ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಪ್ರಮಾಣ ವಚನದ ಮಹತ್ವ, ತಮಾಷೆ, ಯಡವಟ್ಟು ಇತ್ಯಾದಿ...

ಪಂಚಾಯತ್ ಸದಸ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರೂ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಶಿಷ್ಟಾಚಾರ ಮತ್ತು ಪವಿತ್ರ ವಿಧಿ. ಚುನಾವಣೆ ಯಲ್ಲಿ ಗೆದ್ದ ವ್ಯಕ್ತಿ ಅಲ್ಲಿಯವರೆಗೆ ಕೇವಲ ಒಂದು ಪಕ್ಷದ ಅಥವಾ ಸಿದ್ಧಾಂತದ ಪ್ರತಿನಿಧಿಯಾಗಿರುತ್ತಾರೆ. ಆದರೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದ ಅವರು ಇಡೀ ದೇಶದ ಅಥವಾ ರಾಜ್ಯದ ಸೇವಕರಾಗುತ್ತಾರೆ.

ಪ್ರಮಾಣ ವಚನದ ಮಹತ್ವ, ತಮಾಷೆ, ಯಡವಟ್ಟು ಇತ್ಯಾದಿ...

-

ನೂರೆಂಟು ವಿಶ್ವ

ನಾನು ಕಳೆದ ಮೂವತ್ತೈದು ವರ್ಷಗಳಲ್ಲಿ ಎಲ್ಲ ಸರಕಾರಗಳ ಪ್ರಮಾಣ ವಚನ ಕಾರ್ಯ ಕ್ರಮಗಳಿಗೆ ತಪ್ಪದೇ ಹಾಜರಾಗಿದ್ದೇನೆ. ಇಂದು ಲೋಕ ಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಹೋಗಿದ್ದೆ. ಈ ಕಾರ್ಯಕ್ರಮದಲ್ಲಿ ಕುಳಿತಾಗ ನಮ್ಮಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕಿರುವ ಮಹತ್ವ ನನ್ನ ಕಣ್ಣ ಮುಂದೆ ಹಾದು ಹೋಯಿತು.

ಪ್ರಮಾಣ ವಚನ ಕಾರ್ಯಕ್ರಮ ನಡೆಯದೇ ಯಾವ ಸರಕಾರವೂ ಅಸ್ತಿತ್ವಕ್ಕೆ ಬರುವುದಿಲ್ಲ. ಈ ಕಾರ್ಯಕ್ರಮವೇ ಹೊಸ ಸರಕಾರಕ್ಕೆ ಓಂಕಾರ. ಮಾನವನ ಬದುಕಿನಲ್ಲಿ ‘ಮಾತು’ ಬೆಳ್ಳಿ ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ‘ಪ್ರಮಾಣ’ ಬಂಗಾರ. ಸಾಮಾನ್ಯ ಮನುಷ್ಯನಿಗೆ ಆಣೆ-ಪ್ರಮಾಣಗಳು ನೈತಿಕತೆಯ ಸಂಕೇತವಾದರೆ, ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿ ನಿಧಿಗಳಿಗೆ ಅದು ಸಂವಿಧಾನಬದ್ಧ ಶಾಸನ.

ಪಂಚಾಯತ್ ಸದಸ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರೂ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಶಿಷ್ಟಾಚಾರ ಮತ್ತು ಪವಿತ್ರ ವಿಧಿ. ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಅಲ್ಲಿಯವರೆಗೆ ಕೇವಲ ಒಂದು ಪಕ್ಷದ ಅಥವಾ ಸಿದ್ಧಾಂತದ ಪ್ರತಿನಿಧಿಯಾಗಿರುತ್ತಾರೆ. ಆದರೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದ ಅವರು ಇಡೀ ದೇಶದ ಅಥವಾ ರಾಜ್ಯದ ಸೇವಕರಾಗುತ್ತಾರೆ.

‘ನಾನು’ ಎನ್ನುವ ವ್ಯಕ್ತಿತ್ವವನ್ನು ಬಿಟ್ಟು ‘ಸಂವಿಧಾನದ ಪ್ರತಿನಿಧಿ’ ಎಂಬ ಹೊಸ ರೂಪ ವನ್ನು ಅವರು ಇಲ್ಲಿ ಪಡೆದುಕೊಳ್ಳುತ್ತಾರೆ. ಇದು ಅಧಿಕಾರವನ್ನು ವೈಯಕ್ತಿಕ ಸ್ವತ್ತಾಗದಂತೆ ತಡೆಯುವ ಮೊದಲ ಹಂತ.

ಇದನ್ನೂ ಓದಿ: Vishweshwar Bhat Column: ಸುಮನ್‌ ಕಲ್ಯಾಣಪುರ ಒಂದು ನೆನಪು

‘ರಾಗ-ದ್ವೇಷಗಳಿಲ್ಲದೇ, ಭಯ ಅಥವಾ ಒಲವು ತೋರದೇ’ ಕರ್ತವ್ಯ ನಿರ್ವಹಿಸುತ್ತೇನೆ ಎಂಬ ಸಾಲು ಪ್ರಜಾಪ್ರಭುತ್ವದ ಜೀವಾಳ. ಅಧಿಕಾರ ಹಿಡಿದ ಮೇಲೆ ತನಗೆ ಮತ ಹಾಕಿದ ವರು ಮತ್ತು ಹಾಕದವರು ಎಂಬ ಭೇದವನ್ನು ಮರೆತು ಎಲ್ಲರಿಗೂ ಸಮಾನ ನ್ಯಾಯ ಒದಗಿಸಬೇಕೆಂಬ ನೈತಿಕ ಬೇಲಿಯನ್ನು ಈ ಪ್ರಮಾಣ ವಚನ ನಿರ್ಮಿಸುತ್ತದೆ.

ಅಧಿಕಾರಕ್ಕೆ ಬಂದ ಮೇಲೆ ತನ್ನನ್ನು ಬೆಂಬಲಿಸಿದವರಿಗಷ್ಟೇ ಕೆಲಸ ಮಾಡದೇ, ಪ್ರತಿಪಕ್ಷ ದವರೂ ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ನ್ಯಾಯ ನೀಡುವ ಹೊಣೆಗಾರಿಕೆ ಇದರಲ್ಲಿದೆ. ಇದು ಪಕ್ಷಪಾತದ ವಿರುದ್ಧದ ನೈತಿಕ ಬೇಲಿಯಾಗಿದೆ. ಸಚಿವರಿಗೆ ಅಥವಾ ಪ್ರಧಾನಿಗೆ ಇದು ಅತ್ಯಂತ ದೊಡ್ಡ ಸವಾಲು.

