ರಾಜತಂತ್ರ
ಡಾ.ಸತೀಶ ಕೆ.ಪಾಟೀಲ
ಭಾರತ ಮತ್ತು ಅಮೆರಿಕ ನಡುವಿನ ಇತ್ತೀಚಿನ ವ್ಯಾಪಾರ ಒಪ್ಪಂದದ ಕುರಿತು ಅಂತಿಮ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಇದರ ನಡುವೆಯೇ ಅಮೆರಿಕದ ಶ್ವೇತಭವನವು, ‘ಭಾರತವು ಇನ್ನು ಮುಂದೆ ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವುದಿಲ್ಲ’ ಎಂಬ ಹೇಳಿಕೆ ನೀಡಿದೆ.
ಇದು ಭಾರತ ಮತ್ತು ರಷ್ಯಾ ನಡುವಿನ ಸುಮಧುರ ಬಾಂಧವ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತವು ತನ್ನ ಬಹುಕಾಲದ ಗೆಳೆಯ ರಷ್ಯಾವನ್ನು ಅಮೆರಿಕದ ಸಲುವಾಗಿ ಕಡೆಗಣಿಸಿದರೆ, ಭಾರತದ ಕಷ್ಟಕಾಲದಲ್ಲಿ ರಷ್ಯಾ ಜತೆಯಾಗಿ ನಿಂತಿದ್ದನ್ನು ಮತ್ತು ಇಲ್ಲಿಯವರೆಗೆ ಮಾಡಿದ ಸಹಾಯವನ್ನು ಮರೆತಂತೆ ಆಗುತ್ತದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ರಷ್ಯಾದಿಂದ ಕಚ್ಚಾತೈಲದ ಆಮದನ್ನು ಭಾರತವು ನಿಲ್ಲಿಸಬೇಕು, ಇಲ್ಲವಾದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕುಗಳ ಮೇಲೆ ಭಾರಿ ಸುಂಕವನ್ನು ಹೇರಲಾಗುವುದು’ ಎಂದು ಕೆಲ ತಿಂಗಳ ಹಿಂದೆ ಬೆದರಿಕೆ ಹಾಕಿದ್ದು ಗೊತ್ತಿರುವ ಸಂಗತಿಯೇ. ಈಗ ಅದರ ಮುಂದುವರಿದ ಭಾಗವೆಂಬಂತೆ ಅಮೆರಿಕದ ಶ್ವೇತಭವನದಿಂದ ಹೊಮ್ಮಿ ರುವ ಈ ಹೇಳಿಕೆಯು, ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯದಲ್ಲಿ ಒಂದಿಷ್ಟು ಕದಲಿಕೆಯನ್ನು ಉಂಟುಮಾಡಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Dr Sathish K Patil Column: ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ಅಧಿಪತ್ಯವೇ ?
ಭಾರತ ಮತ್ತು ಅಮೆರಿಕದ ನಡುವಿನ ಇತ್ತೀಚಿನ ಈ ವ್ಯಾಪಾರ ಒಪ್ಪಂದವು ಸ್ವಾಗತಾರ್ಹ ವಾದುದಾದರೂ, ಈ ಒಪ್ಪಂದದ ಕಾರಣಕ್ಕೆ ಭಾರತವು ಅಮೆರಿಕದಿಂದ ಒತ್ತಡಕ್ಕೆ ಒಳಗಾಯಿತಾ? ಎಂಬ ಪ್ರಶ್ನೆಯೂ ಮೂಡುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ದ್ವಿಪಕ್ಷೀಯ ಒಪ್ಪಂದವು ಭಾರತ ಮತ್ತು ಅಮೆರಿಕಕ್ಕೆ ಮಾತ್ರ ಸೀಮಿತವಾಗಿರಬೇಕು; ಅದನ್ನು ಬಿಟ್ಟು, ರಷ್ಯಾದ ಜತೆಗಿನ ಭಾರತದ ಸಂಬಂಧದ ಬಗ್ಗೆ ಅಮೆರಿಕ ಮಾತನಾಡಿದೆ. ಅಮೆರಿಕದ ಈ ‘ಅಧಿಕಾರಯುತ’ ಹೇಳಿಕೆ ಅಥವಾ ಧೋರಣೆಯು ಭಾರತದ ‘ಸಾರ್ವಭೌಮತೆ’ಯನ್ನೇ ಪ್ರಶ್ನಿಸುವಂತಿದೆ. ಏಕೆಂದರೆ, ಭಾರತ ಮತ್ತು ರಷ್ಯಾ ನಡುವಿನ ಸಂಬಂಧದಲ್ಲಿ ಮೂಗು ತೂರಿಸುವ ಅಧಿಕಾರ ಅಮೆರಿಕಕ್ಕೆ ಇಲ್ಲ. ಈ ಬೆಳವಣಿಗೆಯ ಕುರಿತು ಭಾರತವು ಎಚ್ಚರ ವಹಿಸಬೇಕಿದೆ.
