Ravi Sajangadde Column: ಕೊನೆಮೊದಲಿಲ್ಲದ ಮಾನವ-ಪ್ರಕೃತಿ-ವನ್ಯಜೀವಿ ಸಂಘರ್ಷ
ಋತುಮಾನಕ್ಕೆ ಅನುಗುಣವಾಗಿ ನೀರು-ಆಹಾರದ ತಲಾಶೆ, ಸಂತಾನೋತ್ಪತ್ತಿಯ ಉದ್ದೇಶ ಗಳನ್ನು ಇಟ್ಟುಕೊಂಡು ಒಂದು ಕಾಡಿನಿಂದ ಮತ್ತೊಂದಕ್ಕೆ ವಲಸೆ ಹೋಗುತ್ತಿದ್ದ ಕಾಡು ಪ್ರಾಣಿ ಗಳು ಈಗ ನಾಡಿನತ್ತ ಮುಖ ಮಾಡಿವೆ. ಒಂದು ಕಾಲಕ್ಕೆ ಅವು ನಿರಾಳವಾಗಿ ಓಡಾಡಿ ಕೊಂಡಿದ್ದ ಕಾಡಿನ ಪರಿಸರ ಈಗ ನಾಡಾಗಿರುವುದು ಇದಕ್ಕೆ ಮುಖ್ಯ ಕಾರಣ.
-
ವಿಶ್ಲೇಷಣೆ
ರವೀ ಸಜಂಗದ್ದೆ
ವನ್ಯಜೀವಿಗಳು ಮತ್ತು ಪರಿಸರಕ್ಕೆ ಸಂಕಷ್ಟ ಒದಗುವುದರಿಂದ ಮರಗಳು ನಾಶ ವಾಗಿ, ನೀರನ್ನು ಇಂಗಿಸುವ ಮಣ್ಣಿನ ಸಾಮರ್ಥ್ಯ ಕುಂಠಿತವಾಗುತ್ತದೆ. ವರ್ಷಗಳು ಉರುಳಿದಂತೆ ಅಂತರ್ಜಲ ಮಟ್ಟವೂ ಕುಸಿಯುತ್ತದೆ. ಮಣ್ಣಿನ ಸವಕಳಿಯ ಪರಿಣಾಮ ಗುಡ್ಡ ಕುಸಿತ ಸಂಭವಿಸುತ್ತದೆ. ದೂರದ ಕೊಡಗಿನ ಬ್ರಹ್ಮಗಿರಿ ದಟ್ಟಾರಣ್ಯ ದಲ್ಲಿ ಹುಲಿ, ಆನೆ, ಚಿರತೆ ಮತ್ತಿತರ ವನ್ಯಜೀವಿಗಳು ಸುಸ್ಥಿತಿಯಲ್ಲಿ ಇದ್ದರೆ ಮಾತ್ರ ವೇ, ಬೆಂಗಳೂರಿನ ಮನೆಗಳಿಗೆ ಕಾವೇರಿ ನೀರು ಬರಲು ಸಾಧ್ಯ!
ಈ ಭೂಮಿಯ ಮೇಲೆ ಮನುಷ್ಯನ ಅಸ್ತಿತ್ವ ಶುರುವಾದಾಗಿನಿಂದಲೂ ನಡೆಯುತ್ತಲೇ ಬಂದಿದೆ ‘ಮನುಷ್ಯ-ಪರಿಸರ-ವನ್ಯಜೀವಿ’ಗಳ ನಡುವಿನ ತ್ರಿಕೋನ ಸಂಘರ್ಷ; ಇದನ್ನು ಪ್ರಪಂಚದ ಅತ್ಯಂತ ದೀರ್ಘ, ನಿರಂತರ ಹಣಾಹಣಿ ಎಂದರೂ ತಪ್ಪಾಗಲಾರದು!
