ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Thimmanna Bhagwat Column: ಉಡುಪಿನ ಆಯ್ಕೆಯ ಸ್ವಾತಂತ್ರ್ಯ ಪ್ರಶ್ನಾತೀತವೆ?

ಮಹಿಳೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವದು ಮತ್ತು ಅವಳ ವಿರುದ್ಧ ಮಾಡಲಾಗುವ ಯಾವದೇ ರೀತಿಯ ಅತ್ಯಾಚಾರ ಅಥವಾ ಇತರ ಲೈಂಗಿಕ ಅಪಚಾರಗಳನ್ನು ಯಾವದೇ ಕಾರಣಕ್ಕೂ ಸಮರ್ಥಿಸ ಲಾಗುವದಿಲ್ಲ. ಆ ಕಾರಣಕ್ಕೆ ಯುವಕರ ಮನಸ್ಸು ಕಲುಷಿತವಾಗುತ್ತದೆ ಎಂದಾದರೆ ಅವರಿಗೆ ಸೂಕ್ತ ತಿಳುವಳಿಕೆ ನೀಡುವದು ಹೆತ್ತವರ ಕರ್ತವ್ಯ ಎಂಬುದು ನ್ಯಾಯಲಯದ ಅಭಿಪ್ರಾಯ.

ಕಾನೂನ್ ಸೆನ್ಸ್

ತಿಮ್ಮಣ್ಣ ಭಾಗವತ್

‘ತಾನು ಯಾವ ಉಡುಪನ್ನು ಧರಿಸಬೇಕೆನ್ನುವದು ಮಹಿಳೆಯ ವೈಯಕ್ತಿಕ ಆಯ್ಕೆಯಾಗಿದ್ದು ಆ ಆಧಾರದಲ್ಲಿ ಅವಳ ನಡತೆಯನ್ನು ಪ್ರಶ್ನಿಸುವದನ್ನು ಅಥವಾ ಅವಳು ಧರಿಸಿದ ಉಡುಪು ಅವಳ ವಿರುದ್ಧ ಲೈಂಗಿಕ ಅಪಚಾರ ಅಥವಾ ದೌರ್ಜನ್ಯಕ್ಕೆ ಕಾರಣವೆಂಬ ಸಮರ್ಥನೆಯನ್ನು ಒಪ್ಪಲಾ ಗುವದಿಲ್ಲ’ ಎಂದು ದೆಹಲಿ ಉಚ್ಚ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ದೆಹಲಿ ಸರಕಾರ ವರ್ಸಸ್ ಸಾಜಿದ ಅಲಿ ಪ್ರಕರಣದಲ್ಲಿ ಆರೋಪಿಯು ತನ್ನ ಜೊತೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಮಹಿಳೆಯೊಬ್ಬರು ದೆಹಲಿಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ದೂರುದಾರ ಮಹಿಳೆ ಸಭ್ಯ ಸಮಾಜ ಒಪ್ಪತಕ್ಕುದಲ್ಲದ ಅನುಚಿತ ಉಡುಪು ಧರಿಸುತ್ತಿದ್ದರು ಮತ್ತು ಆ ಕಾರಣಕ್ಕೆ ಯುವಕರ ಮನಸ್ಸು ಚಂಚಲವಾಗುವದರಿಂದ ಅಂಥ ಘಟನೆಗಳಿಗೆ ಕಾರಣವಾಗುತ್ತದೆ ಎಂದು ಆರೋಪಿಯ ಪರವಾಗಿ ಪ್ರತಿವಾದ ಮಾಡಲಾಗಿತ್ತು.

