್ಯವನ್ನು ನಿರ್ವಹಿಸುತ್ತಿದ್ದು, ಎಲ್ಲ ರಸಗಳ ಸಮತೋಲನವೇ ದೇಹದ ಸಮಗ್ರ ಆರೋಗ್ಯ ಮತ್ತು ಸ್ಥೈರ್ಯದ ಮೂಲವಾಗಿದೆ.

ಇಂದಿನ ಲೇಖನದಲ್ಲಿ ಸ್ವಲ್ಪ ಲವಣ ರಸ- ಅಂದರೆ ನಾವು ಸೇವಿಸುವ ಉಪ್ಪಿನ ಬಗ್ಗೆ ಗಮನ ಹರಿಸೋಣ. ಆಯುರ್ವೇದದಲ್ಲಿ ಲವಣ ರಸಕ್ಕೆ ವಿಶೇಷ ಸ್ಥಾನವಿದ್ದು, ಅದು ಕೇವಲ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರವಲ್ಲದೆ ಜೀರ್ಣಕ್ರಿಯೆ, ದ್ರವಸಮತೋಲನ ಮತ್ತು ದೇಹದ ಕಾರ್ಯ ಸಾಧಕತೆಗೆ ಅವಶ್ಯಕವೆಂದು ವಿವರಿಸಲಾಗಿದೆ.

ಮೊದಲಿಗ ಲವಣ ರಸದ ಗುಣ ಮತ್ತು ದೇಹದ ಮೇಲಿನ ಪ್ರಭಾವವನ್ನು ಗಮನಿಸೋಣ: ಆಚಾರ್ಯ ಚರಕರ ಪ್ರಕಾರ ಲವಣ ರಸವು ದೇಹದಲ್ಲಿರುವ ಬಂಧ, ಸಂಘಾತ (ಅಡ್ಡಿ ಮತ್ತು ಸಂಚಯ)ಗಳನ್ನು ನಿವಾರಿಸಿ ಮಾರ್ಗಗಳನ್ನು ಶುದ್ಧಗೊಳಿಸುತ್ತದೆ. ಲವಣ ರಸವು ವಾತಶಾಮಕ ವಾಗಿದ್ದು, ಲಾಲಾಸ್ರಾವವನ್ನು ಹೆಚ್ಚಿಸುತ್ತದೆ, ಕಫವನ್ನು ದ್ರವೀಕರಿಸುತ್ತದೆ ಹಾಗೂ ಸ್ರೋತಸ್ಸು ಗಳನ್ನು ಶುದ್ಧಗೊಳಿಸುತ್ತದೆ.

ಇದು ದೇಹದ ಎಲ್ಲ ಅಂಗಗಳನ್ನು ಮೃದುಗೊಳಿಸುತ್ತದೆ ಮತ್ತು ಆಹಾರಕ್ಕೆ ರುಚಿಯನ್ನು ನೀಡು ತ್ತದೆ. ಆದ್ದರಿಂದ ಲವಣವನ್ನು ಪೋಷಣೆಗೆ ಅಗತ್ಯವಾದ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಲವಣ ರಸವು ಗುರು (ಜೀರ್ಣಕ್ಕೆ ಹೆಚ್ಚು ಸಮಯ ಬೇಕು), ಸ್ನಿಗ್ಧ ಅಥವಾ ಉಷ್ಣ ಗುಣಗಳನ್ನು ಹೊಂದಿದೆ ಎಂದು ಕೂಡ ಹೇಳಲಾಗಿದೆ.