‘ಅಭಿವೃದ್ಧಿ’ಯ ಹೆಸರಿನಲ್ಲಿ ಮನುಷ್ಯನು ಪ್ರಕೃತಿಯ ಮೇಲೆ ನಿರಂತರ ಪ್ರಹಾರ ಮಾಡಿದ ಪರಿಣಾಮ, ತಾಪಮಾನ ಏರಿಕೆಯಂಥ ಅನೇಕ ತೊಂದರೆ/ವಿಕೋಪಗಳಿಗೆ ಸಾಕ್ಷಿಯಾಗುತ್ತಾ ಬಂದಿದ್ದೇವೆ. ಜತೆಗೆ, ಪರಿಸರ ನಾಶ, ಕಾಡುಪ್ರದೇಶವನ್ನು ಕಡಿದು ನಾಡಾಗಿ ಪರಿವರ್ತಿಸುವ ಮಾನವ ಚಾಳಿಯ ಪರಿಣಾಮವಾಗಿ ಹುಲಿ, ಚಿರತೆ, ಆನೆ, ಕರಡಿ, ಕಾಡೆಮ್ಮೆ ಮುಂತಾದ ಕಾಡುಪ್ರಾಣಿಗಳು ಆಹಾರ-ನೀರನ್ನು ಅರಸಿ ನಾಡಿಗೆ ನುಗ್ಗಬೇಕಾದ ಅನಿವಾರ್ಯತೆ ಸೃಷ್ಟಿ ಯಾಗಿದೆ.
ಹೀಗಾದಾಗ, ಸಹಜವಾಗಿ ಮನುಷ್ಯ ಮತ್ತು ಮೃಗಗಳು ಸ್ವರಕ್ಷಣೆಗಾಗಿ ಹೋರಾಡುವುದು, ಅದರಲ್ಲಿ ಪರಸ್ಪರರ ಜೀವನಷ್ಟವಾಗುವುದು/ಅಂಗವೈಕಲ್ಯ ಒದಗುವುದು ಮಾಮೂಲಾಗಿ ಬಿಟ್ಟಿದೆ. ಈ ಸಂಘರ್ಷಕ್ಕೆ ಇದುವರೆಗೂ ನಿರ್ದಿಷ್ಟ, ವೈಜ್ಞಾನಿಕ ಪರಿಹಾರವನ್ನು ಕಂಡು ಕೊಳ್ಳಲು ಸರಕಾರಗಳು, ಪ್ರಾಣಿದಯಾ ಸಂಘಟನೆಗಳು, ವನ್ಯಜೀವಿ ಆಂದೋಲನ ಕಾರರು ಮತ್ತು ವಿಜ್ಞಾನಿಗಳಿಗೆ ಆಗದ ಕಾರಣದಿಂದಾಗಿ ಇದು ಚರ್ಚಾವಿಷಯವಾಗಿ ಮಾತ್ರವೇ ಉಳಿದಿದೆ.
ಹೀಗಾಗಿ ಕಾಡಿನ ಪ್ರಮಾಣ ಮತ್ತು ಕಾಡುಪ್ರಾಣಿಗಳ ಸಂಖ್ಯೆ ದಿನಗಳೆದಂತೆ ಕ್ಷೀಣಿಸುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ಕೊಡಲಿ ಪೆಟ್ಟು ನೀಡುತ್ತಿರುವ ಮನುಷ್ಯ, ತನ್ನ ಈ ಕೃತ್ಯದಿಂದಾಗಿ ಅಂತಿಮವಾಗಿ ತನ್ನ ಅಸ್ತಿತ್ವಕ್ಕೇ ಸಂಚಕಾರ ಒದಗಲಿದೆ ಎಂಬುದನ್ನು ಅರಿಯುತ್ತಿಲ್ಲ. ಇದು ವಿಪರ್ಯಾಸ!
ಇದನ್ನೂ ಓದಿ: Ravi Sajangadde Column: ನಿರ್ಬಂಧಗಳಿಗೆ ಅಂಜದೆ ಸದೃಢವಾಗಲಿ ಭಾರತ !
