ನೀರನೋಟ
ಪ್ರದೀಪ್ ಕುಮಾರ ಸಕ್ಸೇನಾ
ಸಿಂಧೂ ನದಿ ವ್ಯವಸ್ಥೆಯು ಆರು ಪ್ರಮುಖ ನದಿಗಳನ್ನು ಒಳಗೊಂಡಿದೆ- ಸಿಂಧೂ (ಇಂಡಸ್), ಚೆನಾಬ್, ಝೇಲಂ, ರಾವಿ, ಬೀಸ್ ಮತ್ತು ಸಟ್ಲೆಜ್- ಈ ನದಿಗಳು ಭಾರತ ಮತ್ತು ಪಾಕಿಸ್ತಾನ ಎರಡೂ ಪ್ರದೇಶಗಳಲ್ಲಿ ಹರಿಯುತ್ತಿವೆ. ಈ ವ್ಯವಸ್ಥೆ ಸಿಂಧೂ ಕಣಿವೆಯಾದ್ಯಂತ ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಯನ್ನು ಪೋಷಿಸುತ್ತದೆ. ಮತ್ತು ಗಡಿಗಳ ಎರಡೂ ಬದಿಗಳಲ್ಲಿ ಕೋಟ್ಯಂತರ ಜನರಿಗೆ ಜೀವನಾಧಾರವಾಗಿದೆ.
1947ರಲ್ಲಿ ಬ್ರಿಟಿಷ್ ಭಾರತವನ್ನು ವಿಭಜಿಸಿದಾಗ, ಸಿಂಧು ನದಿ ವ್ಯವಸ್ಥೆಯನ್ನೂ ಎರಡು ಉತ್ತರಾಧಿಕಾರಿ ದೇಶಗಳ ನಡುವೆ ವಿಂಗಡಿಸಲಾಯಿತು. ಭೌಗೋಳಿಕ ವಾಸ್ತವವು ಸ್ಪಷ್ಟವಾಗಿತ್ತು. ಮೇಲ್ದಂಡೆಯ ರಾಷ್ಟ್ರವಾಗಿರುವ ಭಾರತವು ಹೆಚ್ಚಿನ ನದಿಗಳ ಮೂಲ ಪ್ರದೇಶಗಳನ್ನು ಹೊಂದಿತ್ತು, ಆದರೆ ಪಾಕಿಸ್ತಾನದ ಕೃಷಿ ಹೃದಯಭೂಮಿ- ಹೆಚ್ಚು ನೀರಾವರಿ ಹೊಂದಿರುವ ಪಂಜಾಬ್ ಸಮತಟ್ಟುಗಳು- ಪೂರ್ವದಿಂದ ನಿರಂತರ ಹರಿದು ಬರುವ ನೀರಿನ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿದ್ದವು.
ಭಾರತವು, ತನ್ನ ಹೊಸ ಪಶ್ಚಿಮ ನೆರೆಹೊರೆಯೊಂದಿಗೆ ಸ್ಥಿರತೆ ಮತ್ತು ಸಾಮಾನ್ಯ ಸಂಬಂಧಗಳನ್ನು ಬಯಸುವ ಜೊತೆಗೆ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಸ್ವಂತ ಅಭಿವೃದ್ಧಿ ಉದ್ದೇಶಗಳಿಗಾಗಿ ಈ ವ್ಯವಸ್ಥೆಯನ್ನು ಬಳಸಿಕೊಳ್ಳುವ ಅವಶ್ಯಕತೆ ಇತ್ತು. ತನ್ನದೇ ಆದ ಪ್ರಮುಖ ದೇಶೀಯ ಅಗತ್ಯಗಳ ಹೊರತಾಗಿಯೂ, ಭಾರತವು 1960 ಸೆಪ್ಟೆಂಬರ್ 19ರಂದು ಪಾಕಿಸ್ತಾನದೊಂದಿಗೆ ಈ ಅತ್ಯಂತ ರಿಯಾಯಿತಿಪೂರ್ಣ ನೀರು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿತು, ಈ ಒಪ್ಪಂದವನ್ನು ವಿಶ್ವ ಬ್ಯಾಂಕ್ ಸಹಾಯದಿಂದ ಸಾಧಿಸಲಾಯಿತು.
