ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nanjanagud Mohan Column: ಲೇಖಕನ ಅಭಿಪ್ರಾಯಕ್ಕೆ ಸಂಪಾದಕನನ್ನು ಹೊಣೆ ಮಾಡುವುದು ನ್ಯಾಯೋಚಿತವೇ ?

ಒಬ್ಬ ಲೇಖಕನ ಅಭಿಪ್ರಾಯವನ್ನು ಪ್ರಕಟಿಸಿದ ಮಾತ್ರಕ್ಕೆ ಆ ಅಭಿಪ್ರಾಯದ ಸಂಪೂರ್ಣ ಹೊಣೆಗಾರಿಕೆ ಸಂಪಾದಕನzಗುತ್ತದೆಯೇ? ಹಾಗಾದರೆ ಪತ್ರಿಕೆ ಎಂದರೆ ಸಂಪಾದಕನ ವೈಯಕ್ತಿಕ ಅಭಿಪ್ರಾಯಗಳ ಪ್ರಕಟಣಾ ವೇದಿಕೆಯೇ? ವಿಭಿನ್ನ ವಿಚಾರಧಾರೆಗಳಿಗೆ, ಭಿನ್ನಮತಗಳಿಗೆ, ವಿವಾದಾತ್ಮಕ ಚರ್ಚೆಗಳಿಗೆ ಅವಕಾಶ ಕಲ್ಪಿಸುವ ಸಾರ್ವಜನಿಕ ವೇದಿಕೆಯಲ್ಲವೇ ಅದು? ಲೇಖಕ ಬರೆದಿದ್ದನ್ನು ಸಂಪಾದಕ ಪ್ರಕಟಿಸಿದ ಮಾತ್ರಕ್ಕೆ ಅದರಲ್ಲಿರುವ ಪ್ರತಿಯೊಂದು ವಾದವನ್ನೂ ಸಂಪಾದಕ ಒಪ್ಪಿಕೊಂಡಿದ್ದಾನೆ ಎಂರ್ಥವಲ್ಲ.

ಮುಕ್ತಮಾತು

ನಂಜನಗೂಡು ಮೋಹನ್

ಬಸವ ಮಂಟಪ’ ಕೃತಿಯ ಸುತ್ತ ಎದ್ದಿರುವ ವಿವಾದ ಈಗ ಕೇವಲ ಕೃತಿಯಲ್ಲಿನ ವಿಚಾರಗಳ ಪರ-ವಿರೋಧದ ಚರ್ಚೆಯಾಗಿ ಉಳಿದಿಲ್ಲ. ಆ ಕೃತಿಯ ಲೇಖನಕ್ಕೆ ‘ವಿಶ್ವವಾಣಿ’ ಪತ್ರಿಕೆಯಲ್ಲಿ ಪ್ರಕಟಣೆಗೆ ಅವಕಾಶ ನೀಡಿದ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನೇ ಹೊಣೆಗಾರರನ್ನಾಗಿಸುವ ಪ್ರಯತ್ನ ಇಲ್ಲವೇ ಷಡ್ಯಂತ್ರದ ಒಂದು ಭಾಗವಾಗಿ ತಿರುವು ಪಡೆಯುತ್ತಿರುವುದು ಹೆಚ್ಚು ಆತಂಕಕಾರಿ. ಇಲ್ಲಿ ಒಂದು ಸರಳ ಪ್ರಶ್ನೆ. ‌

ಒಬ್ಬ ಲೇಖಕನ ಅಭಿಪ್ರಾಯವನ್ನು ಪ್ರಕಟಿಸಿದ ಮಾತ್ರಕ್ಕೆ ಆ ಅಭಿಪ್ರಾಯದ ಸಂಪೂರ್ಣ ಹೊಣೆಗಾರಿಕೆ ಸಂಪಾದಕನzಗುತ್ತದೆಯೇ? ಹಾಗಾದರೆ ಪತ್ರಿಕೆ ಎಂದರೆ ಸಂಪಾದಕನ ವೈಯಕ್ತಿಕ ಅಭಿಪ್ರಾಯಗಳ ಪ್ರಕಟಣಾ ವೇದಿಕೆಯೇ? ವಿಭಿನ್ನ ವಿಚಾರಧಾರೆಗಳಿಗೆ, ಭಿನ್ನಮತಗಳಿಗೆ, ವಿವಾದಾತ್ಮಕ ಚರ್ಚೆಗಳಿಗೆ ಅವಕಾಶ ಕಲ್ಪಿಸುವ ಸಾರ್ವಜನಿಕ ವೇದಿಕೆಯಲ್ಲವೇ ಅದು? ಲೇಖಕ ಬರೆದಿದ್ದನ್ನು ಸಂಪಾದಕ ಪ್ರಕಟಿಸಿದ ಮಾತ್ರಕ್ಕೆ ಅದರಲ್ಲಿರುವ ಪ್ರತಿಯೊಂದು ವಾದವನ್ನೂ ಸಂಪಾದಕ ಒಪ್ಪಿಕೊಂಡಿದ್ದಾನೆ ಎಂರ್ಥವಲ್ಲ.