ವಾಗ್ಭಟಾಚಾರ್ಯರ ಪ್ರಕಾರ, ಲವಣ ರಸವು ದೇಹದ ಅಂಗಗಳು ಹಾಗೂ ಧಾತುಗಳಲ್ಲಿ ಶೋಷಣೆ ಯನ್ನು ಉಂಟುಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಸ್ರಾವಪ್ರವೃತ್ತಿಯನ್ನು ಉತ್ತೇಜಿಸುವುದರ ಜತೆಗೆ ತೀಕ್ಷ್ಣ ಹಾಗೂ ಭೇದನ ಗುಣಗಳನ್ನು ಹೊಂದಿದೆ. ನಾಲಿಗೆಯಲ್ಲಿ ರುಚಿಗ್ರಹಣಶಕ್ತಿಯನ್ನು ಹೆಚ್ಚಿಸಿ, ಧಾತುಗಳ ವಿಭಜನೆ ಮತ್ತು ವಿಚ್ಛೇದನಕ್ಕೆ ಸಹಕಾರ ನೀಡುತ್ತದೆ.

ದೋಷಗಳ ಮೇಲೆ ಲವಣ ರಸದ ಪರಿಣಾಮವನ್ನು ನೋಡುವುದಾದರೆ ಲವಣ ರಸವು ಅಮ್ಲ ರಸದಂತೆ ಕಾರ್ಯನಿರ್ವಹಿಸಿ, ಕಫ ಮತ್ತು ಪಿತ್ತವನ್ನು ವೃದ್ಧಿಪಡಿಸಿ, ವಾತವನ್ನು ಶಮನ ಗೊಳಿಸುತ್ತದೆ.

ಲವಣ ರಸದ ಅತಿಸೇವನೆಯ ಪರಿಣಾಮಗಳು ಹೀಗಿವೆ- ಲವಣ ರಸದ ಅತಿಸೇವನೆಯು ಪಿತ್ತವನ್ನು ಪ್ರಚೋದಿಸಿ ರಕ್ತಧಾತುವನ್ನು ವೃದ್ಧಿಪಡಿಸುತ್ತದೆ. ಇದರಿಂದ ತೃಷ್ಣೆ (ಅತಿಯಾದ ಬಾಯಾರಿಕೆ), ತಲೆಸುತ್ತು, ಪ್ರಜ್ಞೆ ತಪ್ಪುವುದು, ದೇಹದಲ್ಲಿ ಉರಿಯ ಅನುಭವ, ಮಾಂಸಧಾತುವಿನ ಶೋಷಣೆ ಮತ್ತು ದೇಹದ ಶಿಥಿಲತೆ ಉಂಟಾಗುತ್ತದೆ.

ಕುಷ್ಠ (ವಿವಿಧ ರೀತಿಯ ಚರ್ಮರೋಗ), ವಿಷಪ್ರಭಾವ, ಶೋಫ (ಊತ), ಗುಳ್ಳೆ, ದಂತಪತನ, ನಪುಂಸಕತ್ವ, ಇಂದ್ರಿಯಗಳ ಕಾರ್ಯಕ್ಷಮತೆಯ ಕುಂದು, ಕೂದಲಿನ ಬಿಳಿತನ ಮತ್ತು ಉದುರುವಿಕೆ ಕಾಣಿಸಬಹುದು. ಚರ್ಮ ಸುಕ್ಕುಗಟ್ಟುವಿಕೆ ಸೇರಿ ಮುಪ್ಪಿನ ಎಲ್ಲ ಲಕ್ಷಣಗಳೂ ಬೇಗ ಕಾಣಿಸಿಕೊಳ್ಳು ತ್ತದೆ.

ಅಲ್ಲದೆ ಅಮ್ಲಪಿತ್ತ, ವಿಸರ್ಪ(ಸರ್ಪಸುತ್ತು), ವಾತರಕ್ತ (ಸಂಧಿಯ ವಿಕಾರ), ವಿಚರ್ಚಿಕಾ (ಚರ್ಮದ ತೊಂದರೆ) ಮುಂತಾದ ರಕ್ತ ಮತ್ತು ಪಿತ್ತ ವಿಕಾರ ರೋಗಗಳು ಉಂಟಾಗುತ್ತವೆ. ಹಾಗಾಗಿ ಉಪ್ಪನ್ನು ಹಿತಮಿತವಾಗಿ ಬಳಸುವುದು ಸದಾ ಕ್ಷೇಮ.

