Roopa Gururaj Column: ಸೋಲುಗಳನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡ ಅಬ್ರಹಾಂ ಲಿಂಕನ್
ಲಿಂಕನ್ ಹೇಳುತ್ತಿದ್ದರು- “ನನ್ನ ಪಾದಗಳು ಜಾರಿದಾಗ ನಾನು ಬಿದ್ದೆ ಎಂದು ಭಾವಿಸುವುದಿಲ್ಲ, ಇದು ಮುಂದೆ ಹೋಗಲು ಸಿಕ್ಕ ಮತ್ತೊಂದು ಎಚ್ಚರಿಕೆ ಎಂದು ನಂಬುತ್ತೇನೆ". ಇದೇ ಛಲ ಅವರನ್ನು 1860ರಲ್ಲಿ ಅಮೆರಿಕದ 16ನೇ ಅಧ್ಯಕ್ಷರನ್ನಾಗಿ ಮಾಡಿತು. ಅಧ್ಯಕ್ಷರಾದಾಗ ಅಮೆರಿಕವು ಅಂತರ್ಯುದ್ಧದಿಂದ ಜರ್ಜರಿತವಾಗಿತ್ತು. ದೇಶ ಇಬ್ಭಾಗವಾಗುವ ಭೀತಿಯಲ್ಲಿದ್ದಾಗ, ಒಡೆದ ಮನೆ ಎಂದಿಗೂ ನೆಲೆಯಾಗಿ ನಿಲ್ಲಲಾರದು ಎಂದು ಸಾರಿದ ಲಿಂಕನ್, ಅತ್ಯಂತ ಸಂಯಮದಿಂದ ದೇಶವನ್ನು ಒಂದುಗೂಡಿಸಿದರು.
-
ಒಂದೊಳ್ಳೆ ಮಾತು
ಅಮೆರಿಕದ ಕೆಂಟುಕಿಯ ಒಂದು ಪುಟ್ಟ ಗುಡಿಸಲಿನಲ್ಲಿ ಜನಿಸಿದ ಲಿಂಕನ್ ಅವರ ಬಾಲ್ಯವು ಕಿತ್ತು ತಿನ್ನುವ ಬಡತನದಲ್ಲಿ ಕಳೆಯಿತು. ಅವರಿಗೆ ಶಾಲಾ ಶಿಕ್ಷಣ ಸಿಕ್ಕಿದ್ದು ಒಂದು ವರ್ಷ ಮಾತ್ರ. ಆದರೆ ಅವರ ಕಣ್ಣುಗಳಲ್ಲಿ ದೊಡ್ಡ ಕನಸುಗಳಿದ್ದವು, ಜ್ಞಾನದ ಹಸಿವಿತ್ತು. ಮೈಲುಗಟ್ಟಲೆ ನಡೆದು ಹೋಗಿ ಬೇರೆಯವರಿಂದ ಪುಸ್ತಕಗಳನ್ನು ಸಾಲವಾಗಿ ಪಡೆದು ತರುತ್ತಿದ್ದರು.
ಹಗಲಿನಲ್ಲಿ ಹೊಲದಲ್ಲಿ ಮೈಮುರಿದು ಕೆಲಸ ಮಾಡಿ, ರಾತ್ರಿ ಒಲೆಯ ಬೆಂಕಿ ಬೆಳಕಿನಲ್ಲಿ ಕುಳಿತು ಕಾನೂನು ಪುಸ್ತಕಗಳನ್ನು ಓದುತ್ತಿದ್ದರು. ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ, ಕೇವಲ ಸ್ವಪ್ರಯತ್ನದಿಂದ ಅವರು ವಕೀಲರಾಗಿ ಬೆಳೆದದ್ದು ಅವರ ಅದಮ್ಯ ಚೇತನಕ್ಕೆ ಸಾಕ್ಷಿ.
ಲಿಂಕನ್ ಅವರ ಬದುಕು ಹೋರಾಟದ ಹಾದಿಯಾಗಿದ್ದರೂ, ಸೋಲು ಅವರನ್ನು ಎಂದಿಗೂ ಬಾಧಿಸಲಿಲ್ಲ. 1832ರಲ್ಲಿ, ತಮ್ಮ 23ನೇ ವಯಸ್ಸಿನಲ್ಲಿ ಅವರು ಕೆಲಸ ಕಳೆದುಕೊಂಡರು. ಅದೇ ಸಮಯದಲ್ಲಿ ಶಾಸನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋತರು. ವ್ಯಾಪಾರ ಮಾಡಲು ಪ್ರಯತ್ನಿಸಿದಾಗ ಅಲ್ಲಿಯೂ ಭಾರಿ ನಷ್ಟ ಅನುಭವಿಸಿ ಸಾಲದ ಸುಳಿಗೆ ಸಿಲುಕಿದರು.
