Raghava Sharma Nidle Column: ಕುರ್ಮಿ ಚೇತನಾ ರ್ಯಾಲಿಯಿಂದ ರಾಜ್ಯಸಭೆ ಹಾದಿಯತ್ತ...!
ನಮ್ಮ ಚುನಾವಣಾಪೂರ್ವ ಭರವಸೆಗಳೆಲ್ಲವೂ ಗಾಳಿಗೆ ತೂರಲಾಗುತ್ತಿದೆ. ಇದು ಲಾಲೂ ಯಾದವ್ ಸ್ವಾರ್ಥ ತುಂಬಿದ ಒನ್ ಮ್ಯಾನ್ ಸರ್ಕಾರ ಎಂಬ ಸಿಟ್ಟು ನಿತೀಶ್‌ರಲ್ಲಿ ನಿತ್ಯವೂ ಹೆಚ್ಚುತ್ತಲೇ ಇತ್ತು. 1992ರ ಅಂತ್ಯದ ವೇಳೆಗೆ ದಿಲ್ಲಿ ಪ್ರವಾಸದಲ್ಲಿದ್ದ ಲಾಲೂ ಅವರನ್ನು ಬಿಹಾರ ಭವನದಲ್ಲಿ ಭೇಟಿಯಾಗಲು ಪಕ್ಷದ ಮುಖಂಡರಾದ ನಿತೀಶ್ ಕುಮಾರ್, ಶಿವಾನಂದ ತಿವಾರಿ, ಬ್ರಿಶನ್ ಪಟೇಲ್ ಮತ್ತು ಲಲ್ಲನ್ ಸಿಂಗ್ ಬಂದಿದ್ದರು.
-
ಜನಪಥ
ಕುರ್ಮಿ-ಕೊಯೆರಿ ಸಮಾಜದ ಒಗ್ಗಟ್ಟು ನಿತೀಶ್ ನೈತಿಕ ಸ್ಥೈರ್ಯವನ್ನು ಹಿಗ್ಗಿಸಿತ್ತು. ನಿತೀಶ್ ಒಳಗಿದ್ದ ನಾಯಕನನ್ನು ಅದು ಬಡಿದೆಬ್ಬಿಸಿತ್ತು. ಹೀಗಿದ್ದರೂ, ನಿತೀಶ್ ತುಮ್ ಆಗೇ ಬಡೋ, ಹಮ್ ತುಮಾರೇ ಸಾಥ್ ಹೇ ಎಂದು ಕುರ್ಮಿಗಳು ಘೋಷಣೆ ಕೂಗಿದರೂ, ರಾಜ್ಯವ್ಯಾಪ್ತಿ ಜನರು ನಮ್ಮನ್ನು ಸ್ವೀಕರಿಸುತ್ತಾರಾ? ನನ್ನ ಹಿಂದೆ ಎಷ್ಟು ಮಂದಿ ಬಂದಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿರಲಿಲ್ಲ.
ಬಿಹಾರ ವಿಧಾನಪರಿಷತ್ ಸ್ಥಾನಕ್ಕೆ ಸಿಎಂ ನಿತೀಶ್ ಕುಮಾರ್ ಅವರು ಮಾ.30ರಂದು ರಾಜೀನಾಮೆ ಸಲ್ಲಿಸುವ ಮೂಲಕ ಬಿಹಾರ ರಾಜಕಾರಣದ ಅಮೋಘ ಅಧ್ಯಾಯವೊಂದು ಕೊನೆಗೊಂಡಿದೆ. 21 ವರ್ಷಗಳ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ, ಸ್ನೇಹಿತರನ್ನು ಬದಲಿಸಿದರೂ, ಕಳಂಕ ಮೆತ್ತಿಕೊಳ್ಳದೆ, ಬೀಮಾರು ರಾಜ್ಯವನ್ನು ಸುಶಾಸನದ ಹಾದಿಗೆ ಕೊಂಡೊಯ್ದ ನಿತೀಶ್, ಈಗ ರಾಜ್ಯಸಭೆಯತ್ತ ಮುಖ ಮಾಡಿದ್ದಾರೆ.
ನಿತೀಶರಿಂದ ಒತ್ತಾಯಪೂರ್ವಕವಾಗಿ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಮೋದಿ-ಅಮಿತ್ ಶಾ ಆeಯಂತೆ ಇದು ನಡೆಯುತ್ತಿದೆ ಎನ್ನುತ್ತಲೇ ವಿಪಕ್ಷ ನಾಯಕರು ಕೂಡ ನಿತೀಶರ ಜನಸ್ನೇಹಿ ಆಡಳಿತಶೈಲಿ ಹಾಗೂ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತು ಗಳನ್ನಾಡಿರುವುದು ಸ್ವಾಗತಾರ್ಹ.
