ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಇಂಡಿಗೋ ಅವಾಂತರ: ವಿಮಾನಯಾನ ಹರೋಹರ!

ಡಿ.3ರಿಂದ 15ರವರೆಗೆ 12000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ಹಾರದೆ ರದ್ದಾಗಿವೆ. ಸುಮಾರು 30 ಲಕ್ಷ ಜನರು ತಾವು ಯೋಜಿಸಿದಂತೆ ಪ್ರಯಾಣ ಕೈಗೊಳ್ಳಲಾಗದೆ ತೊಂದರೆ ಅನುಭವಿಸಿದ್ದಾರೆ. ಮುಂದಿನ ಅಪ್‌ಡೇಟ್ ಅನ್ನು ಅಥವಾ ಚೆಕ್‌ಇನ್ ಆದ ಲಗೇಜನ್ನು ಪಡೆಯ ಲೆಂದು ಗಂಟೆಗಟ್ಟಲೆ ನಿದ್ರಾಹಾರ ಗಳಿಲ್ಲದೆ ಪರದಾಡಿದ್ದಾರೆ, ವಿಮಾನ ನಿಲ್ದಾಣದೊಳಗೆ ಒತ್ತೆಯಾಳುಗಳಂತೆ ದೈನ್ಯ ಸ್ಥಿತಿಯನ್ನು ಅನುಭವಿಸಿದ್ದಾರೆ.

ಗಾಳಿ ಗೋಪುರ

ರವೀ ಸಜಂಗದ್ದೆ

ದೇಶದ ವಿಮಾನಯಾನ ಕ್ಷೇತ್ರ ತಲ್ಲಣಗೊಂಡಿದೆ. ಈ ಕ್ಷೇತ್ರದಲ್ಲಿ ಮೂರನೇ ಎರಡರಷ್ಟು ಪಾಲು ಹೊಂದಿರುವ, 19 ವರ್ಷಗಳ ಅನುಭವ ಹೊಂದಿರುವ ಇಂಡಿಗೋ ಸಂಸ್ಥೆ ತನ್ನ ಬಹುತೇಕ ವಿಮಾನ ಗಳನ್ನು ಡಿಸೆಂಬರ್ 3ರಿಂದ ರದ್ದುಗೊಳಿಸಿದ್ದಕ್ಕೆ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಕೊನೇ ಕ್ಷಣದಲ್ಲಿ ವಿಮಾನ ರದ್ದು, ರದ್ದಾದರೂ ಚೆಕ್-ಇನ್ ಆದ ಲಗೇಜು ವಾಪಸ್ ಸಿಗದೆ, ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆಯಾಗದೆ, ಸರಿಯಾಗಿ ಊಟ-ನಿದ್ರೆ ಮಾಡಲಾಗದೆ ಜನರು ಅನುಭವಿಸಿದ ತೊಂದರೆಗಳು ಜಾಲತಾಣಗಳಲ್ಲಿ ಸದ್ದುಮಾಡುತ್ತಿವೆ.

ಯಾರೇನೇ ಸಮಜಾಯಿಷಿ ಕೊಡಲಿ, ಈ ಅಪಸವ್ಯಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಇಂಡಿಗೋ ನೇರ ಹೊಣೆಗಾರರು. ಈ ಎರಡು ವಾರಗಳಲ್ಲಾದ ಅಸ್ತವ್ಯಸ್ತತೆಗಳನ್ನೊಮ್ಮೆ ಅವಲೋಕಿಸಿದಾಗ ದಕ್ಕುವ ವಿವರಗಳು ಗಾಬರಿ ಹುಟ್ಟಿಸುತ್ತವೆ. ಡಿ.3ರಿಂದ 15ರವರೆಗೆ 12000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ಹಾರದೆ ರದ್ದಾಗಿವೆ.

