ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Leena Joshi Column: ಬಕೆಟ್‌ ಹಿಡಿದವರ ಬಾಳು ಬಂಗಾರವಾ ?

ಅಧಿಕಾರದ ವಲಯದ ನೆರಳಿನಲ್ಲಿ ಬದುಕುವುದು ಅಂದಿನ ರಾಜಮನೆತನಗಳ ಅರಮನೆಯಿಂದ ಇಂದಿನ ಹವಾನಿ ಯಂತ್ರಿತ ಕಾರ್ಪೊರೇಟ್ ಬೋರ್ಡ್‌ರೂಂಗಳ ತನಕ ಮನುಷ್ಯರ ಅನಿವಾರ್ಯತೆ ಯಾಗಿದೆ. ಕಾಲದ ಗಾಳಿ ಯಾವ ದಿಕ್ಕಿಗೆ ಬೀಸುತ್ತದೆಯೋ, ಆ ದಿಕ್ಕಿಗೆ ಹೆಜ್ಜೆಗಳನ್ನು ಬದಲಿಸುವುದು ಬದುಕುಳಿಯುವ ಸನಾತನ ಕಲೆ. ಯಾರ ಮುಷ್ಟಿಯಲ್ಲಿ ಅಧಿಕಾರದ ರಾಜದಂಡವಿರುತ್ತದೆಯೋ, ಅವರ ಬೆನ್ನಿಗೆ ನಿಲ್ಲುವುದು ಲೋಕದ ಸಹಜ ನ್ಯಾಯ.

ಅಮೃತಕಾಲ

ಲೀನಾ ಜೋಶಿ

ಬದಲಾವಣೆಯ ಭರದಲ್ಲಿ ನಮ್ಮ ಮೂಲ ಸ್ವರೂಪವನ್ನೇ, ನಮ್ಮ ಮೌಲ್ಯ ಸಿದ್ಧಾಂತಗಳನ್ನೇ ಕಳೆದುಕೊಂಡರೆ, ಆ ಗೆಲುವಿಗೆ ಅಥವಾ ಬದುಕುಳಿಯುವಿಕೆಗೆ ಯಾವುದೇ ಅರ್ಥವಿರುವುದಿಲ್ಲ. ಗಾಳಿ ಯಾವ ದಿಕ್ಕಿಗಾದರೂ ಬೀಸಲಿ, ಮರದ ರೆಂಬೆಕೊಂಬೆಗಳು ಬಗ್ಗಬಹುದು, ಆದರೆ ಮರದ ಬೇರುಗಳು ಮಾತ್ರ ಭೂಮಿಯ ಒಳಗೆ ಭದ್ರವಾಗಿ ಗಟ್ಟಿಯಾಗಿರುತ್ತವೆ. ಬಕೆಟ್ ಹಿಡಿಯುವದರಿಂದ ದೇಹ ಬದುಕಬಹುದು, ಆದರೆ ಅಂತರಂಗದ ಆತ್ಮಸಾಕ್ಷಿ ಉಸಿರುಗಟ್ಟಿ ಸಾಯುತ್ತದೆ.

ಅಧಿಕಾರದ ವಲಯದ ನೆರಳಿನಲ್ಲಿ ಬದುಕುವುದು ಅಂದಿನ ರಾಜಮನೆತನಗಳ ಅರಮನೆಯಿಂದ ಇಂದಿನ ಹವಾನಿ ಯಂತ್ರಿತ ಕಾರ್ಪೊರೇಟ್ ಬೋರ್ಡ್‌ರೂಂಗಳ ತನಕ ಮನುಷ್ಯರ ಅನಿವಾರ್ಯತೆ ಯಾಗಿದೆ. ಕಾಲದ ಗಾಳಿ ಯಾವ ದಿಕ್ಕಿಗೆ ಬೀಸುತ್ತದೆಯೋ, ಆ ದಿಕ್ಕಿಗೆ ಹೆಜ್ಜೆಗಳನ್ನು ಬದಲಿಸುವುದು ಬದುಕುಳಿಯುವ ಸನಾತನ ಕಲೆ. ಯಾರ ಮುಷ್ಟಿಯಲ್ಲಿ ಅಧಿಕಾರದ ರಾಜದಂಡವಿರುತ್ತದೆಯೋ, ಅವರ ಬೆನ್ನಿಗೆ ನಿಲ್ಲುವುದು ಲೋಕದ ಸಹಜ ನ್ಯಾಯ.