ಇದನ್ನೂ ಓದಿ: Roopa Gururaj Column: ಅಚಲ ಪ್ರೇಮದ ನಳ-ದಮಯಂತಿಯರ ಕಥೆ
ಆ ಸಾಲವನ್ನು ತೀರಿಸಲು ಅವರಿಗೆ ಬರೋಬ್ಬರಿ ಹದಿನೇಳು ವರ್ಷಗಳು ಬೇಕಾಯಿತು. ವೈಯಕ್ತಿಕ ಜೀವನದಲ್ಲೂ ವಿಧಿಯು ಅವರಿಗೆ ನೆಮ್ಮದಿ ನೀಡಲಿಲ್ಲ. ಅವರ ಜೀವನದ ಆಧಾರವಾಗಿದ್ದ ಪ್ರೀತಿಯ ಗೆಳತಿ ಆನ್ ರುಟ್ಲೆಡ್ಜ್ ಅಕಾಲಿಕವಾಗಿ ನಿಧನರಾದರು. ಈ ಆಘಾತ ಅವರನ್ನು ಮಾನಸಿಕವಾಗಿ ಕುಸಿಯುವಂತೆ ಮಾಡಿತು. ಆದರೆ ಅವರು ಧೃತಿಗೆಡದೆ ಪುಸ್ತಕಗಳ ಮೊರೆ ಹೋದರು.
1743ರಿಂದ 1858ರವರೆಗೆ ಅವರು ಸತತವಾಗಿ ಕಾಂಗ್ರೆಸ್ ಮತ್ತು ಸೆನೆಟ್ ಚುನಾವಣೆಗಳಲ್ಲಿ ಸೋಲುಂಡರು. ಜನ ಅವರನ್ನು ‘ಸೋತವನು’ ಎಂದು ಹೀಯಾಳಿಸಿದಾಗಲೂ, ಅವರು ಮುಗುಳ್ನ ಗುತ್ತಾ ತಮ್ಮ ಗುರಿಯತ್ತ ಹೆಜ್ಜೆ ಹಾಕಿದರು.
ಲಿಂಕನ್ ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲು ಅವರ ಪ್ರಾಮಾಣಿಕತೆ. ವ್ಯಾಪಾರ ಮಾಡು ತ್ತಿದ್ದಾಗ ಒಮ್ಮೆ ಗ್ರಾಹಕರೊಬ್ಬರಿಂದ ಅಚಾನಕ್ಕಾಗಿ ಕೆಲವು ಪೈಸೆಗಳನ್ನು ಹೆಚ್ಚು ಪಡೆದಿದ್ದಕ್ಕೆ, ಅದನ್ನು ಹಿಂತಿರುಗಿಸಲು ಅವರು ಮೈಲುಗಟ್ಟಲೆ ನಡೆದು ಆ ಗ್ರಾಹಕನ ಮನೆಗೆ ಹೋಗಿದ್ದರು. ಈ ಗುಣದಿಂದಾಗಿಯೇ ಜನರು ಅವರನ್ನು ಪ್ರೀತಿಯಿಂದ ‘ಹಾನೆ ಅಬೆ’ (Honest Abe /Abraham) ಎಂದು ಕರೆಯುತ್ತಿದ್ದರು.
ಎಂಥ ಕಷ್ಟದ ಸಂದರ್ಭದಲ್ಲೂ ಅವರು ತಮ್ಮ ಹಾಸ್ಯಪ್ರಜ್ಞೆ ಮತ್ತು ವಿನಯವನ್ನು ಬಿಟ್ಟು ಕೊಡು ತ್ತಿರಲಿಲ್ಲ. ತಮ್ಮ ವಿರೋಧಿಗಳನ್ನೂ ಪ್ರೀತಿಯಿಂದ ಗೆಲ್ಲುವ ಅದ್ಭುತ ಕಲೆ ಅವರಿಗೆ ಸಿದ್ಧಿಸಿತ್ತು.
