ಜನಪಥ
ಮೊದಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರಕಾರದ ವಿರುದ್ಧ ಥರಹೇವಾರಿ ಟೀಕೆ ರಾಘವ್ ಛಡ್ಡಾ, ಈಗ ಅವುಗಳನ್ನೆ ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕಿ ದ್ದಾರೆ. ಈಚಿನ ದಿನಗಳಲ್ಲಿ ಅವರು ಕೇಂದ್ರದ ವಿರುದ್ಧ ನೇರ ವಾಗ್ದಾಳಿ ನಡೆಸಿದ ಉದಾ ಹರಣೆಯೇ ಇಲ್ಲ. ಮುಂಬರುವ ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಛಡ್ಡಾ ಬಿಜೆಪಿ ಸೇರುತ್ತಾರೆಂಬ ಅನುಮಾನಗಳನ್ನು ಇವು ಪುಷ್ಟೀಕರಿಸುತ್ತಿವೆ.
Never outshine the master ಎಂಬ ಅಮೆರಿಕನ್ ಲೇಖಕ ರಾಬರ್ಟ್ ಗ್ರೀನ್ ಅವರ ಮಾತು ಈಗ ಬಹಳ ಚರ್ಚೆಯಲ್ಲಿದೆ. ಗ್ರೀನ್ ತನ್ನ The 48 Laws of Power ಪುಸ್ತಕದಲ್ಲಿ, ನಿಮ್ಮ ಮೇಲಿನ ಅಧಿಕಾರಿ ಅಥವಾ ನಾಯಕನನ್ನು ಮೀರಿದ ಸಾಮರ್ಥ್ಯ ಪ್ರದರ್ಶನ ಮಾಡಬೇಡಿ. ಮಾಡಿದರೆ ನಿಮ್ಮ ವೃತ್ತಿ ಜೀವನಕ್ಕೆ ಕಂಟಕವಿದೆ.
ಸಾಮರ್ಥ್ಯ ಪ್ರದರ್ಶಿಸುವಾಗ ನಾಯಕನನ್ನು ಕೀಳರಿಮೆಗೆ ತಳ್ಳಬೇಡಿ. ಆತನಿಗೆ ಆತನೇ ಬುದ್ಧಿವಂತ ಎಂದು ಭಾವಿಸುವಂತೆ ಮಾಡುವುದು, ವೃತ್ತಿಜೀವನದಲ್ಲಿನ ಏಳಿಗೆಗೆ ಒಳ್ಳೆಯದು ಎನ್ನುತ್ತಾನೆ.
ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ತಮ್ಮನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ಅಶೋಕ್ ಮಿತ್ತಲ್‌ರನ್ನು ನೇಮಕ ಮಾಡಿದ ನಂತರ ರಾಘವ್ ಛಡ್ಡಾ ಅವರು Never outshine your master ಅಧ್ಯಾಯದ ಪುಟ ತಿರುವಿ ಹಾಕುತ್ತಿರುವ ತಮ್ಮ ಫೋಟೋವನ್ನು ಫೇಸ್ಬುಕ್‌ನಲ್ಲಿ ಹರಿಯಬಿಟ್ಟಿದ್ದಾರೆ. ಈ ಮೂಲಕ ‘ಮಾಜಿ’ ನಾಯಕ ಅರವಿಂದ ಕೇಜ್ರಿವಾಲ, ತನ್ನ ಪ್ರತಿಭಾ ಪಾಂಡಿತ್ಯದ ಬಗ್ಗೆ ಅಸೂಯೆ, ಕೀಳರಿಮೆ ಹೊಂದಿ ತನ್ನನ್ನು ಹುದ್ದೆ ಯಿಂದ ವಜಾ ಮಾಡಿದ್ದಾರೆ ಎಂಬ ಅಭಿಪ್ರಾಯ ರೂಪಿಸುತ್ತಿದ್ದಾರೆ.