ಬಿಹಾರ ಮಾಜಿ ಸಿಎಂ, ಸೋಷಿಯಲಿಸ್ಟ್ ಲೀಡರ್ ಕರ್ಪೂರಿ ಠಾಕೂರ್ ಗರಡಿಯಲ್ಲಿ ಬೆಳೆದಿದ್ದ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಒಂದೊಮ್ಮೆ ಒಂದೇ ನಾಣ್ಯದ 2 ಮುಖಗಳಂತಿದ್ದವರು. ಆದರೆ ಅಧಿಕಾರ ಯಾರನ್ನೂ ಹೇಗೆ ಬೇಕಾದರೂ ಬದಲಿಸಬಲ್ಲದು. ಲಾಲೂ ಯಾದವ್ ಕೂಡ ಹೊರತಾಗಿರಲಿಲ್ಲ.
1990ರಲ್ಲಿ ಮೊದಲ ಬಾರಿಗೆ ರಾಜ್ಯದ ಸಿಎಂ ಆಗುತ್ತಿದ್ದಂತೆಯೇ ಜತೆಗಿದ್ದವರನ್ನು ಲಾಲೂ ಕಡೆಗಣಿಸಲಾರಂಭಿಸಿದರು. ಅಧಿಕಾರದ ದರ್ಪ, ಅಹಂಕಾರ ನೆತ್ತಿಗೇರಿತ್ತು. ಇದು ನಿತೀಶ್ ಕುಮಾರ್ ಎಂಬ ಮತ್ತೋರ್ವ ನಾಯಕನ ಜನನಕ್ಕೆ ಕಾರಣವಾಯಿತು.
ಇದನ್ನೂ ಓದಿ: Raghav Sharma Nidle Column: ವಿರೋಧಿ ಕೂಗಿಗೆ ಸಾಂತ್ವನವನ್ನಷ್ಟೇ ಹೇಳಬಹುದು
ಬಹುಶಃ ಲಾಲೂ ಸಖ್ಯ ಬಿಡದೆ, ಲಾಲೂ ನೆರಳಲ್ಲಿದ್ದುಕೊಂಡು ಹೊಂದಾಣಿಕೆಯ ರಾಜಕಾರಣ ಮಾಡಿದ್ದಿದ್ದರೆ ನಿತೀಶ್ ಈ ಹಂತಕ್ಕೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ ವೇನೋ...1989ರಲ್ಲಿ ಕರ್ಪೂರಿ ಠಾಕೂರ್ ನಿಧನದ ನಂತರ ಖಾಲಿಯಿದ್ದ ವಿಪಕ್ಷ ನಾಯಕನ ಸ್ಥಾನಕ್ಕೆ ಲಾಲೂ ಪ್ರಸಾದ್ ಯಾದವ್ ಹೆಸರನ್ನು ಬಲವಾಗಿ ಬೆಂಬಲಿಸಿದ್ದ ನಿತೀಶ್ ಕುಮಾರ್, 1990ರ ಮಾರ್ಚ್ 18ರಂದು ಬಿಹಾರದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಜನತಾದಳ ಸರ್ಕಾರದ ಮುಖ್ಯಮಂತ್ರಿಯಾಗಿ ಲಾಲೂ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾಗಲೂ ಸನಿಹದಲ್ಲಿದ್ದು ಚಪ್ಪಾಳೆ ತಟ್ಟಿದ್ದರು. ಆದರೆ, ಅದೇ ಗಾಂಧಿ ಮೈದಾನ ಲಾಲೂ-ನಿತೀಶ್ ಸಂಬಂಧದ ಅಂತ್ಯಕ್ಕೂ ವೇದಿಕೆಯಾಗುತ್ತದೆ ಎಂದು ನಿತೀಶ್ ಕಲ್ಪಿಸಿ ಯೂ ಇರಲಿಲ್ಲ.
1994ರ ಕುರ್ಮಿ ಚೇತನಾ ರ‍್ಯಾಲಿಯಲ್ಲಿ ಲಾಲೂ ವಿರುದ್ಧ ಬಂಡಾಯದ ದನಿ ಮೊಳಗಿಸಿದ್ದ ನಿತೀಶ್, ರಾಜಕೀಯದ ಮುಂದಿನ ಹಾದಿ ಬಗ್ಗೆ ಖಚಿತತೆ ಇಲ್ಲದಿದ್ದರೂ, ಲಾಲೂ ಜತೆಗಿರಲಾರೆ ಎಂದು ನಿಶ್ಚಯಿಸಿದ್ದರು. ಜಯಪ್ರಕಾಶ ನಾರಾಯಣ, ಕರ್ಪೂರಿ ಠಾಕೂರರ ಸೈದ್ಧಾಂತಿಕ ಬದ್ಧತೆಗೆ ಲಾಲೂ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ.
