Vishweshwar Bhat Column: ಯುದ್ಧದ ವಿಷಯ ಬಂದರೆ ಇಸ್ರೇಲ್ ಏಕೆ ಮುಂಗಾಲಪುಟಕಿ ?
ಇಷ್ಟೆಲ್ಲ ವೈರಿಗಳನ್ನು ಬಗಲಲ್ಲಿ ಇಟ್ಟುಕೊಂಡು ನಿರಂತರವಾಗಿ ಹೋರಾಡುತ್ತಾ ಇಸ್ರೇಲ್ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ಸಣ್ಣ ಮಾತಲ್ಲ. ಇಸ್ರೇಲ್ ಅನುಸರಿಸಿ ಕೊಂಡು ಬಂದಿರುವ ತಂತ್ರಗಳನ್ನು ಯಾರು ಎಷ್ಟೇ ಟೀಕಿಸಬಹುದು, ಆದರೆ ಇಸ್ರೇಲೇನಾದರೂ ಒಂದು ಕ್ಷಣ ಮೈಮರೆತಿದ್ದರೆ, ಆ ದೇಶ ಇಂದು ವಿಶ್ವದ ಭೂಪಟ ದಲ್ಲಿಯೇ ಇರುತ್ತಿರಲಿಲ್ಲ ಎಂಬುದು ಅಷ್ಟೇ ಸತ್ಯ.
-
ನೂರೆಂಟು ವಿಶ್ವ
ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಹೆಗಲ ಮೇಲೆ ಇಸ್ರೇಲ್ ಕುಳಿತಿದೆಯೋ, ಇಸ್ರೇಲ್ ಭುಜದ ಮೇಲೆ ಅಮೆರಿಕ ಕುಳಿತಿದೆಯೋ ಎಂಬ ಪ್ರಶ್ನೆಗೆ ನಿಖರ ಉತ್ತರ ಹೇಳುವುದು ಕಷ್ಟ. ಅದಕ್ಕಾಗಿ ಎಲ್ಲರೂ ಅಮೆರಿಕ ಬೆಂಬಲಿತ ಇಸ್ರೇಲ್ ವರ್ಸಸ್ ಇರಾನ್ ಅಥವಾ ಇಸ್ರೇಲ್ ಬೆಂಬಲಿತ ಅಮೆರಿಕ ವರ್ಸಸ್ ಇರಾನ್ ಎಂದು ಹೇಳುತ್ತಿವೆ.
ಅಂದರೆ ಒಂದು ಸಂಗತಿ ಸ್ಪಷ್ಟ. ಅದೇನೆಂದರೆ, ಅಮೆರಿಕಕ್ಕಾಗಲಿ ಅಥವಾ ಇಸ್ರೇಲಿಗಾಗಲಿ ಏಕಾಂಗಿಯಾಗಿ ಇರಾನ್ ಮೇಲೆ ಯುದ್ಧ ಮಾಡುವುದು ಸಾಧ್ಯವಿರಲಿಲ್ಲ. ಮಧ್ಯಪ್ರಾಚ್ಯ ದಲ್ಲಿ, ಅರಬ್ ದೇಶಗಳೆಲ್ಲ ಒಂದಿಂದು ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ತೊಡೆ ತಟ್ಟಿದವರೇ.
ಒಂದಕ್ಕಿಂತ ಹೆಚ್ಚು ದೇಶಗಳು ಒಂದಾಗಿ ಯುದ್ಧ ಮಾಡಿದ ಅನೇಕ ನಿದರ್ಶನಗಳಿವೆ. ಜೋರ್ಡಾನ್, ಈಜಿಪ್ಟ್, ಸಿರಿಯಾ, ಲೆಬನಾನ್, ಸೌದಿ ಅರೇಬಿಯಾ, ಇರಾನ್, ಇರಾಕ್... ಹೀಗೆ ಎಲ್ಲ ದೇಶಗಳೂ ಇಸ್ರೇಲ್ ಮೇಲೆ ಬೇರೆ ಬೇರೆ ಸಂದರ್ಭಗಳಲ್ಲಿ ಯುದ್ಧ ಮಾಡಿವೆ.
ಇಷ್ಟೆಲ್ಲ ವೈರಿಗಳನ್ನು ಬಗಲಲ್ಲಿ ಇಟ್ಟುಕೊಂಡು ನಿರಂತರವಾಗಿ ಹೋರಾಡುತ್ತಾ ಇಸ್ರೇಲ್ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವುದು ಸಣ್ಣ ಮಾತಲ್ಲ. ಇಸ್ರೇಲ್ ಅನುಸರಿಸಿ ಕೊಂಡು ಬಂದಿರುವ ತಂತ್ರಗಳನ್ನು ಯಾರು ಎಷ್ಟೇ ಟೀಕಿಸಬಹುದು, ಆದರೆ ಇಸ್ರೇಲೇ ನಾದರೂ ಒಂದು ಕ್ಷಣ ಮೈಮರೆತಿದ್ದರೆ, ಆ ದೇಶ ಇಂದು ವಿಶ್ವದ ಭೂಪಟ ದಲ್ಲಿಯೇ ಇರುತ್ತಿರಲಿಲ್ಲ ಎಂಬುದು ಅಷ್ಟೇ ಸತ್ಯ.
ಇದನ್ನೂ ಓದಿ: Vishweshwar Bhat Column: ಈಗಿನ ಯುದ್ದದಲ್ಲಿ ಇಸ್ರೇಲಿನಿಂದ ಭಾರತ ಏನು ಕಲಿಯಬಹುದು ?