ಪರಿಸ್ಥಿತಿಗೆ ಅನುಗುಣವಾಗಿ ಲಾಭ ಪಡೆಯುವ ಕಾರ್ಯತಂತ್ರ ಅನುಸರಿಸುವಲ್ಲಿ ಕೇಜ್ರಿವಾಲ್ ನಿಷ್ಣಾತ. ರಾಘವ್ ಛಡ್ಡಾರದ್ದು ಗುರುವಿಗೇ ತಿರುಮಂತ್ರ ಹಾಕುವ ನಡೆಯಂತೆ ಕಾಣುತ್ತಿದೆ. ಸಾಮಾ ಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಕೇಜ್ರಿವಾಲರ ಜನಲೋಕಪಾಲ್ ಹೋರಾಟದಿಂದ ಪ್ರೇರಣೆಗೊಂಡ ಚಾರ್ಟೆಡ್ ಅಕೌಂಟೆಂಟ್ ರಾಘವ್ ಛಡ್ಡಾ, ಕೋಟಿಗಟ್ಟಲೆ ವೇತನ ಬಿಟ್ಟು ಕೇಜ್ರಿ ವಾಲರ ಆಮ್ ಆದ್ಮಿ ಪಕ್ಷ ಸೇರಿಕೊಂಡಿದ್ದರು, 2019ರಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ರಮೇಶ್ ಬಿಧೂರಿ ವಿರುದ್ಧ ಸುಮಾರು 3 ಲಕ್ಷ ಮತಗಳಿಂದ ಸೋತರೂ, ಕೇಜ್ರಿವಾಲ್ ಜತೆಗಿನ ಗಳಸ್ಯ ಕಂಠಸ್ಯದಿಂದಾಗಿ ಪಕ್ಷದಲ್ಲಿ ಉನ್ನತ ಸ್ಥಾನದ ಗೌರವ ಉಳಿಸಿಕೊಂಡಿ ದ್ದರು.
ಇದನ್ನೂ ಓದಿ: Raghava Sharma Nidle Column: ಕುರ್ಮಿ ಚೇತನಾ ರ್ಯಾಲಿಯಿಂದ ರಾಜ್ಯಸಭೆ ಹಾದಿಯತ್ತ...!
2020ರ ವಿಧಾನಸಭೆ ಚುಾವಣೆಯಲ್ಲಿ ದಿಲ್ಲಿಯ ರಾಜೇಂದರ್ ನಗರ್ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಛಡ್ಡಾರನ್ನು ದಿಲ್ಲಿ ಜಲ ಮಂಡಳಿಯ ಉಪಾಧ್ಯಕ್ಷರನ್ನಾಗಿ ಕೇಜ್ರಿವಾಲ್ ನೇಮಿಸಿದ್ದರು. ಆಮ್ ಆದ್ಮಿ ಪಕ್ಷದ ಪ್ರಬಲ ಸಮರ್ಥಕನಾಗಿದ್ದ ಛಡ್ಡಾ, ಕೇಜ್ರಿವಾಲರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು.
2021ರ ಪಂಜಾಬ್ ಚುನಾವಣೆ ಉಸ್ತುವಾರಿಯಾಗಿ, ಕೇಜ್ರಿವಾಲರೊಂದಿಗೆ ರಾಜ್ಯಾದ್ಯಂತ ಕಾಣಿಸಿ ಕೊಂಡ ಛಡ್ಡಾ, ಪಕ್ಷಕ್ಕೆ ಐತಿಹಾಸಿಕ ಗೆಲುವು ಕೊಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈ ಸಾಧನೆಗಾಗಿ ಅವರಿಗೆ ರಾಜ್ಯಸಭೆ ಸದಸ್ಯತ್ವದ ಉಡುಗೊರೆಯನ್ನೂ ನೀಡಲಾಯ್ತು. ಆದರೆ, 2024 ರಲ್ಲಿ ದಿಲ್ಲಿ ಅಬಕಾರಿ ಹಗರಣದ ಆರೋಪಿಯಾಗಿ ಅರವಿಂದ ಕೇಜ್ರಿವಾಲ್ ಜೈಲಿಗೆ ಹೋದ ನಂತರ ಲಂಡನ್‌ಗೆ ತೆರಳಿದ ರಾಘವ್ ಛಡ್ಡಾರಲ್ಲಿ ಬದಲಾವಣೆ ಕಾಣಲಾರಂಭಿಸಿತು.
ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರೆಲ್ಲರೂ ಜೈಲಿನಲ್ಲಿದ್ದು, ಪಕ್ಷ ಸಂಕಷ್ಟದಲ್ಲಿದ್ದಾಗ ಛಡ್ಡಾ ಲಂಡನ್ ವಾಸ್ತವ್ಯ ಮುಂದುವರಿಸಿದ್ದರು. ಕಣ್ಣಿನ ಶಸ್ತ್ರಚಿಕಿತ್ಸೆಯ ಕಾರಣ ನೀಡಿ ಮತ್ತಷ್ಟು ದಿನ ಅ ಉಳಿದುಕೊಂಡರು. ಅಲ್ಲಿಂದ ಆರಂಭವಾದ ಆಪ್-ಛಡ್ಡಾ ನಡುವಿನ ಅಂತರ ನಿತ್ಯವೂ ಹೆಚ್ಚುತ್ತಾ ಸಾಗಿತು.
ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ಸೇರಿ ಹಲವರು ಬಂಧನ ಕ್ಕೊಳಗಾದರೂ ಅವರಿಗೆ ನೈತಿಕ ಬೆಂಬಲ ನೀಡುವ ಅಥವಾ ಕೇಂದ್ರದ ವಿರುದ್ಧ ಪ್ರತಿಭಟಿಸುವ ಧೋರಣೆಯನ್ನು ಛಡ್ಡಾ ಪ್ರದರ್ಶಿಸಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಮೌನವಾಗಿದ್ದರಿಂದ ಕೇಜ್ರಿವಾಲ-ಛಡ್ಡಾ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಹೀಗಿದ್ದರೂ, ಛಡ್ಡಾ ಸಾಮರ್ಥ್ಯ, ಪ್ರತಿಭೆ ಅರಿತಿದ್ದ ಕೇಜ್ರಿವಾಲ, ತಕ್ಷಣಕ್ಕೇ ಪಕ್ಷದಿಂದ ಕಿತ್ತು ಹಾಕುವ ಸಾಹಸ ಮಾಡಲಿಲ್ಲ. ಕೆಲ ದಿನಗಳ ಹಿಂದೆ ಅಬಕಾರಿ ಹಗರಣದಿಂದ ಖುಲಾಸೆಗೊಂಡು ಜೈಲಿನಿಂದ ಹೊರಬಂದ ಮೇಲೂ ರಾಘವ್ ಛಡ್ಡಾ ಮಾತ್ರ ಕೇಜ್ರಿವಾಲ್ ನಿವಾಸಕ್ಕೆ ತೆರಳಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೇಜ್ರಿವಾಲ್ ಜತೆಗಿದ್ದ ಚಿತ್ರವೊಂದನ್ನು ನಾಮಕಾವಸ್ಥೆ ಅಪ್ಲೋಡ್ ಮಾಡಿ ಸುಮ್ಮನಿದ್ದರು. ಕೇಜ್ರಿವಾಲ್ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲೂ ಕಾಣಿಸಿಕೊಳ್ಳಲಿಲ್ಲ.
ಛಡ್ಡಾ-ಕೇಜ್ರಿವಾಲ್ ಮುಸುಕಿನ ಗುದ್ದಾಟ ಮುಂದುವರಿದಿತ್ತು ಮತ್ತು ಸಂಬಂಧ ಮುರಿದು ಬೀಳುವ ಲಕ್ಷಣ ಹೆಚ್ಚಿತ್ತು. ಕೇಜ್ರಿವಾಲರ ಕಾರ್ಯವೈಖರಿಯನ್ನು ಹತ್ತಿರದಿಂದ ಗಮನಿಸಿದವರಿಗೆ ಅವರೊಳ ಗೊಬ್ಬ ಸರ್ವಾಧಿಕಾರಿ ಇದ್ದಾನೆ ಎನ್ನುವುದು ಸ್ಪಷ್ಟವಾಗಿ ಗೋಚರಿಸಿರಬಹುದು. ಈ ಹಿಂದೆ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಮಾಯಾಂಕ್ ಗಾಂಧಿ, ಅಂಜಲಿ ದಮಾನಿಯಾ, ಕುಮಾರ್ ವಿಶ್ವಾಸ್, ಕೈಲಾಶ್ ಗೆಹ್ಲೋಟ್ ಸೇರಿದಂತೆ ಅನೇಕರು ಕೇಜ್ರಿವಾಲರ ತಾನೇ ಎಲ್ಲ ಎಂಬ ಧೋರಣೆ ಖಂಡಿಸಿಯೇ ಪಕ್ಷ ತೊರೆದವರು.
ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರವಿದ್ದಾಗ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಗಮನ ಸೆಳೆದಿದ್ದ, ರಾಜ್ಯಸಭೆ ಹಾಲಿ ಸದಸ್ಯ ಸ್ವಾತಿ ಮಲಿವಾಲ್ ಕೂಡ ಕೇಜ್ರಿವಾಲರೊಂದಿಗೆ ಮುನಿಸಿ ಕೊಂಡು ಆಪ್‌ನಿಂದ ದೂರವಾದರು. ರಾಘವ್ ಛಡ್ಡಾಗೂ ಇಂಥದ್ದೇ ಸಮಸ್ಯೆಗಳಾಗಿತ್ತೋ ಗೊತ್ತಿಲ್ಲ. ಅವರೇ ತಿಳಿಸಬೇಕು.
ರಾಘವ್ ಛಡ್ಡಾರನ್ನು ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಆಮ್ ಆದ್ಮಿ ಪಕ್ಷ ವಜಾ ಗೊಳಿಸಿದ್ದು, ತೀರಾ ಅನಿರೀಕ್ಷಿತ ಬೆಳವಣಿಗೆ ಏನಲ್ಲ. ಕಳೆದೆರಡು ವರ್ಷಗಳಿಂದ ಕೇಜ್ರಿವಾಲ್ ಮತ್ತವರ ಪಕ್ಷದಿಂದ ಮಾನಸಿಕವಾಗಿ ದೂರವಾಗಿದ್ದ ಛಡ್ಡಾಗೆ, ಉಪ ನಾಯಕನ ಸ್ಥಾನ ಕಳೆದು ಕೊಳ್ಳಲಿದ್ದೇನೆ ಎನ್ನುವುದೂ ಗೊತ್ತಿತ್ತು.
ಕೇಜ್ರಿವಾಲರ ಗರಡಿಯಲ್ಲಿ ಪಳಗಿದ್ದ ಛಡ್ಡಾ, ‘ಗಾಯಾಳಾಗಿರುವುದರಿಂದಲೇ ಘಾತಕನಾಗಿದ್ದೇನೆ’ (ಘಾಯಲ್ ಹೂ, ಇಸ್ಲಿಯೇ ಘಾತಕ್ ಹೂ) ಎಂಬ ಸಿನಿಮಾ ಡೈಲಾಗ್ ಮೂಲಕ ಈಗ ಗುರುವಿಗೇ ಎಚ್ಚರಿಕೆ ನೀಡುತ್ತಿದ್ದಾರೆ.
ದಿಲ್ಲಿ ಅಬಕಾರಿ ಹಗರಣದಲ್ಲಿ ಸಂಜಯ್ ಸಿಂಗ್ ಜೈಲಿಗೆ ಹೋಗಿದ್ದರಿಂದ ರಾಘವ್ ಛಡ್ಡಾರನ್ನು ರಾಜ್ಯಸಭೆ ಉಪನಾಯಕನನ್ನಾಗಿ ಕೇಜ್ರಿವಾಲ್ ನೇಮಿಸಿದ್ದರು. ಜನಸಾಮಾನ್ಯ ಮತ್ತು ಮಧ್ಯಮ ವರ್ಗ ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ ರಾಘವ್ ಛಡ್ಡಾ ಮಾಡುತ್ತಿದ್ದ ಭಾಷಣಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಒಲವು ವ್ಯಕ್ತವಾಯಿತು. ಅವರ ಒಂದೊಂದು ವಿಡಿಯೋ ಈಗ ಲಕ್ಷೋಪಲಕ್ಷ ವೀಕ್ಷಣೆಗೆ ಒಳಗಾಗುತ್ತಿದೆ.