ಆಯುರ್ವೇದ ಗ್ರಂಥಗಳಲ್ಲಿ 5 ರೀತಿಯ ಲವಣವನ್ನು ಉಲ್ಲೇಖಿಸಲಾಗಿದೆ. ಸೈಂಧವ ಲವಣ, ಸಾಮುದ್ರ ಲವಣ, ಸೌವರ್ಚಲ ಲವಣ, ವಿಡ ಲವಣ, ಮತ್ತು ಔದ್ಭಿದ ಲವಣ- ಈ ಪಂಚಲವಣಗಳು ವಿಭಿನ್ನ ಗುಣಧರ್ಮಗಳು ಮತ್ತು ದೇಹದ ಮೇಲೆ ವಿಭಿನ್ನ ಪರಿಣಾಮಗಳನ್ನು ಹೊಂದಿವೆ.

1. ಸೈಂಧವ ಲವಣ: ಹಿಮಾಲಯದ ಸಿಂಧ್ ಪ್ರದೇಶದ ಶಿಲೆಗಳಿಂದ ತಯಾರಿಸುವ ಸೈಂಧವ ಲವಣವು (ಶಿಲಾಲವಣ) ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದ್ದು, ಲಘು, ಸ್ನಿಗ್ಧ ಮತ್ತು ಶೀತ ವೀರ್ಯ ಗುಣಗಳನ್ನು ಹೊಂದಿದೆ. ಇದು ಪಿತ್ತವನ್ನು ಹೆಚ್ಚಿಸದೇ ಜೀರ್ಣಕ್ರಿಯೆಯನ್ನು ಸುಧಾರಿಸು ತ್ತದೆ. ವೃಷ್ಯ ಮತ್ತು ತ್ರಿದೋಷಶಾಮಕವಾಗಿದ್ದು ಪ್ರತಿದಿನದ ಉಪಯೋಗಕ್ಕೆ ಅತ್ಯಂತ ಸೂಕ್ತ ವಾಗಿದೆ. ಇವುಗಳು ನೇತ್ರಕ್ಕೂ ಹಿತ.

ಹಿಮಾಲಯನ್ ಪಿಂಕ್ ಸಾಲ್ಟ್ (ಸೈಂಧವ ಲವಣದ ಪ್ರಕಾರ) ಬಗ್ಗೆ ಒಂದು ವಿಶೇಷ ಟಿಪ್ಪಣಿ ಹೀಗಿದೆ: ಹಿಮಾಲಯ ಪ್ರದೇಶದಿಂದ ಲಭ್ಯವಾಗುವ ಹಿಮಾಲಯನ್ ಪಿಂಕ್ ಸಾಲ್ಟ್, ಆಯುರ್ವೇದದಲ್ಲಿ ವರ್ಣಿಸಲ್ಪಟ್ಟ ಸೈಂಧವ ಲವಣದ ಗುಣವನ್ನು ಹೊಂದಿದೆ. ಇದು ಪಿತ್ತವನ್ನು ಉಗ್ರ ಗೊಳಿಸದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ‌

ಸಾಮಾನ್ಯವಾಗಿ ಇದು ತೃಷ್ಣೆಯನ್ನು ಹೆಚ್ಚಿಸುವುದಿಲ್ಲ ಮತ್ತು ಕಫವನ್ನು ಅತಿಯಾಗಿ ವೃದ್ಧಿಪಡಿ ಸುವ ಗುಣವೂ ಕಡಿಮೆ. ಆದ್ದರಿಂದ ದೈನಂದಿನ ಆಹಾರದಲ್ಲಿ ಮಿತ ಪ್ರಮಾಣದಲ್ಲಿ ಉಪಯೋಗಿ ಸಲು ಇದು ಅತ್ಯಂತ ಸೂಕ್ತವಾಗಿದೆ.

