Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ
ರೋಗಿಗಳಲ್ಲಿ ಅಸಾಮಾನ್ಯ ನಿದ್ರಾಹೀನತೆ, ಕಣ್ಣಿನ ವಿಚಿತ್ರ ಚಲನೆಯ ಸಮಸ್ಯೆಗಳು, ಜ್ವರ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲಾರಂಬಿಸಿದವು. ಕೆಲವರು ಮಹಾನ್ ದಡ್ಡ ಶಿಖಾಮಣಿ ಗಳಂತೆ ವರ್ತಿಸಲಾರಂಭಿಸಿದರು. ಹಲವರು ತೀವ್ರ ಮಾನಸಿಕ ಪ್ರಕ್ಷುಬ್ಧತೆ ಅಥವಾ ಮನೋ ವೈಕಲ್ಯಕ್ಕೆ ಒಳಗಾದರು.
-
ಹಿಂದಿರುಗಿ ನೋಡಿದಾಗ
ಇಂದಿಗೆ ಸುಮಾರು 100 ವರ್ಷಗಳ ಹಿಂದೆ, ಜಗತ್ತು ಎರಡು ಭೀಕರ ಪರಿಸ್ಥಿತಿಗಳನ್ನು ಎದುರಿಸು ತ್ತಿತ್ತು. ಮೊದಲನೆಯದು 1914 ರಿಂದ 1918ರವರೆಗೆ ನಡೆದ ವಿಶ್ವದ ಮೊದಲನೆಯ ಮಹಾ ಯುದ್ಧ. ಎರಡನೆಯದು 1918 ರಿಂದ 1920ರವರೆಗೆ ಭಾರತವನ್ನೂ ಒಳಗೊಂಡಂತೆ ಜಗತ್ತನ್ನು ಕಾಡಿದ ‘ಸ್ಪ್ಯಾನಿಶ್ ಫ್ಲೂ’ ಪಿಡುಗು. 1918ರ ಮಾರ್ಚ್‌ನಲ್ಲಿ ‘ಇನ್ʼಫ್ಲುಯೆಂಜ಼- ಟೈಪ್ ಎ’ ಎಂಬ ಎಚ್1 ಎನ್1 ವೈರಸ್ಸು ಬಹುಶಃ ಹಕ್ಕಿಗಳ ಮೂಲದಿಂದ ಮನುಷ್ಯರಿಗೆ ಹರಡಿತು. ಇದರಲ್ಲಿ ಮೂರು ನಮೂನೆಯ ವೈರಸ್‌ಗಳಿದ್ದವು.
ಟೈಪ್-1, ಟೈಪ್-2 ಮತ್ತು ಟೈಪ್-3. ಮೊಟ್ಟ ಮೊದಲ ಪ್ರಕರಣವು ಅಮೆರಿಕದಲ್ಲಿ ಕಂಡುಬಂದಿತು. ಆದರೆ ಈ - ಪಿಡುಗನ್ನು ಮೊದಲ ಬಾರಿಗೆ ಬಹಿರಂಗವಾಗಿ ಗುರುತಿಸಿ, ಅದನ್ನು ನಿಗ್ರಹಿಸುವ ದಿಶೆ ಯಲ್ಲಿ ರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ರೂಪಿಸಿಕೊಂಡದ್ದು ಸ್ಪೇನ್ ದೇಶ. ಹಾಗಾಗಿ ತಪ್ಪು ತಪ್ಪಾಗಿ ಈ ಪಿಡುಗನ್ನು ‘ಸ್ಪ್ಯಾನಿಶ್ -’ ಎಂದು ಕರೆದು ಅಪಚಾರವೆಸಗಿದರು. ಆ ಹೆಸರು ಇಂದಿಗೂ ಉಳಿದುಕೊಂಡು ಬಂದಿದೆ.
1918-19ರ ನಡುವೆ ಜಗತ್ತಿನ 500 ದಶಲಕ್ಷ ಜನರು - ಪೀಡಿತರಾದರು. 1918ರಲ್ಲಿ ಮೂರು ಅಲೆಗಳಲ್ಲಿ ಅದು ಆಕ್ರಮಣವನ್ನು ಮಾಡಿತು. ಅಂದರೆ ಜಗತ್ತಿನ 1/3 ಭಾಗದಷ್ಟು ಜನರಿಗೆ ಸೋಂಕು ಅಂಟಿಕೊಂಡಿತು. ಅವರಲ್ಲಿ ಸುಮಾರು 100 ದಶಲಕ್ಷ ಜನರು ಜೀವವನ್ನು ಬಿಟ್ಟರು. ಅವರಲ್ಲಿ ಹೆಚ್ಚಿನವರು 20-40 ವರ್ಷ ವಯಸ್ಸಿನವರಾಗಿದ್ದರು. ಅದು ಯುದ್ಧದ ಸಮಯವಾಗಿದ್ದ ಕಾರಣ, - ತಡೆಗಟ್ಟುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಜಗತ್ತಿನ ಬಹುಪಾಲು ದೇಶಗಳು ಅಸಮರ್ಥ ವಾಗಿದ್ದವು.
ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿದ್ದವು. ವೈರಸ್ಸು ಶ್ವಾಸಕೋಶಗಳಿಗೆ ಆಘಾತವನ್ನು ಉಂಟು ಮಾಡುತ್ತಿದ್ದ ಕಾರಣ, ದ್ವಿತೀಯಕ ಬ್ಯಾಕ್ಟೀರಿಯ ಸೋಂಕು (ಸೆಕೆಂಡರಿ ಬ್ಯಾಕ್ಟೀರಿಯಲ್ ಇನ್ʼಫೆಕ್ಷನ್) ಶ್ವಾಸಕೋಶಗಳಲ್ಲಿ ಉಗ್ರ ಸ್ವರೂಪದ ಸೋಂಕನ್ನು ಉಂಟು ಮಾಡುತ್ತಿದ್ದವು. ಆಗ ಇನ್ನೂ ಪ್ರತಿ ಜೈವಿಕಗಳನ್ನು (ಆಂಟಿಬಯೋ ಟಿಕ್ಸ್) ಕಂಡುಹಿಡಿದಿರಲಿಲ್ಲ. ಹಾಗಾಗಿ ಜನರು ತರಗೆಲೆ ಯಂತೆ ಉದುರಿ ಸಾಯುವುದು ಅನಿವಾರ್ಯವಾಯಿತು.
ಇದನ್ನೂ ಓದಿ: Dr N Someshwara Column: ನ್ಯೂಗಿನಿಯ ನೂಂಬಾ ನನಗಂತೂ ಬೇಕೇ ಬೇಕು. ನಿಮಗೆ ?!
ನಿದ್ರಾರೋಗ: ನಮ್ಮ ಕಥೆಯು ಮೊದಲನೆಯ ಮಹಾಯುದ್ಧದ ನೆರಳಿನಲ್ಲಿ ಪ್ರಾರಂಭವಾಗುತ್ತದೆ. ಯುರೋಪ್ ಖಂಡವು ಯುದ್ಧ, ಹಸಿವು, ದುಃಖ ಮತ್ತು - ಸಾಂಕ್ರಾಮಿಕ ಪಿಡುಗಿನ ಕಾರಣ ದಣಿದಿತ್ತು. ಇಂಥ ವಿಷಮ ಸ್ಥಿತಿಯಲ್ಲಿ, ಹುಣ್ಣಿನ ಮೇಲೆ ಬರೆ ಎಳೆದಂತೆ, ಅಂದಿನ ವೈದ್ಯಲೋಕ ವನ್ನು ದಿಗ್ಭ್ರಮೆಗೊಳಿಸಿದ, ಕಂಡೂ ಕೇಳರಿಯದ ವಿಚಿತ್ರ ಕಾಯಿಲೆಯೊಂದು ಬಂದೆರಗಿತು.
ರೋಗಿಗಳಲ್ಲಿ ಅಸಾಮಾನ್ಯ ನಿದ್ರಾಹೀನತೆ, ಕಣ್ಣಿನ ವಿಚಿತ್ರ ಚಲನೆಯ ಸಮಸ್ಯೆಗಳು, ಜ್ವರ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲಾರಂಬಿಸಿದವು. ಕೆಲವರು ಮಹಾನ್ ದಡ್ಡ ಶಿಖಾಮಣಿ ಗಳಂತೆ ವರ್ತಿಸಲಾರಂಭಿಸಿದರು. ಹಲವರು ತೀವ್ರ ಮಾನಸಿಕ ಪ್ರಕ್ಷುಬ್ಧತೆ ಅಥವಾ ಮನೋ ವೈಕಲ್ಯ ಕ್ಕೆ ಒಳಗಾದರು. ಇತರರು ತೀವ್ರ ಅನಾರೋಗ್ಯದಿಂದ ಬದುಕುಳಿದರು, ವರ್ಷಗಳ ನಂತರ ಅವರ ದೈಹಿಕ ಚಲನವಲನಗಳು ನಿಧಾನವಾದವು.
ಸ್ನಾಯು ಬಿಗಿತ ಹೆಚ್ಚಾದವು. ದೇಹ ಮತ್ತು ಮನಸ್ಸಿನ ನಡುವೆ ಒಂದು ವಿಚಿತ್ರ ಬಂಧವು ಕಂಡು ಬಂದಿತು. ಇವೆಲ್ಲವನ್ನು ಆಸ್ಟ್ರಿಯನ್ ನರವಿಜ್ಞಾನಿ ಕಾನ್ಸ್ಟಾಂಟಿನ್ ವಾನ್ ಎಕಾನೊಮೊ (1876-1931) ಎಂಬುವವರು ಗುರುತಿಸಿ, ಅವನ್ನು ಪಟ್ಟಿ ಮಾಡಿ ವಿವರಿಸಿದರು. ಅವರು ಇದೊಂದು ‘ನರ ವೈಜ್ಞಾನಿಕ ಭೂತ’ ಎಂದು ಬಗೆದರು. ಆಗ ಯಾರಿಗೂ ಈ ಲಕ್ಷಣಾವಳಿಯನ್ನು ಪೂರ್ಣ ಅರ್ಥ ಮಾಡಿಕೊಳ್ಳಲಾಗಲಿಲ್ಲ. ಇದನ್ನು ‘ವಾನ್ ಎಕೋನೋಮೋ’ ಲಕ್ಷಣಾವಳಿ ಎಂದು ಕರೆದರು.
