Mirle Chandrashekher Column: ದುಡ್ಡು ಮಾಡೋದೇ ದಂಧೆ: ಸತ್ಯವಂತರಿಗಿಲ್ಲ ಜಾಗವಿಲ್ಲ
‘ಏನಪ್ಪಾ ಮಾಡೋದು?’ ಎಂದು ತಲೆಯ ಮೇಲೆ ಕೈಹೊತ್ತು ಕುಳಿತರೆ ಆತ ಏನನ್ನೂ ದಕ್ಕಿಸಿ ಕೊಳ್ಳಲಾರ. ಜೀವಸಂಕುಲಗಳು ಬದುಕಿರುವುದೇ ಹೋರಾಟದ ಕೆಚ್ಚಿನಿಂದ, ಒಂದು ಮತ್ತೊಂದನ್ನು ಕೊಂದು ಬದುಕುವುದೇ ಇಲ್ಲಿ ನಿಯಮವಾಗಿ ಬಿಟ್ಟಿದೆ. ಒಬ್ಬ ಮನುಷ್ಯನು ಮತ್ತೊಬ್ಬನನ್ನು ಕೊಂದು ಬದುಕುವುದನ್ನು ನಿಯಮವು ಸಮರ್ಥಿಸುವುದಿಲ್ಲವಾದರೂ, ಸ್ವಾರ್ಥಕ್ಕಾಗಿ ಒಬ್ಬರು ಮತ್ತೊಬ್ಬರನ್ನು ತುಳಿದು ನಡೆಯುವುದನ್ನು ಕಾಣುತ್ತಿದ್ದೇವೆ.
-
ಸದಾಶಯ
ಮಿರ್ಲೆ ಚಂದ್ರಶೇಖರ
ಸರಕಾರಿ ಶಾಲೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾನ್ವೆಂಟುಗಳು ಹಳ್ಳಿಗಳಲ್ಲೂ ತಲೆ ಯೆತ್ತಿವೆ. ಇದರ ಹಿಂದಿರುವುದು, ‘ಮಕ್ಕಳು ವಿದ್ಯಾವಂತರಾಗಬೇಕು, ದೇಶಕ್ಕೆ ಸತ್ಪ್ರಜೆ ಗಳ ಕೊಡುಗೆ ಸಿಗಬೇಕು’ ಎಂಬ ಆಶಯವಲ್ಲ; ಬದಲಿಗೆ ಶಿಕ್ಷಣದ ಹೆಸರಿನಲ್ಲಿ ಗಂಟು ಮಾಡಿಕೊಳ್ಳುವ ಉದ್ದೇಶ.
ಬದುಕೆಂದರೆ ಹೋರಾಟವೇ ಹೌದು. ಹೋರಾಡದೆ ಜೀವನವಿಲ್ಲ. ಕೆಲವರಿಗೆ ಹೋರಾಟವೇ ಬದುಕಾಗಿದೆ. ಹುಟ್ಟಿದ ಮಗುವಿನಿಂದ ಮೊದಲ್ಗೊಂಡು, ಮರಣದ ಬಾಗಿಲಲ್ಲಿ ನಿಂತಿರು ವಾತನವರೆಗೂ ಹೋರಾಟ ಮಾಡಲೇಬೇಕು. ಧೈರ್ಯದಿಂದ ಮುನ್ನುಗ್ಗಿ ಹೋರಾಡಿ ದವನು ಯಶಸ್ಸನ್ನು ಕಾಣುತ್ತಾನೆ.
