Prakash Shesharaghavachar Column: ಮತದಾರ, ಕುಟುಂಬ ರಾಜಕಾರಣದ ಅಂತಿಮ ತೀರ್ಪುಗಾರ
ಇಂದಿರಾ ಗಾಂಧಿ ವಂಶದ ನಾಯಕತ್ವವಿಲ್ಲದೆ ಪಕ್ಷಕ್ಕೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ಸಿಗರು ನಂಬಿದ್ದ ಕಾರಣ, ಇಂದಿರಾ ನಂತರ ಸಂಜಯ್ ಗಾಂಧಿ, ಅವರ ಅಕಾಲಿಕ ಮೃತ್ಯುವಿನ ತರುವಾಯ ರಾಜೀವ್ ಗಾಂಧಿ ಬರುತ್ತಾರೆ. ರಾಜೀವ್ ಗಾಂಧಿ ಬಾಂಬ್ ಸ್ಫೋಟದಲ್ಲಿ ಹತ್ಯೆಯಾದ ನಂತರ ಅವರ ಪತ್ನಿ ಸೋನಿಯಾ ಗಾಂಧಿ ರಂಗ ಪ್ರವೇಶ ಮಾಡುತ್ತಾರೆ. 2004ರಲ್ಲಿ ಅವರಿಗೆ ದೇಶದ ಪ್ರಧಾನಿಯಾಗುವ ಅವಕಾಶವಿತ್ತು
-
ಪ್ರಕಾಶ ಪಥ
ಪ್ರಕಾಶ್ ಶೇಷರಾಘವಾಚಾರ್
ಪ್ರಜಾಪ್ರಭುತ್ವ ಬರುವ ಮೊದಲು ದೇಶವನ್ನು ರಾಜವಂಶಗಳು ಆಳುತ್ತಿದ್ದವು. ಪ್ರಜಾಪ್ರಭುತ್ವ ಬಂದ ಬಳಿಕ ರಾಜರು ಮಾಯವಾದರೂ, ರಾಜವಂಶಗಳು ಮಾತ್ರ ಹೊಸ ರೂಪದಲ್ಲಿ ಮರಳಿ ಬಂದವು. ಜನರಿಂದ ಆಯ್ಕೆಯಾದ ನಾಯಕರು ತಮ್ಮ ಕ್ಷೇತ್ರವನ್ನು ರಾಜಮನೆತನದ ಜಾಗೀರಿನಂತೆ ಪರಿಗಣಿಸಿ, ತಮ್ಮ ಕುಟುಂಬದವರನ್ನೇ ಉತ್ತರಾಧಿಕಾರಿಗಳನ್ನಾಗಿ ಮಾಡುವ ಪರಿಪಾಠ ಬೆಳೆಸಿದರು. ಕಳೆದ 78 ವರ್ಷಗಳಲ್ಲಿ ಕುಟುಂಬ ರಾಜಕಾರಣದ ಸೋಂಕಿನಿಂದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಬಳಲಿವೆ. ವ್ಯತ್ಯಾಸ ವಿರುವುದು ಅದರ ಪ್ರಮಾಣದಲ್ಲಿ ಮಾತ್ರ.
ದೇಶದಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಮೊಳಕೆ ಬಿತ್ತಿದ್ದು ಜವಾಹರ್ ಲಾಲ್ ನೆಹರು ಕುಟುಂಬ. ಪ್ರಧಾನಿ ನೆಹರು 1959ರಲ್ಲಿ ತಮ್ಮ ಮಗಳು ಇಂದಿರಾ ಗಾಂಧಿಯವರನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನಿಯೋಜಿಸುವ ಮೂಲಕ ವಂಶಪಾರಂಪರ್ಯ ರಾಜಕಾರಣಕ್ಕೆ ನಾಂದಿ ಹಾಡಿದರು.
