ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr D C Nanjunda Column: ನೊಬೆಲ್‌ ಪ್ರಶಸ್ತಿಗೆ ಪ್ರೇರಣೆ: ಶಿವನ ತಾಂಡವ ನೃತ್ಯ ಕಥಾನಕ !

ಶಿವನ ಕೈಯಲ್ಲಿರುವ ಅಗ್ನಿಯು ಹಳೆಯ ಅಜ್ಞಾನವನ್ನು ನಾಶ ಮಾಡಿ ಹೊಸ ಬೆಳಕನ್ನು ತಂದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೂಡ ಹಳೆಯದನ್ನು ಕರಗಿಸಿ ಹೊಸ ಮಾರ್ಗಗಳನ್ನು ತೆರೆಯುತ್ತವೆ. ಅರ್ಥಶಾಸ್ತ್ರದ ದೃಷ್ಟಿಯಲ್ಲಿ, ಆವಿಷ್ಕಾರಕಾರರು ಸ್ವತಃ ಶಿವನಂತೆಯೇ ಹಳೆಯ ವ್ಯವಸ್ಥೆಯನ್ನು ಮುರಿದು ಹೊಸ ಭವಿಷ್ಯವನ್ನು ನಿರ್ಮಿಸುವುದು ಎಂದರ್ಥ.

ವಿಶ್ಲೇಷಣೆ

ಡಾ.ಡಿ.ಸಿ.ನಂಜುಂಡ

2025ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಮೂವರು ಪ್ರಮುಖ ಆರ್ಥಿಕ ತಜ್ಞರು- ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕಿಯರ್, ಕಾಲೇಜ್ ಡೆ ಫ್ರಾನ್ಸ್ ಮತ್ತು ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್‌ನ ಫಿಲಿಪ್ ಆಗಿಯನ್, ಹಾಗೂ ಬ್ರೌನ್ ವಿಶ್ವವಿದ್ಯಾಲಯದ ಪೀಟರ್ ಹೋಯಿಟ್- ಇವರಿಗೆ ನೀಡಲಾಗಿದೆ. ‌

ಮೊಕಿಯರ್ ಅರ್ಧ ಬಹುಮಾನ ಪಡೆದಿದ್ದು, ಆಗಿಯನ್ ಮತ್ತು ಹೋಯಿಟ್ ಉಳಿದ ಅರ್ಧವನ್ನು ಹಂಚಿಕೊಂಡಿದ್ದಾರೆ. ಇವರು ನೀಡಿದ ಸಂಶೋಧನೆಗಳ ಸಾರವು ಒಂದೇ: ಸಮಾಜದ ಪ್ರಗತಿಯು ಹಳೆಯದನ್ನು ಹಿಡಿದುಕೊಳ್ಳುವುದರಿಂದ ಅಲ್ಲ, ಹೊಸದನ್ನು ಹುಟ್ಟುಹಾಕಲು ಹಳೆಯದನ್ನು ನಾಶ ಮಾಡುವುದರಿಂದ ಸಾಧ್ಯ.

ಇದೇ ಅಂಶವು ಭಾರತೀಯ ತತ್ವಜ್ಞಾನದಲ್ಲಿ ಶಾಶ್ವತವಾಗಿ ಪ್ರತಿಫಲಿಸಿರುವುದನ್ನು ನಾವು ಶಿವನ ತಾಂಡವ ನೃತ್ಯದಲ್ಲಿ ಕಾಣುತ್ತೇವೆ ಎನ್ನುವ ಆಂಶ ಇದೀಗ ಬೆಳಕಿಗೆ ಬಂದಿದೆ. ಅಂದರೆ ಭಾರತೀಯ ಪುರಾಣಕ್ಕೆ ವೈeನಿಕ ಲೇಪನ. ನೊಬೆಲ್ ನೀಡಿದ ರಾಯಲ್ ಸ್ವೀಡಿಷ್ ಅಕಾಡೆಮಿ ಈ ಪ್ರಶಸ್ತಿಯನ್ನು ‘ನವೀನತೆ ಆಧಾರಿತ ಆರ್ಥಿಕ ಬೆಳವಣಿಗೆಯ ವಿವರಣೆಗಾಗಿ’ ನೀಡಿದೆ. ಇವರ ಸಂಶೋಧನೆಗಳು ತಾಂತ್ರಿಕ ಪ್ರಗತಿ, ಜ್ಞಾನ ವ್ಯವಸ್ಥೆ ಮತ್ತು ಸಂಸ್ಥಾತ್ಮಕ ಮುಕ್ತತೆಯ ಮಹತ್ವವನ್ನು ವಿವರಿಸುತ್ತವೆ ಎಂದಿದೆ.