ನಮ್ಮ ಚುನಾವಣಾಪೂರ್ವ ಭರವಸೆಗಳೆಲ್ಲವೂ ಗಾಳಿಗೆ ತೂರಲಾಗುತ್ತಿದೆ. ಇದು ಲಾಲೂ ಯಾದವ್ ಸ್ವಾರ್ಥ ತುಂಬಿದ ಒನ್ ಮ್ಯಾನ್ ಸರ್ಕಾರ ಎಂಬ ಸಿಟ್ಟು ನಿತೀಶ್‌ರಲ್ಲಿ ನಿತ್ಯವೂ ಹೆಚ್ಚುತ್ತಲೇ ಇತ್ತು. 1992ರ ಅಂತ್ಯದ ವೇಳೆಗೆ ದಿಲ್ಲಿ ಪ್ರವಾಸದಲ್ಲಿದ್ದ ಲಾಲೂ ಅವರನ್ನು ಬಿಹಾರ ಭವನದಲ್ಲಿ ಭೇಟಿಯಾಗಲು ಪಕ್ಷದ ಮುಖಂಡರಾದ ನಿತೀಶ್ ಕುಮಾರ್, ಶಿವಾನಂದ ತಿವಾರಿ, ಬ್ರಿಶನ್ ಪಟೇಲ್ ಮತ್ತು ಲಲ್ಲನ್ ಸಿಂಗ್ ಬಂದಿದ್ದರು.
ರೈತರಿಗೆ ಸಂಬಂಧಿಸಿದ ಬೇಡಿಕೆಗಳ ಪಟ್ಟಿ ಮುಂದಿಡುವುದು ಈ ನಾಯಕರ ಉದ್ದೇಶ ವಾಗಿತ್ತು. ಸಿಎಂ ಸೂಟ್‌ನಲ್ಲಿ ಮಾತುಕತೆ ಶುರುವಾದ ಕೆಲವೇ ಹೊತ್ತಲ್ಲಿ, ಲಲ್ಲನ್ ಸಿಂಗ್ ವಿರುದ್ಧ ಬೆಂಕಿ ಉಗುಳಿದ ಸಿಎಂ ಲಾಲೂ, ನಿಕಲ್ ಬಾಹರ್, ಬಾಹರ್ ನಿಕಲ್.. ಸಾಲಾ ಎಂದು ಕೂಗಾಡಿದ್ದರು. ಲಾಲೂ ಬೊಬ್ಬೆ ಕೇಳಿ ಇಡೀ ಬಿಹಾರ ಭವನವೇ ಸ್ತಬ್ಧಗೊಂಡಿತ್ತು. ಕುತ್ತಿಗೆ ಹಿಡಿದು ಹೊರಗೆ ಹಾಕಿ ಎಂದು ಲಾಲೂ ಕೆರಳುತ್ತಿದ್ದಂತೆ, ನಿತೀಶ್ ಸೇರಿ ಎಲ್ಲಾ ಮುಖಂಡರು ಮೌನದಿಂದ ಬಿಹಾರ ಭವನದಿಂದ ಹೊರ ನಡೆದಿದ್ದರು.
ಘಟನೆಯಿಂದ ತೀವ್ರ ಬೇಸರಗೊಂಡಿದ್ದ ನಿತೀಶ್ ಕುಮಾರ್, ಇನ್ನು ಒಟ್ಟಿಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದರು. ಬಿಹಾರದ ಭವನದಲ್ಲಾದ ಗಲಾಟೆ ಸದ್ದು ಕಿವಿಗೆ ಬಿದ್ದ ಕೂಡಲೇ ಬಿಕ್ಕಟ್ಟು ಶಮನಗೊಳಿಸಲು ಜನತಾದಳದ ಅಂದಿನ ಅಧ್ಯಕ್ಷ ಶರದ್ ಯಾದವ್ ಎಷ್ಟೇ ಯತ್ನಿಸಿದರೂ, ನಿತೀಶರ ಮನಸ್ಸು ಒಡೆದು ಹೋಗಿತ್ತು.
90ರಲ್ಲಿ ಸರ್ಕಾರ ರಚನೆಯಾದ ಎರಡೇ ವರ್ಷದಲ್ಲಿ ನಿತೀಶ್-ಲಾಲೂ ಮುಖ-ಮುಖ ನೋಡುತ್ತಿರಲಿಲ್ಲ. ಇಬ್ಬರ ನಡುವೆ ಮಾತುಕತೆ ಬಹುತೇಕ ಸ್ಥಗಿತಗೊಂಡಿತ್ತು. ಲಾಲೂ ಜತೆ ಮಾತನಾಡಿ ಪ್ರಯೋಜನವಿಲ್ಲ ಎಂದು ತೀರ್ಮಾನಿಸಿದ್ದ ನಿತೀಶ್, ಸುದೀರ್ಘ ಪತ್ರ ಬರೆಯಲು ಮುಂದಾಗಿ, ಆ ಪತ್ರವನ್ನು ಶರದ್ ಯಾದವ್ ಜತೆಗೂ ಹಂಚಿಕೊಂಡಿದ್ದರು.
