ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mirle Chandrashekher Column: ಸ್ವಾಸ್ಥ್ಯ ಇಲ್ಲದ ವಿಶ್ವಸಂಸ್ಥೆ ಜೀವಂತ ಇದೆಯೇ ?

ವಿಶ್ವಸಂಸ್ಥೆ ಎಂಬುದು 1945ರ ಅ.24ರಂದು ರೂಪುಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. 1939 ರಿಂದ 1945ರವರೆಗೆ ಆರು ವರ್ಷಗಳ ಕಾಲ ವಿಶ್ವದ ಎರಡು ಬಣಗಳ ನಡುವೆ ಎರಡನೇ ಮಹಾಯುದ್ಧ ನಡೆಯಿತು. ಒಟ್ಟು 70 ದೇಶಗಳ ಸೈನ್ಯವು ಭಾಗವಹಿಸಿದ್ದವು. ಆರು ಕೋಟಿಗೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇಂದು ಕಂಪ್ಯೂಟರ್, ತಂತ್ರಾಂಶ, ರೇಡಾರ್, ಸ್ಯಾಟಲೈಟ್, ಅಂತರ್ಜಾಲ, ಕೃತಕ ಬುದ್ಧಿಮತ್ತೆ ಮುಂತಾದ ವಿಭಾಗಗಳಲ್ಲಿ ಆಗಿರುವ ತಂತ್ರಜ್ಞಾನದ ಅಭಿವೃದ್ಧಿ ಯಿಂದಾಗಿ ಹಲವು ರಾಷ್ಟ್ರಗಳು ಸೂಪರ್ ಪವರ್ ಹೆಸರಲ್ಲಿ ಮೆರೆಯುತ್ತಿವೆ

ಅರಾಜಕ ಜಗತ್ತು

ಮಿರ್ಲೆ ಚಂದ್ರಶೇಖರ

ಯುದ್ಧಗಳು ಯಾಕಾದರೂ ನಡೆಯುತ್ತವೆಯೋ ಎಂಬುದು ಜನಸಾಮಾನ್ಯರ ಚಿಂತೆ, ದುಡಿದು ತಿನ್ನುವ ವರ್ಗದವರಿಗೆ ಇದರಿಂದ ಹೆಚ್ಚು ಹೊಡೆತ, ಆಮದು ರಪ್ತುವಿನಲ್ಲಿ ಆಗುವ ವ್ಯತ್ಯಾಸದಿಂದ ದರ ಏರಿಕೆ ಗಗನಕ್ಕೆ ಮುಟ್ಟಿದೆ. ಯುದ್ಧ ಕೆಲವು ದೇಶಗಳ ನಡುವೆ ಆದರೂ ಪರಿಣಾಮ ಇಡೀ ಮಾನವ ಕುಲಕ್ಕೇ ಬರೆ ಎಳೆದುಬಿಡುತ್ತದೆ.

ಯುದ್ಧಗಳಿಂದ ಆಗುವ ಲಾಭವಾದರೂ ಏನು? ಎಂಬುದು ಜನಸಾಮಾನ್ಯರ ಯಕ್ಷ ಪ್ರಶ್ನೆ. ಬೀದಿ ಜಗಳಗಳನ್ನು, ನೆರೆಹೊರೆಯ ಕಿತ್ತಾಟವನ್ನು ನಡುವೆ ಹೋಗಿ ಸಮಾಧಾನಪಡಿಸಿ ನಿಲ್ಲಿಸಬಹುದು. ಜಗಳ ವಿಕೋಪಕ್ಕೆ ತಿರುಗಿದಾಗ ಒಬ್ಬಿಬ್ಬರ ಸಾವುನೋವಿನಿಂದ ಮುಗಿಯಬಹುದು. ದೇಶಗಳ ನಡುವೆ ನಡೆಯುವ ಯುದ್ಧಗಳಲ್ಲಿ ಸಂಭವಿಸುವ ಸಾವು- ನೋವುಗಳು, ಆಸ್ತಿಪಾಸ್ತಿಗಳ ಹಾನಿ, ಪ್ರಕೃತಿ ಮೇಲಿನ ವಿಕೃತಿ, ಮುಂದಿನ ಪೀಳಿಗೆಯ ಆರೋಗ್ಯ.... ಮುಂತಾದ ಹಲವು ಬಗೆಯ ಹಾನಿ ಗಳನ್ನು ನಿಖರವಾಗಿ ಅಂದಾಜಿಸಲಾಗದು.

