ವಿದ್ಯಮಾನ
ಎಲ್ಲ ಕಲಾಮಾಧ್ಯಮಗಳಲ್ಲಿಯೂ ಹುಳುಕುಗಳಿರುವಾಗ, ಈಗ ಚರ್ಚೆಗೆ ತಾಳಮದ್ದಳೆ ಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಸಹಜ. ಯಕ್ಷಗಾನಕ್ಕಿರುವ ಪರಂಪರೆ, ಇತಿಹಾಸ ಹಾಗೂ ಪಾವಿತ್ರ್ಯಗಳೇ ಇದಕ್ಕೆ ಕಾರಣವಿರಬಹುದು. ಪಾರಂಪರಿಕ ಪ್ರೇಕ್ಷಕನು ಸಾಂಪ್ರದಾಯಿಕ ಯಕ್ಷಗಾನದಲ್ಲಿ ಮಾತ್ರ ಏರುಪೇರನ್ನು ಸಹಿಸಲಾರ.
ಯಕ್ಷಗಾನದ ಇನ್ನೊಂದು ರೂಪಾಂತರವಾದ ತಾಳಮದ್ದಳೆಯ ಇಂದಿನ ಸ್ಥಿತಿಗತಿಗಳ ಹಾಗೂ ಕೆಲವು ಪಟ್ಟಭದ್ರ ಅರ್ಥಧಾರಿಗಳ ಕುರಿತ ವಿಶ್ವೇಶ್ವರ ಭಟ್ಟರ ಲೇಖನದಿಂದ ಪ್ರಾರಂಭವಾದ ಚರ್ಚೆ, ಸಾಮಾಜಿಕ ಜಾಲತಾಣಕ್ಕೂ ವ್ಯಾಪಿಸಿ, ಪರ-ವಿರೋಧ ಅಭಿಪ್ರಾಯಗಳು ಸತತವಾಗಿ ಹೊಮ್ಮುತ್ತಲೇ ಇವೆ.
ಆ ದೃಷ್ಟಿಯಿಂದ ಭಟ್ಟರ ಪ್ರಯತ್ನ ಸಾರ್ಥಕವೇ ಆಯಿತು ಎನ್ನಬಹುದು. ಯಕ್ಷಗಾನದ ಕುರಿತು ವಿಶ್ವೇಶ್ವರ ಭಟ್ಟರಿಗಿರುವ ಜ್ಞಾನವೆಷ್ಟು ಎನ್ನುವವರಿಗೆ, ವಿಶ್ವೇಶ್ವರ ಭಟ್ಟರೂ ಯಕ್ಷಗಾನಾಭಿಮಾನಿ ಗಳೇ, ಹಾಗಾಗಿಯೇ ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಸ್ತಾಪಿಸಿzರೆ ಎನ್ನುವುದು ಮನದಟ್ಟಾಗಬೇಕಿದೆ.
ಅಧ್ಯಯನದ ಆಧಾರವಿಲ್ಲದೇ ಭಟ್ಟರು ಬರೆಯುವವರಲ್ಲ ಎನ್ನುವುದು ಅವರ ಅಸಂಖ್ಯಾತ ಓದುಗ ರಿಗೆ ತಿಳಿದೇ ಇದೆ. ಕುಮಟಾದ ಸಮೀಪದ ಮೂರೂರು, ಯಕ್ಷಗಾನದ ದೈತ್ಯ ಪ್ರತಿಭೆ ದೇವರು ಹೆಗಡೆಯವರ ಊರು, ತಾನೊಬ್ಬ ಬೆಳೆದದ್ದಲ್ಲದೇ, ದೇವರು ಹೆಗಡೆಯವರು ಆ ಊರಿನಲ್ಲಿ ನೂರಾರು ಕಲಾವಿದರನ್ನು ತರಬೇತುಗೊಳಿದ್ದಾರೆ, ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.
ಬಹಳ ಕಾಲದಿಂದ ಮೂರೂರಿನಿಂದ ಸ್ತ್ರೀ ಪಾತ್ರಧಾರಿಗಳು, ಹಾಸ್ಯಕಲಾವಿದರು, ಭಾಗವತರು, ಮದ್ದಳೆಗಾರರು ಬಂದಿದ್ದಾರೆ. ಒಂದರ್ಥದಲ್ಲಿ ಉತ್ತರಕನ್ನಡದ ಯಕ್ಷಗಾನಕ್ಕೆ ಮೂರೂರು ತವರು ಎಂದರೂ ತಪ್ಪಾಗಲಾರದು. ಮೂರೂರಿನಲ್ಲಿ ಯಕ್ಷಗಾನ ಸಾಕ್ಷರತೆ ಇಲ್ಲದವರು ಇಲ್ಲವೇ ಇಲ್ಲ ಎನ್ನಬಹುದು.
ಇದನ್ನೂ ಓದಿ: Vinayak V Bhat Column: ಕೋಗಿಲು ಘಟನೆಯಿಂದ ರಾಜ್ಯ ಎಚ್ಚೆತ್ತುಕೊಳ್ಳಬೇಕಿದೆ !
ವಿಶ್ವೇಶ್ವರ ಭಟ್ಟರು ಇದೇ ಮೂರೂರಿನಲ್ಲಿ ಯಕ್ಷಗಾನದ ವಾತಾವರಣದಲ್ಲಿ ಹುಟ್ಟಿ ಬೆಳೆದವರು. ಎರಡನೆಯದಾಗಿ, ಅವರ ಒಬ್ಬ ಅಜ್ಜ (ತಾಯಿಯ ತಂದೆ) ಹೆಸರುವಾಸಿ ಅರ್ಥಧಾರಿಯಾಗಿದ್ದವರು, ಇನ್ನೊಬ್ಬ ಅಜ್ಜ ಘಟ್ಟದ ಮೇಲಿನ ಭಾಗದಲ್ಲಿ ಪ್ರಸಿದ್ಧ ಭಾಗವತರಾಗಿದ್ದವರು; ನೆಬ್ಬೂರು ಭಾಗವತ ರಂಥವರು ಅವರನ್ನು ಗುರುಸ್ಥಾನದಲ್ಲಿ ನೋಡುತ್ತಿದ್ದರು.
