ಅಶ್ವತ್ಥಕಟ್ಟೆ
ranjith.hoskere@gmail.com
ಕರ್ನಾಟಕದ ಜನರ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಯನ್ನು ಅರಿಯಬೇಕೆಂಬ ಕಾರಣಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎರಡನೇ ಬಾರಿಗೆ (ಈ ಹಿಂದೆ ಕಾಂತರಾಜು ಆಯೋಗ) ಆರಂಭಿಸಿರುವ ಸಮೀಕ್ಷೆ ಎನ್ನುವ ‘ಮಹಾಯಜ್ಞ’ದ ನಿಗದಿತ ಸಮಯ ಮಂಗಳವಾರಕ್ಕೆ ಮುಗಿಯ ಲಿದೆ.
ಶೇ.100ರಷ್ಟು ಸಮೀಕ್ಷೆ ಕಾರ್ಯವಾಗಿಲ್ಲವಾದ್ದರಿಂದ ಇನ್ನೊಂದು ವಾರ ಸಮೀಕ್ಷೆ ನಡೆಯುವುದು ಬಹುತೇಕ ನಿಶ್ಚಿತ. ಆರಂಭದಲ್ಲಿ ಜಾತಿ ಗಣತಿ ಎನ್ನುವ ಕಾರಣಕ್ಕೆ ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೀಗ ಅದು ಜಾತಿ ಲೆಕ್ಕಾಚಾರವನ್ನು ಮೀರಿದೆ. ಸಮೀಕ್ಷೆಯಲ್ಲಿ ಭಾಗವಹಿಸು ವವರು ತಮ್ಮ ಜಾತಿ ಮಾಹಿತಿಯನ್ನು ಸುಲಭಕ್ಕೆ ನೀಡುತ್ತಿದ್ದಾರೆ. ಆದರೆ ಪ್ರಶ್ನಾವಳಿಯಲ್ಲಿರುವ ಇನ್ನುಳಿದ ವಿಷಯಗಳ ಕುರಿತು ಮಾಹಿತಿ ನೀಡಬೇಕೇ ಬೇಡವೇ ಎನ್ನುವ ಗೊಂದಲದಲ್ಲಿ ಸಮೀಕ್ಷಾ ದಾರರ ಮುಂದೆ ಕೂರುತ್ತಿದ್ದಾರೆ.
ಕೆಲವರು ಕೂತು, ಮಾಹಿತಿ ನೀಡಲ್ಲ ಎನ್ನುತ್ತಿದ್ದರೆ, ಇನ್ನೂ ಕೆಲವರು ಕೈಗೆ ಸಿಗುವುದೇ ಬೇಡ ಎನ್ನುವ ಮನಸ್ಥಿತಿಗೆ ಜಾರಿದ್ದಾರೆ. ಸಮೀಕ್ಷೆಯನ್ನು ಆರಂಭಿಸಲು ಮುಂದಾದ ದಿನವೇ ಹಲವು ರೀತಿಯ ಅಕ್ಷೇಪ, ಅಸಮಾಧಾನ ಶುರುವಾಗಿತ್ತು. ಈ ಸಮೀಕ್ಷೆಯನ್ನು ಪ್ರಶ್ನಿಸಿ ಕೆಲವರು ನ್ಯಾಯಾ ಲಯದ ಮೆಟ್ಟಿಲನ್ನು ಏರಿದ್ದರು. ಸಮೀಕ್ಷೆ ನಡೆಸುವುದಕ್ಕೆ ಹೈಕೋರ್ಟ್ ತಡೆ ನೀಡದಿದ್ದರೂ, ‘ಒತ್ತಡ’ ಹೇರುವಂತಿಲ್ಲ ಎನ್ನುವ ಸೂಚನೆಯನ್ನು ನೀಡಿದೆ.
ಇದರ ಜತೆಜತೆಗೆ ಸಮೀಕ್ಷೆಯಲ್ಲಿ ಭಾಗವಹಿಸುವ ಜನರ ಮಾಹಿತಿಯ ‘ಗೌಪ್ಯತೆ’ ಕಾಪಾಡಲಾಗು ವುದು ಎನ್ನುವ ಭರವಸೆಯನ್ನು ಸರಕಾರ ನೀಡಿರುವುದರಿಂದ, ಸಮೀಕ್ಷೆಗೆ ಹೈಕೋರ್ಟ್‌ನಿಂದ ‘ಗ್ರೀನ್ ಸಿಗ್ನಲ್’ ಸಿಕ್ಕಿದೆ. ಆದರೆ, ಸಮೀಕ್ಷೆ ವೇಳೆ ನೀಡುವ ಮಾಹಿತಿ ಎಷ್ಟರ ಮಟ್ಟಿಗೆ ಭದ್ರವಾಗಿರು ತ್ತದೆ ಎನ್ನುವುದು ಬಹುತೇಕರ ಆತಂಕವಾಗಿದೆ.
ಇದನ್ನೂ ಓದಿ: Ranjith H Ashwath Column: ಗುಂಡಿ ವಿಷ್ಯದಲ್ಲಿ ಎಲ್ಲರೂ ಸಮಾನ ಅಪರಾಧಿಗಳೇ !
ಗ್ರಾಮೀಣ ಭಾಗದಲ್ಲಿರುವ ಅನೇಕರು ಈ ಗೌಪ್ಯತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲವಾದರೂ, ನಗರಪ್ರದೇಶ ವಾಸಿಗಳು ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ‘ನಾವು ನೀಡುವ ಆಧಾರ್ ಕಾರ್ಡ್ ನಂಬರ್ ದುರುಪಯೋಗವಾದರೆ ಏನು ಮಾಡಬೇಕು?’ ಎನ್ನುವುದು ಬಹುತೇಕರ ಪ್ರಶ್ನೆಯಾಗಿದೆ.
ಎಲ್ಲ ಮಾಹಿತಿಯನ್ನು ನೀಡಲೇಬೇಕು ಎನ್ನುವ ನಿಯಮವಿಲ್ಲ ಎನ್ನುವುದನ್ನು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಆಧಾರ್ ಕಾರ್ಡ್, ಫೋನ್ ನಂಬರ್, ಮನೆಯ ವಿದ್ಯುತ್ ಬಿಲ್ ಅನ್ನು ನೀಡುವುದು ಅನಿವಾರ್ಯ. ಜಾತಿ ವಿಷಯದಲ್ಲಿ, ಮನೆಯಲ್ಲಿರುವ ಆಭರಣ, ಸ್ಥಿರ-ಚರಾಸ್ತಿ ವಿಷಯ ದಲ್ಲಿ ಹೆಚ್ಚು ಕಡಿಮೆ ಮಾಡಬಹುದು. ನಗರ ಪ್ರದೇಶದಲ್ಲಿರುವ ಬಹುತೇಕರಿಗೆ, ಈ ಬೇಸಿಕ್ ಮಾಹಿತಿ ಯನ್ನು ನೀಡುವ ವಿಷಯದಲ್ಲಿಯೇ ‘ತಕರಾರು’ ಇದೆ.