ಹಾನಿಯ ಪ್ರಮಾಣ ಮಾತ್ರ ಬಹುದೊಡ್ಡದಿರುತ್ತದೆ. ಮನುಷ್ಯ ಮನುಷ್ಯನಾಗಿರದೆ ರಾಕ್ಷಸನಾಗಿ, ಭೂತಾಯಿಯ ಲಕ್ಷಾಂತರ ಜೀವರಾಶಿಗಳಲ್ಲಿ ವಿಶೇಷ ಜೀವಿಯಾಗಿ ತನ್ನನ್ನು ಪೊರೆದ ಭೂದೇವಿಗೇ ಕಂಟಕನಾಗಿಬಿಟ್ಟ!

ಜಗಳ ಬಿಡಿಸಲು ಎಲ್ಲಾ ಕಡೆ ಇರುವಂತೆ ಇಲ್ಲೂ ಯಾರಾದರೂ ಇರಬೇಕಲ್ಲ? ಮಧ್ಯಸ್ಥಿಕೆ ವಹಿಸಿ ಕೊಂಡು ಸಮಸ್ಯೆಗಳನ್ನು ಬಗೆಹರಿಸಿ ಯುದ್ಧಗಳು ನಡೆಯದಂತೆ ಶಾಂತಿಯನ್ನು ಸ್ಥಾಪಿಸುವವರು ವಿಶ್ವದಲ್ಲಿ ಇದ್ದೂ ಇಲ್ಲವಾಗಿದ್ದಾರೆ. ಇಲ್ಲವಾದವರು ಎಂದರೆ ಬೇರೆ ಯಾರೂ ಅಲ್ಲ. ವಿಶ್ವದ ಮಹಾ ಸಂಸ್ಥೆ ಎನಿಸಿಕೊಂಡಿರುವ, ಹಾಲಿ ಅಸ್ವಸ್ಥರಾಗಿರುವ ವಿಶ್ವಸಂಸ್ಥೆ ಎಂಬ ಜಾಗತಿಕ ಸಂಸ್ಥೆ ಎನ್ನುವು ದನ್ನು ನೀವೂ ಒಪ್ಪುತ್ತೀರಲ್ಲವೇ? ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆಯನ್ನು ವಿಶ್ವಸಂಸ್ಥೆಯ ತಾತ್ಕಾಲಿಕ ಸದಸ್ಯ ರಾಷ್ಟ್ರ ಪಾಕಿಸ್ತಾನ ವಹಿಸುತ್ತದೆ ಎಂದರೆ ವಿಶ್ವಸಂಸ್ಥೆಯ ಸಾಮರ್ಥ್ಯ ಮತ್ತು ಕಾರ್ಯವೈಖರಿ ಎಲ್ಲಿಗೆ ಬಂದಿದೆ ಎನ್ನುವುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: Mirle Chandrashekher Column: ದುಡ್ಡು ಮಾಡೋದೇ ದಂಧೆ: ಸತ್ಯವಂತರಿಗಿಲ್ಲ ಜಾಗವಿಲ್ಲ

