ಪ್ರಕಾಶಪಥ
ಪ್ರಕಾಶ ಶೇಷರಾಘವಾಚಾರ್
ಕಳೆದ 30 ದಿನಗಳಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರತದ ಕುರಿತು ಬಂದ ಹಲವು ಸುದ್ದಿಗಳು ಕೇವಲ ನಕಾರಾತ್ಮಕವಾದವು, ಭಾರತದಲ್ಲಿ ಉಪವಾಸ ಸತ್ಯಾಗ್ರಹ, ಭಾರತದಲ್ಲಿ ಪ್ರತಿಭಟನೆಗಳು, ಭಾರತದಲ್ಲಿ ಪ್ರವಾಹ, ಭಾರತದಲ್ಲಿ ಜಿರಳೆಗಳ ಪ್ರತಿಭಟನೆ ಎಂಬಂತಹ ಶೀರ್ಷಿಕೆ ಗಳೇ ಹೆಚ್ಚು ಕಾಣಿಸುತ್ತವೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗಳು ನಡೆಯುವುದು, ಪ್ರಕೃತಿ ವಿಕೋಪಗಳು ಸಂಭವಿಸು ವುದು ಅಥವಾ ಸರಕಾರದ ವಿರುದ್ಧ ಜನರು ಧ್ವನಿ ಎತ್ತುವುದು ಸುದ್ದಿಯಾಗುವುದು ಸಹಜ. ಇದೇ ಅವಽಯಲ್ಲಿ ಭಾರತವು ವಿಜ್ಞಾನ, ತಂತ್ರಜ್ಞಾನ, ರಕ್ಷಣೆ, ಶಿಕ್ಷಣ, ಬಾಹ್ಯಾಕಾಶ, ಸಾರಿಗೆ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ದಾಖಲಿಸಿರುವ ಅಸಾಧಾರಣ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತಿವೆಯೇ? ಅಥವಾ ವಿದೇಶಿ ಮಾಧ್ಯಮಗಳು ಭಾರತದ ಕುರಿತ ನಕಾರಾತ್ಮಕ ಚಿತ್ರಣವನ್ನಷ್ಟೇ ಕೊಡುತ್ತಿವೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಒಂದು ದೇಶದ ನಿಜವಾದ ಚಿತ್ರವನ್ನು ಕೇವಲ ಪ್ರತಿಭಟನೆಗಳು, ವಿವಾದಗಳು ಅಥವಾ ಪ್ರಕೃತಿ ವಿಕೋಪ ಗಳ ಮೂಲಕ ಅಳೆಯಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಆ ರಾಷ್ಟ್ರದ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ರಕ್ಷಣಾ ಸಾಮರ್ಥ್ಯ, ಮೂಲಸೌಕರ್ಯ ಅಭಿವೃದ್ಧಿ, ಯುವಜನರ ಪ್ರತಿಭೆ ಹಾಗೂ ನವೋದ್ಯಮಗಳನ್ನೂ ಸಮಾನವಾಗಿ ಪರಿಗಣಿಸಬೇಕು. ಜುಲೈ 19ರಂದು ಭಾರತೀಯ ಯುವ ವಿಜ್ಞಾನಿಗಳ ತಂಡ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ವಿಶ್ವದ ಅಗ್ರಸ್ಥಾನ ಪಡೆದುಕೊಂಡರು. ಜೊತೆಗೆ ಅಂತಾರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್‌ನಲ್ಲಿಯೂ ಭಾರತದ ವಿದ್ಯಾರ್ಥಿಗಳು ಪದಕಗಳನ್ನು ತಮ್ಮದಾಗಿಸಿ ಕೊಂಡರು.