ಇಸ್ರೇಲ್‌ನ ಮೊದಲ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಒಂದು ಮಾತನ್ನು ಯಾವತ್ತೂ ಖಡಾಖಡಿ ಹೇಳುತ್ತಿದ್ದರು-ಇಸ್ರೇಲ್ನ ಅಸ್ತಿತ್ವಕ್ಕೆ ಸವಾಲು ಹಾಕುವ ಯಾವುದೇ ನೆರೆರಾಷ್ಟ್ರ ವಿರಲಿ, ಅದನ್ನು ‘ಸಂಹಾರಕ ಅಸ’ಗಳನ್ನು (ಪರಮಾಣು, ಜೈವಿಕ ಅಥವಾ ರಾಸಾಯನಿಕ ಶಸಾಸ) ಬಳಸಿ, ಸರ್ವನಾಶ ಮಾಡದೇ ಇಸ್ರೇಲ್ ಬಿಡುವುದಿಲ್ಲ.
ಭಾರತ, ಇರಾನ್ ಇರಬಹುದು ಇಲ್ಲವೇ ಅಮೆರಿಕವೇ ಇರಬಹುದು, ಯುದ್ಧದ ಸಮಯ ದಲ್ಲಿ ಸ್ವಲ್ಪ ಭೂಭಾಗವನ್ನು ಕಳೆದುಕೊಂಡರೂ ಮತ್ತೆ ಹೋರಾಡಿ ಅದನ್ನು ವಾಪಸ್ ಪಡೆಯುವ ಅವಕಾಶವಿರುತ್ತದೆ. ಆದರೆ ಇಸ್ರೇಲ್‌ಗೆ ಅಂಥ ಐಷಾರಾಮಿ ಅವಕಾಶವಿಲ್ಲ. ಇಲ್ಲಿ ಸೋಲು ಎಂದರೆ ದೇಶದ ಸಂಪೂರ್ಣ ವಿನಾಶ.
ಆದ್ದರಿಂದಲೇ, ಇಸ್ರೇಲ್ ತನ್ನ ಗಡಿಯೊಳಗೆ ಯುದ್ಧ ನಡೆಯುವುದನ್ನು ಎಂದಿಗೂ ಇಷ್ಟ ಪಡುವುದಿಲ್ಲ. ಯುದ್ಧವೇನಿದ್ದರೂ ಶತ್ರುವಿನ ನೆಲದಲ್ಲಿಯೇ ನಡೆಯಬೇಕು ಎಂಬುದು ಇಸ್ರೇಲ್ ಸೇನೆಯ ಕಟ್ಟುನಿಟ್ಟಿನ ನಿಯಮ. ಇಸ್ರೇಲ್ ಈ ನೀತಿಯನ್ನು ಅಪ್ಪಿಕೊಳ್ಳಲು ಪ್ರಮುಖ ಕಾರಣ ಅದರ ಭೌಗೋಳಿಕತೆ. ಇಸ್ರೇಲ್ ಅತ್ಯಂತ ಚಿಕ್ಕ ದೇಶ. ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಕಾರ್‌ನಲ್ಲಿ ಅರ್ಧ ದಿನದಲ್ಲಿ ತಲುಪಬಹುದು.
ಇಂಥ ದೇಶಕ್ಕೆ ‘ವ್ಯೂಹಾತ್ಮಕ ಆಳ’ (Strategic Depth) ಇಲ್ಲ. ಅಂದರೆ, ಶತ್ರು ಸೈನ್ಯವು ಒಮ್ಮೆ ಗಡಿ ದಾಟಿ ಒಳಬಂದರೆ, ದೇಶದ ಪ್ರಮುಖ ನಗರಗಳು, ವಿಮಾನ ನಿಲ್ದಾಣಗಳು ಮತ್ತು ಜನವಸತಿ ಪ್ರದೇಶಗಳು ತಕ್ಷಣವೇ ಶತ್ರುವಿನ ವಶವಾಗುತ್ತವೆ.
ಹೀಗಾಗಿ ಇದು ಕೇವಲ ಒಂದು ಯುದ್ಧ ತಂತ್ರವಲ್ಲ, ಬದಲಾಗಿ ಇಸ್ರೇಲ್ ಎಂಬ ರಾಷ್ಟ್ರದ ಅಸ್ತಿತ್ವದ ಪ್ರಶ್ನೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ‘ಮೊಸಾದ್’ ಈ ಪೂರ್ವಭಾವಿ ದಾಳಿ ನೀತಿಯ ಬೆನ್ನೆಲುಬು. ಕೇವಲ ವೈಮಾನಿಕ ದಾಳಿಗಳಷ್ಟೇ ಅಲ್ಲ, ವೈಯಕ್ತಿಕ ಗುರಿಗಳನ್ನು (Targeted Killings) ನಾಶಪಡಿಸುವುದರಲ್ಲಿ ಇಸ್ರೇಲ್ ನಿಸ್ಸೀಮ.
ಅಪಾಯವು ಚಿಗುರುವ ಹಂತದಲ್ಲಿರುವಾಗಲೇ ಅದನ್ನು ಚಿವುಟಿ ಹಾಕುವುದು ಮೊಸಾದ್ನ ತಂತ್ರ. ಒಬ್ಬ ವಿಜ್ಞಾನಿ ಶತ್ರು ರಾಷ್ಟ್ರಕ್ಕೆ ಪರಮಾಣು ಬಾಂಬ್ ತಯಾರಿಸಿಕೊಡುತ್ತಿದ್ದಾನೆ ಅಥವಾ ಒಬ್ಬ ಭಯೋತ್ಪಾದಕ ನಾಯಕ ಇಸ್ರೇಲ್ ಮೇಲೆ ದಾಳಿಗೆ ಸಂಚು ರೂಪಿಸು ತ್ತಿದ್ದಾನೆ ಎಂದು ತಿಳಿದರೆ, ಮೊಸಾದ್ ಅವನನ್ನು ಅವನ ಮನೆಯ, ಅವರ ಬೆಡ್ರೂಮ್‌ನ ಸಾಯಿಸುತ್ತದೆ.