ಸುಮಾರು 30 ಲಕ್ಷ ಜನರು ತಾವು ಯೋಜಿಸಿದಂತೆ ಪ್ರಯಾಣ ಕೈಗೊಳ್ಳಲಾಗದೆ ತೊಂದರೆ ಅನು ಭವಿಸಿದ್ದಾರೆ. ಮುಂದಿನ ಅಪ್‌ಡೇಟ್ ಅನ್ನು ಅಥವಾ ಚೆಕ್‌ಇನ್ ಆದ ಲಗೇಜನ್ನು ಪಡೆಯ ಲೆಂದು ಗಂಟೆಗಟ್ಟಲೆ ನಿದ್ರಾಹಾರಗಳಿಲ್ಲದೆ ಪರದಾಡಿದ್ದಾರೆ, ವಿಮಾನ ನಿಲ್ದಾಣದೊಳಗೆ ಒತ್ತೆಯಾಳುಗಳಂತೆ ದೈನ್ಯ ಸ್ಥಿತಿಯನ್ನು ಅನುಭವಿಸಿದ್ದಾರೆ.

ಇದನ್ನೂ ಓದಿ: Ravi Sajangadde Column: ಕೊನೆಮೊದಲಿಲ್ಲದ ಮಾನವ-ಪ್ರಕೃತಿ-ವನ್ಯಜೀವಿ ಸಂಘರ್ಷ

ಹೆಚ್ಚಿನವರ ಹೋಟೆಲ್ ಮತ್ತಿತರ ಬುಕಿಂಗ್‌ಗಳು ರದ್ದಾಗಿವೆ, ಕುಟುಂಬದೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯಬೇಕು ಎಂದುಕೊಂಡಿದ್ದವರ ಕನಸಿಗೆ ಇಂಡಿಗೋ ಕೊಳ್ಳಿಯಿಟ್ಟಿದೆ. ಒಟ್ಟಿನಲ್ಲಿ, ಪ್ರಯಾಣಿಕರಿಗೆ ಸುನಾಮಿ ಅಪ್ಪಳಿಸಿದ ಪರಿಸ್ಥಿತಿ. ವಿಮಾನಯಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಒತ್ತಡದ ಅಡಿಯಲ್ಲೇ ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿ ದಶಕಗಳೇ ಕಳೆದಿವೆ.

ದಿನಗಳೆದಂತೆ ಈ ಕ್ಷೇತ್ರ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದರೂ, ಅದಕ್ಕನುಗುಣವಾಗಿ ಸಿಬ್ಬಂದಿಗಳ ನೇಮಕವಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸಿ ಈ ಹಂತವನ್ನು ಮುಟ್ಟಿದೆ. ಮೊನ್ನಿನ ಪ್ರಕರಣದಲ್ಲಿ ಇಂಡಿಗೋ ಸಂಸ್ಥೆಯು ಪರಿಸ್ಥಿತಿಯನ್ನು ಅಸಮರ್ಪಕವಾಗಿ ನಿರ್ವಹಿಸಿರು ವುದು ಎದ್ದು ಕಾಣುತ್ತಿದೆ.

ಮತ್ತೊಂದೆಡೆ, ವಿಮಾನಯಾನ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿರುವ ಅನೇಕ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಸಚಿವಾಲಯ ಗಮನಹರಿಸಬೇಕಿದೆ. ಕಳೆದೊಂದು ದಶಕದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದ್ದು, ವಿಮಾನ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಇದು 2021ರಲ್ಲಿ 6.1 ಕೋಟಿಯಷ್ಟಿದ್ದುದು, 2025ರಲ್ಲಿ 30 ಕೋಟಿಯನ್ನು ಮುಟ್ಟಿದೆ.