ಋತುಮಾನಕ್ಕೆ ಅನುಗುಣವಾಗಿ ನೀರು-ಆಹಾರದ ತಲಾಶೆ, ಸಂತಾನೋತ್ಪತ್ತಿಯ ಉದ್ದೇಶ ಗಳನ್ನು ಇಟ್ಟುಕೊಂಡು ಒಂದು ಕಾಡಿನಿಂದ ಮತ್ತೊಂದಕ್ಕೆ ವಲಸೆ ಹೋಗುತ್ತಿದ್ದ ಕಾಡು ಪ್ರಾಣಿಗಳು ಈಗ ನಾಡಿನತ್ತ ಮುಖ ಮಾಡಿವೆ. ಒಂದು ಕಾಲಕ್ಕೆ ಅವು ನಿರಾಳವಾಗಿ ಓಡಾಡಿ ಕೊಂಡಿದ್ದ ಕಾಡಿನ ಪರಿಸರ ಈಗ ನಾಡಾಗಿರುವುದು ಇದಕ್ಕೆ ಮುಖ್ಯ ಕಾರಣ.
ರೆಸಾರ್ಟ್, ಸಫಾರಿ, ಹೋಮ್ ಸ್ಟೇ, ಕಾಡು ವೀಕ್ಷಣೆ ಮುಂತಾದ ಹೆಸರಿನಲ್ಲಿ ನಾವು ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಹೋಗಿ, ಅವುಗಳ ಬದುಕಿನ ಹಕ್ಕುಗಳಿಗೆ ಧಕ್ಕೆ ತಂದಿದ್ದೇವೆ. ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ‘ಕಾರಿಡಾರ್’ ಹೆಸರಿನ ಯೋಜನೆಗಳು, ವಿಸ್ತರಿಸು ತ್ತಿರುವ ರಾಷ್ಟ್ರೀಯ ಹೆದ್ದಾರಿಗಳು/ರೈಲುಮಾರ್ಗಗಳು, ಕಾಡಿನೊಳಗೆ ಹಾದು ಹೋಗುವ ವಿದ್ಯುಚ್ಛಕ್ತಿ ಪ್ರಸರಣ ತಂತಿಗಳು ವನ್ಯಜೀವಿಗಳ ಪಾಲಿಗೆ ಮೃತ್ಯುಕೂಪಗಳಾಗಿ ಪರಿಣಮಿ ಸಿವೆ, ಇಲ್ಲವೇ ಅವುಗಳ ಸಂಖ್ಯೆ ತಗ್ಗುವುದಕ್ಕೆ ಕಾರಣವಾಗಿವೆ. ನಿಸರ್ಗದ ನಡುವೆ ‘ರೆಸಾರ್ಟ್’ ಹೆಸರಿನಲ್ಲಿ ತಲೆಯೆತ್ತಿರುವ ಕಟ್ಟಡಗಳು ಇತ್ತೀಚಿನ ಶುದ್ಧ ನಾನ್ಸೆನ್ಸ್!
ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಕಬಿನಿ, ಹಾರಂಗಿ, ಭದ್ರಾ ಮುಂತಾದ ಅಣೆಕಟ್ಟು ಗಳಿಂದಾಗಿ ಕಾಡುಗಳು ಮತ್ತು ಕಾಡು ಪ್ರಾಣಿಗಳು ನಾಶವಾಗಿವೆ; ಆನೆ-ಹುಲಿಗಳಾದರೆ ಅಣೆಕಟ್ಟಿನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಈಜಿಕೊಂಡು ಹೋಗುತ್ತವೆ, ಉಳಿದ ಪ್ರಾಣಿಗಳಿಗೆ ಅದು ಅಸಾಧ್ಯವಾಗಿ ಜಲದಿಗ್ಬಂಧನವಾಗುತ್ತದೆ!