‘ಇರಾನ್‌ನ ಪರಮಾಣು ಕಾರ್ಯಕ್ರಮದ ರೂವಾರಿ’ ಎಂದು ಕರೆಯಲಾಗುವ ಮೊಹ್ಸೆನ್ ಫಕ್ರಿಝಾದ್ ಹತ್ಯೆ ಇದಕ್ಕೆ ಇತ್ತೀಚಿನ ಉದಾಹರಣೆ. ಇದು ಇಪ್ಪತ್ತೊಂದನೇ ಶತಮಾನದ ಅತ್ಯಂತ ರೋಚಕ ಮತ್ತು ತಾಂತ್ರಿಕವಾಗಿ ಅತ್ಯಾಧುನಿಕವಾದ ಗುಪ್ತಚರ ಕಾರ್ಯಾಚರಣೆ ಗಳಲ್ಲಿ ಒಂದು.
ನವೆಂಬರ್ 27, 2020ರಂದು ನಡೆದ ಈ ಘಟನೆಯು ಇಸ್ರೇಲ್‌ನ ‘ಪೂರ್ವಭಾವಿ ದಾಳಿ’ ( Preventive Strike) ನೀತಿಯು ಎಷ್ಟು ವಿನಾಶಕಾರಿಯಾಗಿರುತ್ತದೆ ಎಂಬುದಕ್ಕೆ ಸಾಕ್ಷಿ. ಈ ರೀತಿಯ ದಾಳಿಗಳು ಶತ್ರುಗಳಲ್ಲಿ ದೈಹಿಕ ನಷ್ಟಕ್ಕಿಂತ ಹೆಚ್ಚಾಗಿ ಮಾನಸಿಕ ಭಯವನ್ನು ಹುಟ್ಟಿಸುತ್ತವೆ. ‘ನಾವು ಎಲ್ಲಿಯೇ ಇದ್ದರೂ ಇಸ್ರೇಲ್ ನಮ್ಮನ್ನು ಬಿಡುವುದಿಲ್ಲ’ ಎಂಬ ಸಂದೇಶವು ಶತ್ರುವಿನ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ.
ಆ ದಿನಗಳಲ್ಲಿ ಮೊಹ್ಸೆನ್ ಫಕ್ರಿಝಾದ್ ಯಾರು ಎಂಬುದು ಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಇಸ್ರೇಲ್ ಪಾಲಿಗೆ ಆತ ಇರಾನ್‌ನ ಅತ್ಯಂತ ಅಪಾಯಕಾರಿ ವ್ಯಕ್ತಿಯಾಗಿದ್ದ. ಇರಾನ್‌ನ ಗುಪ್ತ ಪರಮಾಣು ಶಸ್ತ್ರಾಸ್ತ್ರ ಯೋಜನೆ ‘ಅಮದ್’ (AMAD) ಇದರ ಸಂಪೂರ್ಣ ಜವಾಬ್ದಾರಿ ಇವನ ಮೇಲಿತ್ತು. ಇಸ್ರೇಲ್ ಇವನನ್ನು ‘ಇರಾನ್‌ನ ಅಣುಬಾಂಬ್ ಪಿತಾಮಹ’ ಎಂದೇ ಕರೆಯುತ್ತಿತ್ತು.
2018ರಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ನ ಪರಮಾಣು ರಹಸ್ಯ ಗಳನ್ನು ಜಗತ್ತಿನ ಮುಂದೆ ಪ್ರದರ್ಶಿಸುವಾಗ ಫಕ್ರಿಝಾದ್ ಫೊಟೋ ತೋರಿಸಿ, ‘-ಕ್ರಿಝಾದ್ ಎಂಬ ಹೆಸರನ್ನು ನೆನಪಿಟ್ಟುಕೊಳ್ಳಿ, ಇಲ್ಲದಿದ್ದರೆ ಮುಂದೆ ನಾನೇ ಆ ಹೆಸರನ್ನು ನಿಮಗೆ ನೆನಪಿಸುತ್ತೇನೆ’ ಎಂದು ಎಚ್ಚರಿಸಿದ್ದರು. ಆ ಎಚ್ಚರಿಕೆಯ ಬೆನ್ನ ಆತನ ಹತ್ಯೆಯ ಸಂಚು ರೂಪಿತವಾಗಿತ್ತು.
ಫಕ್ರಿಝಾದ್ ಹತ್ಯೆಯ ವಿಶೇಷವೆಂದರೆ, ಆ ಸ್ಥಳದಲ್ಲಿ ದಾಳಿ ಮಾಡಲು ಒಬ್ಬನೇ ಒಬ್ಬ ಇಸ್ರೇಲಿ ಸೈನಿಕ, ಬಾಡಿಗೆ ಹಂತಕ ಅಥವಾ ಶೂಟರ್ ಇರಲಿಲ್ಲ! ಹೌದು, ಇದು ಸಂಪೂರ್ಣ ವಾಗಿ ‘ರಿಮೋಟ್ ಕಂಟ್ರೋಲ್ಡ್’ ಕಾರ್ಯಾಚರಣೆಯಾಗಿತ್ತು. ಆ ಕಾರ್ಯಾಚರಣೆ ಹೇಗಾ ಯಿತು ಎಂಬುದು ಕೆಲದಿನಗಳ ಕಾಲ ಇಡೀ ಜಗತ್ತಿಗೆ ಗೊತ್ತಾಗಲೇ ಇಲ್ಲ.
ಮೊಹಮ್ಮದ್ ಫಕ್ರಿಝಾದ್ ಹತ್ಯೆಯಲ್ಲಿ ಮೊಸಾದ್ ಬಳಸಿದ ತಂತ್ರಜ್ಞಾನವು ಮಾನವ ಇತಿಹಾಸದ ಅತ್ಯಂತ ಸಂಕೀರ್ಣ ‘ರಿಮೋಟ್ ಕಿಲ್ಲಿಂಗ್’ ಕಾರ್ಯಾಚರಣೆಯಾಗಿದೆ. ಮೊಸಾದ್ ಏಜೆಂಟರು ಇರಾನ್‌ನೊಳಗೆ ಗುಟ್ಟಾಗಿ ನುಗ್ಗಿ, ಬಿಡಿಭಾಗಗಳ ರೂಪದಲ್ಲಿ ಬೆಲ್ಜಿಯಂ ನಿರ್ಮಿತ ‘ಎಫ್ಎನ್ ಮ್ಯಾಗ್’ ಮಷೀನ್ ಗನ್ ಅನ್ನು ಸಾಗಿಸಿದ್ದರು. ಇದನ್ನು ಅಲ್ಲಿನ ರಸ್ತೆಬದಿಯ ಪಿಕಪ್ ಟ್ರಕ್ ಒಂದರಲ್ಲಿ ಯಾರಿಗೂ ಅನುಮಾನ ಬರದಂತೆ ಅಳವಡಿಸಿದ್ದರು. ಈ ಗನ್ ಅತ್ಯಂತ ಶಕ್ತಿಯುತವಾಗಿದ್ದು, ನಿಮಿಷಕ್ಕೆ ನೂರಾರು ಗುಂಡು ಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿತ್ತು.