ಸಮೀಕ್ಷೆ ಮಾಡುವವರಿಗೆ, ಜನರಿಂದ ಮಾಹಿತಿಯನ್ನು ದಾಖಲಿಸಿಕೊಳ್ಳುವುದಕ್ಕಿಂತ, ಜನರಿಗೆ ಮಾಹಿತಿ ಕೊಡುವಂತೆ ಕೇಳಿಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ಇದರೊಂದಿಗೆ ಒಬ್ಬೊಬ್ಬರ ಮಾಹಿತಿಯನ್ನು ದಾಖಲಿಸಿಕೊಳ್ಳುವುದಕ್ಕೆ ಕನಿಷ್ಠ ಒಂದು ತಾಸು ಅಗತ್ಯವಿರುವುದರಿಂದ ಕುಟುಂಬ ವೊಂದರಲ್ಲಿ ನಾಲ್ಕು ಜನರಿದ್ದರೆ ಕನಿಷ್ಠ ನಾಲ್ಕು ತಾಸು ಅಗತ್ಯ. ಇಷ್ಟು ‘ಫ್ರೀ’ಯಾಗಿ ನಗರ ಭಾಗದಲ್ಲಿ ಕೂತು ಮಾಹಿತಿ ನೀಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಎನ್ನುವುದು ಸ್ಪಷ್ಟ.
ಮೇಲ್ನೋಟಕ್ಕೆ ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಸಮೀಕ್ಷೆ ನಡೆಸುವುದು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಆಯೋಗವಿತ್ತು. ಏಕೆಂದರೆ, ನಗರ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗುವು ದಿಲ್ಲ. ಜನರು ಮಾಹಿತಿಯನ್ನು ಸಿದ್ಧವಾಗಿಟ್ಟುಕೊಂಡಿರುತ್ತಾರೆ. ಆದ್ದರಿಂದ ‘ಫಟಾಫಟ್’ ಎಂದು ಸಮೀಕ್ಷೆ ಮುಗಿಸಬಹುದು ಎಂದುಕೊಂಡಿದ್ದರು.
ಆದರೆ, ಸಮೀಕ್ಷೆ ಕಾರ್ಯ ಆರಂಭವಾದ ಬಳಿಕ ಅಧಿಕಾರಿಗಳಿಗೆ ಹಾಗೂ ಸಮೀಕ್ಷಾದಾರರಿಗೆ ಅರ್ಥ ವಾಗಿದ್ದು, ನಗರದಲ್ಲಿ ಸರ್ವರ್ ಸಮಸ್ಯೆಯಿಲ್ಲದಿರಬಹುದು; ಆದರೆ ಮಾಹಿತಿ ಕೊಡುವುದಕ್ಕೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ ಎಂಬುದು. ನಗರ ಪ್ರದೇಶದಲ್ಲಿನ ಸಮಸ್ಯೆ ಇದಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ಕೊಡುವುದಕ್ಕೆ ಜನರು ಹೆಚ್ಚು ತಲೆಕೆಡಿಸಿಕೊಳ್ಳದಿದ್ದರೂ, ಸಮೀಕ್ಷಾದಾರರು ಕೇಳುವ ಬಹುತೇಕ ಪ್ರಶ್ನೆಗಳಿಗೆ ಅವರ ಬಳಿ ‘ಸ್ಪಷ್ಟ’ ಮಾಹಿತಿ ಇರುವುದಿಲ್ಲ.
ಇದ್ದರೂ, ಹುಡುಕಾಟದಲ್ಲಿಯೇ ಸಮಯ ಹೋಗುತ್ತಿದೆ. ಆದರೆ ಸಮಯವೆಷ್ಟೇ ಹೋದರೂ, ಕೊಟ್ಟಿರುವ ಟಾರ್ಗೆಟ್ ರೀಚ್ ಆಗದಿದ್ದರೆ ಅದಕ್ಕೆ ‘ಶಿಕ್ಷೆ’ಯೂ ಇರುವುದರಿಂದ ಸಮೀಕ್ಷಾದಾರರ ಪರಿಸ್ಥಿತಿ ಸದ್ಯಕ್ಕೆ ‘ಅತ್ತ ದರಿ, ಇತ್ತ ಪುಲಿ’ ಎನ್ನುವಂತಾಗಿದೆ. ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿದ ದಿನದಿಂದಲೂ, ಸಮೀಕ್ಷೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದವು.