ಇದನ್ನೂ ಓದಿ: Prakash Shesharaghavachar Column: ಮತದಾರ, ಕುಟುಂಬ ರಾಜಕಾರಣದ ಅಂತಿಮ ತೀರ್ಪುಗಾರ
ಜುಲೈ 12ರಂದು ಕೊಲಂಬಿಯಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿ ಯಾಡ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಐದು ಚಿನ್ನದ ಪದಕಗಳನ್ನು ಗೆದ್ದು ಜಂಟಿ ವಿಶ್ವ ಅಗ್ರಸ್ಥಾನವನ್ನು ಪಡೆದರು. ಇದು ಭಾರತದ ಯುವ ಪ್ರತಿಭೆಗಳ ಸಾಮರ್ಥ್ಯಕ್ಕೆ ಜಗತ್ತಿನ ಮನ್ನಣೆ ಯಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಯೂ ಭಾರತ ಹೊಸ ಇತಿಹಾಸ ನಿರ್ಮಿಸಿದೆ.
ಜುಲೈ 18ರಂದು ಬೆಂಗಳೂರಿನ ಸ್ಕೈ ರೂಟ್ ಏರೋಸ್ಪೇಸ್ ಸಂಸ್ಥೆಯ ಯುವ ಭಾರತೀಯ ಇಂಜಿನಿಯರ್ ಗಳು ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ಕಕ್ಷೆ ಪ್ರವೇಶ ಸಾಮರ್ಥ್ಯದ ರಾಕೆಟ್ ವಿಕ್ರಮ-1 ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾಗಿ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ತಲುಪಿಸಿತು. ಅಮೆರಿಕ ಮತ್ತು ಚೀನಾ ನಂತರ ಇಂದು ಖಾಸಗಿ ಕಕ್ಷೆಯ ವಾಹನವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ 3ನೇ ರಾಷ್ಟ್ರ ಭಾರತವಾಗಿದೆ.
ಇದೇ ವೇಳೆ ಈಶಾನ್ಯ ಭಾರತದ ಬಾಹ್ಯಾಕಾಶ ಸಂವಹನ ಸಾಮರ್ಥ್ಯವನ್ನು ಬಲಪಡಿಸಲು ಅಸ್ಸಾಂನ ಲೆಡೊದಲ್ಲಿ ಹೊಸ ಸ್ಯಾಟಲೈಟ್ ಅರ್ಥ್ ಸ್ಟೇಷನ್ ನಿರ್ಮಿಸುವ ಯೋಜನೆಯನ್ನು ಇಸ್ರೋ ಘೋಷಿಸಿತು. ಜೊತೆಗೆ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ 175 ಟನ್ ತಳ್ಳುವ ಶಕ್ತಿಯ ಪವರ್ ಹೆಡ್ ಪರೀಕ್ಷೆಯನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿತು.
ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ‘ಸೆಮಿಕಾನ್ 2.0’ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಒಟ್ಟು 27500 ಕೋಟಿ ರೂ. ಗಳ ಬಜೆಟ್ ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದು, ದೇಶೀಯ ಉತ್ಪಾದನೆಯನ್ನು ಉತ್ತೇಜಿಸು ವುದು, ತಂತ್ರಜ್ಞಾನದಲ್ಲಿ ಆತ್ಮನಿರ್ಭರತೆ ಸಾಧಿಸುವುದು ಮತ್ತು ಲಕ್ಷಾಂತರ ಉದ್ಯೋಗಾವಕಾಶ ಗಳನ್ನು ಸೃಷ್ಟಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ.
ಮೊಬೈಲ್ ಫೋನ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್‌ಗೆ 62500 ಕೋಟಿಗಳ ಬಜೆಟ್ ವೆಚ್ಚಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯು 2026-27ನೇ ಹಣಕಾಸು ವರ್ಷದಿಂದ 2030-31ನೇ ಹಣಕಾಸು ವರ್ಷದವರೆಗೆ, ಒಟ್ಟು 5 ವರ್ಷಗಳ ಕಾಲ ಜಾರಿಯಲ್ಲಿ ಇರುತ್ತದೆ. ಭಾರತೀಯ ರೈಲ್ವೆ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿತು. ಜುಲೈ 17ರಂದು ಹರಿಯಾಣದ ಜಿಂದ್‌ನಿಂದ ದೇಶದ ಮೊದಲ ಸ್ವದೇಶಿ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲಿಗೆ ಚಾಲನೆ ನೀಡಲಾಯಿತು. ಮಾಲಿನ್ಯರಹಿತ, ಪರಿಸರ ಸ್ನೇಹಿ ಮತ್ತು ಭವಿಷ್ಯದ ಸಾರಿಗೆ ವ್ಯವಸ್ಥೆಯತ್ತ ಭಾರತ ಸಾಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಭಾರತ, ಹೈಡ್ರೋಜನ್ ರೈಲನ್ನು ಅಭಿವೃದ್ಧಿಪಡಿಸಿ ದೈನಂದಿನ ಸೇವೆ ಆರಂಭಿಸಿರುವ ಆರನೇ ದೇಶವಾಗಿದೆ.