ಮೇಲ್ಕಂಡ ಮೂವರು ಆರ್ಥಿಕ ತಜ್ಞರ ಸಮಾಜವು ಬದಲಾವಣೆಯನ್ನು ನಿರಾಕರಿಸಿದರೆ ಅದು ಕ್ರಮೇಣ ಕುಸಿಯುತ್ತದೆ ಎಂಬ ಗಾಢ ಸಂದೇಶವೂ ಇದರಲ್ಲಿ ಇದೆ. ತತ್ತ್ವಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ, ಈ ಪ್ರಶಸ್ತಿ ಹೊಸದರ ಸೃಷ್ಟಿ ಮತ್ತು ಹಳೆಯದರ ವಿನಾಶದಿಂದ ಉಂಟಾಗುವ ನವೀನತೆ ಮೂಲತಃ ಗೌರವದ ಸೂಚನೆಯಾಗಿದೆ. ಇದೇ ಈಗ ಸೃಜನಾತ್ಮಕ ವಿನಾಶ. ಅಂದರೆ ನಾಶದ ಮೂಲಕ ಹೊಸ ಬೆಳವಣಿಗೆ. ಇದು ಶಿವನ ರುದ್ರತಾಂಡವಕ್ಕೆ ಹೋಲುತ್ತದೆ ಎನ್ನುವುದು ಇದೀಗ ಸಂಚಲನೆ ಮೂಡಿಸಿದೆ.‌

ಇದನ್ನೂ ಓದಿ: Ravi Sajangadde Column: ಜಿಎಸ್‌ʼಟಿ 2.0: ಲಾಭ ಜನರಿಗೆ ತಲುಪಿದೆಯೇ ?

ಹಿಂದೂ ಪೌರಾಣಿಕ ಪರಂಪರೆಯಲ್ಲಿ, ಶಿವನ ಆನಂದ ತಾಂಡವ ಎನ್ನುವುದು ಆನಂದದ ನೃತ್ಯ ಸೃಷ್ಟಿ, ಸ್ಥಿತಿ ಮತ್ತು ಲಯದ ಚಕ್ರವನ್ನು ಪ್ರತಿನಿಧಿಸುತ್ತದೆ. ಶಿವನ ನೃತ್ಯವು ಕೇವಲ ಸಂಹಾರವಲ್ಲ; ಅದು ಪರಿವರ್ತನೆ. ಹಳೆಯ ರೂಪಗಳು ಮುರಿದು ಹೊಸ ರೂಪಗಳು ಹುಟ್ಟುತ್ತವೆ. ಇದೇ ರೀತಿ ಯಾಗಿ, ಈಗ ನೊಬೆಲ್ ಪಡೆದ ಆಗಿಯನ್ ಮತ್ತು ಹೋಯಿಟ್ ಅವರ ‘ಕ್ರಿಯೇಟಿವ್ ಡಿಸ್ಟ್ರಕ್ಷನ್’ ಎಂಬ ಸಿದ್ಧಾಂತವು ಹೊಸ ಆವಿಷ್ಕಾರಗಳು, ಹಳೆಯ ಉದ್ಯಮಗಳು ಮತ್ತು ತಂತ್ರಜ್ಞಾನಗಳನ್ನು ನಾಶ ಮಾಡಿ ಹೊಸ ಪ್ರಗತಿಗೆ ದಾರಿ ಮಾಡಿಕೊಡುತ್ತವೆ ಎಂದು ಹೇಳುತ್ತದೆ.

ಈ ಎರಡೂ ಸಂದರ್ಭಗಳಲ್ಲಿ ಸಂಹಾರವು ನಾಶವಲ್ಲ, ಅದು ಪುನರುತ್ಪತ್ತಿಯ ರೂಪ. ರುದ್ರ ತಾಂಡವ ಹಳೆಯದನ್ನು ಅಳಿಸಿ ಹೊಸದಕ್ಕೆ ದಾರಿ ಮಾಡಿಕೊಡುವ ಕಥೆ. ಶಿವನ ಡಮರು ನಾದ ದಂತೆ, ನವೀನತೆಯು ಸೃಷ್ಟಿಯ ಬೀಜವನ್ನು ಬಿತ್ತುತ್ತದೆ.