ಅದರಲ್ಲಿಯೂ ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಜಿಯೋ ಟ್ಯಾಗ್ ವ್ಯವಸ್ಥೆ ಸರಿಯಾಗಿ ಆಗಿಲ್ಲ ಎನ್ನುವ ಆರೋಪವಿತ್ತು. ಮನೆಯ ವಿಳಾಸ ಒಂದು ಕಡೆಯಿದ್ದರೆ, ಮ್ಯಾಪ್‌ನಲ್ಲಿ ತೋರಿಸುವ ಸ್ಥಳ ಇನ್ನೊಂದು ಕಡೆಯಿರಲಿದೆ. ಸರಿಯಾಗಿ ಸರ್ವರ್ ಕನೆಕ್ಟ್ ಆಗುವುದಿಲ್ಲ ಎನ್ನುವ ಅಕ್ಷೇಪವಿತ್ತು.
ಆದರೆ ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ಕಾರ್ಯ ಶುರುವಾದ ಬಳಿಕ, ಅದರಲ್ಲಿಯೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ನಿವಾಸ ಗಳಲ್ಲಿ ಸಮೀಕ್ಷೆ ನಡೆಸುವ ವೇಳೆ, ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಯಾವಾಗ ಈ ಇಬ್ಬರು ನಾಯಕರು ವಿರೋಧಿಸಿದರೋ, ಆಗ ಸುದ್ದಿ ದೊಡ್ಡದಾಗಲು ಶುರುವಾಗಿದೆ. ಪ್ರಶ್ನಾವಳಿಯಲ್ಲಿ ಅನೇಕರಿಗೆ ಇರುವ ಗೊಂದಲ ಬಹಿರಂಗವಾಗುವ ಮೊದಲೇ, ಅದಾಗಲೇ ಶೇ.50ರಷ್ಟು ಸಮೀಕ್ಷೆ ಮುಗಿದಿದೆ ಎಂದು ಸರಕಾರದ ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿತ್ತು.
ಆದರೆ ಸಮೀಕ್ಷೆ ನಡೆಸಿರುವ ಬಹುತೇಕರ ಪ್ರಕಾರ, ಪ್ರಶ್ನಾವಳಿಯಲ್ಲಿ ಕೇಳಿರುವ ಅದೆಷ್ಟೋ ಪ್ರಶ್ನೆಗಳಿಗೆ ಅನೇಕರು ಉತ್ತರಿಸಲು ಸಿದ್ಧರಿಲ್ಲ. ಕೆಲವರು, ಎಂಜಿನಿಯರ್ ವೃತ್ತಿಯಲ್ಲಿದ್ದರೂ ವರಮಾನವನ್ನು ಶೂನ್ಯವೆಂದು ಬರೆಸುತ್ತಿದ್ದಾರೆ. ಮನೆಯಲ್ಲಿ ಇಂಟರ್‌ನೆಟ್ ಇಲ್ಲ, ಒಡವೆಯಿಲ್ಲ, ಆರೋಗ್ಯ ವಿಮೆಯಿಲ್ಲ ಎಂದು ಹೇಳುತ್ತಾರೆ. ಆದರೆ ಮನೆಯ ಮುಂದೆ ದೊಡ್ಡ ದೊಡ್ಡ ಕಾರು ಗಳನ್ನು ನಿಲ್ಲಿಸಿರುತ್ತಾರೆ.
ಯಾವುದೇ ಪ್ರಶ್ನೆಗಳಿಗೆ ಒತ್ತಡ ಹೇರಿ ಉತ್ತರ ಪಡೆಯುವಂತಿಲ್ಲ ಎನ್ನುವ ಸೂಚನೆಯಿರುವುದರಿಂದ, ಅವರು ಹೇಳಿದ್ದನ್ನು ಮಾತ್ರ ಬರೆದುಕೊಂಡು ಬರಬಹುದಾಗಿದೆ. ಹೀಗಿರುವಾಗ, ಅವರು ಹೇಳಿದ್ದನ್ನು ‘ಬರೆದುಕೊಂಡು’ ಬಂದು ಕೊಡುವುದು ಎಷ್ಟರ ಮಟ್ಟಿಗೆ ನೈಜ ಪರಿಸ್ಥಿತಿಯನ್ನು ತೋರಿಸುತ್ತದೆ? ಇನ್ನು ಕೆಲವರು, ನಾವು ಕೇಳುವ ಪ್ರಶ್ನೆಗಳನ್ನು ನೋಡಿ ನಮ್ಮ ಮೇಲೆಯೇ ರೇಗಾಡುತ್ತಾರೆ.