ಸಮುದ್ರದ ಅಲೆಗಳ ಅಬ್ಬರಕ್ಕೆ ತಕ್ಕಂತೆ ದೋಣಿಯನ್ನು ತಿರುಗಿಸುವ ನಾವಿಕನಂತೆ, ಗಾಳಿಯ ದಿಕ್ಕಿಗೆ ಹೆಜ್ಜೆಗಳನ್ನು ಹೊಂದಿಸುವುದು ಮಾನವ ಕುಲದ ರಕ್ತಗತ ಸ್ವಭಾವ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಪ್ರವಾಹದ ವಿರುದ್ಧ ಈಜಲು ಹೋಗಿ ಸರ್ವಸ್ವವನ್ನೂ ಕಳೆದುಕೊಂಡವರ ಸಾಲು ದೊಡ್ಡದಿದೆ. ಅಲೆಯ ದಿಕ್ಕನ್ನು ಗ್ರಹಿಸಿ ತಮ್ಮ ನಡಿಗೆಯನ್ನು ಬದಲಿಸಿಕೊಂಡವರು ತಮ್ಮ ಮನೆ, ಅಧಿಕಾರ, ಆಸ್ತಿ ಮತ್ತು ಸ್ಥಾನಮಾನಗಳನ್ನು ಭದ್ರಪಡಿಸಿಕೊಂಡರು.

ಇದನ್ನೂ ಓದಿ: Leena Joshi Column: ಒಡೆದು ಆಳುವ ನೀತಿಯ ದುರಂತ ಇತಿಹಾಸ

ಹಿಂದಿನ ಕಾಲದ ರಾಜರು, ಇಂದಿನ ರಾಜಕೀಯ ಧುರೀಣರು, ಕಾರ್ಪೊರೇಟ್ ಕಚೇರಿಗಳಲ್ಲಿ ಕೂಲಿ ಮಾಡುವವರು- ಪ್ರತಿಯೊಬ್ಬರಿಗೂ ಇದು ಅನ್ವಯ. ಒಂದು ಕಾಲದಲ್ಲಿ ದರ್ಬಾರ್‌ನಲ್ಲಿ ರಾಜನ ಮನಸ್ಸನ್ನು ಓದಿದವರು ಬದುಕುತ್ತಿದ್ದರು. ಇಂದು ಬೋರ್ಡ್ ರೂಮ್‌ನಲ್ಲಿ ಸಿಇಒನ, ದಿನನಿತ್ಯದ ಕೆಲಸದಲ್ಲಿ ಮ್ಯಾನೇಜರನ ಮನಸ್ಸನ್ನು ಓದುವವರು ಬದುಕುತ್ತಾರೆ, ಯಶಸ್ಸಿನ ಏಣಿಯನ್ನು ಏರುತ್ತಾರೆ.

ಪಾತ್ರಗಳು ಬದಲಾಗಿವೆ, ಆಟದ ಸ್ವರೂಪ ಬದಲಾಗಿಲ್ಲ. ಅಕ್ಬರ್ ತನ್ನ ಸಾಮ್ರಾಜ್ಯದ ಗಡಿಯನ್ನು ವಿಸ್ತರಿಸುತ್ತಾ ಮುನ್ನಡೆದಾಗ, ರಾಜಪೂತಾನದ ಅರಸರ ಮುಂದೆ ಕೇವಲ ಎರಡು ದಾರಿಗಳಿದ್ದವು- ಅಧಿಕಾರಕ್ಕೆ ತಲೆಬಾಗಿ ಬದುಕುಳಿಯುವುದು ಅಥವಾ ಸ್ವಾಭಿಮಾನಕ್ಕಾಗಿ ಸರ್ವಸ್ವವನ್ನೂ ಕಳೆದುಕೊಳ್ಳುವುದು. ಬಹುತೇಕ ರಾಜರು ಮೊದಲ ಹಾದಿಯನ್ನೇ ಆಯ್ಕೆ ಮಾಡಿಕೊಂಡರು.