ಜೆಪಿ, ರಮಾನಂದ ತಿವಾರಿ, ಕರ್ಪೂರಿ ಠಾಕೂರ್ ಅವರಂಥ ಹಿರಿಯಾಳುಗಳು, ಲಕ್ಷಾಂತರ ಕಾರ್ಯಕರ್ತರ ಹೋರಾಟದಿಂದ ಈ ಅಧಿಕಾರ ಪ್ರಾಪ್ತಿಯಾಗಿದೆ ಎನ್ನುವುದನ್ನು ನೀವು ಮರೆತಂತಿದೆ. ಸರ್ಕಾರದಲ್ಲಿ ಯಾದವರನ್ನು ಹೊರತುಪಡಿಸಿ ಇತರೆ ಸಮಾಜದವರ ಯಾವ ಕೆಲಸಗಳು ಆಗುತ್ತಿಲ್ಲ.
ಯಾದವೇತರರಿಗಂತೂ ಬೆಲೆಯೇ ಇಲ್ಲ. ಸಮಸ್ತಿಪುರದಲ್ಲಿ ಎಲ್.ಕೆ.ಆಡ್ವಾಣಿಯವರ ರಥ ಯಾತ್ರೆ ತಡೆ ಹಿಡಿಯುವುದು ನಮ್ಮೆಲ್ಲರ ನಿರ್ಧಾರವಾಗಿತ್ತಾದರೂ, ನಾವ್ಯಾರೂ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಆದರೆ, ನೀವು ಅದನ್ನು ನನ್ನಿಂದಲೇ ಎಲ್ಲವೂ ನಡೆಯಿತು ಎಂಬಂತೆ ಬಿಂಬಿಸಿದ್ದೀರಿ.
ಜಾತ್ಯತೀತ ರಾಜಕಾರಣ ನಮ್ಮೆಲ್ಲರ ಬದ್ಧತೆ. ಇದು ನಿಮ್ಮೊಬ್ಬರಿಂದ ಆಗಿರುವುದಲ್ಲ. ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರ ವಿರೋಧಿಸಿ ನಾವು ಅಧಿಕಾರಕ್ಕೇರಿದೆವು. ಆದರೆ ನೀವು ಎಲ್ಲವನ್ನೂ ಮರೆತುಬಿಟ್ಟಿದ್ದೀರಿ. ನಿಮ್ಮ ಸುತ್ತಮುತ್ತ ಎಡೆಬಿಡಂಗಿಗಳೇ ತುಂಬಿ ಕೊಂಡಿದ್ದಾರೆ. ನಿಮ್ಮ ಸ್ವಾರ್ಥ ರಾಜಕೀಯಕ್ಕೆ ಧಿಕ್ಕಾರವಿದೆ... ಎಂದು ಹಲವು ಅಂಶಗಳನ್ನು ಉಲ್ಲೇಖಿಸಿ ಅಸಮಾಧಾನದ ಕಿಡಿ ಹೊತ್ತಿಸಿದ್ದರು.
ಪತ್ರದ ಕೊನೆ ಪುಟದಲ್ಲಿ, ಇನ್ನು ನಿಮ್ಮೊಂದಿಗೆ ಇರುವುದು ಉಚಿತವಲ್ಲ. ನಿಮ್ಮಿಂದ ಪ್ರತ್ಯೇಕ ಗೊಂಡು ರಾಜನೀತಿ ನಡೆಸುವುದೇ ಸೂಕ್ತ ಎಂದೂ ತಿಳಿಸಿದ್ದರು. ಹಾಗಂತ, ತಕ್ಷಣಕ್ಕೇ ನಿತೀಶ್ ಪಕ್ಷದಿಂದ ಹೊರ ನಡೆದಿರಲಿಲ್ಲ. ಲಾಲೂ ಪ್ರಭಾವವಲಯದಾಚೆಗೆ ನಾನು ಬೆಳೆಯಬಲ್ಲೆನೇ? ರಾಜಕೀಯ ಪಕ್ಷವಿಲ್ಲದೆ ಇದು ಸಾಧ್ಯವೇ? ಸಣ್ಣ ಸಮುದಾಯ ದಿಂದ ಬಂದ ನನ್ನನ್ನು ಜನ ಸ್ವೀಕರಿಸಬಹುದೇ ಎಂಬೆ ಪ್ರಶ್ನೆಗಳು ಆಗಿಂದಾಗ್ಗೆ ಅವರನ್ನು ಕಾಡುತ್ತಿದ್ದವು.