ಮುಖ್ಯ ಸೂಚನೆ- ಹಿಮಾಲಯನ್ ಪಿಂಕ್ ಸಾಲ್ಟ್ (ಸೈಂಧವ ಲವಣ) ಆಯುರ್ವೇದದ ದೃಷ್ಟಿ ಯಿಂದ ಶ್ರೇಷ್ಠವಾದ ಲವಣವಾಗಿದ್ದರೂ, ಒಂದು ವಿಷಯವನ್ನು ಗಮನದಲ್ಲಿಡುವುದು ಅಗತ್ಯ. ಸಾಮಾನ್ಯವಾಗಿ ಬಳಸುವ ಐಯೋಡೈಸ್ಡ್ ಟೇಬಲ್ ಸಾಲ್ಟ್‌ನಂತೆ ಹಿಮಾಲಯನ್ ಪಿಂಕ್ ಸಾಲ್ಟ್‌ ನಲ್ಲಿ ಸೇರಿಸಲಾದ ಐಯೋಡಿನ್ ಇರುವುದಿಲ್ಲ.‌

ಆದ್ದರಿಂದ ಆಹಾರದಲ್ಲಿ ಹಾಲು, ಮೊಟ್ಟೆ, ಸಮುದ್ರ ಆಹಾರಗಳು ಅಥವಾ ಇತರ ಐಯೋಡಿನ್ ಸಮೃದ್ಧ ಪದಾರ್ಥಗಳ ಕೊರತೆಯಿದ್ದಲ್ಲಿ, ಕೇವಲ ಹಿಮಾಲಯನ್ ಪಿಂಕ್ ಸಾಲ್ಟ್ ಮೇಲೆಯೇ ಅವಲಂಬಿಸುವುದು ಐಯೋಡಿನ್ ಕೊರತೆಯ ಅಪಾಯವನ್ನು ಹೆಚ್ಚಿಸಬಹುದು ಎಂಬ ವಿವರ ವಿದೆ.

2. ಸಾಮುದ್ರ ಲವಣ (ಸಮುದ್ರ ಉಪ್ಪು): ಇದು ಗುರು ಮತ್ತು ಸ್ವಲ್ಪ ಉಷ್ಣ ಗುಣ ಹೊಂದಿದ್ದು, ಮಿತ ಪ್ರಮಾಣದಲ್ಲಿ ಉಪಯೋಗಿಸಿದರೆ ದೇಹದ ದ್ರವಸಮತೋಲನಕ್ಕೆ ಸಹಕಾರಿ. ಇದು ವಾತಶಾಮಕ.

3. ಸೌವರ್ಚಲ (ಚೌವರ್ಚಲ ಕಾಲಾ ನಮಕ್): ಈ ಲವಣವು ಉಷ್ಣ, ಲಘು, ಸೂಕ್ಷ್ಮ ಮತ್ತು ಸ್ನಿಗ್ಧ, ಅಗ್ನಿದೀಪಕ ಮತ್ತು ರೋಚಕ ಗುಣ ಹೊಂದಿದ್ದು, ಅರುಚಿ, ಶೂಲ ಹಾಗೂ ಜೀರ್ಣಮಾಂದ್ಯದಲ್ಲಿ ಉಪಯುಕ್ತವಾಗಿದೆ.

4. ವಿಡ ಲವಣ (ಬಿರಿಯಾ ನಮಕ್): ಇದು ಉಷ್ಣಗುಣಯುಕ್ತವಾಗಿದ್ದು, ವಾತಶಮನದಲ್ಲಿ ಸಹಾಯಕ. ಇದು ವಿಬಂಧ, ಶೂಲ ಮತ್ತು ವಾತಾನುಲೋಮನದಲ್ಲಿ ಸಹಾಯಕಾರಿ.