ಹೆಣ್ಣು ಕೊಟ್ಟು, ಮೈತ್ರಿ ಮಾಡಿಕೊಂಡು, ತಮ್ಮ ರಾಜ್ಯವನ್ನು ಹಾಗೂ ಸಿಂಹಾಸನವನ್ನು ಉಳಿಸಿಕೊಂಡರು. ಅಂಬರನ ರಾಜಾ ಮಾನ್‌ಸಿಂಗ್ ಈ ಚಾಣಾಕ್ಷ ರಾಜಕಾರಣದ ಮುಂಚೂಣಿ ಯಲ್ಲಿದ್ದ. ಮೊಘಲ್ ದರ್ಬಾರಿನಲ್ಲಿ ಉನ್ನತ ಸ್ಥಾನಮಾನಗಳನ್ನು ಗಿಟ್ಟಿಸಿಕೊಂಡು, ಭೌತಿಕವಾಗಿ ಸೋಲದಂತೆ ಎಚ್ಚರ ವಹಿಸಿದ. ಮೊಘಲರ ಹಾಗೂ ಮುಂದೆ ಬಂದ ಬ್ರಿಟಿಷರ ಅಲೆಯ ಎದುರು ನೇರವಾಗಿ ನಿಂತು ನಾಶವಾಗುವುದಕ್ಕಿಂತ, ಅವರೊಡನೆ ರಾಜಿ ಮಾಡಿಕೊಂಡು ಬದುಕುವುದು ಹೆಚ್ಚು ಬುದ್ಧಿವಂತಿಕೆ ಎಂದು ರಜಪೂತ ಅರಸರು ಭಾವಿಸಿದರು. ಅದರ ಪರಿಣಾಮವೇ ಇಂದು ರಾಜಸ್ಥಾನದಲ್ಲಿ ಭವ್ಯವಾಗಿ ನಿಂತಿರುವ ಜೈಪುರ, ಮೆಹ್ರಾನ್‌ಗಢ, ಜೈಸಲ್ಮೇರ್, ಬೀಕಾನೇರ್ ಮತ್ತು ಉದಯಪುರದ ಅರಮನೆಗಳು.

71 ok

ಇವು ಅಧಿಕಾರದ ಜೊತೆ ರಾಜಿ ಮಾಡಿಕೊಂಡು ಬದುಕುಳಿದ ಇತಿಹಾಸದ ಮೌನ ಸಾಕ್ಷಿಗಳು. 19ನೇ ಶತಮಾನದಲ್ಲಿ ಬ್ರಿಟಿಷರ ರಕ್ಷಣಾ ಒಪ್ಪಂದಗಳ ನೆರಳಿನಲ್ಲಿ ಸಂಸ್ಥಾನಗಳು ಸುರಕ್ಷಿತವಾದವು, ಸಂಪತ್ತು ಕರಗಲಿಲ್ಲ, ಕೋಟೆಗಳು ನೆಲಸಮವಾಗಲಿಲ್ಲ. ಸ್ವಾತಂತ್ರ್ಯಾನಂತರ ಭಾರತೀಯ ಒಕ್ಕೂಟ ದಲ್ಲಿ ವಿಲೀನವಾದ ಮೇಲೂ, ತಮ್ಮ ಆಸ್ತಿ ಮತ್ತು ರಾಜಪ್ರಭುತ್ವದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂದಿಗೂ ಅನೇಕ ರಾಜವಂಶಸ್ಥರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಈ ಹೊಂದಾಣಿಕೆಯ ನಡುವೆಯೂ ಕೆಲವರು ವಿಭಿನ್ನ ಹಾದಿಯನ್ನು ತುಳಿದರು.