ಏಕೆಂದರೆ, ಭಾರತವು ಸ್ವತಂತ್ರಗೊಂಡ ದಿನದಿಂದ 1990ರ ದಶಕದವರೆಗೂ ಅಮೆರಿಕವು ಭಾರತ ವನ್ನು ‘ವಿರೋಧಿ ರಾಷ್ಟ್ರ’ ಎಂದೇ ಪರಿಗಣಿಸಿ ತೊಂದರೆ ಕೊಟ್ಟಿದೆ; ಇದಕ್ಕೆ ತದ್ವಿರುದ್ಧ ಎಂಬಂತೆ ರಷ್ಯಾ ದೇಶವು ನಿರಂತರವಾಗಿ ಭಾರತಕ್ಕೆ ಒತ್ತಾಸೆಯಾಗಿ ನಿಂತಿದೆ ಮತ್ತು ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಿದೆ. ಇದನ್ನು ನಾವು ಮರೆಯಬಾರದು. ಭಾರತಕ್ಕೆ ರಷ್ಯಾ ಮಾಡಿದ ಸಹಾಯ ಮತ್ತು ಅಮೆರಿಕ ನೀಡಿದ ತೊಂದರೆಯ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳುವುದು ಪ್ರಸ್ತುತ ಅನಿವಾರ್ಯವೆನಿಸುತ್ತದೆ.
ಭಾರತವು ಸ್ವತಂತ್ರಗೊಂಡ ನಂತರ ಜಗತ್ತಿನಲ್ಲಿ ಎರಡು ಪ್ರಬಲ ಗುಂಪುಗಳು ಹುಟ್ಟಿಕೊಂಡವು. ಪ್ರಜಾಪ್ರಭುತ್ವದ ಮುಖವಾಡವನ್ನು ಹಾಕಿಕೊಂಡ ಅಮೆರಿಕ ಮತ್ತು ಕಮ್ಯುನಿಸ್ಟ್ ಮುಖವಾಡ ವನ್ನು ಹಾಕಿಕೊಂಡ ರಷ್ಯಾ ಎಂಬ ಎರಡು ‘ಶಕ್ತಿ ಬಣ’ಗಳ ನಡುವೆ ಜಗತ್ತಿನ ನಾಯಕತ್ವಕ್ಕೆ ಪೈಪೋಟಿ ನಡೆಯಿತು. ಈ ಸಂದರ್ಭದಲ್ಲಿ ಭಾರತವು ಈ ಎರಡೂ ಶಕ್ತಿಕೇಂದ್ರಗಳಿಗೆ ಸೇರದೆ ತಟಸ್ಥ ನಿಲುವು ತಳೆದು, ಅಲಿಪ್ತ ರಾಷ್ಟ್ರಗಳ ನಾಯಕತ್ವವನ್ನು ವಹಿಸಿತು.
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ತನ್ನ ಬಣವನ್ನು ಸೇರುತ್ತದೆ ಎಂದು ಭಾವಿಸಿದ್ದ ಅಮೆರಿಕಕ್ಕೆ ಭಾರತದ ಈ ನಡೆ ಸರಿ ಕಾಣಲಿಲ್ಲ. ಹೀಗಾಗಿ ಅದು ಭಾರತದ ಮೇಲೆ ಕೋಪ ಗೊಂಡಿತ್ತು. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ, ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರು ಭಾರತದ ಪರವಾಗಿ ಯುದ್ಧನೌಕೆಯನ್ನು ಕಳುಹಿಸಿದರು. ಈ ಸಹಾಯ ವನ್ನು ಹೊರತುಪಡಿಸಿದರೆ ಅಮೆರಿಕವು ಭಾರತದ ವೈರಿಯಾಗಿಯೇ ನಡೆದುಕೊಂಡು,
ಪಾಕಿಸ್ತಾನದ ಪರ ವಹಿಸಿಕೊಂಡುಬಂತು. ಭಾರತವು ರಷ್ಯಾದ ಜತೆಗೆ ಕೈಜೋಡಿಸಿದ್ದು ಈ ಬೆಳವಣಿಗೆ ಯ ಹಿನ್ನೆಲೆಯಲ್ಲೇ. ಸದ್ಯಕ್ಕೆ ಇದನ್ನು ಅವಲೋಕಿಸುವುದು ಅಗತ್ಯವೆನಿಸುತ್ತದೆ. ಅಮೆರಿಕ ಸೇರಿ ದಂತೆ ಪಾಶ್ಚಿಮಾತ್ಯ ಬಣಗಳು ಭಾರತದ ನೀತಿಯನ್ನು ವಿರೋಧಿಸಿ ತೈಲ ಸರಬರಾಜನ್ನು ನಿಲ್ಲಿಸಿ ದಾಗ, ರಷ್ಯಾ ದೇಶವು ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ತೈಲವನ್ನು ಒದಗಿಸಿ ಸಹಾಯ ಮಾಡಿತು.