ವಿಶ್ವಸಂಸ್ಥೆ ಎಂಬುದು 1945ರ ಅ.24ರಂದು ರೂಪುಗೊಂಡ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. 1939 ರಿಂದ 1945ರವರೆಗೆ ಆರು ವರ್ಷಗಳ ಕಾಲ ವಿಶ್ವದ ಎರಡು ಬಣಗಳ ನಡುವೆ ಎರಡನೇ ಮಹಾ ಯುದ್ಧ ನಡೆಯಿತು. ಒಟ್ಟು 70 ದೇಶಗಳ ಸೈನ್ಯವು ಭಾಗವಹಿಸಿದ್ದವು. ಆರು ಕೋಟಿಗೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಇಂದು ಕಂಪ್ಯೂಟರ್, ತಂತ್ರಾಂಶ, ರೇಡಾರ್, ಸ್ಯಾಟಲೈಟ್, ಅಂತರ್ಜಾಲ, ಕೃತಕ ಬುದ್ಧಿಮತ್ತೆ ಮುಂತಾದ ವಿಭಾಗಗಳಲ್ಲಿ ಆಗಿರುವ ತಂತ್ರಜ್ಞಾನದ ಅಭಿವೃದ್ಧಿ ಯಿಂದಾಗಿ ಹಲವು ರಾಷ್ಟ್ರಗಳು ಸೂಪರ್ ಪವರ್ ಹೆಸರಲ್ಲಿ ಮೆರೆಯುತ್ತಿವೆ. ಈಗ ಏನಾದರೂ ಎರಡನೇ ಮಹಾಯುದ್ಧದ ರೀತಿಯಲ್ಲಿ 70 ದೇಶಗಳು ಕೂಡಿ ಯುದ್ಧ ನಡೆಸಿದರೆ ಮಾನವರಿರಲಿ, ಇಡೀ ಭೂಮಿಯೇ ಸರ್ವನಾಶ ಆಗುವುದು ಗ್ಯಾರಂಟಿ!.

ಎರಡನೇ ವಿಶ್ವಯುದ್ದದ ವಿಜಯಿ ದೇಶಗಳಾದ ಫ್ರಾನ್ಸ್, ಅಮೆರಿಕಾ, ಚೀನಾ, ಸೋವಿಯತ್ ಒಕ್ಕೂಟ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳ ಪ್ರತಿನಿಽಗಳು ವಿಶ್ವಸಂಸ್ಥೆಯ ರೂಪರೇಷೆಗಳನ್ನು ಸಿದ್ಧ ಪಡಿಸಿ ಸ್ಥಾಪಿಸಿದರು. ತರುವಾಯ 1945ರ ಜೂ. 29ರಂದು 51 ದೇಶಗಳು ಒಂದುಗೂಡಿ ವಿಶ್ವಸಂಸ್ಥೆ ಯ ಸ್ಥಾಪನೆಯನ್ನು ಅಂಗೀಕರಿಸಿದರು. ಇದರಲ್ಲಿ 193 ಸದಸ್ಯ ರಾಷ್ಟ್ರಗಳಿವೆ, ಭಾರತವು 1945ರ ಅ. 30ರಂದು ಇದರ ಸದಸ್ಯತ್ವವನ್ನು ಪಡೆದವು.

ವಿಶ್ವಸಂಸ್ಥೆ ಸ್ಥಾಪನೆಯ ಉದ್ದೇಶ ಒಳ್ಳೆಯದೇ ಆಗಿದೆ. ಮೊದಲ ಮಹಾಯುದ್ಧದ ನಂತರ ಸ್ಥಾಪಿಸ ಲಾಗಿದ್ದ ರಾಷ್ಟ್ರಗಳ ಸಂಘ(ಲೀಗ್ ಆಫ್ ನೇಷನ್ಸ್) ವಿಫಲತೆ ಕಂಡಿತು. ನಂತರ ನಡೆದ ಎರಡನೇ ಮಹಾಯುದ್ದದ ಭೀಕರ ಪರಿಣಾಮಗಳನ್ನು ತಿಳಿದು ಮುಂದಿನ ದಿನಗಳಲ್ಲಿ ಯುದ್ಧಗಳನ್ನು ತಡೆಯುವುದು ಹಾಗೂ ವಿಶ್ವಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ ಮಾನವ ಜನಾಂಗದ ಜೀವನಮಟ್ಟವನ್ನು ಸುಧಾರಿಸುವ ಪ್ರಮುಖ ಉದ್ದೇಶದಿಂದ ಸ್ಥಾಪಿಸಲಾಯಿತು.