ಭಾರತ ಬೆಲೆ ತೆರಬೇಕಾಯಿತು
ಆರಂಭದ ಭಾರತವು ತಾಳಿದ ಸಮಂಜಸ ಮತ್ತು ರಚನಾತ್ಮಕ ನಿಲುವು ಹಾಗೂ ಪಾಕಿಸ್ತಾನದ ಗರಿಷ್ಠವಾದ, ಕೆಲವೊಮ್ಮೆ ಅಸಂಗತವಾದ ಬೇಡಿಕೆಗಳ ನಡುವಿನ ಅಸಮಾನತೆಯಿಂದ ಮಾತುಕತೆಗಳ ದಿಕ್ಕು ರೂಪುಗೊಂಡಿತು. ಈ ಅಸಮಾನತೆಯೇ ಫಲಿತಾಂಶಗಳನ್ನು ನ್ಯಾಯಸಮ್ಮತ ವಾಗಿಡುವ ಬದಲು ಪಾಕಿಸ್ತಾನದ ಪರವಾಗಿ ತಳ್ಳಿತು. 5 ಫೆಬ್ರವರಿ 1954ರ ವಿಶ್ವ ಬ್ಯಾಂಕ್‌ನ ಮೊದಲ ಗಣನೀಯ ಪ್ರಸ್ತಾವನೆಯು ಇದನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಈ ಆರಂಭಿಕ ಹಂತದಲ್ಲಿಯೂ, ಇದಕ್ಕೆ ಭಾರತದಿಂದ ಗಮನಾರ್ಹ ಏಕಪಕ್ಷೀಯ ರಿಯಾಯಿತಿಗಳು ಬೇಕಾಗಿದ್ದವು.
ಇದನ್ನೂ ಓದಿ: Naveen Sagar Column: ಕೋವಿಡ್ʼನಿಂದ ಬದಲಾಗದ ನಾವು ಯುದ್ಧದಿಂದ ಬದಲಾದೇವೆ ?
ಸಿಂಧೂ ಮತ್ತು ಚೆನಾಬ್ ನದಿಗಳ ಮೇಲ್ಭಾಗದಲ್ಲಿ ಕೈಗೊಳ್ಳಲಾಗುತ್ತಿದ್ದ ಎಲ್ಲಾ ಯೋಜಿತ ಭಾರತೀಯ ಅಭಿವೃದ್ಧಿ ಕಾರ್ಯಗಳನ್ನು ಕೈಬಿಡಬೇಕಾಯಿತು, ಬದಲಿಗೆ ಆ ಪ್ರಯೋಜನಗಳು ಪಾಕಿಸ್ತಾನಕ್ಕೆ ಸೇರಬೇಕಾಯಿತು. ಭಾರತವು ಚೆನಾಬ್ ನದಿಯಿಂದ ಸುಮಾರು 6 MAF ಅನ್ನು ತಿರುಗಿಸುವುದನ್ನು ತ್ಯಜಿಸಬೇಕಾಯಿತು.
ಮೇರಲದಲ್ಲಿನ (ಈಗ ಪಾಕಿಸ್ತಾನದಲ್ಲಿದೆ) ಯಾವುದೇ ಚೆನಾಬ್ ನೀರು ಭಾರತೀಯ ಬಳಕೆಗೆ ಲಭ್ಯ ವಿರುವುದಿಲ್ಲ. ನದಿ ವ್ಯವಸ್ಥೆಯಿಂದ ಕಛ್‌ನಲ್ಲಿ ಯಾವುದೇ ಜಲಾಭಿವೃದ್ಧಿಗೆ ಅನುಮತಿ ನೀಡಲಾಗುವುದಿಲ್ಲ. ಈ ಗಣನೀಯ ನಿರ್ಬಂಧಗಳ ಹೊರತಾಗಿಯೂ, ಭಾರತವು ತಕ್ಷಣವೇ ಉತ್ತಮ ನಂಬಿಕೆಯಲ್ಲಿ ಪ್ರಸ್ತಾಪವನ್ನು ಅಂಗೀಕರಿಸಿತು.
ಇದು ತ್ವರಿತ ಪರಿಹಾರಕ್ಕಾಗಿ ಭಾರತದ ನಿಜವಾದ ಬಯಕೆಯನ್ನು ಸಂಕೇತಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಪಾಕಿಸ್ತಾನವು 1958 ಡಿಸೆಂಬರ್ 22ರವರೆಗೆ ಸುಮಾರು ಐದು ವರ್ಷಗಳವರೆಗೆ ತನ್ನ ಔಪಚಾರಿಕ ಅಂಗೀಕಾರವನ್ನು ವಿಳಂಬಗೊಳಿಸಿತು. ಭಾರತದ ಈ ಸದ್ಭಾವನೆಯ ನಡೆಯ ಪರಿಣಾಮವಾಗಿ, ಪಾಕಿಸ್ತಾನವು ಪಶ್ಚಿಮ ನದಿಗಳಲ್ಲಿ ಸಮಾನ ನಿರ್ಬಂಧಗಳಿಲ್ಲದೆ ಹೊಸ ಬಳಕೆ ಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿತು. ಅದರೆ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಲಾಯಿತು.