ಸಚಿವರು ಮತ್ತು ಉನ್ನತ ಹುದ್ದೆಯಲ್ಲಿರುವವರು ‘ಗೌಪ್ಯತೆಯ ಪ್ರಮಾಣ’ (Oath of Secrecy) ಸ್ವೀಕರಿಸುತ್ತಾರೆ. ದೇಶದ ಭದ್ರತೆ, ಆರ್ಥಿಕ ನೀತಿಗಳು ಮತ್ತು ಆಡಳಿತಾತ್ಮಕ ರಹಸ್ಯಗಳನ್ನು ಕಾಪಾಡುವ ಜವಾಬ್ದಾರಿ ಇದರ ಮೇಲಿದೆ. ಈ ಪ್ರಮಾಣವನ್ನು ಮುರಿಯು ವುದು ಕೇವಲ ವಿಶ್ವಾಸದ್ರೋಹವಲ್ಲ, ಅದು ದೇಶದ್ರೋಹಕ್ಕೆ ಸಮಾನವಾದ ಅಪರಾಧ.

ರಾಷ್ಟ್ರಪತಿಗಳು ಸಂವಿಧಾನದ ರಕ್ಷಕರಾಗಿ ಪ್ರಮಾಣ ಮಾಡಿದರೆ, ಪ್ರಧಾನಿ ಮತ್ತು ಸಚಿವರು ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಮಾಣ ಮಾಡುತ್ತಾರೆ. ಈ ವಿಧಿಯು ಕೇವಲ ಸಂಪ್ರದಾಯವಲ್ಲ. ಇದು ಕಾನೂನಿನ ಚೌಕಟ್ಟು. ಪ್ರಮಾಣ ವಚನ ಸ್ವೀಕರಿಸದ ಹೊರತು ಯಾವುದೇ ನಾಯಕ ಅಧಿಕೃತವಾಗಿ ಕಡತಗಳಿಗೆ ಸಹಿ ಹಾಕುವ ಅಧಿಕಾರ ಪಡೆಯುವುದಿಲ್ಲ. ಇದು ಪ್ರಜಾಪ್ರಭುತ್ವದ ಸ್ವಚ್ಛಂದ ಹರಿವನ್ನು ನಿಯಂತ್ರಿಸುವ ಒಂದು ವಿಧಿಬದ್ಧ ನಿಯಮ. ಕೋಟಿ ಕೋಟಿ ಜನರ ಆಸೆ-ಆಕಾಂಕ್ಷೆಗಳನ್ನು ಪ್ರತಿನಿಧಿಸುವ ನಾಯಕರು, ದೇವರ ಹೆಸರಿ ನಲ್ಲಿ ಅಥವಾ ಸತ್ಯನಿಷ್ಠೆಯ ಹೆಸರಿನಲ್ಲಿ ಪ್ರಮಾಣ ಮಾಡುವಾಗ ಜನರ ನಂಬಿಕೆ ಗಟ್ಟಿಯಾಗುತ್ತದೆ. ಈ ಆಣೆ-ಪ್ರಮಾಣವು ಆಡಳಿತಗಾರನಿಗೆ ತನ್ನ ಜವಾಬ್ದಾರಿಯನ್ನು ಕ್ಷಣಕ್ಷಣಕ್ಕೂ ನೆನಪಿಸುವ ಮಂತ್ರ ಎಂದು ಅನಿಸಿಕೊಳ್ಳುತ್ತದೆ.

DCM oath

ಪ್ರಮಾಣ ವಚನ ಎಂಬುದು ಅಧಿಕಾರಕ್ಕೆ ನೀಡುವ ‘ಸಂಸ್ಕಾರ’. ಇದು ಸ್ವಾರ್ಥವನ್ನು ಸುಟ್ಟು, ಸೇವೆಯ ದೀಪವನ್ನು ಹಚ್ಚುವ ಪವಿತ್ರ ಸಂಕಲ್ಪ. ಒಬ್ಬ ವ್ಯಕ್ತಿ ಸಾರ್ವಜನಿಕ ಅಧಿಕಾರವನ್ನು ವಹಿಸಿಕೊಳ್ಳುವಾಗ ಈ ಶಪಥದ ಮೂಲಕ ವೈಯಕ್ತಿಕ ಇಚ್ಛೆಗಿಂತ ದೇಶದ ಹಿತವೇ ದೊಡ್ಡದು ಎಂದು ಒಪ್ಪಿಕೊಳ್ಳುತ್ತಾನೆ.

ಪ್ರಮಾಣ ವಚನ ಸ್ವೀಕರಿಸುವ ಸಚಿವರು ಅಥವಾ ಪ್ರಧಾನಿ ಅಥವಾ ಮುಖ್ಯಮಂತ್ರಿ ತಾವು ಸಂವಿಧಾನದ ಆಶಯಗಳಿಗೆ ಬದ್ಧರಾಗಿರುವುದಾಗಿ ಘೋಷಿಸುತ್ತಾರೆ. ಇದು ‘ವ್ಯಕ್ತಿ ಆರಾಧನೆ’ ಗಿಂತ ‘ಕಾನೂನಿನ ಆಳ್ವಿಕೆ’ (Rule of Law) ದೊಡ್ಡದು ಎಂಬುದನ್ನು ಎತ್ತಿ ಹಿಡಿಯುತ್ತದೆ.

