ನೂರೆಂಟು ವಿಶ್ವ
ಇಸ್ರೇಲ್ - ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಇರಾನ್ ಈಗ ಜಾಗತಿಕವಾಗಿ ಮುನ್ನೆಲೆಗೆ ಬಂದಿದೆ. ಅಮೇರಿಕದ ಮಿತ್ರ ದೇಶಗಳೂ ಈ ಯುದ್ಧದಲ್ಲಿ ಭಾಗವಹಿಸುತ್ತಿಲ್ಲ. ವಿಶ್ವದ ಬಲಾಢ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಫ್ರಾನ್ಸ್, ಜಪಾನ್, ಬ್ರಿಟನ್, ಭಾರತ, ಆಸ್ಟ್ರೇಲಿಯಾ ಈ ಯುದ್ಧದಿಂದ ಹೊರಗೆ ಉಳಿದಿವೆ.
ವೆನೆಜುವೆಲಾ ರೀತಿಯಲ್ಲಿ ಇರಾನ್‌ನನ್ನೂ ಮಣಿಸಬಹುದು ಎಂದು ಅಮೆರಿಕ ಭಾವಿಸಿತ್ತು. ಆದರೆ ಈ ಯುದ್ಧ ಅದನ್ನು ಆರಂಭಿಸಿದವರ ಮತ್ತು ಅದನ್ನು ಮುಂದುವರಿಸಿದವರ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಅಮೆರಿಕವನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಇರಾನ್ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ವಿಚಿತ್ರ ಅಂದರೆ ಇರಾನ್ ನಲ್ಲಿ ವಸ್ತುಸ್ಥಿತಿ ಮೇಲ್ನೋಟಕ್ಕೆ ಕಾಣುವಂತೆ ಸರಿ ಇಲ್ಲ. ತಮ್ಮ ದೇಶದ ಮೇಲೆ ದಾಳಿ ನಡೆಯುತ್ತಿರುವಾಗ, ದೇಶಪ್ರೇಮ ಎಂಬ ಒಂದು ಅಂಶ ಇಡೀ ದೇಶವಾಸಿಗಳನ್ನು ಒಂದೆಡೆ ಹಿಡಿದಿಟ್ಟಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ಅಲ್ಲಿನ ಜನ ಅವುಡುಗಚ್ಚಿ ಸುಮ್ಮನೆ ಇzರೆ. ಆದರೆ ಅಸಲಿ ಚಿತ್ರಣವೇ ಬೇರೆ. ಬಹುಸಂಖ್ಯಾಕ ಇರಾನಿಯರು, ಅಲ್ಲಿನ ಸರಕಾರದ ವಿರುದ್ಧವೇ ಇರುವುದು ವಾಸ್ತವ. ಅಷ್ಟಕ್ಕೂ ಇರಾನ್ ಎನ್ನುವುದು ಕೇವಲ ಒಂದು ದೇಶವಲ್ಲ, ಅದು ಒಂದು ಪ್ರಾಚೀನ ನಾಗರಿಕತೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ನೆಲದಲ್ಲಿ ಇಂದು ಏರ್ಪಟ್ಟಿರುವ ರಾಜಕೀಯ ಬಿಕ್ಕಟ್ಟು ಮತ್ತು ಅಲ್ಲಿನ ಜನರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಅದರ ಆಳವಾದ ಇತಿಹಾಸ ಮತ್ತು ಇಂದಿನ ವಾಸ್ತವದ ನಡುವಿನ ವ್ಯತ್ಯಾಸವನ್ನು ಗಮನಿಸಬೇಕು.
ಇದನ್ನೂ ಓದಿ: Vishweshwar Bhat Column: ಯುದ್ಧದ ವಿಷಯ ಬಂದರೆ ಇಸ್ರೇಲ್ ಏಕೆ ಮುಂಗಾಲಪುಟಕಿ ?
ಇರಾನ್ (ಪರ್ಷಿಯಾ) ಜಗತ್ತಿನ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದು. ಎಲಾಮೈಟ್ ಸಾಮ್ರಾಜ್ಯದಿಂದ ಹಿಡಿದು ಸೈರಸ್ ದಿ ಗ್ರೇಟ್ ಸ್ಥಾಪಿಸಿದ ಅಕೆಮೆನಿಡ್ ಸಾಮ್ರಾಜ್ಯದವರೆಗೆ, ಇರಾನ್ ಜಗತ್ತಿಗೆ ಮಾನವ ಹಕ್ಕುಗಳನ್ನು ಮೊದಲು ಘೋಷಣೆ ಮಾಡಿದ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಸೈರಸ್ ಸಿಲಿಂಡರ್ ಇಂದಿಗೂ ಧಾರ್ಮಿಕ ಸಹಿಷ್ಣುತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ.
ಕ್ರಿ.ಪೂ. 3200ರ ಸುಮಾರಿಗೆ ಇಂದಿನ ನೈಋತ್ಯ ಇರಾನ್‌ನಲ್ಲಿ ಎಲಾಮೈಟ್ ನಾಗರಿಕತೆ ಉದಯಿಸಿತು. ಇವರು ಸುಮೇರಿಯನ್ ಮತ್ತು ಅಕ್ಕೇಡಿಯನ್ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಆದರೆ, ಇರಾನ್‌ನ ಇತಿಹಾಸಕ್ಕೆ ಹೊಸ ದಿಕ್ಕು ಸಿಕ್ಕಿದ್ದು ಕ್ರಿ.ಪೂ. 550ರಲ್ಲಿ ಸೈರಸ್ ದಿ ಗ್ರೇಟ್ ಅಕೆಮೆನಿಡ್ ಸಾಮ್ರಾಜ್ಯವನ್ನು ಸ್ಥಾಪಿಸಿದಾಗ.
ಸೈರಸ್ ಕೇವಲ ಒಬ್ಬ ವಿಜೇತನಾಗಿರದೇ, ಒಬ್ಬ ನ್ಯಾಯಬದ್ಧ ಮತ್ತು ಸಹಿಷ್ಣು ಆಡಳಿತ ಗಾರನಾಗಿ ಹೊರಹೊಮ್ಮಿದ್ದ. ಕ್ರಿ.ಪೂ. 539ರಲ್ಲಿ ಸೈರಸ್, ಬ್ಯಾಬಿಲೋನ್ ಅನ್ನು ವಶಪಡಿಸಿ ಕೊಂಡಾಗ, ಅಂದಿನ ಕಾಲಕ್ಕೆ ಅಸಾಧ್ಯವೆನಿಸುವ ನಿರ್ಧಾರವನ್ನು ಕೈಗೊಂಡ. ಅವನು ಬ್ಯಾಬಿಲೋನ್‌ನ ಜನರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ, ಅವರು ತಮಗೆ ಇಷ್ಟ ಬಂದ ಧರ್ಮವನ್ನು ಪಾಲಿಸುವ ಸ್ವಾತಂತ್ರ್ಯ ನೀಡಿದ. ಈ ಘೋಷಣೆಗಳನ್ನು ಅಕ್ಕೇಡಿಯನ್ ಭಾಷೆಯಲ್ಲಿ ಮಣ್ಣಿನ ಸಿಲಿಂಡರ್ ಮೇಲೆ ಕೆತ್ತಲಾಯಿತು, ಇದನ್ನು ಇಂದು ‘ಸೈರಸ್ ಸಿಲಿಂಡರ್’ ಎಂದು ಕರೆಯಲಾಗುತ್ತದೆ.