ಅಕ್ಬರನಿಗೆ ಮಣಿಯದ ಮಹಾರಾಣಾ ಪ್ರತಾಪ್ ಅಯ್ಕೆ ಮಾಡಿಕೊಂಡದ್ದು ದಶಕಗಳ ಅಲೆದಾಟ, ಕಾಡಿನ ವಾಸ ಮತ್ತು ಅಸುರಕ್ಷತೆಯ ಬದುಕು. ಅದು ಭೌತಿಕ ಲಾಭದ ದೃಷ್ಟಿಯಿಂದ ಸೋಲಿನ ಹೆಜ್ಜೆಯಾಗಿರ ಬಹುದು; ಆದರೆ ಮನುಷ್ಯನ ಸ್ವಾಭಿಮಾನ, ಆದರ್ಶ ಮತ್ತು ಸಿದ್ಧಾಂತಕ್ಕೆ ನೀಡಿದ ಅತ್ಯುಚ್ಚ ಬೆಲೆ ಅದು. ಅವರು ರಾಜ್ಯ ಕಳೆದುಕೊಂಡರು, ಅರಮನೆ ಕಳೆದುಕೊಂಡರು; ಆದರೆ ಬಾಗದ ಬೆನ್ನುಮೂಳೆಯಿಂದಾಗಿ ಇತಿಹಾಸದ ಅಮರ ಪುಟಗಳಲ್ಲಿ ಶಾಶ್ವತವಾಗಿ ಉಳಿದರು.

ಅಧಿಕಾರದೊಂದಿಗೆ ನಡೆದು ಅರಮನೆಗಳನ್ನು ಉಳಿಸಿಕೊಂಡವರು ಇತಿಹಾಸದಲ್ಲಿ ‘ವ್ಯವಹಾರ ಚತುರರು’ ಎನಿಸಿಕೊಂಡರೆ; ಅಧಿಕಾರವನ್ನು ದಿಕ್ಕರಿಸಿ ಒಂಟಿಯಾಗಿ ಹೋರಾಡಿದವರು ‘ಸ್ವಾಭಿಮಾನದ ಪ್ರತೀಕ’ಗಳಾದರು. ಅಧಿಕಾರವನ್ನು ಪ್ರಶ್ನಿಸುವವನು ಜಗತ್ತಿನ ಗೌರವ ಸಂಪಾದಿಸ ಬಹುದು; ಅಧಿಕಾರದ ಜೊತೆಯೇ ನಡೆಯುವವನು ಎಂದಿಗೂ ತನ್ನ ಸಿಂಹಾಸನವನ್ನಾಗಲಿ, ಅಧಿಕಾರವನ್ನಾಗಲಿ ಕಳೆದುಕೊಳ್ಳುವುದಿಲ್ಲ.

ಆಯ್ಕೆ ಯಾವುದು ಎಂಬುದು ಮಾತ್ರ ಎಂದೆಂದಿಗೂ ಬದುಕಿನ ಮುಂದೆ ನಿಲ್ಲುವ ಅಂತಿಮ ಪ್ರಶ್ನೆ. ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಡಿದಳು. ನೆರೆಯ ರಾಜ ಗ್ವಾಲಿಯರ್‌ನ ಜಯಾಜೀರಾವ್ ಸಿಂಧಿಯಾ ಬ್ರಿಟಿಷರೊಂದಿಗೆ ನಿಂತಿದ್ದ. 1858ರಲ್ಲಿ ಲಕ್ಷ್ಮೀಬಾಯಿ ಮತ್ತು ಇತರ ಬಂಡಾಯ ಪಡೆಗಳು ಗ್ವಾಲಿಯರ್ ವಶಪಡಿಸಿಕೊಂಡಾಗ ಸಿಂಧಿಯಾ ಗ್ವಾಲಿಯರ್ ತೊರೆದು ಆಗ್ರಾಕ್ಕೆ ಓಡಿ ಹೋದ.

ಬ್ರಿಟಿಷರು ರಾಣಿಯನ್ನು ಗ್ವಾಲಿಯರ್‌ನ ಮೋಸದಿಂದ ಕೊಂದಿದ್ದು, ಸಿಂಧಿಯಾ, ಬ್ರಿಟಿಷರಿಗೆ ಲಕ್ಷ್ಮೀಬಾಯಿ ಯನ್ನು ಕೊಲ್ಲುವಲ್ಲಿ ಸಹಾಯ ಮಾಡಿದರು ಎನ್ನುವುದು ಜನಪ್ರಿಯ ನಿರೂಪಣೆ. ಒಂದು ವಿಷಯ ಸ್ಪಷ್ಟ, ಬ್ರಿಟಿಷರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಸಿಂಧಿಯಾ ರಾಜವಂಶ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡಿತು, ಇಂದಿಗೂ ಅಧಿಕಾರವನ್ನು ಅನುಭವಿಸು ತ್ತಿದ್ದಾರೆ.