ಯಾವುದೇ ನಾಯಕ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿ ನಡೆಯಲು ಈ ಶಪಥ ಅಡ್ಡಿಯಾಗುತ್ತದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ‘ಏಕತೆ ಮತ್ತು ಸಮಗ್ರತೆ’ ಕಾಪಾಡುವ ಭರವಸೆ ಅತ್ಯಗತ್ಯ. ಸಚಿವರು ತೆಗೆದುಕೊಳ್ಳುವ ‘ಗೌಪ್ಯತೆಯ ಪ್ರಮಾಣ ವಚನ’ (Oath of Secrecy) ದೇಶದ ಆಂತರಿಕ ಭದ್ರತೆ ಮತ್ತು ಆಡಳಿತಾತ್ಮಕ ರಹಸ್ಯಗಳನ್ನು ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಇದು ಅಧಿಕಾರ ದುರುಪಯೋಗವಾಗದಂತೆ ತಡೆಯುವ ಶಿಸ್ತಿನ ಮಂತ್ರ. ಪ್ರಮಾಣ ವಚನ ವು ದೈಹಿಕವಾಗಿ ಒಂದು ಪತ್ರವನ್ನು ಓದುವ ಕ್ರಿಯೆಯಾದರೂ, ನೈತಿಕವಾಗಿ ಅದು ಜನರ ನಂಬಿಕೆಗೆ ನೀಡುವ ಭರವಸೆ. ಒಬ್ಬ ಜನಪ್ರತಿನಿಧಿ ಮಾಡುವ ಭ್ರಷ್ಟಾಚಾರ ಅಥವಾ ಕರ್ತವ್ಯಲೋಪ ಕೇವಲ ಕಾನೂನಿನ ಉಲ್ಲಂಘನೆಯಲ್ಲ, ಅದು ತಾನು ಸ್ವೀಕರಿಸಿದ ಶಪಥಕ್ಕೆ ಎಸಗಿದ ದ್ರೋಹವಾಗುತ್ತದೆ.

ಪ್ರಜಾಪ್ರಭುತ್ವದ ಸುದೀರ್ಘ ಪಯಣದಲ್ಲಿ ಚುನಾವಣೆಗಳು ಕೇವಲ ಜನಾದೇಶದ ಪ್ರಕ್ರಿಯೆಯಾದರೆ, ಪ್ರಮಾಣ ವಚನವು ಆ ಆದೇಶಕ್ಕೆ ಅಧಿಕೃತ ಮುದ್ರೆ ಒತ್ತುವ ಪವಿತ್ರ ಕ್ಷಣ. ಹಳೆಯ ಆಡಳಿತ ಅಂತ್ಯಗೊಂಡು ಹೊಸಬರು ಗದ್ದುಗೆ ಏರುವ ಆ ಸಂಧಿಕಾಲದಲ್ಲಿ, ಯಾವುದೇ ಅಸ್ಥಿರತೆ ಉಂಟಾಗದಂತೆ ತಡೆಯುವ ಶಕ್ತಿ ಈ ಸಾಂವಿಧಾನಿಕ ವಿಧಿಗಿದೆ.

ವ್ಯಕ್ತಿಗಳು ಬದಲಾಗಬಹುದು, ಪಕ್ಷಗಳು ಬದಲಾಗಬಹುದು, ಆದರೆ ‘ರಾಜ್ಯ’ ಅಥವಾ ‘ದೇಶ’ ಎಂಬ ವ್ಯವಸ್ಥೆ ಸ್ಥಿರವಾಗಿರುತ್ತದೆ. ಪ್ರಮಾಣ ವಚನವು ಅಧಿಕಾರವನ್ನು ಒಂದು ಕೈಯಿಂದ ಇನ್ನೊಂದು ಕೈಗೆ ಹಸ್ತಾಂತರಿಸುವಾಗ ಸಂವಿಧಾನದ ಆಶಯಗಳು ಅಬಾಧಿತವಾಗಿರುತ್ತವೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ.

ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿ ಆಡಳಿತಗಾರನಾಗುವುದಿಲ್ಲ. ಸಂವಿಧಾನ ದಲ್ಲಿ ನಿಗದಿಪಡಿಸಿದ ಪಠ್ಯವನ್ನು ಓದಿ, ಅದಕ್ಕೆ ಸಹಿ ಹಾಕಿದ ಕ್ಷಣದಿಂದಲೇ ಅವರಿಗೆ ಕಾನೂನುಬದ್ಧ ಅಧಿಕಾರ ಲಭಿಸುತ್ತದೆ.

ಇದು ಅರಾಜಕತೆಯನ್ನು ತಡೆದು ವಿಧಿಬದ್ಧ ಆಡಳಿತಕ್ಕೆ ನಾಂದಿ ಹಾಡುತ್ತದೆ. ಈ ವಿಧಿಯು ಹೊಸ ಆಡಳಿತಗಾರರಿಗೆ ತಾವು ದೇಶದ ಮಾಲೀಕರಲ್ಲ, ಬದಲಿಗೆ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಸೇವಕರು ಎಂಬುದನ್ನು ನೆನಪಿಸುತ್ತದೆ. ಈ ಮೂಲಕ ಹಳೆಯ ಆಡಳಿತದ ಒಳ್ಳೆಯ ಯೋಜನೆಗಳು ಮತ್ತು ಸಾಂವಿಧಾನಿಕ ಬದ್ಧತೆಗಳು ಹೊಸ ಕಾಲದಲ್ಲೂ ಮುಂದು ವರಿಯುವ ಭರವಸೆ ಸಿಗುತ್ತದೆ.

ಪ್ರಮಾಣ ವಚನವು ಹಳೆಯ ಮತ್ತು ಹೊಸ ಆಡಳಿತದ ನಡುವಿನ ಕೊಂಡಿ ಮಾತ್ರವಲ್ಲ; ಅದು ಪ್ರಜಾಪ್ರಭುತ್ವದ ಆಶಯಗಳು ಸಾಯದಂತೆ ಕಾಪಾಡುವ ವಿಶ್ವಾಸದ ಸೇತುವೆ. ಹೀಗಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಎಲ್ಲಿಲ್ಲದ ಮಹತ್ವ. ಕೇಂದ್ರದಲ್ಲಾದರೆ ರಾಷ್ಟ್ರ ಪತಿ, ರಾಜ್ಯದದರೆ ಅವರ ಪ್ರತಿನಿಧಿಯಾದ ರಾಜ್ಯಪಾಲರು ಪ್ರಮಾಣ ವಚನ ಹಾಗೂ ಅಧಿಕಾರದ ಗೌಪ್ಯತೆಯನ್ನು ಬೋಧಿಸುವುದು.

ಇದು ಕೇವಲ ಶಿಷ್ಟಾಚಾರವಲ್ಲ, ಅದು ಸಂವಿಧಾನದ ಸರ್ವೋಚ್ಚ ಅಧಿಕಾರವನ್ನು ಎತ್ತಿ ಹಿಡಿಯುವ ಪ್ರಕ್ರಿಯೆ. ರಾಷ್ಟ್ರಪತಿಗಳು ದೇಶದ ಪ್ರಥಮ ಪ್ರಜೆ ಮತ್ತು ಸಂವಿಧಾನದ ರಕ್ಷಕರು. ಹಾಗೆಯೇ ರಾಜ್ಯಪಾಲರು ರಾಜ್ಯಗಳಲ್ಲಿ ಕೇಂದ್ರದ ಮತ್ತು ಸಂವಿಧಾನದ ಪ್ರತಿನಿಧಿ ಗಳು.