ವಿಚಾರಣಾ ನ್ಯಾಯಾಲಯ ಈ ವಾದವನ್ನು ಒಪ್ಪಿ ಆ ಕಾರಣಕ್ಕಲ್ಲದೆ ದೂರು ಅರ್ಜಿಯಲ್ಲಿನ ಇತರ ತಾಂತ್ರಿಕ ದೋಷಗಳ ಆಧಾರದಲ್ಲಿ ಆರೋಪಿಯನ್ನು ಬಿಡುಗಡೆ ಮಾಡಿತ್ತು. ಸದರಿ ಆದೇಶದ ವಿರುದ್ಧ ಮಾಡಲಾದ ಅಪೀಲಿನ ವಿಚಾರಣೆ ನಡೆಸಿದ ದೆಹಲಿ ಉಚ್ಚ ನ್ಯಾಯಾಲಯ, ಆರೋಪಿಯ ಬಿಡುಗಡೆಯನ್ನು ರದ್ದುಪಡಿಸಿ ಶಿಕ್ಷೆ ವಿಧಿಸಿದೆ. ವಿಚಾರಣೆಯ ವೇಳೆ ಆ ಮಹಿಳೆಗೆ ಅವಳು ಪಾಶ್ಚಿಮಾತ್ಯ ಶೈಲಿಯ ಉಡುಪನ್ನು ಧರಿಸುವ ಬಗ್ಗೆ ಮತ್ತು ಆ ಕುರಿತು ಬಹುತೇಕ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬಗಳಿರುವ ಕಾಲನಿಯಲ್ಲಿನ ಸದಸ್ಯರು ಆಕ್ಷೇಪಿಸಿದ ಬಗ್ಗೆ ಪ್ರಶ್ನಿಸಲಾಗಿತ್ತು.

ಈ ರೀತಿಯ ಪಾಟೀ ಸವಾಲನ್ನು ತೀವ್ರವಾಗಿ ಆಕ್ಷೇಪಿಸಿದ ಹೈಕೋರ್ಟ್, ಹೀಗೆ ಮಾಡುವ ಮೂಲಕ ದೂರುದಾರ ಮಹಿಳೆ ಅನಗತ್ಯ ಕಿರುಕುಳ ಮತ್ತು ಮುಜುಗರಕ್ಕೆ ಒಳಗಾಗುತ್ತಾಳೆ ಮತ್ತು ಅದು ಅವಳ ಚಾರಿತ್ರ್ಯ ಹನನಕ್ಕೆ ಕಾರಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಇದನ್ನೂ ಓದಿ: Thimmanna Bhagwat Column: ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?

ಮಹಿಳೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವದು ಮತ್ತು ಅವಳ ವಿರುದ್ಧ ಮಾಡಲಾಗುವ ಯಾವದೇ ರೀತಿಯ ಅತ್ಯಾಚಾರ ಅಥವಾ ಇತರ ಲೈಂಗಿಕ ಅಪಚಾರಗಳನ್ನು ಯಾವದೇ ಕಾರಣಕ್ಕೂ ಸಮರ್ಥಿಸ ಲಾಗುವದಿಲ್ಲ. ಆ ಕಾರಣಕ್ಕೆ ಯುವಕರ ಮನಸ್ಸು ಕಲುಷಿತವಾಗುತ್ತದೆ ಎಂದಾದರೆ ಅವರಿಗೆ ಸೂಕ್ತ ತಿಳುವಳಿಕೆ ನೀಡುವದು ಹೆತ್ತವರ ಕರ್ತವ್ಯ ಎಂಬುದು ನ್ಯಾಯಲಯದ ಅಭಿಪ್ರಾಯ. ನಿರ್ಭಯಾ ಪ್ರಕರಣದಲ್ಲಿ ಕೂಡಾ ಮಹಿಳೆಯರ ಸ್ವಾತಂತ್ರ್ಯದ ವಿಚಾರದಲ್ಲಿ ಕೋರ್ಟು ಇಂಥದ್ದೇ ಅಭಿಪ್ರಾಯ ವ್ಯಕ್ತ ಪಡಿಸಿತ್ತು.

