ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಚಿಂತಾಮಣಿ ಮರಳಿಸಿ ಹಾಗೆಯೇ ಕರೆಯಿಸಿಕೊಂಡ ಗಣಪತಿ

ದಯಾಮಯಿಯಾದ ಗಣಪತಿಯು ಅವನ ವಿನಂತಿಯನ್ನು ಮನ್ನಿಸಿದನು. ಗಣಪತಿಯು ಕಪಿಲ ಮುನಿಗಳ ಚಿಂತಾಮಣಿಯನ್ನು ಪುನಃ ಸಿಗುವಂತೆ ಮಾಡಿದ್ದರಿಂದ ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ. ನಮ್ಮದಲ್ಲದ ವಸ್ತುವಿನ ಬಗ್ಗೆ ಆಸೆ ಪಟ್ಟರೆ, ಅದನ್ನು ಭಗವಂತ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ನಮ್ಮಿಂದ ದೂರ ಮಾಡುತ್ತಾನೆ. ಯಾವುದನ್ನು ಪಡೆಯವುದಕ್ಕೂ ಯೋಗ ಯೋಗ್ಯತೆ ಎರಡೂ ಇರಬೇಕು.

ಚಿಂತಾಮಣಿ ಮರಳಿಸಿ ಹಾಗೆಯೇ ಕರೆಯಿಸಿಕೊಂಡ ಗಣಪತಿ

ಒಂದೊಳ್ಳೆ ಮಾತು

ಗಣಪತಿ ವಿದ್ಯಾದೇವತೆ. ಅವನು ನಮಗೆ ಒಳ್ಳೆಯ ವಿದ್ಯಾ ಬುದ್ಧಿಯನ್ನು ನೀಡಿ ಎಲ್ಲಾ ವಿಘ್ನಗಳನ್ನು ದೂರ ಮಾಡುವುದರಿಂದ ಗಣೇಶನನ್ನು ವಿಘ್ನ ವಿನಾಶಕ, ವಿದ್ಯಾದಾಯಕ ಎಂದು ಕರೆಯುತ್ತೇವೆ. ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ. ಕಣ ಎಂಬ ಒಬ್ಬ ಕೆಟ್ಟ ರಾಜಕುಮಾರನಿದ್ದ. ಅವನು ದೀನ ದುರ್ಬಲರಿಗೆ ತೊಂದರೆ ನೀಡುತ್ತಿದ್ದ. ಋಷಿಮುನಿಗಳ ತಪಸ್ಸಿನಲ್ಲಿ ಅಡಚಣೆಯನ್ನು ಉಂಟು ಮಾಡುತ್ತಿದ್ದ.

ಒಂದು ಸಲ ಅವನು ತನ್ನ ಜೊತೆಗಾರರೊಂದಿಗೆ ಕಾಡಿನಲ್ಲಿ ಶಿಕಾರಿಗಾಗಿ ಹೋದನು. ಆ ಕಾಡಿನಲ್ಲಿ ಕಪಿಲ ಮುನಿಗಳ ಆಶ್ರಮವಿತ್ತು. ಕಪಿಲ ಮುನಿಗಳು ಕಣನನ್ನು ಸ್ವಾಗತಿಸಿದರು ಮತ್ತು ಅವರೆಲ್ಲ ರನ್ನೂ ಭೋಜನ ಸ್ವೀಕರಿಸಲು ಆಮಂತ್ರಿಸಿದರು.

ಕಪಿಲ ಮುನಿಗಳ ಕುಟೀರವನ್ನು ನೋಡಿ ಕಣನಿಗೆ ನಗು ಬಂತು. ಅವನು ಹೇಳಿದನು, “ನಿಮ್ಮಂಥ ಸಾಧು ಇಷ್ಟು ಜನರಿಗೆ ಊಟ ಹೇಗೆ ಕೊಡಬಹುದು?" ಆಗ ಕಪಿಲ ಮುನಿಗಳು ತಮ್ಮ ಕೊರಳಿಗೆ ಹಾಕಿದ್ದ ಚಿಂತಾಮಣಿಯನ್ನು ತೆಗೆದು ಚಾಪೆಯ ಮೇಲೆ ಇಟ್ಟರು. ಆ ಮಣಿಗೆ ನಮಸ್ಕಾರವನ್ನು ಮಾಡಿ, ಪ್ರಾರ್ಥನೆಯನ್ನು ಮಾಡಿದರು. ಅದರಿಂದಾಗಿ ಒಂದು ಸುಂದರವಾದ ಭೋಜನಗೃಹ ನಿರ್ಮಾಣವಾಯಿತು.