ಒಬ್ಬ ಪ್ರಧಾನಿ ಅಥವಾ ಮುಖ್ಯಮಂತ್ರಿ ಇವರ ಸಮ್ಮುಖದಲ್ಲಿ ಪ್ರಮಾಣ ಮಾಡುವು ದೆಂದರೆ, ಅವರು ವೈಯಕ್ತಿಕವಾಗಿ ಆ ವ್ಯಕ್ತಿಗೆ ಬದ್ಧರಾಗಿರುವುದಲ್ಲ, ಬದಲಿಗೆ ಆ ವ್ಯಕ್ತಿ ಪ್ರತಿನಿಧಿಸುವ ‘ಭಾರತದ ಸಂವಿಧಾನ’ಕ್ಕೆ ಬದ್ಧರಾಗಿರುತ್ತಾರೆ ಎಂದರ್ಥ.

ಸಚಿವರು ಎರಡು ರೀತಿಯ ಪ್ರಮಾಣ ಮಾಡುತ್ತಾರೆ. ಒಂದು ‘ಪದವಿ’ಯ ಪ್ರಮಾಣ, ಇನ್ನೊಂದು ‘ಗೌಪ್ಯತೆ’ಯ ಪ್ರಮಾಣ. ದೇಶದ ಭದ್ರತೆ ಅಥವಾ ಆಡಳಿತಾತ್ಮಕವಾಗಿ ಗೌಪ್ಯವಾಗಿಡಬೇಕಾದ ವಿಷಯಗಳನ್ನು ಹೊರಗೆ ಬಿಟ್ಟುಕೊಡುವುದಿಲ್ಲ ಎಂಬುದು ಇದರ ಮಹತ್ವ. ಗೌಪ್ಯತೆಯ ಪ್ರಮಾಣ ಆಡಳಿತದ ಸೂಕ್ಷ ವಿಷಯಗಳನ್ನು, ದೇಶದ ಭದ್ರತೆಗೆ ಸಂಬಂಧಿಸಿದ ರಹಸ್ಯಗಳನ್ನು ಅಧಿಕೃತವಾಗಿ ಅಗತ್ಯವಿರುವ ಸಂದರ್ಭದ ಹೊರತು ಬೇರೆಯವರಿಗೆ ಬಹಿರಂಗಪಡಿಸುವುದಿಲ್ಲ ಎಂಬ ಶಪಥ.

ರಾಷ್ಟ್ರಪತಿ ಅಥವಾ ರಾಜ್ಯಪಾಲರು ಈ ಶಪಥ ಬೋಧಿಸುವ ಮೂಲಕ, ಆಡಳಿತಗಾರನ ಮೇಲೆ ಸಾಂವಿಧಾನಿಕ ನಿಯಂತ್ರಣದ ಕಾವಲುಗಾರರಾಗಿ ನಿಲ್ಲುತ್ತಾರೆ.

ಯಾವುದೇ ಒಬ್ಬ ಸಚಿವ ಅಥವಾ ಮುಖ್ಯಮಂತ್ರಿ ತಪ್ಪು ದಾರಿಯಲ್ಲಿ ನಡೆದಾಗ ಅಥವಾ ಸಂವಿಧಾನ ಬಾಹಿರವಾಗಿ ವರ್ತಿಸಿದಾಗ, ಅವರಿಗೆ ಪ್ರಮಾಣ ವಚನ ಬೋಧಿಸಿದ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಅವರನ್ನು ಪ್ರಶ್ನಿಸುವ ಅಥವಾ ವಜಾಗೊಳಿಸುವ ಅಧಿಕಾರ ವಿರುತ್ತದೆ. ಅಂದರೆ, ಪ್ರಮಾಣ ವಚನ ಸ್ವೀಕಾರವು ಒಬ್ಬ ನಾಯಕನನ್ನು ಸಂವಿಧಾನದ ಕಾನೂನು ಚೌಕಟ್ಟಿಗೆ ಬಂಧಿಸುವ ಪ್ರಕ್ರಿಯೆ ಎಂದಂತಾಯಿತು.

ರಾಷ್ಟ್ರಪತಿ ಮತ್ತು ರಾಜ್ಯಪಾಲರು ಪ್ರಮಾಣ ವಚನ ಬೋಧಿಸುವುದು ಎಂದರೆ, ಅದು ಅಧಿಕಾರಕ್ಕೆ ಸಂವಿಧಾನದ ಮುದ್ರೆ ಒತ್ತಿದಂತೆಯೂ ಹೌದು ಹಾಗೂ ಪ್ರಮಾಣ ವಚನವು ಒಬ್ಬ ಜನಪ್ರತಿನಿಧಿಯನ್ನು ‘ಸಾಮಾನ್ಯ ವ್ಯಕ್ತಿ’ಯಿಂದ ‘ಸಾರ್ವಜನಿಕ ಸೇವಕ’ನನ್ನಾಗಿ ರೂಪಾಂತರಿಸುವ ಅಗ್ನಿಪರೀಕ್ಷೆಯೂ ಹೌದು. ಒಮ್ಮೆ ಪ್ರಮಾಣ ವಚನ ಸ್ವೀಕರಿಸಿದ ನಂತರ, ಆ ವ್ಯಕ್ತಿ ಮಾಡುವ ಪ್ರತಿಯೊಂದು ತಪ್ಪೂ ಕೇವಲ ವೈಯಕ್ತಿಕ ತಪ್ಪಾಗದೆ ‘ಸಂವಿಧಾನದ ಉಲ್ಲಂಘನೆ’ಯಾಗಿ ಮಾರ್ಪಡುತ್ತದೆ. ಇದು ಅವರ ಮೇಲೆ ಒಂದು ಕಾನೂನಾತ್ಮಕ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ.