ಶಿವನ ಕೈಯಲ್ಲಿರುವ ಅಗ್ನಿಯು ಹಳೆಯ ಅಜ್ಞಾನವನ್ನು ನಾಶ ಮಾಡಿ ಹೊಸ ಬೆಳಕನ್ನು ತಂದಂತೆ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೂಡ ಹಳೆಯದನ್ನು ಕರಗಿಸಿ ಹೊಸ ಮಾರ್ಗಗಳನ್ನು ತೆರೆಯು ತ್ತವೆ. ಅರ್ಥಶಾಸ್ತ್ರದ ದೃಷ್ಟಿಯಲ್ಲಿ, ಆವಿಷ್ಕಾರಕಾರರು ಸ್ವತಃ ಶಿವನಂತೆಯೇ ಹಳೆಯ ವ್ಯವಸ್ಥೆ ಯನ್ನು ಮುರಿದು ಹೊಸ ಭವಿಷ್ಯವನ್ನು ನಿರ್ಮಿಸುವುದು ಎಂದರ್ಥ. ಆಗಿಯನ್ ಮತ್ತು ಹೋಯಿಟ್ ಅವರ ಸಂಶೋಧನೆ ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯ ತತ್ವಗಳನ್ನು ವಿವರಿಸುತ್ತದೆ.

ಆರ್ಥಿಕ ತಜ್ಞ ಮೊಕಿಯರ್ ಅದರ ಸಾಂಸ್ಕೃತಿಕ ಮೂಲವನ್ನು ಗುರುತಿಸಿಜ್ಞಾರೆ. ಅವರು ಶಾಶ್ವತ ಪ್ರಗತಿಯ ತುರ್ತು ಮೂರು ಅಂಶಗಳನ್ನು ತಮ್ಮ ಸಂಶೋಧನೆಯಲ್ಲಿ ಸೂಚಿಸಿಜ್ಞಾರೆ: ೧) ಉಪಯುಕ್ತ ಜ್ಞಾನ ಸಂಸ್ಕೃತಿ. ಇದು ನವೀನತೆ, ಸಂಶೋಧನೆ ಮತ್ತು ತತ್ತ್ವಾತ್ಮಕ ತಿಳಿವಳಿಕೆಯನ್ನು ಉತ್ತೇಜಿಸುತ್ತದೆ. ೨) ತಾಂತ್ರಿಕ ನಿಪುಣತೆ. ಇದು ತಂತ್ರeನ, ಕೈಗಾರಿಕಾ ತಂತ್ರಗಳು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸುತ್ತದೆ. ೩) ಮುಕ್ತ ಸಂಸ್ಥಾತ್ಮಕ ಪರಿಸರ. ಇದು ನವೀನತೆ, ಪ್ರಾಯೋಗಿಕ ಪ್ರಯತ್ನ ಮತ್ತು ಸ್ವತಂತ್ರ ಚಿಂತನೆಗೆ ಅವಕಾಶ ನೀಡುತ್ತದೆ.

ಈ ಮೂರೂ ಅಂಶಗಳು ಸಮನ್ವಯವಾಗಿ ಕೆಲಸ ಮಾಡಿದಾಗ ಮಾತ್ರ ಶಾಶ್ವತ, ಸ್ಥಿರ ಮತ್ತು ಸಮೃದ್ಧ ಬೆಳವಣಿಗೆ ಸಾಧ್ಯವಾಗುತ್ತದೆ. ಸಮುದ್ರಮಂಥನ ಕಥೆಯು ಸಹ ಇದನ್ನೇ ಹೋಲುತ್ತದೆ. ವಿಷದ ನಂತರ ಅಮೃತ ಅಂದರೆ ಪ್ರಗತಿಗಯು ಮೊದಲು ಸಮಸ್ಯೆಯನ್ನು ಉಂಟುಮಾಡುತ್ತದೆ. ಕೊನೆಗೆ ಅದೇ ನಮ್ಮನ್ನು ಉದ್ಧಾರ ಮಾಡುತ್ತದೆ.