‘ಏನಪ್ಪಾ ಮಾಡೋದು?’ ಎಂದು ತಲೆಯ ಮೇಲೆ ಕೈಹೊತ್ತು ಕುಳಿತರೆ ಆತ ಏನನ್ನೂ ದಕ್ಕಿಸಿಕೊಳ್ಳಲಾರ. ಜೀವಸಂಕುಲಗಳು ಬದುಕಿರುವುದೇ ಹೋರಾಟದ ಕೆಚ್ಚಿನಿಂದ, ಒಂದು ಮತ್ತೊಂದನ್ನು ಕೊಂದು ಬದುಕುವುದೇ ಇಲ್ಲಿ ನಿಯಮವಾಗಿಬಿಟ್ಟಿದೆ. ಒಬ್ಬ ಮನುಷ್ಯನು ಮತ್ತೊಬ್ಬನನ್ನು ಕೊಂದು ಬದುಕುವುದನ್ನು ನಿಯಮವು ಸಮರ್ಥಿಸುವುದಿಲ್ಲವಾದರೂ, ಸ್ವಾರ್ಥಕ್ಕಾಗಿ ಒಬ್ಬರು ಮತ್ತೊಬ್ಬರನ್ನು ತುಳಿದು ನಡೆಯುವುದನ್ನು ಕಾಣುತ್ತಿದ್ದೇವೆ.
‘ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ, ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ’ ಎನ್ನುತ್ತದೆ ಕುವೆಂಪು ಅವರ ಕವನದ ಸಾಲೊಂದು. ಆದರೆ ನಮ್ಮಲ್ಲಿ ಬಹುತೇಕ ರು, ‘ಇನ್ನೊಬ್ಬರನ್ನು ತುಳಿದು ಮುಂದೆ ನಡೆ’ ಎಂಬ ಧೋರಣೆಯನ್ನು ರೂಢಿಸಿಕೊಂಡಿರು ವಂತಿದೆ!
ಭಂಡತನವೇ ಬದುಕಿನ ಸೂತ್ರವಾಗಿ ಬಿಟ್ಟಿದೆ. ಕೆಲವರನ್ನು ಹೊರತುಪಡಿಸಿ, ಕೋಟಿ ಕೋಟಿಗೆ ಬಾಳುವ ಕುಳಗಳ ಹಿನ್ನೆಲೆಯನ್ನು ಒಮ್ಮೆ ಕೆದಕಿ ನೋಡಿದರೆ, ಅವರು ಅಡ್ಡ ದಾರಿಯ ಮೂಲಕ ಮೇಲೆ ಬಂದವರೋ ಅಥವಾ ದಾರಿಯಲ್ಲಿ ಅಡ್ಡ ಸಿಕ್ಕವರನ್ನು ಬಡಿದು ಬಂದವರೋ ಆಗಿರುತ್ತಾರೆ ಎಂಬುದು ವಿಪರ್ಯಾಸ.
ಇದನ್ನೂ ಓದಿ: Mirley Chandrashekher Column: ವರುಣ ಕರುಣಿಸಿದ್ದಾನೆ, ಬಾಗಿಲುಗಳು ಭದ್ರವಾಗಿವೆಯೇ ?!
ಬೆಳಗ್ಗೆಯಿಂದ ಸಂಜೆಯವರೆಗೂ ಮೈಮುರಿದು ದುಡಿಯುವ ಶ್ರಮಜೀವಿಗೆ, ತನ್ನ ಕೆಲಸ ದಲ್ಲಿ ತೋರಬೇಕಾದ ನಿಷ್ಠೆ ಮತ್ತು ಅದಕ್ಕೆ ತಕ್ಕ ಪ್ರತಿಫಲ ಇಷ್ಟು ಮಾತ್ರವೇ ನಿರೀಕ್ಷೆ ಯಾಗಿರುತ್ತದೆ. ಈತ ಶ್ರೀಮಂತ ಆಗುವುದಾದರೂ ಹೇಗೆ?! ಆದರೆ ಆತನಿಗಿರುವ ನೆಮ್ಮದಿಯು ಕಂತೆಗಟ್ಟಲೆ ಹಣ ಸಂಪಾದಿಸುವವರಿಗೂ ಕೆಲವೊಮ್ಮೆ ಸಿಗುವುದಿಲ್ಲ.