ಇದನ್ನೂ ಓದಿ: Nanjangud Mohan Column: ಸಂಬಂಧಗಳಿಗೆ ಮಠದ ಗೋಡೆಗಳಿಲ್ಲ; ಮಾನವೀಯ ಗುಣಗಳಿಗೆ ಗಡಿಗಳಿಲ್ಲ

ಪ್ರಕಟಣೆ ಎಂದರೆ ಅನುಮೋದನೆಯಲ್ಲ. ಒಂದು ವಿಚಾರವನ್ನು ಸಾರ್ವಜನಿಕ ಚರ್ಚೆಗೆ ತೆರೆದಿಡುವುದು ಮತ್ತು ಆ ವಿಚಾರವನ್ನು ಸಂಪಾದಕನೇ ಪ್ರತಿಪಾದಿಸುವುದು ಅಲ್ಲವೇ? ಹಾಗೆಂದ ಮೇಲೆ ಇವೆರಡರ ನಡುವೆ ದೊಡ್ಡ ವ್ಯತ್ಯಾಸವಿದೆ. ಖಂಡಿತವಾಗಿಯೂ ಸಂಪಾದಕನಿಗೆ ಹೊಣೆಗಾರಿಕೆ ಇಲ್ಲವೆಂದಲ್ಲ, ಇದೆ. ಪ್ರಕಟವಾಗುವ ವಿಷಯದ ಕುರಿತು ವಿವೇಚನೆ ಇರಬೇಕು.

ಪತ್ರಿಕೆಯ ನೈತಿಕತೆ, ವೃತ್ತಿಪರ ಮಾನದಂಡ ಮತ್ತು ಕಾನೂನಿನ ಮಿತಿಗಳನ್ನು ಗೌರವಿಸಬೇಕು. ಆದರೆ ಆ ಹೊಣೆಗಾರಿಕೆಯ ಹೆಸರಿನಲ್ಲಿ ಸಂಪಾದಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಮೊಟಕು ಗೊಳಿಸುವುದು ಎಷ್ಟು ಸಮಂಜಸ? ‘ಬಸವ ಮಂಟಪ’ ಕೃತಿಯಲ್ಲಿನ ವಿಚಾರಗಳು ಆಕ್ಷೇಪಾರ್ಹ ವೆನಿಸಿದರೆ ಅವುಗಳನ್ನು ಖಂಡಿಸಿ. ಲೇಖಕನ ವಾದಗಳನ್ನು ಪ್ರಶ್ನಿಸಿ. ಇತಿಹಾಸ, ವಚನ ಸಾಹಿತ್ಯ, ಬಸವಣ್ಣನವರ ತತ್ವ ಮತ್ತು ಲಿಂಗಾಯತ ಪರಂಪರೆಯ ಕುರಿತು ವಿದ್ವತ್ಪೂರ್ಣ ಪ್ರತಿವಾದ ಮಂಡಿಸಿ.

ಸತ್ಯಾಸತ್ಯತೆಗಳನ್ನು ಚರ್ಚೆಯ ಮೂಲಕ ನಿರ್ಧರಿಸೋಣ. ಅದಕ್ಕೆ ಯಾರ ಅಭ್ಯಂತರವೂ ಇಲ್ಲ, ಇರಬೇಕಿಲ್ಲ. ಆದರೆ ಲೇಖಕನನ್ನು ಪ್ರಶ್ನಿಸುವ ಬದಲು, ಆತನ ಬರಹಕ್ಕೆ ವೇದಿಕೆ ನೀಡಿದ ಸಂಪಾದಕನನ್ನೇ ಗುರಿಯಾಗಿಸುವುದರಲ್ಲಿ ನ್ಯಾಯವಿದೆಯೆ? ಇದು ವಿಮರ್ಶೆಯೇ ಅಥವಾ ಸಂಪಾದಕೀಯ ಸ್ವಾತಂತ್ರ್ಯದ ಮೇಲೆ ಒತ್ತಡ ಹೇರುವ ಪ್ರಯತ್ನವೇ? ಇಂದು ಒಂದು ವಿವಾದಿತ ಲೇಖನಕ್ಕೆ ಅವಕಾಶ ನೀಡಿದ ಕಾರಣಕ್ಕೆ ಸಂಪಾದಕನನ್ನು ಹೊಣೆಗಾರನನ್ನಾಗಿಸಿದರೆ, ನಾಳೆ ಮತ್ತೊಂದು ವಿಚಾರಧಾರೆಯವರಿಗೆ ಅಸಮಾಧಾನವಾದಾಗ ಬೇರೆ ಸಂಪಾದಕರ ಸರದಿ ಬರಬಹುದು.