ರಾಷ್ಟ್ರಗಳ ನಡುವೆ ಪರಸ್ಪರ ಸ್ನೇಹಸಂಬಂಧಗಳನ್ನು ಬೆಸೆಯುವುದು, ಜಾಗತಿಕ ಮಟ್ಟದಲ್ಲಿ ಪ್ರಕೃತಿ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಮುಂತಾದವುಗಳಿಂದ ಅಶಾಂತಿ ಉಂಟಾದಾಗ, ದೇಶಗಳ ನಡುವೆ ಸಮನ್ವಯ ಸಾಽಸಿ ಸಹಾಯ ಹಸ್ತ ನೀಡುವುದಾಗಿದೆ.

ಸದಸ್ಯ ರಾಷ್ಟ್ರಗಳು ಪರಸ್ಪರ ಸಮಾನತೆ, ಸೌಹಾರ್ದತೆ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವೀಯ ಸಮಸ್ಯೆಗಳನ್ನು ಸಹಕಾರ ತತ್ವದ ಮೇಲೆ ಬಗೆಹರಿಸಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆಯನ್ನು ನಿಯಂತ್ರಿಸುವುದು ಆ ಮೂಲಕ ಎಲ್ಲಾ ಜನಾಂಗಗಳ ಮೂಲ ಭೂತ ಹಕ್ಕುಗಳನ್ನು ರಕ್ಷಿಸಿ ಆರ್ಥಿಕ, ಸಾಮಾಜಿಕ ಪ್ರಗತಿ ಮತ್ತು ಜನತೆಯ ಜೀವನ ಮಟ್ಟವನ್ನು ಸುಧಾರಿಸುವುದಾಗಿರುತ್ತದೆ.

ಈ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕಾಗಿ ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಧರ್ಮದರ್ಶಿ ಮಂಡಳಿ, ಅಂತಾರಾಷ್ಟ್ರೀಯ ನ್ಯಾಯಾಲಯ ಹಾಗೂ ಕಾರ್ಯಾಲಯ ಎಂಬ ಆರು ಪ್ರಧಾನ ಸಮಿತಿಗಳನ್ನು ಮತ್ತು ಹಲವು ಉಪಸಮಿತಿಗಳನ್ನು ಹೊಂದಿದೆ. ಇವುಗಳಲ್ಲದೆ ವಿಶ್ವಸಂಸ್ಥೆಗೆ ಹಲವು ಅಂಗಸಂಸ್ಥೆಗಳೂ ಇವೆ.

ಉಪಸಮಿತಿಗಳಲ್ಲಿ ವಿಶ್ವಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ ಎಒ), ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾ ನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ(ಯುಎನ್‌ಸಿಎಸ್‌ಇಒಫ್ ಯುನೆಸ್ಕೊ), ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ವಿಶ್ವಕಾರ್ಮಿಕ ಸಂಸ್ಥೆ (ಐಎಲ್‌ಒ), ವಿಶ್ವಹಣಕಾಸು ಸಂಸ್ಥೆ(ಐಎಂಎಫ್), ವಿಶ್ವ ನಾಗರೀಕ ವಿಮಾನಯಾನ ಸಾರಿಗೆ ಸಂಸ್ಥೆ(ಐಸಿಎಒ), ವಿಶ್ವಅಣುಶಕ್ತಿ ಸಂಸ್ಥೆ (ಐಎಸಿಎ) ಮತ್ತು ವಿಶ್ವಬ್ಯಾಂಕ್ (ವರ್ಲ್ಡ್ ಬ್ಯಾಂಕ್) ಮುಂತಾದವುಗಳು ಕಾರ್ಯನಿರ್ವಹಿಸುತ್ತಿವೆ.