ಮಹಿಳೆಯಾಗಲೀ ಪುರುಷನಾಗಲೀ, ಉಡುಪು ಧರಿಸುವದು ಅವರ ವೈಯಕ್ತಿಕ ಆಯ್ಕೆ. ಅವರವರ ಅಭಿರುಚಿಗೆ ಸಂಬಂಧಿಸಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಉಡುಪು ಅಥವಾ ವಸ್ತ್ರ ಧರಿಸು ವದು ಮಾನವ ವಿಕಾಸದ ಜೊತೆಗೆ ಬೆಳೆದುಬಂದ ಒಂದು ಆರೋಗ್ಯಕರ ಬೆಳವಣಿಗೆ. ಕಾಡಿನಲ್ಲಿರು ವಾಗಲೇ, ಗಾಳಿ, ಮಳೆ ಚಳಿಯಿಂದ ರಕ್ಷಿಸಲು ಎಲೆ, ಮರದ ತೊಗಟೆ ಅಥವಾ ಪ್ರಾಣಿಗಳ ಚರ್ಮ ದಿಂದ ಮೈಮುಚ್ಚಿಕೊಳ್ಳುವ ಕಾರಣಕ್ಕೆ ಆರಂಭವಾದ ವಸ್ತ್ರಧಾರಣೆ ವಿಶೇಷವಾಗಿ ಮಹಿಳೆಯರ ಸೌಂದರ್ಯವರ್ಧಕವಾಗಿ ರೂಪುಗೊಂಡಿತು.

ಜನರ ಅಭಿರುಚಿಗಳಿಗೆ ತಕ್ಕಂತೆ ಕಾಲಕಾಲಕ್ಕೆ ಮಾಡಲಾದ ಬದಲಾವಣೆ ಮತ್ತು ಅದಕ್ಕೆ ಪೂರಕ ವಾದ ಸಂಶೋಧನೆಗಳ ಕಾರಣಕ್ಕೆ ವಸಗಳ ಬಗೆ ಮತ್ತು ವಿನ್ಯಾಸಗಳು ಅನೇಕ ಸುಧಾರಣೆ/ ಬದಲಾವಣೆಗಳನ್ನು ಕಂಡವು. ಉಡುಪಿಗೆ ಭಾರತೀಯ ಮತ್ತು ಪಾಶ್ಚಾತ್ಯವೆಂಬ ವರ್ಗೀಕರಣವೂ ಆಗಿ ಬಹಳ ಕಾಲವಾಯ್ತು. ಈಗ ಅಂಥ ವರ್ಗೀಕರಣವೇ ಅಸಂಗತವಾಗಿದೆ. ಮಹಿಳೆ ಮತ್ತು ಪುರುಷರಿಬ್ಬರಿಗೂ ಉಡುಪು ಅನ್ವಯಿಸುವದಾದರೂ ಆ ಕುರಿತ ವಿವಾದಗಳು ಮಹಿಳೆಯರ ಉಡುಪಿನ ವಿಷಯದಲ್ಲಿಯೇ ಸಾಮಾನ್ಯ. ಆ ಕುರಿತು ಚರ್ಚಿಸುವದು ಕೂಡಾ ಮಹಿಳಾ ಸ್ವಾತಂತ್ರ್ಯದ ವಿರುದ್ಧವಾಗುತ್ತದೆ ಮತ್ತು ಅದು ಪುರುಷ ಪ್ರಧಾನ ಸಮಾಜ ಮಹಿಳೆಯರ ವಿಷಯದಲ್ಲಿ ತೋರುತ್ತಿರುವ ಅನಗತ್ಯ ಹಸ್ತಕ್ಷೇಪ ಎಂಬ ಭಾವನೆ ವ್ಯಾಪಕವಾಗಿದೆ.

Screenshot_1modi

ದೇಶದಲ್ಲಿ ವಸ್ತ್ರ ಸಂಹಿತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಗ್ನತೆಯ ಪ್ರದರ್ಶನದ ವಿಷಯದಲ್ಲಿ ಯಾವದೇ ನಿರ್ದಿಷ್ಟ ಕಾನೂನು ಇಲ್ಲ. ಭಾರತೀಯ ನ್ಯಾಯ ಸಂಹಿತೆಯ 296ನೇ (ಎಂಪಿಎ 294) ಕಲಮಿನನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ನಡವಳಿಕೆಗೆ ಶಿಕ್ಷೆಯನ್ನು ವಿಧಿಸಬಹುದು. ಆದರೆ ಅಸಭ್ಯ ನಡವಳಿಕೆಯೆಂದರೆ ಏನೆಂದು ಅದು ಸ್ಪಷ್ಟವಾಗಿ ಹೇಳುವದಿಲ್ಲ. ಅದು ಆಯಾ ಸನ್ನಿವೇಶವನ್ನು ಅವಲಂಬಿಸಿ ಕಾನೂನು ಸುವ್ಯವಸ್ಥೆಯ ಅಧಿಕಾರಿಗಳು ನಿರ್ಣಯಿಸಬೇಕಾದ ವಿಚಾರ.

