ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

‘ಇದೋ ನೀವು ಏರಬೇಕಿರುವ ಬಸ್’ ಎಂದು ಹೇಳಿದ. ನಾನು ಅವನಿಗೆ ಧನ್ಯವಾದಗಳನ್ನು ಹೇಳಿದೆ. ಆದರೆ ಆತ ‘ನಿಮ್ಮ ಧನ್ಯವಾದ ಇರಲಿ, ಇದು ನನ್ನ ಕರ್ತವ್ಯ’ ಎಂಬಂತೆ ನಿರ್ಲಿಪ್ತ ನಾಗಿದ್ದ. ನನಗೆ ದಾರಿ ತೋರಿಸಲೆಂದು ಕೈಯಲ್ಲಿ ಲಗೇಜ್ ಹಿಡಿದು ಒಂದು ಮೈಲಿ ನಡೆದು ಬಂದ ಆತನ ನಡೆ ನನಗೆ ಅತಿ ವಿಶೇಷವಾಗಿ ಕಂಡಿತು.

ದಾರಿ ತಪ್ಪಿದರೆ ರಾಘವೇಂದ್ರ ಬೇಕಿಲ್ಲ !

ನಾನು ಜಪಾನಿನ ಬಗ್ಗೆ ಬರೆಯುತ್ತಿರುವುದನ್ನು ಓದಿದ ಸಂಧ್ಯಾರಾಣಿ ಎಂಬುವವರು ತಮ್ಮ ಒಂದು ಅನುಭವವನ್ನು ಕಳುಹಿಸಿಕೊಟ್ಟಿದ್ದರು. ಅವರು 4 ವರ್ಷ ಜಪಾನಿನ ಟೋಕಿಯೋ ಮತ್ತು ಕ್ಯೋಟೋದಲ್ಲಿ ಕೆಲಸ ಮಾಡಿ, 7 ತಿಂಗಳುಗಳ ಹಿಂದೆ ಬೆಂಗಳೂರಿಗೆ ವಾಪಸಾದ ವರು. ಅವರು ಹೇಳಿದ ಪ್ರಸಂಗ ನನಗೆ ಅಚ್ಚರಿ ಮೂಡಿಸಲಿಲ್ಲ. ಕಾರಣ ಅಂಥದೇ ಅನುಭವ ನನಗೂ ಆಗಿತ್ತು. ಆದರೂ ಅವರ ಅನುಭವ ನಿಮಗೆ ವಿಶೇಷವೆನಿಸಬಹುದು. ಹೀಗಾಗಿ ಹೇಳುತ್ತೇನೆ. ಒಮ್ಮೆ ಜಪಾನಿಗೆ ಹೋದ ಆರಂಭದ ದಿನಗಳಲ್ಲಿ ಪ್ರಯಾಣಿಸುತ್ತಿದ್ದಾಗ, ನನ್ನ ರಾತ್ರಿ ಪ್ರಯಾಣಕ್ಕೆ ನಿಗದಿಪಡಿಸಲಾದ ಬಸ್ ಅನ್ನು ಕಂಡುಹಿಡಿಯುವುದು ಕಷ್ಟವಾಗಿತ್ತು.

ಅದು ಎಲ್ಲಿ ನಿಲ್ಲುತ್ತದೆ ಎಂಬುದನ್ನು ಹುಡುಕುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಒಂದು ವೇಳೆ ನಾನು ಬಸ್ ತಪ್ಪಿಸಿಕೊಂಡಿದ್ದರೆ, ಮರುದಿನ ಕೆಲಸಕ್ಕೆ ಹೋಗುವುದನ್ನು ತಪ್ಪಿಸಿ ಕೊಳ್ಳುತ್ತಿದ್ದೆ. ಇದನ್ನು ಜಪಾನಿಯರು ಜಪ್ಪಯ್ಯ ಅಂದರೂ ಒಪ್ಪಿಕೊಳ್ಳುವುದಿಲ್ಲ.

