ಪ್ರಚಲಿತ
ಡಾ.ಮಂಜುನಾಥ ಜಿ.ಪಾಲವ್ವನಹಳ್ಳಿ
ಈ ಜಗತ್ತು ಅನೇಕ ಯುದ್ಧಗಳನ್ನು ಕಂಡಿದೆ. ಅವುಗಳಲ್ಲಿ ಪ್ರಪಂಚವನ್ನೇ ಬೆಚ್ಚಿ ಬೀಳಿಸಿದ ಎರಡು ಮಹಾಯುದ್ಧಗಳು ನಡೆದಿವೆ. ಎಲ್ಲ ಯುದ್ಧಗಳಲ್ಲಿಯೂ ಸೈನಿಕರು ಮತ್ತು ನಾಗರಿಕರು ಬಲಿಯಾಗಿ ಅಪಾರ ಸಾವು-ನೋವುಗಳನ್ನು ಅನುಭವಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ರಾಷ್ಟ್ರಗಳ ನಡುವಿನ ವೈಮನಸ್ಸು ದಿನೇ ದಿನೆ ಹೆಚ್ಚುತ್ತಿದೆ.
ಯಾವ ರಾಷ್ಟ್ರ ಯಾವಾಗ ಶತ್ರುವಾಗುತ್ತದೆ, ಯಾವಾಗ ಮಿತ್ರವಾಗುತ್ತದೆ ಎಂಬುದನ್ನು ಊಹಿಸು ವುದೂ ಕಷ್ಟವಾಗಿದೆ. ಇದೇ ಸಂಗತಿ ಇರಾನ್-ಇಸ್ರೇಲ್ ಸಂಬಂಧಗಳಲ್ಲಿಯೂ ಸ್ಪಷ್ಟವಾಗಿ ಕಾಣಿಸು ತ್ತದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ರಾಷ್ಟ್ರಗಳು ಇಂದು ಕಟ್ಟಾ ಶತ್ರುಗಳಾಗಿವೆ.
ಒಂದು ಕಾಲದಲ್ಲಿ ರಾಜತಾಂತ್ರಿಕತೆ ಮತ್ತು ಗುಪ್ತಚರ ವಿಷಯಗಳಲ್ಲಿ ಪರಸ್ಪರ ಬೆಂಬಲ ನೀಡು ತ್ತಿದ್ದ ಇರಾನ್ ಮತ್ತು ಇಸ್ರೇಲ್ ಇಂದು ಶತ್ರುಗಳಾಗಿರುವುದು ಇತಿಹಾಸದ ಅತ್ಯಂತ ಅಚ್ಚರಿಯ ತಿರುವುಗಳಲ್ಲಿ ಒಂದಾಗಿದೆ.
ಪರ್ಷಿಯನ್ ಮತ್ತು ಯಹೂದಿ ನಾಗರಿಕತೆಗಳ ನಡುವಿನ ಸಂಬಂಧ ಸಾವಿರಾರು ವರ್ಷಗಳ ಹಿಂದಿನದು. ಪ್ರಾಚೀನ ಪರ್ಷಿಯನ್ ಸಾಮ್ರಾಜ್ಯದ ಕಾಲದಲ್ಲಿ ಯಹೂದಿಗಳಿಗೆ ಆಶ್ರಯ ದೊರೆತಿತ್ತು ಮತ್ತು ಇಸ್ಲಾಮಿಕ್ ಆಳ್ವಿಕೆಯ ನಂತರವೂ ಇಸಹಾನ್ ಹಾಗೂ ಶಿರಾಝ್ ನಗರಗಳಲ್ಲಿ ಯಹೂದಿ ಸಮುದಾಯಗಳು ನೆಮ್ಮದಿಯಿಂದ ಬದುಕುತ್ತಿದ್ದವು. ಇದು ಕೇವಲ ಸಹಿಷ್ಣುತೆ ಮಾತ್ರವಲ್ಲ, ಎರಡು ಪ್ರಾಚೀನ ನಾಗರಿಕತೆಗಳ ನಡುವಿನ ನಿಜವಾದ ಸಹಬಾಳ್ವೆಯಾಗಿತ್ತು.