ಇದನ್ನು ಇತಿಹಾಸಕಾರರು ಜಗತ್ತಿನ ಮೊದಲ ಮಾನವ ಹಕ್ಕುಗಳ ಘೋಷಣೆ’ ಎಂದು ಪರಿಗಣಿಸುತ್ತಾರೆ. ಸೈರಸ್‌ನ ಕಾಲದಲ್ಲಿ ಯಹೂದಿಗಳನ್ನು ಬ್ಯಾಬಿಲೋನ್‌ನ ಸೆರೆಯಿಂದ ಮುಕ್ತಗೊಳಿಸಿ, ಅವರು ಜೆರುಸಲೇಮ್‌ಗೆ ಮರಳಿ ತಮ್ಮ ದೇವಾಲಯವನ್ನು ಪುನರ್ ನಿರ್ಮಿಸಲು ಅನುವು ಮಾಡಿಕೊಟ್ಟಿದ್ದು ಇತಿಹಾಸದ ಅಪರೂಪದ ಘಟನೆ.
ಈ ಕಾರಣಕ್ಕಾಗಿಯೇ ಬೈಬಲ್‌ನಲ್ಲಿ ಸೈರಸ್‌ನನ್ನು ಒಬ್ಬ ಮಹಾನ್ ನಾಯಕನಾಗಿ ಚಿತ್ರಿಸ ಲಾಗಿದೆ. ಅಕೆಮೆನಿಡ್ ಸಾಮ್ರಾಜ್ಯವು ಇಂದಿನ ಭಾರತದ ಗಡಿಯಿಂದ ಹಿಡಿದು ಈಜಿಪ್ಟ್ ವರೆಗೂ ಹರಡಿತ್ತು. ಇಷ್ಟು ದೊಡ್ಡ ಸಾಮ್ರಾಜ್ಯವನ್ನು ಆಳಲು ಸೈರಸ್ ಮತ್ತು ಅವನ ಉತ್ತರಾಧಿಕಾರಿಗಳು ಬಳಸಿದ ಆಯುಧ ಖಡ್ಗ ಮಾತ್ರವಾಗಿರಲಿಲ್ಲ, ಬದಲಿಗೆ ‘ಸಹಿಷ್ಣುತೆ’ ಮತ್ತು ‘ಸ್ವಾತಂತ್ರ್ಯ’ವಾಗಿತ್ತು.
ಇಂದು ನಾವು ಚರ್ಚಿಸುವ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬೇರುಗಳನ್ನು 2500 ವರ್ಷಗಳ ಹಿಂದೆಯೇ ಪರ್ಷಿಯಾದ ಮಣ್ಣಿನಲ್ಲಿ ಬಿತ್ತಲಾಗಿತ್ತು. ಸಾವಿರಾರು ವರ್ಷಗಳ ಈ ಭವ್ಯ ಇತಿಹಾಸವೇ ಇಂದಿನ ಇರಾನಿಯನ್ನರಿಗೆ ಅವರ ಸಾಂಸ್ಕೃತಿಕ ಅಸ್ಮಿತೆಯ ಹೆಮ್ಮೆ ಯಾಗಿದೆ. ಕೇವಲ ಐವತ್ತು ವರ್ಷಗಳ ಆಡಳಿತವು ಈ ಮಹಾನ್ ಪರಂಪರೆಯನ್ನು ಅಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಸೈರಸ್ ಸಿಲಿಂಡರ್ ಒಂದು ಶಾಶ್ವತ ಸಾಕ್ಷಿಯಾಗಿದೆ.
ಪರ್ಷಿಯನ್ ನಾಗರಿಕತೆಯು ಜಗತ್ತಿಗೆ ನೀಡಿದ ಕೊಡುಗೆ ಕೇವಲ ತೈಲ ಪೂರೈಕೆ, ಕಟ್ಟಡ ಗಳಿಗೆ ಅಥವಾ ಯುದ್ಧಗಳಿಗೆ ಸೀಮಿತವಾಗಿಲ್ಲ. ಅದು ಮಾನವನ ಬುದ್ಧಿಶಕ್ತಿ ಮತ್ತು ಆತ್ಮದ ವಿಕಾಸಕ್ಕೆ ಸಂಬಂಧಿಸಿದ್ದು. ವಿಜ್ಞಾನ, ಗಣಿತ, ಕಲೆ ಮತ್ತು ಸಾಹಿತ್ಯದ ಪ್ರತಿ ಕ್ಷೇತ್ರದಲ್ಲೂ ಪರ್ಷಿಯನ್ನರು ಅಳಿಸಲಾಗದ ಮುದ್ರೆ ಒತ್ತಿದ್ದಾರೆ. ಅವರ ಈ ಬೌದ್ಧಿಕ ಶ್ರೀಮಂತಿಕೆಯೇ ಇಂದಿನ ಸಂಕುಚಿತ ಆಡಳಿತದ ವಿರುದ್ಧದ ಅವರ ಮಾನಸಿಕ ಹೋರಾಟಕ್ಕೆ ಪ್ರೇರಣೆ ಯಾಗಿದೆ.
ಕಲೆ, ಸಾಹಿತ್ಯ, ಗಣಿತ ಮತ್ತು ವಿಜ್ಞಾನದಲ್ಲಿ ಪರ್ಷಿಯನ್ನರ ಕೊಡುಗೆ ಅಪಾರ. ಅಲ್-ಖ್ವಾರಿಜ್ಮಿಯಂಥ ಗಣಿತಜ್ಞ, ಒಮರ್ ಖಯ್ಯಾಮ್, ರೂಮಿ, ಸಾದಿಯಂಥ ಕವಿಗಳು ಇಡೀ ವಿಶ್ವಕ್ಕೆ ಪ್ರೀತಿ ಮತ್ತು ತತ್ವಜ್ಞಾನವನ್ನು ಬೋಧಿಸಿದವರು. ಇರಾನಿನ ಇಸ್ಫಹಾನ್‌ನಂಥ ನಗರವನ್ನು ‘ಅರ್ಧ ಜಗತ್ತು’ (ನಿಸ್ಟ್-ಈ-ಜಹಾನ್) ಎಂದು ಕರೆಯುತ್ತಿದ್ದರು.
ಅಷ್ಟು ಸುಂದರವಾದ ನಗರಗಳನ್ನು ನಿರ್ಮಿಸಿದ ಜನರಲ್ಲಿ ಸೌಂದರ್ಯ ಮತ್ತು ಸ್ವಾತಂತ್ರ್ಯ ದ ಅರಿವು ರಕ್ತಗತವಾಗಿ ಬಂದಿದೆ. ಪರ್ಷಿಯನ್ನರ ಬೌದ್ಧಿಕ ಬೇರುಗಳು ತುಂಬಾ ಆಳವಾಗಿವೆ. ಅವರು ಕೇವಲ ಧಾರ್ಮಿಕ ಗ್ರಂಥಗಳನ್ನಷ್ಟೇ ಓದಿದವರಲ್ಲ, ಬದಲಿಗೆ ಖಗೋಳದ ರಹಸ್ಯಗಳನ್ನು ಬಿಡಿಸಿದವರು ಮತ್ತು ಪ್ರೀತಿಯ ತತ್ವಜ್ಞಾನವನ್ನು ಜಗತ್ತಿಗೆ ಹಂಚಿದವರು. ಆಗಿನ ಪರ್ಷಿಯಾ ಅಥವಾ ಈಗಿನ ಇರಾನ್‌ಗೆ ಇಂಥ ಭವ್ಯ ನಾಗರಿಕತೆ, ಇತಿಹಾಸವಿದೆ.
ಇರಾನ್ ದೇಶದ ಇತಿಹಾಸದಲ್ಲಿ 1979ರ ಇಸ್ಲಾಮಿಕ್ ಕ್ರಾಂತಿಯು ಒಂದು ಅತ್ಯಂತ ಪ್ರಭಾವ ಶಾಲಿ ಮತ್ತು ವಿವಾದಾತ್ಮಕ ತಿರುವು. ಸಾವಿರಾರು ವರ್ಷಗಳ ಕಾಲ ಶ್ರೀಮಂತ ನಾಗರಿಕತೆ ಯನ್ನು ಹೊಂದಿದ್ದ ಇರಾನ್, ಕೇವಲ ಈ ಐದು ದಶಕಗಳಲ್ಲಿ ಸಂಪೂರ್ಣ ಬದಲಾಯಿತು.