ಆಮ್ ಆದ್ಮಿ ಪಕ್ಷದ ನೀಡಿದ ವೇದಿಕೆ ಬಳಸಿಕೊಂಡು ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡರು ಎಂದು ಆಪ್ ಮುಖಂಡರು ಆರೋಪ ಮಾಡುತ್ತಿದ್ದಾರೆ. ಪಕ್ಷದ ಜತೆ ಚರ್ಚಿಸದೆ ತಾನಿಚ್ಛಿಸಿದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ತನ್ನ ಪಬ್ಲಿಕ್ ಇಮೇಜ್ ಹೆಚ್ಚಿಸಲು ಛಡ್ಡಾ ಮುಂದಾಗಿದ್ದರಿಂದ ಕೇಜ್ರಿವಾಲ್ ಸಹನೆಯ ಕಟ್ಟೆ ಒಡೆಯಿತು. ಪಕ್ಷ ಮುಂದು ಮಾಡಿದ ವಿಚಾರಗಳನ್ನು ಬದಿಗೆ ಸರಿಸಿ, ತಮ್ಮದೇ ನೆಲೆಯಲ್ಲಿ ಛಡ್ಡಾ ಶ್ರೀಸಾಮಾನ್ಯನನಿಗೆ ಸನಿಹ ವಾಗುತ್ತಿರುವುದು ಸಹಜವಾಗಿಯೇ ಆಪ್ ನಾಯಕರ ಕಣ್ಣು ಕೆಂಪಾಗಿಸಿತು.
ಸಂಸತ್ತಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಪಕ್ಷ ನಾಯಕರು ಸಭಾತ್ಯಾಗ ಮಾಡಿದಾಗಲೂ ಛಡ್ಡಾ ಅವರೊಂದಿಗೆ ಗುರುತಿಸಿಕೊಳ್ಳಲಿಲ್ಲ. ಪ್ರಮುಖವಾಗಿ, ಟಿಎಂಸಿ ಸಂಸದರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಂಡಿಸಿದ ವಾಗ್ದಂಡನೆ ( impeachment) ನಿರ್ಣಯಕ್ಕೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದರೂ, ರಾಘವ್ ಛಡ್ಡಾ ಅದಕ್ಕೆ ಸಹಿ ಹಾಕಲಿಲ್ಲ. ಸಹಿ ಹಾಕಿ ಎಂದು ನನ್ನನ್ನು ಯಾರೂ ಕೇಳಿಕೊಳ್ಳಲಿಲ್ಲ.
ಹಾಗಾಗಿ ನಾನು ಸಹಿ ಹಾಕಲಿಲ್ಲ ಎನ್ನುವುದು ಛಡ್ಡಾ ಸಮರ್ಥನೆ. ಈ ನಡುವೆ, ರಾಜ್ಯಸಭೆಯಲ್ಲಿನ ಭಾಷಣಗಳ ಮೂಲಕ ಛಡ್ಡಾ ಮಾತ್ರ ದೇಶದ ಗಮನ ಸೆಳೆಯುತ್ತಲೆ ಇದ್ದರು. ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆ, ಡೇಟಾ ಅವಧಿ ಮುಕ್ತಾಯ ಗೊಳಿಸುವುದರಲ್ಲಿ ಟೆಲಿಕಾಂ ಕಂಪನಿಗಳ ವಂಚನೆ, ಪಿತೃತ್ವ ರಜೆ ಹಕ್ಕೆಂದು ಪರಿಗಣಿಸುವುದು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ಬ್ಯಾಗೇಜ್ ಶುಲ್ಕ, 1 ಕಪ್ ಚಹಾಕ್ಕೆ 200 ರೂ ದರ ವಿಧಿಸುವುದು, ಹಾಲಿನಲ್ಲಿ ಯೂರಿಯಾ ಮತ್ತು