ಉರಿಯೂತ: ಸ್ಪ್ಯಾನಿಶ್ ಫ್ಲೂ, ಮನುಕುಲ ಕಂಡ ಉಗ್ರ ಪಿಡುಗುಗಳಲ್ಲಿ ಒಂದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಪಿಡುಗಿನಲ್ಲಿ ಅಳಿದುಳಿದು ಬದುಕಿದವರಲ್ಲಿ ಕೆಲವರು ಅನುಭವಿಸಿದ ಒಂದು ವಿಚಿತ್ರ ಕಾಯಿಲೆ ‘ಎನ್ಸೆಫಲೈಟಿಸ್ ಲೆಥರ್ಜಿಕ’ (ಇ.ಎಲ್.) . ‘ಎನ್ಸೆಫಲೋ’ ಎಂದರೆ ‘ಮಿದುಳು’ ಎಂದರ್ಥ. ‘ಐಟಿಸ್’ ಎಂದರೆ ‘ಉರಿಯೂತ’.
- ಕಾರಣ, ವೈರಸ್ಸು ನೇರವಾಗಿ ಸಮಗ್ರ ಮಿದುಳಿನ ಮೇಲೆ ದಾಳಿಯನ್ನು ಮಾಡಿ ಉರಿಯೂತಕ್ಕೆ ಕಾರಣವಾಗಿತ್ತು. ಈ ಸ್ಥಿತಿಯಲ್ಲಿದ್ದ ಮಿದುಳು ‘ಲೆಥರ್ಜಿಕ’ ಎನ್ನುವ ಸ್ಥಿತಿಯನ್ನು ಪ್ರವೇಶಿಸಿತ್ತು. ‘ಲೆಥರ್ಜಿಕಸ್’ ಎಂದರೆ ಜಡತೆ, ಅತಿನಿದ್ರೆ, ತಾಮಸ, ಮಂಪರು ಹೀಗೆಲ್ಲ ವರ್ಣಿಸಬಹುದು. ಇ.ಎಲ್. ಅನ್ನು ಸರಳವಾಗಿ ‘ಮಿದುಳುರಿಯೂತದ ಜಡತೆ’ ಎನ್ನಬಹುದು.
ಏಕೆಂದರೆ ರೋಗಿಯ ಮಿದುಳು ಉರಿಯೂತದ ಕಾರಣ, ತನ್ನ ಸಹಜ ಕೆಲಸ ಕಾರ್ಯಗಳನ್ನು ಬಿಟ್ಟು ಸಂಪೂರ್ಣವಾಗಿ ಜಡವಾಗಿತ್ತು. ಫ್ಲೂ, ಶ್ವಾಸಕೋಶಗಳಿಗೆ ಸಂಬಂಧಿಸಿದ ರೋಗ. ಆದರೆ ಎನ್ಸೆಫ ಲೈಟಿಸ್ ಲೆಥರ್ಜಿಕ ಸಂಪೂರ್ಣವಾಗಿ ಮಿದುಳನ್ನು ಕಾಡುವ ಮಾರಕ ರೋಗವಾಗಿ ಪರಿಣಮಿಸಿತು.
ಲಕ್ಷಣಗಳು: ನಮ್ಮ ಮಿದುಳು ಒಂದು ಸಂಕೀರ್ಣ ನಗರ. ಈ ನಗರದ ಕೇಂದ್ರ ಎಂದರೆ ಎಂದರೆ ನಡುಮಿದುಳು (ಮಿಡ್ ಬ್ರೈನ್) ಮತ್ತು ಬೇಸಲ್ ಗ್ಯಾಂಗ್ಲಿಯಾನ್ ಎಂಬ ಭಾಗಗಳು. ಇಲ್ಲಿರುವ ವಿದ್ಯುತ್ ವ್ಯವಸ್ಥೆಯನ್ನು ವೈರಸ್ ಅಲ್ಲೋಲ ಕಲ್ಲೋಲಗೊಳಿಸಿತು. ಅದರ ಫಲವಾಗಿ ಈ ಎರಡು ಭಾಗಗಳಲ್ಲಿ ಉರಿಯೂತವು ತಲೆದೋರಿ, ಊದಿಕೊಂಡವು. ಇಲ್ಲಿದ್ದಂಥ ವಿದ್ಯುನ್ಮಂಡಲವು (ಇಲೆಕ್ಟ್ರಿಕ್ ಸರ್ಕ್ಯೂಟ್) ‘ಉರಿದು ಬೂದಿಯಾಯಿತು’.