ಇದನ್ನೂ ಓದಿ: Prakash Shesharaghavachar Column: ಬಂಗಾಳದಲ್ಲಿ ಛಿದ್ರವಾದ ಮಮತಾ ಬ್ಯಾನರ್ಜಿ ಸಾಮ್ರಾಜ್ಯ
ಇಂದಿರಾ ಗಾಂಧಿ ವಂಶದ ನಾಯಕತ್ವವಿಲ್ಲದೆ ಪಕ್ಷಕ್ಕೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ಸಿಗರು ನಂಬಿದ್ದ ಕಾರಣ, ಇಂದಿರಾ ನಂತರ ಸಂಜಯ್ ಗಾಂಧಿ, ಅವರ ಅಕಾಲಿಕ ಮೃತ್ಯುವಿನ ತರುವಾಯ ರಾಜೀವ್ ಗಾಂಧಿ ಬರುತ್ತಾರೆ. ರಾಜೀವ್ ಗಾಂಧಿ ಬಾಂಬ್ ಸ್ಫೋಟದಲ್ಲಿ ಹತ್ಯೆಯಾದ ನಂತರ ಅವರ ಪತ್ನಿ ಸೋನಿಯಾ ಗಾಂಧಿ ರಂಗ ಪ್ರವೇಶ ಮಾಡುತ್ತಾರೆ. 2004ರಲ್ಲಿ ಅವರಿಗೆ ದೇಶದ ಪ್ರಧಾನಿ ಯಾಗುವ ಅವಕಾಶವಿತ್ತು. ಆದರೆ ಅವರ ಮಕ್ಕಳು ವಿದೇಶಿ ಮಹಿಳೆಯೆಂಬ ಕಾರಣಕ್ಕೆ ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯ ಭಯದಿಂದ ಅವರಿಗೆ ಪ್ರಧಾನಿಯಾಗದಂತೆ ತಡೆಯುತ್ತಾರೆ. 2004ರಲ್ಲಿ ಸೋನಿಯಾ ತಮ್ಮ ಪುತ್ರ ರಾಹುಲ್ ಗಾಂಧಿಯವರನ್ನು ರಾಜಕೀಯಕ್ಕೆ ತಂದರು. 2024ರಲ್ಲಿ ಅವರ ಪುತ್ರಿ ಪ್ರಿಯಾಂಕಾ ವಾಡ್ರಾ ಅವರನ್ನು ಸಂಸತ್ತಿಗೆ ಕಳುಹಿಸುತ್ತಾರೆ. 78 ವರ್ಷಗಳ ಕುಟುಂಬ ರಾಜಕಾರಣದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಗಾಂಧಿ ಕುಟುಂಬವೇ ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುವ ಕೇಂದ್ರ ಬಿಂದುವಾಗಿದೆ ಎಂಬ ನಂಬಿಕೆ ಪಕ್ಷದಲ್ಲಿ ಬಲವಾಗಿರುವುದರಿಂದ, ಅವರನ್ನು ಬಹಿರಂಗವಾಗಿ ಪ್ರಶ್ನಿಸುವ ಪ್ರಬಲ ನಾಯಕತ್ವ ಕಾಂಗ್ರೆಸ್‌ನಲ್ಲಿ ಕಾಣಿಸುವುದಿಲ್ಲ.
ಭಾರತದ ರಾಜಕೀಯದಲ್ಲಿ ಕುಟುಂಬ ರಾಜಕಾರಣಕ್ಕೆ ಅವಿನಾಭಾವ ಸಂಬಂಧವಿದೆ. ಅಪ್ಪ-ಮಕ್ಕಳು ಅಥವಾ ಅಣ್ಣ-ತಮ್ಮಂದಿರು ರಾಜಕೀಯದಲ್ಲಿ ಉನ್ನತ ಸ್ಥಾನಗಳನ್ನು ಆಕ್ರಮಿಸಿಕೊಂಡಿ ರುವ ನೂರಾರು ಉದಾಹರಣೆಗಳಿವೆ. ವಿಶೇಷವಾಗಿ ಬಹುತೇಕ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬದ ಆಸ್ತಿಯಾಗಿವೆ. ಕುಟುಂಬ ರಾಜಕಾರಣದಲ್ಲಿ ಕಾಂಗ್ರೆಸ್ ಅಗ್ರಸ್ಥಾನದಲ್ಲಿದ್ದರೆ, ಬಿಜೆಪಿ ಯಲ್ಲಿ ಈ ಪಿಡುಗು ಕೆಳಸ್ತರದಲ್ಲಿ ನಿಧಾನವಾಗಿ ಹರಡುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಕುಟುಂಬದ ಬಹುತೇಕ ಸದಸ್ಯರು ಸಮಾಜ ವಾದಿ ಪಾರ್ಟಿಯ ನಾಯಕರು. ಮುಲಾಯಂ ಮಗ ಅಖಿಲೇಶ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಸೇರಿದಂತೆ ಅವರ ಕುಟುಂಬದ ಐವರು ಸದಸ್ಯರು ಸಕ್ರಿಯ ರಾಜಕಾರಣದಲ್ಲಿರುವರು. ನೆರೆಯ ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಸಮಸ್ತ ಕುಟುಂಬದವರು ಆರ್‌ಜೆಡಿ ಭಾಗವಾಗಿದ್ದಾರೆ, ಚೌಧರಿ ಚರಣ್ ಸಿಂಗ್ ಮಗ, ಮೊಮ್ಮಗ ಹಾಗೂ ಉತ್ತರ ಪ್ರದೇಶದ ಭೂಗತ ಜಗತ್ತಿನ ಡಾನ್ ಮುಖ್ತಾರ್ ಅಹಮದ್ ಅನ್ಸಾರಿ ಕುಟುಂಬದ ಅನೇಕರು ತಮ್ಮ ಅಕ್ರಮ ಆಸ್ತಿಯನ್ನು ಕಾಪಾಡಿಕೊಳ್ಳಲು ರಾಜಕಾರಣದಲ್ಲಿದ್ದಾರೆ.