ಡಿಟರ್ಜೆಂಟ್ ಗಳ ಕಲಬೆರಕೆ, ತರಕಾರಿಗಳಲ್ಲಿ ಆಕ್ಸಿಟೋಸಿನ್, ಪನೀರ್‌ನಲ್ಲಿ ಕಾಸ್ಟಿಕ್ ಸೋಡಾ, ಮಸಾಲೆ ಪದಾರ್ಥಗಳಲ್ಲಿ ಇಟ್ಟಿಗೆ ಅಥವಾ ಮರದ ಪುಡಿ, ನಕಲಿ ಜೇನುತುಪ್ಪ, ಕೋಳಿ ಮಾಂಸದಲ್ಲಿ ಸ್ಟೆರಾಯ್ಡ್‌ಗಳು ಮತ್ತು ಐಸ್ಕ್ರೀಮ್‌ನಲ್ಲಿ ಡಿಟರ್ಜೆಂಟ್..ಹೀಗೆ ಇಂಥಾ ವಂಚನೆಗಳಿಂದ ಜನ ರೋಸಿ ಹೋಗಿರುವಾಗ, ಅವುಗಳ ಬಗ್ಗೆ ರಾಘವ್ ಛಡ್ಡಾ ಮಾತನಾಡಲು ಶುರು ಮಾಡಿದ್ದು ಸಹಜವಾಗಿಯೇ ಮಧ್ಯಮ ವರ್ಗವನ್ನು ಬೆರಗುಗೊಳಿಸಿತು.
ನಮ್ಮನ್ನು ಖಾಸಗಿ ಕಂಪನಿಗಳು, ಸರಕಾರಗಳು ಹೇಗೆ ವ್ಯವಸ್ಥಿತವಾಗಿ ವಂಚಿಸುತ್ತಿವೆ ಎಂದು ಅವರು ಎಳೆಎಳೆಯಾಗಿ ವಿವರಿಸುತ್ತಿದ್ದುದನ್ನು ಕಂಡು ಜನ ಚಪ್ಪಾಳೆ ತಟ್ಟಿದರು. ಅಷ್ಟಕ್ಕೂ ಜನಸಾಮಾನ್ಯ ರಿಗೆ ಬೇಕಾಗಿರುವುದೂ ಇದೇ ತಾನೇ? ತಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪರಿಣಾಮಕಾರಿಯಾಗಿ ಚರ್ಚಿಸುವ ವ್ಯಕ್ತಿಗಳನ್ನೇ ಅವರು ಬಯಸುತ್ತಾರೆ.
ಇದೇ ಕಾರಣಕ್ಕೆ ಛಡ್ಡಾ ಬಡ ಮತ್ತು ಮಧ್ಯಮ ವರ್ಗದವರ ಡಾರ್ಲಿಂಗ್ ಆಗಿ ಬಿಟ್ಟಿದ್ದರು. ಇನ್ನು ಸುಮ್ಮನಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಭಾವಿಸಿದ ಆಮ್ ಆದ್ಮಿ ಪಕ್ಷ ಅವರನ್ನು ರಾಜ್ಯಸಭೆ ಉಪನಾಯಕನ ಸ್ಥಾನದಿಂದ ಕಿತ್ತು ಹಾಕಿತು. ರಾಘವ್ ಛಡ್ಡಾ ಬೇರೆ ಪಕ್ಷದಲ್ಲಿದ್ದು ಪಕ್ಷದ ವಿಚಾರ ಧಾರೆಗಳಿಂದ ಅಂತರ ಕಾಯ್ದುಕೊಂಡಿದ್ದರೆ ಇದೇ ಪರಿಸ್ಥಿತಿ ಎದುರಿಸುತ್ತಿದ್ದರು. ಆದರೂ, ಶ್ರೀಸಾಮಾನ್ಯರ ಪಕ್ಷ ಎಂದು ಹೆಸರಿಟ್ಟುಕೊಂಡ ಪಕ್ಷ ಸಾಮಾನ್ಯನಿಗೆ ಸಂಬಂಧಿಸಿದ್ದನ್ನೇ ಮಾತನಾಡುವ ವ್ಯಕ್ತಿಯನ್ನು ವಜಾ ಗೊಳಿಸಿದ್ದೇಕೆ? ಹಾಗಿದ್ದರೆ ಅವರ ಮಾತುಗಳಲ್ಲಿ ಸತ್ಯಾಂಶ ವಿಲ್ಲವೇ ಎಂಬ ಪ್ರಶ್ನೆಗಳಿಗೆ ಆಪ್ ನಾಯಕರು - ಛಡ್ಡಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿ ಕೊಂಡಿದ್ದಾರೆ ಎಂಬ ಉತ್ತರ ನೀಡುತ್ತಿದ್ದಾರೆ.