ಅಂದಿನ ಇಂಗ್ಲೆಂಡ್‌ನ ಪ್ರಧಾನಿ ಚರ್ಚಿಲ್, ಆಮೆರಿಕಾದ ಅಧ್ಯಕ್ಷ ಫ್ರಾಂಕ್ಲಿನ್ ಡಿ.ರೂಸ್‌ವೆಲ್ಟ್ ಹಾಗೂ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಅವರು ವಿಶ್ವಸಂಸ್ಥೆಯ ಸ್ಥಾಪನೆಗೆ ಪ್ರಮುಖ ರೂವಾರಿಗಳು, ಇದರ ಪ್ರಧಾನ ಕಚೆರಿಯು ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿದೆ. ಎಲ್ಲಾ ಕೋನಗಳಿಂದ ಪರಾಮ‌ ರ್ಶಿಸಿ, ಚರ್ಚಿಸಿ, ನಿಯಮಗಳನ್ನು ರೂಪಿಸಿಕೊಂಡು ಅಧಿಕೃತವಾಗಿ ಹಾಗೂ ವ್ಯವಸ್ಥಿತವಾಗಿ ಸಂಸ್ಥೆ ಯನ್ನು ಸ್ಥಾಪಿಸಲಾಗಿದೆ.

ಪೋರ್ಚ್‌ಗಲ್‌ನವರಾದ ಆಂಟೋನಿಯೋ ಗುಟೆರಸ್ ಅವರು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯ ದರ್ಶಿ (ವಿಶ್ವಸಂಸ್ಥೆಗೆ ಮುಖ್ಯಸ್ಥರು) ಆಗಿದ್ದಾರೆ. ಇವರು, ವಿಶ್ವಸಂಸ್ಥೆಯ ಒಂಬತ್ತನೇ ಮಹಾ ಕಾರ್ಯ ದರ್ಶಿಯಾಗಿದ್ದು, ಇವರ ಅವಧಿ 2017ರ ಜನವರಿ 1ರಿಂದ ಆರಂಭವಾಗಿತ್ತು.

2022ರ ಜ.1ರಿಂದ ಎರಡನೇ ಅವಧಿಗೆ ಮುಂದುವರಿದಿದ್ದಾರೆ. ಎಲ್ಲವೂ ಸರಿಯಾಗಿಯೇ ಇದೆ. ಆದರೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಇರುವ ವಿಶ್ವಸಂಸ್ಥೆಯ ಪ್ರಧಾನ ಕಚೆರಿಯಿಂದ ಕೇವಲ 360 ಕಿಮೀ ದೂರದಲ್ಲಿ ಇರುವ ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಇರುವ ಡೊನಾಲ್ಡ್ ಟ್ರಂಪ್‌ನ್ನು ಭೇಟಿ ಮಾಡಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವನ್ನು ತಡೆಯಲು ಆಗಲಿಲ್ಲ‌ ವೇ ಆಂಟೋನಿಯಾ ಗುಟೆರಸ್‌ರವರಿಗೆ? ಸಂಧಾನದ ನೀತಿ ನಿಯಮಗಳು ಏನಿವೆಯೋ ಕಾಣೆ.

ಇಂತಹ ಪರಿಸ್ಥಿತಿಯಲ್ಲೂ ವಿಶ್ವಸಂಸ್ಥೆ ಇರುವಿಕೆಯು ಜನರಿಗೆ ಕಾಣದೇ ಇರುವುದು ಇದೂ ಕೂಡ ಮೊದಲ ಮಹಾಯುದ್ಧದ ಬಳಿಕ ಸ್ಥಾಪಿತವಾದ ‘ಲೀಗ್ ಆಫ್ ನೇಷನ್ಸ್’ನಂತೆ ವಿಫಲವಾಯಿತೆ? ಎಂಬ ಅನುಮಾನವು ಮೂಡದೆ ಇರದು.