ಆಧುನಿಕತೆ, ತಂತ್ರಜ್ಞಾನ, ಅಭಿವೃದ್ಧಿಯಂಥ ಹಣೆಪಟ್ಟಿಗಳು ಮನುಷ್ಯನ ಶ್ರೇಯೋಭಿ ವೃದ್ಧಿಯನ್ನಷ್ಟೇ ತಲೆಯಲ್ಲಿಟ್ಟುಕೊಂಡ ಸ್ವಾರ್ಥದ ನಿಲುವುಗಳು; ಪರಿಸರ ಮತ್ತು ವನ್ಯ ಜೀವಿಗಳ ಹಿತರಕ್ಷಣೆಯ ದೃಷ್ಟಿಕೋನ ಇಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರಂತ!
ಪ್ರಕೃತಿ ಮತ್ತು ವನ್ಯಜೀವಿಗಳ ಜತೆಗಿನ ಮನುಷ್ಯನ ಸಂಘರ್ಷಕ್ಕೆ ಕಡಿವಾಣ ಹಾಕಲು ಇಲ್ಲಿ ಸೂಚಿಸಲಾಗಿರುವ ಒಂದಷ್ಟು ಕ್ರಮಗಳನ್ನು ಅನುಸರಿಸಬಹುದು: ಪರಿಸರದ ಮೇಲಿನ ಮಾನವನ ನಿರಂತರ ದಾಳಿಯಿಂದಾಗಿ ಭಾರತದಲ್ಲಿ ಕಾಡಿನ ಒಟ್ಟಾರೆ ದಟ್ಟತೆ/ಗುಣಮಟ್ಟ ಕುಸಿದಿರುವುದರಿಂದ, ‘ಕಾಡು-ಪರಿಸರ-ವನ್ಯಜೀವಿ ಸಂರಕ್ಷಣೆ ನೀತಿ’ ಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಜಾರಿಗೊಳಿಸುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಬೇಕು.
ವನ್ಯಜೀವಿಗಳ ಸಂತತಿ ಹೆಚ್ಚಾಗಲು ಅವಕ್ಕೆ ಪೂರಕ ಪರಿಸರ ಮತ್ತು ಆಹಾರದ ವ್ಯವಸ್ಥೆ ಯನ್ನು ಕಲ್ಪಿಸಬೇಕು. ಕಾಡು ಪ್ರಾಣಿಗಳು ಒಂದು ನೆಲೆಯಿಂದ ಇನ್ನೊಂದಕ್ಕೆ ಹೋಗಲು ಇರುವ ಸಂಪರ್ಕಮಾರ್ಗವನ್ನು ಅಭಿವೃದ್ಧಿಯ ಹೆಸರಲ್ಲಿ ನಾವು ತುಂಡುಮಾಡಿದ್ದೇವೆ; ಇಂಥ ಸಂಪರ್ಕಮಾರ್ಗಗಳ ಮರುಸ್ಥಾಪನೆಯಾಗಬೇಕು.
ಕಾಡಿನ ಒಂದು ಪ್ರದೇಶದಿಂದ ಇನ್ನೊಂದಕ್ಕೆ ವನ್ಯಜೀವಿಗಳು ಯಾಕಾಗಿ ಹೋಗುತ್ತವೆ? ಎನ್ನುವ ಕುರಿತಾದ ದೀರ್ಘಕಾಲಿಕ ಅಧ್ಯಯನ/ಸಂಶೋಧನೆಯ ಅಗತ್ಯವಿದೆ. ಜತೆಗೆ, ಕಾಡಿನ ಸಸ್ಯಸಂಕುಲದ ಗುಣಮಟ್ಟದ ಅಭಿವೃದ್ಧಿಗೆ ಒತ್ತು ನೀಡಿ, ಪ್ರಾಣಿಗಳಿಗೆ ಉಪದ್ರವ ಕೊಡುವ ಪಾರ್ಥೇನಿಯಂ, ಲಂಟಾನ, ಯುಪಟೋರಿಯಂ ಮುಂತಾದ ಕಳೆಗಿಡಗಳ ನಿರ್ಮೂಲನೆಗೂ ಯೋಜನೆ ತರಬೇಕಿದೆ. ಈ ಗಿಡಗಳು ಹಸಿರು ಹುಲ್ಲೂ ಬೆಳೆಯದಂತೆ ಮಾಡುವುದರ ಜತೆಗೆ ಕಾಡ್ಗಿಚ್ಚು ಉಂಟಾಗಲು ನೇರಹೊಣೆಯಾಗಿವೆ.