ಈ ಗನ್ ಅನ್ನು ಸಾವಿರಾರು ಕಿಮೀ ದೂರದಲ್ಲಿದ್ದ ಇಸ್ರೇಲಿನ ಮೊಸಾದ್ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತಿತ್ತು. ಉಪಗ್ರಹದ ಮೂಲಕ ಆದೇಶಗಳನ್ನು ಕಳುಹಿಸು ವಾಗ ಸಂಕೇತಗಳು ಹೋಗಿ ತಲುಪಲು ಸುಮಾರು 1.6 ಸೆಕೆಂಡ್ ವಿಳಂಬವಾಗುತ್ತಿತ್ತು.
ಯುದ್ಧಭೂಮಿಯಲ್ಲಿ ಅಥವಾ ಚಲಿಸುವ ಕಾರನ್ನು ಗುರಿಯಾಗಿಸುವಾಗ ಈ 1.6 ಸೆಕೆಂಡ್ ಎನ್ನುವುದು ಬೃಹತ್ ಅಂತರವನ್ನು ಸೃಷ್ಟಿಸುತ್ತದೆ. ವಿeನಿಯ ಕಾರು ಚಲಿಸುತ್ತಿದ್ದಾಗ, ಆ ವೇಳೆಗೆ ಗುಂಡು ಹಾರಿಸುವ ಹೊತ್ತಿಗೆ ಕಾರು ಗುರಿಯಿಂದ ದೂರ ಹೋಗಿರುವ ಅಪಾಯ ವಿತ್ತು. ಈ 1.6 ಸೆಕೆಂಡುಗಳ ಕಾಲ ವಿಳಂಬವನ್ನು (Time Lag) ಸರಿಪಡಿಸಲು ಮೊಸಾದ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅಲ್ಗಾರಿದಮ್‌ಗಳನ್ನು ಬಳಸಿತು.
ಈ ತಂತ್ರಜ್ಞಾನವು ಕಾರಿನ ವೇಗ, ಗಾಳಿಯ ದಿಕ್ಕು ಮತ್ತು ಗುಂಡು ತಲುಪಲು ಬೇಕಾದ ಸಮಯವನ್ನು ಮಿಲಿ ಸೆಕೆಂಡುಗಳಲ್ಲಿ ಲೆಕ್ಕ ಹಾಕುತ್ತಿತ್ತು. ಅಂದರೆ, ಕಾರು ಎಲ್ಲಿದೆ ಎಂಬು ದಕ್ಕಿಂತ, ಮುಂದಿನ 1.6 ಸೆಕೆಂಡ್ ನಂತರ ಕಾರು ಎಲ್ಲಿರಲಿದೆ ಎಂಬುದನ್ನು ಎಐ ಊಹಿಸಿ, ಅದಕ್ಕೆ ತಕ್ಕಂತೆ ಗನ್ ಅನ್ನು ತಿರುಗಿಸಿ ಗುಂಡು ಹಾರಿಸುವಂತೆ ಅಣಿಗೊಳಿಸಲಾಗಿತ್ತು.
ನವೆಂಬರ್ 27ರ ಶುಕ್ರವಾರ ಮಧ್ಯಾಹ್ನ, ಫಕ್ರಿಝಾದ್ ತನ್ನ ಪತ್ನಿಯೊಂದಿಗೆ ಬುಲೆಟ್ ಪ್ರೂ- ಕಾರಿನಲ್ಲಿ ಟೆಹ್ರಾನ್‌ನಿಂದ ಅಬ್ಸಾರ್ಡ್ ಎಂಬ ರೆಸಾರ್ಟ್ ಪಟ್ಟಣಕ್ಕೆ ತೆರಳುತ್ತಿದ್ದ. ಅವನ ರಕ್ಷಣೆಗೆ ಮೂರು ಬೆಂಗಾವಲು ಕಾರುಗಳಿದ್ದವು. ಫಕ್ರಿಝಾದ್ ಕಾರು ಒಂದು ನಿರ್ದಿಷ್ಟ ತಿರುವಿಗೆ ಬಂದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಪಿಕಪ್ ಟ್ರಕ್‌ನಲ್ಲಿದ್ದ ಮಷೀನ್ ಗನ್ ತನ್ನಷ್ಟಕ್ಕೆ ತಾನೇ ಗುಂಡು ಹಾರಿಸಲು ಆರಂಭಿಸಿತು.
ಗುಂಡುಗಳು ಕಾರಿನ ಮುಂಭಾಗದ ಬುಲೆಟ್ ಪ್ರೂಫ್ ಗ್ಲಾಸಿಗೆ ಬಿದ್ದ ತಕ್ಷಣ -ಕ್ರಿಝಾದ್ ಕಾರು ನಿಲ್ಲಿಸಿದ. ಆತ ಕಾರಿನಿಂದ ಹೊರಬಂದ ಕ್ಷಣ, ಮಷೀನ್ ಗನ್ ಅವನ ದೇಹವನ್ನೇ ಗುರಿಯಾಗಿಸಿ ಗುಂಡಿನ ಮಳೆಗರೆಯಿತು. ಈ ದಾಳಿ ಎಷ್ಟು ನಿಖರವಾಗಿತ್ತೆಂದರೆ, ಫಕ್ರಿಝಾದ್ ಪತ್ನಿ ಅವನ ಪಕ್ಕದ ಕುಳಿತಿದ್ದರೂ ಅವಳಿಗೆ ಒಂದು ಸಣ್ಣ ಗಾಯವೂ ಆಗಲಿಲ್ಲ.
