Ravi Sajangadde Column: ಜಿಎಸ್ʼಟಿ 2.0: ಲಾಭ ಜನರಿಗೆ ತಲುಪಿದೆಯೇ ?
ಜಿಎಸ್‌ಟಿ ದರ ಕಡಿತಗಳು ಜನರ ಮನಸ್ಸು-ಜೇಬಿಗೆ ಸಂತಸ-ಸಂಭ್ರಮ-ಸಮಾಧಾನಗಳನ್ನು ತಂದಿವೆ. ಬಹುತೇಕ ಆಹಾರ ಪದಾರ್ಥಗಳು, ದಿನಬಳಕೆಯ ಅಗತ್ಯ ವಸ್ತುಗಳು, ಇಲೆಕ್ಟ್ರಾನಿಕ್ಸ್, ಆಟೋ ಮೊಬೈಲ್ ಮತ್ತಿತರೆ ಗ್ರಾಹಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸಿ ಶೇ.೫ ಅಥವಾ ಶೂನ್ಯ ತೆರಿಗೆ ವ್ಯಾಪ್ತಿಗೆ ತಂದಿರುವುದು ಕ್ರಾಂತಿಕಾರಿ ಬದಲಾವಣೆ.
-
Ashok Nayak
Oct 25, 2025 9:29 AM
ಕರ ಪ್ರವರ
ರವೀ ಸಜಂಗದ್ದೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕಾಸದ ರಗಳೆಗಳಿಂದಾಗಿ ಉದ್ಭವಿಸಿದ ‘ಭೂ-ರಾಜಕೀಯ’ದ ಅಸ್ಥಿರತೆಗಳ ನಡುವೆಯೂ ಭಾರವು ಆರ್ಥಿಕ ಸ್ಥಿರತೆ ಕಾಯ್ದು ಕೊಂಡಿರುವುದು ಹೆಮ್ಮೆಯ ವಿಚಾರ. ಸರಕಾರದ ಜಿಎಸ್‌ಟಿ ವರಮಾನ ಒಂದಷ್ಟು ಕಡಿತ ಗೊಂಡರೂ, ದೇಶದಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ.
ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, “ದೀಪಾ ವಳಿಯ ಸಂದರ್ಭದಲ್ಲಿ ಹಲವು ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಾರ್ಯಪ್ರವೃತ್ತವಾಗಿದೆ" ಎಂದಿದ್ದರು. ಇದಾದ ಮೂರೇ ವಾರಗಳಲ್ಲಿ ವಿತ್ತ ಸಚಿವರು ಸುದ್ದಿಗೋಷ್ಠಿ ನಡೆಸಿ, ದಸರಾ ಹಬ್ಬದ ಮೊದಲ ದಿನದಿಂದಲೇ ದಿನ ಬಳಕೆಯ ವಸ್ತು ಗಳನ್ನು ಶೇ.೫ರ ಅಥವಾ ಶೂನ್ಯ ತೆರಿಗೆಯ ವ್ಯಾಪ್ತಿಗೆ ತರುವ ‘ಜಿಎಸ್‌ಟಿ 2.0’ ಐತಿಹಾಸಿಕ ನಿರ್ಣಯ ವನ್ನು ಘೋಷಿಸಿ, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದರು.
ಅಂತೆಯೇ ದಸರಾ ವೇಳೆ ದೇಶಾದ್ಯಂತ ಸಾಕಷ್ಟು ವಸ್ತುಗಳು ದಾಖಲೆ ಪ್ರಮಾಣದಲ್ಲಿ ಮಾರಾಟ ಗೊಂಡವು. ಅಲ್ಲಿಗೆ, ನಿರೀಕ್ಷೆಗಿಂತ ಒಂದು ತಿಂಗಳ ಮೊದಲೇ ತೆರಿಗೆ ಕಡಿತದ ಸಡಗರ! ಅಕ್ಡೋಬರ್ 22ಕ್ಕೆ ‘ಜಿಎಸ್‌ಟಿ ೨.೦’ ಜಾರಿಯಾಗಿ ಒಂದು ತಿಂಗಳಾಗಿದೆ.