ಕೆಲವೊಮ್ಮೆ ‘ಊಹಾತ್ಮಕ’ವಾಗಿ ಕೆಲ ಸಮೀಕ್ಷಾದಾರರು ದಾಖಲೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿವೆ. ಆದ್ದರಿಂದ ಒತ್ತಡಕ್ಕೆ ಮಣಿದು ಕೊಟ್ಟಿರುವ ಟಾರ್ಗೆಟ್ ಅನ್ನು ಮುಗಿಸಿದರೆ ಸಾಕೆಂಬ ಮನಸ್ಥಿತಿಯಲ್ಲಿ ಬಹುತೇಕ ಸಮೀಕ್ಷಾದಾರರು ಇದ್ದಾರೆ. ಇಂಥ ಸಮಯದಲ್ಲಿ ನೈಜ ಮಾಹಿತಿ ಪಡೆಯಲು ಅಥವಾ ವೈಜ್ಞಾನಿಕವಾಗಿ ಸಮೀಕ್ಷೆಯನ್ನು ನಡೆಸಲು ಸಾಧ್ಯವೇ? ಎನ್ನುವ ಪ್ರಶ್ನೆಗೆ ಆಯೋಗದ ಬಹುತೇಕರ ಬಳಿ ಉತ್ತರವಿಲ್ಲ.
ಈ ಸಮೀಕ್ಷೆಯ ಆರಂಭದಿಂದಲೂ ಬಹುದೊಡ್ಡ ವಿರೋಧ ವ್ಯಕ್ತವಾಗಿದ್ದು, ಸಮೀಕ್ಷೆ ಮಾಡಬೇಕಿದ್ದ ಶಿಕ್ಷಕ ವರ್ಗದಿಂದ. ಏಕೆಂದರೆ, ಮೊದಲನೆಯದಾಗಿ ದಸರಾ ರಜೆಯ ಸಮಯದಲ್ಲಿ ಈ ರೀತಿ ಸಮೀಕ್ಷೆಯಿಟ್ಟು, ಒಬ್ಬೊಬ್ಬರಿಗೆ 150 ಮನೆಯ ಟಾರ್ಗೆಟ್ ನೀಡಿದ್ದು ಬಹುತೇಕರ ಅಕ್ಷೇಪಕ್ಕೆ ಕಾರಣವಾಗಿತ್ತು. ಇದರೊಂದಿಗೆ, ಈ ಸಮೀಕ್ಷೆಯ ಅವಧಿಯಲ್ಲಿ ಕೇಳಿರುವ ಪ್ರಶ್ನೆಗಳಲ್ಲಿ ಕೆಲವು ತೀರಾ ವೈಯಕ್ತಿಕವಾಗಿವೆ.