ನಂತರದ ವಿವಿಧ ಕಾಲಘಟ್ಟಗಳಲ್ಲಿ ಹಂಗೇರಿ, ಪೋಲೆಂಡ್ ಮತ್ತು ಅಫ್ಘಾನಿಸ್ತಾನಗಳ ಮೇಲೆ ರಷ್ಯಾ ದಾಳಿ ಮಾಡಿದ್ದನ್ನು ಭಾರತ ಖಂಡಿಸಿದರೂ, ರಷ್ಯಾ ನಮ್ಮ ಮೇಲೆ ಕೋಪಗೊಳ್ಳಲಿಲ್ಲ. 1959ರಲ್ಲಿ ಕಾಶ್ಮೀರ ಸಮಸ್ಯೆಯ ಕುರಿತಾಗಿ ಅಮೆರಿಕ ಮತ್ತು ಚೀನಾ ಸೇರಿಕೊಂಡು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದಾಗ ರಷ್ಯಾ ತನ್ನ ‘ವೀಟೊ ಅಽಕಾರ’ವನ್ನು ಚಲಾಯಿಸಿ ಆ ನಡೆಯನ್ನು ತಡೆಯಿತು.
ರಷ್ಯಾ ಅತಿಹೆಚ್ಚು ಸಲ, ಅಂದರೆ ಮೂರು ಬಾರಿ ಹೀಗೆ ಭದ್ರತಾ ಮಂಡಳಿಯಲ್ಲಿ ಭಾರತದ ಪರ ‘ವೀಟೋ’ ಅಧಿಕಾರ ಚಲಾಯಿಸಿ ನೆರವಾಗಿದೆ. ಮಾತ್ರವಲ್ಲದೆ, ಭಾರತದ 3ನೇ ಪಂಚವಾರ್ಷಿಕ ಯೋಜನೆಗೆ ರಷ್ಯಾ 500 ಮಿಲಿಯನ್ ಡಾಲರ್‌ನಷ್ಟು ನೆರವು ನೀಡಿತು. ಭಾರತದ ಬದ್ಧವೈರಿ ಪಾಕಿಸ್ತಾನಕ್ಕೆ ಅಮೆರಿಕವು ಆರ್ಥಿಕವಾಗಿ ಮತ್ತು ಯುದ್ಧಾಸ್ತ್ರಗಳ ರೂಪದಲ್ಲಿ ನೆರವು ನೀಡಿದಾಗ, ‘ಮಿಗ್’ ಯುದ್ಧವಿಮಾನ ತಯಾರಿಕೆಗೆ ಭಾರತಕ್ಕೆ ನೆರವಾಗಿ ಅನೇಕ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿದ್ದು ಇದೇ ರಷ್ಯಾ.
1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ, ಪಾಕಿಸ್ತಾನದ ಪರವಾಗಿ ಯುದ್ಧದಲ್ಲಿ ಭಾಗಿಯಾಗುವುದಾಗಿ ಚೀನಾ ಹೇಳಿದಾಗ, ‘ಹಾಗಾದಲ್ಲಿ ನಾನು ಭಾರತದ ಪರವಾಗಿ ಭಾಗವಹಿಸಬೇಕಾಗುತ್ತದೆ’ ಎಂದಿತು ರಷ್ಯಾ. ಆಗ ಚೀನಾ ಯುದ್ಧದಿಂದ ಹಿಂದೆ ಸರಿಯಿತು. 1971ರ ಬಾಂಗ್ಲಾ ವಿಮೋಚನೆಯ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಹಣಾಹಣಿ ಏರ್ಪಟ್ಟಾಗ, ತಾನು ಪಾಕಿಸ್ತಾನದ ಪರವಾಗಿ ಭಾಗವಹಿಸುವುದಾಗಿ ಬೆದರಿಕೆ ಹಾಕಿದ ಅಮೆರಿಕ ತನ್ನ 6 ಯುದ್ಧ ನೌಕೆಗಳನ್ನು ಕಳುಹಿಸಿತು; ತಕ್ಷಣವೇ ರಷ್ಯಾ 12 ಯುದ್ಧನೌಕೆಗಳನ್ನು ಭಾರತದ ಪರವಾಗಿ ಹಿಂದೂ ಮಹಾಸಾಗರಕ್ಕೆ ಕಳುಹಿಸಿದಾಗ ಹೆದರಿದ ಅಮೆರಿಕ ಯುದ್ಧದಿಂದ ಹಿಂದೆ ಸರಿಯಿತು.