ಉದಾಹರಣೆಗೆ ಜೈನ ಮುನಿಗಳ ದಿಗಂಬರ ದೀಕ್ಷೆ ಅಥವಾ ನಾಗಾ ಸಾಧುಗಳ ನಗ್ನತೆಗಳನ್ನು ಅಸಭ್ಯ ವೆಂದು ಪರಿಗಣಿಸಲಾಗುವದಿಲ್ಲ. ಅದು ಧಾರ್ಮಿಕ ಆಚರಣೆಯಾದ್ದರಿಂದ ಅದು ಅಸಭ್ಯ ವೆನಿಸುವದಿಲ್ಲ ಮತ್ತು ಆ ಕಾರಣಕ್ಕೆ ಪ್ರತಿಬಂಧಿತವಲ್ಲ. ಆದರೆ ಕೆಲವು ದೇವಾಲಯಗಳಲ್ಲಿ ಪ್ರಚಲಿತವಿರುವ ಬೆತ್ತಲೆ ಸೇವೆ, ಉರುಳು ಸೇವೆಯಂಥ ಆಚರಣೆಗಳು ಮೂಢನಂಬಿಕೆ ಮತ್ತು ಅಮಾನುಷವೆಂಬ ಕಾರಣಕ್ಕೆ ಅವುಗಳಿಗೆ ಪ್ರತಿಬಂಧ ಹೇರಲಾಗಿದೆ.

ಅನೇಕ ಪುರಾತನ ಹಿಂದೂ ದೇವಾಲಯಗಳಲ್ಲಿ ಪೂಜಿಸಲಾಗುವ ಹಾಗೂ ಗೋಡೆಗಳಲ್ಲಿ ಕೆತ್ತಿರುವ ವಿಗ್ರಹಗಳ ನಗ್ನತೆಯ ವಿಷಯದಲ್ಲಿ ಕೂಡಾ ವಿವಾದ ಉಂಟಾಗಿತ್ತು. ಕರ್ನಾಟಕದ ಬೇಲೂರು ಹಳೇಬೀಡು ದೇವಾಲಯಗಳಲ್ಲಿ ಕೂಡಾ ಆಂಥ ಕೆತ್ತನೆಗಳಿವೆ. ದೇವರ ವಿಗ್ರಹಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವಾಗ ಅಂಥ ವಿಚಾರಗಳಿಗೆ ಅವಕಾಶವೇ ಇರುವದಿಲ್ಲ. ಆ ಕಾರಣಕ್ಕೆ ಅದನ್ನು ನಗ್ನತೆಯ ಪ್ರದರ್ಶನವೆಂದು ಪರಿಗಣಿಸಲಾಗುವದಿಲ್ಲ. ಕಲ್ಲಿನಲ್ಲಿ ಕೆತ್ತಲಾದ ವಿಗ್ರಹಗಳು ಅಥವಾ ಬಿಡಿಸಲಾದ ತೈಲ ಚಿತ್ರಗಳಲ್ಲಿ ಕಲಾತ್ಮಕತೆಯನ್ನು ನೋಡಬೇಕೇ ಹೊರತು ಅಶ್ಲೀಲ ವನ್ನಲ್ಲ. ಆದರೆ ಅಂಥ ಚಿತ್ರಗಳನ್ನು ರಚಿಸುವಲ್ಲಿನ ಉದ್ದೇಶ ಪ್ರಶ್ನಾರ್ಹವಾಗಿದ್ದರೆ ಅಥವಾ ಅದು ವಿವಾದಕ್ಕೆ ಕಾರಣವಾಗುವಂತಿದ್ದರೆ ಅಂಥ ಕಲೆ ಆಕ್ಷೇಪಾರ್ಹವಾಗುತ್ತದೆ. ‌