ಹೀಗಾಗಿ, ಸುಮಾರು 2 ವರ್ಷಗಳ ಕಾಲ ಲಾಲೂ ಜತೆ ಮಾತುಕತೆ ಇಲ್ಲದೆಯೇ ಪಕ್ಷದಲ್ಲಿ ಮುಂದುವರಿದಿದ್ದರು. ನಿತೀಶ್-ಲಾಲೂ ವೈಮನಸ್ಯಗಳನ್ನು ಜಾರ್ಜ್ ಫೆರ್ನಾಂಡೀಸ್ ಕೂಡ ಅರಿತಿದ್ದರು ಮತ್ತು ಜಾರ್ಜ್‌ರನ್ನೂ ಲಾಲೂ ಕಡೆಗಣಿಸಿದ್ದರು. ಅವಕಾಶ ಸಿಕ್ಕಾಗಲೆಲ್ಲ ನಿತೀಶ್ ಮತ್ತು ಶರದ್ ಯಾದವ್ ಬಗ್ಗೆ ವ್ಯಂಗ್ಯೋಕ್ತಿಗಳ ಮೂಲಕ ಲೇವಡಿ ಮಾಡುತ್ತಿದ್ದ ಲಾಲೂ, 1993ರಲ್ಲಿ ಏರ್ಪಡಿಸಿದ್ದ ಗರೀಬ್ ರ‍್ಯಾಲಿಗೆ (ಬಡವರ ರ‍್ಯಾಲಿ) ನಿತೀಶ್‌ರನ್ನು ವೇದಿಕೆಗೆ ಆಹ್ವಾನಿಸಲಿಲ್ಲ.
ಪೋಸ್ಟರ್‌ಗಳಲ್ಲಿ ಉದ್ದೇಶಪೂರ್ವಕವಾಗಿ ನಿತೀಶ್ ಮುಖವನ್ನು ಏರ್‌ಬ್ರಶ್‌ನಿಂದ ಅಳಿಸಿ ಹಾಕಲಾಗುತ್ತಿತ್ತು. ಹೀಗಿದ್ದರೂ, ಆಪ್ತ ಗ್ಯಾನೇಂದ್ರ ಸಿಂಗ್ (ಗ್ಯಾನು) ಜತೆ ಮಾರುತಿ ಕಾರ್‌ನಲ್ಲಿ ಗಾಂಧಿ ಮೈದಾನಕ್ಕೆ ತೆರಳಿದ್ದ ನಿತೀಶ್, ಕಾರಿನೊಳಗೆ ಕುಳಿತೇ ಸಮಾವೇಶ ವೀಕ್ಷಿಸಿದ್ದರು.
ನೀವು ವೇದಿಕೆಯಲ್ಲಿರಬೇಕಿತ್ತು ಎಂದು ಹಿತೈಷಿಗಳು ಹೇಳುತ್ತಿದ್ದಾಗ, ನಿತೀಶ್ ಮೌನವೇ ಉತ್ತರವಾಗುತ್ತಿತ್ತು. ಪಕ್ಷದಿಂದ ಹೊರ ನಡೆಯುವ ಮನಸ್ಸಿದ್ದರೂ, ಬಹಿರಂಗ ಸಮರ ಸಾರಲು ನಿತೀಶ್ ಹಿಂಜರಿಯುತ್ತಿದ್ದರು. ಬಹುಶಃ ಅದಕ್ಕೆ ಮತ್ತಷ್ಟು ರಾಜಕೀಯ ಶಕ್ತಿ-ಸಾಮರ್ಥ್ಯ ಬೇಕು ಎಂದು ಅನ್ನಿಸಿದ್ದಿರಬಹುದು.
ಆದರೆ, 1994ರಲ್ಲಿ ಪಟ್ನಾಕ್ಕೆ ಸನಿಹವಿರುವ ವೈಶಾಲಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಹಾರ ಪೀಪಲ್ಸ್ ಪಾರ್ಟಿ ಅಭ್ಯರ್ಥಿಯಾಗಿದ್ದ ಗ್ಯಾಂಗ್‌ಸ್ಟರ್ ಆನಂದ್ ಮೋಹನ್ ಸಿಂಗ್ ಪತ್ನಿ ಲವ್ಲಿ ಆನಂದ್ ವಿರುದ್ಧ ಮಾಜಿ ಸಿಎಂ ಸತ್ಯೇಂದ್ರ ನಾರಾಯಣ ಸಿನ್ಹಾ ಪತ್ನಿ ಕಿಶೋರಿ ಸಿನ್ಹಾರನ್ನು ಜನತಾದಳದ ಅಭ್ಯರ್ಥಿಯಾಗಿ ಲಾಲೂ ಕಣಕ್ಕಿಳಿಸಿದ್ದರು.