ಇದನ್ನೂ ಓದಿ: Roopa Gururaj Column: ಜೇಷ್ಠ ಗೌರಿ ಹಾಗೂ ಕನಿಷ್ಠ ಗೌರಿಯ ಕಥೆ

ಎಲ್ಲರೂ ಕೂರಲು ಚಂದನದ ಮಣೆ, ಮೇಜು ನಿರ್ಮಾಣವಾಗಿತ್ತು. ಬೆಳ್ಳಿಯ ತಟ್ಟೆಗಳಲ್ಲಿ ಅನೇಕ ವಿಧದ ಪಕ್ವಾನ್ನಗಳನ್ನು ಬಡಿಸಲಾಗಿತ್ತು. ಕಣ ಮತ್ತು ಅವನ ಸೈನಿಕರು ಆ ರೀತಿಯ ಸ್ವರ್ಗ ಸಮಾನ ವಾದ ಭೋಜನವನ್ನು ಎಂದು ಸೇವಿಸಿರಲಿಲ್ಲ. ಅವರಿಗೆ ಅತೀವ ಆನಂದವಾಯಿತು.

ಕಣನಿಗೆ ಹೇಗಾದರೂ ಮಾಡಿ ಆ ಮಣಿಯನ್ನು ಪಡೆಯಬೇಕೆಂದು ಆಸೆಯಾಯಿತು. ಋಷಿಯ ಬಳಿ ಇಂತಹ ಮಣಿಗೇನು ಕೆಲಸ ಇದು ನನ್ನಂತಹ ರಾಜನ ಬಳಿ ಇದ್ದರೆ ಅನುಕೂಲ ಎಂದು ಅವನ ದುರಲೋಚನೆ. ಅವನು ತನ್ನ ಇಚ್ಛೆಯನ್ನು ಕಪಿಲ ಮುನಿಗಳಿಗೆ ಹೇಳಿದನು. ಆದರೆ ಕಣನ ಸ್ವಭಾವ ತಿಳಿದಿದ್ದ ಕಪಿಲ ಮುನಿಗಳು ಅವನಿಗೆ ಮಣಿಯನ್ನು ನೀಡಲು ನಿರಾಕರಿಸಿದರು. ಅದಕ್ಕೆ ಕಣನು ಆ ಮಣಿಯನ್ನು ಮೋಸದಿಂದ ಕದ್ದನು.

ಇದರಿಂದ ಬಹಳ ಬೇಸರಗೊಂಡ ಕಪಿಲಮುನಿಗಳು ಗಣಪತಿಯ ಆರಾಧನೆಯನ್ನು ಮಾಡಿದರು. ಕಪಿಲ ಮುನಿಗಳ ಭಕ್ತಿಗೆ ಗಣಪತಿಯು ಪ್ರಸನ್ನರಾಗಿ, ಕಣನಿಗೆ ತಕ್ಕ ಪಾಠ ಕಲಿಸಬೇಕೆಂದು ತೀರ್ಮಾ ನಿಸಿದ. ಕಪಿಲ ಮುನಿಗಳು ತನ್ನ ಮೇಲೆ ಯುದ್ಧಕ್ಕೆ ಬರಬಹುದೆಂದು ತಿಳಿದು ಕಣನು ಯುದ್ಧ ಮಾಡಲು ತಯಾರಾಗಿದ್ದನು.

