Roopa Gururaj Column: ಧನತ್ರಯೋದಶಿಯ ಮಹತ್ವ
ಒಳ್ಳೆಯ ಮನಸ್ಸಿನಿಂದ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾ, ಕಾಲಕಾಲಕ್ಕೆ ಬೇಕಾದ ದಾನ ಧರ್ಮಗಳನ್ನು ಮಾಡುತ್ತಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಾಗ ಪ್ರತಿದಿನವೂ ಹಬ್ಬವೇ. ಯಾರ ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಕೊಂಡಿರುವುದಿಲ್ಲವೋ, ಹಣ ಪೋಲಾ ಗುವುದಿಲ್ಲವೋ, ಪ್ರಾಮಾಣಿಕತೆಯಿಂದ ಬದುಕುತ್ತಾರೋ ಅಲ್ಲಿ ಲಕ್ಷ್ಮಿ-ಸರಸ್ವತಿ ಇಬ್ಬರ ಕೃಪೆಯೂ ಇರುತ್ತದೆ.

-

ಒಂದೊಳ್ಳೆ ಮಾತು
ಒಮ್ಮೆ ಲಕ್ಷ್ಮೀನಾರಾಯಣರು ಲೋಕ ಸಂಚಾರ ಮಾಡುತ್ತಾ ಭೂಮಿಗೆ ಬರುತ್ತಾರೆ. ಭೂಮಿಯಲ್ಲಿ ವಿಹರಿಸುತ್ತಾ ನಾರಾಯಣನು ಮಹಾಲಕ್ಷ್ಮಿಯನ್ನು ಅಲ್ಲಿಯೇ ಒಂದೆಡೆ ನಿಲ್ಲುವಂತೆ ಹೇಳಿ ತಾನೊಬ್ಬನೇ ಮುಂದೆ ಹೋಗುತ್ತಾನೆ. ಯಾವ ಕಾರಣಕ್ಕೂ ನೀನು ಇಲ್ಲಿಂದ ಕದಲಬೇಡ ಎಂದು ಲಕ್ಷ್ಮಿಗೆ ತಾಕೀತು ಮಾಡುತ್ತಾನೆ.
ಆದರೆ, ಚಂಚಲೆಯಾದ ಮಹಾಲಕ್ಷ್ಮಿಯು ನಾರಾಯಣ ಹೊರಟುಹೋದ ನಂತರ ಕುತೂಹಲ ತಡೆಯಲಾಗದೇ ಅಲ್ಲಿಂದ ತಾನೂ ಹೊರಟು ಬಿಡುತ್ತಾಳೆ. ಮುಂದೆ ನಡೆಯುತ್ತಾ ನಡೆಯುತ್ತಾ ಒಂದು ಹೊಲಕ್ಕೆ ಬರುತ್ತಾಳೆ. ಅಲ್ಲಿ ಬೆಳೆದ ಕಬ್ಬು ನೋಡಿ ಆಸೆ ಪಟ್ಟು ಅದನ್ನು ಕಿತ್ತು ತಿನ್ನುತ್ತಾಳೆ. ಅಲ್ಲಿ ಬೆಳೆದ ಹೂಗಳನ್ನು ಕಂಡು ಕಿತ್ತು, ಆ ಹೂಗಳಿಂದ ತನ್ನನ್ನು ಸಿಂಗರಿಸಿಕೊಳ್ಳುತ್ತಾಳೆ.
ಆ ಹೊತ್ತಿಗೆ ಅಲ್ಲಿಗೆ ಬರುವ ಮಹಾವಿಷ್ಣು, ತನ್ನ ಮಾತನ್ನು ಮೀರಿ ಬಂದ ಲಕ್ಷ್ಮಿಯನ್ನು ಕಂಡು ಬೇಸರಪಡುತ್ತಾನೆ. “ದೇವತೆಗಳು ಭೂಮಿಯ ಜನರಿಂದ ಏನಾದರೂ ಪಡೆದರೆ ಅವರೊಡನೆ ಕನಿಷ್ಠ ಹನ್ನೆರಡು ವರ್ಷ ನೆಲೆಸಬೇಕಾಗುತ್ತದೆ. ನೀನು ಇದೇನು ಕೆಲಸ ಮಾಡಿಬಿಟ್ಟೆ?" ಎಂದು ವಿಷಾದಪಡುತ್ತಾನೆ.