ಪ್ರಖ್ಯಾತ ಕಲಾಕಾರ ಎಂ.ಎಫ್.ಹುಸೇನ್‌ರ ನಗ್ನ ಭಾರತ ಮಾತೆ ಹಾಗೂ ಸರಸ್ವತಿ, ಗಣೇಶರ ಚಿತ್ರಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಅವರು ದೇಶ ಬಿಟ್ಟು ಕತಾರ್‌ನ ನಾಗರಿಕತ್ವ ಪಡೆಯ ಲೂ ಅದು ಕಾರಣ ವಾಯ್ತು. ಅವರ ಮರಣಾನಂತರ ಇತ್ತೀಚೆಗೆ ಅಂದರೆ 2025ರಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದ್ದ ಅಂಥ ಪೇಂಟಿಂಗ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದೆಹಲಿ ಹೈಕೋರ್ಟು ಆದೇಶಿಸಿತ್ತು.

ತಮಿಳುನಾಡು, ಕೇರಳ ರಾಜ್ಯಗಳ ಕೆಲವು ದೇವಾಲಯಗಳಲ್ಲಿ ದರ್ಶನಕ್ಕಾಗಿ ಬರುವ ಭಕ್ತರಿಗೆ ನಿರ್ದಿಷ್ಟ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲೂ ಧರ್ಮಸ್ಥಳ, ಸುಬ್ರಹ್ಮಣ್ಯ, ಗೋಕರ್ಣದಂಥ ದೇವಾಲಯಗಳಲ್ಲಿ ಪುರುಷರು ಧೋತಿ ಧರಿಸಿ ಅಂಗಿ ಬನಿಯನ್ ತೆಗೆದು ದರ್ಶನ ಪಡೆಯಬೇಕೆಂಬ ನಿಯಮವಿದೆ. ಇಂಥ ವಸ್ತ್ರ ಸಂಹಿತೆಯನ್ನು ಆಯಾ ದೇವಾಲಯಗಳ ಸಂಪ್ರದಾಯ ಮತ್ತು ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದು ಅದು ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾಗುವದಿಲ್ಲ.

ವಸ್ತ್ರ ಸಂಹಿತೆ ಮತ್ತು ಧಾರ್ಮಿಕ ಮೌಲ್ಯಗಳ ವಿಷಯದಲ್ಲಿ ಮೃಣಾಲಿನಿ ಪಢಿ ವರ್ಸಸ್ ಭಾರತ ಸರಕಾರ, ಸರಿಕಾ ವರ್ಸಸ್ ಮಹಾಕಾಲೇಶ್ವರ ಮಂದಿರ ಸಮಿತಿ, ಉಜ್ಜಯಿನಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟಿನ ಅವಲೋಕನಗಳು ಮಹತ್ವದ್ದಾಗಿವೆ. ಮೃಣಾಲಿನಿ ಪ್ರಕರಣದಲ್ಲಿ ಪುರಿಯ ಜಗನ್ನಾಥ ದೇವಾಲಯದ ಸಮಿತಿಯು ದರ್ಶನಾರ್ಥಿಗಳಿಗೆ ನಿರ್ದಿಷ್ಟ ವಸ್ತ್ರ ಸಂಹಿತೆಯನ್ನು ವಿಧಿಸಬಹುದೆಂದು ಸುಪ್ರೀಂ ಕೋರ್ಟು ಆದೇಶವಿತ್ತಿದೆ.