ಲಕ್ಷ್ಮೀಬಾಯಿ ಅಧಿಕಾರ, ಸಂಪತ್ತು ಜೀವ ಕಳೆದುಕೊಂಡರೂ ಜನರ ನೆನಪಿನಲ್ಲಿ ಅಧಿಕಾರಕ್ಕಿಂತ ದೊಡ್ಡ ಸ್ಥಾನ ಪಡೆದರು, ಆದರೆ ಅವರ ವಂಶಸ್ಥರ ಬಳಿ ಭವ್ಯ ಅರಮನೆ, ಸಂಪತ್ತಿಲ್ಲ. 1857ರಲ್ಲಿ ಉತ್ತರ ಭಾರತ‌ ದಲ್ಲಿ ಬಂಡಾಯ ಉರಿಯುತ್ತಿದ್ದಾಗ ಹೈದರಾಬಾದ್‌ನ ನಿಜಾಮ ಬ್ರಿಟಿಷರೊಂದಿಗೆ ಸಹಕಾರದ ನೀತಿಯನ್ನು ಅನುಸರಿಸಿದ.

ಮೈಸೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಸಂಸ್ಥಾನಗಳಾದ ತಿರುವಾಂಕೂರ್ ಮತ್ತು ಕೊಚ್ಚಿನ್ ಬ್ರಿಟಿಷರ ವಿರುದ್ಧ ದಂಗೆಗೆ ಸೇರದಿರುವುದು, ಮತ್ತು ಕೆಲವು ಕಡೆ ಸ್ಥಳೀಯ ಅಶಾಂತಿ ಯನ್ನು ನಿಯಂತ್ರಿಸಿದ್ದು, ದಂಗೆಯು ದಕ್ಷಿಣ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹರಡದಿರಲು ಸಹಾಯ ಮಾಡಿತು. ದಕ್ಷಿಣ ಭಾರತದಲ್ಲಿ ಉತ್ತರ ಭಾರತದ ಮಟ್ಟದ ವ್ಯಾಪಕ ಸೈನಿಕ ಬಂಡಾಯ ರೂಪುಗೊಳ್ಳಲಿಲ್ಲ.

ನಿಜಾಮನ ಆಡಳಿತವು ಬ್ರಿಟಿಷರ ಪರ ನಿಂತು ಆ ಚಳವಳಿಯನ್ನು ದಮನಿಸಿತು. ನಿಜಾಮನ ಬ್ರಿಟಿಷ್ ಪರ ನಿಲುವು ಬ್ರಿಟಿಷರಿಗೆ ದಕ್ಷಿಣದಲ್ಲಿ ಒಂದು ಪ್ರಮುಖ ಸ್ಥಿರತೆಯ ಆಧಾರವಾಯಿತು, ಪ್ರತಿಫಲವಾಗಿ ಎಲ್ಲರ ಸಂಸ್ಥಾನಗಳು ಉಳಿದವು. ಇದೇ ನೀತಿ ಈಗಲೂ ಅನ್ವಯವಾಗುತ್ತದೆ. ಅಂದು ಅರಮನೆಯ ಒಳಗಿನ ಗುಂಪುಗಳು ಇದ್ದವು, ಇಂದು ಕಾರ್ಪೊರೇಟ್ ಪಾಲಿಟಿಕ್ಸ್ ಇದೆ. ಅಂದು ರಾಜ ಬದಲಾದರೆ ದರ್ಬಾರ್ ಬದಲಾಗುತ್ತಿತ್ತು, ಇಂದು ಸಿಇಒ ಬದಲಾದರೆ ಅಧಿಕಾರದ ಈಕ್ವೇಶನ್ ಬದಲಾಗುತ್ತದೆ. ಒಬ್ಬ ಹೊಸ ಬಾಸ್ ಬರುತ್ತಾನೆ, ಹಳೆಯ ಬಾಸ್‌ನ ಹತ್ತಿರದವರು ದೂರವಾಗುತ್ತಾರೆ.