ಆರು ಪ್ರಧಾನ ಸಮಿತಿಗಳಲ್ಲಿ ಒಂದಾದ ಭದ್ರತಾ ಮಂಡಳಿಯು ಕಾರ್ಯಾಂಗದ ಮಾದರಿ ಕಾರ್ಯ ನಿರ್ವಹಿಸುತ್ತದೆ. ವಿಶ್ವಶಾಂತಿ ಹಾಗೂ ಭದ್ರತೆ ಕಾಪಾಡುವ ಮೂಲಕ ಮೂರನೇ ಮಹಾಯುದ್ಧ ನಡೆಯುವುದನ್ನು ತಡೆಯುವ ಜವಾಬ್ದಾರಿ ಹೊಂದಿದೆ. ಮಂಡಳಿಯಲ್ಲಿ ಐದು ಖಾಯಂ ಸದಸ್ಯ ರಾಷ್ಟ್ರಗಳು ಹಾಗೂ ಹತ್ತು ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿವೆ, ಖಾಯಂ ಸದಸ್ಯರಿಗೆ ವಿಟೋ ಅಧಿಕಾರವಿದೆ.

ಭಾರತವು ಈ ಮಂಡಳಿಯಲ್ಲಿ ಸದಸ್ಯತ್ವವನ್ನು ಹೊಂದಿಲ್ಲ. ಖಾಯಂ ಸದಸ್ಯತ್ವವನ್ನು ಪಡೆಯಲು ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಬೆಂಬಲ ನೀಡಿವೆಯಾದರೂ ಭಾರತದ ಮಹತ್ವಾಕಾಂಕ್ಷೆ ಫಲಿಸಿಲ್ಲ. ಖಾಯಂ ಸದಸ್ಯತ್ವ ಪಡೆದಿರುವ ಅಮೆರಿಕಾವು ಶಾಂತಿ ಕಾಪಾಡದೆ ಅದೇ ಯುದ್ಧದಲ್ಲಿ ಮುಂಚೂಣಿಯಲ್ಲಿ ಇರುವುದು ದುರದೃಷ್ಟಕರ.

ಯುದ್ಧಗಳನ್ನು ತಡೆಯಲಾಗದೆ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿ ಕುಳಿತಿರುವ ವಿಶ್ವಸಂಸ್ಥೆಯ ಕೆಲಸವಾದರೂ ಏನು? ಮೂರನೇ ಮಹಾಯುದ್ಧ ನಡೆಯುವ ಸಂಭವ ಇಲ್ಲವೇ ಇಲ್ಲ ಎನ್ನಬಹುದು. ಅಕಸ್ಮಾತ್ ನಡೆದರೆ ಸಂಭವಿಸುವ ಭೀಕರತೆ ಅತೀ ಕರಾಳವಾಗಿರುತ್ತದೆ. ಹಿಂದೆ ಮದ್ದುಗುಂಡುಗಳನ್ನು ಉಪಯೋಗಿಸಿ ಯುದ್ಧ ನಡೆಯುತ್ತಿತ್ತು, ವೈಜ್ಞಾನಿಕ ಅಭಿವೃದ್ಧಿಯ ಕಾರಣ ಹಾಗೂ ಬದಲಾದ ತಂತ್ರಜ್ಞಾನದಲ್ಲಿ ಎಲ್ಲೋ ಕುಳಿತು ಕೇವಲ ಬಟನ್ ಒತ್ತುವ ಮೂಲಕ ಯುದ್ಧ ಗಳು ನಡೆಯುತ್ತವೆ.