ಒಟ್ಟಿನಲ್ಲಿ ಹೇಳಬೇಕಾದರೆ, ವಿಶ್ವೇಶ್ವರ ಭಟ್ಟರು ಯಕ್ಷಗಾನ-ತಾಳಮದ್ದಳೆಗಳ ನಡುವೆಯೇ ಹುಟ್ಟಿ ಬೆಳೆದು ಬಂದವರು. ಹಾಗಾಗಿ ಯಕ್ಷಗಾನದ ಕುರಿತು ಅವರದ್ದೇ ಆದ ನಿರೀಕ್ಷೆಗಳನ್ನು, ನಿಲುವು ಗಳನ್ನು ಹೊಂದಲು ಅವರು ಸ್ವತಂತ್ರರೂ, ಸಮರ್ಥರೂ ಆಗಿದ್ದಾರೆ.
ಇನ್ನು, ಪ್ರಸ್ತುತ ವಿಷಯದ ಪರ ಮತ್ತು ವಿರೋಧ ಎರಡೂ ಅಭಿಪ್ರಾಯಗಳಿಗೆ ಅವರ ಪತ್ರಿಕೆಯಲ್ಲಿ ಅವಕಾಶ ಮಾಡಿ ಕೊಟ್ಟ ಮೇಲೆ, ಅವರನ್ನು ದೂರುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ ಯಾಗಿದೆ. ವಿಶ್ವೇಶ್ವರ ಭಟ್ಟರನ್ನೂ ಸೇರಿಸಿ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಈ ಕುರಿತು ಬರೆದವರೆಲ್ಲರೂ ಯಕ್ಷಗಾನವನ್ನು ಹಾಗೂ ಯಕ್ಷಗಾನ ಕಲಾವಿದರನ್ನೂ ಗೌರವಿಸುವವರು, ಪ್ರೀತಿಸುವವರು ಮತ್ತು ಯಕ್ಷಗಾನ ಯಕ್ಷಗಾನವಾಗಿಯೇ ಉಳಿದು ಮುಂದಿನ ತಲೆಮಾರಿಗೆ ತಲುಪಬೇಕು ಎನ್ನುವ ಕಾಳಜಿ ಇರುವವರೇ ಆಗಿದ್ದಾರೆ ಎನ್ನುವುದನ್ನು ಮೊದಲು ಎಲ್ಲರೂ ಒಪ್ಪಬೇಕು.
ಇರಲಿ, ಈ ಸರಣಿ ಲೇಖನಗಳ ಪರ-ವಿರೋಧಗಳ ಚರ್ಚೆಯ ಪ್ರಮುಖ ಸಂಗತಿಗಳನ್ನು ಗಮನಿಸುವು ದಾದರೆ, ಒಟ್ಟಾರೆ ಗುಣಮಟ್ಟದಲ್ಲಿನ ಕುಸಿತ, ಪೌರಾಣಿಕ ಲೋಕಕ್ಕೆ ಪ್ರೇಕ್ಷಕನನ್ನು ಕೊಂಡೊಯ್ಯುವ ಬದಲು, ಅರ್ಥಧಾರಿಗಳೇ ಲೌಕಿಕಕ್ಕೆ ಬಂದು ಮಾತನಾಡುವುದು, ಪ್ರಸಂಗದ ನಿಯಂತ್ರಣ ಭಾಗವ ತರ ಕೈತಪ್ಪಿ ಅರ್ಥಧಾರಿಗಳ ಕೈಸೇರಿರುವುದು, ಅರ್ಥಗಾರಿಕೆಯಲ್ಲಿ ಸರಳತೆ ಮಾಯವಾಗಿ ಅರ್ಥ ಧಾರಿಯ ವೈದುಷ್ಯವೇ ಮೆರೆಯುವಂತಾದದ್ದು, ಪಾತ್ರಧಾರಿಗಳ ನಡುವೆ ಆಗುವ ಒಳ ಒಪ್ಪಂದ ದಿಂದಾಗಿ, ಕಣ್ಣುಸನ್ನೆ, ಕೈ ಸನ್ನೆಗಳಾಗುವುದರಿಂದ ಪ್ರೇಕ್ಷಕನಿಗುಂಟಾಗುವ ಕಿರಿಕಿರಿ ನಿರಾಸೆಗಳು, ಪರಸ್ಪರರ ಮಾತನ್ನು ಪೂರ್ತಿಕೇಳಿಸಿಕೊಳ್ಳುವ ಮೊದಲೇ ಅತಿಕ್ರಮಿಸುವುದು ಇತ್ಯಾದಿ.
ಯಾಕೆ ನಾಟಕ, ಸಿನಿಮಾ ಇತ್ಯಾದಿ ಕಲಾಪ್ರಕಾರಗಳನ್ನು ಬಿಟ್ಟು, ಜನ ತಾಳಮದ್ದಳೆಯ ಬೆನ್ನು ಬಿದ್ದಿದ್ದಾರೆ ಎನ್ನುವುದು ಇನ್ನೊಂದು ಆಕ್ಷೇಪ. ಅದಕ್ಕೆ ಕಾರಣ, ಯಕ್ಷಗಾನ ಮತ್ತು ಅದರ ಪ್ರಕಾರ ಗಳಿಗೆ ಅಷ್ಟು ಸತ್ವವಿದೆ, ಕಲಾಭಿಮಾನಿಗಳಿಗೆ ಅದು ಕೊಳಕಾಗುವುದು ಇಷ್ಟವಿಲ್ಲ ಎಂದರ್ಥ.
