Vishweshwar Bhat Column: ಇನ್ನಷ್ಟು ಅಚ್ಚರಿಯ ಸಂಗತಿಗಳು
ಹತ್ತಿಯನ್ನು ಚೀಲದಲ್ಲಿ ಹಾಕಿ ಗಿಡಿಯುವಂತೆ ಜನರನ್ನೂ ಬೋಗಿಯೊಳಗೆ ಹಾಕಿ ತಳ್ಳುತ್ತಾನೆ. ಆತನಿಗೆ ಜನರನ್ನು ಬೋಗಿಯೊಳಗೆ ತಳ್ಳುವುದೇ ಕೆಲಸ. ರೈಲುಗಳ ಸಂಚಾರ ವನ್ನು ಹೆಚ್ಚಿಸುವ ಬದಲು, ಜಪಾನ್ ರೈಲ್ವೆ ಇಲಾಖೆ ಪ್ರಯಾಣಿಕರನ್ನು ತಳ್ಳಲು ಜನರನ್ನು ನೇಮಿಸಿ ಕೊಂಡಿರುವುದು ವಿಚಿತ್ರವಾದ ಸತ್ಯ.


ಜಪಾನಿನ ಕೆಲವು ಸಂಗತಿಗಳು ಅನ್ಯದೇಶಿಗರಿಗೆ ವಿಚಿತ್ರವಾಗಿ, ವಿಲಕ್ಷಣವಾಗಿ ಕಂಡರೆ ಆಶ್ಚರ್ಯ ವೇನಿಲ್ಲ. ಅಂಥ ಒಂದು ದೃಶ್ಯ ಹೀಗಿದೆ ನೋಡಿ- ಜನದಟ್ಟಣೆ (ಪೀಕ್ ಅವರ್) ಸಮಯದಲ್ಲಿ ರೈಲ್ವೆ ಪ್ಲ್ಯಾಟ್ ಫಾರ್ಮ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತವೆ. ವಿಶ್ವದ ಹೆಚ್ಚು ಜನನಿಬಿಡತೆ ಹೊಂದಿರುವ ಟೋಕಿಯೋ ನಗರದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ಅಲ್ಲಿನ ರೈಲುಗಳು ಯಾವತ್ತೂ ಸಾಮರ್ಥ್ಯಕ್ಕಿಂತ ಹೆಚ್ಚು ಭರ್ತಿಯಾಗಿ ಚಲಿಸುತ್ತವೆ. ಕೆಲವು ಸಲ ರೈಲಿನಲ್ಲಿ ಅದೆಷ್ಟು ಜನ ತುಂಬಿರುತ್ತಾರೆಂದರೆ ರೈಲಿನ ಬಾಗಿಲನ್ನು ಹಾಕಲು ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ರೈಲ್ವೆ ಪ್ಲ್ಯಾಟ್ ಫಾರ್ಮ್‌ನಲ್ಲಿ ಪ್ರತಿ ಬೋಗಿ ಯ ಪಕ್ಕದಲ್ಲಿ ಪ್ರಯಾಣಿಕರನ್ನು ಬೋಗಿಯೊಳಗೆ ತಳ್ಳಲೆಂದೇ ಒಬ್ಬ ವ್ಯಕ್ತಿಯನ್ನು ನೇಮಿಸಿರುತ್ತಾರೆ.
ಆ ವ್ಯಕ್ತಿ ಅದೆಷ್ಟು ಬಲವಾಗಿ ತಳ್ಳುತ್ತಾನೆಂದರೆ ಒಂದೇ ತೆಕ್ಕೆಗೆ 10-15 ಮಂದಿ ಬೋಗಿಯೊಳಗೆ ತೂರಿ ಕೊಂಡುಬಿಡುತ್ತಾರೆ. ಹತ್ತಿಯನ್ನು ಚೀಲದಲ್ಲಿ ಹಾಕಿ ಗಿಡಿಯುವಂತೆ ಜನರನ್ನೂ ಬೋಗಿಯೊಳಗೆ ಹಾಕಿ ತಳ್ಳುತ್ತಾನೆ. ಆತನಿಗೆ ಜನರನ್ನು ಬೋಗಿಯೊಳಗೆ ತಳ್ಳುವುದೇ ಕೆಲಸ. ರೈಲುಗಳ ಸಂಚಾರ ವನ್ನು ಹೆಚ್ಚಿಸುವ ಬದಲು, ಜಪಾನ್ ರೈಲ್ವೆ ಇಲಾಖೆ ಪ್ರಯಾಣಿಕರನ್ನು ತಳ್ಳಲು ಜನರನ್ನು ನೇಮಿಸಿ ಕೊಂಡಿರುವುದು ವಿಚಿತ್ರವಾದ ಸತ್ಯ.