ಅದು ನಿಜವೋ ಸುಳ್ಳೋ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ. ರಾಜಕೀಯದಲ್ಲಿ ನರೇಟಿವ್‌ಗಳ ನಿರ್ವಹಣೆ ಬಹಳ ಮುಖ್ಯ. ನಿಮ್ಮನ್ನು ನೀವು ಸಮರ್ಥವಾಗಿ ಬಿಂಬಿಸಿಕೊಂಡರೆ ಅರ್ಧ ಯುದ್ಧ ಗೆದ್ದಂತೆ. ಸಾರ್ವಜನಿಕ ಗ್ರಹಿಕೆ ಕೆಲವೊಮ್ಮೆ ವಾಸ್ತವವನ್ನೂ ಬದಿಗೆ ಸರಿಸುತ್ತದೆ. ಈ battle of perception ನಲ್ಲಿ ರಾಘವ್ ಛಡ್ಡಾ ಸದ್ಯಕ್ಕೆ ಮುನ್ನಡೆಯಲ್ಲಿದ್ದಂತೆ ಕಾಣುತ್ತಿದೆ.
ಆಮ್ ಆದ್ಮಿ ನಾಯಕರು ಎಷ್ಟೇ ಸಬೂಬು ಕೊಟ್ಟರೂ, ಚಡ್ಡಾರ ರಾಜ್ಯಸಭೆ ಭಾಷಣಗಳು ಅವರ ನ್ನು ರಾಜಕೀಯದಲ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಲಕ್ಷಣ ತೋರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರಕಾರದ ವಿರುದ್ಧ ಥರಹೇವಾರಿ ಟೀಕೆ ಮಾಡುತ್ತಿದ್ದ ರಾಘವ್ ಛಡ್ಡಾ, ಆ ಎಲ್ಲ ಟ್ವೀಟ್‌ಗಳನ್ನೆ ಅಳಿಸಿ ಹಾಕಿದ್ದಾರೆ.
ಈಚಿಗೆ ಪಿಎಂ ಮೋದಿ ಅಥವಾ ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಉದಾಹರಣೆಯೂ ಇಲ್ಲ. ಮುಂಬರುವ ಪಂಜಾಬ್ ಚುನಾವಣೆ ಹೊಸ್ತಿಲಲ್ಲಿ ಛಡ್ಡಾ ಬಿಜೆಪಿ ಸೇರುತ್ತಾರೆಂಬ ಅನುಮಾನ ಗಳನ್ನು ಇವು ಪುಷ್ಟೀಕರಿಸುತ್ತಿವೆ. ರಾಘವ್ ಛಡ್ಡಾಗೆ ರಾಜ್ಯಸಭೆಯಲ್ಲಿ ಭಾಷಣ ಮಾಡಲು ಯಾವುದೇ ಅಡೆ ತಡೆಗಳಿರಲಿಲ್ಲ. ಯಾರೂ ನಿಯಂತ್ರಿಸುತ್ತಲೂ ಇರಲಿಲ್ಲ. ಆದರೆ, ಮುಂದೆ ಪರಿಸ್ಥಿತಿ ಹೀಗಿರಲಿಕ್ಕಿಲ್ಲ.
ದಿಲ್ಲಿಯಲ್ಲಿ ಜನಿಸಿದರೂ, ರಾಘವ್ ಛಡ್ಡಾ ಮೂಲ ಇರುವುದು ಪಂಜಾಬ್‌ನಲ್ಲಿ. ಪಂಜಾಬಿ ಹಿಂದೂ ಆಗಿರುವ ಛಡ್ಡಾ, ನನ್ನ ಆತ್ಮ, ಮಣ್ಣು ಪಂಜಾಬ್‌ನಲ್ಲಿದೆ ಎಂದು ಎಷ್ಟೋ ಬಾರಿ ಹೇಳಿದ್ದುಂಟು.