1979ಕ್ಕಿಂತ ಮೊದಲು ಇರಾನ್ ಅನ್ನು ಮೊಹಮ್ಮದ್ ರೆಜಾ ಶಾ ಪಹ್ಲವಿ ಆಳುತ್ತಿದ್ದ. ಆ ಕಾಲದಲ್ಲಿ ಇರಾನ್ ಮಧ್ಯಪ್ರಾಚ್ಯದ ಅತ್ಯಂತ ಆಧುನಿಕ ದೇಶಗಳಲ್ಲಿ ಒಂದಾಗಿತ್ತು. ಇದನ್ನು ‘ಶ್ವೇತ ಕ್ರಾಂತಿ’ ಎಂದು ಕರೆಯಲಾಗುತ್ತಿತ್ತು. ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಆಗ ಹಿಜಾಬ್ ಧರಿಸುವುದು ಕಡ್ಡಾಯವಾಗಿರಲಿಲ್ಲ. ಯುವತಿಯರು ಆಧುನಿಕ ಉಡುಪುಗಳನ್ನು ಧರಿಸಿ ವಿಶ್ವವಿದ್ಯಾಲಯಗಳಿಗೆ ಹೋಗುತ್ತಿದ್ದರು. ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದವು. ತೆಹ್ರಾನ್ ನಗರವನ್ನು ಮಧ್ಯಪ್ರಾಚ್ಯದ ಪ್ಯಾರಿಸ್ ಎಂದು ಕರೆಯಲಾಗುತ್ತಿತ್ತು.
ಇರಾನ್ ವೇಗವಾಗಿ ಕೈಗಾರಿಕೀಕರಣಗೊಳ್ಳುತ್ತಿತ್ತು ಮತ್ತು ಜಗತ್ತಿನ ಪ್ರಮುಖ ಶಕ್ತಿಗಳೊಂದಿಗೆ ಉತ್ತಮ ಸಂಬಂಧ ಹೊಂದಿತ್ತು. ಶಾ ಆಡಳಿತದ ಮೇಲಿದ್ದ ಭ್ರಷ್ಟಾಚಾರದ ಆರೋಪ ಮತ್ತು ಅತಿಕ್ರಮಣಕಾರಿ ಪಾಶ್ಚಿಮಾತ್ಯೀಕರಣದ ವಿರುದ್ಧ ಜನರು ಪ್ರತಿಭಟಿಸಿದರು. ಶಾ ಆಡಳಿತ ಸಂದರ್ಭದಲ್ಲಿ ಮಹಿಳೆಯರು ಮಿನಿ ಸ್ಕರ್ಟ್ ಧರಿಸುತ್ತಿದ್ದರು, ವಿಶ್ವವಿದ್ಯಾಲಯಗಳು ಮುಕ್ತವಾಗಿದ್ದವು ಮತ್ತು ಇರಾನ್ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿತ್ತು. ಆದರೆ, ಶಾ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ರಹಸ್ಯ ಪೊಲೀಸ್ ಪಡೆ (SAVAK) ಮೂಲಕ ಜನರ ಮೇಲೆ ಹತ್ತಿಕ್ಕುವಿಕೆ ಇತ್ತು.
ಇದರ ವಿರುದ್ಧ ಧಾರ್ಮಿಕ ನಾಯಕ ಅಯತೊ ಖೊಮೇನಿ ನೇತೃತ್ವ ವಹಿಸಿಕೊಂಡರು. ಜನರು ಬದಲಾವಣೆ ಮತ್ತು ಪ್ರಜಾಪ್ರಭುತ್ವದ ಕನಸು ಕಂಡು ಕ್ರಾಂತಿಯಲ್ಲಿ ಪಾಲ್ಗೊಂಡರು. ಆ ಕ್ರಾಂತಿಯ ನಂತರ ಸ್ಥಾಪಿತವಾದದ್ದು ‘ಇಸ್ಲಾಮಿಕ್ ಗಣರಾಜ್ಯ’. ಹೊಸ ಸಂವಿಧಾನವು ಧಾರ್ಮಿಕ ಮುಖಂಡರಿಗೆ (Supreme Leader) ಸರ್ವೋಚ್ಚ ಅಧಿಕಾರವನ್ನು ನೀಡಿತು. ಕಾನೂನುಗಳು ‘ಶರಿಯತ್’ ಆಧಾರಿತವಾದವು, ಇದು ಜನರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಂಕುಶ ಹಾಕಿತು.
ಅಂದರೆ ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಇತಿಹಾಸ ಕೇವಲ 1979ರ ಕ್ರಾಂತಿಯಿಂದ ಶುರುವಾದದ್ದು. ಅಂದರೆ ಸುಮಾರು 47-48 ವರ್ಷಗಳ ಇತಿಹಾಸವಷ್ಟೇ ಈ ಸರಕಾರಕ್ಕಿದೆ. ಅದಕ್ಕಿಂತ ಮೊದಲು ಇರಾನ್ ಬಹಳ ಆಧುನಿಕ ಮತ್ತು ಮುಕ್ತ ದೇಶವಾಗಿತ್ತು. 1979ರಲ್ಲಿ ಬಂದ ಧಾರ್ಮಿಕ ಆಡಳಿತವು ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿತು.
ಸಾವಿರಾರು ವರ್ಷಗಳ ಮುಕ್ತ ಸಂಸ್ಕೃತಿಯನ್ನು ಕೇವಲ ಐದು ದಶಕಗಳ ಈ ಕಟ್ಟುನಿಟ್ಟಾದ ಆಡಳಿತವು ಹತ್ತಿಕ್ಕಲು ಪ್ರಯತ್ನಿಸಿತು. ಇರಾನ್ ದೇಶದ ಇಂದಿನ ಅತಿದೊಡ್ಡ ಸವಾಲು ಮತ್ತು ಬದಲಾವಣೆಯ ಭರವಸೆ ಇರುವುದು ಅಲ್ಲಿನ ಯುವಜನತೆಯಲ್ಲಿ. ಸಾವಿರಾರು ವರ್ಷಗಳ ಇತಿಹಾಸವಿರುವ ಈ ದೇಶದಲ್ಲಿ, ಪ್ರಸ್ತುತ ಇರುವ ಐವತ್ತು ವರ್ಷಗಳ ಹಳೆಯ ಧಾರ್ಮಿಕ ಆಡಳಿತಕ್ಕೂ ಮತ್ತು ಆಧುನಿಕ ಜಗತ್ತಿನ ಕನಸು ಕಾಣುವ ಯುವಜನತೆಗೂ ನಡುವೆ ಒಂದು ದೊಡ್ಡ ಕಂದಕ ನಿರ್ಮಾಣವಾಗಿದೆ.
ಇರಾನ್‌ನ ಜನಸಂಖ್ಯಾ ರಚನೆಯನ್ನು ಗಮನಿಸಿದರೆ, ಆಘಾತಕಾರಿ ಮತ್ತು ಆಶಾದಾಯಕ ಸತ್ಯ ಹೊರಬರುತ್ತದೆ. ಇರಾನ್‌ನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.70ಕ್ಕಿಂತ ಹೆಚ್ಚು ಜನರು 30 ವರ್ಷಕ್ಕಿಂತ ಕೆಳಗಿನವರು. ಅಂದರೆ, ಇಂದಿನ ಬಹುಪಾಲು ಜನಸಂಖ್ಯೆಯು 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಜನಿಸಿದವರು.
ಇವರಿಗೆ ಕ್ರಾಂತಿಯ ಸಿದ್ಧಾಂತಗಳ ಮೇಲೆ ನಂಬಿಕೆಯಿಲ್ಲ, ಬದಲಿಗೆ ಅವರಿಗೆ ತಮ್ಮ ಭವಿಷ್ಯ ದ ಬಗ್ಗೆ ಕಾಳಜಿಯಿದೆ. ಇಂದಿನ ಆಡಳಿತವು ಪ್ರತಿಪಾದಿಸುವ ಹಳೆಯ ಸಂಪ್ರದಾಯ ಗಳು ಈ ಯುವಜನತೆಯ ಆಧುನಿಕ ಆಲೋಚನೆಗಳಿಗೆ ಹೊಂದಿಕೆ ಯಾಗುತ್ತಿಲ್ಲ. ಹಳೆಯ ತಲೆಮಾರಿನ ನಾಯಕರು ಇರಾನ್ ಅನ್ನು ಹೊರಜಗತ್ತಿನಿಂದ ಬೇರ್ಪಡಿಸಲು ಪ್ರಯತ್ನಿಸಿ ದರೂ, ಡಿಜಿಟಲ್ ಕ್ರಾಂತಿಯು ಯುವಜನತೆಗೆ ಜಗತ್ತಿನ ಕಿಟಕಿಗಳನ್ನು ತೆರೆದಿದೆ.
ಇಂದಿನ ಇರಾನಿಯನ್ ಯುವಕ-ಯುವತಿಯರು ಇಂಟರ್ನೆಟ್, ಸಾಮಾಜಿಕ ಜಾಲತಾಣ ಗಳು ಮತ್ತು ವಿಪಿಎನ್ ಬಳಸಿ ಜಗತ್ತಿನಾದ್ಯಂತ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಅವರು ನ್ಯೂಯಾರ್ಕ್, ಲಂಡನ್ ಅಥವಾ ಭಾರತದ ಯುವಕರು ಅನುಭವಿಸುತ್ತಿರುವ ವೈಯಕ್ತಿಕ ಸ್ವಾತಂತ್ರ್ಯವನ್ನು ನೋಡುತ್ತಿದ್ದಾರೆ.
ಪಾಶ್ಚಿಮಾತ್ಯ ಸಂಗೀತ, ಚಲನಚಿತ್ರಗಳು ಮತ್ತು ಫ್ಯಾಷನ್ ಅವರಿಗೆ ಪರಿಚಿತವಾಗಿದೆ. ಜಾಗತಿಕ ಮಟ್ಟದ ಶಿಕ್ಷಣ ಮತ್ತು ಜ್ಞಾನದ ಹಸಿವು ಅವರಿಗೆ ಧಾರ್ಮಿಕ ನಿರ್ಬಂಧಗಳಿಗಿಂತ ಹೆಚ್ಚಿನದನ್ನು ಬಯಸುವಂತೆ ಮಾಡಿದೆ. ಈ ಯುವಜನತೆಗೆ ಬೇಕಾಗಿರುವುದು ಕೇವಲ ಆರ್ಥಿಕ ಸುಧಾರಣೆಯಲ್ಲ, ಬದಲಿಗೆ ವೈಯಕ್ತಿಕ ಸ್ವಾತಂತ್ರ್ಯ.
ಇರಾನ್‌ನ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯವಾಗಿದೆ. ಶಿಕ್ಷಣ ಪಡೆದ ಈ ಯುವತಿಯರು ತಮ್ಮ ಉಡುಪು, ಕೆಲಸ ಮತ್ತು ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಬಯಸುತ್ತಿದ್ದಾರೆ.
ಸರಕಾರವು ಧರ್ಮದ ಹೆಸರಿನಲ್ಲಿ ಹೇರುತ್ತಿರುವ ನಿಯಮಗಳು ಯುವಜನತೆಗೆ ಉಸಿರು ಗಟ್ಟಿಸುವಂತಿದೆ. ಉದ್ಯೋಗದ ಕೊರತೆ ಮತ್ತು ಹಣದುಬ್ಬರವು ಈ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ. ‘ನಮಗೆ ಧರ್ಮದ ಆಡಳಿತ ಬೇಡ, ನಮಗೆ ಉತ್ತಮ, ಆಧುನಿಕ ಜೀವನ ಬೇಕು’ ಎಂಬುದು ಇಂದಿನ ಯುವಕರು ಬೀದಿಗೆ ಬಂದು ಕೂಗುತ್ತಿರುವ ಘೋಷಣೆಯಾಗಿದೆ. ಇಂದಿನ ಇರಾನ್ ಸರಕಾರವು ಕೇವಲ ಒಂದು ಸಣ್ಣ ವರ್ಗದ ಮತ್ತು ಸಶಸ್ತ್ರ ಪಡೆಗಳ ಬೆಂಬಲದ ಮೇಲೆ ನಿಂತಿದೆ.
ಬಹುಸಂಖ್ಯಾತ ಯುವಜನತೆಯ ದೃಷ್ಟಿಯಲ್ಲಿ ಈ ಸರಕಾರವು ಅವರ ಉದ್ಧಾರಕ್ಕಾಗಿ ಬಂದಿದ್ದಲ್ಲ, ಬದಲಿಗೆ ಅವರ ಕನಸುಗಳನ್ನು ಹತ್ತಿಕ್ಕಲು ಬಂದಿದ್ದು ಎಂಬ ಭಾವನೆಯಿದೆ. ಯುವಜನತೆಗೆ ಇರಾನ್‌ನ ಭವ್ಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿದೆಯೇ ಹೊರತು, ಕಳೆದ ಐದು ದಶಕಗಳ ಕಟ್ಟುನಿಟ್ಟಾದ ನಿಯಮಗಳ ಮೇಲಲ್ಲ.
ಸರಕಾರವು ಧರ್ಮದ ಹೆಸರಿನಲ್ಲಿ ಹೇರುತ್ತಿರುವ ನಿರ್ಬಂಧಗಳು, ವಿಶೇಷವಾಗಿ ಮಹಿಳೆಯರ ಮೇಲಿನ ಕಟ್ಟುಪಾಡುಗಳು (ಹಿಜಾಬ್ ಕಡ್ಡಾಯದಂಥ ನಿಯಮಗಳು) ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿವೆ. ‘ಮಹಸಾ ಅಮಿನಿ’ ಎಂಬ ಯುವತಿಯ ಸಾವಿನ ನಂತರ ನಡೆದ ಪ್ರತಿಭಟನೆಗಳು ಇಡೀ ಜಗತ್ತಿನ ಗಮನ ಸೆಳೆದವು.
ಹೆಣ್ಣು, ಜೀವನ, ಸ್ವಾತಂತ್ರ್ಯ (Zan, Zendegi, Azadi) ಎಂಬ ಘೋಷಣೆ ಇಡೀ ಇರಾನ್‌ನ ಪ್ರತಿ ಮನೆಯಲ್ಲೂ ಮೊಳಗಿತು. ಇದು ಕೇವಲ ಒಂದು ಸಣ್ಣ ಪ್ರತಿಭಟನೆಯಲ್ಲ, ಬದಲಿಗೆ ಐವತ್ತು ವರ್ಷಗಳ ಕಾಲ ಅನುಭವಿಸಿದ ದಮನಿತ ಭಾವನೆಗಳ ಸ್ಫೋಟ.
ಇರಾನ್‌ನ ಜನಸಾಮಾನ್ಯರು ಮೂಲತಃ ಅತಿಥಿ ಸತ್ಕಾರ ಬಯಸುವವರು, ಪ್ರೀತಿವಂತರು ಮತ್ತು ಜೀವನ್ಮುಖಿಗಳು. ಅಲ್ಲಿನ ಹಬ್ಬಗಳು (ನೌರೂಜ್), ಅವರ ಸಂಗೀತ ಮತ್ತು ಆಹಾರ ಪದ್ಧತಿಗಳು ಬದುಕಿನ ಬಗ್ಗೆ ಅವರ ಪ್ರೀತಿಯನ್ನು ತೋರಿಸುತ್ತವೆ. ಸರಕಾರ ಎಷ್ಟೇ ಕಟ್ಟು ನಿಟ್ಟಾಗಿದ್ದರೂ, ಜನರು ತಮ್ಮ ಖಾಸಗಿ ಜೀವನದಲ್ಲಿ ಪಾಶ್ಚಿಮಾತ್ಯ ಸಂಗೀತ ಆಲಿಸುತ್ತಾರೆ, ಚಲನಚಿತ್ರಗಳನ್ನು ನೋಡುತ್ತಾರೆ ಮತ್ತು ಪ್ರಜಾಪ್ರಭುತ್ವದ ಕನಸು ಕಾಣುತ್ತಾರೆ. ಆದರೆ, ರಾಜಕೀಯ ನಾಯಕರ ಸ್ವಾರ್ಥ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಅನುಸರಿಸುತ್ತಿರುವ ಹಠಮಾರಿ ಧೋರಣೆಯಿಂದಾಗಿ ಇರಾನ್ ಮೇಲೆ ಸಾಲು ಸಾಲು ಆರ್ಥಿಕ ದಿಗ್ಬಂಧನಗಳು ಬಿದ್ದಿವೆ.