ಇಂಥ ಸೂಕ್ಷ್ಮ ಪ್ರಶ್ನೆಗಳು, ಅದರಲ್ಲಿಯೂ ಆರೋಗ್ಯ, ಕುಟುಂಬ ಪಡೆದಿರುವ ಸಾಲ, ಸಾಲದ ಉದ್ದೇಶ, ಮನೆಯಲ್ಲಿರುವ ಕೋಳಿ, ಕುರಿ, ದನದ ವಿವರ ಸೇರಿದಂತೆ ವೈಯಕ್ತಿಕ ವಿವರಗಳನ್ನು ಅನೇಕ ಬಾರಿ ಹೇಳಲು ಬಹುತೇಕರು ಇಚ್ಛಿಸುವುದಿಲ್ಲ. ಇದರೊಂದಿಗೆ ಸ್ಥಳೀಯ ಮಾಹಿತಿಗಳನ್ನು ನೀಡಬೇಕಾದ ಪ್ರಶ್ನೆಗಳನ್ನು ಈ ಪ್ರಶ್ನಾವಳಿಯಲ್ಲಿ ರೂಪಿಸಲಾಗಿದೆ.
ಉದಾಹರಣೆಗೆ, ಅಂತರ್ಜಾಲ ಸೌಲಭ್ಯ, ಪಾರ್ಕ್, ಜಿಮ್ ಇದೆಯೇ? ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪ್ರದೇಶವೇ? ಕುಟುಂಬದ ವಿರುದ್ಧ ಕಾನೂನು ವ್ಯಾಜ್ಯಗಳಿವೆಯೇ? ಎನ್ನುವ ಪ್ರಶ್ನೆ ಗಳನ್ನು ಸೇರಿಸಲಾಗಿದೆ. ಈ ರೀತಿಯ ಪ್ರಶ್ನೆಗಳಿಗೆ ಬಹುತೇಕರು ಉತ್ತರಿಸುವುದಿಲ್ಲ. ಹೀಗಿರು ವಾಗ, ಈ ಸಮೀಕ್ಷೆ ಪರಿಪೂರ್ಣ ಹೇಗಾಗುತ್ತದೆ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ ವಾಗಿದೆ.
ಹಾಗೆ ನೋಡಿದರೆ, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ಕಾಂತರಾಜು ಆಯೋಗ ಮಾಡಿದ್ದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಈ ಪ್ರಮಾಣದಲ್ಲಿ ಗೊಂದಲ, ಗೋಜಲುಗಳು ಇರಲಿಲ್ಲ. ಇದಕ್ಕೆ ಕಾರಣ ನೋಡಿದರೆ, ಮೊದಲನೆಯದಾಗಿ ಕಳೆದ ಅವಧಿಯಲ್ಲಿ ಈ ಬಾರಿಯಂತೆ ಮೊಬೈಲ್ ಆಪ್, ಒಟಿಪಿ, ವೆಬ್‌ಸೈಟ್‌ನಲ್ಲಿ ನೋಂದಣಿಯ ಪ್ರಕ್ರಿಯೆಗಳಿರಲಿಲ್ಲ.
ಇನ್ನೊಂದು ಬಹುಮುಖ್ಯ ಅಂಶವೆಂದರೆ, ಬಹುತೇಕ ಮನೆಗಳಿಗೆ ಸಮೀಕ್ಷಾದಾರರೂ ಹೋಗೇ ಇರಲಿಲ್ಲ ಎನ್ನುವ ಆರೋಪವಿದೆ. ಈ ಆರೋಪವನ್ನು ಸರಕಾರ, ಆಯೋಗ ಹಾಗೂ ಕಾಂಗ್ರೆಸ್ ನಾಯಕರು ತಳ್ಳಿಹಾಕಬಹುದು. ಆದರೆ ಸಾರ್ವಜನಿಕರನ್ನು ಈ ಬಗ್ಗೆ ಕೇಳಿದಾಗ, ಬಹುತೇಕರು ‘ಸಮೀಕ್ಷೆ ಮಾಡಿರುವುದು ನಮಗೆ ಗೊತ್ತೇ ಆಗಲಿಲ್ಲ’ ಎನ್ನುವ ಮಾತನ್ನು ಆಡುತ್ತಿದ್ದಾರೆ.