ಪರಮಾಣು ಬಳಕೆ ಆಗದೆ ಇರದು ಎನ್ನುವಂತಿಲ್ಲ. ಭೀಕರವಾದ ಹೋರಾಟದಲ್ಲಿ ಜನರು ಅನ್ನ ನೀರಿಲ್ಲದೆ ಸಾಯುತ್ತಾರೆ. ಫಲವತ್ತಾದ ಭೂಮಿಯೂ ಇಲ್ಲದೆ ಆಹಾರವನ್ನು ಬೆಳೆಯಲಾಗುವುದಿಲ್ಲ. ಯುದ್ಧಗಳು ಇಡೀ ಮಾನವ ಕುಲದ ವಿನಾಶಕ್ಕೆ ಕಾರಣವಾಗುತ್ತದೆ. ಎಲ್ಲವೂ ನಾಶ, ಅಳಿದುಳಿ ದವರು ಇದ್ದು ಮುಂದೆ ನಾಲ್ಕನೇ ಮಹಾಯುದ್ಧ ನಡೆಯಬಹುದೆಂದು ಕಲ್ಪಿಸಿಕೊಂಡರೆ, ಕಲಿಯುಗದ ಪ್ರಾರಂಭದಲ್ಲಿ ನಡೆದಂತೆ ಯಾವೊಂದು ತಾಂತ್ರಿಕ ಆಯುಧಗಳ ಬಳಕೆ ಇಲ್ಲದೆ ಮಚ್ಚು, ದೊಣ್ಣೆ ಹಾಗೂ ಕಲ್ಲುಗಳನ್ನು ಬಳಸಿ ನಡೆಸುತ್ತಾರೆ ಎಂಬುದು ಸತ್ಯವಾದ ಮಾತು!

ನುಷ್ಯನೊಳಗಿನ ಪೈಶಾಚಿಕ ಗುಣ ನಿರ್ಮೂಲವಾಗದ ಹೊರತು ಸುಧಾರಣೆ ಆಗದು. ವಿಶ್ವಸಂಸ್ಥೆ ಯಲ್ಲಿ ಕುಳಿತಿರುವವರೂ ಮನುಷ್ಯರೇ, ಶಾಂತಿ ಸಂಧಾನ ಮಾಡಲಾಗದೆ ನಂಬಿಕೆಗೆ ಅರ್ಹವಲ್ಲದ ಪಾಕಿಸ್ತಾನದಂತಹ ದೇಶವು ಮುಂದೆ ಬಂದಿರುವುದನ್ನು ನೋಡಿದರೆ ವಿಶ್ವಸಂಸ್ಥೆಯ ಅವಸ್ಥೆ ಹೇಗಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಶಾಂತಿಗಾಗಿ ಇಡೀ ಜಗತ್ತಿಗೆ ಕುವೆಂಪುರವರ ವಿಶ್ವಮಾನವ ಸಂದೇಶವನ್ನು ತಿಳಿಸಬೇಕಾಗಿದೆ. ವಿಶ್ವಸಂಸ್ಥೆ ಅದನ್ನಾದರೂ ಭಾಷಾಂತರಿಸಿ ಪ್ರಚಾರ ಮಾಡಿದರೆ ಒಂದಷ್ಟು ಮನಸ್ಸುಗಳು ಪರಿವರ್ತನೆ ಆದಾವು. ಲೇಖನ ಬರೆಯುತ್ತಿರುವಾಗ ನಡುವೆ ನಾದಾನಂದನಾಥ ಸ್ವಾಮೀಜಿಯವರು ತಾವು ರಚಿಸಿದ ಕವನವನ್ನು ನನ್ನ ವಾಟ್ಸ್‌ಆಪ್‌ಗೆ ಕಳುಹಿಸಿದ್ದು, ಅದರ ಕೆಲವು ಸಾಲುಗಳು ಇಲ್ಲಿಗೆ ಸೂಕ್ತವಾಗಿತ್ತು; ಯಾವ ಮನುಷ್ಯರ ಸ್ವಾರ್ಥಕ್ಕೆ ಭೂಮಿ ನಲುಗಿದೆ ಎಚ್ಚರ...!! ಸಮರಸದಿ ಬದುಕು ಕಟ್ಟು ಕನಸ ದೂರ ಬಿಟ್ಟೆವು...!! ಅಣ್ವಸಗಳ ಪೈಪೋಟಿಯೊಳಗೆ ರಣರಂಗದಿ ನಿಂತೆವು...!! ಪ್ರಕೃತಿಯೊಳಗೆ ನಾವು ಏನು ಅರ್ಥ ಮಾಡಿಕೊಳ್ಳದೆ ಹೋದೆವು...!!