ಯಾವೆಲ್ಲಾ ಕ್ಷೇತ್ರಗಳು ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ಹೇಗೆಲ್ಲಾ ವರ್ಗಾಯಿಸಿ ದೇಶದ ಜಿಡಿಪಿಗೆ ಪಾಲು ನೀಡಿವೆ ಎಂಬುದನ್ನು ಅವಲೋಕಿಸೋಣ. ಈ ಸಂಬಂಧವಾಗಿ ಕೇಂದ್ರ ಸರಕಾರವು ‘ರಿಪೋರ್ಟ್ ಕಾರ್ಡ್’ ಅನ್ನು ಬಿಡುಗಡೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಜಿಎಸ್‌ಟಿ ಉಳಿತಾಯ ಉತ್ಸವ’ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಹಬ್ಬದ ಉಡುಗೊರೆಯನ್ನು ಜನರ ಮುಂದಿಟ್ಟಿದ್ದೇವೆ.
ಜಿಎಸ್‌ಟಿ ದರ ಕಡಿತಗಳು ಜನರ ಮನಸ್ಸು-ಜೇಬಿಗೆ ಸಂತಸ-ಸಂಭ್ರಮ-ಸಮಾಧಾನಗಳನ್ನು ತಂದಿವೆ. ಬಹುತೇಕ ಆಹಾರ ಪದಾರ್ಥಗಳು, ದಿನಬಳಕೆಯ ಅಗತ್ಯ ವಸ್ತುಗಳು, ಇಲೆಕ್ಟ್ರಾನಿಕ್ಸ್, ಆಟೋ ಮೊಬೈಲ್ ಮತ್ತಿತರೆ ಗ್ರಾಹಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸಿ ಶೇ.೫ ಅಥವಾ ಶೂನ್ಯ ತೆರಿಗೆ ವ್ಯಾಪ್ತಿಗೆ ತಂದಿರುವುದು ಕ್ರಾಂತಿಕಾರಿ ಬದಲಾವಣೆ.
ಇದನ್ನೂ ಓದಿ: Ravi Sajangadde Column: ಉಕ್ಕಿನ ಮಹಿಳೆಗೆ ನೊಬೆಲ್, ಸೊಕ್ಕಿನ ಮನುಷ್ಯನಿಗೆ ಶಾಸ್ತಿ
ಈ ತೆರಿಗೆ ಕಡಿತದಿಂದಾಗಿ ವಸ್ತುಗಳ ಬೆಲೆ ಶೇ.೧೦ ರಿಂದ ೨೦ರಷ್ಟು ಅಗ್ಗವಾಗಿದ್ದು ಗ್ರಾಹಕರಿಗೆ ಭಾರಿ ಲಾಭವಾಗಿದೆ ಮತ್ತು ದೇಶದ ೧೩ ಕೋಟಿ ಜನರ ಜೀವನಮಟ್ಟ ಉನ್ನತೀಕರಿಸಲ್ಪಟ್ಟಂತಾಗಿದೆ" ಎಂದರು. ಅಂದರೆ, ಜಿಎಸ್‌ಟಿ ಕಡಿತದ ಫಲವಾಗಿ ದೇಶದ ಸುಮಾರು ಶೇ.8-9ರಷ್ಟು ಜನರ ಜೀವನ ಮಟ್ಟ ಸುಧಾರಿಸಿದೆ!
ಇದು ನಿಜಕ್ಕೂ ಶ್ಲಾಘನೀಯ ಮತ್ತು ಖುಷಿಯ ವಿಚಾರ. ಕಾಂಗ್ರೆಸ್ ಸರಕಾರವು ಘೋಷಿಸಿದ್ದ, ಸ್ವಾತಂತ್ರ್ಯಾನಂತರದಿಂದಲೂ ಚಾಲ್ತಿಯಲ್ಲಿರುವ ‘ಗರೀಬಿ ಹಟಾವೋ’ ಆಂದೋಲನವು ನಿಜಾರ್ಥ ದಲ್ಲಿ ಸಫಲವಾಗಲು ಕಾಂಗ್ರೆಸ್ಸೇತರ ಸರಕಾರವೇ ಬರಬೇಕಾಯಿತು!
