ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಅಂತರ್ಶಕ್ತಿ ಒಂದೇ ಬದುಕಲು ಪ್ರೇರಣೆ

ಹಡಗು ಮುಳುಗಲಾರಂಭಿಸಿದಾಗ ಆಕೆ ದಿಗಿಲುಗೊಂಡು ಕೂರಲಿಲ್ಲ. ಭಯದಿಂದ ಅಧೀರಳಾಗುವ ಬದಲು, ಇತರರಿಗೆ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ, ಮಹಿಳೆಯರನ್ನು ದೋಣಿಗಳತ್ತ ಸಾಗಿಸಿ, ಭಾಷೆ ತಿಳಿಯದವರಿಗೆ ಹಿರಿಯರ ಆದೇಶಗಳನ್ನು ಅನುವಾ ದಿಸುತ್ತಾ ಸಂರಕ್ಷಕಿಯಾಗಿ ನಿಂತಳು. ಕೊನೆಗೆ ಆಕೆಯನ್ನು ಆರನೇ ನಂಬರಿನ ಲೈಫ್‌ ಬೋಟ್‌ಗೆ ಹತ್ತಿಸಲಾಯಿತು.

ಒಂದೊಳ್ಳೆ ಮಾತು

ಅಂದು 1912ರ ಏಪ್ರಿಲ್ 14ರ ಮಧ್ಯರಾತ್ರಿ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಮೌನವಿದ್ದರೂ, ಅದು ಸಾವಿನ ಕರಾಳ ಮೌನವಾ ಗಿತ್ತು. ‘ಮುಳುಗಡೆಯೇ ಇಲ್ಲ’ ಎಂದು ಬೀಗುತ್ತಿದ್ದ ಟೈಟಾನಿಕ್ ಹಡಗು ಮಂಜುಗಡ್ಡೆಗೆ ಅಪ್ಪಳಿಸಿ ಜಲ ಸಮಾಧಿಯಾಗುತ್ತಿತ್ತು. 1500ಕ್ಕೂ ಹೆಚ್ಚು ಜೀವಗಳು ಹೆಪ್ಪುಗಟ್ಟುವ ನೀರಿನಲ್ಲಿ ಅನಾಥವಾಗಿ ಸಾಯುತ್ತಿದ್ದಾಗ, ಒಬ್ಬ ಹೆಣ್ಣುಮಗಳು ಮಾತ್ರ ಸೋಲೊಪ್ಪಲು ಸಿದ್ಧವಿರ ಲಿಲ್ಲ.

ಆಕೆಯ ಹೆಸರು ಮಾರ್ಗರೇಟ್ ಟೋಬಿನ್ ಬ್ರೌನ್. ಟೈಟಾನಿಕ್ ಹಡಗಿನ - ಕ್ಲಾಸ್‌ನಲ್ಲಿ ಮಾರ್ಗರೇಟ್ ಪ್ರಯಾಣಿಸುತ್ತಿದ್ದಳು. ಈಜಿ ಪ್ರವಾಸದಲ್ಲಿದ್ದಾಗ ತನ್ನ ಮೊಮ್ಮಗನ ಅನಾರೋಗ್ಯದ ಸುದ್ದಿ ಕೇಳಿ, ಆದಷ್ಟು ಬೇಗ ಮನೆ ತಲುಪಬೇಕೆಂಬ ತವಕದಲ್ಲಿ ಅವಳು ಟೈಟಾನಿಕ್ ಏರಿದ್ದಳು.

ಆದರೆ ವಿಧಿ ಬೇರೆಯೇ ಸಂಚು ರೂಪಿಸಿತ್ತು. ಹಡಗು ಮುಳುಗಲಾರಂಭಿಸಿದಾಗ ಆಕೆ ದಿಗಿಲುಗೊಂಡು ಕೂರಲಿಲ್ಲ. ಭಯದಿಂದ ಅಧೀರಳಾಗುವ ಬದಲು, ಇತರರಿಗೆ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ, ಮಹಿಳೆಯರನ್ನು ದೋಣಿಗಳತ್ತ ಸಾಗಿಸಿ, ಭಾಷೆ ತಿಳಿಯದವರಿಗೆ ಹಿರಿಯರ ಆದೇಶಗಳನ್ನು ಅನುವಾ ದಿಸುತ್ತಾ ಸಂರಕ್ಷಕಿಯಾಗಿ ನಿಂತಳು. ಕೊನೆಗೆ ಆಕೆಯನ್ನು ಆರನೇ ನಂಬರಿನ ಲೈಫ್‌ ಬೋಟ್‌ಗೆ ಹತ್ತಿಸಲಾಯಿತು.