ಅರಿವು (ಜ್ಞಾನ), ಕ್ರಿಯೆ (ಕರ್ಮ) ಮತ್ತು ನೀತಿ (ಧರ್ಮ) ಶಿವನ ತಾಂಡವದ ಮೂಲತತ್ತ್ವವೂ ಹೌದು. ಜ್ಞಾನವು ಕ್ರಿಯೆ ಯಾಗಿ ಪರಿವರ್ತನೆಯಾಗದಿದ್ದರೆ ಅಥವಾ ಕ್ರಿಯೆಗೆ ಧರ್ಮದ ಮಾರ್ಗದರ್ಶನ ವಿಲ್ಲದಿದ್ದರೆ, ಅಸ್ಥಿರತೆ ಉಂಟಾಗುತ್ತದೆ. ತಜ್ಞ ಮೊಕಿಯರ್ ಹೇಳುವಂತೆ, ತಂತ್ರಜ್ಞಾನ ಇರುವುದು ಮಾತ್ರ ಸಾಕಾಗುವುದಿಲ್ಲ; ಬದಲಾವಣೆಯನ್ನು ಸ್ವೀಕರಿಸುವ ಮತ್ತು ಕಲಿಕೆಯನ್ನು ಗೌರವಿಸುವ ಸಂಸ್ಕೃತಿ ಸಮಾಜಕ್ಕೆ ಬೇಕು.

ಇದು ಭಾರತೀಯ ಸಮಾಜದ ನಿಲುವಿಗೆ ಒಪ್ಪುತ್ತದೆ. ನೈತಿಕತೆ ಮತ್ತು ಕೌಶಲದ ಸಮ್ಮಿಲನವೇ ನಿಜವಾದ ಪ್ರಗತಿ. ಪೌರಾಣಿಕ ಕಥೆಗಳಲ್ಲಿ ಅಥವಾ ಆರ್ಥಿಕ ಸಿದ್ಧಾಂತಗಳಲ್ಲಿ, ವಿನಾಶವು ಅಂತ್ಯ ವಲ್ಲ. ಅದು ಪುನರುತ್ಪತ್ತಿಯ ಪ್ರಾರಂಭ. ಶಿವನ ನೃತ್ಯವು ಅಜ್ಞಾನ ಮತ್ತು ಜಡತೆಯನ್ನು ಕರಗಿಸು ತ್ತದೆ.

ನೊಬೆಲ್ ಪುರಸ್ಕೃತರು ಹೇಳುವಂತೆ, ಆರ್ಥಿಕತೆಯೂ ಹಳೆಯ ಮೋನೋಪಲಿ, ಅಸಮರ್ಥ ಆಡಳಿತ ಮತ್ತು ಅಪ್ರಸ್ತುತ ವ್ಯವಸ್ಥೆಗಳನ್ನು ಮುರಿಯದಿದ್ದರೆ ಆರ್ಥಿಕ ಬೆಳವಣಿಗೆ ಕುಸಿಯುತ್ತದೆ. ಬದಲಾವಣೆ ಸ್ವೀಕರಿಸದ ಆರ್ಥಿಕತೆಗಳು ಶಕ್ತಿ ಕಳೆದುಕೊಳ್ಳುತ್ತವೆ.

ಈ ವರ್ಷದ ಆರ್ಥಿಕ ನೊಬೆಲ್ ಪ್ರಶಸ್ತಿಯು ನವೀನತೆ ಮತ್ತು ಒಳಗೊಳ್ಳುವಿಕೆಯ ನಡುವಿನ ಸೂಕ್ಷ್ಮ ಸಂಬಂಧವನ್ನೂ ತೋರಿಸುತ್ತದೆ. ಹೊಸ ತಂತ್ರಜ್ಞಾನಗಳು ಬಂದಾಗ ಕೆಲವರು ಲಾಭ ಪಡೆಯು ತ್ತಾರೆ. ಇನ್ನು ಕೆಲವರು ಹೊರಗುಳಿಯುತ್ತಾರೆ. ಈ ಬದಲಾವಣೆಯ ಮಧ್ಯೆ ಸಮತೋಲನ ಕಾಯ್ದು ಕೊಳ್ಳುವುದು ಮುಖ್ಯ. ನವೀಕರಣವು ವಿಲಕ್ಷಣರನ್ನು ಮತ್ತಷ್ಟು ದೂರ ಮಾಡಬಾರದು.