ಜಿಎಸ್‌ಟಿ ಕಡಿತದ ಲಾಭವು ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ. ಇದು ಜನರ ಪಾಲಿನ ಉಳಿತಾಯ ಮಾತ್ರವಲ್ಲ, ದೇಶದ ಆರ್ಥಿಕತೆಯನ್ನು ದೊಡ್ಡ ಮಟ್ಟದಲ್ಲಿ ಬೂಸ್ಟ್ ಮಾಡುವ ಮಹತ್ತರ ಕಾರ್ಯಯೋಜನೆಯೂ ಹೌದು. ಕಂಪನಿಗಳು ತೆರಿಗೆ ಕಡಿತದ ಆಂದೋಲನವನ್ನು ಬೇರೆ ಬೇರೆ ‘ಆಫರ್’ಗಳು, ಆಕರ್ಷಕ ಜಾಹೀರಾತುಗಳ ಮೂಲಕ ಜನರ ಮುಂದಿಟ್ಟು ತಮ್ಮ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಮಾರ್ಗವನ್ನು ಅನುಸರಿಸಿ ಪ್ರಯೋಜನ ಪಡೆದುಕೊಂಡಿದ್ದರ ಜತೆಗೆ, ಗ್ರಾಹಕರಿಗೂ ಸರಕಾರಕ್ಕೂ ಅಧಿಕ ಲಾಭ ಮಾಡಿಸಿವೆ.
ಹಣಕಾಸಿನ ವ್ಯವಹಾರವು ದಾಖಲೆ ಪ್ರಮಾಣದಲ್ಲಿ ಆಗಿರುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ. ದೇಶಾದ್ಯಂತದ ಬೃಹತ್ ಮಾಲ್‌ಗಳು, ಬ್ರ್ಯಾಂಡ್‌ಗಳು, ಆನ್‌ಲೈನ್ ಪೋರ್ಟಲ್‌ಗಳು (ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ) ‘ದರ ಕಡಿತಗೊಂಡ ಡೀಲ್’ಗಳನ್ನು ಜನರ ಮುಂದಿಟ್ಟು ತಂತಮ್ಮ ವ್ಯಾಪಾರಗಳನ್ನು ವೃದ್ಧಿಸಿಕೊಂಡಿವೆ.
‘ಜಿಎಸ್‌ಟಿ ೨.೦’ ಸುಧಾರಣೆಯ ಒಂದು ತಿಂಗಳ ಟ್ರೆಂಡ್ ನೋಡಿದಾಗ, ದೇಶದ ಕುಟುಂಬಗಳ ಮಾಸಿಕ ಖರ್ಚುಗಳು ಸರಾಸರಿ ಶೇ.10-13ರಷ್ಟು ಇಳಿದಿವೆ. ಸ್ಟೇಷನರಿ, ಬಟ್ಟೆ, ಪಾದರಕ್ಷೆ, ಔಷಧಿಗಳಿಗೆ ಮಾಡುವ ವೆಚ್ಚವು ಶೇ.೭-೧೨ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರಕಾರ ಅಂದಾಜಿಸಿದೆ. ಸುಮಾರು 375 ವಸ್ತುಗಳ ಬೆಲೆ ಕಡಿಮೆಯಾಗಿದ್ದು, ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವವಿಮೆ ಪಾಲಿಸಿಗಳ ಮೇಲೆ ಕೋಟ್ಯಂತರ ರುಪಾಯಿ ತೆರಿಗೆ ಹಣ ಉಳಿತಾಯವಾಗಿದೆ.