ಇದರ ನೇರ ಪರಿಣಾಮ ಅಲ್ಲಿನ ಜನರ ಮೇಲಾಗುತ್ತಿದೆ. ಪರಿಣಾಮ, ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪದವೀಧರ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಮಧ್ಯಮ ವರ್ಗದ ಜನರು ಬಡತನದ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತಿದ್ದಾರೆ. ಇರಾಕಿನ ಶಿಯಾ ಸಶಸ್ತ್ರ ಗುಂಪು ಹಶದ್ ಅಲ್-ಶಬಿ, ಇರಾನ್ ಸರಕಾರದ ನೇರ ಬೆಂಬಲ ಹೊಂದಿದೆ. ಇರಾನ್‌ನಲ್ಲಿ ಜನಸಾಮಾನ್ಯರು ಸರಕಾರದ ವಿರುದ್ಧ ಬೀದಿಗಿಳಿದಾಗ, ಅಲ್ಲಿನ ಸ್ಥಳೀಯ ಪೊಲೀಸರು ಅಥವಾ ಸೈನಿಕರು ತಮ್ಮದೇ ದೇಶದ ಜನರ ಮೇಲೆ ಗುಂಡು ಹಾರಿಸಲು ಹಿಂಜರಿಯಬಹುದು ಎಂಬ ಭೀತಿ ಯಿಂದ ಸರಕಾರವು ಈ ಇರಾಕಿ ಗುಂಪುಗಳನ್ನು ಕರೆಯಿಸುತ್ತದೆ. ಇವರಿಗೆ ಇರಾನಿಯನ್ ಜನರ ಮೇಲೆ ಯಾವುದೇ ಸಹಾನುಭೂತಿ ಇಲ್ಲ, ಇವರು ಇರಾನಿಯನ್‌ರ ವಿರುದ್ಧ ಅತ್ಯಂತ ಕ್ರೂರವಾಗಿ ವರ್ತಿಸುತ್ತಾರೆ.
ಆಫ್ಘಾನಿಸ್ತಾನದ -ತಿಮಿಯೋನ್ ಬ್ರಿಗೇಡ್ ಮತ್ತು ಪ್ಯಾಲಸ್ಟೀನ್‌ನ ಕೆಲವು ಸಶಸ್ತ್ರ ಗುಂಪು ಗಳನ್ನು ಇರಾನ್ ಸರಕಾರವು ಆರ್ಥಿಕ ಲಾಭದ ಆಮಿಷವೊಡ್ಡಿ ತನ್ನ ರಕ್ಷಣೆಗಾಗಿ ಬಳಸಿ ಕೊಳ್ಳುತ್ತಿದೆ. ಸ್ವದೇಶಿ ಜನರನ್ನೇ ಶತ್ರುಗಳಂತೆ ಕಂಡು, ಅವರನ್ನು ಸಾಯಿಸಲು ಹೊರಗಿ ನವರನ್ನು ಕರೆಸುವುದು, ಇರಾನಿನ ಆಡಳಿತವು ಜನರ ಮೇಲಿನ ವಿಶ್ವಾಸವನ್ನು ಸಂಪೂರ್ಣ ವಾಗಿ ಕಳೆದುಕೊಂಡಿದೆ ಎಂಬುದಕ್ಕೆ ಸಾಕ್ಷಿ.
ಸಾಮಾನ್ಯವಾಗಿ, ಒಂದು ರಾಷ್ಟ್ರದ ಮೇಲೆ ಪರಕೀಯ ದೇಶಗಳು ದಾಳಿ ನಡೆಸಿದಾಗ ಅಲ್ಲಿನ ಜನರಲ್ಲಿ ದೇಶಭಕ್ತಿ ಜಾಗೃತವಾಗಿ, ಶತ್ರುವಿನ ವಿರುದ್ಧ ಒಗ್ಗಟ್ಟಾಗುವುದು ನೈಸರ್ಗಿಕ ಪ್ರಕ್ರಿಯೆ. ಆದರೆ, ಇಂದಿನ ಇರಾನ್‌ನಲ್ಲಿ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಅಮೆರಿಕ ಅಥವಾ ಇತರ ಪಾಶ್ಚಿಮಾತ್ಯ ದೇಶಗಳು ಇರಾನ್‌ನ ಮಿಲಿಟರಿ ನಾಯಕರು ಅಥವಾ ಆಡಳಿತದ ಮೇಲೆ ಕ್ರಮ ಕೈಗೊಂಡಾಗ ಅಲ್ಲಿನ ಜನಸಾಮಾನ್ಯರು ಸಂಭ್ರಮಿಸುತ್ತಿರುವುದು ಜಾಗತಿಕ ರಾಜಕಾರಣದಲ್ಲಿ ಒಂದು ವಿಶಿಷ್ಟ ಮತ್ತು ಆಘಾತಕಾರಿ ಬೆಳವಣಿಗೆಯಾಗಿದೆ.
ಇರಾನಿಯನ್ನರ ಈ ವಿಚಿತ್ರ ಪ್ರತಿಕ್ರಿಯೆಗೆ ಮುಖ್ಯ ಕಾರಣ ಅವರ ಆದ್ಯತೆಗಳ ಬದಲಾವಣೆ. ಇಂದಿನ ಇರಾನಿಯನ್ನರು ತಮ್ಮನ್ನು ಆಳುತ್ತಿರುವ ಸರಕಾರವನ್ನೇ ಆಂತರಿಕ ಆಕ್ರಮಣ ಕಾರರು ಎಂದು ಪರಿಗಣಿಸುತ್ತಾರೆ.
ದಶಕಗಳಿಂದ ಅನುಭವಿಸುತ್ತಿರುವ ಚಿತ್ರಹಿಂಸೆ, ಸ್ವಾತಂತ್ರ್ಯದ ಹರಣ ಮತ್ತು ಆರ್ಥಿಕ ಸಂಕಷ್ಟಗಳಿಂದ ಜನರಲ್ಲಿ ಎಷ್ಟು ಜುಗುಪ್ಸೆ ಮೂಡಿದೆಯೆಂದರೆ, ಅವರಿಗೆ ತಮ್ಮ ಸರಕಾರಕ್ಕೆ ಹೊಡೆತ ಬೀಳುವ ಯಾವುದೇ ಘಟನೆಯೂ ಆಶಾದಾಯಕವಾಗಿ ಕಾಣುತ್ತಿದೆ.