ಕೇವಲ ಹತ್ತು ಇಂಚಿನ ಅಂತರದಲ್ಲಿದ್ದ ವ್ಯಕ್ತಿಯನ್ನು ಬಿಟ್ಟು, ಸರಿಯಾಗಿ ಫಕ್ರಿಝಾದ್‌ಗೆ ಮಾತ್ರ ಗುರಿಯಾಗಿಸಲಾಗಿತ್ತು. ದಾಳಿ ಮುಗಿದ ಕೆಲವೇ ಸೆಕೆಂಡುಗಳಲ್ಲಿ ಆ ಪಿಕಪ್ ಟ್ರಕ್ ಒಳಗಿದ್ದ ಸ್ಫೋಟಕಗಳ ಮೂಲಕ ಸ್ವಯಂಚಾಲಿತವಾಗಿ ಸ್ಫೋಟಗೊಂಡು ಚಿಂದಿ ಯಾಯಿತು.
ದಾಳಿಗೆ ಬಳಸಿದ ಗನ್ ಮತ್ತು ತಂತ್ರಜ್ಞಾನದ ಕುರುಹುಗಳು ಸಿಗಬಾರದು ಎಂಬುದು ಪಕ್ಕಾ ಲೆಕ್ಕಾಚಾರವಾಗಿತ್ತು. ಇರಾನ್‌ನ ಭದ್ರತಾ ಪಡೆಗಳು ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು. ಶತ್ರುಗಳು ಕಣ್ಣಿಗೆ ಕಾಣದೆಯೇ ಅಷ್ಟು ದೊಡ್ಡ ವಿಜ್ಞಾನಿಯನ್ನು ಮೊಸಾದ್ ದೂರದಲ್ಲಿ ಕುಳಿತು ಮುಗಿಸಿತ್ತು!
ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಎಂದಿನಂತೆ ಹೊತ್ತುಕೊಳ್ಳಲಿಲ್ಲ. ಆದರೆ ಇಡೀ ಜಗತ್ತಿಗೆ ಸತ್ಯ ತಿಳಿದಿತ್ತು. ಅಪಾಯವು ಚಿಗುರುವ ಹಂತದಲ್ಲಿರುವಾಗಲೇ ಅದನ್ನು ಚಿವುಟಿ ಹಾಕುವ ಇಸ್ರೇಲ್‌ನ ‘ಪೂರ್ವಭಾವಿ ದಾಳಿ’ ನೀತಿಗೆ ಇದು ಅನ್ವರ್ಥವಾಗಿತ್ತು. ಈ ಹತ್ಯೆಯ ಮೂಲಕ ಇಸ್ರೇಲ್ ಇರಾನ್‌ಗೆ ಮೂರು ಸಂದೇಶಗಳನ್ನು ರವಾನಿಸಿತು - ನಿಮ್ಮ ಅತ್ಯಂತ ಸುಭದ್ರ ಪ್ರದೇಶಗಳಲ್ಲೂ ನಾವು ನುಗ್ಗಬವು,
ನಿಮ್ಮ ತಂತ್ರಜ್ಞಾನಕ್ಕಿಂತ ನಮ್ಮ ತಂತ್ರಜ್ಞಾನ ಹತ್ತು ಪಟ್ಟು ಮಿಗಿಲಾದುದು ಹಾಗೂ ಅಣುಬಾಂಬ್ ತಯಾರಿಸಲು ಹೊರಟರೆ ನಿಮ್ಮ ವಿಜ್ಞಾನಿಗಳು ಸುರಕ್ಷಿತವಾಗಿರುವುದಿಲ್ಲ. ಇರಾನ್ ಈ ಹತ್ಯೆಯನ್ನು ‘ಭಯೋತ್ಪಾದನೆ’ ಎಂದು ಕರೆದರೆ, ಇಸ್ರೇಲ್ ಇದನ್ನು ‘ಆತ್ಮ ರಕ್ಷಣೆ’ ಎಂದು ಸಮರ್ಥಿಸಿಕೊಂಡಿತು. ಫಕ್ರಿಝಾದ್ ಸಾವು ಇರಾನ್‌ನ ಪರಮಾಣು ಯೋಜನೆಯ ವೇಗವನ್ನು ಗಮನಾರ್ಹವಾಗಿ ಕುಂದಿಸಿತು.
ಶತ್ರುವು ಬಲಶಾಲಿಯಾಗುವವರೆಗೂ ಇಸ್ರೇಲ್ ಕಾಯುವುದಿಲ್ಲ, ಶತ್ರುವಿನ ಮಿದುಳು ಆಲೋಚಿಸುವ ಮೊದಲೇ ಅದರ ಮೇಲೆ ಪ್ರಹಾರ ಮಾಡುತ್ತದೆ. ಫಕ್ರಿಝಾದ್ ಹತ್ಯೆಯು ಈ ಕ್ರೂರ ವಾಸ್ತವದ ಜೀವಂತ ಸಾಕ್ಷಿ.
ಈ ಪ್ರಸಂಗ ಬಳಿಕ ನೆನಪಾಗುವ ಇನ್ನೊಂದು ಕಾರ್ಯಾಚರಣೆ ಅಂದ್ರೆ ‘ಆಪರೇಷನ್ ಒಪೆರಾ’. ಅದು ಇಸ್ರೇಲ್‌ನ ಅಸ್ತಿತ್ವದ ಹಠ ಮತ್ತು ಶತ್ರುವಿನ ಅಂಗಳದ ನುಗ್ಗಿ ಅವರ ಶಕ್ತಿಯನ್ನು ಕುಂದಿಸುವ ‘ಪ್ರಿವೆಂಟಿವ್ ಸ್ಟ್ರೈಕ್’ ಸಿದ್ಧಾಂತದ ಅತ್ಯಂತ ಯಶಸ್ವಿ ಅಧ್ಯಾಯ. 1981ರ ಜೂನ್ 7ರಂದು ನಡೆದ ಈ ಘಟನೆಯು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.