ಸಾಮಾನ್ಯವಾಗಿ ಪ್ರಮಾಣ ವಚನ ಕಾರ್ಯಕ್ರಮದಷ್ಟು ಗಂಭೀರವಾದುದು ಮತ್ತೊಂದಿಲ್ಲ. ಅಲ್ಲಿ ಎಲ್ಲವೂ ಕರಾರುವಾಕ್ಕು. ಎಲ್ಲವೂ ನಿಯಮ ಮತ್ತು ಶಿಷ್ಟಾಚಾರಬದ್ಧ. ಯಾರು ಮಂತ್ರಿಯಾಗುತ್ತಾರೆ ಎಂಬ ಕುತೂಹಲವಿರುವುದರಿಂದ ಆ ಕಾರ್ಯಕ್ರಮವನ್ನು ಇಡೀ ದೇಶ ಅಥವಾ ಆಯಾ ರಾಜ್ಯದ ಬಹುಸಂಖ್ಯಾತ ಜನ ವೀಕ್ಷಿಸುತ್ತಾರೆ.

ಬಿಹಾರದ ರಾಜಕೀಯ ಇತಿಹಾಸದಲ್ಲಿ ಅಬ್ದುಲ್ ಗಫಾರ್ ಪ್ರಮಾಣ ವಚನ ಸ್ವೀಕಾರದ ಪ್ರಸಂಗವು ಅತ್ಯಂತ ಚರ್ಚಿತ ಮತ್ತು ಮುಜುಗುರ ತಂದ ಘಟನೆಗಳಲ್ಲಿ ಒಂದು ಎಂದು ದಾಖಲಾಗಿದೆ. 2015ರಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಆರ್ಜೆಡಿ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗ, ಅಬ್ದುಲ್ ಗಫಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಏರಿದ್ದರು. ಆದರೆ, ಆ ಕ್ಷಣ ಅವರ ಪಾಲಿಗೆ ಅತ್ಯಂತ ಕಠಿಣ ಪರೀಕ್ಷೆ ಯಾಗಿ ಪರಿಣಮಿಸಿತು.

ಲಿಖಿತ ಪಠ್ಯವನ್ನು ಓದಲು ಆರಂಭಿಸಿದ ಗಫಾರ್, ಅದರಲ್ಲಿರುವ ಸರಳ ಹಿಂದಿ ಪದಗಳನ್ನು ಉಚ್ಚರಿಸಲು ಪದೇ ಪದೆ ತಡಬಡಾಯಿಸಿದರು. ಸಂವಿಧಾನಬದ್ಧವಾದ ಕೆಲವು ತಾಂತ್ರಿಕ ಪದಗಳು ಅವರ ನಾಲಿಗೆಗೆ ಒಲಿಯಲೇ ಇಲ್ಲ. ಒಂದು ಹಂತದಲ್ಲಿ ಅವರು ಪದಗಳನ್ನು ತಪ್ಪು ತಪ್ಪಾಗಿ ಓದುತ್ತಿರುವುದನ್ನು ಗಮನಿಸಿದ ಅಂದಿನ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಪ್ರತಿಯೊಂದು ಸಾಲನ್ನು ತಿದ್ದಿ ಹೇಳಿಕೊಡಬೇಕಾಯಿತು.

ಮಗುವಿಗೆ ಪಾಠ ಹೇಳಿಕೊಡುವಂತೆ ರಾಜ್ಯಪಾಲರು ಹೇಳುತ್ತಿದ್ದರೂ, ಗಫಾರ್ ಅವರಿಗೆ ಅದನ್ನು ಅನುಕರಿಸಲು ಸಾಧ್ಯವಾಗಿರಲಿಲ್ಲ. ಈ ದೃಶ್ಯವು ವೇದಿಕೆಯ ಮೇಲಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರನ್ನೂ ಮುಜುಗುರಕ್ಕೀಡು ಮಾಡಿತು. ಗಫಾರ್ ಅವರು ಪದಗಳನ್ನು ಉಚ್ಚರಿಸಲು ಕಷ್ಟಪಡುತ್ತಿದ್ದ ವಿಡಿಯೋ ವೈರಲ್ ಆಗಿ, ಬಿಹಾರದ ರಾಜಕೀಯ ವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾದವು.

ಅದೇ ರೀತಿ, 2017ರಲ್ಲಿ ನಿತೀಶ್ ಕುಮಾರ್ ಮಹಾಘಟಬಂಧನದಿಂದ ಹೊರಬಂದು ಬಿಜೆಪಿ ಜತೆ ಸೇರಿ ಹೊಸ ಸರಕಾರ ರಚಿಸಿದಾಗ, ಸಂತೋಷ್ ಕುಮಾರ್ ನಿರಾಲಾ ಜೆಡಿಯು ಕೋಟಾ ದಡಿ ಸಚಿವರಾಗಿ ಆಯ್ಕೆಯಾಗಿದ್ದರು. ಪ್ರಮಾಣ ವಚನ ಸ್ವೀಕರಿಸಲು ರಾಜಭವನದ ವೇದಿಕೆಯ ಮೇಲೆ ಬಂದ ನಿರಾಲಾ ಅವರಿಗೆ ಪಠ್ಯದಲ್ಲಿದ್ದ ಅಧಿಕೃತ ಹಿಂದಿ ಪದಗಳು ದೊಡ್ಡ ಸವಾಲಾಗಿ ಪರಿಣಮಿಸಿದವು.

ವಿಶೇಷವಾಗಿ ‘ಅಕ್ಷುಣ್ಣ’ (integrity) ಮತ್ತು ‘ಶ್ರದ್ಧಾಫಲ’ನಂಥ ಸಾಂವಿಧಾನಿಕ ಪದಗಳನ್ನು ಉಚ್ಚರಿಸಲು ಅವರು ಪದೇ ಪದೆ ತಡಬಡಾಯಿಸಿದರು. ಬಿಹಾರ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಅವರಿಗೆ ಸರಿಯಾದ ಉಚ್ಚಾರಣೆಯನ್ನು ಬೋಧಿಸ ಬೇಕಾಯಿತು.

ಮಗುವಿಗೆ ಅಕ್ಷರ ಕಲಿಸುವಂತೆ ರಾಜ್ಯಪಾಲರು ಪ್ರತಿಯೊಂದು ಪದವನ್ನು ಬಿಡಿಸಿ ಹೇಳಿ ಕೊಡುತ್ತಿದ್ದರೂ, ನಿರಾಲಾ ಅವರಿಗೆ ಅದನ್ನು ಮರುಉಚ್ಚರಿಸಲು ಆಗದೇ ಹೆಣಗಿದ ಪ್ರಸಂಗವನ್ನು ಮರೆಯಲು ಸಾಧ್ಯವಿಲ್ಲ.