ಶಾಲಾ ಶಿಕ್ಷಣದಿಂದ ಪ್ರಾರಂಭವಾಗಿ, ಬದುಕನ್ನು ಕಟ್ಟಿಕೊಡುವ ಕಾರ್ಯಕ್ಷೇತ್ರದವರೆಗೂ ಅವರಿರವರನ್ನು ತುಳಿದು ಬದುಕುವುದೇ ಬಹುತೇಕರ ಆಟವಾಗಿಬಿಟ್ಟಿದೆ. ಹೀಗೆ ಮಾಡಿದರೆ ಮಾತ್ರವೇ ಸಿರಿವಂತರಾಗಲು ಸಾಧ್ಯ ಎಂಬ ಧೋರಣೆಯೂ ಇದಕ್ಕೆ ಕಾರಣವಿದ್ದಿರಬಹುದು. ನಮ್ಮ ರಾಜಕೀಯ ಕ್ಷೇತ್ರವನ್ನೇ ತೆಗೆದುಕೊಳ್ಳಿ- ಇಲ್ಲಿ ಇಂದು ಆಪ್ತರಾಗಿದ್ದವರು ನಾಳೆ ವೈರಿಗಳು; ಅಧಿಕಾರ ಪಡೆಯುವುದಕ್ಕೆ ವೈರಿಯೂ ಆಪ್ತನಾಗುತ್ತಾನೆ, ಅದನ್ನು ದಕ್ಕಿಸಿ ಕೊಂಡವನು ನಂತರದಲ್ಲಿ, ಸಹಾಯ ಮಾಡಿದವನನ್ನೂ ತುಳಿದೇ ಮೆರೆಯುತ್ತಾನೆ!
ಸ್ಪರ್ಧೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂಬ ಹವಣಿಕೆಯಲ್ಲಿ ಮೋಸ ಮಾಡುವುದು ಈಗ ಸ್ವೀಕೃತ ಗುಣವಾಗಿ ಬಿಟ್ಟಿದೆ. ಕಾರಣ, ಇಂಥ ಆಸೆಯನ್ನು ಮಕ್ಕಳಲ್ಲೇ ಕೆಲವರು ಬಿತ್ತುವುದಿದೆ. ಕಾನ್ವೆಂಟ್ ಸಂಸ್ಕೃತಿ ಬಂದ ಮೇಲೆ ಇದು ಕೊಂಚ ವ್ಯಾಪಕವಾಗಿದೆ ಎನ್ನಬೇಕು.
ಇದನ್ನೂ ಓದಿ:Mirley Chandrashekher Column: ಹರ್ಷದ ಕೂಳಿಗೆ ಆಸೆಗೆ, ವರ್ಷದ ಕೂಳು ಕೈತಪ್ಪದಿರಲಿ
ಮೊದಲ ಹೆಜ್ಜೆಯಾಗಿ, “ನನ್ನ ಮಗ ಪ್ರತಿಷ್ಠಿತ ಇಂಗ್ಲಿಷ್ ಕಾನ್ವೆಂಟ್‌ನಲ್ಲೇ ಓದಬೇಕು, ಅವನ ಓದಿಗಾಗಿ ಎಷ್ಟೇ ಹಣ ಖರ್ಚಾದರೂ ಸಂಪಾದಿಸಿ ತರುವೆ; ಆತ ಪ್ರತಿ ಹಂತದಲ್ಲೂ ರ‍್ಯಾಂಕ್ ಪಡೆದೇ ಪಾಸಾಗಬೇಕು" ಎನ್ನುವ ಧೋರಣೆ ಸಾಕಷ್ಟು ಪೋಷಕರಲ್ಲಿರುತ್ತದೆ. ಮಕ್ಕಳ ಬೆಳವಣಿಗೆಯ ದೃಷ್ಟಿಯಲ್ಲಿ ಇಂಥದೊಂದು ಆಶಯ ಸಹಜವೇ ಇದ್ದಿರಬಹುದು. ಆದರೆ ಬೇರೆಯವರ ಮಕ್ಕಳೊಂದಿಗೆ ಈ ‘ಸ್ಥಿತಿಗತಿ’ಯನ್ನು ತುಲನೆ ಮಾಡಿ ಆನಂದಿಸುವುದು ಸರಿಯೇ? ಸರಕಾರಿ ಶಾಲಾ-ಕಾಲೇಜುಗಳಲ್ಲಿ ಕಡಿಮೆ ಖರ್ಚಿನಲ್ಲಿ ವಿದ್ಯೆ ಸಿಗುತ್ತಿದ್ದರೂ, ಆದಾಯ ಮೀರಿ ಖರ್ಚುಮಾಡಿ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಓದಿಸಲು ಮುಂದಾಗು ವವರು, ಆ ಹೆಚ್ಚುವರಿ ಹಣಕ್ಕಾಗಿ ‘ಅನ್ಯ’ ಅಥವಾ ‘ವಾಮ’ ಮಾರ್ಗವನ್ನು ಆಯ್ಕೆ ಮಾಡಿ ಕೊಳ್ಳದೇ ಇರುವರೇ? ಇಂಥ ಮಾರ್ಗಗಳಲ್ಲಿ ಮತ್ತೊಬ್ಬರನ್ನು ತುಳಿದು ಸಂಪಾದಿಸುವುದೂ ಸೇರಿರುತ್ತದೆಯಲ್ಲವೇ? ಸರಕಾರಿ ಶಾಲೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾನ್ವೆಂಟುಗಳು ಹಳ್ಳಿ ಗಳಲ್ಲೂ ತಲೆಯೆತ್ತಿವೆ.
ಇದರ ಹಿಂದಿರುವುದು, ‘ಮಕ್ಕಳು ವಿದ್ಯಾವಂತರಾಗಬೇಕು, ದೇಶಕ್ಕೆ ಸತ್ಪ್ರಜೆಗಳ ಕೊಡುಗೆ ಸಿಗಬೇಕು’ ಎಂಬ ಆಶಯವಲ್ಲ; ಬದಲಿಗೆ ಶಿಕ್ಷಣದ ಹೆಸರಿನಲ್ಲಿ ಗಂಟು ಮಾಡಿಕೊಳ್ಳುವ ಉದ್ದೇಶ. ಇದಕ್ಕಾಗಿ ಇವರು ತುಳಿಯುವುದು ಒಬ್ಬಿಬ್ಬರನ್ನಲ್ಲ, ಇಡೀ ಸಮುದಾಯನ್ನು. ಇವರಿಗೆ ಹಣ ನೀಡುವುದಕ್ಕೆ ಪೋಷಕರಿಗೂ ದಾರಿ ಬೇಕಲ್ಲ? ದಕ್ಕುವ ಸರಕಾರಿ ಸಂಬಳವು ಡೊನೇಷನ್ ಕೊಟ್ಟು ಓದಿಸುವುದಕ್ಕೆ ಸಾಲುತ್ತದೆಯೇ? ಇಲ್ಲ.
ಹೀಗಾಗಿ ಹೆಚ್ಚಿನ ಸಂಪಾದನೆಗಾಗಿ ‘ಕೈಚಾಚುವುದು’ ಅವರಿಗೆ ಅನಿವಾರ್ಯವಾಗುತ್ತದೆ. ಆದರೆ ನಮ್ಮ ರೈತರ ಪಾಡನ್ನು ಕೇಳುವವರು ಯಾರು? ಅವರಿಗೆ ಲಂಚ ಎಲ್ಲಿಂದ ಬರಬೇಕು? ಇರುವ ಜಮೀನಿನಿಂದ ಬರುವ ಅಲ್ಪಸ್ವಲ್ಪ ಬೆಳೆಯನ್ನು ಮಾರಾಟ ಮಾಡಿ ಯೇ ಅವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಈ ದುರವಸ್ಥೆ ಯಾರ ಗಮನ ಕ್ಕೂ ಬರುತ್ತಿಲ್ಲವೇಕೆ? ಇತ್ತೀಚಿನ ದಿನಗಳಲ್ಲಿ, ಇಂಗ್ಲಿಷ್ ಕಾನ್ವೆಂಟ್‌ಗಳಂತೆ ನಗರದ ಬೀದಿ ಬೀದಿಗಳಲ್ಲಿ ಹಾಗೂ ಸಣ್ಣ ಪುಟ್ಟ ಊರುಗಳಲ್ಲೂ ಲೆಕ್ಕವಿಲ್ಲದಷ್ಟು ನರ್ಸಿಂಗ್ ಹೋಮ್ ಗಳು ಹುಟ್ಟಿಕೊಂಡಿವೆ.