ಫಲವಿರುವ ಮರಕ್ಕೆ ತಾನೆ ಕಲ್ಲು ಬೀಸುವುದು? ಸುಪ್ರಸಿದ್ಧ ಯಕ್ಷಗಾನ ಅರ್ಥಧಾರಿ, ಸಾಹಿತಿ, ಉಪನ್ಯಾಸಕ, ಅಂಕಣಕಾರ ಮತ್ತು ವಿಮರ್ಶಕರಾದ ರಾಧಾಕೃಷ್ಣ ಕಲ್ಚಾರ್ ಅವರು ಮೊನ್ನೆ ಪತ್ರಿಕೆ ಯೊಂದರಲ್ಲಿ ಪ್ರಸಕ್ತ ವಿಷಯದ ಕುರಿತು ಬರೆದು ಇಂಥ ವಿಮರ್ಶೆಗಳನ್ನು ಸ್ವಾಗತಿಸಿದ್ದಾರೆ.
ಯಾವುದೇ ಕಲಾಪ್ರಕಾರದಲ್ಲಿ ಈ ಥರದ ಸಾರ್ವಜನಿಕವಾಗಿ ವಿಮರ್ಶೆಗೊಳಗಾಗುವ ಸಂದರ್ಭ, ಅದು ಮೂಡಿಸುವ ಸಂಚಲನ ಸ್ವಾಗತಾರ್ಹ. ಇಂಥ ವಿಮರ್ಶೆಗಳು ಆ ಕಲೆಯ ಬೆಳವಣಿಗೆಯ ಲಕ್ಷಣ. ಯಾವ ಕಲೆಯು ಸಶಕ್ತವೂ, ಸತ್ವಪೂರ್ಣವೂ ಆಗಿದ್ದು ಜನಮನ್ನಣೆ ಸಿಗುತ್ತಿದ್ದರೆ, ಅಂಥ ಕಲೆಗಳು ಮಾತ್ರ ವಿಮರ್ಶೆಗೆ ಒಳಗಾಗುತ್ತವೆ ಎಂದಿದ್ದಾರೆ.
ಹಾಗಾಗಿ, ಇದು ನಿಜವಾದ ಯಕ್ಷಗಾನಾಭಿಮಾನಿಗಳು, ಕಲಾವಿದರು ಸಂತೋಷಪಡುವ ಸಂದರ್ಭ ವೇ ಹೊರತು ಸಿಟ್ಟು ಮಾಡಿಕೊಳ್ಳಬೇಕಾದ ಪ್ರಸಂಗವಲ್ಲ. ಈ ಕೇರುವ ಪ್ರಕ್ರಿಯೆಯಲ್ಲಿ ಜೊಳ್ಳುಗಳು ಮಾತ್ರ ಕೆಳಕ್ಕೆ ಬೀಳಲಿದ್ದು, ಗಟ್ಟಿ ಭತ್ತ ಅ ಇರಲಿದೆ, ಅದಕ್ಕಿರುವ ಮರ್ಯಾದೆ ಇನ್ನೂ ಹೆಚ್ಚಲಿದೆ ಎನ್ನುವುದರಲ್ಲಿ ಅನುಮಾನ ಬೇಡ.
ಎಲ್ಲ ಕಲಾಮಾಧ್ಯಮಗಳಲ್ಲಿಯೂ ಹುಳುಕುಗಳಿರುವಾಗ, ಈಗ ಚರ್ಚೆಗೆ ತಾಳಮದ್ದಳೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಸಹಜ. ಯಕ್ಷಗಾನಕ್ಕಿರುವ ಪರಂಪರೆ, ಇತಿಹಾಸ ಹಾಗೂ ಪಾವಿತ್ರ್ಯಗಳೇ ಇದಕ್ಕೆ ಕಾರಣವಿರಬಹುದು ಎನ್ನುವುದು ನನ್ನ ಭಾವನೆ.
ನಾಟಕದಲ್ಲಿ ಹೆಚ್ಚು ಕಡಿಮೆಯಾಗಬಹುದು, ಸಿನಿಮಾ ಅಂತೂ ಕೇಳುವುದೇ ಬೇಡ; ಆದರೆ ಪಾರಂ ಪರಿಕ ಪ್ರೇಕ್ಷಕನು ಸಾಂಪ್ರದಾಯಿಕ ಯಕ್ಷಗಾನದಲ್ಲಿ ಮಾತ್ರ ಏರುಪೇರನ್ನು ಸಹಿಸಲಾರ. ಅದು ಹೇಗಿತ್ತೋ ಹಾಗೇ ಇರಬೇಕು ಎನ್ನುವುದು ಪ್ರೇಕ್ಷಕನ ಕಾಲಾತೀತವಾದ ಬಯಕೆ.
ಯಕ್ಷಗಾನ ಎನ್ನುವಂಥದ್ದು ಅನ್ಯ ಕಲೆಗಳಂತಲ್ಲ, ಅದು ಪ್ರೇಕ್ಷಕನಲ್ಲಿ ದೈವಿಕ ಭಾವವನ್ನು ಹುಟ್ಟು ಹಾಕುವ ಒಂದು ಕಲೆಯಾಗಿದೆ. ಈ ಕಲೆಯನ್ನು ಅನುಭವಿಸುವುದರ ಜತೆಗೆ ಅನೇಕರು ಆರಾಧಿಸಿ ರುವ ಉದಾಹರಣೆಗಳಿವೆ. ಮಹಾಕಾವ್ಯಗಳ ಮಹತ್ತನ್ನು ಮಂದಾಧಿಕಾರಿಗಳಿಗೆ ಸರಳವಾಗಿ ಅರ್ಥ ವಾಗುವಂತೆ ತಲುಪಿಸಲು, ಈ ಮಾಧ್ಯಮವನ್ನು ನಮ್ಮ ಅನೇಕ ಗುರು-ಪರಂಪರೆಗಳು ಬಳಕೆ ಮಾಡಿರುವ ಉದಾಹರಣೆ ನಮ್ಮ ಮುಂದಿದೆ.