ಲಾಲೂಗೆ ಬಿಸಿಮುಟ್ಟಿಸಬೇಕೆಂದೇ ಪ್ರಚಾರದಿಂದ ದೂರ ಉಳಿದ ನಿತೀಶ್, ಯಾದವೇತರ ಸಮುದಾಯಗಳು ಲವ್ಲಿ ಆನಂದ್ ಪರ ಒಗ್ಗೂಡುವ ಸಂದೇಶ ರವಾನಿಸಿದ್ದರು. ಉಪ ಚುನಾವಣೆ ಸೋತು ಲಾಲೂ ತೀವ್ರ ಮುಜುಗರ ಅನುಭವಿಸಿದ್ದರು. ನಿತೀಶ್ ಹಿರಿ ಹಿಗ್ಗಿದ್ದರು ಮತ್ತು ಲಾಲೂ ವಿರೋಧಿ ದಳ ಸ್ಥಾಪಿಸುವ ಲೆಕ್ಕಾಚಾರಕ್ಕೆ ಬಲ ಬಂದಿತ್ತು.
1994ರ ಫೆಬ್ರವರಿ ತಿಂಗಳು. ಲಾಲೂ ಆಡಳಿತ ನೀತಿ ಖಂಡಿಸಿ ಬಿಹಾರದ ಕುರ್ಮಿ-ಕೊಯೆರಿ ಸಮಾಜದವರು ಭಾರೀ ಸಂಖ್ಯೆಯಲ್ಲಿ ಪಟ್ನಾದ ಗಾಂಧಿ ಮೈದಾನದ ಕುರ್ಮಿ ಚೇತನಾ ರ‍್ಯಾಲಿಯಲ್ಲಿ ಜಮಾಯಿಸಿದ್ದರು. ಈ ರ‍್ಯಾಲಿಯನ್ನು ನಿತೀಶ್ ಆಯೋಜಿಸದಿದ್ದರೂ, ನಿತೀಶ್ ಪಾಲ್ಗೊಳ್ಳಬೇಕೆಂದು ಹಿತೈಷಿಗಳು ಬಯಸಿದ್ದರು.
ಹೋಗಬೇಕೆ/ಬೇಡೆವೇ ಎನ್ನುವುದನ್ನು ಅಳೆದುತೂಗಿ, ಕೊನೆಗೂ ಮಧ್ಯಾಹ್ನದ ವೇಳೆ ಗಾಂಧಿ ಮೈದಾನ ತಲುಪಿದ್ದ ನಿತೀಶ್, ಭೀಕ್ ನಹೀ ಹಿಸ್ಸೇದಾರಿ ಚಾಹಿಯೇ (ಭಿಕ್ಷೆಯಲ್ಲ, ನ್ಯಾಯಯುತ ಪಾಲು ಬೇಕು) ಎಂದು ಲಾಲೂ ವಿರೋಧಿ ಬಂಡಾಯವನ್ನು ಅಧಿಕೃತವಾಗಿ ಮೊಳಗಿದ್ದರು. ಅಲ್ಲಿಗೆ, ಜನತಾದಳ ತೊರೆಯುವ ತಮ್ಮ ನಿಲುವನ್ನು ದೃಢಪಡಿಸಿದ್ದರು.
ಅಂದಿನ ಕುರ್ಮಿ-ಕೊಯೆರಿ ಸಮಾಜದ ಒಗ್ಗಟ್ಟು ನಿತೀಶ್ ನೈತಿಕ ಸ್ಥೈರ್ಯವನ್ನು ಹಿಗ್ಗಿಸಿತ್ತು. ನಿತೀಶ್ ಒಳಗಿದ್ದ ನಾಯಕನನ್ನು ಅದು ಬಡಿದೆಬ್ಬಿಸಿತ್ತು. ಹೀಗಿದ್ದರೂ, ನಿತೀಶ್ ತುಮ್ ಆಗೇ ಬಡೋ, ಹಮ್ ತುಮಾರೇ ಸಾಥ್ ಹೇ ಎಂದು ಕುರ್ಮಿಗಳು ಘೋಷಣೆ ಕೂಗಿದರೂ, ರಾಜ್ಯವ್ಯಾಪ್ತಿ ಜನರು ನಮ್ಮನ್ನು ಸ್ವೀಕರಿಸುತ್ತಾರಾ? ನನ್ನ ಹಿಂದೆ ಎಷ್ಟು ಮಂದಿ ಬಂದಾರು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿರಲಿಲ್ಲ. ಆದರೂ ಆ ದಿನ ಬಂದೇ ಬಿಟ್ಟಿತ್ತು.