ರಂಗರಾಜನ್ ನರಸಿಂಹನ್ ವರ್ಸಸ್ ತಮಿಳ್ನಾಡು ಸರಕಾರ ಪ್ರಕರಣದಲ್ಲಿ, ದೇವಾಲಯಗಳಲ್ಲಿ ದರ್ಶನಾರ್ಥಿಗಳಿಗೆ ನಿರ್ದಿಷ್ಟ ವಸ್ತ್ರ ಸಂಹಿತೆ ಅಳವಡಿಸುವ ವಿಷಯದಲ್ಲಿ ಆಯಾ ದೇವಾಲಯ ಸಮಿತಿಗಳು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ದೇವಾಲಯವನ್ನು ಪ್ರವೇಶಿಸುವ ಭಕ್ತರು ಆಯಾ ದೇವಾಲಯ ಗಳ ಸಂಪ್ರದಾಯ ಮತ್ತು ಪಾವಿತ್ರ್ಯತೆಯ ಹಿನ್ನೆಲೆಯಲ್ಲಿ ನಿಗದಿಪಡಿಸಲಾಗುವ ವಸ್ತ್ರ ಸಂಹಿತೆಯನ್ನು ಗೌರವಿಸಿ ತಾವೇ ಅಂಥ ನಿಯಮಗಳನ್ನು ಪಾಲಿಸಬೇಕು ಎಂದು ಮದ್ರಾಸ್ ಹೈಕೋರ್ಟು ಆದೇಶವಿತ್ತಿತು.

ಬೀಚಿಗೆ ಹೋಗಲು ಧರಿಸುವ ಉಡುಪಿನಲ್ಲೇ ದೇವಾಲಯಕ್ಕೆ ಹೋಗಬಯಸುವ ಭಕ್ತರು ಇದನ್ನು ಗಮನಿಸಬೇಕು. ಜೀನ್ಸ್ ಧರಿಸಿ ದರ್ಶನ ಪಡೆದರೆ ದೇವರಿಗೇನು ಕಷ್ಟ? ಎಂದು ವಾದಿಸುವವರು ಕೂಡಾ.

ದೇಶದ ಅನೇಕ ಚರ್ಚುಗಳು ಕೂಡಾ ಪ್ರಾರ್ಥನೆಗೆ ಬರುವವರು ಸೂಕ್ತ ಉಡುಪುಗಳನ್ನು ಧರಿಸಿರ ಬೇಕು ಎಂಬ ನಿಯಮವನ್ನು ಅಳವಡಿಸಿಕೊಂಡಿವೆ. ಮಹಿಳೆಯರು ತೋಳು ಮುಚ್ಚುವ ಶರ್ಟ್/ಸ್ಕಾರ್ಫ್ ಹಾಗೂ ಮೊಣಕಾಲಿಗಿಂತ ಕೆಳಗೆ ಬರುವ ಸ್ಕರ್ಟ್‌ನಂಥ ಸಭ್ಯ ಉಡುಪು ಧರಿಸಬೇಕೆಂಬುದು ಬಹುತೇಕ ಎಲ್ಲ ಸಂಪ್ರದಾಯಬದ್ಧ ಕ್ಯಾಥೊಲಿಕ್ ಚರ್ಚುಗಳಲ್ಲಿ ಅಲಿಖಿತ ನಿಯಮ. ಅದರಂತೆ ಪುರುಷರು ಕೂಡಾ ಸಭ್ಯ ಉಡುಪು ಧರಿಸಬೇಕು ಎಂಬ ನಿಯಮವಿದೆ. ಇಸ್ಲಾಂ ಧರ್ಮದಲ್ಲಂತೂ ವಸ್ತ್ರ ಸಂಹಿತೆ ಕಟ್ಟುನಿಟ್ಟಾಗಿದೆ. ಸಿಖ್ಖರ ಟರ್ಬಾನಿಗೆ ಸೈನಿಕ ಸಮವಸ್ತ್ರದಲ್ಲೂ ವಿನಾಯತಿ ಇರುವದನ್ನು ಇಲ್ಲಿ ಗಮನಿಸಬೇಕು.