ನೀವು ಯಾರನ್ನಾದರೂ ಭೇಟಿ ಮಾಡಲು ಅವರ ಸಮಯ ತೆಗೆದುಕೊಂಡರೆ, ಯಾವ ಕಾರಣಕ್ಕೂ ತಪ್ಪಿಸುವಂತಿಲ್ಲ. ಒಂದು ವೇಳೆ ತಪ್ಪಿಸಿದರೆ, ಅದನ್ನೇ ದೊಡ್ಡ ಅಪರಾಧ ಎಂಬಂತೆ ಪರಿಗಣಿಸುತ್ತಾರೆ. ಹೀಗಾಗಿ, ಹೇಗಾದರೂ ಮಾಡಿ ಮರುದಿನದ ಹೊತ್ತಿಗೆ ನಾನು ನಿಗದಿತ ಸಮಯ ಮತ್ತು ಸ್ಥಳದಲ್ಲಿ ಇರಲೇಬೇಕಿತ್ತು.

ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಅಚ್ಚರಿಯ ಸಂಗತಿಗಳು

ಆ ಸಮಯದಲ್ಲಿ ನಾನು ಬಸ್ ನಿಲ್ದಾಣಕ್ಕೆ ಹೇಗೆ ಹೋಗುವುದು ಎಂದು ಇಬ್ಬರನ್ನು ಕೇಳಿದೆ. ನನಗೆ ಜಪಾನಿ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಅವರಿಗೆ ನನ್ನ ಸಮಸ್ಯೆಯೇನು ಎಂದು ಹೇಳುವುದೇ ಕಷ್ಟವಾಯಿತು. ಒಂದಿಬ್ಬರಿಗೆ ನನ್ನ ಸಮಸ್ಯೆ ಏನು ಎಂಬುದು ಅರ್ಥವಾಯಿತು. ಆದರೆ ನನಗೆ ಅರ್ಥವಾಗುವ ಭಾಷೆಯಲ್ಲಿ ಹೇಳಲು ಅವರಿಗೆ ಆಗಲಿಲ್ಲ. ನನ್ನ ಭಾಷೆ ಅವರಿಗೆ, ಅವರ ಭಾಷೆ ನನಗೆ ಅರ್ಥವಾಗುತ್ತಿರಲಿಲ್ಲ.

ದುರ್ದೈವವೆಂದರೆ, ಯಾರಿಗೂ ನನಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಲು ಸಾಧ್ಯ ವಾಗಲಿಲ್ಲ. ಆದರೆ ಬಸ್ ಹೊರಡಲು ಕೆಲವೇ ನಿಮಿಷಗಳಿದ್ದವು. ಕೊನೆಗೆ, ಆಪದ್ಬಾಂಧ ವನಂತೆ ರೈಲ್ವೆ ಟಿಕೆಟ್ ಕಲೆಕ್ಟರ್ (ಟಿಸಿ) ಸಿಕ್ಕಿದ. ಅವನ ಕೈಯಲ್ಲಿ ಬ್ರೀಫ್‌ ಕೇಸ್ ಇತ್ತು; ಆತ 12-13 ಗಂಟೆ ಡ್ಯೂಟಿ ಮುಗಿಸಿ ಮನೆಗೆ ಹೊರಟಿದ್ದ. ನಾನು ಗಲಿಬಿಲಿ, ಗಾಬರಿಯಿಂದ ಅವನಲ್ಲಿಗೆ ಧಾವಿಸಿ ಸಮಸ್ಯೆಯನ್ನು ಅವಸರವಸರದಲ್ಲಿ ವಿವರಿಸಿದೆ. ನನಗೆ ಸರಿಯಾಗಿ ಮಾರ್ಗದರ್ಶನ ಮಾಡಬಹುದೇ ಎಂದು ಕೇಳಿದೆ. ಆತನ ಧಾವಂತ ಏನಿತ್ತೋ ಏನೋ, ಆತ ನನಗೆ ದಾರಿ ತೋರಿಸುವ ಅಥವಾ ಮಾರ್ಗದರ್ಶನ ಮಾಡುವ ಬದಲು ತನ್ನನ್ನು ಹಿಂಬಾ ಲಿಸುವಂತೆ ಹೇಳಿದ. ನನ್ನ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾನಾ, ಇಲ್ಲವಾ ಎಂಬ ಸಂದೇಹ ನನ್ನನ್ನು ಕಾಡುತ್ತಿತ್ತು.