ಇದನ್ನೂ ಓದಿ: Roopa Gururaj Column: ನರಕ ಚತುರ್ದಶಿಯ ಕಥೆ
“ನಿಯಮದಂತೆ ನೀನು ಮುಂದಿನ ಹನ್ನೆರಡು ವರ್ಷ ಕಾಲ ಇಲ್ಲೇ ಈ ರೈತನ ಹೊಲದಲ್ಲೇ ನೆಲೆಸಿರಬೇಕು. ನಂತರವಷ್ಟೇ ನೀನು ವೈಕುಂಠಕ್ಕೆ ಮರಳಬಹುದು" ಎಂದು ಹೇಳಿ ಹೊರಟು ಹೋಗುತ್ತಾನೆ. ಅದರಂತೆ ಮಹಾಲಕ್ಷ್ಮಿಯು ಆ ಬಡ ರೈತನ ಹೊಲಮನೆಯಲ್ಲಿಯೇ ಹನ್ನೆರಡು ವರುಷಗಳ ಕಾಲ ನೆಲೆಸಿ ಬಿಡುತ್ತಾಳೆ.
ಲಕ್ಷ್ಮಿಯು ನೆಲೆ ನಿಂತ ಸ್ಥಳದಲ್ಲಿ ಬಡತನ ಇರಲು ಸಾಧ್ಯವೇ? ರೈತನ ಹೊಲದಲ್ಲಿ ಬಂಗಾರದ ಬೆಳೆ ತುಂಬಿ ಹೋಗುತ್ತದೆ. ಆತ ಶ್ರೀಮಂತನಾಗುತ್ತಾನೆ. ಇದಕ್ಕೆ ತನ್ನ ಹೊಲದಲ್ಲಿ ನೆಲೆಸಿರುವ ತಾಯಿ ಲಕ್ಷ್ಮಿಯೇ ಕಾರಣವೆಂದು ಅರಿತು, ಪತ್ನಿಯೊಡನೆ ಆಕೆಯನ್ನು ಉಪಚರಿಸಿ ಪೂಜಿಸುತ್ತಾನೆ. ಹೀಗೆ ಹನ್ನೆರಡು ವರ್ಷಗಳು ಕಳೆದು ಲಕ್ಷ್ಮಿಯು ವೈಕುಂಠಕ್ಕೆ ಮರಳುವ ದಿನ ಬರುತ್ತದೆ.
ಸ್ವತಃ ಮಹಾವಿಷ್ಣುವೇ ಅವಳನ್ನು ಕರೆದೊಯ್ಯಲು ಬರುತ್ತಾನೆ. ಆದರೆ ರೈತನೂ ಆತನ ಪತ್ನಿಯೂ “ಲಕ್ಷ್ಮಿ ನಮ್ಮ ತಾಯಿ, ನಾವು ಆಕೆಯನ್ನು ಕಳುಹಿಸಲಾರೆವು" ಎಂದು ಹಠ ಹಿಡಿಯುತ್ತಾರೆ. ಅವರ ವಾತ್ಸಲ್ಯಕ್ಕೆ ಲಕ್ಷ್ಮೀನಾರಾಯಣರು ಕಟ್ಟುಬೀಳುತ್ತಾರೆ. ಕೊನೆಗೆ ಅವರ ಪ್ರೀತಿಗೆ ಮಣಿಯುವ ನಾರಾಯಣ, “ನಾಳೆ ಆಶ್ವಯುಜ ಕೃಷ್ಣ ತ್ರಯೋದಶಿ. ತನುಮನ ಶುದ್ಧಿಯಿಂದ ಕಳಶದಲ್ಲಿ ಲಕ್ಷ್ಮಿ ಯನ್ನು ಆವಾಹಿಸಿ ಪೂಜಿಸಿದರೆ ಅವಳು ತನ್ನ ಒಂದಂಶದಿಂದ ಸದಾ ನಿಮ್ಮೊಡನೆ ನೆಲೆಸುತ್ತಾಳೆ.