ಲಿಂಕನ್ ಹೇಳುತ್ತಿದ್ದರು- “ನನ್ನ ಪಾದಗಳು ಜಾರಿದಾಗ ನಾನು ಬಿದ್ದೆ ಎಂದು ಭಾವಿಸುವುದಿಲ್ಲ, ಇದು ಮುಂದೆ ಹೋಗಲು ಸಿಕ್ಕ ಮತ್ತೊಂದು ಎಚ್ಚರಿಕೆ ಎಂದು ನಂಬುತ್ತೇನೆ". ಇದೇ ಛಲ ಅವರನ್ನು 1860ರಲ್ಲಿ ಅಮೆರಿಕದ 16ನೇ ಅಧ್ಯಕ್ಷರನ್ನಾಗಿ ಮಾಡಿತು. ಅಧ್ಯಕ್ಷರಾದಾಗ ಅಮೆರಿಕವು ಅಂತ ರ್ಯುದ್ಧದಿಂದ ಜರ್ಜರಿತವಾಗಿತ್ತು. ದೇಶ ಇಬ್ಭಾಗವಾಗುವ ಭೀತಿಯಲ್ಲಿದ್ದಾಗ, ಒಡೆದ ಮನೆ ಎಂದಿಗೂ ನೆಲೆಯಾಗಿ ನಿಲ್ಲಲಾರದು ಎಂದು ಸಾರಿದ ಲಿಂಕನ್, ಅತ್ಯಂತ ಸಂಯಮದಿಂದ ದೇಶ ವನ್ನು ಒಂದುಗೂಡಿಸಿದರು. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಕರಾಳವಾಗಿದ್ದ ಗುಲಾಮಗಿರಿ ಯನ್ನು ಹೋಗಲಾಡಿಸಿ, ಮನುಕುಲಕ್ಕೆ ಸಮಾನತೆಯ ದೀಕ್ಷೆ ನೀಡಿದರು.
ಗಟ್ಟಿಸ್‌ಬರ್ಗ್‌ನಲ್ಲಿ ಅವರು ನೀಡಿದ ಭಾಷಣ ಇಂದಿಗೂ ಅಮರವಾಗಿದೆ. ‘ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರಕಾರ’ ಎಂಬ ಅವರ ವ್ಯಾಖ್ಯಾನ ಇಡೀ ಜಗತ್ತಿಗೆ ದಾರಿದೀಪವಾಯಿತು. ಸೋಲು ಎಂಬುದು ಅಂತ್ಯವಲ್ಲ, ಅದು ಯಶಸ್ಸಿನತ್ತ ಕರೆದೊ ಯ್ಯುವ ಒಂದು ಸಣ್ಣ ತಿರುವು ಮಾತ್ರ. ಕೆಲವೊಮ್ಮೆ ನಮ್ಮ ಜೀವನ ನಾವು ಅಂದುಕೊಂಡ ಹಾಗೆ ನಡೆಯದಿದ್ದಾಗ ಖಿನ್ನತೆಗೆ ಒಳಗಾಗುತ್ತೇವೆ.
ಪ್ರಯತ್ನ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಆದರೆ ಪ್ರತಿ ಪ್ರಯತ್ನದ ಹಿಂದೆ ಇರುವ ಪರಿಶ್ರಮ ದಲ್ಲಿ, ವಿಶ್ವಾಸದಲ್ಲಿ ಬದುಕು ನಮ್ಮನ್ನು ಮುಂದೆ ಗೆಲ್ಲಿಸುತ್ತದೆ. ಸೋಲು ಗೆಲುವು ಎನ್ನುವುದನ್ನು ಯಾವುದೇ ಮಾಪನದಿಂದ ಅಳೆಯಲ ಆಗದಿದ್ದರೂ ಬದುಕಿನಲ್ಲಿ ಏನೇ ಬಂದರೂ ಸ್ವೀಕರಿಸಿ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳುತ್ತಾ ಹೋದಾಗ ಈ ಸೋಲು, ಗೆಲುವುಗಳ ಆಚೆಯ ಬದುಕಿನ ಸಂತೃಪ್ತಿ ನಮಗೆ ದಕ್ಕುತ್ತಾ ಹೋಗುತ್ತದೆ.