ಬಿಜೆಪಿಗೆ ಪಂಜಾಬ್‌ನಲ್ಲಿ ಸಮರ್ಥ ನಾಯಕರಿಲ್ಲ. ಪಕ್ಷದ ಈಗಿನ ರಾಜ್ಯಾಧ್ಯಕ್ಷ ಸುನೀಲ್ ಜಾಖಡ್ ಕಾಂಗ್ರೆಸ್‌ನಿಂದ ಬಂದವರು ಮತ್ತು ಹಿರಿ ವಯಸ್ಸಿನವರು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸ್ಥಾಪಕರಾಗಿದ್ದ, ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಹರ್ವಿಂದರ್ ಸಿಂಗ್ ಫೂಲ್ಕಾ (ಎಚ್.ಎಸ್.ಫೂಲ್ಕಾ) ಅವರು ಕೆಲ ದಿನಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿರುವ ಮಹತ್ವದ ಬೆಳವಣಿಗೆ ನಡೆದಿದೆ.
ಸಿಖ್ ವಿರೋಧಿ ದಂಗೆಯ ಸಂತ್ರಸ್ತರ ಪರ ದಶಕಗಳ ಕಾಲ ಹೋರಾಟ ನಡೆಸಿದ್ದ ಎಚ್.ಎಸ್. ಫೂಲ್ಕಾ ಆಪ್ ಪಕ್ಷದಿಂದ ಪಂಜಾಬ್‌ನ ದಾಖಾ ವಿಧಾನಸಭೆ ಸದಸ್ಯರಾಗಿ, ವಿಪಕ್ಷ ನಾಯಕ ನಾಗಿಯೂ ಸೇವೆ ಸಲ್ಲಿಸಿದವರು. ಸಿಖ್ಖರು ಫೂಲ್ಕಾರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರ ಕಾನೂನು ಸೇವೆಗಳನ್ನು ಗುರುತಿಸಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಲಾಗಿತ್ತು.
ಇದೀಗ, ಪಂಜಾಬ್ ಮೂಲದ ರಾಘವ್ ಛಡ್ಡಾರನ್ನೂ ಪಕ್ಷದತ್ತ ಸೆಳೆದುಕೊಳ್ಳಲು ಬಿಜೆಪಿ ಯತ್ನಿಸು ತ್ತಿದೆ. ಬಿಜೆಪಿ ನಾಯಕರು ಆಮ್ ಆದ್ಮಿ ಪಕ್ಷವನ್ನು ಟೀಕಿಸುವ ಭರದಲ್ಲಿ ರಾಘವ್ ಛಡ್ಡಾರಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದನ್ನು ಗಮನಿಸಿದರೆ ರಾಘವ್ ಛಡ್ಡಾ ಅವರ ಈ ಕಳೆದೊಂದೆರಡು ವರ್ಷಗಳ ರಾಜಕೀಯ ನಡೆಗಳು ಬಿಜೆಪಿ ಜತೆಗಿನ ಸುದೀರ್ಘ ಕಾರ್ಯತಂತ್ರದ ಭಾಗವೂ ಆಗಿರಬಹು ದೇನೋ ಎಂಬ ಅನುಮಾನ ಮೂಡುತ್ತಿದೆ.
Never outshine the master ಎನ್ನುತ್ತಾ ಕೇಜ್ರಿವಾಲರನ್ನೂ ಕೆಣಕುತ್ತಿರುವ ರಾಘವ್ ಛಡ್ಡಾಗೆ ಬಿಜೆಪಿ ಯಲ್ಲಿ ಕೇಜ್ರಿವಾಲರನ್ನೂ ಮೀರಿದ ಮಾಸ್ಟರ್‌ಗಳಿದ್ದಾರೆನ್ನುವುದು ಗೊತ್ತಿಲ್ಲದೇನಿಲ್ಲ. ಹಾಗಾಗಿ, ಅವರ ಮುಂದಿನ ನಡೆ ಕುತೂಹಲ ಹೆಚ್ಚಿಸಿದೆ.