ಆದರೆ ಇದಕ್ಕನುಗುಣವಾಗಿ ಮಾನವಸಂಪನ್ಮೂಲದ ನಿಯೋಜನೆ, ಸುರಕ್ಷತಾ ಕ್ರಮಗಳ ಪಾಲನೆ, ಮೇಲ್ವಿಚಾರಣೆ, ಏರ್‌ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿನ ನೇಮಕಾತಿಗಳು ಆಗಲೇ ಇಲ್ಲ! ಇಂಡಿಗೋ ಅವಾಂತರ ಅದಕ್ಕೊಂದು ತಾಜಾ ನಿದರ್ಶನ. ವಿಮಾನಗಳ ಹಾರಾಟಕ್ಕೂ ಮುನ್ನ ಅವುಗಳ ತಾಂತ್ರಿಕ ವಿಚಾರ, ಕ್ಷಮತೆ-ಸುರಕ್ಷತೆಗಳ ಪರಿಶೀಲನೆ ನಡೆಸುವುದು ಮತ್ತು ಈ ಕುರಿತ ನಿಯಮಾವಳಿಗಳನ್ನು ರೂಪಿಸಿ, ಕಾಲಕಾಲಕ್ಕೆ ಸೂಕ್ತವಾಗಿ ಮಾರ್ಪಡಿಸಿ, ವಿಮಾನ ಹಾರಾಟದ ಕಾರ್ಯಾಚರಣೆ, ಪರವಾನಗಿ ಇತ್ಯಾದಿ ಜವಾಬ್ದಾರಿಗಳನ್ನು ನಿಭಾಯಿಸುವುದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ).

ಸೂಕ್ಷ್ಮವೂ, ಭದ್ರತಾ ದೃಷ್ಟಿಯಿಂದ ಮಹತ್ತರವೂ ಆಗಿರುವ ಈ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಲು ಬೇಕಾದ ತಜ್ಞ ಸಿಬ್ಬಂದಿಗಳ ಕೊರತೆಯನ್ನು ಡಿಜಿಸಿಎ ಅನುಭವಿಸುತ್ತಿರುವುದು ಕಳವಳಕಾರಿ ಸಂಗತಿ. ನೇಮಕಾತಿ ಮತ್ತು ಆಡಳಿತಾತ್ಮಕ ವಿಚಾರದಲ್ಲಿ ಡಿಜಿಸಿಎಗೆ ಶಾಸನಬದ್ಧವಾದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಇಲ್ಲದಿರುವುದು ಇದಕ್ಕೆಲ್ಲ ಮೂಲಕಾರಣ.

ಈ ಸಂಸ್ಥೆಯ ಹುದ್ದೆಗಳು ಭರ್ತಿಯಾಗುವುದು ಯುಪಿಎಸ್‌ಸಿ ನೇಮಕಾತಿಯ ಮೂಲಕ ಮತ್ತು ಅದು ನಿಧಾನಗತಿಯ ಪ್ರಕ್ರಿಯೆ. ಹೀಗಾಗಿ ಡಿಜಿಸಿಎ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಇದು ವಿಮಾನ ಪ್ರಯಾಣಿಕರ ಸುರಕ್ಷತೆಗೂ ಮಾರಕವಾಗಿದೆ. ಆದರೆ ಇದನ್ನು ಸರಕಾರವಿನ್ನೂ ಮನಗಂಡಂತಿಲ್ಲ!

ಒಂದು ಉದಾಹರಣೆ ನೀಡುವುದಾದರೆ, ವಿಮಾನದ ಟೇಕಾಫ್ ಮತ್ತು ಲ್ಯಾಂಡಿಂಗ್ ಕುರಿತಾದ ಸೂಚನೆ ನೀಡಿ ನಿಯಂತ್ರಿಸುವ ‘ವಾಯು ಸಂಚಾರ ನಿಯಂತ್ರಣ’ (ಎಟಿಸಿ) ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ, ಸೂಕ್ತ ತರಬೇತಿಯಿಲ್ಲದವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಆತಂಕದ ಸಂಗತಿ. ರಾತ್ರಿಪಾಳಿಯಲ್ಲಿ ಕೆಲಸ ಮಾಡುವವರಿಲ್ಲದ ಕಾರಣ ಮತ್ತೊಂದು ಪಾಳಿಯ ಲಭ್ಯ ಸಿಬ್ಬಂದಿಯೇ ಹೆಚ್ಚುವರಿ ಅವಧಿಗೆ ಕೆಲಸ ಮಾಡುತ್ತಿದ್ದಾರೆ, ತತ್ಪರಿಣಾಮವಾಗಿ ವಿಶ್ರಾಂತಿಯಿಲ್ಲದೆ ಒತ್ತಡವನ್ನು ಅನುಭವಿಸುತ್ತಿದ್ದಾರೆ.