ಇದನ್ನೂ ಓದಿ: Roopa Gururaj Column: ಸೋಲುಗಳನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಅಬ್ರಹಾಂ ಲಿಂಕನ್

ಆ ಪುಟ್ಟ ದೋಣಿಯಲ್ಲಿ ಸಾವು ಕಣ್ಣಿಗೆ ಕಾಣಿಸುತ್ತಿತ್ತು. ದೋಣಿಯ ಉಸ್ತುವಾರಿ ವಹಿಸಿದ್ದ ನಾವಿಕ ಭಯದಿಂದ ಹತಾಶನಾಗಿ ನಾವೆಲ್ಲರೂ ಮುಳುಗಿ ಸಾಯುತ್ತೇವೆ ಎಂದು ಕಿರುಚುತ್ತಿದ್ದ. ಅತ್ತ ನೀರಿ ನಲ್ಲಿ ಸಾವಿರಾರು ಜನರ ಆರ್ತನಾದ ಕೇಳಿಸುತ್ತಿದ್ದರೂ, ದೋಣಿಯನ್ನು ಹಿಂದಕ್ಕೆ ತಿರುಗಿಸಲು ಅವನು ಬಿಡಲಿಲ್ಲ. ಆ ಕ್ಷಣದಲ್ಲಿ ಮಾರ್ಗರೇಟ್ ಬ್ರೌನ್ ಎದ್ದು ನಿಂತಳು.

ಆಕೆ ಹುಟ್ಟನ್ನು (Oar) ಕೈಗೆತ್ತಿಕೊಂಡಳು. ಆ ಮೈ ಕೊರೆಯುವ ಚಳಿಯಲ್ಲಿಯೂ ಇತರ ಮಹಿಳೆಯ ರಿಗೆ ಧೈರ್ಯ ತುಂಬಿ ತಾನೂ ಹುಟ್ಟುಹಾಕುತ್ತಾ, ಅವರನ್ನೂ ಹುಟ್ಟುಹಾಕಲು ಪ್ರೇರೇಪಿಸಿದಳು. ನಾವು ಹಿಂದಕ್ಕೆ ಹೋಗಬೇಕು, ಅಲ್ಲಿ ಜನ ಸಾಯುತ್ತಿದ್ದಾರೆ ಎಂದು ಗುಡುಗಿದಳು.

ಬದುಕುವ ಆಸೆಯೇ ಇಲ್ಲದಿದ್ದ ಆ ಕಗ್ಗತ್ತಲಲ್ಲಿ ಮಾರ್ಗರೇಟ್ ಒಂದು ಭರವಸೆಯ ದೀಪವಾದಳು. ಬೆಳಗ್ಗೆ ರಕ್ಷಣಾ ಹಡಗು ಬಂದಾಗಲೂ ಅವಳು ವಿಶ್ರಮಿಸಲಿಲ್ಲ. ಸರ್ವಸ್ವವನ್ನೂ ಕಳೆದುಕೊಂಡವರಿ ಗಾಗಿ ಅಂದೇ ಹಣ ಸಂಗ್ರಹಿಸಿ, ಅವರ ಬದುಕಿಗೆ ನೆರವಾದಳು. ಬಡತನದಲ್ಲಿ ಬೆಳೆದು ಬಂದಿದ್ದ ಆಕೆಗೆ ಹಸಿವು ಮತ್ತು ನೋವಿನ ಬೆಲೆ ತಿಳಿದಿತ್ತು.

ಶ್ರೀಮಂತಿಕೆ ಬಂದ ಮೇಲೆ ಆಕೆ ಅದನ್ನು ತನ್ನ ಸುಖಕ್ಕೆ ಮಾತ್ರ ಬಳಸಲಿಲ್ಲ; ಗಣಿಗಾರರ ಹಕ್ಕು ಗಳಿಗಾಗಿ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮತ್ತು ಸಮಾನತೆಗಾಗಿ ಹೋರಾಡಿದಳು. ಮೊದಲ ಮಹಾ ಯುದ್ಧದ ಸಮಯದಲ್ಲಿ ಫ್ರಾನ್ಸ್‌ನಲ್ಲಿ ಸೇವೆ ಸಲ್ಲಿಸಿದ ಆಕೆಗೆ ಆ ದೇಶದ ಶ್ರೇಷ್ಠ ಗೌರವ ಲಭಿಸಿತು.