ಇದನ್ನೂ ಓದಿ: Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ
ಆಧುನಿಕ ಕಾಲದಲ್ಲಿ 1948ರಲ್ಲಿ ಇಸ್ರೇಲ್ ಯಹೂದಿ ರಾಷ್ಟ್ರವೆಂದು ಘೋಷಿಸಿದಾಗ, ಅದನ್ನು ಮೌನವಾಗಿ ಸಮ್ಮತಿಸಿದ ಕೆಲವೇ ಮುಸ್ಲಿಂ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿತ್ತು. ಮೊಹಮ್ಮದ್ ರೆಜಾ ಪಹ್ಲವಿ ಅವರ ಆಳ್ವಿಕೆಯಲ್ಲಿ (1941-1979) ಈ ಎರಡೂ ದೇಶಗಳ ನಡುವೆ ಗಟ್ಟಿಯಾದ ರಾಜತಾಂತ್ರಿಕ ಮತ್ತು ಆರ್ಥಿಕ ಮೈತ್ರಿ ಬೆಳೆದಿತ್ತು.
ಎರಡೂ ದೇಶಗಳು ಅಮೆರಿಕದ ಮಿತ್ರರಾಗಿದ್ದರಿಂದ ಅವರ ಸಹಕಾರ ಇನ್ನಷ್ಟು ಪ್ರಬಲವಾಯಿತು. ಇರಾನ್ ರಹಸ್ಯ ಕೊಳವೆಮಾರ್ಗದ ಮೂಲಕ ಇಸ್ರೇಲ್‌ಗೆ ಶೇ.60ರಷ್ಟು ತೈಲ ಪೂರೈಸುತ್ತಿತ್ತು; ಪ್ರತಿಯಾಗಿ ಇಸ್ರೇಲ್ ಗುಪ್ತಚರ ತರಬೇತಿ, ತಾಂತ್ರಿಕ ಸಹಾಯ ಮತ್ತು ಕೃಷಿಗೆ ನೆರವು ನೀಡುತ್ತಿತ್ತು. ಜತೆಗೆ ಇರಾನಿನ ವಿದ್ಯಾರ್ಥಿಗಳು ಇಸ್ರೇಲ್ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಆದರೆ, ಫೆಬ್ರವರಿ 1979ರಲ್ಲಿ ಅಯಾತೊ ರುಹೊ ಖೊಮೇನಿ ನೇತೃತ್ವದಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿ ಈ ಸಂಬಂಧವನ್ನು ಸಂಪೂರ್ಣವಾಗಿ ಬದಲಿಸಿತು. ಮೊಹಮ್ಮದ್ ರೆಜಾ ಪಹ್ಲವಿ ಅವರ ಆಡಳಿತ ಕೊನೆಗೊಳಿಸಿ ಶಿಯಾ ಧರ್ಮ ಮತ್ತು ಸಾಮ್ರಾಜ್ಯ ವಿರೋಧಿ ತತ್ತ್ವಗಳ ಆಧಾರದ ಮೇಲೆ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಲಾಯಿತು.
ಕೆಲವೇ ದಿನಗಳಲ್ಲಿ ಇರಾನ್-ಇಸ್ರೇಲ್ ನಡುವಿನ ದಶಕಗಳ ಸ್ನೇಹ ಕ್ಷಣಾರ್ಧದಲ್ಲಿ ಮುರಿದು ಬಿತ್ತು. ಇರಾನ್ ಇಸ್ರೇಲ್‌ನ್ನೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಟೆಹ್ರಾನ್‌ನಲ್ಲಿದ್ದ ಇಸ್ರೇಲ್ ರಾಯಭಾರಿ ಕಚೇರಿಯನ್ನು ಪ್ಯಾಲೆಸ್ತೀನ್ ವಿಮೋಚನಾ ಸಂಘಟನೆಗೆ ಹಸ್ತಾಂತರಿಸಲಾಯಿತು ಮತ್ತು ವಿಮಾನ ಮಾರ್ಗಗಳನ್ನು ರದ್ದುಪಡಿಸಲಾಯಿತು.