62 N M

ಹೀಗೆ ಪ್ರತಿಯೊಂದು ವಿಚಾರಕ್ಕೂ ಯಾರಾದರೊಬ್ಬರ ಭಾವನೆ ನೋಯುವ ಸಾಧ್ಯತೆಯನ್ನು ಮುಂದಿಟ್ಟುಕೊಂಡು ಪತ್ರಿಕೆಯ ಪುಟಗಳನ್ನು ಮತ್ಯಾರೋ ನಿಯಂತ್ರಿಸುವ ಸ್ಥಿತಿ ನಿರ್ಮಾಣವಾದರೆ, ಸ್ವತಂತ್ರ ಪತ್ರಿಕೋದ್ಯಮಕ್ಕೆ ಉಳಿಯುವ ಅವಕಾಶವಾದರೂ ಏನು? ವಿಶ್ವೇಶ್ವರ ಭಟ್ ಅವರ ಸಂಪಾದಕೀಯ ನಿರ್ಧಾರವನ್ನು ಯಾರಾದರೂ ಟೀಕಿಸಬಹುದು. ಅವರ ನಿಲುವನ್ನು ಒಪ್ಪದಿರ ಬಹುದು. ಅದಕ್ಕೆ ಪ್ರತಿಯಾಗಿ ಬರೆಯಬಹುದು. ಆದರೆ ಅವರ ಸಂಪಾದಕೀಯ ಸ್ವಾತಂತ್ರ್ಯವನ್ನು ಪ್ರಶ್ನಿಸುವುದಕ್ಕೂ, ಅದನ್ನು ಹತ್ತಿಕ್ಕಲು ಪ್ರಯತ್ನಿಸುವುದಕ್ಕೂ ವ್ಯತ್ಯಾಸವಿದೆ.

ವಿಶ್ವೇಶ್ವರ ಭಟ್ ಅವರ ಎಲ್ಲ ಅಭಿಪ್ರಾಯಗಳನ್ನೂ ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ ಭಿನ್ನಾಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುವ ಸಂಪಾದಕೀಯ ಸ್ವಾತಂತ್ರ್ಯವನ್ನು ಅವರು ಹೊಂದಿರಬೇಕು ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇದು ವ್ಯಕ್ತಿಯೊಬ್ಬರ ಪರ ವಹಿಸುವುದಲ್ಲ; ಪತ್ರಿಕಾ ಸ್ವಾತಂತ್ರ್ಯದ ಪರ ನಿಲ್ಲುವುದಾಗಿದೆ.

ನನಗೆ ಇಲ್ಲಿ ಮುಖ್ಯವಾಗಿ ಕಾಡುವ ಪ್ರಶ್ನೆ ಬಸವ ಮಂಟಪ ಕೃತಿಯಲ್ಲಿರುವ ವಿಚಾರಗಳಷ್ಟೇ ಅಲ್ಲ. ಆ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸುವ ಅವಕಾಶವನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆಯೇ ಎಂಬುದು. ವಿಚಾರವನ್ನು ವಿಚಾರದಿಂದ ಎದುರಿಸಲಾಗದವರು ವಿಚಾರ ಪ್ರಕಟಿಸಿದ ವೇದಿಕೆಯನ್ನೇ ಮೌನಗೊಳಿಸಲು, ನಾಶಗೊಳಿಸಲು ಹೊರಟರೆ, ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ಲೇಖಕನಿಗೆ ಬರೆಯುವ ಸ್ವಾತಂತ್ರ್ಯವಿರಬೇಕು. ಓದುಗನಿಗೆ ಒಪ್ಪುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯವಿರಬೇಕು. ಸಂಪಾದಕನಿಗೆ ಪ್ರಕಟಿಸುವ ವಿವೇಚನೆಯ ಸ್ವಾತಂತ್ರ್ಯವಿರಬೇಕು. ಈ ಮೂರರಲ್ಲಿ ಯಾವುದಾದರೂ ಒಂದನ್ನು ಕಸಿದುಕೊಂಡರೆ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯ ಅಪೂರ್ಣವಾಗುತ್ತದೆ.