ಹಲವರು ತತ್‌ಕ್ಷಣ ಮರಣಿಸಿದರು. ಹೇಗೋ ಬದುಕುಳಿದ ಕೆಲವರು ‘ಮಿದುಳುರಿಯೋತ್ತರ ಲಕ್ಷಣಾ ವಳಿ’ಗೆ (ಪೋಸ್ಟ್ ಎನ್ಸೆಫಲೈಟಿಕ್ ಸಿಂಡ್ರೋಮ್) ತುತ್ತಾದರು. ಇವರು ತಮ್ಮನ್ನು ತಾವು ‘ಗೃಹ ಬಂಧನ’ದಲ್ಲಿ ಇರಿಸಿಕೊಂಡರು. ಇವರ ರೋಗಲಕ್ಷಣಗಳು ಮೇಲುನೋಟಕ್ಕೆ ಅರ್ಥವಾಗದ ಚಿತ್ರ ವಿಚಿತ್ರ ಲಕ್ಷಣಗಳನ್ನು ತೋರುತ್ತಿದ್ದವು. ನೋಡಿದರೆ ಯಾವುದಾದರೂ ‘ಹಾರರ್ ಮೂವಿ’ಯ ದೃಶ್ಯ ಗಳಂತೆ ಕಾಣುತ್ತಿದ್ದವು.
ಹಿಮಗಟ್ಟಿದ ಶಿಲ್ಪಗಳು: 1910ರ ದಶಕದ ಹೊತ್ತಿಗೆ, - ಪಿಡುಗು, ಹೇಗೆ ಯಾವುದೇ ಮುನ್ಸೂಚನೆ ಯನ್ನು ಕೊಡದೆ, ಆಕ್ರಮಿಸಿತ್ತೋ ಹಾಗೆಯೇ 1930ರ ದಶಕದ ಹೊತ್ತಿಗೆ ಯಾವುದೇ ಸೂಚನೆ ಯಿಲ್ಲದೇ, ನಿಗೂಢವಾಗಿ ಕಣ್ಮರೆಯಾಯಿತು; ಆದರೆ ಅದು ಸಾವಿರಾರು ಇ.ಎಲ್. ರೋಗಿಗಳನ್ನು ಬಿಟ್ಟು ಹೋಯಿತು. ಈ ಬದುಕುಳಿದವರು ‘ಪಾರ್ಕಿನ್ಸನ್ ಕಾಯಿಲೆ’ ಯನ್ನು ಹೋಲುವ ಒಂದು ವಿಚಿತ್ರ ಕಾಯಿಲೆಗೆ ತುತ್ತಾದರು. ಅವರು ದಶಕಗಳವರೆಗೆ ಈ ಕಾಯಿಲೆಯಿಂದ ನಿರಂತರವಾಗಿ ನರಳಲಾರಂಬಿಸಿದರು.
ಮೌಂಟ್ ಕಾರ್ಮೆಲ್ ಆಸ್ಪತ್ರೆಗಳಂಥ ದೀರ್ಘಕಾಲದ ಆರೈಕೆ ಸೌಲಭ್ಯಗಳಿದ್ದ ಕೆಲವು ಕಡೆ ‘ಮರೆತು ಹೋದ ಹಿಮಗಟ್ಟಿದ ಶಿಲ್ಪ’ ಗಳಾಗಿ, ತಮ್ಮ ದೇಹವೆಂಬ ಬಂದೀಖಾನೆಯಲ್ಲಿ ಗೃಹಬಂಧಿ ಗಳಾಗಿದ್ದರು. ಇವರ ಪ್ರಮುಖ ಲಕ್ಷಣಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು.
1 ವಿಲೋಮ ನಿದ್ರಾ-ಜಾಗೃತಿ (ದಿ ಸ್ಲೀಪ್ ವೇಕ್ ಇನ್ವರ್ಶನ್): ಕೆಲವು ರೋಗಿಗಳು ದಿನಗಟ್ಟಲೆ, ಹಗಲೂ ಇರುಳೂ ನಿದ್ರಿಸುತ್ತಿದ್ದರು (ನಿದ್ರಾರೋಗ). ಉಳಿದವರು ದಿನಗಟ್ಟಲೆ, ಹಗಲೂ ಇರುಳೂ ಎಚ್ಚರವಾಗಿರುತ್ತಿದ್ದರು.