ಬಹುತೇಕ ವಿಮಾನಯಾನ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಮಾಮೂಲಾಗಿದೆ. ಸಂಸದೀಯ ಸ್ಥಾಯಿ ಸಮಿತಿಯ ಇತ್ತೀಚಿನ ವರದಿ ಹೇಳಿರುವಂತೆ, ಎಲ್ಲಾ ಕೊರತೆ-ತೊಂದರೆಗಳೊಂದಿಗೆ ಏಗಿಕೊಂಡು ಕಾರ್ಯನಿರ್ವಹಿಸುವುದು ವಿಮಾನಯಾನ ಸಂಸ್ಥೆಗಳಿಗೆ ಮತ್ತು ಅವುಗಳ ಸಿಬ್ಬಂದಿಗಳಿಗೆ ಅಭ್ಯಾಸ ವಾಗಿಬಿಟ್ಟಿದೆ.

ಆಡಳಿತಾತ್ಮಕ ವೈಫಲ್ಯಕ್ಕೆ ಇದು ಪ್ರಮುಖ ಕಾರಣ. ಸರಕಾರವು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಉದ್ದೇಶಿಸಿದ್ದ ‘ವಿಮಾನಯಾನ ಕಾರ್ಯಾವಧಿ ಮಿತಿ’ಗೆ ಬಹುತೇಕ ಎಲ್ಲ ವಿಮಾನಯಾನ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ ಮತ್ತು ಅದರ ಜಾರಿಗೆ ವಿನಾಯಿತಿ ಕೋರಿವೆ. ಇದಕ್ಕೆ ತಕ್ಕಂತೆ ಡಿಜಿಸಿಎ ಅನಿವಾರ್ಯವಾಗಿ ಹೆಚ್ಚಿನ ಸಂಸ್ಥೆಗಳಿಗೆ ವಿನಾಯಿತಿ ನೀಡಿರುವುದು ನಮ್ಮ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ.

‘ಇಂಡಿಗೋ ಅವಾಂತರ’ವನ್ನು ಪರಾಮರ್ಶಿಸುವುದಾದರೆ, ಸದರಿ ‘ಕಾರ್ಯಾವಧಿ ಮಿತಿ’ ನಿಯಮ ದಡಿ ಪೈಲಟ್‌ಗಳಿಗೆ 48 ಗಂಟೆಗಳ ಕಡ್ಡಾಯ ವಿಶ್ರಾಂತಿ ನಿಯಮ ಇಷ್ಟೆಲ್ಲಾ ರಾದ್ಧಾಂತಕ್ಕೆ ಮೂಲಕಾರಣ. ಈ ನಿಯಮದ ಕಟ್ಟುನಿಟ್ಟಿನ ಜಾರಿಗೆ ಸಚಿವಾಲಯ ಮುಂದಾದಾಗ, ಅದಾಗಲೇ ಸಿಬ್ಬಂದಿ ಕೊರತೆಯಿರುವ ಇಂಡಿಗೋ ಕನಲಿ ಹೋಯಿತು; ತನ್ನ ‘ತಡಸಲು ಪರಿಣಾಮ’ವನ್ನು (ಇZoZbಜ್ಞಿಜ ಉಛ್ಚಿಠಿ) ತೋರಿಸಿ, ಡಿಸೆಂಬರ್ ೩ರಿಂದ ದೇಶದ ಬಹುಪಾಲು ವಾಯುಯಾನ ಕ್ಷೇತ್ರವನ್ನು ಸ್ತಬ್ಧಗೊಳಿಸಿತು.