ಇವು ಹಣ ಮಾಡುವ ಕೇಂದ್ರಗಳೇ ಆಗಿಬಿಟ್ಟಿರುವುದನ್ನು ಹೊಸದಾಗಿ ಹೇಳಬೇಕಿಲ್ಲ. ನಾಲ್ಕು ದಶಕಗಳ ಹಿಂದೆ ಇಂಥ ಚಿತ್ರಣವಿರಲಿಲ್ಲ. ಆಗೆಲ್ಲಾ, ಸರಕಾರಿ ಆಸ್ಪತ್ರೆಗಳಲ್ಲಿ ಗಾಜಿನ ಹೂಜಿಗಳಲ್ಲಿ ತುಂಬಿಸಿಟ್ಟು ಉಚಿತವಾಗಿ ಕೊಡುತ್ತಿದ್ದ ಬಣ್ಣ ಬಣ್ಣದ ಕಹಿ ಔಷಧಿ ಮತ್ತು ಮಾತ್ರೆಗಳೇ ರೋಗಿಗಳನ್ನು ಕಾಪಾಡುತ್ತಿದ್ದವು.
ಕೆಮ್ಮಿದ್ದಕ್ಕೆ, ಕ್ಯಾಕರಿಸಿದ್ದಕ್ಕೆಲ್ಲಾ ಲ್ಯಾಬ್‌ಗಳಲ್ಲಿ ಪರೀಕ್ಷೆ ಮಾಡಿಸುವ ಗೋಜಿರಲಿಲ್ಲ. ಹಲ್ಲಿನ ಡಾಕ್ಟರ್‌ಗಳು ಇದ್ದುದೇ ಅಪರೂಪ ಎನ್ನಬಹುದು! ಕಾಯಿಲೆ ಯಾವುದೇ ಆಗಿರಲಿ, ನೋಡುವ ವೈದ್ಯರು ಇದ್ದುದು ಒಬ್ಬರೇ. ಈಗ ಬಿಡಿ, ಪ್ರತಿ ಅಂಗಾಂಗಕ್ಕೂ ಒಬ್ಬೊಬ್ಬ ಸ್ಪೆಷಲಿಸ್ಟ್ ಹುಟ್ಟಿಕೊಂಡಿದ್ದಾರೆ. ರೋಗಿಯನ್ನು ಪರೀಕ್ಷಿಸುತ್ತಿದ್ದಂತೆ ಅವರು ಹೇಳಿ ಬಿಡುತ್ತಾರೆ- “ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ, ಅವರಿಗೆ ಬರುತ್ತೆ. ಅವರಲ್ಲಿಗೆ ಹೋಗಿ" ಅಂತ!