ಕರ್ನಾಟಕದಲ್ಲಿ ಜೆಡಿ (ಎಸ್) ದೇವೇಗೌಡರ ಕುಟುಂಬದ ಆಸ್ತಿಯಾಗಿದೆ. ತಮಿಳುನಾಡಿನಲ್ಲಿ ಕರುಣಾ ನಿಧಿ ಕುಟುಂಬದವರಿಂದ ಡಿಎಂಕೆ ಭರ್ತಿಯಾಗಿದೆ. ಮಗ, ಮಗಳು, ಮೊಮ್ಮಗ, ಸೋದರ ಮಾವ ಹೀಗೆ ಪ್ರತಿಯೊಬ್ಬರೂ ಒಂದ ಒಂದು ಹುದ್ದೆಯಲ್ಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಕುಟುಂಬ ರಾಜಕಾರಣದ ಕಪಿ ಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಶೇಖ್ ಅಬ್ದು 12 ವರ್ಷ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಯಾಗಿದ್ದರು, ಅವರ ನಂತರ ಮಗ ಫಾರೂಕ್ ಅಬ್ದು, ಈಗ ಮೊಮ್ಮಗ ಓಮರ್ ಅಬ್ದು ಮುಖ್ಯ ಮಂತ್ರಿಯಾಗಿದ್ದಾರೆ. ಪಿಡಿಪಿ ಆರಂಭಿಸಿದ ಮುಫ್ತಿ ಮೊಹಮ್ಮದ್ ಸಯೀದ್ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು, ಅವರ ಮಗಳು ಮೆಹಬೂಬಾ ಮುಫ್ತಿಯೂ ಮುಖ್ಯಮಂತ್ರಿ ಯಾದರು, ಈಗ ಅವರ ಮಗಳು ಇಲ್ತಿಜಾ ಮುಫ್ತಿ ರಾಜಕಾರಣದಲ್ಲಿದ್ದಾರೆ.
ಪಂಜಾಬಿನಲ್ಲಿ ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಹಿಮಾಚಲ ಪ್ರದೇಶದಲ್ಲಿ ಮಾಜಿ ಮುಖ್ಯ ಮಂತ್ರಿ ಪ್ರೇಮ್ ಕುಮಾರ್ ದೂಮಲ್ ಪುತ್ರ ಅನುರಾಗ್ ಠಾಕೂರ್, ಒಡಿಶಾದಲ್ಲಿ ಬಿಜು ಪಟ್ನಾಯಕ್ ಅವರ ಪುತ್ರ ನವೀನ್ ಪಟ್ನಾಯಕ್ ಕುಟುಂಬ ರಾಜಕಾರಣದ ಭಾಗವಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷವು ಶರದ್ ಪವಾರ್ ಅವರ ಕುಟುಂಬದ ಸ್ವತ್ತಾಗಿದೆ. ಎನ್‌ಸಿಪಿ ಯಿಂದ ಬೇರ್ಪಟ್ಟ ಬಂಡಾಯ ಎನ್‌ಸಿಪಿ ಅಜಿತ್ ಪವಾರ್ ಕುಟುಂಬದ ಆಸ್ತಿಯಾಗಿದೆ. ಹಾಗೆಯೇ ಬಾಳಾ ಠಾಕ್ರೆ ಸ್ಥಾಪಿಸಿದ ಶಿವಸೇನೆಯು ಉದ್ಧವ್ ಠಾಕ್ರೆ ಮತ್ತು ಅವರ ಮೊಮ್ಮಗ ಆದಿತ್ಯ ಠಾಕ್ರೆ ಹಿಡಿತದಲ್ಲಿದೆ.