ಟ್ರ್ಯಾಕ್ಟರ್ ಖರೀದಿಯಲ್ಲಿ 40000 ರುಪಾಯಿ, ಬೈಕ್/ಸ್ಕೂಟರ್ ಮೇಲೆ ಗರಿಷ್ಠ 8000 ರುಪಾಯಿ, ೩೨ ಇಂಚುಗಳಿಗಿಂತ ದೊಡ್ಡ ಟಿವಿಯ ಮೇಲೆ 3500 ರುಪಾಯಿ ಮೊತ್ತವು ಖರೀದಿದಾರಿಗೆ ಉಳಿತಾಯ ವಾಗುತ್ತಿದೆ. ಹವಾನಿಯಂತ್ರಣ ಸಾಧನಗಳ ಮೇಲಿನ ಜಿಎಸ್‌ಟಿ ಕಡಿಮೆಯಾಗಿದೆ. ಸಣ್ಣ ಕಾರುಗಳ ಖರೀದಿದಾರರು 70000 ರುಪಾಯಿಗಳವರೆಗೆ ಉಳಿತಾಯ ಮಾಡಿದ್ದಾರೆ.
“ಈ ಉಳಿತಾಯದ ಉಪಕ್ರಮವು ಬಡವರು, ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದವರ ಕನಸುಗಳನ್ನು ನನಸು ಮಾಡುತ್ತಿದೆ. ಇದು ಜನಸಾಮಾನ್ಯರಿಗೆ ಡಬಲ್ ಬೋನಸ್ ಉಡುಗೊರೆ" ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಂಬದ್ಧ ವ್ಯಾಪಾರ ನೀತಿಗಳು, ಸುಂಕಾಸದ ರಗಳೆಗಳಿಂದಾಗಿ ಉದ್ಭವಿಸಿದ ‘ಭೂ-ರಾಜಕೀಯ’ದ ಅಸ್ಥಿರತೆಗಳ ನಡುವೆಯೂ ಭಾರವು ತನ್ನ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ಸಮಾಧಾನ ಮತ್ತು ಹೆಮ್ಮೆಯ ವಿಚಾರ. ಸರಕಾರದ ಜಿಎಸ್‌ಟಿ ವರಮಾನ ಒಂದಷ್ಟು ಕಡಿತಗೊಂಡರೂ, ದೇಶದಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿರುವುದರಿಂದ ಅದರ ನಕಾರಾತ್ಮಕ ಪರಿಣಾಮ ಹೆಚ್ಚೇನೂ ಆಗಿಲ್ಲ.
ಜಿಎಸ್‌ಟಿ ದರ ಕಡಿತದಿಂದಾಗಿ ವಾಹನ ಮತ್ತು ಇಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಗರಿಷ್ಠ ಮಾರಾಟ ದಾಖಲಾಗಿದೆ; ಹೀರೋ ಮೋಟರ್ಸ್, ಟಾಟಾ ಮೋಟರ್ಸ್, ಹ್ಯುಂಡೈ ಮುಂತಾದ ವಾಹನ ತಯಾರಕ ಮತ್ತು ಮಾರಾಟ ಸಂಸ್ಥೆಗಳು ಜಿಎಸ್‌ಟಿ ಕಡಿತದ ಮೊದಲ ತಿಂಗಳಿನಲ್ಲೇ ಅತಿಹೆಚ್ಚು ಮಾರಾಟ ವನ್ನು ದಾಖಲಿಸಿದ ವರದಿಗಳಿವೆ. ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಕಂಪನಿಯು ದಸರಾ ಸಂದರ್ಭದಲ್ಲಿ ಆರು ನಿಮಿಷಕ್ಕೊಂದು ಕಾರು ಮಾರಿ ದಾಖಲೆ ನಿರ್ಮಿಸಿದೆಯಂತೆ!
ಒಟ್ಟಾರೆಯಾಗಿ ಹೇಳುವುದಾದರೆ, ತೆರಿಗೆ ಕಡಿತವು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿದೆ. ‘ಜಿಎಸ್‌ಟಿ ಕಡಿತಕ್ಕೆ ಅನುಗುಣವಾಗಿ ಕಂಪನಿಗಳು ದರಗಳನ್ನು ಪರಿಷ್ಕರಣೆ ಮಾಡಿಲ್ಲ’ ಎಂಬುದಾಗಿ ಗ್ರಾಹಕ ವ್ಯವಹಾರಗಳ ಇಲಾಖೆಗೆ ಈ ಒಂದು ತಿಂಗಳಲ್ಲಿ 3169 ದೂರುಗಳು ದಾಖಲಾಗಿವೆ. ಈ ಪೈಕಿ 94 ದೂರುಗಳನ್ನು ಪರಿಹರಿಸಲಾಗಿದ್ದು, ಮಿಕ್ಕವನ್ನು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ ರವಾನಿಸಲಾಗಿದೆ.