ಪರಿಣಾಮ, ವಿಮಾನಗಳು ನಿಲ್ದಾಣಗಳಲ್ಲೇ ಸಾಲಾಗಿ ನಿಂತವು. ಆಕ್ರೋಶಗೊಂಡ ಪ್ರಯಾಣಿಕರು ಇಂಡಿಗೋ ಸಿಬ್ಬಂದಿಗಳ ಮೇಲೆ ಹಾರಾಡತೊಡಗಿದರು. ಇಡೀ ವ್ಯವಸ್ಥೆ ಹಳಿತಪ್ಪಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಯಿತು. ಮತ್ತೊಂದೆಡೆ, ಸದರಿ ನಿಯಮವನ್ನು 2026ರ ಫೆಬ್ರವರಿವರೆಗೆ ಸಡಿಲಗೊಳಿಸಿ ಆದೇಶ ಹೊರಡಿಸಿದ ಡಿಜಿಸಿಎ ನಗೆಪಾಟಲಿಗೀಡಾಯಿತು.

ದೇಶದ ಕೆಲವೇ ಕೆಲವು ಸಚಿವಾಲಯ/ಕಾರ್ಯಾಲಯಗಳನ್ನು ಹೊರತುಪಡಿಸಿದರೆ ಬಹುತೇಕ ರಂಗಗಳಲ್ಲಿ ಪ್ರಾಮಾಣಿಕ, ವೈಜ್ಞಾನಿಕ, ದಕ್ಷ ವ್ಯವಸ್ಥೆಯು ರೂಪುಗೊಂಡಿದೆ ಎಂಬುದು ಜನರ ಗ್ರಹಿಕೆ. ಆದರೆ, ಇಂಡಿಗೋ ಅವಾಂತರದ ಹೆಸರಲ್ಲಿ ಅವ್ಯವಸ್ಥೆಗಳು ಸ್ಫೋಗೊಂಡಾಗ, ಇತರ ಕ್ಷೇತ್ರಗಳಲ್ಲಿನ ವ್ಯವಸ್ಥೆ ಬದಲಾಗಬೇಕಿರುವುದರ ಅನಿವಾರ್ಯತೆ ಎದ್ದು ಕಾಣುತ್ತದೆ.

ಆದ್ದರಿಂದ, ಇಂಥ ಅವಾಂತರಗಳು ನಡೆದಾಗ ಮಾತ್ರವೇ ಪರಿಹಾರೋಪಾಯಕ್ಕೆ ಧಾವಿಸುವ ಬದಲು, ಅವನ್ನು ಸಾಕಷ್ಟು ಮುಂಚಿತವಾಗಿ ಪರಾಂಬರಿಸಿ, ತಡೆಯಲು ಮುಂದಾಗಬೇಕು. ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ ಉಂಟಾದಾಗ ಹೀಗಾಗುತ್ತದೆ. ಇದನ್ನು ಮುರಿಯುವ ಕೆಲಸವು ವಿಮಾನಯಾನ, ದೂರಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಆಗಬೇಕಿದೆ. ಅದಕ್ಕಾಗಿ ಹೊಸ ಕಂಪನಿ ಗಳು ಮುಂದೆ ಬರಬೇಕು.

ಈಗಾಗಲೇ ಪತ್ತೆಯಾಗಿರುವ ಕೊರತೆ/ನ್ಯೂನತೆಗಳನ್ನು ಸರಿಪಡಿಸಲು, ಅಲ್ಲಿನ ಎಲ್ಲ ಪಾಲುದಾರರೂ ಜತೆಗೂಡಿ ಸರಿದಿಕ್ಕಿನಲ್ಲಿ ಹೆಜ್ಜೆಹಾಕಬೇಕು. ಸಾರ್ವಜನಿಕ ಸೇವಾಸಂಸ್ಥೆಗಳಿಗಿಂತ ಸಚಿವಾಲಯಗಳು ಶಕ್ತಿಯುತವಾಗಿ ನಿಂತಾಗ ಮಾತ್ರವೇ ವಿಚಾರ-ವ್ಯವಹಾರ ಎಲ್ಲವೂ ಸುಸೂತ್ರ; ಇಲ್ಲವಾದಲ್ಲಿ ಅದು ‘ಇಂಡಿಗೋ ಪಾಡು’! ಸಂಬಂಧಪಟ್ಟವರು ಈ ಪಾಠವನ್ನು ಮರೆಯದಿರಲಿ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)