ಖೊಮೇನಿ ಅಮೆರಿಕವನ್ನು ದೊಡ್ಡ ಸೈತಾನ ಮತ್ತು ಇಸ್ರೇಲ್ ಅನ್ನು ಚಿಕ್ಕ ಸೈತಾನ ಎಂದು ಕರೆಯುತ್ತಾ, ಇಸ್ರೇಲ್ ಅನ್ನು ಅಕ್ರಮ ರಾಷ್ಟ್ರ ಹಾಗೂ ಪಾಶ್ಚಿಮಾತ್ಯ ದಬ್ಬಾಳಿಕೆಯ ಪ್ರತೀಕವೆಂದು ಘೋಷಿಸಿದ. ಪ್ಯಾಲೆಸ್ತೀನಿಯರ ಹೋರಾಟವನ್ನು ಪವಿತ್ರ ಕಾರ್ಯವೆಂದು ಬಿಂಬಿಸಿದರು.
ಇರಾನ್ ಮತ್ತು ಇಸ್ರೇಲ್ ನಡುವಿನ ವೈಮನಸ್ಸಿಗೆ ನಾಲ್ಕು ಪ್ರಮುಖ ಕಾರಣಗಳಿವೆ: ಮೊದಲನೆ ಯದಾಗಿ, ಇರಾನ್ ಇಸ್ಲಾಮಿಕ್ ತತ್ತ್ವದ ಮೇಲೆ ನಿಂತ ರಾಷ್ಟ್ರವಾಗಿದ್ದು ಇಸ್ರೇಲ್ ಯಹೂದಿ ರಾಷ್ಟ್ರ ವಾಗಿರುವ ಧಾರ್ಮಿಕ ಭಿನ್ನತೆ; ಎರಡನೆಯದಾಗಿ, ಇರಾನ್ ಹಮಾಸ್ ಮತ್ತು ಹೆಜ್ಬೊ ಸಂಘಟನೆಗಳ ಮೂಲಕ ಪ್ಯಾಲೆಸ್ತೀನ್ ಪರ ನಿಂತಿರುವ ನೀತಿ, ಇದನ್ನು ಇಸ್ರೇಲ್ ತನ್ನ ಭದ್ರತೆಗೆ ದೊಡ್ಡ ಅಪಾಯ ವೆಂದು ಪರಿಗಣಿಸುತ್ತದೆ; ಮೂರನೆಯದಾಗಿ, ಇರಾನ್ ಸಿರಿಯಾ ಮತ್ತು ಲೆಬನಾನ್‌ನಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಯತ್ನಿಸುತ್ತಿರುವ ಭೌಗೋಳಿಕ-ರಾಜಕೀಯ ಸ್ಪರ್ಧೆ; ನಾಲ್ಕನೆಯದಾಗಿ, ಇರಾನ್‌ನ ಪರಮಾಣು ತಯಾರಿಕೆಯ ಚಟುವಟಿಕೆಯು ಇಸ್ರೇಲ್‌ಗೆ ಭದ್ರತಾ ಆತಂಕವನ್ನು ಹುಟ್ಟಿಸಿದೆ.