1970ರ ದಶಕದ ಉತ್ತರಾರ್ಧದಲ್ಲಿ ಇರಾಕ್‌ನ ಸರ್ವಾಧಿಕಾರಿ ಸದ್ಧಾಂ ಹುಸೇನ್ ಪಶ್ಚಿಮ ಏಷ್ಯಾದಲ್ಲಿ ಅಪ್ರತಿಮ ಶಕ್ತಿಯಾಗಲು ಹವಣಿಸುತ್ತಿದ್ದ. ಅದರ ಭಾಗವಾಗಿಯೇ ಆತ ಫ್ರಾನ್ಸ್‌ನ ನೆರವಿನೊಂದಿಗೆ ಬಾಗ್ದಾದ್‌ನ ಹೊರವಲಯದಲ್ಲಿ ‘ಓಸಿರಾಕ್’ ಎಂಬ ಬೃಹತ್ ಪರಮಾಣು ರಿಯಾಕ್ಟರ್ ನಿರ್ಮಿಸಲು ಆರಂಭಿಸಿದ.
ಫ್ರಾನ್ಸ್‌ನಲ್ಲಿ ‘ಓಸೈರಿಸ್’ ಎಂಬ ಹೆಸರಿನ ರಿಯಾಕ್ಟರ್ ಇದೆ. ಇರಾಕ್ ದೇಶದ ಹೆಸರಿನೊಂದಿಗೆ ಅದನ್ನು ಸೇರಿಸಿ ‘ಓಸೈರಿಸ್ + ಇರಾಕ್ = ಒಸಿರಾಕ್’ ಎಂದು ಹೆಸರಿಸಲಾಯಿತು. ಫ್ರಾನ್ಸ್ ಇದನ್ನು ‘ಶಾಂತಿಯುತ ಸಂಶೋಧನೆ’ಗಾಗಿ ಎಂದು ಹೇಳಿದರೂ, ಇಸ್ರೇಲ್ʼನ ಗುಪ್ತಚರ ಸಂಸ್ಥೆ ‘ಮೊಸಾದ್’ಗೆ ತಿಳಿದಿದ್ದ ಸತ್ಯವೇ ಬೇರೆಯಾಗಿತ್ತು.
ಸದ್ಧಾಂ ಈ ರಿಯಾಕ್ಟರ್ ಮೂಲಕ ಅಣುಬಾಂಬ್ ತಯಾರಿಸಲು ಬೇಕಾದ ಪ್ಲುಟೋನಿಯಂ ಸಿದ್ಧಪಡಿಸುತ್ತಿದ್ದ. ಈ ರಿಯಾಕ್ಟರ್ ಕೆಲಸ ಮಾಡಲು ಬೇಕಾಗಿದ್ದ ‘ಪುಷ್ಟೀಕರಿಸಿದ ಯುರೇ ನಿಯಂ’ ಅನ್ನು ಫ್ರಾನ್ಸ್ ಸರಬರಾಜು ಮಾಡುತ್ತಿತ್ತು. ಇದು ಬಾಂಬ್ ತಯಾರಿಕೆಗೆ ಸುಲಭ ವಾಗಿ ಬಳಕೆಯಾಗುವ ಸಾಧ್ಯತೆಯಿತ್ತು. ಇಸ್ರೇಲ್ ಈ ರಿಯಾಕ್ಟರ್ ಅನ್ನು ತನ್ನ ಅಸ್ತಿತ್ವಕ್ಕೆ ಎದುರಾಗಿರುವ ‘ಡೆತ್ ವಾರೆಂಟ್’ (ಮರಣ ಶಾಸನ) ಎಂದೇ ಪರಿಗಣಿಸಿತ್ತು. ಒಂದು ವೇಳೆ ಈ ರಿಯಾಕ್ಟರ್ ಕೆಲಸ ಆರಂಭಿಸಿದ್ದರೆ, ಇರಾಕ್ ಕೇವಲ ಒಂದೆರಡು ವರ್ಷಗಳಲ್ಲಿ ಅಣು ಬಾಂಬ್ ತಯಾರಿಸುವ ಸಾಮರ್ಥ್ಯ ಪಡೆಯುತ್ತಿತ್ತು.
ಇಸ್ರೇಲ್ ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿತ್ತು. ಇರಾಕ್ ಒಂದು ಅಣುಬಾಂಬ್ ತಯಾರಿಸಿದರೂ ಸಾಕು, ಇಸ್ರೇಲ್ ಭೂಪಟದಿಂದ ಅಳಿಸಿ ಹೋಗುತ್ತಿತ್ತು. ಇಸ್ರೇಲ್ ಆರಂಭ ದಲ್ಲಿ ಈ ರಿಯಾಕ್ಟರ್ ನಿರ್ಮಾಣವನ್ನು ತಡೆಯಲು ರಾಜತಾಂತ್ರಿಕ ಪ್ರಯತ್ನ ಗಳನ್ನು ಮಾಡಿತು.
ಇರಾಕ್ʼಗೆ ನೆರವು ನೀಡದಂತೆ ಫ್ರಾನ್ಸ್ ಮತ್ತು ಇಟಲಿ ದೇಶಗಳಿಗೆ ಮನವಿ ಮಾಡಿತು. ಆದರೆ ಆರ್ಥಿಕ ಹಿತಾಸಕ್ತಿಗಳ ಮುಂದೆ ಇಸ್ರೇಲ್‌ನ ಅಳಲು ಯಾರಿಗೂ ಕೇಳಿಸಲಿಲ್ಲ. ಅಂತಿಮವಾಗಿ ಇಸ್ರೇಲ್‌ನ ಅಂದಿನ ಪ್ರಧಾನಿ ಮೆನಾಚೆಮ್ ಬೆಗಿನ್ ಒಂದು ಕಠಿಣ ನಿರ್ಧಾರ ತಳೆದರು -‘ನಾವು ಇದನ್ನು ಬಾಂಬ್ ಹಾಕಿ ನಾಶಪಡಿಸಬೇಕು.’