ಗ್ರಾಹಕರು ಹೆಚ್ಚು ಜಾಗೃತರಾಗಿದ್ದಾರೆ ಎಂಬುದಕ್ಕೆ ಈ ದೂರುಗಳ ಸಂಖ್ಯೆಯೇ ಸಾಕ್ಷಿ. ಯಾವ ಕಂಪನಿಯೂ ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ನುಣುಚಿಕೊಳ್ಳದಂತೆ ನಿಗಾ ವಹಿಸುವ ಅಭಯವನ್ನು ವಿತ್ತ ಸಚಿವರು ನೀಡಿರುವುದು ಗ್ರಾಹಕ-ಸ್ನೇಹಿ ಬೆಳವಣಿಗೆ. ಮಿಕ್ಕಂತೆ, ಮುಂದೆ ನೀಡಲಾಗಿರುವ ಒಂದಷ್ಟು ಅಂಶಗಳ ಕಡೆಗೆ ಗಮನ ಹರಿಸಬೇಕಿದೆ: ಕ್ಷೀಣಿಸುತ್ತಿರುವ ಕೈಮಗ್ಗ ಮತ್ತು ಜವಳಿ ಉದ್ಯಮದ ಮೇಲೆ ಜಿಎಸ್‌ಟಿಯು ಒಂದಿಷ್ಟು ಪ್ರಹಾರ ಮಾಡಿದಂತೆ ಕಾಣುತ್ತಿದೆ.
2500 ರುಪಾಯಿಗಿಂತ ಹೆಚ್ಚಿನ ಬೆಲೆಯ ಕೈಮಗ್ಗ ಮತ್ತು ಜವಳಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.೧೨ರಿಂದ ೧೮ಕ್ಕೆ ಏರಿಸಲಾಗಿದೆ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ, ಈ ತೆರಿಗೆ ಸ್ತರವನ್ನು ಶೇ.೫ರ ವ್ಯಾಪ್ತಿಗೆ ತಂದರೆ, ವಿಶೇಷವಾಗಿ ಕೈಮಗ್ಗ ನೇಕಾರಿಕೆಗೆ ನಿಜಾರ್ಥದಲ್ಲಿ ನೆರವಾಗಬಹುದು.
ಕೈಮಗ್ಗದಲ್ಲಿ ತಯಾರಿಸಿದ ಕಾಂಚಿ, ಬನಾರಸ್, ಧರ್ಮಾವರಂ, ಗದ್ವಾಲ್ ಶೈಲಿಯ ಬಹುತೇಕ ಸೀರೆಗಳ ಬೆಲೆ 2500 ರುಪಾಯಿಗಿಂತ ಹೆಚ್ಚು. ಈ ಸೀರೆಗಳು ಮತ್ತಷ್ಟು ದುಬಾರಿಯಾದರೆ, ಖರೀದಿಸಲು ಮಹಿಳೆಯರು ಹಿಂದೇಟು ಹಾಕಿಯಾರು.
ವೈಯಕ್ತಿಕ ಆರೋಗ್ಯ ಮತ್ತು ಜೀವವಿಮಾ ಪಾಲಿಸಿಗಳನ್ನು ಶೂನ್ಯ ತೆರಿಗೆಯಡಿ ತಂದಂತೆಯೇ, ಗುಂಪು ವಿಮಾ ಪಾಲಿಸಿಗಳನ್ನೂ ಈಗಿರುವ ಶೇ.೧೮ರ ತೆರಿಗೆ ವ್ಯಾಪ್ತಿಯಿಂದ ಶೂನ್ಯ ತೆರಿಗೆ ವ್ಯಾಪ್ತಿಗೆ ತರುವ ಕೆಲಸ ಶೀಘ್ರವಾಗಿ ಆಗಬೇಕು.