2 ನಯನ ಚಕ್ರಭ್ರಮಣ ಬಿಕ್ಕಟ್ಟು (ಆಕ್ಯುಲೋ ಗೈರಸ್ ಕ್ರೈಸಿಸ್): ಇದು ನೋಡುವುದಕ್ಕೆ ಅತ್ಯಂತ ಭಯಾನಕವಾಗಿದ್ದ ರೋಗಲಕ್ಷಣ. ಕಣ್ಣುಗುಡ್ಡೆಗಳು ಇದ್ದಕ್ಕಿದ್ದ ಹಾಗೇ ಮೇಲಕ್ಕೆ ಹೊರಟು ಹೋಗುತ್ತವೆ. ಕಣ್ಣುಗುಡ್ಡೆಗಳು ಇದ್ದ ಸ್ಥಳದಲ್ಲಿ ಬರೀ ಬಿಳಿಯ ಬಣ್ಣ! ನೋಟವು ಹಾಗೆಯೇ ಗಂಟೆ ಗಟ್ಟಲೆ, ದಿನಗಟ್ಟಲೆ, ತಿಂಗಳು ಗಟ್ಟಲೆ ಉಳಿದಿರುತ್ತಿತ್ತು. ಕೆಲವು ಸಲ ಕಣ್ಣುಗುಡ್ಡೆಗಳು ಬಂಡಿಯ ಚಕ್ರದಂತೆ ಇದ್ದಲ್ಲೇ ಗಿರಗಿರನೇ ಸುತ್ತುತ್ತಿದ್ದವು.
3 ಜೀವಂತ ಹಿಮಶಿಲ್ಪಗಳು: ಎ.ಎಲ್. ಪೀಡಿತರ ದೈಹಿಕ ಚಲನವಲನ ಸ್ಥಗಿತವಾಗಿದ್ದವು. ಕುಳಿತ ವರು ಕುಳಿತಕಡೆಯೇ, ಕುಳಿತಿದ್ದ ಹಾಗೆಯೇ ದಿನಗಳು, ವಾರಗಳು, ತಿಂಗಳುಗಳಲ್ಲ, ವರ್ಷಾನುಗಟ್ಟಲೆ ಕುಳಿತೇ ಇರುತ್ತಿದ್ದರು. ಮಲಗಿದವರು ಮಲಗಿದಲ್ಲಿಯೇ ‘ಸ್ಟಾಚೂ ’ ಆಗಿ ಬಿಡುತ್ತಿದ್ದರು. ಚಲನ ವಲನಗಳೂ ಕಿಂಚಿತ್ತೂ ಇರುತ್ತಿರಲಿಲ್ಲ. ಅವರಿಗೆ ಪ್ರಜ್ಞೆಯಿತ್ತು. ಆದರೆ ಜಾಗೃತರಾಗಿರಲಿಲ್ಲ. ಎದುರಿಗೇ ಬೆಂಕಿಬಿದ್ದರೂ ಒಂದು ಮಾತನ್ನೂ ಆಡದೆ ಮಹಾಮೌನದಲ್ಲಿ ಮುಳುಗಿ ಹೋಗು ತ್ತಿದ್ದರು.
4 ವಿಪರ್ಯಾಸಕರ ಚಲನೆ (ಕೈನೀಸಿಯ ಪ್ಯಾರಡಾಕ್ಸಿಕ): ಹೀಗೆ ಕುಳಿತ ಕಡೆಯಲ್ಲಿಯೇ ಮರಗಟ್ಟಿದ ಅಥವಾ ಹಿಮಗಟ್ಟಿದ ಶಿಲ್ಪದಂತಿದ್ದ ಕೆಲವರ ಮುಂದೆ ಹಠಾತ್ತನೆ ಒಂದು ಚೆಂಡನ್ನು ಎಸೆದರೆ, ಅವರು ತಕ್ಷಣವೇ ಅದನ್ನು ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು! ಈ ಅನಿರೀಕ್ಷಿತ ಚಲನೆಯು ನಿಜಕ್ಕೂ ವಿಪರ್ಯಾಸ ಕರವಾಗಿತ್ತು.
ಆಲಿವರ್ ಸ್ಯಾಕ್ಸ್: 1966ರಲ್ಲಿ, ಆಲಿವರ್ ಸ್ಯಾಕ್ಸ್ (1933-2015) ಎಂಬ ಯುವ ಬ್ರಿಟಿಷ್ ನರವಿಜ್ಞಾನಿ ಮೌಂಟ್ ಕಾರ್ಮೆಲ್‌ಗೆ ಬಂದರು. ಸ್ಯಾಕ್ಸ್ ಒಬ್ಬ ಸಾಮಾನ್ಯ ವೈದ್ಯರಾಗಿರಲಿಲ್ಲ; ಅವರು ಕವಿ ಹೃದಯಿಗಳಾಗಿದ್ದರು. ಕಾರ್ಮಲ್ ರೋಗಿಗಳ ಬಗ್ಗೆ ಆಳವಾದ ಸಹಾನುಭೂತಿಯನ್ನು ಹೊಂದಿ ದ್ದರು. ಜತೆಗೆ ಅವರ ‘ಹಿಮ ಶಿಲ್ಪ’ ಸ್ಥಿತಿಯ ಬಗ್ಗೆ ತೀವ್ರಸ್ವರೂಪದ ಕುತೂಹಲವನ್ನು ಹೊಂದಿದ್ದರು. ಈ ಜೀವಂತ ‘ಪ್ರತಿಮೆ’ ಗಳ ಒಳಗೆ ಇನ್ನೂ ಒಬ್ಬ ವ್ಯಕ್ತಿ ಇದ್ದಾನೆಯೇ ಎಂದು ಆಶ್ಚರ್ಯಪಟ್ಟರು. ಈ ರೋಗಿಗಳು ಸಾಮಾನ್ಯ ಚಲನವಲನವನ್ನು ತೋರದಿದ್ದರೂ, ಅವರೆಡೆಗೆ ಒಂದು ಚೆಂಡನ್ನು ಹಠಾತ್ ಎಸೆದಾಗ, ಅವರು ಆ ಚೆಂಡನ್ನು ‘ಹಿಡಿಯಬಲ್ಲರು’ ಎಂಬುದನ್ನು ಗಮನಿಸಿದರು. ಇದರಿಂದ ಅವರ ಇಡೀ ದೇಹವು ಮಂಜುಗಟ್ಟಿದ್ದರೂ, ಆ ಮಂಜುಮೂರ್ತಿಗಳ ಕಾಯಚಲನಾ ವ್ಯವಸ್ಥೆಯು (ಮೋಟಾರ್ ಮೂವ್ಮೆಂಟ್) ಆರೋಗ್ಯಕರವಾಗಿದೆ ಎನ್ನುವುದನ್ನು ಗಮನಿಸಿದರು. ನರಪಥಗಳು ನಾಶವಾಗಿಲ್ಲ; ಅವು ಸರಳವಾಗಿ ‘ಲಾಕ್’ ಆಗಿವೆ ಎನ್ನುವುದನ್ನು ಮನಗಂಡರು.