5. ಔದ್ಭಿದ ಲವಣ (ಖರಿಯಾ ನಮಕ್): ಇದು ಭೂಮಿಯಿಂದ ಲಭ್ಯವಾಗುವ ಲವಣವಾಗಿದ್ದು, ಜೀರ್ಣಕ್ಕೆ ಸ್ವಲ್ಪ ಜಡ ದೀಪನ ಮತ್ತು ಪಾಚನ ಗುಣಗಳನ್ನು ಹೊಂದಿದೆ. ಈ ಪಂಚಲವಣಗಳ ಸಮಚಿತ್ತ ಹಾಗೂ ವಿವೇಕಪೂರ್ಣ ಉಪಯೋಗವೇ ಆರೋಗ್ಯಕರ ಆಹಾರ ಪದ್ಧತಿಯ ಮೂಲ‌ ವಾಗಿದ್ದು, ಲವಣವನ್ನು ಔಷಧದಂತೆ ಉಪಯೋಗಿಸುವ ಆಯುರ್ವೇದದ ಆಳವಾದ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ.

ಈ ಎಲ್ಲ ವಿವರಣೆಗಳನ್ನು ಗಮನಿಸಿದಾಗ, ಆಯುರ್ವೇದವು ಆಹಾರವನ್ನು ಕೇವಲ ರುಚಿಯ ದೃಷ್ಟಿ ಯಿಂದ ಮಾತ್ರವಲ್ಲ, ಅದರ ಗುಣ, ಪ್ರಮಾಣ ಮತ್ತು ಪರಿಣಾಮಗಳ ಆಧಾರದ ಮೇಲೆ ಸೂಕ್ಷ್ಮವಾಗಿ ನಿರೂಪಿಸಿರುವುದನ್ನು ಅರಿಯಬಹುದು. ಷಡ್ರಸ ಭೋಜನವಾಗಲಿ ಅಥವಾ ಪಂಚಲವಣಗಳ ವಿವೇಕಪೂರ್ಣ ಉಪಯೋಗವಾಗಲಿ- ಇವುಗಳ ಉದ್ದೇಶ ದೇಹದ ಸಹಜ ಸಮತೋಲನವನ್ನು ಕಾಪಾಡುವುದೇ ಆಗಿದೆ.

ಪ್ರತಿದಿನದ ಆಹಾರದಲ್ಲಿ ಎಲ್ಲ ರಸಗಳನ್ನು ಯುಕ್ತ ಪ್ರಮಾಣದಲ್ಲಿ ಸೇರಿಸುವುದು ಮತ್ತು ಸರಿಯಾದ ಲವಣವನ್ನು ಸರಿಯಾದ ಸಂದರ್ಭದ ಬಳಸುವುದು ದೀರ್ಘಕಾಲೀನ ಆರೋಗ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಆಧುನಿಕ ಜೀವನಶೈಲಿಯಲ್ಲಿ ಆಹಾರದ ಆಯ್ಕೆಗಳು ಸೀಮಿತವಾಗುತ್ತಿರುವ ಸಂದರ್ಭ ದಲ್ಲಿ, ನಮ್ಮ ಪಾರಂಪರಿಕ ಆಯುರ್ವೇದ ಜ್ಞಾನವು ಸರಳವಾದರೂ ಆಳವಾದ ಮಾರ್ಗದರ್ಶನ ವನ್ನು ನೀಡುತ್ತದೆ.

ಆಹಾರವನ್ನು ಔಷಧದಂತೆ ಗೌರವಿಸಿ, ಜಾಗೃತಿಯಿಂದ ಆಯ್ಕೆ ಮಾಡಿ ಸೇವಿಸುವ ಮನೋಭಾವವೇ ನಿಜವಾದ ಆರೋಗ್ಯ ಸಂರಕ್ಷಣೆಯ ಆರಂಭವಾಗಿದ್ದು, ಆಯುರ್ವೇದ ಹೇಳುವ ‘ಆಹಾರವೇ ಮಹೌಷಧಿ’ ಎಂಬ ಸತ್ಯವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅನುಭವಿಸಲು ನೆರವಾಗುತ್ತದೆ.

ಡಾ. ಸಾಧನಾಶ್ರೀ ಪಿ,

View all posts by this author