ಈ ವಿಷಯದಲ್ಲಿ ನಿಷ್ಣಾತರಾದವರು ಮಾತ್ರ ವಿಮರ್ಶೆ ಮಾಡಬೇಕು ಎನ್ನುವ ಇನ್ನೊಂದು ವಾದ ವಿದೆ. ಪ್ರೇಕ್ಷಕ ಎಷ್ಟು ತಿಳಿವಳಿಕೆಯುಳ್ಳವ ಅಥವಾ ಅಲ್ಲ ಎನ್ನುವುದು ಪ್ರಧಾನವಾಗಿದ್ದರೆ, ಯಾವುದೇ ಕಲೆಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡದೇ ಪ್ರಾಜ್ಞ ಕಲಾಭಿಮಾನಿಗಳ ಮುಂದೆ ಮಾತ್ರ ಪ್ರದರ್ಶಿಸಲಾಗುತ್ತಿತ್ತಲ್ಲವೆ? ಪ್ರೇಕ್ಷಕನಾಗಿ ಎಲ್ಲರೂ ಬೇಕು, ವಿಮರ್ಶೆಯನ್ನು ತಜ್ಞನು ಮಾತ್ರ ಮಾಡಬೇಕು ಎನ್ನುವುದು ಸರಿಯಾದ ಧೋರಣೆಯಲ್ಲ.
ಕಲಾವಿದರಿಗೆ ಪ್ರೇಕ್ಷಕನಿಗಿಂತ ಅಥವಾ ಆ ಕಲೆಯ ಅಭಿಮಾನಿಗಿಂತ ದೊಡ್ಡ ದೇವರಿಲ್ಲ. ಪ್ರೇಕ್ಷಕನೂ ಕಲಾವಿದರಷ್ಟೇ ತಿಳಿದಿದ್ದರೆ, ಆತನೂ ಕಲಾವಿದನೇ ಆಗಿರುತ್ತಿದ್ದನಲ್ಲವೇ? ಪ್ರೇಕ್ಷಕನಾಗಿ ಅಲ್ಲವಲ್ಲ!
ಹಾಗಾಗಿ ಅಜ್ಞ ಅಥಾವಾ ತಜ್ಞ ಅಂತ ಪ್ರೇಕ್ಷಕನನ್ನು ವಿಭಾಗ ಮಾಡುವುದು ಮುಗ್ಧ, ನಿಸ್ವಾರ್ಥಿ ಕಲಾ ಭಿಮಾನಿಗಳಿಗೆ ಮಾಡುವ ಅವಮಾನ ಎನ್ನುವುದು ನನ್ನ ಭಾವನೆಯಾಗಿದೆ. ಯಕ್ಷಗಾನ ಮತ್ತು ತಾಳ ಮದ್ದಳೆಯ ಅರ್ಥಗಾರಿಕೆಗೆ ಒಂದು ಪರಿಶುದ್ಧವಾದ ಭಾಷೆಯಿದೆ, ಅಲ್ಲಿನ ಮಾತುಕತೆಗೆ ಒಂದು ಲಯವಿದೆ, ಶ್ರುತಿಯಿದೆ. ಯಕ್ಷಗಾನದ ಭಾಷೆ ಕನ್ನಡವೇ ಎನ್ನುವುದು ಗಮನಾರ್ಹ ಸಂಗತಿ.
ಇಂಗ್ಲಿಷಿನಿಂದ ಕಲುಷಿತವಾಗದ ಶುದ್ಧ ಕನ್ನಡದ ಬಳಕೆ ಇನ್ನೂ ಎದರೂ ಇದ್ದರೆ ಅದು ಯಕ್ಷಗಾನ ದಲ್ಲಿ ಮಾತ್ರ ಎನ್ನುವುದು ಯಾರೂ ಒಪ್ಪಲೇಬೇಕಾದ ಸಂಗತಿ. ‘ಪ್ರತ್ಯುತ್ಪನ್ನ ಮತಿತ್ವ’ ಎನ್ನುವುದು ತಾಳಮದ್ದಳೆಯ ಜೀವಾಳ, ಬದಲಿಗೆ ಅದು ಅರ್ಥಧಾರಿಯ ವೈದುಷ್ಯದ ವಿದ್ವತ್ ಪ್ರದರ್ಶನ ಮಾತ್ರ ಆಗಬಾರದು.
ಎಷ್ಟೇ ಸುಂದರವಾಗಿದ್ದರೂ, ತುಟಿ ಮೀರಿ ಬೆಳೆದ ಹಲ್ಲು ಮುಖಕ್ಕೆ ಹೇಗೆ ವಿಕಾರವೇ ಆಗುತ್ತದೆಯೋ, ಹಾಗೆ ಮಿತಿಮೀರಿದ ಮಾತುಗಳು ಪ್ರಸಂಗಾನುಭವಕ್ಕೆ ಅಷ್ಟೇ ವಿಕಾರವಾಗಿ ಪರಿಣಮಿಸುತ್ತವೆ. ಅಲ್ಲಿ ಪಾತ್ರಗಳ ಸೋಲು ಗೆಲುವಿನ ಚರ್ಚೆಯಾಗಬೇಕೇ ಹೊರತು ಅರ್ಥಧಾರಿಗಳ ವೈಯಕ್ತಿಕ ಸೋಲು-ಗೆಲುವಿನ ಚರ್ಚೆಯಾಗಬಾರದು. ಯಾವುದೋ ಪೌರಾಣಿಕ ವಿಷಯಗಳ ಕುರಿತು ಸಮಗ್ರವಾಗಿ ಮಾತನಾಡ ಬಯಸುವ ಅರ್ಥಧಾರಿಗಳು, ಪ್ರವಚನ ಮಾಧ್ಯಮವನ್ನು ಬಳಸಿಕೊಳ್ಳಬಹುದೇ ಹೊರತು ಅದಕ್ಕೆ ತಾಳಮದ್ದಳೆ ಬಳಕೆಯಾಗಬಾರದು.