ಪವಾಡ ಔಷಧ: 1960ರ ದಶಕದ ಹೊತ್ತಿಗೆ, ಮಿದುಳಿನಲ್ಲಿರುವ ‘ಡೋಪಮಿನ್’ ಎನ್ನುವ ನರ ರಾಸಾಯನಿಕದ ಕೊರತೆಯಿಂದ ‘ಪಾರ್ಕಿ ನ್ಸನ್ ಕಾಯಿಲೆ’ಯು ಬರುತ್ತದೆ ಎನ್ನುವುದನ್ನು ವಿಜ್ಞಾನಿ ಗಳು ತಿಳಿದಿದ್ದರು. ಆದರೆ ರೋಗಿಗೆ ನೇರವಾಗಿ ಡೋಪಮಿನ್ ಮಾತ್ರೆಯನ್ನು ನೀಡಲು ಸಾಧ್ಯವಿರ ಲಿಲ್ಲ; ಏಕೆಂದರೆ ಅದು ಮಿದುಳನ್ನು ಆವರಿಸಿರುವ ‘ರಕ್ತ-ಮಿದುಳಿನ ತಡೆಗೋಡೆ’ಯನ್ನು (ಬ್ಲಡ್ ಬ್ರೈನ್ ಬ್ಯಾರಿಯರ್) ದಾಟಿ ಮಿದುಳನ್ನು ತಲುಪಲು ಆಗುತ್ತಿರಲಿಲ್ಲ. ಹಾಗಾಗಿ ‘ಲೆವೊಡೋಪಾ’ (ಎಲ್- ಡೋಪ) ಎಂಬ ಔಷಧವನ್ನು ನೀಡಿದರು.
ಇದು ರಕ್ತಮಿದುಳಿನ ತಡೆಗೋಡೆಯ ಮೂಲಕ ಹಾದು ಮಿದುಳನ್ನು ತಲುಪಿತು. ಮಿದುಳು ಈ ಎಲ್-ಡೋಪವನ್ನು ಬಳಸಿಕೊಂಡು ಡೋಪಮಿನ್ ಅನ್ನು ಸೃಜಿಸಿತು. ಆಗ ಪಾರ್ಕಿನ್ಸನ್ ಕಾಯಿಲೆ ಯ ರೋಗಲಕ್ಷಣಗಳು ಕಡಿಮೆ ಯಾಗಲಾರಂಭಿಸಿದವು. ಹಾಗಾಗಿ ಸ್ಯಾಕ್ಸ್ 1969ರಲ್ಲಿ, ‘ಹಿಮಶಿಲ್ಪ’ ಗಳಿಗೆ ಎಲ್-ಡೋಪ ಔಷಧವನ್ನು ನೀಡಲು ಸಂಬಂಧಪಟ್ಟವರಿಂದ ಪೂರ್ವಾನುಮತಿಯನ್ನು ಪಡೆದರು. ಹಿಮಶಿಲ್ಪ ಗಳಿಗೆ ಎಲ್-ಡೋಪ ಔಷಧವನ್ನು ನೀಡಿದರು.