ಹೊಸ ಬಾಸ್‌ನ ಹತ್ತಿರದವರು ಏಕಾಏಕಿ ಪ್ರಮುಖರಾಗುತ್ತಾರೆ. ನಿನ್ನೆ ಟೀಕಿಸಿದ ವ್ಯಕ್ತಿಯೇ ಇಂದು ಹೊಸ ನಾಯಕನ ಅತ್ಯಂತ ಹತ್ತಿರದ ವ್ಯಕ್ತಿಯಾಗಬಹುದು. ನಿನ್ನೆ ನಮ್ಮ ತಂಡ ಎಂದು ಹೇಳಿದವರು ಇಂದು ಹೊಸ ಸ್ಟ್ರಾಟಜಿಯ ಹೆಸರಿನಲ್ಲಿ ಸಂಪೂರ್ಣವಾಗಿ ಹೊಸ ಬಣ್ಣ ತಾಳಬಹುದು.

ಕಾರ್ಪೊರೇಟ್ ಕಲ್ಚರ್ ನಮಗೆ ಒಂದು ವಿಚಿತ್ರ ಪಾಠ ಕಲಿಸುತ್ತದೆ. ಕೇವಲ ಕಠಿಣ ಪರಿಶ್ರಮ ಸಾಕಾಗುವುದಿಲ್ಲ, ನಿಮ್ಮ ಕೆಲಸ ಕಾಣಬೇಕು, ಸಂಸ್ಥೆಯ ರಾಜಕೀಯವನ್ನು ಅರ್ಥಮಾಡಿ ಕೊಳ್ಳಬೇಕು. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಬೇಕು ಎಂಬುದೂ ತಿಳಿದಿರಬೇಕು. ಇದು ಅವಕಾಶವಾದ ಎಂದೇನೂ ಅಲ್ಲ. ಬದುಕಲು ಎಮೋಷನಲ್ ಇಂಟಲಿಜೆನ್ಸ್ ಮತ್ತು ಮತ್ತು ರಾಜಕೀಯ ಪ್ರಜ್ಞೆ ಎರಡೂ ಬೇಕು. ಆದರೆ ಹೊಂದಿಕೊಳ್ಳುವಿಕೆ ಮತ್ತು ಬೆನ್ನೆಲುಬು ಕಳೆದುಕೊಳ್ಳುವಿಕೆ ಒಂದೇ ಅಲ್ಲ.

ಹೊಸ ಸಿಇಒ ಬಂದಾಗ ಕಾರ್ಯತಂತ್ರ ಬದಲಿಸುವುದು ಸಾಮಾನ್ಯ. ಆದರೆ ನಿನ್ನೆ ತಪ್ಪು ಎಂದು ಹೇಳಿದ್ದನ್ನು ಇಂದು ಕೇವಲ ಅಽಕಾರ ಬದಲಾದ ಕಾರಣ ಸರಿಯೆಂದು ಹೇಳುವುದು ಬೇರೆ ವಿಷಯ. ಹೊಸ ತಂಡದೊಂದಿಗೆ ಕೆಲಸ ಮಾಡುವುದು ವೃತ್ತಿಪರತೆ. ಪ್ರತಿ ಅಧಿಕಾರಿಯ ಕಾಲದಲ್ಲೂ ನಿಮ್ಮ ನಿಷ್ಠೆಯನ್ನು ಮಾರುವುದು ವಿಶ್ವಾಸಾರ್ಹತೆಯ ಸಮಸ್ಯೆ. ರಾಜಕಾರಣದಲ್ಲಿ ನಿಲುವುಗಳು ಮತ್ತು ಮೈತ್ರಿಗಳು ಕೇವಲ ಕಾಲಕ್ಕೆ ತಕ್ಕಂತೆ ಬದಲಾಗುವ ತಾತ್ಕಾಲಿಕ ಮುಖವಾಡಗಳು. ನಿನ್ನೆವರೆಗೆ ತೀವ್ರ ವಿರೋಧಿಗಳಾಗಿ ಪರಸ್ಪರ ಕೆಸರೆರಚಿಕೊಂಡವರು, ಇಂದು ಒಂದೇ ವೇದಿಕೆಯಲ್ಲಿ ಕೈಕುಲುಕುವು ದನ್ನು ನಾವು ದಿನವೂ ನೋಡುತ್ತಿದ್ದೇವೆ.