ಅದೇ ರೀತಿ ಜುಲೈ 13ರಂದು ಲಖನೌ-ಕಾನ್ಪುರ ಎಕ್ಸ್‌ಪ್ರೆಸ್ ವೇ ದೇಶದ ಮೊದಲ ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯ ಬ್ಯಾರಿಯರ್-ರಹಿತ ಎಕ್ಸ್‌ಪ್ರೆಸ್‌ವೇ ಆಗಿ ಸಾರ್ವಜನಿಕ ಬಳಕೆಗೆ ತೆರೆಯಿತು. ರೈಲ್ವೆ ಸುರಕ್ಷತೆಯಲ್ಲಿಯೂ ಮಹತ್ವದ ಪ್ರಗತಿ ಕಂಡುಬಂದಿದೆ. ಎಲ್ಎಚ್‌ಬಿ ರೈಲು ಬೋಗಿಗಳ ಸಂಪೂರ್ಣ ಪ್ರಮಾಣದ ಅಪರಾಧ ಪ್ರತಿರೋಧ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅಮೃತ ಭಾರತ ರೈಲ್ವೇ ಸ್ಟೇಷನ್ ಅಭಿವೃದ್ಧಿ ಯೋಜನೆಯಡಿಯಲ್ಲಿ ನವೀಕೃತಗೊಂಡ ದೇಶದ 75 ರೈಲು ನಿಲ್ದಾಣಗಳನ್ನು ಉದ್ಘಾಟನೆ ಮಾಡಲಾಯಿತು. ಇದರಲ್ಲಿ ಕರ್ನಾಟಕದ ಬಾದಾಮಿ, ಬಂಟ್ವಾಳ, ಅಣ್ಣಿಗೇರಿ ಮತ್ತು ಕೊಪ್ಪಳ ಸೇರಿವೆ. ಇದೇ ವೇಳೆ ಭಾರತದ ನಿರ್ಮಾಣವಾಗುತ್ತಿರುವ ಸಿ-295 ಸೇನಾ ಸಾರಿಗೆ ವಿಮಾನದ ಮೊದಲ ಹಾರಾಟ ಆತ್ಮನಿರ್ಭರ ಭಾರತದ ಮತ್ತೊಂದು ಪ್ರಮುಖ ಸಾಧನೆಯಾಗಿದೆ.
ಜೋಧ್‌ಪುರ ವಿಮಾನ ನಿಲ್ದಾಣದ ಪುನರ್ ನಿರ್ಮಾಣವಾಗಿ ಪ್ರಧಾನಿ ನರೇಂದ್ರ ಮೋದಿಯವರು ಜುಲೈ 4ರಂದು ಇದರ ಉದ್ಘಾಟನೆ ಮಾಡಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರತೆಯತ್ತ ಮತ್ತಷ್ಟು ವೇಗವಾಗಿ ಹೆಜ್ಜೆ ಹಾಕುತ್ತಿದೆ. ಡಿಆರ್‌ಡಿಒ ಸ್ವದೇಶಿ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಯ ಯಶಸ್ವಿ ಪರೀಕ್ಷೆ ನಡೆಸಿ ಸುರಕ್ಷಿತ ಕಾರ್ಯತಂತ್ರದ ಸಂವಹನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿತು.