ಅಂಕಿ-ಅಂಶಗಳನ್ನು ಪ್ರಕಟಿಸಿ ಹೆಮ್ಮೆಪಟ್ಟುಕೊಳ್ಳುವಲ್ಲಿ ಮಾತ್ರವೇ ಕಾಡು ಮತ್ತು ಪರಿಸರ ದ ಬಗೆಗಿನ ಸಚಿವಾಲಯಗಳು/ಇಲಾಖೆಗಳು ಶ್ರಮ ವಹಿಸುತ್ತಿರುವಂತೆ ತೋರುತ್ತದೆ! ವನ್ಯ ಜೀವಿಗಳ ಸಂತತಿಯನ್ನು ಉಳಿಸಿ ಬೆಳೆಸಲು ವಸ್ತುನಿಷ್ಠ ಯೋಜನೆಯನ್ನು ರೂಪಿಸಿ, ಬದಲಾದ ಹವಾಮಾನ ಮತ್ತು ಅರಣ್ಯ ಅತಿಕ್ರಮಣದಿಂದಾಗಿ ಪ್ರಾಣಿಗಳು ಎದುರಿಸು ತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬೇಕಾಗಿದೆ.
ಆಹಾರ ಮತ್ತು ನೀರಿನ ಕುರಿತು ಗಮನಹರಿಸಿ, ಇವೆರಡೂ ಕಾಲಕಾಲಕ್ಕೆ ವನ್ಯಜೀವಿಗಳ ಪ್ರದೇಶದಲ್ಲೇ ಸಿಗುವಂತಾದರೆ ಬಹುತೇಕ ಸಮಸ್ಯೆಯನ್ನು ನೀಗಿದಂತೆ. ‘ವರ್ಲ್ಡ್ ವಲ್ಡ್‌ಲೈಫ್ ಫಂಡ್’ ವರದಿಯ ಪ್ರಕಾರ, ವಿಶ್ವಾದ್ಯಂತ ಕಳೆದ ೫ ದಶಕಗಳಲ್ಲಿ ವನ್ಯಜೀವಿಗಳ ಸಂಖ್ಯೆ ಯಲ್ಲಿ ಶೇ.52ರಷ್ಟು ಇಳಿಕೆಯಾಗಿದೆ.
ಮನುಷ್ಯನೇ ಇದಕ್ಕೆ ನೇರ ಮತ್ತು ಏಕೈಕ ಕಾರಣ. ‘ಮೃಗಾಲಯ ಅಥವಾ ಫಾರ್ಮ್ ನಲ್ಲಿ ವನ್ಯಜೀವಿಗಳನ್ನು ಬೆಳೆಸಿ, ಸಂವರ್ಧನೆ ಮಾಡುತ್ತೇವೆ’ ಎಂದಾದರೆ, ಅದು ಅವುಗಳ ಸೂಕ್ತ ಸಂರಕ್ಷಣೆ ಖಂಡಿತಾ ಆಗಲಾರದು. ಅವುಗಳ ಸಹಜನೆಲೆಯಾದ ಕಾಡುಗಳನ್ನು ಸಂರಕ್ಷಿಸಿ ದಾಗ ಮಾತ್ರವೇ ವನ್ಯಜೀವಿಗಳ ಸಂರಕ್ಷಣೆ- ಸಂವರ್ಧನೆಯೂ ಆದೀತು.