ಇದೇ ತಾಂಡವದ ಸಂದೇಶವೂ ಹೌದು. ಸೃಷ್ಟಿ ಮತ್ತು ಸಂಹಾರದ ನಡುವಿನ ಸಮತೋಲನವೇ ಸ್ಥಿರತೆ. ಶಿವನ ತಾಂಡವವು ಕೇವಲ ದೇವತೆಯ ನೃತ್ಯವಲ್ಲ, ಅದು ಸೃಷ್ಟಿ, ಸ್ಥಿತಿ, ವಿನಾಶ ಮತ್ತು ಪರಿವರ್ತನೆಯ ಸಾಂಕೇತಿಕ ಪ್ರತೀಕವಾಗಿದೆ.

ತಾಂಡವದ ಪ್ರತಿ ಚಲನೆಯಲ್ಲೂ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ವಿಚಾರಗಳಿಗೆ ಸಂಬಂಧಿತ ಅರ್ಥವನ್ನು ಕಾಣಬಹುದು. ಉದಾಹರಣೆಗೆ, ಅಗ್ನಿಯು ಶಿವನ ತಾಂಡವದಲ್ಲಿ ಶುದ್ಧೀಕರಣ ಮತ್ತು ಪರಿವರ್ತನೆಯ ಸಂಕೇತವಾಗಿದ್ದು, ಆರ್ಥಿಕ ದೃಷ್ಟಿಯಿಂದ ಇದು ನವೀನತೆ ಮತ್ತು ಹಳೆಯ ಅಸಮರ್ಪಕ ವ್ಯವಸ್ಥೆಗಳ ವಿನಾಶವನ್ನು ಸೂಚಿಸುತ್ತದೆ. ಹಳೆಯ ಆವಿಷ್ಕಾರ ಮತ್ತು ನಿಯಮಗಳನ್ನು ಕರಗಿಸಿ ಹೊಸ ಚೇತನ ಹಾಗೂ ಆರ್ಥಿಕ ಪ್ರಗತಿಯ ಹಾದಿಯನ್ನು ತೆರೆಯುವುದು ಅಗತ್ಯವೆಂದು ಸೂಚಿಸುತ್ತದೆ.

ಡಮರು (ಸೃಷ್ಟಿಯ ನಾದ) ಜ್ಞಾನ ಮತ್ತು ಸಂಶೋಧನೆಯ ಸಂಕೇತವಾಗಿದೆ. ಆರ್ಥಿಕವಾಗಿ ಇದು ಹೊಸ ಆವಿಷ್ಕಾರಗಳು, ಸಂಶೋಧನೆ ಮತ್ತು ವಿeನದಿಂದ ಪ್ರಗತಿಯನ್ನು ರೂಪಿಸುವ ಶಕ್ತಿಯ ಪ್ರತೀಕವಾಗಿದೆ. ಶಿವನ ಎತ್ತಿದ ಕಾಲು ಮೋಕ್ಷದ ಸಂಕೇತವಾಗಿ, ಶಿಕ್ಷಣ ಮತ್ತು ಮುಕ್ತತೆಯ ಮೂಲಕ ವ್ಯಕ್ತಿ, ಸಮಾಜ ಮತ್ತು ಆರ್ಥಿಕತೆಯ ಬೆಳವಣಿಗೆಯನ್ನು ಸೂಚಿಸುತ್ತದೆ.

ಇದು ಸಂಸ್ಕೃತಿಯ, ತಾಂತ್ರಿಕ ಸಾಮರ್ಥ್ಯದ ಮತ್ತು ಮಾನವ ಸಂಪನ್ಮೂಲದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಕಾಲಡಿಯಲ್ಲಿ ಕುಸಿದ ದೈತ್ಯನು ಅಜ್ಞಾನ ಮತ್ತು ಪಾಪದ ಸಂಕೇತ. ಅಂದರೆ ಹಳೆಯ ಕಾಲದ ಚಿಂತನೆಗಳು. ಇದು ಬದಲಾವಣೆಗೆ ವಿರೋಧಿಸುವ ಜಡ ಮತ್ತು ಅಸಮ ರ್ಪಕ ವ್ಯವಸ್ಥೆಗಳನ್ನು ಪ್ರತಿನಿಧಿಸುತ್ತದೆ. ಆರ್ಥಿಕವಾಗಿ ಹಳೆಯ ವ್ಯವಸ್ಥೆಗಳನ್ನು ಬದಲಾಯಿಸದೆ ಇರಿಸಿಕೊಳ್ಳುವುದು ಪ್ರಗತಿಗೆ ಅಡ್ಡಿಯಾಗುತ್ತದೆ.