ದೀರ್ಘ ವ್ಯಾಪ್ತಿಯ ಭೂ ಆಕ್ರಮಣ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಜುಲೈ 11ರಂದು ಸುಮಾರು 75 ಶೇಕಡಾ ಸ್ವದೇಶಿ ತಂತ್ರಜ್ಞಾನ ಹೊಂದಿರುವ ಐಎನ್‌ಎಸ್ ಮಹೇಂದ್ರಗಿರಿ ನೌಕಾಪಡೆಗೆ ಸೇರ್ಪಡೆಯಾಯಿತು. ಅದಕ್ಕೂ ಮೊದಲು ಜೂನ್ 21ರಂದು ಐಎನ್‌ಎಸ್ ದುನಗಿರಿ, ಐಎನ್‌ಎಸ್ ಸಂಶೋಧಕ್ ಮತ್ತು ಐಎನ್ ಎಸ್ ಅಗ್ರಯ್ ಸೇರಿದಂತೆ ಮೂರು ಸ್ವದೇಶಿ ಯುದ್ಧನೌಕೆಗಳನ್ನು ದೇಶಕ್ಕೆ ಸಮರ್ಪಿಸಲಾಯಿತು. ಇದೇ ಅವಧಿಯಲ್ಲಿ ಭಾರತದ ರಕ್ಷಣಾ ಉತ್ಪಾದನೆ 1.78 ಲಕ್ಷ ಕೋಟಿ ಎಂಬ ದಾಖಲೆಯ ಮಟ್ಟ ತಲುಪಿತು.
ಭಾರತ ಇಂದು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರದಿಂದ ಅವುಗಳನ್ನು ಅಭಿವೃದ್ಧಿ ಪಡಿಸಿ ಉತ್ಪಾದಿಸುವ ರಾಷ್ಟ್ರವಾಗಿ ರೂಪಾಂತರಗೊಳ್ಳುತ್ತಿದೆ. ವಿಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರ ಗಳಲ್ಲಿಯೂ ಭಾರತದ ಸಾಧನೆ ಗಮನಾರ್ಹವಾಗಿದೆ. ಬೆಂಗಳೂರಿನ ವಿಮ್ಯಾಗ್ ಲ್ಯಾಬ್ಸ್ ಅಪರೂಪದ ಖನಿಜಗಳ ಅವಲಂಬನೆಯಿಲ್ಲದ ಸಾಫ್ಟ್ʼವೇರ್ ಆಧಾರಿತ ವಿದ್ಯುತ್ ಮೋಟಾರ್ ತಂತ್ರಜ್ಞಾನಕ್ಕೆ ಐದನೇ ಭಾರತೀಯ ಪೇಟೆಂಟ್ ಪಡೆದಿದೆ.
ಐಐಟಿ ಗಾಂಧಿನಗರದ ಸಂಶೋಧಕರು ಎಐ ಡೇಟಾ ಸೆಂಟರ್ ಗಳು ಹಾಗೂ ವಿದ್ಯುತ್ ವಾಹನಗಳಿ ಗಾಗಿ ಸ್ವದೇಶಿ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಅನುದಾನ ಪಡೆದಿದ್ದಾರೆ. ಕಲ್ಪಾಕ್ಕಂನಲ್ಲಿ ಅಣುಶಕ್ತಿಯ ಉಷ್ಣತೆಯಿಂದ ಹೈಡ್ರೋಜನ್ ಉತ್ಪಾದಿಸುವ ಘಟಕ ಕಾರ್ಯಾರಂಭ ಮಾಡಿರುವುದು ಶುದ್ಧ ಇಂಧನ ಕ್ಷೇತ್ರದಲ್ಲಿ ಭಾರತದ ದೂರದೃಷ್ಟಿಗೆ ಸಾಕ್ಷಿಯಾಗಿದೆ.
ಭಾರತ ವಾಣಿಜ್ಯ ಪ್ರಮಾಣದ ವೇಗದ ತಳಿ ಪರಮಾಣು ರಿಯಾಕ್ಟರ್ ಅನ್ನು ತೆರೆದ ಎರಡನೇ ದೇಶ. ಭಾರತದ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಆಏಉಔ) ದೇಶದ ಮೊದಲ ಬಾರಿಗೆ 1200 ಕಿಲೋವೋಲ್ಟ್ ಅಲ್ಟ್ರಾ ಹೈ ವೋಲ್ಟೇಜ್ ಆಲ್ಟರ್ನೇ ಟಿಂಗ್ ಕರೆಂಟ್ (ಖಿಏಅಇ) 333 ಎಂವಿಎ (Iಅ) ಸಾಮರ್ಥ್ಯದ ಸ್ವದೇಶಿ ಟ್ರಾನ್ಸ್ʼಫಾರ್ಮರ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿ ಪರೀಕ್ಷಿಸಿದೆ.