ಅಡೆತಡೆ ಮಾಡುವುದರಿಂದ ಲಾಭವಾಗುತ್ತದೆ ಮತ್ತು ಸಹಕಾರ ದುಬಾರಿಯಾಗುತ್ತದೆ ಎಂಬ ಪಾಠವನ್ನು ಪಾಕಿಸ್ತಾನ ಕಲಿತುಕೊಂಡಿತು. ಮತ್ತು ಆ ಪಾಠವನ್ನು ನಂತರದಿಂದ ನಿರಂತರವಾಗಿ ಅನುಸರಿಸುತ್ತ ಬಂದಿದೆ.
ಭಾರತದ ತ್ಯಾಗದ ಪ್ರಮಾಣ
ಒಪ್ಪಂದದ ಹಂಚಿಕೆ ಸೂತ್ರದ ಅಡಿಯಲ್ಲಿ, ಭಾರತವು ಮೂರು ಪೂರ್ವ ನದಿಗಳಿಗೆ ವಿಶೇಷ ಹಕ್ಕುಗಳನ್ನು ಸ್ವೀಕರಿಸಿತು- ಸಟ್ಲೆಜ್, ಬಿಯಾಸ್ ಮತ್ತು ರಾವಿ- ಪಾಕಿಸ್ತಾನವು ಮೂರು ಪಶ್ಚಿಮ ನದಿಗಳಾದ ಸಿಂಧು, ಚೆನಾಬ್ ಮತ್ತು ಝೇಲಂನ ನೀರಿಗೆ ಹಕ್ಕುಗಳನ್ನು ಪಡೆದಿದೆ. ಭಾರತಕ್ಕೆ ತನ್ನದೇ ಪ್ರದೇಶದೊಳಗಿನ ಪಶ್ಚಿಮ ನದಿಗಳ ಮೇಲೆ ಕೆಲವು ಸೀಮಿತ, ಉಪಭೋಗವಲ್ಲದ ಬಳಕೆಗಳಿಗೆ ಅನುಮತಿ ನೀಡಲಾಯಿತು - ಮುಖ್ಯವಾಗಿ ಹರಿಯುವ ನದಿಯಿಂದ ಜಲವಿದ್ಯುತ್ ಉತ್ಪಾದನೆಗಾಗಿ, ಆದರೆ ಇದಕ್ಕೆ ವ್ಯಾಪಕ ವಿನ್ಯಾಸ ಮತ್ತು ಕಾರ್ಯಾಚರಣಾ ನಿರ್ಬಂಧಗಳು ಅನ್ವಯಿಸುತ್ತವೆ.
ಪ್ರಮಾಣದ ಪರಿಭಾಷೆಯಲ್ಲಿ, ಭಾರತಕ್ಕೆ ಹಂಚಿಕೆಯಾದ ಪೂರ್ವ ನದಿಗಳು ವಾರ್ಷಿಕ ಹರಿವಿನ ಸುಮಾರು 33 ಮಿಲಿಯನ್ ಎಕರೆ-ಅಡಿ (MAF) ಅನ್ನು ಹೊಂದಿರುತ್ತವೆ. ಮತ್ತು ಪಾಕಿಸ್ತಾನಕ್ಕೆ ಹಂಚಿಕೆಯಾದ ಪಶ್ಚಿಮ ನದಿಗಳು ಸುಮಾರು 135 MAF ನೀರನ್ನು ಹೊಂದಿರುತ್ತವೆ. ಇದರಿಂದ ಪಾಕಿಸ್ತಾನಕ್ಕೆ ಒಟ್ಟು ನದಿ ವ್ಯವಸ್ಥೆಯ ಸುಮಾರು 80 ಪ್ರತಿಶತ ಲಭ್ಯವಾಗುತ್ತದೆ.