ಎರಡನೆಯದಾಗಿ, ಕಲೆ ಎನ್ನುವುದು ನಿಂತ ನೀರಾಗಬಾರದು, ಸಂಗತವಾದ ಮಾರ್ಪಾಡುಗಳನ್ನು ಪಡೆದುಕೊಳ್ಳುತ್ತಾ ಸದಾ ಚಲನ ಶೀಲವಾಗಿರಬೇಕು ಎನ್ನುವುದನ್ನೂ ಒಪ್ಪಲೇಬೇಕು. ಶೇಣಿಯವರ ಹಾಗೆ ಅರ್ಥ ಹೇಳುವವರು ಈಗ ಯಾರೂ ಇಲ್ಲ ನಿಜ, ಹಾಗಂತ ತಾಳಮದ್ದಳೆಗಳು ನಿಂತಿಲ್ಲ, ಸಾವಿರಾರು ಹೊಸ ಕಲಾವಿದರುಗಳು ಹುಟ್ಟಿಬಂದಿದ್ದಾರೆ, ಅದ್ಯಪಿ ಬರುತ್ತಿದ್ದಾರೆ.
ಚಿಟ್ಟಾಣಿಯವರ ಹಾಗೆ ಕುಣಿಯುವವರು ಬರ್ತಾನೇ ಇಲ್ಲ ಎಂದು ಅಲವತ್ತುಕೊಳ್ಳುವುದರಲ್ಲಿ ಅರ್ಥವಿಲ್ಲ. ಚಿಟ್ಟಾಣಿಯವರ ಕೀಚಕ, ಕೌರವ, ಮಾಗಧ ಮುಂತಾದ ಪಾತ್ರಗಳನ್ನು ನೋಡಿದವ ರನ್ನು, ಇನ್ನೊಬ್ಬ ಕಲಾವಿದ ಆ ಪಾತ್ರಗಳನ್ನು ಮಾಡಿ ತಣಿಸಲಾರ ಎನ್ನುವುದು ಸತ್ಯ. ಆದರೆ ಇನ್ನಾರೂ ಆ ಪಾತ್ರಗಳನ್ನು ಮಾಡಬಾರದು, ಆ ಪಾತ್ರಗಳು ಚಿಟ್ಟಾಣಿಯವರ ಜತೆಗೇ ಮುಗಿದು ಹೋಗಬೇಕು ಎನ್ನುವುದು ಸರಿಯಲ್ಲ.
ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರಗಳನ್ನು ನೋಡಿದವರಿಗೆ, ಚಿಟ್ಟಾಣಿಯವರ ಪ್ರಸ್ತುತಿಯಲ್ಲಿ ಕೊರತೆ ಕಂಡರೆ ಅದು ಸ್ವಾಭಾವಿಕವೇ. ಅಂತೆಯೇ ಚಿಟ್ಟಾಣಿಯವರು ಮಾಡಿದ ಪಾತ್ರಗಳನ್ನು ಬೇರೆ ಯಾರೂ ಮಾಡಿದರೆ ಅದರಲ್ಲಿ ಕೊರತೆ ಕಾಣುವುದೂ ಸಹಜವೇ ಆಗಿದೆ. ಆದರೆ ಆ ಪಾತ್ರಗಳನ್ನು ಬೇರೆ ಯಾರೂ ಮಾಡಲೇಬಾರದು ಎನ್ನಲಾಗದು.
ಅಂಥ ಮನಸ್ಥಿತಿಯ ಪ್ರೇಕ್ಷಕರಿಗೆ ಹೇಳಿದ ಮಾತಿದು. ಹಾಗೆ ನೋಡಿದರೆ, ಯಕ್ಷಗಾನದಿಂದ ಸ್ವಲ್ಪ ಪಕ್ಕಕ್ಕೆ ಸರಿದು, ವಿದ್ವತ್ ಪ್ರದರ್ಶನ, ಶಾಸ್ತ್ರಾರ್ಥಗಳು ಶುರುವಾದದ್ದು ಮೂಲತಃ ಹರಿಕೀರ್ತನೆ ಮಾಡುವವರಾಗಿದ್ದ ಶೇಣಿಯವರ ಕಾಲಘಟ್ಟದ ಎಂದರೆ ತಪ್ಪಾಗಲಾರದು. ಅವರ ಅರ್ಥಗಾರಿಕೆ ಯು ಪರಂಪರೆಯಿಂದ ಸ್ವಲ್ಪ ಭಿನ್ನವಾಗಿತ್ತು, ಆದರೆ ಜನರಿಗೆ ಮೆಚ್ಚುಗೆಯಾಯಿತು ಅಷ್ಟೇ. ತೆಕ್ಕಟ್ಟೆ ಆನಂದ ಮಾಸ್ತರರ ಅರ್ಥವೂ ಹಾಗೆ ವಿಭಿನ್ನವಾಗಿರುತ್ತಿತ್ತು, ಆದರೆ ಯಕ್ಷಗಾನದೊಳಗೇ ಇರುತ್ತಿತ್ತು.