ಈ ಸಾಧನೆಯೊಂದಿಗೆ ಭಾರತವು ಅತಿ ಉನ್ನತ ಸಾಮರ್ಥ್ಯದ ವಿದ್ಯುತ್ ಪ್ರಸರಣ ತಂತ್ರಜ್ಞಾನವನ್ನು ಸ್ವದೇಶದ ನಿರ್ಮಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಟ್ರಾನ್ಸ್ʼಫಾರ್ಮರ್ ದೂರದೂರಿಗೆ ಅತ್ಯಧಿಕ ಪ್ರಮಾಣದ ವಿದ್ಯುತ್ ಅನ್ನು ಕಡಿಮೆ ನಷ್ಟದೊಂದಿಗೆ ಸಾಗಿಸಲು ನೆರವಾಗಲಿದ್ದು, ದೇಶದ ವಿದ್ಯುತ್ ಜಾಲದ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಲಿದೆ.
ವಿಶ್ವದಲ್ಲಿ ಚೀನಾ, ರಷ್ಯಾ, ಜಪಾನ್ ಮತ್ತು ಇಟಲಿ ಮಾತ್ರ ಈ ಸಾಮರ್ಥ್ಯದ ಟ್ರಾನ್ಸ್ʼಫಾರ್ಮರ್ ಮಾಡುವ ತಂತ್ರಜ್ಞಾನ ಹೊಂದಿದ್ದು, ಈಗ ಭಾರತ ಆ ಹೆಮ್ಮೆಯ ಸಾಲಿಗೆ ಸೇರ್ಪಡೆಯಾಗಿದೆ. ಇದು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ಮತ್ತೊಂದು ಮಹತ್ವದ ಮೈಲಿಗಗಿದ್ದು, ವಿದ್ಯುತ್ ಕ್ಷೇತ್ರದಲ್ಲಿ ಭಾರತದ ತಾಂತ್ರಿಕ ಸ್ವಾವಲಂಬನೆ ಹಾಗೂ ಜಾಗತಿಕ ಮಟ್ಟದ ಎಂಜಿನಿಯರಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಸಾಮಾಜಿಕ ಪರಿವರ್ತನೆಯ ದೃಷ್ಟಿಯಿಂದಲೂ ಈ ಅವಧಿ ಮಹತ್ವದ್ದಾಗಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಮೊದಲ ಮಹಿಳಾ ಕೆಡೆಟ್‌ಗಳ ತಂಡ ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಯಿತು. ಇದು ಮಹಿಳಾ ಸಬಲೀಕರಣ ಮತ್ತು ಸಮಾನ ಅವಕಾಶಗಳ ದಿಕ್ಕಿನಲ್ಲಿ ಭಾರತದ ಹೊಸ ಅಧ್ಯಾಯವಾಗಿದೆ.
ಭಾರತದ ಅತಿ ಉದ್ದದ ಭೂಗತ ಗುರುತ್ವಾಕರ್ಷಣೆಯ ಹರಿವಿನ ನೀರಿನ ಸುರಂಗವಿರುವ ಕಟ್ನಿ ಜಿಲ್ಲೆಯಲ್ಲಿ 11.95 ಕಿಮೀ ಉದ್ದದ ಸ್ಲೀಮನಾಬಾದ್ ಸುರಂಗದ ಪ್ರಗತಿಯೊಂದಿಗೆ ಮಧ್ಯಪ್ರದೇಶವು ಬೃಹತ್ ಎಂಜಿನಿಯ ರಿಂಗ್ ಮೈಲಿಗಲ್ಲನ್ನು ಸಾಧಿಸಿದೆ. ಇದು ಯಾವುದೇ ಪಂಪಿಂಗ್ ಇಲ್ಲದೆ ನರ್ಮದಾ ನದಿ ನೀರನ್ನು ನದಿಗೆ ವರ್ಗಾಯಿಸುತ್ತದೆ.