ಅಗ್ನಿವಲಯ, ಅರ್ಥಾತ್ ಪ್ರಭಾಮಂಡಲವು ಬ್ರಹ್ಮಾಂಡ ಚಕ್ರದ ಸಂಕೇತವಾಗಿ, ನಿರಂತರ ನವೀನತೆಯ ಚಕ್ರವನ್ನು ಸೂಚಿಸುತ್ತದೆ. ಆರ್ಥಿಕತೆಯಲ್ಲಿ ಇದು ಸದಾ ಸುಧಾರಣೆ, ನವೀನತೆ ಮತ್ತು ಪರಿವರ್ತನೆಯ ಮೂಲಕ ಸದೃಢತೆ ಹಾಗೂ ಸಮೃದ್ಧಿಯನ್ನು ಪಡೆಯಲು ಅಗತ್ಯವೆಂದು ಪ್ರತಿ ಬಿಂಬಿಸುತ್ತದೆ. ಶಿವನ ತಾಂಡವದ ಪ್ರತಿ ಸಂಕೇತವೂ ಆರ್ಥಿಕ ಚಿಂತನೆಗೆ ಪಾಠ ನೀಡುತ್ತದೆ. ಹಳೆಯದನ್ನು ಶೋಧಿಸಿ, ಜ್ಞಾನ ಮತ್ತು ನವೀನತೆ ಯಿಂದ ಹೊಸ ವ್ಯವಸ್ಥೆಗಳನ್ನು ರೂಪಿಸಬೇಕು; ಅಜ್ಞಾನವನ್ನು ನಾಶಗೊಳಿಸಿ ಮುಕ್ತತೆ, ಶಿಕ್ಷಣ ಮತ್ತು ಪರಿವರ್ತನೆಯ ಮೂಲಕ ಸದೃಢ, ಸಮೃದ್ಧ ಆರ್ಥಿಕ ವ್ಯವಸ್ಥೆ ನಿರ್ಮಿಸಬೇಕು.

ಇದೇ ತಾಂಡವವು ಸೃಷ್ಟಿ ವಿನಾಶದಲ್ಲಿ ಆಧುನಿಕ ಆರ್ಥಿಕ ತತ್ತ್ವಗಳನ್ನು ಕಾಣಬೇಕು. ಪ್ರಾಚೀನ ಭಾರತೀಯ ತತ್ವಜ್ಞಾನ ಮತ್ತು ಆಧುನಿಕ ಆರ್ಥಿಕ ವಿಜ್ಞಾನ ಒಂದೇ ಸತ್ಯವನ್ನು ಬೇರೆ ಭಾಷೆಯಲ್ಲಿ ಹೇಳುತ್ತಿವೆ. ಭಾರತದ 1991ರ ಆರ್ಥಿಕ ಸ್ಥಿತಿ ತಾಂಡವ ಕಥೆಯನ್ನೇ ಹೋಲುತ್ತಿತ್ತು. ಲೈಸೆನ್ಸ್ ರಾಜ್ ವ್ಯವಸ್ಥೆ ಹೋಗಿ ಆರ್ಥಿಕ ಉದಾರೀಕರಣ ಬಂತು. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಈ ಸಂದೇಶ ಬಹು ಮುಖ್ಯ: ಬೆಳವಣಿಗೆಯು ಕೇವಲ ಹಣಕಾಸು ಅಥವಾ ಯೋಜನೆಗಳಿಂದ ಅಲ್ಲ, ಹೊಸದನ್ನು ಒಪ್ಪಿಕೊಳ್ಳಬೇಕು. ‌

ನವೀನತೆಯ ಶಕ್ತಿ ಮುಖ್ಯ. ಅದು ಗ್ರಾಮೀಣ ಸಮುದಾಯದಲ್ಲಿರಲಿ, ಅಥವಾ ತಂತ್ರಜ್ಞಾನ ಕೇಂದ್ರ ದಲ್ಲಿರಲಿ. ಹೊಸತನ ನಿಜವಾದ ಪ್ರಗತಿಯ ಎಂಜಿನ್. ಶಿವನ ತಾಂಡವ ಅಸ್ತವ್ಯಸ್ತ ನೃತ್ಯವಲ್ಲ; ಅದು ತಾಳದ, ನಿಯಮದ, ಶ್ರುತಿಯ ನೃತ್ಯ. ಆವಿಷ್ಕಾರ ಮತ್ತು ಪ್ರಗತಿಯೂ ಹಾಗೆಯೇ. ಅವುಗಳಿಗೆ ನೀತಿ, ಸಂಸ್ಥೆ ಮತ್ತು ಮಾನವೀಯ ಮೌಲ್ಯಗಳ ನಿಯಂತ್ರಿತ ರೀತಿ ಬೇಕು.