ಲಿಯೊನಾರ್ಡ್ ಎಲ್: ಸ್ಯಾಕ್ಸ್ ನೀಡಿದ ಎಲ್- ಡೋಪವು ಪವಾಡಸದೃಶವೆಂಬಂತೆ ಹಿಮಶಿಲ್ಪ ಗಳಲ್ಲಿ ಜೀವವನ್ನು ತುಂಬಿತು. ಅವುಗಳಲ್ಲಿ ಅತ್ಯಂತ ಪ್ರಸಿದ್ಧ ಪ್ರಕರಣ, ಲಿಯೊನಾರ್ಡ್ ಎಲ್ ಎಂಬ ವ್ಯಕ್ತಿಯದ್ದಾಗಿತ್ತು. ಲಿಯೊನಾರ್ಡ್ 15 ವರ್ಷ ವಯಸ್ಸಿನಿಂದಲೂ ‘ಹಿಮಶಿಲ್ಪ’ವಾಗಿ ಬದುಕನ್ನು ಕಳೆದಿದ್ದರು.
30 ವರ್ಷಗಳನ್ನು ಮಹಾಮೌನದಲ್ಲಿ ಕಳೆದಿದ್ದರು. ಎಲ್-ಡೋಪವನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ, ಪವಾಡವು ನಡೆಯಿತು. ಲಿ ಯೋನಾರ್ಡ್ ಹಿಮಕೋಟೆಯನ್ನು ಭೇದಿಸಿಕೊಂಡು ಹೊರ ಬಂದರು, ಎದ್ದರು, ನಡೆದರು. ಓಡಿದರು, ಮಾತನಾಡಿದರು, ಹರಟಿದರು. ಕವನವನ್ನು ಬರೆದರು, ಹಾಡಿದರು, ಕುಣಿದು ಕುಪ್ಪಳಿಸಿದರು.
ಬದುಕಿನ ಎಲ್ಲ ಆಯಾಮಗಳು ಅವರಿಗೆ ಅತ್ಯಾಕರ್ಷಕವಾಗಿ ಕಂಡವು. ಓದಲಾರಂಭಿಸಿದರು. ಬಕಾಸುರನಂತೆ ಕೈಗೆ ಸಿಕ್ಕ ಎಲ್ಲ ಪುಸ್ತಕಗಳನ್ನು ನಿರಂತರವಾಗಿ ಓದಿದರು. ತಾತ್ತ್ವಿಕ ವಿಚಾರಗಳು ಅವರನ್ನು ಅತೀವವಾಗಿ ಆಕರ್ಷಿಸಿದವು. ಅದರ ಬಗ್ಗೆ ಆಳವಾದ ಚರ್ಚೆಯಲ್ಲಿ ತೊಡಗಿದರು.
ಎಲ್-ಡೋಪ ಔಷಧವನ್ನು ಸೇವಿಸಿದ ಹಲವು ರೋಗಿಗಳಲ್ಲಿ ರೋಸ್ ಆರ್ ಒಬ್ಬಳು. 1926ರಿಂದ ರೋಸ್ ‘ಹೆಪ್ಪು’ಗಟ್ಟಿದ್ದಳು. 1969 ರಲ್ಲಿ ಅವಳು ‘ಎಚ್ಚರವಾದಾಗ’, ತಾನು ಇನ್ನೂ ಜಾಝ್ ಯುಗ ದಲ್ಲಿ ಇದ್ದೇನೆ ಎಂದು ನಂಬಿದ್ದಳು. ಅವಳ ಪಾಲಿಗೆ ದೇಹವು ಮಾತ್ರವಲ್ಲ, ಕಾಲವೂ ಹಿಮಗಟ್ಟಿತ್ತು. ಅವಳು ತನ್ನ ಫ್ಲಾಪರ್ ಉಡುಪುಗಳನ್ನು ಕೇಳಿದಳು ಮತ್ತು 40 ವರ್ಷಗಳ ಹಿಂದಿನ ಪಾರ್ಟಿಗಳು ಮತ್ತು ಸಂಗೀತದ ಬಗ್ಗೆ ಮಾತನಾಡಿದಳು. ರೋಸ್‌ಗೆ, ತಾನು ಹಿಮಶಿಲ್ಪವಾಗಿ ಕಳೆದ ದಶಕಗಳ ಬಗ್ಗೆ ಕಿಂಚಿತ್ ಅರಿವೇ ಇರಲಿಲ್ಲ. ಅವಳು ಒಂದು ಯುಗದಲ್ಲಿ ಕಣ್ಣುಗಳನ್ನು ಮುಚ್ಚಿದ್ದಳು. ಈಗ ಮತ್ತೊಂದು ಯುಗದಲ್ಲಿ ಕಣ್ಣುಗಳನ್ನು ತೆರೆದಿದ್ದಳು.