ಶಾಲೆಗಳಲ್ಲಿನ ಸಮವಸ್ತ್ರ ನಿಯಮಗಳ ವಿಷಯದಲ್ಲೂ ಕೆಲವು ಪ್ರಕರಣಗಳು ನಡೆದಿವೆ. ಹಿಜಾಬ್ ಪ್ರಕರಣ ಇದಕ್ಕೆ ಉದಾಹರಣೆ. ಸಮವಸ ನಿಯಮದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬರುವದನ್ನು ರಾಜ್ಯದ ಕೆಲವು ಶಾಲೆಗಳಲ್ಲಿ ನಿಷೇಧಿಸಲಾಗಿತ್ತು. ಈ ಕುರಿತು ಹಿಂದಿನ ಕರ್ನಾಟಕ ಸರಕಾರ ಹೊರಡಿಸಿದ ಆದೇಶದ ವಿಷಯ ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬಾಕಿಯಿದೆ.

ಉಡುಪಿನ ಆಯ್ಕೆ ಆಯಾ ವ್ಯಕ್ತಿಯ ಸ್ವಾತಂತ್ರ್ಯವೆಂಬ ದೆಹಲಿ ಹೈಕೋರ್ಟಿನ ಆದೇಶದ ಹಿನ್ನೆಲೆ ಯಲ್ಲಿ ಹಿಜಾಬ್, ಮುಸ್ಲಿಂ ಮಹಿಳೆಯರ ವೈಯಕ್ತಿಕ ಆಯ್ಕೆಯಾಗುತ್ತದೆ. ಸಮವಸ ನಿಯಮ ಕಡ್ಡಾಯವಾದರೂ ಕೇವಲ ಹಿಜಾಬ್ ಧರಿಸಿದ ಮಾತ್ರಕ್ಕೆ ಅಂಥ ನಿಯಮಕ್ಕೆ ಯಾವದೇ ಗಂಭೀರ ಅಪಚಾರವಾಗುವದಿಲ್ಲ ಎಂಬುದು ಅವರ ವಾದ. ತಮ್ಮ ಧರ್ಮದ ಆಚರಣೆಯ ಸ್ವಾತಂತ್ರ್ಯದ ಆಧಾರಲ್ಲಿ ಅವರ ವಾದ ಸಮರ್ಥನೀಯವೆನಿಸುತ್ತದೆ.

ಅಷ್ಟಾಗಿ ವಿದ್ಯಾರ್ಥಿನಿಯರು ತಮ್ಮ ಸಮಾಜದ ಹಿರಿಯರು ವಿಧಿಸಿದ ಕಟ್ಟಳೆಯನ್ನು ಗೌರವಿಸುವ ಸಲುವಾಗಿ ಹಿಜಾಬ್ ಧರಿಸ ಬಯಸು ತ್ತಾರೆ. ಅದೇನೂ ಅವರ ಸೌಂದರ್ಯ ಪ್ರದರ್ಶನಕ್ಕೋ ಅಥವಾ ಮಹಿಳಾ ಸ್ವಾತಂತ್ರ್ಯದ ಹಕ್ಕು ಪ್ರತಿಪಾದನೆಗೋ ಅಲ್ಲ. ಅಂಥ ಸಂಪ್ರದಾಯ ಸರಿಯೋ ತಪ್ಪೋ ಅಥವಾ ಸಮವಸ್ತ್ರ ನಿಯಮದ ಉಲ್ಲಂಘನೆಯು ಕಾನೂನುಬದ್ಧವೋ ಎಂಬ ವಿಶ್ಲೇಷಣೆಗಿಂತ ಸಮಾಜ ಸಭ್ಯವೆಂದು ಪರಿಗಣಿಸುವ ಕಟ್ಟಳೆಯನ್ನು ಪಾಲಿಸುವ ಮುಸ್ಲಿಂ ವಿದ್ಯಾರ್ಥಿನಿಯರ ಬದ್ಧತೆ ಇತರರಿಗೆ ಆದರ್ಶವಾಗಬೇಕು.