ಸರಕಾರಗಳು ಉಚಿತವಾಗಿ ಕೊಡಬೇಕಾಗಿರುವುದು ಶಿಕ್ಷಣ ಮತ್ತು ಆರೋಗ್ಯವನ್ನು. ಇವೆರಡನ್ನು ಬಿಟ್ಟು ಉಳಿದೆಲ್ಲವನ್ನೂ ಉಚಿತವಾಗಿ ಕೊಟ್ಟರೂ ಪ್ರಯೋಜನವಿಲ್ಲ. ಹಸಿದವರಿಗೆ ‘ಅನ್ನಭಾಗ್ಯ’ ಬೇಕು ನಿಜ; ಆದರೆ ಹೊಟ್ಟೆತುಂಬಾ ಉಂಡುಬಿಟ್ಟರೆ ಸಾಕೇ? ಆರೋಗ್ಯ ಮತ್ತು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಬೇಡವೇ? ದುಡಿಮೆ ಎಂಬುದು ಬದುಕಿನಲ್ಲಿ ಮೃಷ್ಟಾನ್ನವನ್ನು ತಿನ್ನುವಷ್ಟು ಶಕ್ತಿಯನ್ನು ದಕ್ಕಿಸಿ ಕೊಡುವಂತಿರಬೇಕು; ಆದರೆ ಇಂದಿನ ವ್ಯವಸ್ಥೆಯಲ್ಲಿ ಮನೆಮಂದಿಯೆಲ್ಲಾ ಹಗಲಿರುಳು ದುಡಿದರೂ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹಣವನ್ನು ಹೊಂಚಲಾಗದು ಎಂಬ ಪರಿಸ್ಥಿತಿ ಇದೆ.
ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ್ದು ಈ ಬಾಬತ್ತುಗಳಿಗೆ ಸಾಲದೆ ಹೋಗುವು ದರಿಂದ, ವಾಮಮಾರ್ಗದ ಸಂಪಾದನೆಗೆ ಪ್ರಚೋದನೆಯಾಗುವುದರಲ್ಲಿ ಅಚ್ಚರಿಯೇನಿಲ್ಲ. ಶಿಕ್ಷಣ ಮತ್ತು ಆರೋಗ್ಯ ಎಂಬೆರಡು ಸೌಕರ್ಯಗಳು ಪೂರ್ಣ ಪ್ರಮಾಣದಲ್ಲಿ ಉಚಿತ ವಾದರೆ ಸಮಾಜವು ನೆಮ್ಮದಿಯನ್ನು ಕಾಣಬಲ್ಲದು; ಇಲ್ಲವಾದಲ್ಲಿ ಹೆಚ್ಚಿನ ಸಂಪಾದನೆಗೆ ಮತ್ತೊಬ್ಬರ ತಲೆಯ ಮೇಲೆ ಕೈ ಇಡುವುದು ಅನಿವಾರ್ಯವಾಗುತ್ತದೆ.
ಜನರು ಊಟ ಮತ್ತು ಬಟ್ಟೆಯನ್ನು ಹೇಗಾದರೂ ಸಂಪಾದಿಸಿಕೊಳ್ಳುತ್ತಾರೆ; ಆದರೆ ಸಣ್ಣ ಪುಟ್ಟ ಕಾಯಿಲೆ ಬಂದರೂ ಅದಕ್ಕೆ ತಗಲುವ ವೆಚ್ಚವನ್ನು ಅವರು ಭರಿಸಲಾರರು. ಇನ್ನು ದೊಡ್ಡ ಕಾಯಿಲೆಗಳು ಅಟಕಾಯಿಸಿಕೊಂಡರಂತೂ ಅವರು ಸತ್ತಂತೆಯೇ!
ನಮ್ಮಲ್ಲಿ ಹಸಿವಿನಿಂದ ಸತ್ತವರು ಕಡಿಮೆಯೇ; ಚಿಕಿತ್ಸೆಗೆ ಹಣವನ್ನು ಹೊಂದಿಸಲಾಗದೆ ರೋಗದಿಂದ ನರಳಿ ನರಳಿ ಮರಣ ಹೊಂದುತ್ತಿರುವವರೇ ಹೆಚ್ಚು. ಆದ್ದರಿಂದ ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಬೇಕಿದೆ ಆರೋಗ್ಯ ಮತ್ತು ಶಿಕ್ಷಣ, ಅದೂ ಸಂಪೂರ್ಣ ಉಚಿತ ವಾಗಿ.
(ಲೇಖಕರು ಹವ್ಯಾಸಿ ಬರಹಗಾರರು