ಜಾರ್ಖಂಡದಲ್ಲಿ ಶಿಬು ಸೋರೇನ್ ಪುತ್ರ ಹೇಮಂತ ಸೋರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಹಾಗೂ ಹೇಮಂತ ಸೊರೇನ್ ಪುತ್ರ ಬಸಂತ ಸೊರೇನ್ ಸೇರಿದಂತೆ ಇಡಿ ಕುಟುಂಬವೇ ರಾಜಕೀಯ ದಲ್ಲಿ ಸಕ್ರಿಯವಾಗಿದೆ. ಆಂಧ್ರದಲ್ಲಿ ಎನ್ ಟಿ ರಾಮರಾವ್ ಮತ್ತು ಚಂದ್ರಬಾಬು ನಾಯ್ಡು ಕುಟುಂಬ ದವರು ಹಾಗೂ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮಕ್ಕಳು ತಂದೆಯ ಪರಂಪರೆ ಯನ್ನು ಮುಂದುವರೆಸಿದ್ದಾರೆ.
ಕೇವಲ ಕೆಲವೇ ರಾಜ್ಯಗಳಲ್ಲಿ ಕುಟುಂಬ ಆಧಾರಿತ ಪಕ್ಷಗಳ ಪ್ರಭಾವ ಕಡಿಮೆಯಿರುವುದು. ತೆಲಂಗಾಣ, ಕರ್ನಾಟಕ, ಗುಜರಾತ್, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಂತಹ ಬೆರಳಣಿಕೆಯ ರಾಜ್ಯಗಳಲ್ಲಿ ಕುಟುಂಬ ನಿಯಂತ್ರಿತ ಪಕ್ಷಗಳ ಪ್ರಾಬಲ್ಯ ಇಲ್ಲದಿರುವುದು. ಅಲ್ಲಿಯೂ ಸಹಾ ಅನೇಕ ಶಾಸಕರ ಮತ್ತು ಲೋಕಸಭಾ ಸದಸ್ಯರ ಮಕ್ಕಳು ಹಾಗೂ ಸಂಬಂಧಿಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣದ ನಾಗಾ ಲೋಟಕ್ಕೆ ಬ್ರೇಕ್ ಹಾಕಲಾಗಿದೆ. ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಕಟು ಟೀಕಾಕಾರರಾದ ಮೋದಿ ಯವರು, ಬಿಜೆಪಿಯಲ್ಲಿ ಅದಕ್ಕೆ ಅವಕಾಶ ನೀಡದಿರಲು ಸಂಪೂರ್ಣವಾಗಿ ಯಶಸ್ವಿಯಾಗ ದಿದ್ದರೂ ಒಂದು ಮಟ್ಟಕ್ಕೆ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ. ಆದರೆ ರಾಜಕೀಯ ಒತ್ತಡ ಹಾಗೂ ನೆಲಸ್ತರದ ಅನಿವಾರ್ಯತೆಯ ಕಾರಣಗಳಿಗೆ ಅವರು ಕೂಡ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ.
1996ರ ನಂತರ ಸಮ್ಮಿಶ್ರ ಸರಕಾರದ ಪರ್ವ ಆರಂಭವಾದಾಗ ಕುಟುಂಬಾಧಾರಿತ ರಾಜಕೀಯ ಪಕ್ಷಗಳು ಬಲವಾಗಿ ಬೇರೂರಿದವು. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಬಹುಮತದಿಂದ ವಂಚಿತರಾದಾಗ ಅನಿವಾರ್ಯವಾಗಿ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸ ಬೇಕಾಗುತ್ತಿತ್ತು. ಎನ್‌ಡಿಎ ಮತ್ತು ಯುಪಿಎ ಇಪ್ಪತ್ತು, ಇಪ್ಪತ್ತೈದು ಪಕ್ಷಗಳ ಬೆಂಬಲ ಪಡೆದು ಸರಕಾರ ರಚನೆ ಮಾಡಿದಾಗ ಇದರ ಲಾಭ ಪಡೆದ ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯನ್ನು ಬಲಪಡಿಸಿಕೊಂಡು ಆಳವಾಗಿ ತಳವೂರಿದವು.