ನೆನಪಾಗುವ ಇನ್ನೊಂದು ಪ್ರಸಂಗವೆಂದರೆ, ಲಾಲೂ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಪ್ರಮಾಣ ವಚನ ಸ್ವೀಕಾರದ ಘಟನೆ. ಅದು ಅತ್ಯಂತ ಹಾಸ್ಯಾಸ್ಪದ ಮತ್ತು ಗಂಭೀರ ಪ್ರಮಾದ ಎಂದು ಅನಿಸಿಕೊಂಡಿದೆ. 2015ರಲ್ಲಿ ಬಿಹಾರದ ಸಚಿವರಾಗಿ ಅಧಿಕಾರ ಸ್ವೀಕರಿಸುವಾಗ ನಡೆದ ಈ ಪ್ರಸಂಗವು ವೇದಿಕೆಯಲ್ಲಿದ್ದ ಗಣ್ಯರನ್ನು ಮತ್ತು ವೀಕ್ಷಕರನ್ನು ದಂಗಾಗಿಸಿತ್ತು. ಪ್ರಮಾಣ ವಚನದ ಪಠ್ಯವನ್ನು ಓದುತ್ತಿದ್ದ ತೇಜ್ ಪ್ರತಾಪ್, ಅದರಲ್ಲಿರುವ ‘ಅಪೇಕ್ಷಿತ’ Required/Expected) ಎಂಬ ಪ್ರಮುಖ ಪದದ ಬದಲು ‘ಉಪೇಕ್ಷಿತ’ ( Neglected) ಎಂದು ಓದಿದರು. ಈ ಒಂದು ಸಣ್ಣ ಉಚ್ಚಾರಣಾ ದೋಷವು ವಾಕ್ಯದ ಅರ್ಥ ವನ್ನೇ ಸಂಪೂರ್ಣವಾಗಿ ಬದಲಿಸಿತ್ತು. ಅಂದರೆ, ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸುವ ಬದಲು ಆಡಳಿತವನ್ನು ‘ಉಪೇಕ್ಷಿಸುತ್ತೇನೆ’ ಎಂಬ ತಪ್ಪು ಸಂದೇಶ ರವಾನೆಯಾಗಿತ್ತು.

ಅಂದಿನ ರಾಜ್ಯಪಾಲ ರಾಮನಾಥ್ ಕೋವಿಂದ್ ತಕ್ಷಣವೇ ಇದನ್ನು ಗಮನಿಸಿದರು. ಯಾದವ್ ತಪ್ಪು ಓದುತ್ತಿರುವುದನ್ನು ಕಂಡು ತಕ್ಷಣ ಮಧ್ಯಪ್ರವೇಶಿಸಿ, ‘ಇದು ಉಪೇಕ್ಷಿತ ಅಲ್ಲ, ಅಪೇಕ್ಷಿತ’ ಎಂದು ತಿದ್ದಿದರು. ಆದರೆ ತೇಜ್ ಪ್ರತಾಪ್ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದಾಗ, ರಾಜ್ಯಪಾಲರು ಕಟ್ಟುನಿಟ್ಟಾಗಿ ಅದನ್ನುಸರಿಯಾಗಿ ಉಚ್ಚರಿಸುವಂತೆ ಸೂಚಿಸಿ, ಮೊದಲಿನಿಂದ ಪ್ರಮಾಣ ವಚನವನ್ನು ಓದಿಸಿದರು.

ಸಂವಿಧಾನದ 3ನೇ ಅನುಸೂಚಿಯ ಪ್ರಕಾರ, ಪ್ರಮಾಣ ವಚನದ ಪಠ್ಯದಲ್ಲಿರುವ ಪ್ರತಿ ಯೊಂದು ಪದವೂ ಕಾನೂನುಬದ್ಧವಾಗಿ ಮುಖ್ಯ. ತಪ್ಪಾಗಿ ಓದಿದರೆ ಆ ವ್ಯಕ್ತಿ ಸಂವಿಧಾನದ ಆಶಯವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬ ಟೀಕೆಗೆ ಗುರಿಯಾಗುತ್ತಾರೆ. ಭಾರತದ ಪ್ರಮಾಣ ವಚನ ಪಠ್ಯಗಳಲ್ಲಿ ಬರುವ ‘ಅಕ್ಷುಣ್ಣತಾ’ (Integrity ಏಕತೆ, ಮುರಿಯ ಲಾಗದ, ಅಖಂಡ ಅಥವಾ ಪವಿತ್ರ ಎಂದರ್ಥ) ಎಂಬ ಪದವು ಅನೇಕ ಸಚಿವರಿಗೆ ಮತ್ತು ಶಾಸಕರಿಗೆ ಅಕ್ಷರಶಃ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಪ್ರಮಾಣ ವಚನ ಸ್ವೀಕಾರದ ಗಂಭೀರ ಕ್ಷಣದಲ್ಲಿ ಈ ಒಂದು ಪದವು ಸೃಷ್ಟಿಸುವ ಗೊಂದಲಗಳು ರಾಜಕೀಯ ಇತಿಹಾಸ ದಲ್ಲಿ ಹಾಸ್ಯ ಮತ್ತು ಮುಜುಗುರದ ಪ್ರಸಂಗಗಳಾಗಿ ದಾಖಲಾಗಿವೆ.

ಇದರಲ್ಲಿ ಬರುವ ಒತ್ತಕ್ಷರಗಳು ಮತ್ತು ಉಚ್ಚಾರಣೆಯ ಶೈಲಿಯು ತರಾತುರಿಯಲ್ಲಿ ಓದುವ ನಾಯಕರ ನಾಲಿಗೆ ಮೇಲೆ ಹೊರಳುವುದೇ ಇಲ್ಲ. ಅನೇಕರು ಇದನ್ನು ‘ಅಕ್ಷುನ್ನ’, ‘ಅಕ್ಷಂತ’ ಅಥವಾ ‘ಅಕ್ಷತ’ ಎಂದು ತಪ್ಪು ತಪ್ಪಾಗಿ ಉಚ್ಚರಿಸುತ್ತಾರೆ. ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಅನೇಕ ಪ್ರಮಾಣ ವಚನ ಸಮಾರಂಭಗಳಲ್ಲಿ ಈ ಪದದ ಉಚ್ಚಾರಣೆ ತಪ್ಪಾದಾಗ ರಾಜ್ಯಪಾಲರು ಮಧ್ಯಪ್ರವೇಶಿಸಿದ್ದಾರೆ.