ಇರಾನ್‌ನ ಪ್ರತಿಭಟನೆಗಳಲ್ಲಿ ಕೇಳಿಬರುವ ಪ್ರಸಿದ್ಧ ಘೋಷಣೆಯೆಂದರೆ - ‘ನಮ್ಮ ನಿಜವಾದ ಶತ್ರು ಅಮೆರಿಕವಲ್ಲ, ಬದಲಿಗೆ ನಮ್ಮನ್ನು ಆಳುತ್ತಿರುವ ಈ ಭ್ರಷ್ಟ ಮತ್ತು ಕ್ರೂರ ಸರಕಾರ’ (ದುಷ್ಮನೇ ಮಾ ಹಮೀಂಜಾಸ್ತ್, ದೋರೂಘ್ ಮೀಗಾನ್ ಅಮ್ರಿಕಾಸ್ತ್). ಇರಾನ್ ಸರಕಾರವು ದೇಶದ ಆರ್ಥಿಕ ಕುಸಿತ ಮತ್ತು ಜನರ ಸಂಕಷ್ಟಗಳಿಗೆ ಯಾವಾಗಲೂ ‘ಅಮೆರಿಕ ಮತ್ತು ಇಸ್ರೇಲ್’ ಕಾರಣ ಎಂದು ಬೊಟ್ಟು ಮಾಡಿ ತೋರಿಸಿದಾಗಲೆಲ್ಲ ಅಲ್ಲಿನ ಜನ ಈ ಸ್ಲೋಗನ್ ಕೂಗುತ್ತಾರೆ.
ಇರಾನ್‌ನ ಇಂದಿನ ವಾಸ್ತವಿಕ ಪರಿಸ್ಥಿತಿಯನ್ನು ಈ ಒಂದೇ ಸಾಲು ಬಹಳ ಅರ್ಥಪೂರ್ಣ ವಾಗಿ ಬಿಂಬಿಸುತ್ತದೆ. ಇಡೀ ಜಗತ್ತು ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷವನ್ನು ‘ಎರಡು ದೇಶಗಳ ನಡುವಿನ ಸಮರ’ ಎಂದು ನೋಡುತ್ತದೆ. ವಿಪರ್ಯಾಸ ಅಂದ್ರೆ ಇರಾನ್ ಒಳಗಿನ ಪರಿಸ್ಥಿತಿಯೇ ಬೇರೆ. 2020ರಲ್ಲಿ ಅಮೆರಿಕವು ಇರಾನ್‌ನ ಪ್ರಭಾವಿ ಜನರಲ್ ಕಾಸಿಂ ಸುಲೈಮಾನಿಯನ್ನು ಹತ್ಯೆ ಮಾಡಿದಾಗ, ಇಡೀ ಜಗತ್ತು ಇರಾನ್‌ನಲ್ಲಿ ಯುದ್ಧದ ಭೀತಿ ಎದುರಾಗಬಹುದು ಎಂದು ಅಂದಾಜಿಸಿತ್ತು.
ಸರಕಾರವು ಲಕ್ಷಾಂತರ ಜನರನ್ನು ಬೀದಿಗೆ ಕರೆ ತಂದು ದೊಡ್ಡ ಮಟ್ಟದ ಶೋಕಾಚರಣೆ ನಡೆಸಿತು. ಆದರೆ, ಅದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗುಪ್ತವಾಗಿ ಇರಾನಿಯನ್ನರು ಸಿಹಿ ಹಂಚಿ ಸಂಭ್ರಮಿಸಿದರು. ಸುಲೈಮಾನಿ ಇರಾನಿಯನ್ನರ ಪಾಲಿಗೆ ದೇಶದ ರಕ್ಷಕನಾಗಿರಲಿಲ್ಲ, ಬದಲಿಗೆ ಸಿರಿಯಾ ಮತ್ತು ಇರಾಕ್‌ನಲ್ಲಿ ನಡೆದ ರಕ್ತಪಾತದ ರೂವಾರಿಯಾಗಿದ್ದ. ದೇಶದ ಹಣವನ್ನು ವಿದೇಶಿ ಸಂಘರ್ಷಗಳಿಗೆ ಬಳಸಿ, ಸ್ವದೇಶಿ ಯುವಕ ರನ್ನು ಹತ್ತಿಕ್ಕುತ್ತಿದ್ದ ವ್ಯಕ್ತಿಯ ಪತನವು ಜನರಿಗೆ ವಿಮೋಚನೆಯಂತೆ ಕಂಡಿತು.
ಅಮೆರಿಕವು ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿದಾಗ ಅಥವಾ ರಾಜತಾಂತ್ರಿಕ ಒತ್ತಡ ತಂದಾಗ, ಸರಕಾರವು ಅದನ್ನು ‘ಜನರ ಮೇಲಿನ ದಾಳಿ’ ಎಂದು ಬಿಂಬಿಸುತ್ತದೆ. ಆದರೆ ಜನರು ಇದನ್ನು ‘ಸರ್ವಾಧಿಕಾರಿಗಳ ಮೇಲಿನ ದಾಳಿ’ ಎಂದು ಭಾವಿಸುತ್ತಾರೆ. ಆಡಳಿತವು ದುರ್ಬಲಗೊಂಡರೆ ಮಾತ್ರ ತಮಗೆ ಸ್ವಾತಂತ್ರ್ಯ ಸಿಗಬಹುದು ಎಂಬುದು ಜನರ ನಂಬಿಕೆ.
ಅಂತಾರಾಷ್ಟ್ರೀಯ ಹಂತದಲ್ಲಿ ಆಡಳಿತಕ್ಕೆ ಮುಖಭಂಗವಾದಾಗಲೆಲ್ಲ, ಇರಾನ್‌ನು ಒಳಗಿರುವ ಜನರು ರಹಸ್ಯವಾಗಿ ಸಂಭ್ರಮಿಸುವುದು ಅಲ್ಲಿನ ಸರಕಾರದ ಮೇಲಿನ ತೀವ್ರ ಆಕ್ರೋಶದ ಸಂಕೇತವಾಗಿದೆ. ಇಂದು ಇರಾನಿಯನ್ನರು ತಮ್ಮದೇ ಆಡಳಿತದ ದಬ್ಬಾಳಿಕೆ ಯಿಂದ ಅದೆಷ್ಟು ಮನನೊಂದಿದ್ದಾರೆಂದರೆ, ಹೊರಗಿನವರು ಬಂದು ಆಕ್ರಮಣ ಮಾಡಿದರೆ ಅದನ್ನು ಸಂತೋಷದಿಂದ ಸ್ವಾಗತಿಸುತ್ತಾರೆ.
ಅಮೆರಿಕದ ದಾಳಿಯನ್ನು ಅವರು ಸಂಭ್ರಮಿಸುತ್ತಿರುವುದು ಪರಕೀಯರ ಮೇಲಿನ ಪ್ರೀತಿಯಿಂದಲ್ಲ, ಬದಲಿಗೆ ತಮ್ಮನ್ನು ಪೀಡಿಸುತ್ತಿರುವ ಸ್ವಾರ್ಥಿ ಆಡಳಿತದ ಮೇಲಿನ ತೀವ್ರ ದ್ವೇಷದಿಂದ. ಇದು ಯಾವುದೇ ಆಡಳಿತಕ್ಕೆ ದೊಡ್ಡ ಎಚ್ಚರಿಕೆಯ ಗಂಟೆ.
ಇರಾನ್‌ನಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಂಬುದು ಕೇವಲ ಒಂದು ಮಿಲಿಟರಿ ಪಡೆಯಲ್ಲ; ಅದು ಇಡೀ ದೇಶದ ಆರ್ಥಿಕತೆಯನ್ನು ನಿಯಂತ್ರಿಸುವ ಒಂದು ಬೃಹತ್ ವ್ಯವಸ್ಥೆ. ಇರಾನ್‌ನ ತೈಲ, ಅನಿಲ, ನಿರ್ಮಾಣ ಮತ್ತು ಸಂವಹನ ಕ್ಷೇತ್ರಗಳ ಹೆಚ್ಚಿನ ಭಾಗವು ಇವರ ಕೈಯಲ್ಲಿದೆ. ಈ ಸಂಸ್ಥೆಯು ಸರಕಾರಕ್ಕೆ ಉತ್ತರದಾಯಿಯಲ್ಲದ ಒಂದು ಬೃಹತ್ ಉದ್ಯಮದಂತೆ ಕಾರ್ಯನಿರ್ವಹಿಸುತ್ತದೆ.
ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದಾಗಿ ಸಂಪತ್ತು ಕೇವಲ ಕೆಲವು ಪ್ರಭಾವಿ ನಾಯಕರ ಕೈಸೇರುತ್ತಿದೆ. ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಈ ಲಾಭವು ಜನರ ಕಲ್ಯಾಣಕ್ಕೆ ತಲುಪುವ ಬದಲು, ಶಸಾಸಗಳ ಖರೀದಿ ಮತ್ತು ವಿದೇಶಿ ಸಂಘರ್ಷಗಳಿಗೆ ಬಳಕೆಯಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಮತ್ತು ಅಮೆರಿಕ ಅಥವಾ ಸೌದಿ ಅರೇಬಿಯಾದಂಥ ವಿರೋಧಿಗಳಿಗೆ ಸವಾಲು ಹಾಕಲು ಇರಾನ್ ಕಳೆದ ಎರಡು ದಶಕ ಗಳಿಂದ ನಿರಂತರವಾಗಿ ಬಾಡಿಗೆ ಯುದ್ಧಗಳನ್ನು ನಡೆಸುತ್ತಿದೆ.
ಲೆಬನಾನಿನ ಹಿಜ್ಬು ಸಂಘಟನೆಗೆ ಇರಾನ್ ವರ್ಷಕ್ಕೆ ಕೋಟ್ಯಂತರ ಡಾಲರ್ ಹಣ ಮತ್ತು ಅತ್ಯಾಧುನಿಕ ಕ್ಷಿಪಣಿಗಳನ್ನು ಪೂರೈಸುತ್ತದೆ. ಯೆಮನ್‌ನ ‘ಹೂತಿ’ ಬಂಡುಕೋರರಿಗೆ ಇರಾನ್ ಹಣಕಾಸು ಮತ್ತು ತಾಂತ್ರಿಕ ನೆರವು ನೀಡುತ್ತಿದೆ, ಇದು ಆ ಭಾಗದಲ್ಲಿ ಯುದ್ಧದ ಕಿಚ್ಚನ್ನು ಹೆಚ್ಚಿಸಿದೆ. ಸಿರಿಯಾದಲ್ಲಿ ಅಸ್ಸಾದ್ ಸರಕಾರವನ್ನು ಉಳಿಸಿಕೊಳ್ಳಲು ಇರಾನ್ ತನ್ನ ಸೈನ್ಯ ಮತ್ತು ಸಂಪತ್ತನ್ನು ಆ ದೇಶಕ್ಕೆ ಧಾರೆ ಎರೆದಿದೆ.
ಇರಾನ್ ದೇಶವು ಪ್ರಕೃತಿದತ್ತವಾದ ಅಪಾರ ಸಂಪತ್ತನ್ನು ಹೊಂದಿದ್ದರೂ, ಅಲ್ಲಿನ ಸಾಮಾನ್ಯ ಪ್ರಜೆ ಬಡತನ ಮತ್ತು ಹಸಿವಿನಿಂದ ನರಳುತ್ತಿರುವುದು ಜಗತ್ತಿನ ಅತಿದೊಡ್ಡ ದುರಂತಗಳಲ್ಲಿ ಒಂದು. ವಿಶ್ವದ ಒಟ್ಟು ತೈಲ ನಿಕ್ಷೇಪದಲ್ಲಿ ನಾಲ್ಕನೇ ಸ್ಥಾನ ಮತ್ತು ಅನಿಲ ನಿಕ್ಷೇಪದಲ್ಲಿ ಎರಡನೇ ಸ್ಥಾನ ಹೊಂದಿರುವ ಈ ದೇಶ ಆರ್ಥಿಕವಾಗಿ ಅಧೋಗತಿಗೆ ಇಳಿದಿದೆ.
ಇರಾನ್‌ನ ಸಾಮಾನ್ಯ ಪ್ರಜೆಯು ಹಣದುಬ್ಬರ ಮತ್ತು ನಿರುದ್ಯೋಗದಿಂದ ತತ್ತರಿಸುತ್ತಿದ್ದಾನೆ. ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳಿಂದಾಗಿ ದೇಶದಲ್ಲಿ ಔಷಧಗಳ ಕೊರತೆ ಮತ್ತು ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಇಂಥ ಸಮಯದಲ್ಲಿ ಸರಕಾರವು ತನ್ನ ಜನರ ಹೊಟ್ಟೆ ತುಂಬಿಸುವ ಬದಲು, ಪ್ಯಾಲಸ್ಟೀನ್ ಅಥವಾ ಲೆಬನಾನ್ ನಲ್ಲಿರುವ ಸಶಸ್ತ್ರ ಗುಂಪುಗಳಿಗೆ ಹಣ ನೀಡುವುದನ್ನು ಇರಾನಿಯನ್ನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
‘ನೆ ನಜೆ ಗಾಜಾ, ನೆ ಲೆಬನಾನ್, ಜಾನೆಮ್ ಫೆದಾಯೆ ಇರಾನ್’ (ಗಾಜಾ ಬೇಡ, ಲೆಬನಾನ್ ಬೇಡ, ನನ್ನ ಪ್ರಾಣ ಇರಾನ್‌ಗೆ ಮಾತ್ರ) ಎಂಬ ಘೋಷಣೆ ಪ್ರತಿಭಟನೆಗಳಲ್ಲಿ ಮೊಳಗುತ್ತಿರು ವುದು ಇದೇ ಕಾರಣಕ್ಕೆ. ಇರಾನ್ ನಾಯಕರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಡೀ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂಟಿ ಮಾಡಿದ್ದಾರೆ.
ಅಭಿವೃದ್ಧಿ ಹೊಂದಬಹುದಾಗಿದ್ದ ಒಂದು ಮಹಾನ್ ರಾಷ್ಟ್ರವು ಇಂದು ಕೇವಲ ಯುದ್ಧ ಮತ್ತು ಸಿದ್ಧಾಂತದ ಅಖಾಡವಾಗಿ ಮಾರ್ಪಟ್ಟಿದೆ. ದೇಶದ ಅಮೂಲ್ಯವಾದ ತೈಲ ಸಂಪತ್ತು ಜನರ ಮನೆ ಬೆಳಗುವ ಬದಲು, ಬಾಂಬ್ ಸಿಡಿಯಲು ಕಾರಣವಾಗುತ್ತಿದೆ.
ಯಾವುದೇ ದೇಶವು ತನ್ನ ಪ್ರಜೆಗಳನ್ನು ಹಸಿವಿನಿಂದ ಇಟ್ಟು, ಬೇರೆ ದೇಶಗಳಲ್ಲಿ ಪ್ರಭಾವ ಬೆಳೆಸಲು ಸಾಧ್ಯವಿಲ್ಲ. ಇರಾನ್ ಇಂದಿನ ಸ್ಥಿತಿ ಇದಕ್ಕೆ ಕನ್ನಡಿ ಹಿಡಿದಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ದೇಶವನ್ನು ನಲವತ್ತು ವರ್ಷಗಳ ಸ್ವಾರ್ಥಿ ರಾಜಕಾರಣವು ಆರ್ಥಿಕವಾಗಿ ಮತ್ತು ನೈತಿಕವಾಗಿ ಕುಸಿಯುವಂತೆ ಮಾಡಿದೆ. ಜನರ ಆಕ್ರೋಶವು ಸ್ಫೋಟ ಗೊಳ್ಳುತ್ತಿರುವುದು ಇದೇ ಕಾರಣಕ್ಕಾಗಿ - ಅವರಿಗೆ ಬೇಕಾಗಿರುವುದು ಬಾಹ್ಯ ಯುದ್ಧಗಳಲ್ಲ, ಬದಲಿಗೆ ಗೌರವಯುತವಾದ ಬದುಕು.