ಇದನ್ನೂ ಓದಿ: Vishweshwar Bhat Column: ರಿಯೋಕನ್ ವಾಸ
ಸಾಮಾನ್ಯವಾಗಿ, ಯಾವುದೇ ದೇಶದಲ್ಲಿ ಅನಿವಾರ್ಯ ಪ್ರಸಂಗಗಳಲ್ಲಿ ಮಾತ್ರ ಒಂಟಿಯಾಗಿ ಊಟ ಮಾಡುತ್ತಾರೆ. ಆದರೆ ಜಪಾನಿನಲ್ಲಿ ಜನ ರೆಸ್ಟೋರೆಂಟುಗಳಲ್ಲಿ ಒಂಟಿಯಾಗಿ ಊಟ ಮಾಡುವುದು ಸಾಮಾನ್ಯ. ಅಲ್ಲಿನ ಎಷ್ಟೋ ರೆಸ್ಟೋರೆಂಟುಗಳಲ್ಲಿ ಒಬ್ಬರಿಗೆ ಮಾತ್ರ ಕುಳಿತು ಆಹಾರ ಸೇವಿಸಲು ಅನುವು ಮಾಡಿಕೊಡುವ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಥ ರೆಸ್ಟೋರೆಂಟುಗಳಿಗೆ ಜನ ಫ್ಯಾಮಿಲಿಯನ್ನು ಕರೆದುಕೊಂಡು ಬರುವುದಿಲ್ಲ.
ಜಪಾನಿ ಸಂಸ್ಕೃತಿಯ ಬಗ್ಗೆ ಅಚ್ಚರಿ ಮೂಡಿಸಿದ ಇನ್ನೊಂದು ಸಂಗತಿಯೆಂದರೆ, ಪ್ರತಿಯೊಬ್ಬರೂ ಹುಟ್ಟುವಾಗಲೇ ಒಂದು ವರ್ಷ ದೊಡ್ಡವರಾಗಿರುತ್ತಾರೆ. ಇದನ್ನು ಅವರು ಕಜೋಡೋಶಿ ಎಂದು ಕರೆಯುತ್ತಾರೆ; ಇದರರ್ಥ ‘ಎಣಿಸಿದ ವರ್ಷಗಳು’. ಹುಟ್ಟಿದ ಮರುದಿನ ಮಗುವಿನ ವಯಸ್ಸು ಎಷ್ಟು ಎಂದು ಕೇಳಿದರೆ, ಒಂದು ವರ್ಷ ಎಂದು ಹೇಳುತ್ತಾರೆ. ಜಪಾನಿನಲ್ಲಿ ಅಧಿಕ ತೂಕದ ಸುಮೋ ಕುಸ್ತಿಪಟುಗಳಿದ್ದರೂ, ಇತರರು ದಪ್ಪಗಿರುವುದನ್ನು ಅವರು ಸಹಿಸುವುದಿಲ್ಲ.
2008ರಲ್ಲಿ, ದೇಶದಲ್ಲಿನ ಬೊಜ್ಜು ಪ್ರಮಾಣ ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ‘ಮೆಟಾಬೊ ನಿಯಮ’ ಎಂಬ ಕಾನೂನನ್ನು ಅಂಗೀಕರಿಸ ಲಾಯಿತು. 40 ರಿಂದ 74 ವರ್ಷ ವಯಸ್ಸಿನ ಜನರು ತಮ್ಮ ಸೊಂಟದ ಗಾತ್ರವನ್ನು ವರ್ಷವರ್ಷವೂ ಅಳೆಯುತ್ತಾರೆ.
ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಅಧಿಕ ತೂಕಕ್ಕೆ ಯಾವುದೇ ಕಾನೂನು ಶಿಕ್ಷೆಯಿಲ್ಲ. ಆದರೆ ಉತ್ತಮ ಫಿಟ್ನೆಸ್ ಹೊಂದಿರುವುದನ್ನು ಶ್ರೇಷ್ಠತೆ ಎಂದು ಭಾವಿಸುತ್ತಾರೆ. ಪೌಷ್ಟಿಕ ಆಹಾರ ಮತ್ತು ವ್ಯಾಯಾ ಮದ ಕುರಿತು ಜಪಾನಿಯರು ಕಾಲಕಾಲಕ್ಕೆ ವೃತ್ತಿಪರರಿಂದ ಸಲಹೆ ಪಡೆಯುವುದು ಸಹ ಸಾಮಾನ್ಯ. ಜಪಾನಿನಲ್ಲಿ ಇಂದಿಗೂ ‘ಚಕ್ರವರ್ತಿ ವ್ಯವಸ್ಥೆ’ ಚಾಲ್ತಿಯಲ್ಲಿದೆ. ಚಕ್ರವರ್ತಿಯು ವಿಶ್ವದ ಅತ್ಯಂತ ಹಳೆಯ ನಿರಂತರ ರಾಜಮನೆತನವಾಗಿದೆ.
ಇತ್ತೀಚಿನ ಚಕ್ರವರ್ತಿಯಾದ ನರುಹಿತೊ 2019ರಲ್ಲಿ ಅಧಿಕಾರಕ್ಕೆ ಬಂದರು. ಚಕ್ರವರ್ತಿ ರಾಷ್ಟ್ರದ ಪ್ರಮುಖರಾಗಿದ್ದರೂ, ಅವರಿಗೆ ರಾಜಕೀಯ ಅಧಿಕಾರವಿಲ್ಲ. ನೀವು ಜಪಾನಿನ ಕೆಲವು ಮನೆಗಳಿಗೆ ಹೋದರೆ ಆಘಾತವಾದೀತು. ಕಾರಣ ನೀವು ಆ ಮನೆಗಳಿಗೆ ಹೋದಾಗ ಅಲ್ಲಿ ಏನನ್ನೂ ಕಾಣಲು ಸಾಧ್ಯವಿಲ್ಲ.
ಕೆಲವು ಮನೆಗಳಲ್ಲಿ ಕುರ್ಚಿ, ಸೋಫಾ, ಟೀಪಾಯ, ಮಂಚ. ಟಿವಿ, ಫ್ರಿಜ್, ವಾಷಿಂಗ್ ಮಷೀನ್ ಮುಂತಾದ ಯಾವ ವಸ್ತು, ಪೀಠೋಪಕರಣಗಳನ್ನು ಕಾಣಲು ಸಾಧ್ಯವಿಲ್ಲ. ಜಪಾನಿಗಳ ಪೈಕಿ ಅನೇಕರು ಮಿತ ವಸ್ತು (ಮಿನಿಮಲಿಸ್ಟ್) ಬಳಸುವವರು. ಜಪಾನಿಯರ ಮನೆ ಮತ್ತು ಆಂತರಿಕ ವಿನ್ಯಾಸದಲ್ಲಿ ಮಿನಿಮಲಿಸ್ಟ್ ತತ್ವವನ್ನು ಅನುಸರಿಸಲಾಗುತ್ತದೆ. ಕಡಿಮೆ ವಸ್ತುಗಳನ್ನು ಬಳಸಿ ಕೊಂಡು ಹೆಚ್ಚಿನ ಶಾಂತಿಯನ್ನು ಒದಗಿಸುವ ವಿಧಾನವನ್ನು ಜಪಾನಿಯರು ಇಷ್ಟಪಡುತ್ತಾರೆ.