‘ಒಂದು ವೇಳೆ ಈ ಪದವನ್ನು ಸರಿಯಾಗಿ ಉಚ್ಚರಿಸದಿದ್ದರೆ ದೇಶದ ಏಕತೆ ಮತ್ತು ಸಮಗ್ರತೆಗೆ ನೀಡುವ ಭರವಸೆ ಅಪಾರ್ಥವಾಗುತ್ತದೆ ಅಥವಾ ಅಪೂರ್ಣವಾಗುತ್ತದೆ’ ಎಂಬ ಕಾರಣಕ್ಕೆ ರಾಜ್ಯಪಾಲರು ಸಚಿವರನ್ನು ತಡೆದು ಹತ್ತಾರು ಬಾರಿ ಆ ಪದವನ್ನೇ ಹೇಳಿಕೊಟ್ಟ ಉದಾಹರಣೆಗಳಿವೆ.

ಸಾಮಾನ್ಯವಾಗಿ ಪ್ರಮಾಣ ವಚನವು ‘ನಾನು, (ಸಚಿವರ ಹೆಸರು)...’ ಎಂದು ಆರಂಭ ವಾಗುತ್ತದೆ. ಆದರೆ ಆರ್ಜೆಡಿ ನಾಯಕ ಆಲೋಕ್ ಕುಮಾರ್ ಮೆಹ್ತಾ ಅತಿಯಾದ ಗಾಬರಿ ಅಥವಾ ಗೊಂದಲದಿಂದಾಗಿ, ತಮ್ಮ ಹೆಸರನ್ನು ಹೇಳುವ ಬದಲು ಪಠ್ಯದ ಪಟ್ಟಿಯಲ್ಲಿ ಅಥವಾ ತಮ್ಮ ಪಕ್ಕದ ಕುರ್ಚಿಯಲ್ಲಿದ್ದ ಇನ್ನೊಬ್ಬ ಸಚಿವರ ಹೆಸರನ್ನು ಓದಲು ಆರಂಭಿಸಿದ್ದರು.

ಅಂದಿನ ಬಿಹಾರ ರಾಜ್ಯಪಾಲರಾಗಿದ್ದ ಫ.ಗು.ಚೌಹಾಣ್ ಅವರು ತಕ್ಷಣವೇ ಇವರನ್ನು ತಡೆದರು. ‘ನಿಮ್ಮ ಹೆಸರು ಹೇಳಿ, ಬೇರೆಯವರ ಹೆಸರನ್ನಲ್ಲ’ ಎಂದು ನಗುತ್ತಲೇ ಸೂಚಿಸಿ ದರು. ಮೆಹ್ತಾ ತಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡು, ಮುಗುಳ್ನಗುತ್ತಲೇ ಮತ್ತೆ ಮೊದಲಿನಿಂದ ಸರಿಯಾಗಿ ತಮ್ಮ ಹೆಸರನ್ನು ಹೇಳಿ ಪ್ರಮಾಣ ವಚನ ಪೂರೈಸಿದರು.

ಸಾಮಾನ್ಯವಾಗಿ ಅತಿ ಹೆಚ್ಚಿನ ಸಂಖ್ಯೆಯ ಸಚಿವರು ಏಕಕಾಲದಲ್ಲಿ ಅಥವಾ ಸರಣಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ, ಕೈಯಲ್ಲಿರುವ ಕಾಗದದ ಪತ್ರಗಳಲ್ಲಿ ಹೆಸರುಗಳ ಅದಲು-ಬದಲಾದಾಗ ಅಥವಾ ವೇದಿಕೆಯ ಮೇಲಿನ ಒತ್ತಡದಿಂದ ಇಂಥ ಪ್ರಮಾದಗಳು ಸಂಭವಿಸಿದ್ದುಂಟು.

ಕೇಂದ್ರದಲ್ಲಿ ಸ್ಮೃತಿ ಇರಾನಿ ಅವರು ಮೊದಲ ಬಾರಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ಅತ್ಯಂತ ಆತ್ಮವಿಶ್ವಾಸದಿಂದ ಪಠ್ಯವನ್ನು ಓದಿ ಮುಗಿಸಿದರು. ಆದರೆ, ಅಧಿಕಾರ ವಹಿಸಿಕೊಂಡ ಸಾಕ್ಷಿಯಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡುವುದನ್ನೇ ಮರೆತು ತಮ್ಮ ಸೀಟಿನ ಕಡೆಗೆ ನಡೆಯತೊಡಗಿದರು. ಆಗ ರಾಷ್ಟ್ರಪತಿಗಳು ಅವರನ್ನು ಕರೆದು ಸಹಿ ಮಾಡಿಸಿದ ಪ್ರಸಂಗ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಕೆಲವು ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಶಾಸಕರೊಬ್ಬರು ಪ್ರಮಾಣ ವಚನ ಸ್ವೀಕರಿ ಸಲು ನಿಂತಾಗ, ‘ನಾನು...’ ಎಂದು ಹೇಳಿ ತಮ್ಮ ಹೆಸರನ್ನು ಹೇಳುವ ಬದಲು ಮೌನವಾ ದರು. ಅತಿಯಾದ ಗಾಬರಿಯಿಂದ ಅವರಿಗೆ ತಮ್ಮ ಹೆಸರೇ ನೆನಪಿಗೆ ಬರಲಿಲ್ಲ. ಪಕ್ಕದಲ್ಲಿದ್ದ ಅಧಿಕಾರಿಗಳು ಅವರ ಹೆಸರನ್ನು ಕಿವಿಯಲ್ಲಿ ಹೇಳಿದ ನಂತರ ಅವರು ಪ್ರಮಾಣ ವಚನ ಮುಂದುವರಿಸಿದ್ದರು.

ಸಾಮಾನ್ಯವಾಗಿ ಪ್ರಮಾಣ ವಚನವನ್ನು ‘ದೇವರ ಹೆಸರಿನಲ್ಲಿ’ ಅಥವಾ ‘ಸಂವಿಧಾನ’ದ ಹೆಸರಿನಲ್ಲಿ ಸ್ವೀಕರಿಸುವುದು ಸಾಂಪ್ರದಾಯಿಕ ಕ್ರಮ. ಆದರೆ, ಬಿ.ಎಸ್.ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ, ‘ದೇವರ ಹೆಸರಿನಲ್ಲಿ’ ಎನ್ನುವುದರ ಜತೆಗೆ ‘ರೈತರ ಹೆಸರಿನಲ್ಲಿ’ ಎಂದು ಪ್ರಮಾಣ ಮಾಡಿದರು. ಇದು ಅವರ ರೈತಪರ ನಿಲುವನ್ನು ತೋರಿಸಲು ಮಾಡಿದ ಪ್ರಯತ್ನವಾಗಿತ್ತು.