ವೈಯ್ಯಕ್ತಿಕ ಸ್ವಾತಂತ್ರ್ಯಕ್ಕೆ ಸಮಂಜಸ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ಸಂವಿಧಾನದ 19(2)ನೇ ವಿಧಿಯಡಿ ಸರಕಾರಕ್ಕೆ ಇದೆ. ಅದು ಚಲನಚಿತ್ರ ಮತ್ತು ಇತರ ಮಾಧ್ಯಮಗಳಲ್ಲಿ ಅಶ್ಲೀಲತೆ ಯ ಪ್ರದರ್ಶನದ ಕುರಿತು ಕೂಡಾ ಅನ್ವಯವಾಗುತ್ತದೆ. ಆದರೆ ಎಲ್ಲವನ್ನೂ ಕಾನೂನಿನ ವ್ಯಾಪ್ತಿಗೆ ತರಲಾಗುವದಿಲ್ಲ. ಅದಕ್ಕೆ ಸಮಾಜದ ಸಂಘಟಿತ ಪ್ರಯತ್ನ ಅಗತ್ಯ. ಅಂತೆಯೇ ಸಭ್ಯ ಸಮಾಜದಲ್ಲಿ ಸಾರ್ವಜನಿಕವಾಗಿ ನಾವು ಹೇಗಿರಬೇಕು ಎಂಬುದನ್ನು ಕೂಡಾ ವಿಶೇಷವಾಗಿ ಯುವಜನತೆ ಅರಿತು ಕೊಳ್ಳಬೇಕು. ಕಾನೂನು, ಸಂವಿಧಾನ, ವೈಯ್ಯಕ್ತಿಕ ಸ್ವಾತಂತ್ರ್ಯ ಏನೇ ಇದ್ದರೂ ಸಮಾಜ ಅಪೇಕ್ಷಿ ಸುವ ಸಭ್ಯತೆಯ ಎಲ್ಲೆಯನ್ನು ಮೀರದಿರುವದೇ ಉತ್ತಮ ಸಂಸ್ಕೃತಿ ಎಂದೆನಿಸಿಕೊಳ್ಳುತ್ತದೆ.

ಮಕ್ಕಳು ನಾವು ಹೇಳಿದ್ದನ್ನು ಕೇಳುವದಿಲ್ಲ. ಬದಲಾಗಿ ನಾವು ಮಾಡಿದ್ದನ್ನು ಅನುಕರಿಸುತ್ತಾರೆ ಎಂಬುದನ್ನು ಅರಿಯಬೇಕು. ಅಂಥ ವಿಚಾರಗಳಲ್ಲಿ ಹಿರಿಯರು ನೀಡುವ ಸಲಹೆ ಹೊಸ ಪೀಳಿಗೆಯ ಕೆಲವರಿಗೆ ನಾನ್-ಸೆನ್ಸ್ ಅನಿಸಿ ಅವರು ಸಹಿಸಲಿಕ್ಕಿಲ್ಲ. ಈ ಕಾರಣಕ್ಕೆ ನ್ಯಾಯಾಲಯಗಳು ಇಂಥ ವಿಷಯಗಳನ್ನು ಸೀಮಿತ ಕಾನೂನಿನ ಚೌಕಟ್ಟಿನಲ್ಲಿ ನೋಡದೆ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಹೊಣೆಯನ್ನು ನಿಭಾಯಿಸಲು ಹೆಚ್ಚಿನ ವಿವೇಚನಾಧಿಕಾರವನ್ನು ಬಳಸಬೇಕಾಗಿದೆ. ‘ಪುರಾಣಮಿತ್ಯೇವ ನ ಸಾಧು ಸರ್ವಂ’ ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೆಂದಲ್ಲ. ಹಾಗೆಂತ ಹೊಸದೆಲ್ಲವೂ ಸರಿಯೆಂತಲೂ ಅಲ್ಲ. ‘ಋಷಿವಾಕ್ಯದೊಡನೆ ವಿಜ್ಞಾನ-ಕಲೆ ಮೇಳವಿಸೆ ಜಸವು ಜನಜೀವನಕೆ ಮಂಕುತಿಮ್ಮ’ ಎಂಬ ಕಗ್ಗದ ವಾಕ್ಯ ನಿರಂತರ ಸತ್ಯ.