ಗಣಪತಿಯ ಕೃಪೆಯಿಂದ ಅರಣ್ಯದಲ್ಲಿ ತುಂಬಾ ದೊಡ್ಡ ಸೈನ್ಯವು ನಿರ್ಮಾಣವಾಯಿತು. ಈ ಸೈನ್ಯವು ಕಣನ ಸೈನ್ಯದ ಎಲ್ಲಾ ಸೈನಿಕರನ್ನು ಹೊಡೆದು ಸೋಲಿಸಿತು. ಆಗ ಗಣಪತಿಯು ಸ್ವತಃ ರಣರಂಗಕ್ಕೆ ಆಗಮಿಸಿದ. ದುರ್ಬುದ್ಧಿಯ ಕಣನು ಗಣಪತಿಗೆ ತಕ್ಷಣ ಬಾಣಗಳ ಸುರಿಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಆದರೆ ಗಣಪತಿಯು ತನ್ನ ಬಾಣಗಳಿಂದ ಅವುಗಳಿಗೆ ತಕ್ಕ ಉತ್ತರ ಕೊಟ್ಟನು.

ಕೊನೆಗೆ ಗಣಪತಿಯು ತನ್ನ ಪಾಶವನ್ನು ಕಣನತ್ತ ಬೀಸಿದನು. ತಕ್ಷಣ ಕಣನು ಸತ್ತು ಬಿದ್ದನು. ಕಣನ ಅಪ್ಪ ಅಭಿಜಿತ ರಾಜನು ರಣರಂಗಕ್ಕೆ ಬಂದು ಗಣಪತಿಗೆ ನಮಸ್ಕಾರವನ್ನು ಮಾಡಿ ಪರಿಪರಿಯಾಗಿ ಕ್ಷಮೆ ಕೇಳಿದನು. ಕಪಿಲ ಮುನಿಗಳ ಚಿಂತಾಮಣಿಯನ್ನು ಅವರಿಗೆ ಹಿಂತಿರುಗಿಸಲಾಯಿತು. ನನ್ನ ಮಗನನ್ನು ಕ್ಷಮಿಸಿ ಅವನಿಗೆ ಸದ್ಗತಿ ನೀಡಿ ಎಂದು ಗಣಪತಿಗೆ ಬೇಡಿಕೊಂಡನು.

ದಯಾಮಯಿಯಾದ ಗಣಪತಿಯು ಅವನ ವಿನಂತಿಯನ್ನು ಮನ್ನಿಸಿದನು. ಗಣಪತಿಯು ಕಪಿಲ ಮುನಿಗಳ ಚಿಂತಾಮಣಿಯನ್ನು ಪುನಃ ಸಿಗುವಂತೆ ಮಾಡಿದ್ದರಿಂದ ಗಣಪತಿಗೆ ಚಿಂತಾಮಣಿ ಎಂದೂ ಕರೆಯುತ್ತಾರೆ. ನಮ್ಮದಲ್ಲದ ವಸ್ತುವಿನ ಬಗ್ಗೆ ಆಸೆ ಪಟ್ಟರೆ, ಅದನ್ನು ಭಗವಂತ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ನಮ್ಮಿಂದ ದೂರ ಮಾಡುತ್ತಾನೆ. ಯಾವುದನ್ನು ಪಡೆಯವುದಕ್ಕೂ ಯೋಗ ಯೋಗ್ಯತೆ ಎರಡೂ ಇರಬೇಕು. ಅದಿಲ್ಲದೆ ವಾಮ ಮಾರ್ಗದಿಂದ ಏನನ್ನಾದರೂ ಪಡೆದುಕೊಂಡರೆ, ಅದು ಅದೇ ರೀತಿಯಲ್ಲಿ ನಮ್ಮಿಂದ ದೂರವೂ ಆಗುತ್ತದೆ.

ಪರಿಶ್ರಮಕ್ಕೆ ಬೇರೆ ಯಾವ ಪರ್ಯಾಯವೂ ಇಲ್ಲ. ಗಣೇಶ ಎಲ್ಲರಿಗೂ ಸದ್ಬುದ್ದಿ ನೀಡಿ ಹರಸಲಿ.