ಜಗತ್ತು ಆಕೆಯನ್ನು ‘ಅನ್‌ಸಿಂಕಬಲ್ ಮೊಲ್ಲಿ ಬ್ರೌನ್’ ಎಂದು ಕರೆದರೂ, ಆಕೆ ಮೃತ್ಯುಂಜಯಿ ಯಾಗಿದ್ದು ಕೇವಲ ಟೈಟಾನಿಕ್‌ನಿಂದ ಬದುಕಿ ಬಂದಿದ್ದಕ್ಕಲ್ಲ; ಬದಲಾಗಿ ಪ್ರತಿಯೊಂದು ಕಷ್ಟದ ಅಲೆಗಳ ವಿರುದ್ಧವೂ ತನ್ನ ಕೊನೆಯುಸಿರಿರುವವರೆಗೂ ಹುಟ್ಟು ಹಾಕುತ್ತಲೇ ಇದ್ದ ತನ್ನ ಅದಮ್ಯ ಚೇತನಕ್ಕಾಗಿ. ಬದುಕು ಕೆಲವೊಮ್ಮೆ ನಮ್ಮನ್ನು ಅನಿರೀಕ್ಷಿತ ವಾದ ಕತ್ತಲ ಕೂಪಕ್ಕೆ ತಳ್ಳುತ್ತದೆ.

ಸುತ್ತಲೂ ಸೋಲಿನ ಕಾರ್ಮೋಡಗಳು ಕವಿದಾಗ, ಸಹಾಯಕ್ಕೆ ಯಾರೂ ಇಲ್ಲವೆಂದು ತೋರಿದಾಗ ನಾವು ಅಸಹಾಯಕರಾಗಿ ಕೈಚೆಲ್ಲಿ ಕುಳಿತುಬಿಡುತ್ತೇವೆ. ಆದರೆ ಬದುಕುಳಿಯುವುದು ಕೇವಲ ಉಸಿರಾಡುವುದಲ್ಲ; ಎದುರಾಗುವ ಸಂಕಷ್ಟಗಳ ನಡುವೆಯೂ ಧೈರ್ಯದ ಹುಟ್ಟನ್ನು ಕೈಗೆತ್ತಿ ಕೊಳ್ಳುಲು ಈ ಆತ್ಮವಿಶ್ವಾಸ ನಮಗೆ ಬಂದಾಗ ಬದುಕಿನ ಎಂಥ ಪರಿಸ್ಥಿತಿಯನ್ನು ಕೂಡ ನಿಭಾಯಿ ಸುತ್ತೇವೆ.

ನಮ್ಮ ಶಕ್ತಿ ಇರುವುದು ನಮಗಿರುವ ಆಸ್ತಿಪಾಸ್ತಿ, ಅಧಿಕಾರದಲ್ಲಲ್ಲ, ಬದುಕಿನಲ್ಲಿ ಕೆಲವೊಮ್ಮೆ ನಾವು ಒಬ್ಬರೇ ನಿಂತು ಎದುರಿಸಿದ ಬಿರುಗಾಳಿಗಳಲ್ಲಿ. ಅದರಲ್ಲೂ ಕುಸಿದು ಬೀಳುವ ಕ್ಷಣದಲ್ಲಿ ಮತ್ತೊಬ್ಬ ರಿಗೆ ಆಸರೆಯಾಗುವ ಆ ಒಂದು ನಿರ್ಧಾರವೇ ನಮ್ಮನ್ನು ಮತ್ತಷ್ಟು ಗಟ್ಟಿಯಾಗಿಸುತ್ತಾ ಹೋಗುತ್ತದೆ.

ಕಷ್ಟ ಬಂದಾಗ ಅಧೀರರಾಗುವುದು ಸಹಜ. ಆದರೆ ಅಂಥ ಸಮಯದಲ್ಲೂ ಆತ್ಮವಿಶ್ವಾಸದಿಂದ ನಾವು ಗಟ್ಟಿಯಾಗಿ, ನಮ್ಮ ಸುತ್ತಲಿರುವವರ ಆತ್ಮಸ್ಥೈರ್ಯ ವನ್ನೂ ಬೆಳೆಸಿದರೆ ಅದು ನಿಜವಾದ ಗೆಲುವು.

ರೂಪಾ ಗುರುರಾಜ್

View all posts by this author