ನಂತರ 1998ರಲ್ಲಿ ಭಾರತವು ಪೋಖ್ರಾನ್‌ನಲ್ಲಿ ಅಣು ಪರೀಕ್ಷೆ ನಡೆಸಿದಾಗ, ಅಮೆರಿಕವು ಭಾರತದ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿತು ಮತ್ತು ಆಗ ಭಾರತದ ಸಹಾಯಕ್ಕೆ ರಷ್ಯಾ ಧಾವಿಸಿತ್ತು. ನಂತರ 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪರವಾಗಿ ಅಮೆರಿಕ ಹೇಳಿಕೆ ನೀಡಿದಾಗ, ಭಾರತದ ಪರವಾಗಿ ನಿಂತಿತ್ತು ರಷ್ಯಾ.
ಹಾಗೆ ನೋಡಿದರೆ, 1970ರ ದಶಕದಲ್ಲಿ ಭಾರತದ ಜತೆಗೆ 20 ವರ್ಷಗಳ ಶಾಂತಿ ಸಹಕಾರ ಒಪ್ಪಂದ ಮಾಡಿಕೊಂಡ ರಷ್ಯಾ, ಅಪಾರ ಪ್ರಮಾಣದ ಆರ್ಥಿಕ ಸಹಾಯ ಮತ್ತು ಶಸ್ತ್ರಾಸ್ತ್ರಗಳ ನೆರವು ನೀಡಿತು. ನಂತರ 1993ರಲ್ಲಿ ರಷ್ಯಾದ ಅಂದಿನ ಅಧ್ಯಕ್ಷ ಬೋರಿಸ್ ಎಲ್ಸಿನ್ ಅವರು, “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಗುವ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ನೀಡಲು ಸಿದ್ಧ" ಎಂದರು.
ಈ ವಿಷಯದಲ್ಲಿ ಇಂದಿಗೂ ಭಾರತದ ಬೆಂಬಲಕ್ಕೆ ರಷ್ಯಾ ನಿಂತಿರುವುದು ಈ ಎರಡೂ ರಾಷ್ಟ್ರಗಳ ನಡುವಿನ ಗೆಳೆತನಕ್ಕೆ ಸಾಕ್ಷಿಯಾಗಿದೆ. ಅತ್ಯಾಧುನಿಕ ಕ್ರಯೋಜೆನಿಕ್ ತಂತ್ರಜ್ಞಾನವನ್ನು ನೀಡಲು ರಷ್ಯಾ ಮುಂದೆ ಬಂದಾಗ, ಅಮೆರಿಕ ಭಾರಿ ವಿರೋಧ ಮಾಡಿತು; ಆದರೂ ರಷ್ಯಾ ಈ ವಿಷಯದಲ್ಲಿ ಹಿಂದೆಗೆಯಲಿಲ್ಲ.
ಇನ್ನು, “ಭಾರತದ ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ" ಎಂದು ಅಮೆರಿಕವು ವಿಶ್ವಸಂಸ್ಥೆಯಲ್ಲಿ ಮಾತನಾಡಿದಾಗ, “ಅದು ಭಾರತದ ಆಂತರಿಕ ವಿಚಾರ" ಎಂದು ಸಮರ್ಥಿಸಿಕೊಂಡಿತು ರಷ್ಯಾ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾ ನದ ‘ವಿಧಿ 370’ ಅನ್ನು ಕೆಲ ವರ್ಷದ ಹಿಂದೆ ಭಾರತವು ರದ್ದುಪಡಿಸಿದಾಗ, ಅಮೆರಿಕ ಮತ್ತು ಚೀನಾ ದೇಶಗಳು ಪಾಕಿಸ್ತಾನದ ಪರವಾಗಿ ನಿಲುವು ತಳೆದ ಭಾರತದ ಈ ಕ್ರಮವನ್ನು ವಿರೋಧಿಸಿದವು.