ಒಂದು ವೇಳೆ ರಿಯಾಕ್ಟರ್ ಕಾರ್ಯಾರಂಭ ಮಾಡಿದರೆ, ಅದರ ಮೇಲೆ ಬಾಂಬ್ ಹಾಕಿದರೆ ವಿಕಿರಣ ಹರಡಿ ಬಾಗ್ದಾದ್‌ನ ಲಕ್ಷಾಂತರ ನಾಗರಿಕರು ಸಾಯುತ್ತಿದ್ದರು. ಆದ್ದರಿಂದ, ರಿಯಾಕ್ಟರ್ ‘ಲೈವ್’ ಆಗುವ ಮೊದಲೇ ಅದನ್ನು ಧೂಳೀಪಟ ಮಾಡುವುದು ಇಸ್ರೇಲ್ ಮುಂದಿದ್ದ ಏಕೈಕ ದಾರಿಯಾಗಿತ್ತು.
ಬಾಗ್ದಾದ್‌ನಿಂದ ಇಸ್ರೇಲ್ ಮಧ್ಯದ ಅಂತರ ಸುಮಾರು 1600 ಕಿಮೀ. ಇಸ್ರೇಲ್‌ನ ವಿಮಾನ ಗಳು ಅಷ್ಟು ದೂರ ಹಾರಬೇಕೆಂದರೆ ಅವು ಸೌದಿ ಅರೇಬಿಯಾ ಅಥವಾ ಜೋರ್ಡಾನ್ ದೇಶಗಳ ವಾಯುಪ್ರದೇಶವನ್ನು ಹಾದು ಹೋಗಬೇಕಿತ್ತು. ಈ ದೇಶಗಳು ಇಸ್ರೇಲ್‌ನ ಶತ್ರುಗಳಾಗಿದ್ದರಿಂದ ರೇಡಾರ್ ಕಣ್ಣಿಗೆ ಬಿದ್ದರೆ ವಿಮಾನಗಳನ್ನು ಹೊಡೆದುರುಳಿಸುವ ಅಪಾಯವಿತ್ತು. ಅಲ್ಲದೇ, ರಿಯಾಕ್ಟರ್ ಸುತ್ತಲೂ ಇರಾಕ್ ಬಲಿಷ್ಠ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿತ್ತು.
ಜೂನ್ 7, 1981. ಆ ಭಾನುವಾರದ ಸಂಜೆ ಇಸ್ರೇಲ್‌ನ ಎಟ್ಜಿಯಾನ್ ವಾಯುನೆಲೆಯಿಂದ ಎಂಟು ಎಫ್-16 ವಿಮಾನಗಳು ಮತ್ತು ಅವುಗಳಿಗೆ ರಕ್ಷಣೆ ನೀಡಲು ಆರು ಎಫ್-15 ವಿಮಾನಗಳು ಹಾರಿದವು. ಈ ಹಾರಾಟವು ವಿಮಾನಯಾನ ಇತಿಹಾಸದ ಒಂದು ಅಚ್ಚರಿ. ಶತ್ರುಗಳ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ಈ ವಿಮಾನಗಳು ಸಮುದ್ರ ಮಟ್ಟದಿಂದ ಕೇವಲ 100 ಅಡಿ ಎತ್ತರದಲ್ಲಿ ಹಾರುತ್ತಿದ್ದವು.
ಇಷ್ಟು ಕಡಿಮೆ ಎತ್ತರದಲ್ಲಿ ಹಾರುವುದರಿಂದ ರೇಡಾರ್‌ಗಳಿಗೆ ವಿಮಾನಗಳು ಕಾಣಿಸುವು ದಿಲ್ಲ. ವಿಮಾನಗಳ ನಡುವೆ ರೇಡಿಯೋ ಸಂವಹನವನ್ನೂ ಸಂಪೂರ್ಣ ಸ್ಥಗಿತಗೊಳಿಸ ಲಾಗಿತ್ತು. ಸೌದಿ ಅರೇಬಿಯಾದ ವಾಯುಪಡೆಗೆ ಅನುಮಾನ ಬಾರದಿರಲು, ಇಸ್ರೇಲಿ ಪೈಲಟ್‌ಗಳು ಅರಬಿಕ್ ಭಾಷೆಯಲ್ಲಿ ಮಾತನಾಡುತ್ತಾ ತಾವು ದಾರಿ ತಪ್ಪಿದ ಸೌದಿ ವಿಮಾನ ಗಳು ಎಂಬಂತೆ ನಟಿಸಿದ್ದರು!
ಸಾಯಂಕಾಲ 6:35ಕ್ಕೆ ಇಸ್ರೇಲ್ ವಿಮಾನಗಳು ಓಸಿರಾಕ್ ರಿಯಾಕ್ಟರ್ ತಲುಪಿದವು. ಇರಾಕ್‌ನ ಸೈನಿಕರು ಆಗಷ್ಟೇ ತಮ್ಮ ಊಟದ ವಿರಾಮದಲ್ಲಿದ್ದರು. ರೇಡಾರ್ ಕಣ್ಣು ತಪ್ಪಿಸಿ ಬಂದ ವಿಮಾನಗಳು ದಿಢೀರನೆ ಎತ್ತರಕ್ಕೇರಿ, ರಿಯಾಕ್ಟರ್ ಮೇಲೆ ಮುಗಿಬಿದ್ದವು. ಒಟ್ಟು 16 ಬಾಂಬ್‌ಗಳು ನಿಖರವಾಗಿ ರಿಯಾಕ್ಟರ್ʼನ ಗುಮ್ಮಟದ ಮೇಲೆ ಬಿದ್ದವು.