ಆ ಕಾಲದಲ್ಲಿ ಚಿಟ್ಟಾಣಿಯವರಿಗಾಗಿಯೇ ಕೆಲವು ಪ್ರಸಂಗಗಳ ಪದ್ಯಗಳನ್ನು ಹೊಸದಾಗಿ ಬರೆದು ಪ್ರಸಂಗಕ್ಕೆ ಸೇರಿಸಲಾಗಿತ್ತು, ಕೆಲವು ಹಳೆಯ ಪದ್ಯಗಳನ್ನು ಹೇಳುವ ಶೈಲಿಯಲ್ಲಿ ಬದಲಾವಣೆ ಮಾಡಲಾಗಿತ್ತು; ಈ ಮೂಲಕ ಅದು ಜನ ಮೆಚ್ಚುಗೆಗೆ ಪಾತ್ರವಾಯಿತು ಎನ್ನುವುದನ್ನು ಮತ್ತು ಈ ಎಲ್ಲ ಬದಲಾವಣೆಗಳು ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆ ತಾರದಂತಿದ್ದವು ಎನ್ನುವುದನ್ನು ಗಮನಿಸಬೇಕು.
ಕಾಲಮಿತಿಯ ಪ್ರದರ್ಶನವನ್ನು ಇಡಗುಂಜಿ ಮೇಳ ಪ್ರಾರಂಭಿಸಿದಾಗಲೂ ಇದೇ ರೀತಿಯ ಕೂಗು ಕೇಳಿಬಂದಿತ್ತು. ‘ಯಕ್ಷಗಾನವನ್ನು ಇವರು ಹಾಳು ಮಾಡಿಬಿಟ್ಟರು’ ಎಂದು ದೂರಿದ್ದರು. ಆ ಕಾಲ ಘಟ್ಟದಲ್ಲಿ ಅವರು ಆ ಕ್ರಾಂತಿಕಾರಕ ನಿರ್ಧಾರವನ್ನು ತೆಗೆದುಕೊಳ್ಳದಿದ್ದಿದ್ದರೆ, ಯಕ್ಷಗಾನ ಇಲ್ಲಿಯ ತನಕ ಮುಂಬರಿದು ಬರುತ್ತಿರಲಿಲ್ಲವೇನೋ!
ಇತ್ತೀಚೆಗೆ ಬಹಳ ಅರ್ಥಧಾರರಿಗೆ ಬಣ್ಣ ಹಚ್ಚುವ ಉಮೇದು. ಬರೇ ಮಾತಿನ ರಂಗವನ್ನೂ ಗೆಲ್ಲಬಹುದು ಎನ್ನುವ ಹುಂಬ ಧೈರ್ಯ ಅವರದ್ದು. ಆದರೆ ರಂಗದ ಗುಣಲಕ್ಷಣಗಳು, ಪಾತ್ರಗಳ ನಡೆ ಎಲ್ಲವೂ ವಿಭಿನ್ನವೇ ಆಗಿರುತ್ತವೆ. ಅದು ಒಬ್ಬರಿಗೆ ಒಗ್ಗಿದರೆ ಇನ್ನೊಬ್ಬರಿಗೆ ಒಗ್ಗುವುದಿಲ್ಲ.
ಹಿಂದೆ ಯಕ್ಷಗಾನದಲ್ಲಿ ಪ್ರಸಿದ್ಧರಾಗಿದ್ದ ಕಲಾವಿದರಲ್ಲಿ ಬಹಳಷ್ಟು ಜನ ತಾಳಮದ್ದಳೆಯಲ್ಲಿ ಕಾಣುತ್ತಿರಲಿಲ್ಲ. ಹಾಗೆ ತಾಳಮದ್ದಳೆಯಲ್ಲಿ ಪ್ರಖ್ಯಾತರಾದವರು ಯಕ್ಷಗಾನದ ಕಡೆಗೆ ತಲೆ ಹಾಕು ತ್ತಿರಲಿಲ್ಲ.
ಟಿ-20 ಪಂದ್ಯಗಳಿಗೆ ಸೂರ್ಯಕುಮಾರ್ ಒಳ್ಳೆಯ ಆಟಗಾರನೇ... ಅನುಮಾನವಿಲ್ಲ; ಆದರೆ ಐದು ದಿನದ ಆಟದಲ್ಲಿ ಆತ ಯಶಸ್ವಿಯಾಗಲಿಕ್ಕಿಲ್ಲ. ಕಾರಣ ಅದು ಅವನಿಗೆ ಒಗ್ಗುವ ಆಟವಲ್ಲ. ಹಾಗಂತ ಎಲ್ಲ ಸ್ತರದ ಪಂದ್ಯಗಳಲ್ಲೂ ಸಮಾನವಾಗಿ ಸಲ್ಲುವ ಕೆಲವು ಆಟಗಾರರೂ ಇದ್ದಾರೆ, ಇಲ್ಲ ಅಂತ ಅಲ್ಲ, ಸಚಿನ್, ವಿರಾಟ್, ಸೆಹ್ವಾಗ್ ಇದ್ದಂತೆ, ಯಕ್ಷಗಾನರಂಗದಲ್ಲೂ ಕುಂಬ್ಳೆ ಸುಂದರ್ ರಾವ್, ಕೆರೆಮನೆ ವೆಂಕಟಾಚಲ ಭಟ್ಟರು, ಮಹಾಬಲ ಹೆಗಡೆಯವರು, ಶಂಭು ಹೆಗಡೆಯವರು ಮುಂತಾದ ‘ಎರಡು ಕಡೆಯಲ್ಲಿಯೂ ಸಲ್ಲುವ’ ಕಲಾವಿದರು ಇದ್ದರು, ಆದರೆ ಇಂಥವರು ಆಪರೂಪ ಎನ್ನುವುದು ನಾನು ಹೇಳಹೊರಟಿರುವ ವಿಷಯ.