ಭಾರತ ಮತ್ತು ಯುಕೆ ನಡುವಿನ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಜುಲೈ 15ರಂದು ಜಾರಿಗೆ ಬಂದ ನಂತರ ಒಂದೇ ದಿನದಲ್ಲಿ ಶೂನ್ಯ ಸುಂಕದಲ್ಲಿ 1170 ಕೋಟಿ ಮೌಲ್ಯದ ಸರಕು ರಫ್ತು ಮಾಡಲಾಗಿದೆ. ಭಾರತದ ಹಲವಾರು ವಸ್ತುಗಳಿಗೆ ಬ್ರಿಟನ್‌ನ ಮಾರುಕಟ್ಟೆಯ ಬಾಗಿಲು ಈಗ ಮುಕ್ತವಾಗಿ ತೆರೆದಿದೆ. ಇನ್ನು ವೈಯಕ್ತಿಯ ಪ್ರತಿಭೆಗಳ ಸಾಧನೆ ನೋಡುವುದಾದರೆ, ಜಪಾನ್ ಓಪನ್ 2026 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿವಿ ಸಿಂಧು ಪ್ರಶಸ್ತಿ ವಿಜೇತರಾಗಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ, ಶರ್ಮಿಳಾ ಧನಕರ್ ಪಾರಾಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಇನ್ನಷ್ಟು ಬೆಳ್ಳಿ ಪದಕಗಳೂ ಬಂದಿವೆ. ಶರ್ಮಿಳಾ ಅವರದು ಕಾಮನ್ ವೆಲ್ತ್‌ನಲ್ಲಿ ದೇಶಕ್ಕೆ ಮೊದಲ ಪಾರಾಥ್ಲೆಟಿಕ್ಸ್ ಚಿನ್ನ. ಕಳೆದ 30 ದಿನಗಳ ಭಾರತವನ್ನು ನೋಡಿದರೆ, ಇದು ಕೇವಲ ಸುದ್ದಿಗಳಲ್ಲಿ ಕಾಣುವಂತೆ ಬರಿಯ ಪ್ರತಿಭಟನೆಗಳೇ ತುಂಬಿದ ದೇಶವಲ್ಲ.
ಜಗತ್ತಿನ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವ, ಹೊಸ ತಂತ್ರಜ್ಞಾನ ಗಳನ್ನು ಅಭಿವೃದ್ಧಿಪಡಿಸುತ್ತಿರುವ, ಆತ್ಮನಿರ್ಭರತೆಯತ್ತ ದಿಟ್ಟ ಹೆಜ್ಜೆ ಹಾಕುತ್ತಿರುವ, ವಿಶ್ವದ ಶ್ರೇಷ್ಠ ಪ್ರತಿಭೆಗಳನ್ನು ರೂಪಿಸುತ್ತಿರುವ ಮತ್ತು ಭವಿಷ್ಯದ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತವಾಗಿದೆ.
ಇದೇ ಭಾರತದ ಮತ್ತೊಂದು ಮುಖ. ಇದೇ ಭಾರತದ ನಿಜವಾದ ಬೆಳವಣಿಗೆಯ ಕಥೆಯಾಗಿದೆ. ಆದರೆ ಹಲವಾರು ವಿದೇಶಿ ಮಾಧ್ಯಮಗಳು, ದೇಶವಿದ್ರೋಹಿ ಶಕ್ತಿಗಳ ಕೈಗೊಂಬೆಯಾಗಿರುವ ಒಳಗಿನ ಹಲವಾರು ಶಕ್ತಿಗಳು, ಭಾರತದಲ್ಲಿ ಕೋಲಾಹಲ- ಹಾಲಾಹಲ ಮಾತ್ರ ಇದೆಯೆಂದು ಚಿತ್ರಿಸುವು ದರಲ್ಲಿ ತೃಪ್ತಿ ಕಾಣುತ್ತಿವೆ. ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿವೇಚನೆ ಇರಬೇಕು.