ಆಗ ಭಾರತದ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದು ರಷ್ಯಾ. ಪಾಕಿಸ್ತಾನವು ಉಗ್ರವಾದಕ್ಕೆ ಕುಮ್ಮಕ್ಕು ನೀಡುವ, ಉಗ್ರರಿಗೆ ನೆರವು ಮತ್ತು ಆಶ್ರಯ ನೀಡುವ ರಾಷ್ಟ್ರ ಎಂಬುದನ್ನು ಭಾರತವು ಸಾಕ್ಷಿ ಸಮೇತವಾಗಿ ಅಮೆರಿಕಕ್ಕೆ ಮನವರಿಕೆ ಮಾಡಿಕೊಟ್ಟರೂ, ಆ ಅಭಿಪ್ರಾಯಕ್ಕೆ ಬೆಲೆ ಕೊಡದ ಅಮೆರಿಕವು ಪಾಕಿಸ್ತಾನಕ್ಕೆ ಯುದ್ಧಾಸ್ತ್ರಗಳನ್ನೂ ಆರ್ಥಿಕ ನೆರವನ್ನೂ ನೀಡುತ್ತಲೇ ಬಂದಿದೆ. ಈ ಎಲ್ಲ ಇತಿಹಾಸವನ್ನು ಅವಲೋಕಿಸಿದಾಗ, ರಷ್ಯಾ ನೀಡಿದ ಸಹಾಯ-ಸಹಕಾರ, ಸಂಕಷ್ಟದ ಸಮಯದಲ್ಲಿ ನೀಡಿದ ನೆರವನ್ನು ಭಾರತವು ಎಂದಿಗೂ ಮರೆಯಬಾರದು.
ಇದೇ ವೇಳೆಗೆ, ಅಮೆರಿಕವು ‘ಭಾರತ-ವಿರೋಧಿ’ ಧೋರಣೆಯನ್ನು ತೋರುತ್ತಾ ಬಂದಿರುವುದನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಸ್ತುತ ಭಾರತವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿ ಕೊಂಡಿರುವುದು ಸ್ವಾಗತಾರ್ಹವಾಗೇನೋ ಇದೆ. ಹಾಗಂತ, ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾದ ಜತೆಗಿನ ಕಚ್ಚಾತೈಲ ಸರಬರಾಜಿನ ಒಪ್ಪಂದವನ್ನು ಭಾರತವು ಮುರಿದುಕೊಳ್ಳಬಾರದು.
ಬದಲಿಗೆ, ಭಾರತವು ಅಮೆರಿಕ ಮತ್ತು ರಷ್ಯಾ ಈ ಎರಡೂ ರಾಷ್ಟ್ರಗಳೊಂದಿಗೆ ಸಮನಾದ ಮತ್ತು ಉತ್ತಮವಾದ ಸಂಬಂಧವನ್ನು ಹೊಂದಲು ಪ್ರಯತ್ನಿಸಬೇಕು. ಆಗ ಮಾತ್ರವೇ ಭಾರತದ ಹಿತಾಸ ಕ್ತಿಯನ್ನು ಕಾಯ್ದುಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ಎಚ್ಚರಿಕೆಯ ಹೆಜ್ಜೆಯಿಡುವುದು ಅವಶ್ಯವಾಗಿದೆ.
ಏಕೆಂದರೆ, ಐರೋಪ್ಯ ಒಕ್ಕೂಟದೊಂದಿಗೆ ಭಾರತವು ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡ ನಂತರ ಅಮೆರಿಕಕ್ಕೆ ನಡುಕ ಉಂಟಾಗಿ ನಮ್ಮೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮುಂದೆ ಬಂದಿದೆ ಯಷ್ಟೇ. ಭಾರತವು ಇದನ್ನು ಮನಗಂಡು, ಅಮೆರಿಕದ ಒತ್ತಡಕ್ಕೆ ಮಣಿಯದೆ, ತನ್ನದೇ ಆದ ನೀತಿ ಯನ್ನು ಅನುಸರಿಸಬೇಕು. ಇದರಲ್ಲೇ ದೇಶದ ಜನರ ಹಿತ ಅಡಗಿದೆ.
(ಲೇಖಕರು ಪ್ರಾಧ್ಯಾಪಕರು ಹಾಗೂ ರಾಜಕೀಯ ವಿಶ್ಲೇಷಕರು)