ಉಪ್ಪೂರರು, ನೆಬ್ಬೂರರು ಹಾಗೂ ಕಾಳಿಂಗ ನಾವುಡರ ಕಾಲಕ್ಕೆ ಪಾತ್ರಧಾರಿಗಳು, ಅರ್ಥಧಾರಿಗಳು ಭಾಗವತರಿಗೆ ಅತ್ಯಂತ ಗೌರವ ನೀಡುತ್ತಿದ್ದರು. ಇಡೀ ರಂಗದ ನಿಯಂತ್ರಣ ಭಾಗವತರ ಕೈಯಲ್ಲಿರು ತ್ತಿತ್ತು. ಎಲ್ಲೂ ಆಭಾಸವಾಗದಂತೆ ಭಾಗವತರು ನೋಡಿಕೊಂಡು ಹೋಗುವುದಿತ್ತು. ಆಟದಲ್ಲಾಗಲೀ ಅಥವಾ ತಾಳಮದ್ದಳೆಯಲ್ಲಾಗಲೀ ಅರ್ಥಧಾರಿಗಳ ಮಾತು ದಾರಿ ತಪ್ಪುತ್ತಿದೆ, ಅಗತ್ಯಕ್ಕಿಂತ ಉದ್ದ ವಾಗುತ್ತಿದೆ ಎಂದೆನಿಸಿದಾಗ, ಭಾಗವತರು ಹಿಂದಿನಿಂದ ಹೂಂಕರಿಸಿದರೆ ಸಾಕಿತ್ತು, ಅರ್ಥಧಾರಿಗಳು ಎಚ್ಚೆತ್ತುಕೊಂಡು ಲಯಕ್ಕೆ ಮರಳುತ್ತಿದ್ದರು.
ಇನ್ನೂ ಮುಂದುವರಿದರೆ ಭಾಗವತರು ಮುಂದಿನ ಪದ್ಯ ಎತ್ತುಗಡೆ ಮಾಡಿಬಿಡುತ್ತಿದ್ದ ಸಂದರ್ಭವೂ ಇತ್ತು. ಆದರೆ ಈಗ? ಪಾತ್ರಧಾರಿಯ ಕುಣಿತವೆಲ್ಲ ಖರ್ಚಾಗುವವರೆಗೆ ಭಾಗವತರು ಪದ್ಯದ ಎತ್ತುಗಡೆ ಮಾಡುತ್ತಲೇ ಇರಬೇಕು, ಪಾತ್ರಧಾರಿಯ ಕೈ-ಕಣ್ ಸನ್ನೆಯ ನಂತರ ಭಾಗವತರು ಪದ್ಯ ನಿಲ್ಲಿಸಬೇಕು ಎಂಬಂತಾಗಿದೆ. ಅದು ಸರಿಯಲ್ಲ ಎನ್ನುವುದು ಪ್ರೇಕ್ಷಕರ ಭಾವನೆ. ಈ ಎಲ್ಲ ವೈರುಧ್ಯಗಳ ನಡುವೆ ಯಕ್ಷಗಾನ ಕಲೆ ಉಳಿದುಕೊಂಡಿದೆ, ಬೆಳೆಯುತ್ತಲೂ ಇದೆ.
ಯಕ್ಷಗಾನ ಅಥವಾ ತಾಳಮದ್ದಳೆಯ ಕ್ಷೇತ್ರಕ್ಕೆ ಹೊಸಬರ ಪ್ರವೇಶ ಆಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯವೇ ಆಗಿದೆ. ಸಣ್ಣ ಸಣ್ಣ ಮಕ್ಕಳು ಇಂದು ರಂಗದಲ್ಲಿ ಅತ್ಯಂತ ಶಾಸ್ತ್ರೀಯ ವಾಗಿ ಹೆಜ್ಜೆ ಹಾಕುವುದನ್ನು ನೋಡುವಾಗ ಯಕ್ಷಗಾನಕ್ಕೆ ಇನ್ನೂ ಭವಿಷ್ಯ ಮುಗಿದಿಲ್ಲ ಎನ್ನುವುದು ತಿಳಿದು ಸಮಾಧಾನವಾಗುತ್ತದೆ.
ಇವತ್ತಿಗೂ ಕೆಲವು ಕಡೆಗಳಲ್ಲಿ ತಾಳಮದ್ದಳೆಯ ಸಪ್ತಾಹಗಳು ನಡೆಯುತ್ತಿವೆ ಎಂದರೆ ಅದು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ ಎಂತಲೇ ಅರ್ಥ. ಅದಲ್ಲದಿದ್ದರೆ, ಶೇಣಿಯವರು, ಪೆರ್ಲ ಕೃಷ್ಣ ಭಟ್ಟರು, ಶಂಕರ ನಾರಾಯಣ ಸಾಮಗರು ಮುಂತಾದವರ ನಂತರ ತಾಳಮದ್ದಳೆ ಕ್ಷೇತ್ರ ನಿಂತುಬಿಡಬೇಕಿತ್ತು.
ಚಿಟ್ಟಾಣಿ ಶಂಭುಹೆಗಡೆಯವರ ತರುವಾಯ ಆಟಗಳು ನಡೆಯಲೇ ಬಾರದಿತ್ತು. ಕಾಲಮಿತಿ ಮುಂತಾದ, ಇಂದಿನ ಕಾಲಕ್ಕೆ ಪ್ರೇಕ್ಷಕರಿಗೆ ಅನುಕೂಲವಾಗುವ ಮಾರ್ಪಾಡುಗಳನ್ನು ಮಾಡಿ ಕೊಂಡು ಯಕ್ಷಗಾನ ಇನ್ನೂ ಪ್ರಸ್ತುತಿಯನ್ನು ಉಳಿಸಿಕೊಂಡು ಬಂದಿದೆ, ದೇಶ-ವಿದೇಶಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.