ಭಾರತವು ವಿಶಾಲವಾದ ಪಶ್ಚಿಮ ನದಿ ವ್ಯವಸ್ಥೆಯ ಮೇಲಿನ ಎಲ್ಲಾ ಹಕ್ಕುಗಳನ್ನು ತ್ಯಜಿಸುವ ಬದಲಾಗಿ 20 ಶೇಕಡಾ ಪಾಲನ್ನು ಪಡೆಯಿತು. ಒಪ್ಪಂದದಿಂದ ಭಾರತವು ಹೊಸ ನೀರನ್ನು ಪಡೆಯಲಿಲ್ಲ ಎಂಬುದು ನಿರ್ಣಾಯಕ ಅಂಶವಾಗಿದೆ.
ಭಾರತಕ್ಕೆ ಲಭಿಸಿದ್ದು, ಅದು ಈಗಾಗಲೇ ಬಳಸುತ್ತಿದ್ದ ನೀರಿನ ಹರಿವಿನ ಮೇಲಿನ ಅಧಿಕೃತ ಮಾನ್ಯತೆ ಮಾತ್ರ. ಅದಕ್ಕಾಗಿ ಬಹಳ ದೊಡ್ಡ ಪಶ್ಚಿಮ ನದಿ ವ್ಯವಸ್ಥೆಯ ಮೇಲಿನ ಎಲಾ ಹಕ್ಕುಗಳನ್ನು ತ್ಯಜಿಸಬೇಕಾಯಿತು. ಭಾರತಕ್ಕೆ ತನ್ನ ಪ್ರದೇಶದೊಳಗಿನ ಪಶ್ಚಿಮ ನದಿಗಳ ಮೇಲೆ ಕೆಲವು ಉಪಭೋಗವಲ್ಲದ ಬಳಕೆಗಳಿಗೆ ಅನುಮತಿ ನೀಡಲಾಯಿತು. ಮುಖ್ಯವಾಗಿ ನದಿಯ ಸಹಜ ಹರಿವನ್ನು ಬಳಸಿ ಜಲವಿದ್ಯುತ್ ಉತ್ಪಾದಿಸಲು ಅನುಮತಿಸಲಾಯಿತು.
ಹಣಕಾಸಿನ ನಿಬಂಧನೆ
ಒಪ್ಪಂದದ ಅತ್ಯಂತ ಗಮನಾರ್ಹವಾದ ಅಸಂಗತತೆ ಎಂದರೆ ಹಣಕಾಸಿನ ನಿಬಂಧನೆ. ಪಾಕಿಸ್ತಾನ-ಆಕ್ರಮಿತ ಕಾಶ್ಮೀರದಲ್ಲಿ ನೀರಿನ ಸಂಪನ್ಮೂಲಗಳ ಮೂಲಸೌಕರ್ಯವನ್ನು ನಿರ್ಮಿಸಲು ಪಾ ಕಿಸ್ತಾನಕ್ಕೆ ಪರಿಹಾರವಾಗಿ ಸುಮಾರು 62 ಮಿಲಿಯ ಡಾಲರ್ (ಪ್ರಸ್ತುತ ಮೌಲ್ಯದಲ್ಲಿ ಸುಮಾರು 2.5 ಬಿಲಿಯ) ಪಾವತಿಸಲು ಭಾರತ ಒಪ್ಪಿದೆ. ಈ ಪಾವತಿಯು ಒಂದು ವಿಶಿಷ್ಟ ಪೂರ್ವನಿದರ್ಶನವನ್ನು ಪ್ರತಿನಿಧಿಸುತ್ತದೆ. ಇದರಲ್ಲಿ ಈಗಾಗಲೇ ವ್ಯವಸ್ಥೆಯ ಬಹುಪಾಲು ನೀರನ್ನು ಬಿಟ್ಟುಕೊಡುತ್ತಿದ್ದ ಮೇಲ್ದಂಡೆ ದೇಶವು, ಹೆಚ್ಚುವರಿಯಾಗಿ ಸವಲತ್ತು ಪಡೆಯಲು ಕೆಳ ದಂಡೆಯ ನದಿಯ ದೇಶಕ್ಕೆ ಪಾವತಿಸಿತು.
ಮೂಲಭೂತವಾದ ನೀರಿನ ಹಂಚಿಕೆ ಪ್ರಶ್ನೆಯಲ್ಲಿ ಪಾಕಿಸ್ತಾನದ ಪರವಾಗಿ ಹೆಚ್ಚು ಲಾಭಕರ ವಾಗಿದ್ದ ಒಪ್ಪಂದವನ್ನು ಅಂಗೀಕರಿಸಲು ಭಾರತವು ವಾಸ್ತವವಾಗಿ ಪಾಕಿಸ್ತಾನಕ್ಕೆ ಸಹಾಯಧನ ನೀಡಿದಂತಾಯಿತು.