1994, ಏಪ್ರಿಲ್ 21ರಂದು ಜನತಾದಳದ 14 ಸಂಸದರು ಪಕ್ಷದಿಂದ ಹೊರನಡೆದು, ಜನತಾ ದಳ (ಜಾರ್ಜ್) ಎಂಬ ಹೆಸರಲ್ಲಿ ತಮ್ಮನ್ನು ಗುರುತಿಸಿಕೊಂಡರು. ನಿತೀಶ್ ಬಂಡಾಯಕ್ಕೆ ಜಾರ್ಜ್ ಸಂಪೂರ್ಣ ಬೆಂಬಲವಿತ್ತು ಮತ್ತು ಅದೇ ವರ್ಷದ ಅಕ್ಟೋಬರ್ 19ರಂದು ಸಮತಾ ಪಾರ್ಟಿ ಎಂಬ ಹೊಸ ಪಕ್ಷದ ಘೋಷಣೆಗೆ ಗಾಂಧಿ ಮೈದಾನದಲ್ಲಿ ನಾಯಕರೆ ಲ್ಲರೂ ಸೇರಿದ್ದರು.
ಬಿಹಾರ್ ಬಚಾವೋ ಆಂದೋಲನಕ್ಕೆ ಕರೆ ಕೊಟ್ಟರು. ಆದರೆ, 1995ರ ವಿಧಾನಸಭೆ ಚುನಾವಣೆಯಲ್ಲಿ ಸಮತಾಪಾರ್ಟಿಯು ಜನತಾದಳ ವಿರುದ್ಧ ಹೀನಾಯ ಸೋಲು ಕಂಡಿತು. 324 ಕ್ಷೇತ್ರಗಳಲ್ಲಿ 310ರಲ್ಲಿ ಸ್ಪರ್ಧಿಸಿದ್ದ ಸಮತಾಪಾರ್ಟಿಯ ಅಭ್ಯರ್ಥಿಗಳು, 271ರಲ್ಲಿ ಠೇವಣಿ ಕಳೆದುಕೊಂಡಿದ್ದರು.
2000ದ ಚುನಾವಣೆಯಲ್ಲಿ ಸಮತಾಪಾರ್ಟಿ, ಶರದ್ ಯಾದವ್ ನೇತೃತ್ವದ ಜನತಾದಳ ಮತ್ತು ಬಿಜೆಪಿ ಒಳಗೊಂಡ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಗೆ ಮುಂದಾಗಿ ನಿತೀಶ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಅವರ ಅವಧಿ 7 ದಿನಕ್ಕಷ್ಟೇ ಸೀಮಿತವಾಗಿತ್ತು.
2005ರಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದು ನಗೆಬೀರಿದ ನಿತೀಶ್, ಬಿಜೆಪಿಯ ಎಲ್.ಕೆ. ಆಡ್ವಾಣಿ, ವಾಜಪೇಯಿ, ಅರುಣ್ ಜೇಟ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಿದ್ದರು. ಬಿಹಾರದಲ್ಲಿ ಬಿಜೆಪಿ ಜತೆ ಕೈಜೋಡಿಸುವ ಮುನ್ನ 1992ರ ರಥಯಾತ್ರೆ ವಿರೋಧಿ ವಿಚಾರ ಗಳು ಕಣ್ಣಮುಂದೆ ಆವರಿಸಿದರೂ, ಲಾಲೂ ಕಟ್ಟಿ ಹಾಕಲು ಬಿಜೆಪಿ ಸಖ್ಯ ಅನಿವಾರ್ಯ ಎನ್ನುವುದು ನಿತೀಶ್ ಅರ್ಥವಾಗಿತ್ತು.
ಹಾಗಾಗಿ, 1996ರಲ್ಲಿ ಬಿಜೆಪಿ-ಸಮತಾಪಾರ್ಟಿ ಒಟ್ಟಾಗಿ ಲೋಕಸಭೆ ಚುನಾವಣೆ ಸ್ಪರ್ಧಿಸಿ ದ್ದವು. ಸೆಕ್ಯುಲರ್ ವಾದಿ ಎನ್ನುವ ನೀವು 2002ರ ಗುಜರಾತ್ ಗಲಭೆ ಬಳಿಕವೂ, ಎನ್‌ಡಿಎ ಸರ್ಕಾರದಲ್ಲಿ ಏಕೆ ಮುಂದುವರಿಯುತ್ತಿದ್ದೀರಿ ಎಂಬ ಪ್ರಶ್ನೆಗಳೆದುರಾದಾಗ ಮೋದಿಯ ವರಿಗೆ ವಾಜಪೇಯಿಯವರು ರಾಜಧರ್ಮ ಬೋಧನೆ ಮಾಡಿದ್ದಾರೆ.