ಆದರೂ ನಾನು ಅವನನ್ನು ಹಿಂಬಾಲಿಸತೊಡಗಿದೆ. ಈ ಮಧ್ಯೆ ಆತ ನನ್ನನ್ನು ಸರಿಯಾದ ತಾಣಕ್ಕೆ ಕರೆದೊಯ್ಯುತ್ತಿದ್ದಾನಾ, ನಾನು ಸರಿಯಾದ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೇನಾ ಎಂಬ ಸಂದೇಹವಂತೂ ಇದ್ದೇ ಇತ್ತು. ದೇವರ ಮೇಲೆ ಭಾರ ಹಾಕಿ, ಕನಿಷ್ಠ ಒಂದು ಮೈಲಿ ದೂರ ಅವನನ್ನು ಹಿಂಬಾಲಿಸಿದೆ. ಅನಂತರ ನನ್ನ ಬಸ್ ನಿಲ್ದಾಣ ಬಂದಿತು.

‘ಇದೋ ನೀವು ಏರಬೇಕಿರುವ ಬಸ್’ ಎಂದು ಹೇಳಿದ. ನಾನು ಅವನಿಗೆ ಧನ್ಯವಾದಗಳನ್ನು ಹೇಳಿದೆ. ಆದರೆ ಆತ ‘ನಿಮ್ಮ ಧನ್ಯವಾದ ಇರಲಿ, ಇದು ನನ್ನ ಕರ್ತವ್ಯ’ ಎಂಬಂತೆ ನಿರ್ಲಿಪ್ತ ನಾಗಿದ್ದ. ನನಗೆ ದಾರಿ ತೋರಿಸಲೆಂದು ಕೈಯಲ್ಲಿ ಲಗೇಜ್ ಹಿಡಿದು ಒಂದು ಮೈಲಿ ನಡೆದು ಬಂದ ಆತನ ನಡೆ ನನಗೆ ಅತಿ ವಿಶೇಷವಾಗಿ ಕಂಡಿತು. ನಾನು ಬಸ್ಸಿನಲ್ಲಿ ನನ್ನ ಆಸನದಲ್ಲಿ ಕುಳಿತುಕೊಂಡು ಆತನನ್ನೇ ದಿಟ್ಟಿಸುತ್ತಿದ್ದೆ. ಆತ ಭಾರದ ಸೂಟ್‌ಕೇಸ್ ಹಿಡಿದು ಬಂದ ದಾರಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ.

ಆತ ಅಷ್ಟು ದೂರ ನನಗೆ ದಾರಿ ತೋರಿಸಲು ಬಂದಿದ್ದ. ಆತ ಯಾವಾಗಲೂ ಇದನ್ನೇ ಮಾಡುತ್ತಿದ್ದಾನೇನೋ ಎಂದು ಅನಿಸುವಷ್ಟು ಅವನ ಧೋರಣೆ ಸಹಜವಾಗಿತ್ತು. ಆತನಿಗೆ ಬೇರೆ ಯಾವ ತುರ್ತು ಕೆಲಸವಿತ್ತೋ? ಅವನ್ನೆಲ್ಲ ಬದಿಗೆ ಸರಿಸಿ, ಬಳಲಿದ್ದರೂ ನನಗೆ ದಾರಿ ತೋರಿಸಲೆಂದೇ ಆತ ಬಂದಿದ್ದ. ಈ ಅನುಭವವನ್ನು ಮಾತ್ರ ನಾನು ಎಂದಿಗೂ ಮರೆಯು ವುದಿಲ್ಲ. ಈ ಘಟನೆ ಬಳಿಕ ಇಂಥದೇ ಅನುಭವ ಹತ್ತಾರು ಸಲ ಆಗಿವೆ. ಜಪಾನಿನಲ್ಲಿ ನೀವು ದಾರಿ ಕೇಳಿದರೆ, ನೂರರಲ್ಲಿ ತೊಂಬತ್ತು ಮಂದಿ ನಾವು ತಲುಪಬೇಕಾದ ಸ್ಥಳದ ತನಕ ಬಂದು ಬಿಟ್ಟು ಹೋಗುತ್ತಾರೆ. ಜಪಾನಿನಲ್ಲಿ ದಾರಿ ತಪ್ಪಿದರೆ, ದಾರಿ ಕೇಳಬೇಕೆನಿಸಿ ದರೆ, ರಾಘವೇಂದ್ರನ ಮೊರೆ ಹೋಗಬೇಕಿಲ್ಲ.