ಕಳೆದ ಬಾರಿಯ ಈ ಆರೋಪ ಈ ಬಾರಿ ಬರಬಾರದು ಎನ್ನುವ ಕಾರಣಕ್ಕೆ, ರಾಜ್ಯ ಸರಕಾರ ಮನೆ ಮನೆ ಸರ್ವೇಗೆ ಸ್ಟಿಕರ್, ಜಿಯೋ ಟ್ಯಾಗಿಂಗ್ ಸೇರಿದಂತೆ ಹಲವು ರೀತಿಯ ಕ್ರಮವನ್ನು ವಹಿಸಲು ಆಯೋಗಕ್ಕೆ ಸೂಚನೆ ನೀಡಿತ್ತು. ಆದರೆ ‘ತಂತ್ರಜ್ಞಾನ’ ಆಧಾರಿತ ವ್ಯವಸ್ಥೆಯೇ ಇದೀಗ ಹಲವು ಸಮೀಕ್ಷಾದಾರರಿಗೆ ತಲೆಬಿಸಿಯಾಗಿದೆ ಎನ್ನುವುದು ವಾಸ್ತವ.
ಸರಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕೆಂಬ ಉದ್ದೇಶದಿಂದ, ರಾಜ್ಯದಲ್ಲಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅರಿಯಬೇಕು ಎನ್ನುವ ಉದ್ದೇಶದಿಂದ ಸಮೀಕ್ಷೆ ಯನ್ನು ಮಾಡುತ್ತಿರುವುದು ತಪ್ಪಲ್ಲ. ಆದರೆ ಆಯೋಗದ ಬಹುಪಾಲು ಪ್ರಶ್ನೆಗಳಿಗೆ ‘ಗೊತ್ತಿಲ್ಲ.. ಹೇಳಲ್ಲ’ ಎನ್ನುವ ಉತ್ತರವನ್ನು ಜನರು ನೀಡುತ್ತಾ ಹೋದರೆ, ಇದರಿಂದ ಸರಿಯಾದ ಮಾಹಿತಿ ಸಿಗುವುದಾದರೂ ಎಲ್ಲಿಂದ? ಹೀಗಿರುವಾಗ ಈ ಮಾಹಿತಿಯನ್ನೇ ಆಧರಿಸಿ ಯಾವ ರೀತಿಯಲ್ಲಿ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಹೇಳಿದಂತೆ, ಸಮೀಕ್ಷೆಗಳೆಂದರೆ ಸರಳವಾಗಿರಬೇಕು.
ಅದನ್ನು ಬಿಟ್ಟು ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧವಾಗುವಂತೆ ಸಿದ್ಧವಾಗಿರಬೇಕಾದ ರೀತಿಯ ಪ್ರಶ್ನೆಗಳನ್ನು ಕೇಳಿದರೆ ಸತ್ಯ ಹೊರಬರುವುದು ಹೇಗೆ ಸಾಧ್ಯ? ಈಗಾಗಲೇ ಆರಂಭಗೊಂಡಿರುವ ಸಮೀಕ್ಷೆಯ ಸಮಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ. ಆದರೆ ಈ ಗೊಂದಲಮಯ ಪ್ರಶ್ನಾವಳಿ ಯನ್ನು ರೂಪಿಸಿರುವ ಆಯೋಗಕ್ಕೆ ಇದರಿಂದ ಆಗುವ ಲಾಭ-ನಷ್ಟವೇನು ಎನ್ನುವುದು ಗೊತ್ತಿಲ್ಲ. ಆದರೆ, ಸಮೀಕ್ಷೆಯ ಹೆಸರಲ್ಲಿ ಗಣತಿ ಮಾಡುತ್ತಿರುವ ಶಿಕ್ಷಕರು ಹಾಗೂ ಇತರೆ ಸರಕಾರಿ ನೌಕರರು ಸಮೀಕ್ಷೆಯನ್ನು ಮುಗಿಸುವಷ್ಟರಲ್ಲಿ ಹೈರಾಣಾಗುವುದಂತೂ ಸತ್ಯ.