ಕೈಗಾರಿಕೆ/ಗಣಿಗಾರಿಕೆ, ಕೃಷಿ ವಿಸ್ತರಣೆ, ಬೇಟೆ, ರಸ್ತೆ-ರೈಲು ಮಾರ್ಗ ಮುಂತಾದ ‘ಅಭಿವೃದ್ಧಿ ಪರ’ ಚಟುವಟಿಕೆಗಳಿಂದಾಗಿ ವನ್ಯಜೀವಿಗಳಿಗೆ ಸಂಚಕಾರ ಒದಗಿದೆ. ಇಂಥ ಚಟುವಟಿಕೆ ಗಳಿಗೆ ಪೂರ್ಣವಿರಾಮ ಬೀಳಲೇಬೇಕು.
ಕಾಡಂಚಿನ ಕೃಷಿಕರಿಗೆ ಸೂಕ್ತ ಭದ್ರತೆ ಒದಗಿಸುವ ಕೆಲಸವೂ ಆಗಬೇಕು. ಅವರ ಕೃಷಿ ಯೇತರ ಆದಾಯದ ಮೂಲವನ್ನು ವೃದ್ಧಿಸಿ, ಒಂದಷ್ಟು ಶಕ್ತಿ ತುಂಬಿದರೆ ಅವರೂ ಕಾಡಿ ನೊಳಗೆ ಹೆಚ್ಚು ಹೋಗಲಾರರು. ಕಾಡಂಚಿನ ಜನರು ಬದುಕನ್ನು ಕಟ್ಟಿಕೊಳ್ಳುವ ಭರದಲ್ಲಿ ವನ್ಯಜೀವಿಗಳಿಗೆ ತುತ್ತಾಗಿ ಬದುಕಿಗೇ ಸಂಚಕಾರ ತಂದುಕೊಳ್ಳುವಂತಾಗುವ ಪರಿಪಾಠಕ್ಕೆ ಅಂತ್ಯಹಾಡಬೇಕು.
ಅರಣ್ಯ ಇಲಾಖೆಯ ನೌಕರರು ತಂತಮ್ಮ ಕೆಲಸಗಳನ್ನು ಕಾಯಾ-ವಾಚಾ-ಮನಸಾ ಮಾಡುವುದರ ಜತೆಗೆ, ಸ್ಥಳೀಯರನ್ನು ಒಳಗೊಂಡ ಕಾವಲು ಪಡೆಯನ್ನು ರಚಿಸಬೇಕು. ಕಾಡಂಚಿನ ಪ್ರದೇಶಗಳ ಜನರಿಗೆ ಅರಣ್ಯ ಕಾಯಿದೆ, ವನ್ಯಜೀವಿ ಸಂರಕ್ಷಣೆಯ ಕುರಿತು ಅರಿವು ಮೂಡಿಸಬೇಕು. ಕಾಡುಪ್ರಾಣಿಗಳ ದಾಳಿಯಿಂದಾಗಿ ಅನಾಹುತಕ್ಕೊಳಗಾದ/ ಮರಣಿಸಿದವರ ಕುಟುಂಬಕ್ಕೆ ಸೂಕ್ತ-ಸಕಾಲಿಕ ಪರಿಹಾರ ಒದಗಿಸುವ ವ್ಯವಸ್ಥೆಯಾಗಬೇಕು.
ಕಾಡಂಚಿನಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ರೆಸಾರ್ಟ್, ಹೋಮ್‌ಸ್ಟೇಗಳನ್ನು ನಿರ್ದಾ ಕ್ಷಿಣ್ಯವಾಗಿ ಮುಚ್ಚಿಸಬೇಕು. ಕಾಡಿನೊಳಗೆ ಜನರ ಅತಿಕ್ರಮ ಪ್ರವೇಶ ನಿಂತಾಗ, ವನ್ಯಜೀವಿ ಗಳ ದಾಳಿಯೂ ಕಡಿಮೆಯಾಗುತ್ತದೆ. ಸ್ಥಳೀಯ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದು, ಪ್ರವೇಶಾವಕಾಶ ಇರುವ ಪ್ರದೇಶದಲ್ಲಷ್ಟೇ ಜನರು ಓಡಾಡುವಂತೆ ಆಗಬೇಕು. ಅ
ರಣ್ಯ ಮತ್ತು ವನ್ಯಜೀವಿಗಳ ನಾಶಕ್ಕೆ ಅರಣ್ಯ ವಾಸಿಗಳು/ಕಾಡಂಚಿನ ಜನರೇ ಕಾರಣ ಎಂದು ಕೀಳಾಗಿ ಬಿಂಬಿಸುವ ಪರಿಪಾಠ ನಿಲ್ಲಬೇಕು. ಕಾಡಂಚಿನ ಜನರು ಗಡ್ಡೆ-ಗೆಣಸು, ಜೇನುತುಪ್ಪ, ಸೌದೆ, ಮಾಂಸ, ಮೇವು, ತರಗೆಲೆ ಗೊಬ್ಬರ ಮುಂತಾದವುಗಳಿಗೆ ಅರಣ್ಯ ಗಳನ್ನು ಅವಲಂಬಿಸಿದ್ದಾರೆ. ಇಂಥ ಒಡನಾಟಕ್ಕೆ ನಮ್ಮಲ್ಲಿನ ಕಾನೂನುಗಳು ಕತ್ತರಿ ಹಾಕಿ ರುವುದರಿಂದ ಅವರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಪರಿಣಾಮವಾಗಿ, ಬೀದಿಗೆ ಬಿದ್ದ ಕುಟುಂಬಗಳ ಸಂಖ್ಯೆಯೂ ದೊಡ್ಡದಿದೆ. ಅಂಥವರನ್ನು ಸಂರಕ್ಷಿಸಿ ಬದುಕು ಕಟ್ಟಿ ಕೊಳ್ಳಲು ಅವಕಾಶ ನೀಡಬೇಕು.
ಇನ್ನು, ಮೃಗಾಲಯಗಳಲ್ಲಿರುವ ಪ್ರಾಣಿಗಳ ಪಾಡು, ಅಲ್ಲಿನ ಅವ್ಯವಸ್ಥೆಗಳು ಹೇಳತೀರದು. ಇಲ್ಲಿ ಸಮರ್ಪಕ ಆಹಾರ-ಆರೈಕೆ-ಚಿಕಿತ್ಸೆ ಸಿಗದೆ ಸಾಯುವ ಪ್ರಾಣಿಗಳ ಸಂಖ್ಯೆಯೂ ದೊಡ್ಡದಿದೆ. ಹೀಗಾದಾಗ ಒಂದಷ್ಟು ಪ್ರತಿಭಟನೆ, ಸಚಿವರು-ಅಧಿಕಾರಿಗಳ ಸಭೆ, ಕೆಳಸ್ತರದ ನೌಕರರ ಮೇಲೆ ಶಿಸ್ತುಕ್ರಮ ಮತ್ತು ತನಿಖೆಗೆ ಆದೇಶ ಇಷ್ಟಾಗಿಬಿಟ್ಟರೆ, ಅಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯ! ಮುಂದೆ ಅಂಥದೇ ಅವಘಡವಾದಾಗ ಮತ್ತದೇ ‘ಶೋ’ ಪುನರಾ ವರ್ತನೆ. ಈ ವಲಯದಲ್ಲಿ ಆಗಬೇಕಿರುವ ಸುಧಾರಣೆಗಳು ಸಾಕಷ್ಟಿವೆ. ಆದರೆ, ನಮ್ಮಲ್ಲಿ ಎಲ್ಲವೂ ಇದೆ- ಇಚ್ಛಾಶಕ್ತಿಯೊಂದನ್ನು ಬಿಟ್ಟು!