1979ರ ನಂತರ ಈ ಸಂಘರ್ಷವು ‘ನೆರಳಿನ ಯುದ್ಧ’ವಾಗಿ ಮುಂದುವರಿಯಿತು. ಅಂದರೆ, ಎರಡೂ ದೇಶಗಳು ನೇರವಾಗಿ ಯುದ್ಧ ಘೋಷಿಸದೆ, ಗುಪ್ತ ದಾಳಿಗಳ, ಸೈಬರ್ ದಾಳಿಗಳ ಮತ್ತು ಗುಪ್ತಚರ ಚಟುವಟಿಕೆಗಳ ಮೂಲಕ ಪರಸ್ಪರ ಹೋರಾಡುತ್ತ ಬಂದಿವೆ. ಇಸ್ರೇಲ, ಇರಾನ್‌ನ ನಟಾಂಝ, ಫೊರ್ದೋ ಮತ್ತು ಇಸಹಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿ, ಅಲ್ಲಿ ನಡೆಯುತ್ತಿದ್ದ ಯುರೇನಿಯಂ ಉತ್ಪಾದನಾ ಕಾರ್ಯವನ್ನು ತಡೆಯಿತು.
ಜತೆಗೆ ಮೊಹ್ಸೆನ್ ಫಖ್ರಿಝಾದೆ (2020), ಮಜಿದ್ ಶಾಹ್ರಿಯಾರಿ ಮತ್ತು ಮಸ್ಸೂದ್ ಅಲಿಮೊಹಮ್ಮದಿ (2010) ಸೇರಿದಂತೆ ಪ್ರಮುಖ ಪರಮಾಣು ವಿಜ್ಞಾನಿಗಳ ಹತ್ಯೆಗಳು ಈ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಿತ್ತು.ಈ ರಹಸ್ಯ ಸಂಘರ್ಷ ಏಪ್ರಿಲ್ 2024ರಲ್ಲಿ ನೇರ ಸಂಘರ್ಷದ ಹಂತಕ್ಕೆ ತಲುಪಿತು. ದಮಾಸ್ಕಸ್‌ನಲ್ಲಿರುವ ಇರಾನಿನ ಕಾನ್ಸುಲೇಟ್ ಮೇಲೆ ನಡೆದ ದಾಳಿಗೆ ಪ್ರತಿಯಾಗಿ
ಇರಾನ್ 300ಕ್ಕೂ ಹೆಚ್ಚು ಡ್ರೋನ್ ಮತ್ತು ಕ್ಷಿಪಣಿಗಳನ್ನು ಇಸ್ರೇಲ್ ಮೇಲೆ ಹಾರಿಸಿತು. ಇದು 1979ರ ನಂತರದ ಮೊದಲ ನೇರ ದಾಳಿ ಆಗಿದ್ದು, ಜಾಗತಿಕ ಮಟ್ಟದಲ್ಲಿ ಆತಂಕವನ್ನು ಉಂಟುಮಾಡಿತು. ಜುಲೈ 2024ರಲ್ಲಿ ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಹಾಗೂ ಬೈರೂತ್‌ನಲ್ಲಿ ಹೆಜ್ಬೊ ನಾಯಕ ಹಸನ್ ನಸ್ರ ಇಸ್ರೇಲ್ ದಾಳಿಗೆ ಬಲಿಯಾದರು.
2025ರ ಜೂನ್‌ನಲ್ಲಿ ಇಸ್ರೇಲ್ ಆಪರೇಶನ್ ‘ರೈಜಿಂಗ್ ಲಯನ್’ ಎಂಬ ಹೆಸರಿನ ಮಹತ್ವದ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಿತು. ಈ ಕಾರ್ಯಾಚರಣೆಯು ಇರಾನ್‌ನ ಪರಮಾಣು ಮೂಲ ಸೌಕರ್ಯ, ಕ್ಷಿಪಣಿ ನೆಲೆಗಳು ಹಾಗೂ ರೆವಲ್ಯೂಷನರಿ ಗಾರ್ಡ್‌ನ ಕಮಾಂಡರ್ ಹೊಸ್ಸೇನ್ ಸಲಾಮಿ ಸೇರಿದಂತೆ ಹಲವಾರು ಸೈನಿಕ ನಾಯಕರನ್ನು ಗುರಿಯಾಗಿಸಿಕೊಂಡಿತು. ಈ ದಾಳಿಗಳು ಇರಾನ್‌ಗೆ ಗಂಭೀರ ಹಾನಿಯನ್ನುಂಟು ಮಾಡಿದವು.