ಒಂದು ತಿಳಿದಿರಲಿ, ‘ಆಡಿದವನ ಮಾತು ಆಡಿದವನಿಗೆ’! 1986ರ ಡಿಸಂಬರ್ ತಿಂಗಳ ಮೊದಲ ವಾರದಲ್ಲಿ ನಮ್ಮ ನೆಲದ ಆಂಗ್ಲ ದಿನಪತ್ರಿಕೆಯೊಂದು ಧರ್ಮವೊಂದರ ಪ್ರವಾದಿ ಕುರಿತಂತೆ ಪ್ರಕಟಿಸಿದ ವರದಿಯೊಂದು ನಾಡಿನಲ್ಲಿ ದೊಡ್ಡ ಅವಘಡಕ್ಕೆ ಕಾರಣವಾಗಿ ಸಾವು ನೋವಿಗೆ ಸಾಕ್ಷಿಯಾಯಿತು. ಆಗಲೂ ಪತ್ರಿಕಾ ಸ್ವಾತಂತ್ರ್ಯ, ಅದರ ಭವಿಷ್ಯ ಕುರಿತಂತೆ ವ್ಯಕ್ತವಾದ ಪರ ವಿರೋಧ ಅಭಿಪ್ರಾಯಗಳು ಇಂದಿಗೂ ಚರ್ಚೆಗೆ ನಿಲ್ಲುತ್ತವೆ.

ಅಷ್ಟೇ ಏಕೆ, ಇಂದಿಗೂ ಟಿವಿ ಚಾನೆಲ್‌ಗಳಲ್ಲಿ ಪ್ಯಾನೆಲ್ ಡಿಸ್ಕಶನ್ ನಡೆಯುವಾಗ ಸ್ಥಳೀಯ ನಾಯಕರಿಂದ ಹಿಡಿದು ರಾಷ್ಟ್ರೀಯ ನಾಯಕರು ವಿರೋಧಿಗಳನ್ನು ಕುರಿತು ಬಳಸುವ ಪದಗಳು, ಮಾಡುವ ಆರೋಪಗಳು ಸಾಮಾನ್ಯವೇ? ನೆಹರು, ಮೌಂಟ್ ಬ್ಯಾಟನ್, ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮುಂತಾದ ಕೆಲವು ನಾಯಕರ ಪೂರ್ವಶ್ರಮದ ಕಥೆಗಳು ರಂಜನೀಯವಾಗಿ ಟೀಕಿಸಲ್ಪಡುತ್ತವೆ. ಇದಕ್ಕೆ ಹಾಗೆಂದು ಆಂಕರ್‌ನನ್ನೇ ಹೊಣೆಗಾರನನ್ನಾಗಿ ಮಾಡಿದರೆ ಕಥೆ ಏನು? ಲೇಖಕನ ಇಲ್ಲವೇ ಮಾತನಾಡುವವನ ಅಭಿಪ್ರಾಯಕ್ಕೆ ಆತನೇ ಹೊಣೆ ಯಲ್ಲವೇ? ಸಂಪಾದಕೀಯ ನಿರ್ಧಾರಕ್ಕೆ ಸಂಪಾದಕ ಹೊಣೆ. ಆದರೆ ಲೇಖಕನ ಅಭಿಪ್ರಾಯವನ್ನೇ ಸಂಪಾದಕನ ಅಪರಾಧವನ್ನಾಗಿಸುವುದು ಇದ್ಯಾವ ನ್ಯಾಯ? ವಿವಾದಗಳು ಬರಲಿ.

ವಾದ-ಪ್ರತಿವಾದಗಳು ನಡೆಯಲಿ. ಆದರೆ ಪತ್ರಿಕೆಯ ಧ್ವನಿ ಅಡಗಿಸುವ ಪ್ರಯತ್ನ ಮಾತ್ರ ಸಲ್ಲದು. ಏಕೆಂದರೆ ಪತ್ರಿಕೆಯ ಧ್ವನಿ ಅಡಗಿದರೆ, ನಾಳೆ ನಮ್ಮೆಲ್ಲರ ಧ್ವನಿಗೂ ಅಪಾಯ ಎದುರಾಗಬಹುದು! ಭಿನ್ನಮತವನ್ನು ಸಹಿಸುವ ಸಮಾಜವೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಪತ್ರಿಕೆಯ ಪುಟಗಳಲ್ಲಿ ಅಭಿಪ್ರಾಯಗಳಿಗೆ ಬೀಗ ಹಾಕುವ ಬದಲು, ಪ್ರತಿವಾದದ ಪುಟಗಳನ್ನು ತೆರೆದಿಡುವುದು ನಮ್ಮ ಕಾಲದ ಅತ್ಯಂತ ಅಗತ್ಯವಾದ ಪತ್ರಿಕೋದ್ಯಮದ ಧರ್ಮ.

(ಲೇಖಕರು ಪತ್ರಕರ್ತರು)