ಯಕ್ಷಗಾನದಲ್ಲಷ್ಟೇ ಅಲ್ಲದೆ, ತಾಳಮದ್ದಳೆಯಲ್ಲೂ ಏಕವ್ಯಕ್ತಿ ಪ್ರದರ್ಶನಗಳಂಥಾ ಹೊಸ ಪ್ರಯತ್ನ ಗಳು ನಡೆಯುತ್ತಿವೆ. ದಿವಾಕರ ಹೆಗಡೆ ಕೆರೆಹೊಂಡ ಅವರು ಅತ್ಯಂತ ಸಮರ್ಥವಾಗಿ ಏಕವ್ಯಕ್ತಿ ತಾಳಮದ್ದಳೆಯನ್ನು ನಡೆಸುತ್ತಿದ್ದು ಅದು ಜನಮನ್ನಣೆಯನ್ನೂ ಗಳಿಸಿದೆ.
ಯಕ್ಷಗಾನದ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿನವರೆಗೆ ತಲುಪಿಸುವ ಕಾರ್ಯದಲ್ಲಿ ಎಲ್ಲ ಹೊಸ ಕಲಾವಿದರ ಪಾತ್ರವೂ ಹಾಗೂ ಹೊಸರೂಪದಿಂದ ಪ್ರಕಟವಾಗುತ್ತಿರುವ ಯಕ್ಷಗಾನ-ತಾಳಮದ್ದಳೆಗಳ ಪಾತ್ರವೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗೂ ಇದು ಪ್ರಶಂಸನಾರ್ಹ ವಿಚಾರವಾಗಿದೆ. ಹಾಗಾಗಿ ಹೊಸದೆಲ್ಲ ಹಾಳು ಎಂದು ಪ್ರೇಕ್ಷಕ ತಿರಸ್ಕರಿಸುತ್ತಿಲ್ಲ, ಸರಿಯಾದ ಬದಲಾವಣೆಗಳನ್ನು ಸ್ವಾಗತ ಮಾಡಿರುತ್ತಾನೆ ಎನ್ನುವುದು ಮನಗಾಣಬೇಕಾದ ಸಂಗತಿಯಾಗಿದೆ.
ಯಕ್ಷಗಾನವೂ ಸೇರಿ ಯಾವುದೇ ಕಲೆ ಸೃಜನಶೀಲವೂ ಚಲನಶೀಲವೂ ಆಗಿರಬೇಕು ಎನ್ನುವುದು ಸರಿ; ಆದರೆ ಅದು ಸಂಪ್ರದಾಯದ ಕೊನೆಯ ಬೇಲಿಯನ್ನು ದಾಟಬಾರದು ಎನ್ನುವುದು ಹೊಸ ಕಲಾವಿದರು ಮನಸ್ಸಿಗೆ ತೆಗೆದುಕೊಳ್ಳಬೇಕಾದ ಸಂಗತಿಯಾಗಿದೆ.
ಸಂಪ್ರದಾಯದ ಚೌಕಟ್ಟಿನೊಳಗೆ ಕಲಾವಿದರು ನಾವೀನ್ಯವನ್ನು ಕಂಡುಕೊಳ್ಳುವುದಾದರೆ, ಏನಾ ದರೂ ಹೊಸದೊಂದನ್ನು ಸೃಜಿಸುವುದಾದರೆ ಅದು ಸ್ವಾಗತಾರ್ಹವೇ, ಅದರಲ್ಲಿ ಎರಡು ಮಾತಿಲ್ಲ. ಯಕ್ಷಗಾನ ಅಥವಾ ತಾಳಮದ್ದಳೆ ನಾಟಕವಾಗಬಾರದು, ನಾಟಕಗಳು ಸಿನಿಮಾ ಆಗಬಾ ರದು. ಅದರದರ ಜಾಗದಲ್ಲಿ ಅದದು ಇದ್ದರೇ ಚೆನ್ನ. ಯಾವುದೇ ಕಲೆ ಒಂದು ಸಾರಭೂತ ವಾದ ಸಂಗತಿ ಯನ್ನು ಸಾರುವ ಮಾಧ್ಯಮವಷ್ಟೇ. ಅದಕ್ಕೆ, ಏನೋ ಒಳ್ಳೆಯದನ್ನು ಸಮಾಜಕ್ಕೆ ನೀಡುವ ಮೂಲಕ ಅದನ್ನು ಸಂಸ್ಕರಿಸುವ ಹೊಣೆಗಾರಿಕೆಯಿರುತ್ತದೆ.
ಕಲಾವಿದ ಹಾಗೂ ಕಲಾರಸಿಕ ಇಬ್ಬರೂ ಸೇರಿದಾಗ ಮಾತ್ರ ಆ ಕಲೆಯ ಉಳಿವಾಗುತ್ತದೆ; ಒಬ್ಬರಿಲ್ಲ ದಿದ್ದರೆ ಇನ್ನೊಬ್ಬರಿಗೆ ಕೆಲಸವಿರುವುದಿಲ್ಲ. ಲೋಕವನ್ನು ಸಂಸ್ಕರಿಸುವ ಮೂಲ ಉದ್ದೇಶಕ್ಕಿಂತ ಕಲೆದೊಡ್ಡದಲ್ಲ, ಕಲೆಗಿಂತ ಕಲಾವಿದ ದೊಡ್ಡವನಲ್ಲ. ಆ ಪ್ರಸಂಗ ಅಪೇಕ್ಷಿಸುವ ಪಾತ್ರವನ್ನು ಕಲಾವಿದನಾದವನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಆತ ದೇವರಾಗುತ್ತಾನೆ. ಯಕ್ಷಗಾನಂ ಗೆಲ್ಗೆ...!