ಲಭ್ಯವಿರುವ ಅಂಕಿ-ಅಂಶಗಳು ಮತ್ತು ಪರಿಸರ ವಿಜ್ಞಾನಿಗಳು ನೀಡಿರುವ ವಿವರಗಳು ನಿಜಕ್ಕೂ ಗಾಬರಿ ಹುಟ್ಟಿಸುತ್ತವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ, ವನ್ಯಜೀವಿ ಪ್ರಭೇದ ಗಳು ಮತ್ತು ಕಾಡಿನ ಕ್ಷೀಣಿಸುವಿಕೆಯು ಊಹೆಗೂ ಮೀರಿದ ವೇಗದಲ್ಲಿ ನಡೆಯಲಿದೆ. ವನ್ಯಜೀವಿಗಳು ಮತ್ತು ಪರಿಸರಕ್ಕೆ ಸಂಕಷ್ಟ ಒದಗುವುದರಿಂದ ಮರಗಳು ನಾಶವಾಗಿ, ನೀರನ್ನು ಇಂಗಿಸುವ ಮಣ್ಣಿನ ಸಾಮರ್ಥ್ಯ ಕುಂಠಿತವಾಗಿ, ನೀರಿನ ಸೆಲೆಗಳು ಬತ್ತಿ ಹೋಗು ತ್ತವೆ.
ವರ್ಷಗಳು ಉರುಳಿದಂತೆ ಅಂತರ್ಜಲ ಮಟ್ಟವು ಮತ್ತಷ್ಟು ಕುಸಿಯುತ್ತದೆ. ಮಣ್ಣಿನ ಸವಕಳಿಯ ಪರಿಣಾಮ ಗುಡ್ಡ ಕುಸಿತದಂಥ ಅವಘಡಗಳು ಸಂಭವಿಸುತ್ತವೆ. ಕಾಡಿದ್ದರೆ ನಾಡು-ವನ್ಯಮೃಗಗಳು, ಕಾಡಿದ್ದರೆ ಮನುಷ್ಯ!
ದೂರದ ಕೊಡಗಿನ ಬ್ರಹ್ಮಗಿರಿ ದಟ್ಟಾರಣ್ಯದಲ್ಲಿ ಹುಲಿ, ಆನೆ, ಚಿರತೆ ಮತ್ತಿತರ ವನ್ಯಜೀವಿ ಗಳು ಸುಸ್ಥಿತಿಯಲ್ಲಿ ಇದ್ದರೆ ಮಾತ್ರವೇ, ಬೆಂಗಳೂರಿನ ಮನೆಗಳಿಗೆ ಕಾವೇರಿ ನೀರು ಬರಲು ಸಾಧ್ಯ!
ವಿಕಾಸವಾದದ ಪಯಣದಲ್ಲಿ ಮಾನವನಿಗಿಂತ ಬಹಳ ಮೊದಲೇ ಭುವಿಯಲ್ಲಿದ್ದಿದ್ದು, ಮಾನವರು ಜೀವಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದ್ದು ಇದೇ ಅರಣ್ಯ ಮತ್ತು ಪ್ರಾಣಿಗಳು. ಅವು ಮರೆಯಾದರೆ ಮನುಷ್ಯನು ಕ್ರಮೇಣ ಅಸ್ತಿತ್ವವನ್ನು ಕಳೆದು ಕೊಳ್ಳುವುದು ಕಟ್ಟಿಟ್ಟಬುತ್ತಿ. ಈ ಅಪ್ರಿಯ ಸತ್ಯವನ್ನು ಸಂಬಂಧಪಟ್ಟವರು ಇನ್ನಾದರೂ ಅರಿಯಲಿ...
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)