ಒಪ್ಪಂದದ ರಚನಾತ್ಮಕ ಅನ್ಯಾಯ
ಈ ಒಪ್ಪಂದವು ಪಶ್ಚಿಮ ನದಿಗಳ ಬಳಕೆಯಲ್ಲಿ ಭಾರತಕ್ಕೆ ನಿರ್ದಿಷ್ಟ ವಿನ್ಯಾಸ ಮತ್ತು ಕಾರ್ಯಾ ಚರಣಾ ನಿರ್ಬಂಧಗಳ ಸರಣಿಯನ್ನು ವಿಧಿಸುತ್ತದೆ. ಆದರೆ ಅದಕ್ಕೆ ಸಮಾನವಾದ ಯಾವುದೇ ಬಾಧ್ಯತೆಗಳು ಪಾಕಿಸ್ತಾನಕ್ಕೆ ಇಲ್ಲ. ಭಾರತವು ತನ್ನ ಪ್ರದೇಶದಲ್ಲಿ ಸೀಮಿತ ನೀರಾವರಿ ಬೆಳೆ ಪ್ರದೇಶ ವನ್ನು ಮಾತ್ರ ಅಭಿವೃದ್ಧಿಪಡಿಸಬಹುದು. ಪಶ್ಚಿಮ ನದಿಗಳಲ್ಲಿನ ಯಾವುದೇ ಸಂಗ್ರಹಣಾ ಸೌಲಭ್ಯ ದಲ್ಲಿ ಹಿಡಿದಿಟ್ಟುಕೊಳ್ಳಬಹುದಾದ ನೀರಿನ ಪ್ರಮಾಣದ ಮೇಲೆ ಭಾರತವು ಕಟ್ಟುನಿಟ್ಟಿನ ಮಿತಿಗಳನ್ನು ಎದುರಿಸುತ್ತಿದೆ.
ಸಂಗ್ರಹಣೆ ಮತ್ತು ಸಂಗ್ರಹ ಸಾಮರ್ಥ್ಯದ ಮೇಲಿನ ನಿರ್ಬಂಧಗಳನ್ನು ಒಳಗೊಂಡಂತೆ ಪಶ್ಚಿಮ ನದಿಗಳನ್ನು ಬಳಸಿ ನಿರ್ಮಿಸುವ ಜಲವಿದ್ಯುತ್ ಸೌಲಭ್ಯಗಳಿಗೆ ಭಾರತವು ನಿರ್ದಿಷ್ಟ ವಿನ್ಯಾಸದ ಮಾನದಂಡಗಳನ್ನು ಅನುಸರಿಸಬೇಕು.ಈ ನಿರ್ಬಂಧಗಳು ಏಕಪಕ್ಷೀಯವಾಗಿವೆ. ಭಾರತದ ಪ್ರದೇಶದೊಳಗೇ ಭಾರತದ ಕಾನೂನುಬದ್ಧ ಸಂಪನ್ಮೂಲಗಳ ಅಭಿವೃದ್ಧಿಯನ್ನು ನಿರ್ಬಂಧಿಸ ಲಾಗಿದೆ. ಆದರೆ ಪಾಕಿಸ್ತಾನದ ಮೇಲೆ ಸಮಾನವಾದ ಪಾರದರ್ಶಕತೆ ಅಥವಾ ನಿರ್ಬಂಧದ ಅವಶ್ಯಕತೆಗಳನ್ನು ವಿಧಿಸಿಲ್ಲ.
ಇದರ ಫಲವಾಗಿ, ಈ ಒಪ್ಪಂದವು ಮೇಲ್ದಂಡೆಯ ದೇಶವಾದ ಭಾರತವನ್ನು ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ಪಕ್ಷವಾಗಿ ಪರಿಗಣಿಸುತ್ತದೆ. ಆದರೆ ಕೆಳದಂಡೆಯ ದೇಶವು ಖಚಿತ ನೀರಿನ ಹರಿವಿನಿಂದ ಲಾಭ ಪಡೆಯುತ್ತದೆ.
(ಲೇಖಕರು, ನಿವೃತ್ತ ಸಿಂಧೂ ಜಲ ಒಪ್ಪಂದ ಆಯುಕ್ತರು)