ಕರಾಳಮುಖ: ಎಲ್-ಡೋಪ ಔಷಧವನ್ನು ಸೇವಿಸಿದ ಎಲ್ಲರ ಬದುಕು ಲಿಯೋನಾರ್ಡ್ ಹಾಗೆ ಅಥವಾ ರೋಸ್ ಹಾಗೆ ಸಕಾರಾತ್ಮಕವಾಗಿರಲಿಲ್ಲ. 1969ನೆಯ ವರ್ಷದಲ್ಲಿ ಈ ಪ್ರಯೋಗವನ್ನು ಆರಂಭಿಸಿದ್ದರು. ಎಲ್ -ಡೋಪ ಔಷಧವು ಒಗ್ಗದ ಕೆಲವರಲ್ಲಿ ಭಾವನೆಗಳು ಉಕ್ಕಿ ಹರಿಯಲಾ ರಂಭಿಸಿದವಿ. ಅವರು ಕೂಗಾಡಿದರು, ಅರಚಿದರು, ಜಗಳವಾಡಿದರು, ಭ್ರಮಾ ಪೀಡಿತರಾಗಿ ವಿಚಿತ್ರ ವಾಗಿ ವರ್ತಿಸಲಾರಂಭಿಸಿದರು. ಉನ್ಮಾದಕ್ಕೀಡಾದವರು ತಮ್ಮ ಸಹಚರರ ಮೇಲೆ ಹಾಗೂ ಆಸ್ಪತ್ರೆ ಯ ಸಿಬ್ಬಂದಿಯ ಮೇಲೆ ಹಲ್ಲೆಯನ್ನು ಮಾಡಲಾರಂಭಿಸಿದರು. ಇವರನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಯಿತು. ಇತ್ಯಾತ್ಮಕ ಪರಿಣಾಮವನ್ನು ತೋರಿದ ಕೆಲವರಲ್ಲಿ ತಾಳಿಕೆ (ಟಾಲ ರನ್ಸ್) ಬೆಳೆಯಿತು. ಹಾಗಾಗಿ ಅಂಥವರು ಅನಿವಾರ್ಯವಾಗಿ ಔಷಧವನ್ನು ನಿಲ್ಲಿಸಬೇಕಾಯಿತು. ಅವರು ಮತ್ತೆ ಹಿಮಶಿಲ್ಪಗಳಾಗಿ ಪರಿವರ್ತನೆಯಾಗುವುದು ಅನಿವಾರ್ಯವಾಯಿತು.
ಚಿತ್ರಗಳು: 1920ರಿಂದ ಮಹಾಮೌನ ತಪಸ್ಸಿನಲ್ಲಿದ್ದ ಲಿಯೋನಾರ್ಡ್ ಮತ್ತು ರೋಸ್ ಅಂಥವರ ಕಥೆಯು ರಂಗಭೂಮಿ, ಟೆಲಿವಿಷನ್ ಮತ್ತು ಚಿತ್ರರಂಗದ ಹಲವು ನಿರ್ದೇಶಕರನ್ನು ಆಕರ್ಷಿಸಿತು. ಅಲಿವರ್ ಸ್ಯಾಕ್ಸ್ ‘ಅವೇಕನಿಂಗ್’ ಎನ್ನುವ ಪುಸ್ತಕವನ್ನು ಬರೆದರು. ರಾಬಿನ್ ವಿಲಿಯಮ್ಸ್ ಮತ್ತು ರಾಬರ್ಟ್ ದಿ ನೀರೋ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ ‘ಅವೇಕ ನಿಂಗ್’ ಚಿತ್ರವು ಬಿಡುಗಡೆ ಯಾಯಿತು.
ಹೆರಾಲ್ಡ್ ಪಿಂಟರ್ ‘ಎ ಕೈಂಡ್ ಆಫ್ ಅಲಾಸ್ಕ’ ಎಂಬ ನಾಟಕವನ್ನು ಬರೆದರು. 29 ವರ್ಷದ ಹುಡುಗಿಯೊಬ್ಬಳಿಗೆ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ಮಧ್ಯವಯಸ್ಸು. ಅವಳ ಮಧ್ಯವಯಸ್ಸಿನ ದೇಹದಲ್ಲಿ ಯುವತಿಯ ಹಸಿ-ಬಿಸಿ ಮಿದುಳಿನ ಪ್ರಭಾವದ ಸಮರ್ಥ ಚಿತ್ರಣವಾಗಿತ್ತು. ಬಿಬಿಸಿ ಮತ್ತು ಡಿಸ್ಕವರಿ ವಾಹಿನಿಗಳು ಸಾಕ್ಷ್ಯಚಿತ್ರ ಗಳನ್ನು ನಿರ್ಮಿಸಿದವು. ಹೀಗೆ ನಿದ್ರಾರೋಗವು ಪ್ರಬಲ ಮನರಂಜನಾ ಮಾಧ್ಯಮವಾಯಿತು.
ಈಗ ಸ್ಪ್ಯಾನಿಶ್ - ಇಲ್ಲ. ಹಾಗಾಗಿ ಇ.ಎಲ್. ಇಲ್ಲ. ಹಿಮಶಿಲ್ಪಗಳನ್ನು ಇಂದು ನೋಡಲು ಸಾಧ್ಯ ವಿಲ್ಲ. ಆದರೆ ಆ ಎಲ್ಲವನ್ನೂ ಕಾದಂಬರಿಯಲ್ಲಿ, ಚಿತ್ರದಲ್ಲಿ, ನಾಟಕದಲ್ಲಿ, ಸಾಕ್ಷ್ಯ ಚಿತ್ರಗಳಲ್ಲಿ ನೋಡಬಹುದು.