ಪೂರಕ ಶಿಕ್ಷಣ ವ್ಯವಸ್ಥೆಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಬಳಸಲಾಗುವ ಐಟಿ ಸೇವೆ, ಸ್ವಚ್ಛತೆ, ಭದ್ರತೆ, ನಿರ್ವಹಣೆ, ಅಭಿವೃದ್ಧಿ ಶುಲ್ಕ ಇತ್ಯಾದಿಗಳ ಮೇಲಿನ ತೆರಿಗೆಯ ದರವನ್ನು ಶೇ.೧೨ರಿಂದ ೧೮ಕ್ಕೆ ಏರಿಸಿರುವುದು ಪೋಷಕರ ಜೇಬಿಗೆ ಹೊರೆಯಾಗಿದೆ. ಇದನ್ನು ಕೂಡ ಶೇ.೫ರ ಸ್ತರಕ್ಕೆ ಇಳಿಸಲು ಕೇಂದ್ರ ಸರಕಾರ ಮನಸ್ಸು ಮಾಡಬೇಕು.
ಕಾರ್ಮಿಕರ ಶುಲ್ಕಗಳ ಮೇಲಿನ ತೆರಿಗೆಯನ್ನು ಶೇ.೧೨ರಿಂದ ೧೮ಕ್ಕೆ ಏರಿಸಿರುವುದರಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಒಂದಿಷ್ಟು ತೊಂದರೆಯಾಗಿದೆ. ಇದನ್ನೂ ಕೇಂದ್ರ ಸರಕಾರ ಗಮನದಲ್ಲಿಟ್ಟುಕೊಂಡು ಸಹಾಯಹಸ್ತ ಚಾಚಬೇಕು.
ಸ್ವಿಗ್ಗಿ, ಝೊಮ್ಯಾಟೋ, ಇನ್‌ಸ್ಟಾಮಾರ್ಟ್, ಬ್ಲಿಂಕ್ ಇಟ್ ಮುಂತಾದ ‘ಇ-ಕಾಮರ್ಸ್’ ಪ್ಲಾಟ್-ರ್ಮ್‌ಗಳು ಒದಗಿಸುವ ವಿತರಣಾ ಶುಲ್ಕದ ಮೇಲಿನ ತೆರಿಗೆ ಶೇ.೧೮ಕ್ಕೆ ಏರಿಕೆಯಾಗಿದೆ. ಹೀಗಾಗಿ ಇಂಥ ವಿತರಣಾ ಸೇವೆಗಳು ದುಬಾರಿಯಾಗಿ ಜನಸಾಮಾನ್ಯರು ಹಿಂದಿಗಿಂತ ಹೆಚ್ಚು ಹಣವನ್ನು ವ್ಯಯಿಸ ಬೇಕಾಗಿ ಬಂದಿದೆ.
ದಿವ್ಯಾಂಗರು ಬಳಸುವ ವೀಲ್ ಚೇರ್, ಬ್ರೈಲ್ ತಂತ್ರಾಂಶ/ಪುಸ್ತಕ, ಶ್ರವಣ ಸಾಧನ, ಕೃತಕ ಅಂಗಗಳ ಮೇಲೆ ಶೂನ್ಯ ತೆರಿಗೆಯಿದ್ದರೂ, ಅವುಗಳ ಬಿಡಿಭಾಗಗಳ ಮೇಲಿನ ಜಿಎಸ್ ಟಿಯನ್ನು ಶೇ.18ಕ್ಕೆ ನಿಗದಿಪಡಿಸಿರುವುದು ಸಮಂಜಸವಲ್ಲ. ಈ ಮೇಲಿನ ಅಂಶಗಳನ್ನೆಲ್ಲಾ ಗಮನಕ್ಕೆ ತಂದುಕೊಂಡು ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ವ್ಯವಸ್ಥಿತವಾಗಿಸಿದರೆ, ‘ಬಚತ್ ಉತ್ಸವ್’ಗಳು ಮುಂದಿನ ದಿನಗಳಲ್ಲೂ ಜನರಿಗೆ ಒಂದಷ್ಟು ಸಮಾಧಾನವನ್ನು ತರುವುದು ದಿಟ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)