ಅಷ್ಟಕ್ಕೂ ನಾನು ವಾಜಪೇಯಿ ನೇತೃತ್ವದ ಸರ್ಕಾರದಲ್ಲಿದ್ದೇನೆಯೇ ವಿನಃ ಮೋದಿ ನೇತೃತ್ವ ದ್ದಲ್ಲ ಎಂದಿದ್ದರು ನಿತೀಶ್.ಬಿಹಾರದ ವಿಕಾಸ್ ಪುರುಷ್ ಎಂದು ಖ್ಯಾತಿ ಪಡೆದ ಬಳಿಕ ಸಮಕಾಲೀನರಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಒಪ್ಪಲು ನಿತೀಶ್‌ಗೆ ಪ್ರತಿಷ್ಠೆ ಅಡ್ಡಿಯಾಗಿತ್ತು.
2013 ರಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮುರಿದುಬಿತ್ತು. 2015ರಲ್ಲಿ ಲಾಲೂ ಜತೆ ಸೇರಿ ಸರ್ಕಾರ ರಚಿಸಿದರೂ, 2017ರಲ್ಲಿ ಲಾಲೂ ಸಹವಾಸ ಸಾಕೆಂದು ಎನ್‌ಡಿಎ ಸೇರಿಕೊಂಡರು. ಮೋದಿ ನಾಯಕತ್ವ ಅಪ್ಪಿಕೊಂಡರು. 2020ರಲ್ಲಿ ವಿಧಾನಸಭೆ ಗೆದ್ದರೂ, ಬಿಜೆಪಿ ಜತೆ ಮುನಿಸಿ ಕೊಂಡು 2022ರಲ್ಲಿ ಮತ್ತೆ ಆರ್‌ಜೆಡಿ ಜತೆ ಕೈಜೋಡಿಸಿದರು.
2024ರಲ್ಲಿ ಎನ್‌ಡಿಎ ಮನೆಯೊಳಗೆ ಮತ್ತೆ ಸೇರ್ಪಡೆಯಾದರು. 2025ರಲ್ಲಿ ಮತ್ತೆ ದಿಗ್ವಿಜಯ. ಒಟ್ಟಿನಲ್ಲಿ ಹಲವು ಏಳುಬೀಳುಗಳನ್ನೊಳಗೊಂಡ ನಿತೀಶ್ ರಾಜಕೀಯ ಪಯಣ ರಾಜಕೀಯ ಆಸಕ್ತರಿಗೆ ಅಧ್ಯಯನ ಯೋಗ್ಯ.
ರಾಜಕೀಯ ಮಿತ್ರರನ್ನು ಆಗಿಂದಾಗ್ಗೆ ಬದಲಿಸುತ್ತಾ, 2005ರಿಂದ ಮುಖ್ಯಮಂತ್ರಿ ಕುರ್ಚಿ ಬಿಗಿಹಿಡಿದು ಕುಳಿತು ಬಿಹಾರವನ್ನು ಅರಾಜಕತೆಯ ಸಂಕೋಲೆಯಿಂದ ಬಿಡಿಸಿ, ಅಲ್ಲಿನ ಜನರಿಗೆ ವಿಕಾಸ ಎಂದರೆ ಹೀಗೆ ಎನ್ನುವುದನ್ನು ತೋರಿಸಿದ್ದು ನಿತೀಶ್. ರಾಜ್ಯದ ಅತಿ ಹಿಂದುಳಿದವರನ್ನು (ಇಬಿಸಿ) ಗುರುತಿಸಿದರು. ಶಾಲೆಗೆ ಹೋಗುವ ಬಡ ಬಾಲಕಿಯರಿಗೆ ಸೈಕಲ್ ಕೊಡಿಸಿ, ಅವರಲ್ಲಿ ಮನೋಬಲ ವೃದ್ಧಿಸಿದರು.
ಮಹಿಳೆಯರಿಗೆ ಕಡಿಮೆ ದರದಲ್ಲಿ ಬ್ಯಾಟರಿ ರಿಕ್ಷಾಗಳನ್ನು ಕೊಡಿಸಿ, ಸ್ವಾವಲಂಬಿಗಳನ್ನಾಗಿ ಮಾಡಿದರು. ರಸ್ತೆ ನಿರ್ಮಾಣದ ಹರಿಕಾರರಾದರು. ಗಂಡಂದಿರ ಶರಾಬು ಚಟದಿಂದ ನಾಶ ವಾಗುತ್ತಿದ್ದ ಸಂಸಾರಗಳನ್ನು ತಕ್ಕಮಟ್ಟಿಗೆ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ದರು. ಅಭಿಮಾನಿಗಳು, ಮುಖ್ಯವಾಗಿ ಮಹಿಳೆಯರು ನಿತೀಶ್ ನಮ್ಮ ಪಾಲಿನ ದೇವರು ಎನ್ನುತ್ತಾ ಅವರ ದೆಹಲಿ ಪ್ರಯಾಣ ವಿರೋಧಿಸುತ್ತಿರುವುದು ಸುಮ್ಮನೆಯೇನಲ್ಲ ಅಲ್ಲವೇ?