ಸಿದ್ಧಾಂತದ ಬದ್ಧತೆ, ಚುನಾವಣಾ ಗಣಿತ, ಪ್ರಾದೇಶಿಕ ಹಿತಾಸಕ್ತಿಗಳು, ಅನಿವಾರ್ಯ ರಾಜಕೀಯ ನಂಟುಗಳು ಇದಕ್ಕೆ ಮೇಲ್ನೋಟಕ್ಕೆ ಕಾರಣವಾಗಿ ಕಾಣಿಸಬಹುದು. ಆದರೆ, ಇಂದಿನ ರಾಜಕೀಯದ ಆಳದಲ್ಲಿ ಬೇರೂರಿರುವ ಅತಿ ದೊಡ್ಡ ಸತ್ಯವೆಂದರೆ- ಸ್ವಂತ ಆಸ್ತಿ- ಪಾಸ್ತಿ ಮತ್ತು ಬ್ಯುಸಿನೆಸ್ ಸಾಮ್ರಾಜ್ಯ ವನ್ನು ಉಳಿಸಿಕೊಳ್ಳುವ ಹಂಬಲ. ಜಾರಿ ನಿರ್ದೇಶನಾಲಯದ (ಇಡಿ) ದಾಳಿಗಳು, ಆದಾಯ ತೆರಿಗೆ ಇಲಾಖೆಯ (ಐಟಿ) ಪರಿಶೋಧನೆಗಳು ಮತ್ತು ಕಾನೂನಿನ ಕತ್ತಿಗಳು ತೂಗುತ್ತಿರು ವಾಗ, ಯಾವ ನಾಯಕನೂ ನೇರವಾದ ಸೈದ್ಧಾಂತಿಕ ಹೋರಾಟದ ಸಾಹಸಕ್ಕೆ ಮುಂದಾಗುವುದಿಲ್ಲ.

ಅಧಿಕಾರದ ಚುಕ್ಕಾಣಿ ಹಿಡಿದವರ ಕೃಪಾದೃಷ್ಟಿಗೆ ಪಾತ್ರರಾಗುವುದೇ ಅಂತಹ ಸಂಕಷ್ಟಗಳಿಂದ ಪಾರಾಗಲು ಇರುವ ಏಕೈಕ ದಾರಿ ಎಂದು ಪ್ರತಿಯೊಬ್ಬರೂ ಭಾವಿಸುತ್ತಾರೆ. ಇಲ್ಲಿ ಸಿದ್ಧಾಂತಕ್ಕಿಂತ, ಸಂಪತ್ತು ಮತ್ತು ವೈಯಕ್ತಿಕ ಸುರಕ್ಷತೆಯೇ ಮುಖ್ಯವಾಗುತ್ತದೆ. ಯಾರೂ ಅನಗತ್ಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ.

ರಾಜಕೀಯದ ಈ ಆಧುನಿಕ ಕದನದಲ್ಲಿ ಬದುಕುಳಿಯುವ ಸೂತ್ರ ಸರಳವಾಗಿದೆ; ಪ್ರಶ್ನಿಸುವುದನ್ನು ಬಿಟ್ಟು ಶರಣಾಗುವುದು ಮತ್ತು ಅಧಿಕಾರದ ನೆರಳಿನಲ್ಲಿ ಸುರಕ್ಷಿತವಾಗಿ ತಳಪಾಯ ಹಾಕಿಕೊಳ್ಳು ವುದು. ಮಾನ್ ಸಿಂಗ್, ಸಿಂಧಿಯಾ ಅಥವಾ ನಿಜಾಮರಂತಹವರು ಅಥವಾ ಪ್ರಸ್ತುತ ಕಾರ್ಪೊರೇಟ/ ರಾಜಕೀಯ ಜಗತ್ತಿನ ಪ್ರಾಯೋಗಿಕ ನಡೆಗಳು ನೈತಿಕವಾಗಿ ಕೆಲವೊಮ್ಮೆ ವಿವಾದಾತ್ಮಕವೆಂದು ಅನ್ನಿಸಿದರೂ, ಆ ಮೂಲಕ ಅವರು ತಮ್ಮ ಜನರನ್ನು, ಸಂಪನ್ಮೂಲಗಳನ್ನು ಮತ್ತು ಸಂಸ್ಥೆಗಳನ್ನು ಸಂಪೂರ್ಣ ನಾಶವಾಗುವುದರಿಂದ ಉಳಿಸಲು ಯತ್ನಿಸಿದ್ದರು ಎಂಬುದು ವಾಸ್ತವಿಕ ದೃಷ್ಟಿಕೋನ.