ನಿಯಂತ್ರಣವಿಲ್ಲದ ವಿನಾಶ ಅನ್ಯಾಯ ಮತ್ತು ಅಸಮಾನತೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಆರ್ಥಿಕ ವ್ಯವಸ್ಥೆಗೂ ಧರ್ಮದ ನೈತಿಕತೆ ಬೇಕು. ಭಾರತ ಈಗ ಜ್ಞಾನಾಧಾರಿತ ಆರ್ಥಿಕತೆ ಯ ದಿಕ್ಕಿನಲ್ಲಿ ಸಾಗುತ್ತಿದೆ. ಇಂಥ ಸಮಯದಲ್ಲಿ ಈ ನೊಬೆಲ್ ಪ್ರಶಸ್ತಿ ಭಾರತಕ್ಕೆ ಮಹತ್ವದ ಪಾಠ ನೀಡುತ್ತದೆ.

ನಿಜವಾದ ಅಭಿವೃದ್ಧಿ ಸ್ಥಿರತೆ ಅಲ್ಲ, ಅದು ಚಲನೆಯಲ್ಲಿರುವ ಒಳಗೊಳ್ಳುವಿಕೆಯ ನವೀಕರಣ. ಕರ್ನಾಟಕದಂಥ ರಾಜ್ಯಗಳಲ್ಲಿ ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ನವೀನತೆಗಳ ಹಾದಿಯಲ್ಲಿ ಈ ತತ್ತ್ವದ ಪ್ರಾಮುಖ್ಯ ಅಪಾರ. ಯಾಂತ್ರೀಕರಣ, ಹವಾಮಾನ ಬದಲಾವಣೆ ಮತ್ತು ಅಸಮಾನತೆಯ ಕಾಲದಲ್ಲಿ, ಶಿವನ ನೃತ್ಯ ನಮಗೆ ನೆನಪಿಸುತ್ತದೆ. ವಿನಾಶವೂ ದಯೆಯಿಂದ, ಸೃಷ್ಟಿಯೂ ಕರುಣೆಯಿಂದ ನಡೆಯಬೇಕು.

ತಜ್ಞರಾದ ಮೊಕಿಯರ್, ಆಗಿಯನ್ ಮತ್ತು ಹೋಯಿಟ್ ಅವರ ಕೆಲಸವು ಶಿವನ ನೃತ್ಯಕ್ಕೆ ವೈeನಿಕ ರೂಪ ನೀಡುತ್ತದೆ. ಜ್ಞಾನ, ಆವಿಷ್ಕಾರ ಮತ್ತು ಬದಲಾವಣೆಯ ಸಮ್ಮಿಲನವೇ ನಿಜವಾದ ಪ್ರಗತಿ. ಇಂದಿನ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಹಳೆಯ ಉದ್ಯೋಗಗಳನ್ನು ಮಾಯಮಾಡಿ ಹೊಸದಕ್ಕೆ ಅವಕಾಶ ಮಾಡಿ ಕೊಡುತ್ತದೆ.

2025ರ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಅಂಕಿಗಳಿಗಲ್ಲ. ಪರಿವರ್ತನೆ ಜಗದ ನಿಯಮ. ಶಿವನ ಪ್ರಭಾ ಮಂಡಲದೊಳಗೆ ನೃತ್ಯ ಮಾಡುವ ನಟರಾಜನಂತೆ, ಆರ್ಥಿಕ ಬೆಳವಣಿಗೆ ನವೀನತೆ, ನೈತಿಕತೆ ಮತ್ತು ಶಾಶ್ವತ ಬದಲಾವಣೆಯ ಲಯದಲ್ಲಿ ಚಲಿಸಿದಾಗ ಮಾತ್ರ ಆರ್ಥಿಕ ಪ್ರಗತಿ ಸಾಧ್ಯ.

(ಲೇಖಕರು ಸಹ-ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)