ನಾಳೆಯ ದಿನ ಯಾರೆಲ್ಲರೂ ಶ್ರದ್ಧಾಭಕ್ತಿಯಿಂದ ಲಕ್ಷ್ಮೀಪೂಜೆ ಮಾಡುತ್ತಾರೋ ಅವರ ಸಂಪತ್ತು ವೃದ್ಧಿಯಾಗುತ್ತದೆ" ಎಂದು ಭರವಸೆ ನೀಡುತ್ತಾನೆ. ಧನತ್ರಯೋದಶಿಯ ದಿನ ಲಕ್ಷ್ಮೀ ಪೂಜೆ ಮಾಡುವ ರೂಢಿ ಶುರುವಾಗಿದ್ದು ಹೀಗೆ ಅನ್ನುತ್ತವೆ ಪುರಾಣ ಕಥೆಗಳು. ಆದ್ದರಿಂದ, ಲೋಭ ದಿಂದಲ್ಲದೆ ಪ್ರೇಮದಿಂದ ಲಕ್ಷ್ಮೀದೇವಿಯನ್ನು ಪೂಜಿಸಬೇಕು.
ಆಶ್ವಯುಜ ತ್ರಯೋದಶಿಯಂದು ದೀಪದಾನ ಶ್ರೇಷ್ಠವೆನ್ನುತ್ತಾರೆ, ಮಣ್ಣಿನ ಹಣತೆಗಳನ್ನು ಕೊಂಡು ದಾನ ಮಾಡಿದರೆ ಸಣ್ಣಮಟ್ಟದ ಕುಶಲಕಾರ್ಮಿಕರಿಗೂ ಒಂದಷ್ಟು ವ್ಯಾಪಾರವಾಗುತ್ತದೆ. ದೀಪ ವನ್ನು ದಾನ ಮಾಡುತ್ತಾ ಮತ್ತೊಬ್ಬರ ಜೀವನದಲ್ಲಿ ಬೆಳಕನ್ನು ಹಂಚುವ ಸಂಭ್ರಮವೂ ನಮ್ಮ ದಾಗುತ್ತದೆ.
ಒಳ್ಳೆಯ ಮನಸ್ಸಿನಿಂದ ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾ, ಕಾಲಕಾಲಕ್ಕೆ ಬೇಕಾದ ದಾನ ಧರ್ಮಗಳನ್ನು ಮಾಡುತ್ತಾ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದಾಗ ಪ್ರತಿದಿನವೂ ಹಬ್ಬವೇ. ಯಾರ ಮನೆಯಲ್ಲಿ ಅನಗತ್ಯವಾಗಿ ವಸ್ತುಗಳನ್ನು ತುಂಬಿಕೊಂಡಿರುವುದಿಲ್ಲವೋ, ಹಣ ಪೋಲಾ ಗುವುದಿಲ್ಲವೋ, ಪ್ರಾಮಾಣಿಕತೆಯಿಂದ ಬದುಕುತ್ತಾರೋ ಅಲ್ಲಿ ಲಕ್ಷ್ಮಿ-ಸರಸ್ವತಿ ಇಬ್ಬರ ಕೃಪೆಯೂ ಇರುತ್ತದೆ.
ಲಕ್ಷ್ಮಿಯನ್ನು ಪೂಜಿಸುವುದು ಎಂದರೆ ಸಂಪತ್ತನ್ನು ಗೌರವಿಸುವುದು ಎನ್ನುವುದು ನಿಜವಾದರೂ, ಶ್ರಮದ ದುಡಿಮೆಯ ಸಂಪತ್ತು ಮಾತ್ರವೇ ಗೌರವಕ್ಕೆ ಅರ್ಹವಾದುದು. ಆದ್ದರಿಂದ ಶ್ರಮ ಮತ್ತು ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತನ್ನು ಶ್ರದ್ಧೆಯಿಂದ ಪೂಜಿಸಿ ಪರಿಶ್ರಮಕ್ಕೆ ಬೆಲೆ ಕಟ್ಟೋಣ. ಹೀಗೆ ಮಾಡಿದಾಗ ಧನಲಕ್ಷ್ಮಿ, ವಿದ್ಯಾಲಕ್ಷ್ಮಿ, ಧಾನ್ಯಲಕ್ಷ್ಮಿಯರು ನಮ್ಮೊಡನೆ ಮಾತ್ರವಲ್ಲ, ನಮ್ಮ ಕುಟುಂಬದ ಮುಂದಿನ ಮೂರು ತಲೆಮಾರುಗಳ ಕಾಲವೂ ನೆಲೆಸುವುದು ಖಚಿತ. ಎಲ್ಲರಿಗೂ ಧನತ್ರಯೋದಶಿಯ ಹಾರ್ದಿಕ ಶುಭಾಶಯಗಳು..