ಹಾಗೆಯೇ ರಾಜ್ಯಗಳಲ್ಲಿ ಅತಂತ್ರ ಸ್ಥಿತಿ ತಲೆದೋರಿದಾಗ ಅದನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಆರ್ಥಿಕವಾಗಿಯೂ ಲಾಭ ಪಡೆದು ಗಟ್ಟಿಯಾಗಿ ನಿಂತವು. ತಂದೆಯಿಂದ ಆರಂಭವಾಗಿ ಮಗ ಬೆಳೆದು ನಿಂತ ಕೂಡಲೇ ಅವನನ್ನು ರಾಜಕೀಯಕ್ಕೆ ತಂದು ಅವನಿಗೆ ಪಟ್ಟ ಕಟ್ಟುವುದು ಸಂಪ್ರದಾಯ ವಾಗಿದೆ. ಈ ಪಕ್ಷಗಳು ರಾಜ್ಯದ ಅಸ್ಮಿತೆಯನ್ನು ಬಂಡವಾಳ ಮಾಡಿಕೊಂಡು ಆರ್ಥಿಕವಾಗಿ ಲಾಭ ಮಾಡಿಕೊಂಡರು. ಎರಡೂ ಪ್ರಮುಖ ರಾಜಕೀಯ ಪಕ್ಷಗಳು ಅತಂತ್ರ ತೀರ್ಪು ಬಂದಾಗ ಇವರನ್ನು ಪೈಪೋಟಿಯ ಮೇಲೆ ಓಲೈಸುವ ಕಾರಣ ಇವರ ರಾಜಕೀಯ ಪ್ರಭಾವಕ್ಕೆ ಕಡಿವಾಣ ಇಲ್ಲದಂತಾಯಿತು.
ಚಲಾವಣೆಯಲ್ಲಿ ಇರಲು ಭಾಷೆ, ಜಾತಿ ಮತ್ತು ಸ್ವಾಯತ್ತತೆಯನ್ನು ಸುಲಭವಾದ ಅಸ್ತ್ರವನ್ನಾಗಿ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವ ಕಲೆ ಪ್ರಾದೇಶಿಕ ಪಕ್ಷಗಳಿಗೆ ಕರಗತವಾಗಿದೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಎಂಬ ಕೂಗು ಹಲವಾರು ದಶಕಗಳಿಂದ ಚಲಾವಣೆಯಲ್ಲಿರುವ ವಿಷಯವಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಸಂಪನ್ಮೂಲ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪ್ರಾದೇಶಿಕ ಪಕ್ಷಗಳನ್ನು ಹಿಂದಿಕ್ಕುವ ಹಾಗೆ ತಮ್ಮ ಕಾರ್ಯಸೂಚಿ ಮಾಡಿಕೊಂಡಿದ್ದರು.
ಜಾತಿಯ ಬಂಡವಾಳದ ಮೇಲೆ ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಶರದ್ ಪವಾರ್ ಮುಂತಾದವರು ಅನೇಕ ವರ್ಷಗಳಿಂದ ಜನರ ಭಾವನೆಗಳನ್ನು ಕೆರಳಿಸಿ ಆಟವಾಡುತ್ತಿದ್ದಾರೆ. ಇವರಲ್ಲಿ ಹಲವರು ಉತ್ತಮ ಆಡಳಿತದ ಭರವಸೆಯನ್ನು ಮುಂದಿಟ್ಟುಕೊಳ್ಳುವುದಕ್ಕಿಂತ, ಜಾತಿ ಮತ್ತು ಪ್ರಾದೇಶಿಕ ಭಾವನೆಗಳನ್ನು ಕೆರಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ರಾಜಕೀಯ ವನ್ನೇ ಹೆಚ್ಚು ಅವಲಂಬಿಸಿದ್ದಾರೆ.
ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣವಿದೆ, ಆದರೆ ನಿಮ್ಮ ಬೊಟ್ಟು ಕಾಂಗ್ರೆಸ್‌ನತ್ತ ಮಾತ್ರ ಇರುತ್ತದೆ ಎಂದು ಪದೇ ಪದೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಸತ್ಯಾಂಶ ವಿಲ್ಲ ಎಂದಲ್ಲ. ಬಿಜೆಪಿಯ ಸರಕಾರವಿರುವ ಯಾವುದೇ ರಾಜ್ಯದಲ್ಲಿ ಅಲ್ಲಿಯ ಮುಖ್ಯಮಂತ್ರಿ ಯವರ ಕುಟುಂಬದ ಸದಸ್ಯರು ಸರಕಾರವನ್ನು ನಿಯಂತ್ರಿಸುವುದಿಲ್ಲ. ನಾಯಕರ ಮಕ್ಕಳು ಅಥವಾ ಅವರ ಸಂಬಂಧಿಕರು ಶಾಸಕರಾಗಿರಬಹುದು ಅಥವಾ ಸಂಸತ್ ಸದಸ್ಯರಾಗಿರಬಹುದು. ಅದು ಕೇವಲ ವೈಯಕ್ತಿಕ ಆಧಾರದ ಮೇಲೆ ಆಗಿರುತ್ತಾರೆ ವಿನಹ ಸಾರಾಸಗಟಾಗಿ ಪಕ್ಷವನ್ನೇ ಅವರಿಗೆ ಗುತ್ತಿಗೆ ನೀಡಿಲ್ಲ.
ಕುಟುಂಬಸ್ಥರು ರಾಜಕೀಯ ಪ್ರವೇಶ ಮಾಡಬಾರದು ಎಂಬ ಕಾನೂನು ದೇಶದಲ್ಲಿ ಇಲ್ಲ. ವೈಯಕ್ತಿಕ ಜನಪ್ರಿಯತೆಯ ಮೇಲೆ ತಮ್ಮ ಮಗನಿಗೆ ಅಥವಾ ಸಂಬಂಧಿಗಳಿಗೆ ಟಿಕೇಟ್ ಪಡೆಯುತ್ತಾರೆ. ಒಂದು ವೇಳೆ ಬಲಾಢ್ಯವಿರುವ ಜನಪ್ರತಿನಿಧಿ ತನ್ನ ಬೇಡಿಕೆ ಮನ್ನಿಸದಿದ್ದರೆ ಪಕ್ಷದ ಅಭ್ಯರ್ಥಿಯನ್ನೇ ಸೋಲಿ ಸಲು ಹಿಂಜರಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ಪಕ್ಷದ ನಾಯಕರು ಕುಟುಂಬ ರಾಜಕಾರಣ ಬೇಡ ಎಂಬ ನಿಲುವನ್ನು ಬದಿಗಿಟ್ಟು ಪಕ್ಷದ ಹಿತಕ್ಕೆ ಧಕ್ಕೆಯಾಗುವುದನ್ನು ತಪ್ಪಿಸುವುದಕ್ಕೆ ಅವರ ಆಯ್ಕೆಯ ಅಭ್ಯರ್ಥಿಗೆ ಮಣೆ ಹಾಕಬೇಕಾಗುತ್ತದೆ.
ರಾಜಕೀಯವು ಯಾವುದೇ ಕುಟುಂಬದ ಜಹಗೀರು ಅಲ್ಲ. ಒಬ್ಬ ನಾಯಕನ ಮಗ ಅಥವಾ ಮಗಳು ರಾಜಕಾರಣಕ್ಕೆ ಬರಬಾರದು ಎನ್ನುವುದು ಪ್ರಜಾಪ್ರಭುತ್ವದ ಆಶಯವೂ ಅಲ್ಲ. ಆದರೆ ಪಕ್ಷವೇ ಒಂದು ಕುಟುಂಬದ ಹಿಡಿತಕ್ಕೆ ಸಿಲುಕಿ, ನಾಯಕತ್ವವು ವಂಶಪಾರಂಪರ್ಯ ಹಕ್ಕಿನಂತೆ ವರ್ಗಾವಣೆ ಯಾಗುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಪಾಯಕಾರಿ. ಅಂತಿಮ ತೀರ್ಪು ಮತದಾರನ ಕೈಯಲ್ಲಿದೆ. ಕುಟುಂಬ ರಾಜಕಾರಣ ಮುಂದುವರಿಯಬೇಕೋ, ಅರ್ಹತೆಗೆ ಆದ್ಯತೆ ಸಿಗಬೇಕೋ ಎಂಬುದನ್ನು ನಿರ್ಧರಿಸುವ ಶಕ್ತಿ ಮತದಾರನ ವಿವೇಚನೆಯಲ್ಲಿದೆ.