ಗಮನಾರ್ಹ ಸಂಗತಿ ಏನೆಂದರೆ, ಇರಾನ್ ಮತ್ತು ಇಸ್ರೇಲ್ ನಡುವೆ ಯಾವುದೇ ನೇರ ಗಡಿ ಅಥವಾ ಭೂ ವಿವಾದ ಇಲ್ಲ. ಆದರೂ ಇವರ ನಡುವಿನ ಶತ್ರುತ್ವವು ಸಂಪೂರ್ಣವಾಗಿ ವೈಚಾರಿಕ ಮತ್ತು ಭೌಗೋಳಿಕ-ರಾಜಕೀಯ ಕಾರಣಗಳಿಂದ ಉಂಟಾಗಿದೆ. 1948ರಿಂದ 1979ರವರೆಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದ ಈ ಎರಡು ರಾಷ್ಟ್ರಗಳು ಇಂದು ಪರಸ್ಪರರ ಮೇಲೆ ಕ್ಷಿಪಣಿ ಗಳನ್ನು ಹಾರಿಸುತ್ತಿರುವುದು ಮಧ್ಯಪ್ರಾಚ್ಯದ ಅತ್ಯಂತ ದುಃಖಕರ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ.
ಜಗತ್ತಿನಲ್ಲಿ ಯಾವ ರೀತಿಯ ಆಡಳಿತವಿದ್ದರೂ, ಅದು ಶಾಂತಿ ಮತ್ತು ಸಹಬಾಳ್ವೆಯನ್ನು ಉತ್ತೇಜಿಸು ವಂತಿರಬೇಕು. ಯುದ್ಧ, ದ್ವೇಷ ಮತ್ತು ವೈಮನಸ್ಸನ್ನು ಹೆಚ್ಚಿಸುವ ಬದಲು ಮಾನವೀಯ ಮೌಲ್ಯ ಗಳನ್ನು ಕಾಪಾಡುವ ದಾರಿಯಲ್ಲಿ ಸಾಗುವುದು ಅಗತ್ಯವಾಗಿದೆ.
ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧದಲ್ಲಿ, ಇರಾನ್‌ನ ಸರ್ವೋಚ್ಚ ನಾಯಕ ಅಯತೊ ಅಲಿ ಖಮೇನಿ ಹತ್ಯೆಗೀಡಾದ ನಂತರ, ಅವರದೇ ದೇಶದ ಕೆಲವು ನಾಗರಿಕರು ಆ ಸಾವನ್ನು ಸಂಭ್ರಮದಿಂದ ಆಚರಿಸಿದರು ಎಂಬ ಸುದ್ದಿ ಹೊರಬಂದಿದೆ. ಆದ್ದರಿಂದ, ತಮ್ಮದೇ ಜನರು ತಮ್ಮ ನಾಯಕನ ಸಾವನ್ನು ಸಂಭ್ರಮಿಸುವಂತಹ ಆಡಳಿತವನ್ನು ಯಾರೂ ನಡೆಸಬಾರದು.
ಮಾನವ ಸಮಾಜದ ಗುರಿ ನಾಶವಲ್ಲ ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಿರಬೇಕು. ಶಾಂತಿ ತ್ತು ಸಹಕಾರವೇ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಧಾನ ಗುರಿಯಾಗಿರಬೇಕು ಎಂಬುದನ್ನು ಈ ಇತಿಹಾಸದ ಉದಾಹರಣೆಗಳು ಸ್ಪಷ್ಟಪಡಿಸುತ್ತವೆ.