ದೊಡ್ಡ ಶಕ್ತಿಯೊಂದಿಗೆ ನೇರವಾಗಿ ಯುದ್ಧ ಮಾಡಿ ಸರ್ವನಾಶವಾಗುವುದಕ್ಕಿಂತ, ವ್ಯವಸ್ಥೆಯೊಳಗೆ ಇದ್ದುಕೊಂಡೇ ಪ್ರಭಾವ ಬೀರುವುದು ಕೆಲವೊಮ್ಮೆ ಅನಿವಾರ್ಯ ಚಾಣಾಕ್ಷತನವಾಗುತ್ತದೆ. ಮತ್ತೊಂದೆಡೆ, ಝಾನ್ಸಿ ಲಕ್ಷ್ಮೀಬಾಯಿ ಮತ್ತು ಮಹಾರಾಣಾ ಪ್ರತಾಪರಂತಹವರು ತೋರಿಸಿಕೊಟ್ಟ ದಾರಿ ಸಂಪೂರ್ಣ ಭಿನ್ನವಾದದ್ದು. ಅವರಿಗೆ ಅಧಿಕಾರ, ರಾಜ್ಯ, ಭೌತಿಕ ಸುಖಕ್ಕಿಂತ ತಮ್ಮ ಸ್ವಾಭಿಮಾನ, ಮುಕ್ತತೆ ಮತ್ತು ಮೌಲ್ಯಗಳೇ ಮುಖ್ಯವಾಗಿದ್ದವು. ಸೋತರೂ ತಲೆಬಾಗದ ಅವರ ತ್ಯಾಗವು ಮುಂದಿನ ತಲೆಮಾರುಗಳಿಗೆ ಹೋರಾಟದ ಸ್ಪೂರ್ತಿಯನ್ನು ನೀಡುತ್ತದೆ.

ಕೋಟೆ ಉಳಿಸಿಕೊಂಡ ಪ್ರತಿಯೊಬ್ಬರ ಹೆಸರು ಅಮರವಾಗುವುದಿಲ್ಲ; ಕೋಟೆ ಕಳೆದುಕೊಂಡ ಪ್ರತಿಯೊಬ್ಬರೂ ಸೋತವರಾಗುವುದಿಲ್ಲ. ಸವಾಲುಗಳು ಮತ್ತು ಸಂದರ್ಭಗಳು ಬಂದಾಗ ಕಾರ್ಯ ತಂತ್ರ ವನ್ನು ಬದಲಾಯಿಸುವುದು ಕಾಲದ ಅಗತ್ಯ. ಆದರೆ ಆ ಬದಲಾವಣೆಯ ಭರದಲ್ಲಿ ನಮ್ಮ ಮೂಲ ಸ್ವರೂಪವನ್ನೇ, ನಮ್ಮ ಮೌಲ್ಯ ಸಿದ್ಧಾಂತಗಳನ್ನೇ ಕಳೆದುಕೊಂಡರೆ, ಆ ಗೆಲುವಿಗೆ ಅಥವಾ ಬದುಕುಳಿಯು ವಿಕೆಗೆ ಯಾವುದೇ ಅರ್ಥವಿರುವುದಿಲ್ಲ.

ಗಾಳಿ ಯಾವ ದಿಕ್ಕಿಗಾದರೂ ಬೀಸಲಿ, ಮರದ ರೆಂಬೆಕೊಂಬೆಗಳು ಬಗ್ಗಬಹುದು, ಆದರೆ ಮರದ ಬೇರುಗಳು ಮಾತ್ರ ಭೂಮಿಯ ಒಳಗೆ ಭದ್ರವಾಗಿ ಗಟ್ಟಿಯಾಗಿರುತ್ತವೆ. ಬಕೆಟ್ ಹಿಡಿಯುವದರಿಂದ ದೇಹ ಬದುಕ ಬಹುದು, ಆದರೆ ಅಂತರಂಗದ ಆತ್ಮಸಾಕ್ಷಿ ಉಸಿರುಗಟ್ಟಿ ಸಾಯುತ್ತದೆ.