ಇರಾನ್ ಸರಕಾರವು ತನ್ನ ಆಡಳಿತದ ಅವಧಿಯಲ್ಲಿ ಸಾವಿರಾರು ವಿರೋಧಿಗಳನ್ನು ವ್ಯವಸ್ಥಿತವಾಗಿ ಸಾಯಿಸಿದೆ. ಇರಾನ್-ಇರಾಕ್ ಯುದ್ಧದ ನಂತರ, ಅಯತೊ ಖೊಮೇನಿಯ ಆದೇಶದಂತೆ ಜೈಲಿನಲ್ಲಿದ್ದ ಸುಮಾರು 30000 ರಾಜಕೀಯ ಕೈದಿಗಳನ್ನು ಕೆಲವೇ ವಾರಗಳಲ್ಲಿ ನೇಣು ಹಾಕಲಾಯಿತು. ಇದು ಇತಿಹಾಸದ ಅತ್ಯಂತ ಕರಾಳ ಅಧ್ಯಾಯ.
2019ರಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕೇವಲ ಮೂರು ದಿನಗಳಲ್ಲಿ 1500ಕ್ಕೂ ಹೆಚ್ಚು ಜನರನ್ನು ಸಾಯಿಸಲಾಯಿತು. 2022ರಲ್ಲಿ ಮಹಸಾ ಅಮಿನಿ ಸಾವಿನ ನಂತರ ನಡೆದ ಪ್ರತಿಭಟನೆಗಳಲ್ಲಿ ನೂರಾರು ಯುವಕರು ಕಣ್ಣು ಕಳೆದುಕೊಂಡರು ಮತ್ತು ಸಾವಿರಾರು ಜನರನ್ನು ಜೈಲಿಗೆ ತಳ್ಳಲಾಯಿತು.
ಇತ್ತೀಚಿನ ವರದಿಗಳ ಪ್ರಕಾರ, ವಿವಿಧ ಹಂತಗಳಲ್ಲಿ ನಡೆದ ಸಂಘರ್ಷಗಳಲ್ಲಿ ಬಲಿಯಾದ ಇರಾನಿಯನ್ನರ ಸಂಖ್ಯೆ 40000 ದಾಟಿದೆ. ಇಂದಿನ ಆಡಳಿತವು ಇರಾನ್‌ನ ಇಸ್ಲಾಮಿಕ್ ಪೂರ್ವ ಇತಿಹಾಸವನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ. ಪರ್ಸೆಪೋಲಿಸ್‌ನಂಥ ಭವ್ಯ ಐತಿಹಾಸಿಕ ತಾಣಗಳನ್ನು ನಿರ್ಲಕ್ಷಿಸಲಾಗುತ್ತಿದೆ.
ನೌರೂಜ್ (ಪರ್ಷಿಯನ್ ಹೊಸ ವರ್ಷ) ಹಬ್ಬವನ್ನು ಆಚರಿಸುವುದರ ಮೇಲೆ ನಿರ್ಬಂಧ ಗಳನ್ನು ಹೇರಲಾಗುತ್ತಿದೆ. ಆದರೆ ಇರಾನಿಯನ್ನರು ತಮ್ಮ ಮೂಲ ಬೇರುಗಳನ್ನು ಬಿಟ್ಟು ಕೊಡಲು ತಯಾರಿಲ್ಲ. ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಭದ್ರತಾ ಪಡೆಗಳು ಮತ್ತು ಅವರ ಬೆಂಬಲಿತ ಸಶಸ್ತ್ರ ಗುಂಪುಗಳು ಮಾದಕ ವಸ್ತು ಗಳನ್ನು ನೀಡುತ್ತಿವೆ.
ಇರಾನ್‌ನ ಭದ್ರತಾ ಪಡೆಗಳು (ವಿಶೇಷವಾಗಿ ಬಸಿಜ್ ಮತ್ತು ಐಆರ್‌ಜಿಸಿ) ತಮ್ಮದೇ ದೇಶದ ನಿರಪರಾಧಿ ಪ್ರಜೆಗಳನ್ನು, ವಿದ್ಯಾರ್ಥಿಗಳನ್ನು ಮತ್ತು ಮಹಿಳೆಯರನ್ನು ಮುಲಾಜಿಲ್ಲದೇ ಸಾಯಿಸಲು ಅಥವಾ ಚಿತ್ರಹಿಂಸೆ ನೀಡಲು ಕ್ಯಾಪ್ಟಗನ್ ಎಂಬ ಮಾದಕ ಪದಾರ್ಥ ನೀಡುತ್ತಿವೆ. ಇದು ಮಿದುಳಿನ ಸಂವೇದನೆಯನ್ನು ಮರೆಮಾಚಿ, ಸೈನಿಕರನ್ನು ಯಾಂತ್ರಿಕ ‘ಕೊಲೆಗಡುಕ’ರನ್ನಾಗಿ ಬದಲಿಸುತ್ತದೆ.
ಇರಾನ್‌ನ ಸ್ಥಿತಿ ಇಂದು ಅಯೋಮಯವಾಗಿದೆ. ಒಂದು ಕಡೆ ಸಾವಿರಾರು ವರ್ಷಗಳ ಸಂಸ್ಕೃತಿಯ ಹೆಮ್ಮೆ, ಇನ್ನೊಂದು ಕಡೆ ಐವತ್ತು ವರ್ಷಗಳ ಕರಾಳ ಆಡಳಿತದ ಸಂಕೋಲೆ. ಮೊನ್ನೆ ಅಯತೊ ಖೊಮೇನಿಯನ್ನು ಇಸ್ರೇಲ್-ಅಮೆರಿಕ ಹತ್ಯೆ ಮಾಡಿದಾಗ, ಇರಾನಿನ ಜನ ಬೀದಿಗಿಳಿದು ಸಂಭ್ರಮಿಸಿದರು. ಕಾರಣ, ಖೊಮೇನಿಯನ್ನು ಯಾರೂ ಸಾಯಿಸಲು ಸಾಧ್ಯವೇ ಇಲ್ಲ ಎಂದು ಇರಾನಿನ ಜನ ಭಾವಿಸಿದ್ದರು. ಆದರೆ ಖೊಮೇನಿ ಹತ್ಯೆ ಸುದ್ದಿ ಕೇಳಿದ ಅಲ್ಲಿನ ಜನತೆ ಇಸ್ರೇಲ್-ಅಮೆರಿಕವನ್ನು ಪ್ರಶಂಸಿಸಿದರು.
ಇಸ್ರೇಲ್-ಅಮೆರಿಕ ಸೇರಿ ಇರಾನನ್ನು ದುರ್ಬಲಗೊಳಿಸುವ ಪ್ರತಿ ಕ್ರಮವನ್ನು ಇರಾನಿಯರು ಸ್ವಾಗತಿಸುತ್ತಾರೆ. ಈಗ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ -ಅಮೆರಿಕ ಶ ಕ್ತಿ ಮೀರಿ, ಇರಾನಿನ ನಾಗರಿಕರ ಮೇಲೆ ದಾಳಿ ಮಾಡುತ್ತಿಲ್ಲ. ಈ ವರ್ಷದ ಫೆಬ್ರವರಿ ಇಪ್ಪತ್ತೆಂಟರಿಂದ ಇಲ್ಲಿ ತನಕ ಸತ್ತವರ ಸಂಖ್ಯೆ, ಸಾಮಾನ್ಯವಾಗಿ ಇರಾನಿನಲ್ಲಿ ನಡೆಯುವ ಎರಡು ದಿನಗಳ ಪ್ರತಿಭಟನೆಯಲ್ಲಿ ಸಾಯುವುದಕ್ಕಿಂತ ಕಮ್ಮಿ. ಈ ಸಂಘರ್ಷ ಇಲ್ಲಿಗೆ ಹೋಗಿ ನಿಲ್ಲುವುದೋ ಗೊತ್ತಿಲ್ಲ. ಆದರೆ ಈ ಆಡಳಿತದ ವಿರುದ್ಧ ಹೋರಾಡಿ ಪ್ರಾಣ ತೆತ್ತ ನಲವತ್ತು ಸಾವಿರ ಜನರ ಸಾವು ವ್ಯರ್ಥವಾಗಲಿಕ್ಕಿಲ್ಲ.