ಸಂವಿಧಾನದ ಪಠ್ಯದಲ್ಲಿ ಇಲ್ಲದ ಪದಗಳನ್ನು ಬಳಸಬಾರದು ಎಂಬ ನಿಯಮವಿದ್ದರೂ, ಅಂದಿನ ರಾಜ್ಯಪಾಲರು ಇದನ್ನು ಅನುಮತಿಸಿದ್ದರು. ಇದು ಕರ್ನಾಟಕದ ರಾಜಕೀಯದಲ್ಲಿ ಒಂದು ಅಪರೂಪದ ಘಟನೆಯಾಗಿ ದಾಖಲಾಯ್ತು. ಪ್ರಮಾಣ ವಚನದ ವೇಳೆ ಸಚಿವರು ಅಥವಾ ಮುಖ್ಯಮಂತ್ರಿಗಳು ತಮಗೆ ಇಷ್ಟಬಂದ ದೇವರ ಹೆಸರು (ಉದಾಹರಣೆಗೆ, ಚಾಮುಂ ಡೇಶ್ವರಿ ಮೇಲೆ ಆಣೆ, ರಾಘವೇಂದ್ರ ಸ್ವಾಮಿ ಮೇಲೆ ಆಣೆ, ಜಗಜ್ಯೋತಿ ಬಸವೇಶ್ವರರ ಮೇಲೆ ಆಣೆ) ಹೇಳಲು ಅವಕಾಶವಿಲ್ಲ.

ಸಂವಿಧಾನವು ಕೇವಲ ‘ದೇವರ ಹೆಸರಿನಲ್ಲಿ’ (In the name of God) ಎಂಬ ಸಾಮಾನ್ಯ ಪದವನ್ನಷ್ಟೇ ಬಳಸಬಹುದು.ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಬಂದವರೆಲ್ಲ ಬೇರೆ ರಾಜ್ಯದವರೇ. (ಉದಾಹರಣೆಗೆ, ವಿ.ವಿ.ಗಿರಿ, ಮೋಹನ್ಲಾಲ್ ಸುಖಾಡಿಯಾ, ಅಶೋಕನಾಥ್ ಬ್ಯಾನರ್ಜಿ, ಭಾನು ಪ್ರತಾಪ್ ಸಿಂಗ್, ಖುರ್ಷೆದ್ ಅಲಂ ಖಾನ್, ತ್ರಿಲೋಕಿನಾಥ ಚತುರ್ವೇದಿ, ಹಂಸ್‌ರಾಜ್ ಭಾರದ್ವಾಜ, ವಜುಭಾಯಿ ವಾಲಾ, ಗೆಹ್ಲೋಟ್), ಅವರಿಗೆ ಕನ್ನಡದ ಉಚ್ಚಾ ರಣೆ ಸರಿಯಾಗಿ ತಿಳಿಯುವುದಿಲ್ಲ. ಇಂಥ ಸಂದರ್ಭದಲ್ಲಿ ಸಚಿವರು ತಪ್ಪು ಓದಿದರೂ ರಾಜ್ಯಪಾಲರಿಗೆ ಅರ್ಥವಾಗದೇ ಪ್ರಮಾಣ ವಚನ ಮುಗಿದು ಹೋದ ಉದಾಹರಣೆ ಗಳೂ ಇವೆ!

ಇಂದಿನ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಕೆಲವು ಅಪಸವ್ಯಗಳಾದವು. ಕೆಲವರು ತಮ್ಮ ಆರಾಧ್ಯದೈವದ ಹೆಸರಿನಲ್ಲಿ, ಮಠಾಧಿಪತಿಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದನ್ನು ಗಮನಿಸಿದ ರಾಜ್ಯಪಾಲರು, ಪಠ್ಯದಲ್ಲಿ ಬರೆದುಕೊಟ್ಟದ್ದಷ್ಟನ್ನೇ ಓದಬೇಕು ಎಂದು ಮುಖ್ಯ ಕಾರ್ಯದರ್ಶಿಯವರಿಂದ ಅನೌನ್ಸ್ ಮಾಡಿಸಿದರು. ಆದರೂ ಕೆಲವು ಸಚಿವರು ತಮಗನಿಸಿದವರ ಹೆಸರಿನಲ್ಲಿಯೇ ಪ್ರಮಾಣ ಸ್ವೀಕರಿಸಿದರು. ಉಚ್ಚಾರ ಮತ್ತು ಭಾಷಾ ಸಮಸ್ಯೆಯಿಂದ ರಾಜ್ಯಪಾಲರಿಗೆ ಆ ಪ್ರಮಾದಗಳು ಗೊತ್ತಾಗಲಿಲ್ಲ.

ವೇದಿಕೆಯ ಮೇಲೆ ಓದುವ ಸಾಲುಗಳಲ್ಲಿನ ತಪ್ಪುಗಳನ್ನು ಕ್ಷಮಿಸಬಹುದು, ಆದರೆ ಆ ಸಾಲುಗಳ ಆಶಯಕ್ಕೆ ದ್ರೋಹ ಬಗೆದರೆ ಸಂವಿಧಾನ ಕ್ಷಮಿಸುವುದಿಲ್ಲ. ಪ್ರಮಾಣ ವಚನ ಸ್ವೀಕರಿಸುವ ನಾಯಕರು ಅಕ್ಷರಗಳಿಗಿಂತ ಹೆಚ್ಚಾಗಿ ಅದರ ಹಿಂದಿರುವ ‘ಅಂತರಾತ್ಮದ ಧ್ವನಿ’ಗೆ ಬೆಲೆ ನೀಡಿದಾಗ ಮಾತ್ರ ಪ್ರಜಾಪ್ರಭುತ್ವದ ಅಸಲಿ ಸೌಂದರ್ಯ ಅನಾವರಣ ಗೊಳ್ಳಲು ಸಾಧ್ಯ. ನಗು ಇರಲಿ, ನಟನೆಯಿರಲಿ, ಆದರೆ ಜನಸೇವೆಯ ಪ್ರಮಾಣ ಮಾತ್ರ ನಿರಂತರವಾಗಿರಲಿ.