ಕೇವಲ 80 ಸೆಕೆಂಡುಗಳಲ್ಲಿ ಇಡೀ ರಿಯಾಕ್ಟರ್, ದೊಡ್ಡ ಹೊಂಡವಾಗಿ ಹೋಯಿತು. ಸದ್ಧಾಂ ಹುಸೇನ್ ಅವರ ವರ್ಷಗಳ ಕನಸು ಮತ್ತು ಕೋಟ್ಯಂತರ ಹಣ ಬೆಂಕಿಯ ಕೆನ್ನಾಲಿ ಗೆಗೆ ಆಹುತಿಯಾಯಿತು. ಕಾರ್ಯಾಚರಣೆ ಮುಗಿಸಿ ಎಲ್ಲ ಇಸ್ರೇಲಿ ವಿಮಾನಗಳು, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದವು.
ಮರುದಿನ ಈ ಸುದ್ದಿ ಜಗತ್ತಿನಾದ್ಯಂತ ಸಂಚಲನ ಮೂಡಿಸಿತು. ಅಮೆರಿಕ ಕೂಡ ಇಸ್ರೇಲ್ ಮೇಲೆ ಅಸಮಾಧಾನ ವ್ಯಕ್ತಪಡಿಸಿತು. ವಿಶ್ವಸಂಸ್ಥೆಯು ಇಸ್ರೇಲ್‌ನ ಕ್ರಮವನ್ನು ‘ಅಂತಾ ರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ಖಂಡಿಸಿತು. ಇಸ್ರೇಲ್ ಒಂಟಿಯಾಯಿತು. ಆದರೆ ಇಸ್ರೇಲ್ ಪ್ರಧಾನಿ ಬೆಗಿನ್ ಧೃತಿಗೆಡಲಿಲ್ಲ. ಅವರು ಇಡೀ ಜಗತ್ತಿಗೆ ಹೇಳಿದ್ದು ಒಂದೇ ಮಾತು - ‘ನಾವು ನಮ್ಮ ಮಕ್ಕಳ ಭವಿಷ್ಯವನ್ನು ಉಳಿಸಿದ್ದೇವೆ. ಈ ರಿಯಾಕ್ಟರ್ ಪೂರ್ಣ ಗೊಂಡಿದ್ದರೆ ಸದ್ಧಾಂ ಇಸ್ರೇಲ್ ಮೇಲೆ ಅಣುಬಾಂಬ್ ಹಾಕುತ್ತಿದ್ದ. ನಮ್ಮ ಜನರ ಸಾವನ್ನು ನೋಡಿ ಕಣ್ಣೀರು ಹಾಕುವ ಬದಲು, ಶತ್ರುವನ್ನು ಹತ್ತಿಕ್ಕಿ ಟೀಕೆಗಳನ್ನು ಎದುರಿಸುವುದೇ ನಮಗೆ ಇಷ್ಟ.’
ಈ ದಾಳಿಯಿಂದಾಗಿ ಇರಾಕ್‌ನ ಪರಮಾಣು ಕಾರ್ಯಕ್ರಮ ಕನಿಷ್ಠ 20 ವರ್ಷಗಳಷ್ಟು ಹಿಂದಕ್ಕೆ ಹೋಯಿತು. 1991ರ ಗಲ್ಫ್ ಯುದ್ಧದ ಸಮಯದಲ್ಲಿ ಸದ್ಧಾಂ ಬಳಿ ಅಣುಬಾಂಬ್ ಇರಲಿಲ್ಲ. ಅದಕ್ಕೆ ಕಾರಣ ಇದೇ ‘ಆಪರೇಷನ್ ಒಪೆರಾ’.
ಒಂದು ವೇಳೆ ಇದ್ದಿದ್ದರೆ, ವರ ಪಡೆದ ಭಸ್ಮಾಸುರನಂತೆ, ಸದ್ಧಾಂ ಯಾವ ದೇಶದ ಮೇಲಾ ದರೂ ಅಣುಬಾಂಬ್ ಹಾಕುತ್ತಿದ್ದ! ಇಸ್ರೇಲ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿತು. ಇಂದು ಇರಾನ್ ಜತೆ ನಡೆಯುತ್ತಿರುವ ಸಂಘರ್ಷವನ್ನೂ 1981ರ ಈ ಘಟನೆಗೆ ಹೋಲಿಸಬಹುದು.
ಅಂದು ಇರಾಕ್ ಮೇಲೆ ದಾಳಿ ಮಾಡಿದ್ದ ಇಸ್ರೇಲ್, ಇಂದು ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸುತ್ತಿದೆ. ಇಸ್ರೇಲ್‌ನ ಇತಿಹಾಸದಲ್ಲಿ ‘ಕ್ಷಮಿಸುವುದಕ್ಕಿಂತ ರಕ್ಷಿಸಿಕೊಳ್ಳುವುದು ಲೇಸು’ ಎಂಬ ತತ್ವವೇ ಹಾಸುಹೊಕ್ಕಾಗಿದೆ. ‘ಆಪರೇಷನ್ ಒಪೆರಾ’ ಕಲಿಸಿದ ಪಾಠ ಅಂದ್ರೆ - ಬಲಿಷ್ಠ ಶತ್ರುವಿನ ಮುಂದೆ ಬದುಕುಳಿಯಬೇಕಾದರೆ ಕೇವಲ ಪ್ರಾರ್ಥನೆ ಸಾಲದು, ಬದಲಾಗಿ ಶತ್ರುವಿನ ಮರ್ಮವನ್ನೇ ಅರಿತು ಹೊಡೆಯುವ ಚಾಣಾಕ್ಷ ತನ ಬೇಕು.’ ಈ ಹಿನ್ನೆಲೆಯಲ್ಲಿ, ಈಗ ನಡೆಯುತ್ತಿರುವ ಇರಾನ್ ವಿರುದ್ಧದ ಸಂಘರ್ಷದಲ್ಲಿ ಇಸ್ರೇಲ್ ಪಾತ್ರವನ್ನು ನೋಡಬೇಕು.